ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಷಾರಾಮಿ ಮಾರುಕಟ್ಟೆಯ ವೇಗ

Last Updated 13 ಫೆಬ್ರುವರಿ 2013, 9:55 IST
ಅಕ್ಷರ ಗಾತ್ರ

ಜಾಗತೀಕರಣದ ಬಿರುಗಾಳಿಗೆ ಸಿಲುಕಿರುವ ಭಾರತ, ಅದರ ಗುಣಾವಗುಣಗಳನ್ನೆಲ್ಲಾ ಈಗ ಬಹುತೇಕ ರಕ್ತಗತವಾಗಿಸಿಕೊಂಡಿದೆ. ಕೆಲವು ವಿಷಯಗಳಲ್ಲಿ ಇದು ಸಕರಾತ್ಮಕ ಪರಿಣಾಮ ಉಂಟು ಮಾಡುತ್ತಿದ್ದರೆ, ಹಲವು ವಿಷಯಗಳಲ್ಲಿ ಪೆಡಂಭೂತದಂತೆ ಕಾಡುತ್ತಿದೆ. ಇದರ  ಮತ್ತೊಂದು ಕರಾಳ ರೂಪವಾದ `ಕೊಳ್ಳುಬಾಕ' ಸಂಸ್ಕೃತಿ ಇಲ್ಲಿನ ಮೇಲ್ಮಧ್ಯಮ ಮತ್ತು ಮಧ್ಯಮ ವರ್ಗದವರ ಉಳಿತಾಯವನ್ನು, ಅವರು ಸಂಪಾದಿಸಿದ ಹಣವನ್ನು ಸದ್ದಿಲ್ಲದಂತೆ ಬಕಾಸುರನಂತೆ ನುಂಗುತ್ತಿದೆ.

ಭಾರತ ಅಕ್ಷರಶಃ ಐಷಾರಾಮಿ ಮಾರುಕಟ್ಟೆ ವಲಯದಲ್ಲಿ ವಿದೇಶಿ ಹಾಗೂ ದೇಶೀ ಕಂಪೆನಿಗಳ ಪಾಲಿಗೆ ಬಗೆದಷ್ಟೂ ಮುಗಿಯದ `ಗಣಿ'ಯಂತಾಗುತ್ತಿದೆ. ಮುಂಬರುವ ದಿನಗಳಲ್ಲಿ ಭಾರತೀಯರ `ಕೊಳ್ಳುಬಾಕತನ' ದ್ವಿಗುಣಗೊಳ್ಳಲಿದೆ. ಈ ಅಭಿಪ್ರಾಯಕ್ಕೆ ಪೂರಕ ಎನ್ನುವಂತಹ ವರದಿಯೊಂದನ್ನು `ಅಸೋಚಾಂ' (ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ) ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ.

`ಅಸೋಚಾಂ' ಹೇಳುವಂತೆ, ಮುಂದಿನ ಎರಡು ವರ್ಷಗಳಲ್ಲಿ ಭಾರತದ ಐಷಾರಾಮಿ ಮಾರುಕಟ್ಟೆ 1500 ಕೋಟಿ ಅಮೆರಿಕನ್ ಡಾಲರ್(ಈಗಿನ ಲೆಕ್ಕದಲ್ಲಿ ರೂ. 79,500 ಕೋಟಿ) ಮಟ್ಟಕ್ಕೆ ಮುಟ್ಟಲಿದೆ. ಅಂದರೆ ಸದ್ಯ 800 ಕೋಟಿ ಅಮೆರಿಕನ್ ಡಾಲರ್‌ನಷ್ಟಿರುವ ಭಾರತದಲ್ಲಿನ ಐಷಾರಾಮಿ ಮಾರುಕಟ್ಟೆ ಮುಂದಿನ ಎರಡು ವರ್ಷಗಳಲ್ಲಿ ಎರಡು ಪಟ್ಟು ಹೆಚ್ಚಲಿದೆ.

ಇನ್ನೊಂದೆಡೆ ಶ್ರೀಮಂತರ ಸಂಖ್ಯೆಯೂ ಹೆಚ್ಚುತ್ತಾ ಹೋಗಲಿದೆ. ಕನಿಷ್ಠ ರೂ. 25 ಕೋಟಿ ಸಂಪತ್ತು ಹೊಂದಿದ ಕುಟುಂಬಗಳ ಸಂಖ್ಯೆಯೇ ಮುಂದಿನ ಐದು ವರ್ಷಗಳಲ್ಲಿ 2.86 ಲಕ್ಷದಷ್ಟಾಗಲಿದೆ. ಈ ಬೆಳವಣಿಗೆಯು ಐಷಾರಾಮಿ ಮಾರುಕಟ್ಟೆಯ ವಹಿವಾಟು ಹೆಚ್ಚಿಸಲಿದೆ.

`ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಹಿಂಜರಿತದ ಪರಿಣಾಮದ ಹೊರತಾಗಿಯೂ ಭಾರತದಲ್ಲಿ 2013ರಲ್ಲಿ ಐಷಾರಾಮಿ ಮಾರುಕಟ್ಟೆ ಶೇ 25ರಷ್ಟು ಪ್ರಗತಿ ಸಾಧಿಸಲಿದೆ. ಏಕೆಂದರೆ ಮುಂದಿನ ಐದು ವರ್ಷಗಳಲ್ಲಿ ಭಾರತದಲ್ಲಿನ ಕೋಟ್ಯಾಧೀಶರ ಸಂಖ್ಯೆ ಮೂರು ಪಟ್ಟು ಹೆಚ್ಚಲಿದೆ' ಎನ್ನುತ್ತಾರೆ `ಅಸೋಚಾಂ' ಮಹಾ ಕಾರ್ಯದರ್ಶಿ ಡಿ.ಎಸ್.ರಾವತ್.

`2020ರ ಹೊತ್ತಿಗೆ ವಿಶ್ವದ ಐಷಾರಾಮಿ ವಸ್ತುಗಳ ಖರೀದಿ ಭರಾಟೆ 40 ಲಕ್ಷ ಕೋಟಿ ಡಾಲರ್‌ಗೆ ಮುಟ್ಟಲಿದೆ. ಅಂದರೆ, ಈಗಿರುವುದಕ್ಕಿಂತ 12 ಲಕ್ಷ ಕೋಟಿ ಡಾಲರ್‌ನಷ್ಟು ಹೆಚ್ಚಳವಾಗಲಿದೆ. ಇದೇ ವೇಳೆ ಭಾರತದಲ್ಲಿ ಐಷಾರಾಮಿ ವಸ್ತುಗಳ ಖರೀದಿ ವಹಿವಾಟೂ 3.6 ಲಕ್ಷ ಕೋಟಿ ಡಾಲರ್(ರೂ. 190 ಲಕ್ಷ ಕೋಟಿ)ಗೆ ಹೆಚ್ಚಲಿದೆ' ಎನ್ನುತ್ತಾರೆ ರಾವತ್.

ಭಾರತದಲ್ಲಿ ಐಷಾರಾಮಿ ಮಾರುಕಟ್ಟೆ 2015ರ ಹೊತ್ತಿಗೆ 14.7 ಶತಕೋಟಿ ಅಮೆರಿಕನ್ ಡಾಲರ್ ತಲುಪುವ ಅಂದಾಜನ್ನು ವರದಿ ನೀಡಿದೆ. 25 ಕೋಟಿ ರೂ ಹೂಡಿಕೆ ಮಾಡಬಲ್ಲ ಬಂಡವಾಳಗಾರರ ಸಂಖ್ಯೆ  ಮುಂದಿನ ಐದು ವರ್ಷಗಳಲ್ಲಿ ತ್ರಿಗುಣವಾಗಲಿದ್ದು, ಅವರ ಸಾಮರ್ಥ್ಯ 235 ಸಹಸ್ರಕೊಟಿಗೆ (ಟ್ರಿಲಿಯನ್) ಹೆಚ್ಚಲಿದೆ. ಅಂದರೆ ಅವರ ಹೂಡಿಕೆ ಸಾಮರ್ಥ್ಯ ಐದು ಪಟ್ಟು ಹೆಚ್ಚಳವಾಗಲಿದೆ. 

ಸಿಂಗಾಪುರ, ಹಾಂಕಾಂಗ್‌ಗಳಿಗೆ ಭಾರತವನ್ನು ಹೋಲಿಸಿದರೆ ಐಷಾರಾಮಿ ವಸ್ತುಗಳ ಬೆಲೆಗಳು ಹಂತ ಹಂತವಾಗಿ ಹಾಗೂ ಶರವೇಗದಲ್ಲಿ ಹೆಚ್ಚಾಗುತ್ತಿವೆ ಎಂಬುದು ವರದಿಯಲ್ಲಿ ಪ್ರಸ್ತಾಪಗೊಂಡಿರುವ ಪ್ರಮುಖ ಅಂಶ.

ಐಷಾರಾಮಿ ವಸ್ತುಗಳ ಕ್ಷೇತ್ರದಲ್ಲಿನ ಖಾಸಗಿ ಷೇರು ಹೂಡಿಕೆ ಕಳೆದ ಮೂರು ವರ್ಷಗಳಲ್ಲಿ ಅಂದರೆ ಜನವರಿ 2009-ಆಗಸ್ಟ್ 2012ರ ಅವಧಿಯಲ್ಲಿ  ಒಂದು ಶತಕೋಟಿಗೂ ಕಡಿಮೆ ಇದ್ದದ್ದು ಪ್ರಸ್ತುತ 35 ಶತಕೋಟಿಗೆ ಬಂದು ತಲುಪಿದೆ. ಪ್ರತಿ ವರ್ಷಕ್ಕೂ ಐಷಾರಾಮಿ ಮಾರುಕಟ್ಟೆ ಶೇ. 25ರಷ್ಟು ಪ್ರಗತಿ ಕಾಣುತ್ತಿದೆ.

ಭಾರತದಲ್ಲಿ ಐಷಾರಾಮಿ ಮಾರುಕಟ್ಟೆ ವಲಯಕ್ಕೆ ಹಲವು ಮೂಲಗಳಿಂದ ಬಂಡವಾಳ ಹರಿದು ಬರುತ್ತಿರುವುದರಿಂದ ಮಾರುಕಟ್ಟೆಯ ಬೆಳವಣಿಗೆಯ ವೇಗ ಶರವೇಗಕ್ಕೇರಿದೆ.

ಉದಾ: ಎವರ್‌ಸ್ಟೋನ್, ಎಲ್ ಕ್ಯಾಪಿಟಲ್ ಮತ್ತು ಅವೆಗೋ ಕಂಪೆನಿಗಳು ಈ ನಿಟ್ಟಿನಲ್ಲಿ ಬೃಹತ್ ಬಂಡವಾಳ ಹೂಡುತ್ತಿವೆ. ಇಷ್ಟು ಮಾತ್ರವಲ್ಲ ಬೇರೆ ವಲಯಗಳು ಕಳೆಗುಂದಿರುವುದರಿಂದ ಅವುಗಳಿಂದಲೂ ಐಷಾರಾಮಿ ಸರಕು ಮಾರುಕಟ್ಟೆಗಳತ್ತ ಬಂಡವಾಳ ಹರಿದು ಬರುತ್ತಿದೆ. 2015ರ ವೇಳೆಗೆ ಈ ಪ್ರಮಾಣವೂ ಅಧಿಕವಾಗಲಿದೆ. ಒಂದುವೇಳೆ ಇದು ಆಗಲಿ ಬಿಡಲಿ ಭವಿಷ್ಯದಲ್ಲಿ ಐಷಾರಾಮಿ ಸರಕುಗಳ ಮಾರುಕಟ್ಟೆ ಮಂಕಾಗುವ ಸಾಧ್ಯತೆ ಇಲ್ಲವೇ ಇಲ್ಲ ಎಂದು ರಾವತ್ ಅವರು ಸ್ಪಷ್ಟ ನುಡಿಗಳಲ್ಲಿ ಹೇಳುತ್ತಾರೆ.

ಜಾಗತೀಕರಣಕ್ಕೆ ತನ್ನೆಲ್ಲಾ ಬಾಗಿಲುಗಳನ್ನು ತೆರೆದುಕೊಂಡು ಶರವೇಗದಲ್ಲಿ ದಾಂಗುಡಿ ಇಡುತ್ತಿರುವ ಚೀನಾವು ವಿಲಾಸಿ ಮಾರುಕಟ್ಟೆ ಕ್ಷೇತ್ರದಲ್ಲಿ 2ನೇ ಸ್ಥಾನದತ್ತ ದಾಪುಗಾಲಿಡುತ್ತಿದೆ. ಹಾಗೆಯೇ ಕೊಳ್ಳುಬಾಕ ಸಂಸ್ಕೃತಿಯ ಬಿರುಗಾಳಿಗೆ ಸಿಕ್ಕಿರುವ ಭಾರತ ಕೂಡ ತಾನೇನೂ ಕಡಿಮೆ ಇಲ್ಲ ಎಂಬಂತೆ ಚೀನಾದಷ್ಟೆ ವೇಗದಲ್ಲಿ ಸಾಗುತ್ತಿದೆ. ವಿಲಾಸಿ ಮಾರುಕಟ್ಟೆ ವಲಯದಲ್ಲಿ ಹೂಡಿಕೆ ಮಾಡುವುದರಿಂದ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಹಾಗೂ  ಲಾಭ ಗಳಿಸಬಹುದು. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಕಾರುಗಳು. ಇದರಲ್ಲಿನ ವಿಸ್ತೃತ ಹಾಗೂ ವ್ಯಾಪಕ ಆಯ್ಕೆಗಳಿಂದಾಗಿ ಇದರ ಬೆಳವಣಿಗೆ ದರ 2006ರಿಂದ ಈಚೆಗೆ ಶೇ. 40ರಷ್ಟಾಗಿದೆ.

ಭಾರತೀಯರ ಮನಸ್ಸು ಸಾಮಾನ್ಯ ಹಾಗೂ ಸಾಧಾರಣ ಸರಕು ಮತ್ತು ಸೇವೆಗಳಿಂದ ದುಬಾರಿ  ಹಾಗೂ ಐಷಾರಾಮಿ ಸರಕು ಹಾಗೂ ಸೇವೆಗಳತ್ತ ವಾಲುತ್ತಿರುವುದು ಇತ್ತೀಚಿನ ಅಂಕಿ ಅಂಶಗಳಿಂದ ಸ್ಪಷ್ಟವಾಗುತ್ತಿದೆ. ಹೀಗಾಗಿ ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತೀಯ ವಿಲಾಸಿ ಮಾರುಕಟ್ಟೆ ಸ್ಥಿತಿಸ್ಥಾಪಕತ್ವವನ್ನು ಹೊಂದಿದೆ.  ಸದ್ಯ 1.05 ಶತಕೋಟಿ ಡಾಲರ್ ಮೌಲ್ಯದ ವಿಲಾಸಿ ಮಾರುಕಟ್ಟೆ ಪಾಲನ್ನು ಹೊಂದಿರುವ ಅಮೆರಿಕವನ್ನು 2015ರ ಹೊತ್ತಿಗೆ ಭಾರತದ ಐಷಾರಾಮಿ ಮಾರುಕಟ್ಟೆ 1.45 ಶತಕೋಟಿ ಡಾಲರ್ ಮೌಲ್ಯವನ್ನು ಹೊಂದುವ ಮೂಲಕ ಮೀರಿ ನಿಲ್ಲಲಿದೆ ಎಂದು ವರದಿ ತಿಳಿಸುತ್ತದೆ.

*******

ಅಸೋಚಾಂನ ಮಹಾಕಾರ್ಯದರ್ಶಿ ಡಿ.ಎಸ್. ರಾವತ್ ಅವರು ಹೇಳುವಂತೆ ಭಾರತೀಯ ಐಷಾರಾಮಿ ಮಾರುಕಟ್ಟೆ ಮುಂದಿನ ಮೂರು ವರ್ಷಗಳಲ್ಲಿ ತ್ರಿಗುಣವಾಗಲಿದ್ದು, ಮತ್ತೂ ಮುಂದಿನ ಐದು ವರ್ಷಕ್ಕೆ ಮತ್ತೆ ಮೂರು ಪಟ್ಟು ಅಧಿಕವಾಗಲಿದೆ. ಟಯರ್ 2 ಹಾಗೂ ಟಯರ್ 3 ನಗರಗಳಲ್ಲಿ ಮೇಲ್ವರ್ಗದ ಕೊಳ್ಳುವ ಶಕ್ತಿ ಹೆಚ್ಚುತ್ತಲೇ ಇದೆ. ಹಾಗಾಗಿ ಅವರು ಐಷಾರಾಮಿ ಕಾರುಗಳು, ಬೈಕ್‌ಗಳನ್ನು ಖರಿದೀಸುತ್ತಿದ್ದಾರೆ. ಈ ವರ್ಗದಲ್ಲಿ ಐಷಾರಾಮಿ ಮದುವೆಗಳು, ದುಬಾರಿ ಪ್ರವಾಸಗಳು ಅಪರಿಚಿತವಾಗೇನೂ ಉಳಿದಿಲ್ಲ.

*******

ಚೀನಾ, ಭಾರತದ್ದೇ ಸಾಮ್ರಾಜ್ಯ !
ಹೌದು ಸದ್ಯ ವಿಲಾಸಿ ವಸ್ತುಗಳನ್ನು ಖರೀದಿಸುವ ಗ್ರಾಹಕರ ಸಂಖ್ಯೆ ದೊಡ್ಡದಿರುವುದು ಚೀನಾ ಹಾಗೂ ಭಾರತದಲ್ಲಿ ಮಾತ್ರ ಎಂದು ಅಸೋಚಾಮ್ ವರದಿ ತಿಳಿಸಿದೆ.

ಇವು ಜಾಗತಿಕವಾಗಿ ಉಂಟಾಗಿರುವ ಆರ್ಥಿಕ ಹಿಂಜರಿತದ ಹೊರತಾಗಿಯೂ ಐಷಾರಾಮಿ ಮಾರುಕಟ್ಟೆ ಸುಸ್ಥಿರ ಬೆಳವಣಿಗೆ ಸಾಧಿಸುತ್ತಿದೆ. ಇದಕ್ಕೆ ಇವುಗಳ ಗಟ್ಟಿಮುಟ್ಟಾದ ಆರ್ಥಿಕ ತಳಪಾಯವೇ ಕಾರಣ ಎಂದು ವರದಿ ವಿಶ್ಲೇಷಿಸಿದೆ. ಆ್ಕಐಇ (ಬ್ರೆಜಿಲ್, ರಷ್ಯಾ, ಭಾರತ ಹಾಗೂ ಚೀನಾ ದೇಶಗಳ ಗುಂಪು) ದೇಶಗಳಲ್ಲಿ ಅತಿ ಗಣ್ಯ ಸ್ಥಾನವನ್ನು ಪಡೆದುಕೊಂಡಿರುವ ಈ ಎರಡೂ ರಾಷ್ಟ್ರಗಳು ಇಡೀ ಪ್ರಪಂಚದ ವಿಲಾಸಿ ವಸ್ತುಗಳ ಮಾರುಕಟ್ಟೆಯ ಶೇ. 11ರಷ್ಟು ಪಾಲನ್ನು ಹೊಂದಿವೆ. ಈ ಹಿಂದಿನ ಹಣಕಾಸು ವರ್ಷದಲ್ಲಿ ಅಂದರೆ 2011-12ರಲ್ಲಿ ಜಗತ್ತಿನ ಐಷಾರಾಮಿ ವಸ್ತುಗಳ ಮಾರಾಟದ ಒಟ್ಟು ಮೌಲ್ಯದಲ್ಲಿ ಭಾರತ ಹಾಗೂ ಚೀನಾದ ಪಾಲು 33ಶತಕೋಟಿ ಅಮೆರಿಕನ್ ಡಾಲರ್ ಇತ್ತು.  ಇಂದಿಗೂ ಈ ಎರಡೂ ರಾಷ್ಟ್ರಗಳು ವಿಲಾಸಿ ವಸ್ತುಗಳ ಪಾಲಿಗೆ ಮಾರಾಟದ ಆಗರವಾಗಿ ರೂಪುಗೊಂಡಿವೆ.

ವಿಲಾಸಿ ಸೇವೆಗಳು
1. ಜಲಚಿಕಿತ್ಸೆ
2. ಪ್ರವಾಸೋದ್ಯಮ
3. ವಿಲಾಸಿ ಭೋಜನ
4. ಐಷಾರಾಮಿ ಹೋಟೆಲ್‌ಗಳು
5. ವಿಲಾಸಿ ದೋಣಿ ವಿಹಾರ
6. ಲಲಿತಕಲೆಗಳು
7. ಆಟೊಮೊಬೈಲ್‌ಗಳು
8. ರಿಯಲ್ ಎಸ್ಟೇಟ್ ಸೇವೆಗಳು.

ಶೇ.20ರಷ್ಟು ಪ್ರಗತಿ ಸಾಧಿಸಿರುವ ಭಾರತೀಯ ವಿಲಾಸಿ ಸರಕುಗಳು
1. ದುಬಾರಿ ಉಡುಪು
2. ವಿಲಾಸಿ ಪೆನ್ನು
3. ಗೃಹಾಲಂಕಾರ ವಸ್ತುಗಳು
4. ಹೆಚ್ಚು ಬೆಲೆಯ ವಾಚ್‌ಗಳು
5. ದುಬಾರಿ ವೈನ್ಸ್ ಹಾಗೂ ಸ್ಪಿರಿಟ್
6. ಆಭರಣಗಳು

`ಏನೂ ಕೊಳ್ಳದ ದಿನ' !
ಹೌದು ಜಗತ್ತಿನಾದ್ಯಂತ ತನ್ನ ಕಬಂಧಬಾಹುಗಳನ್ನು ಚಾಚುತ್ತಾ ಸಾಗುತ್ತಿರುವ ಕೊಳ್ಳುಬಾಕತನದ ಕಡಿವಾಣಕ್ಕಾಗಿ 1992ರಲ್ಲೇ `ಏನೂ ಕೊಳ್ಳದ ದಿನ' ಎಂಬ ದಿನಾಚಾರಣೆಯನ್ನು ಕೆಲವು ಸಾಮಾಜಿಕ ಕಾರ್ಯಕರ್ತರು ಆರಂಭಿಸಲಾಯಿತು. ಸದ್ಯ ಅಮೆರಿಕ, ಇಂಗ್ಲೆಂಡ್, ಇಸ್ರೇಲ್, ಆಸ್ಟ್ರೀಯ, ಜರ್ಮನಿ, ಫ್ರಾನ್ಸ್ ಸೇರಿದಂತೆ ವಿಶ್ವದ 65 ದೇಶಗಳಲ್ಲಿ ಇದನ್ನು ಆಚರಿಸಲಾಗುತ್ತಿದೆ. ಸಾಮಾನ್ಯವಾಗಿ ವಿಶ್ವದ ಬೇರೆ ಬೇರೆ ದೇಶಗಳಲ್ಲಿ ಇದನ್ನು ಬೇರೆ ಬೇರೆ ದಿನಗಳಲ್ಲಿ ಆಚರಿಸಲಾಗುತ್ತಿದೆ.

ಭಾರತದಲ್ಲೂ ಇದು ಕಾಲಿಡುತ್ತಿದ್ದು, ನವದೆಹಲಿಯಲ್ಲಿ 2012ರಲ್ಲಿ ದೀಪಾವಳಿ ಸಮಯದಲ್ಲಿ ಆಚರಿಸಲಾಯಿತು. ಸಾಮಾನ್ಯವಾಗಿ ವಿಶ್ವಾದ್ಯಂತ 2012ರ ನವೆಂಬರ್ 24ರಂದು ಆಚರಿಸಲಾಗುತ್ತದೆ. ಈ ದಿನ ಯಾರೂ ಏನನ್ನೂ ಖರೀದಿಸಬಾರದು, ಕ್ರೆಡಿಟ್ ಕಾರ್ಡ್ ಹರಿದು ಹಾಕಬೇಕು ಎಂದು ಗಮನ ಸೆಳೆಯುವ  ಕಾರ್ಯಕರ್ತರು, ಮಾಲ್ ಬಳಿ ಪ್ರತಿಭಟನಾ  ಪ್ರದರ್ಶನ ನಡೆಸುತ್ತಾರೆ.  ಇದಕ್ಕೆಂದೆ  http://www.buynothingday.co.uk

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT