ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಗ್ಗಂಟೋ? ಕನಸಿನ ಗಂಟೋ?

Last Updated 16 ಜನವರಿ 2015, 19:30 IST
ಅಕ್ಷರ ಗಾತ್ರ

ಈಗ ನಾಡಿ­ನು­ದ್ದ­ಗಲಕ್ಕೂ ‘ರಾಷ್ಟ್ರ­ಕವಿ’ ಪುರಸ್ಕಾರ ಸದ್ದು ಮಾಡುತ್ತಿದೆ!  ಜಿ.ಎಸ್‌.­ಶಿವ­ರುದ್ರಪ್ಪ­ನವರ ನಿಧನದಿಂದ ತೆರ­ವಾದ ‘ರಾಷ್ಟ್ರಕವಿ’ ಸ್ಥಾನ­ವನ್ನು ತುಂಬಲು ಸರ್ಕಾರ ಕ್ರಮ ಕೈಗೊಂಡು, ಅದ­ಕ್ಕಾಗಿ ಆಯ್ಕೆ ಸಮಿತಿ­ಯೊಂದನ್ನು ರಚಿಸಿದೆ; ಸದರಿ ಸಮಿತಿಯು ಆಯ್ಕೆಯ ಮಾನದಂಡ­ಗಳನ್ನು ನಿಷ್ಕರ್ಷಿಸಿದೆ. ಜೊತೆಗೆ, ಈ ಬಗೆಗೆ ಸಾರ್ವಜನಿಕರ ಅಭಿಪ್ರಾಯ ಆಹ್ವಾನಿಸಿದೆ.

‘ಕನ್ನಡ ಸಾಹಿತ್ಯಕ್ಕೆ ಅನುಪಮ ಸೇವೆ ಸಲ್ಲಿಸಿರುವ ಹಿರಿಯ ಕವಿ’ ಒಬ್ಬರನ್ನು ‘ರಾಷ್ಟ್ರಕವಿ’ ಪುರಸ್ಕಾರಕ್ಕೆ ಆಯ್ಕೆ ಮಾಡುವುದು ಸರ್ಕಾರದ ಆಶಯ. (ಮುಂದೆ ಮಾನದಂಡ­ಗಳನ್ನು ಉಲ್ಲೇಖಿಸುವಾಗ ‘ಹಿರಿಯ ಕವಿ’ಯ ಸಾಧನೆಯ ಪ್ರಕಾರಪರಿಧಿಯು ‘ಅಸಾಧಾರಣ, ಗುಣಗಾತ್ರದಲ್ಲಿ ಗಣನೀಯ, ಶಾಶ್ವತ, ಕಾವ್ಯ-, ಗದ್ಯ- ವಿವಿಧ ಪ್ರಕಾರಗಳ ಸಾಹಿತ್ಯ ಸೃಷ್ಟಿ’ಯಾಗಿ ವಿಸ್ತೃತವಾಗಿರುವುದು ಗಮನಾರ್ಹ)
ಆಯ್ಕೆ ಸಮಿತಿ ನಿಷ್ಕರ್ಷೆ ಮಾಡಿರುವ ಮಾನ­ದಂಡ­ಗಳು ಅವಾಸ್ತವ ಎನಿಸುವಷ್ಟು ‘ಬಿಗಿ’­ಯಾ­ಗಿವೆ; ಅವುಗಳನ್ನು ಲಕ್ಷಿಸಿದರೆ, ಅಲ್ಲಿ ವಿರೋಧಾ­ಭಾಸ, ಅಸಾಂಗತ್ಯ, ಗೊಂದಲಗಳು ಎದ್ದು ಕಾಣುತ್ತವೆ. ಮಾನದಂಡಗಳನ್ನು ರೂಪಿ­ಸು­ವಾಗ ಸ್ವತಃ ಆಯ್ಕೆ ಸಮಿತಿಯೇ ಗೊಂದಲದ ಗೂಡಾಗಿ ಕೆಲಸ ಮಾಡಿದಂತೆ ತೋರುತ್ತದೆ!

ಒಟ್ಟಾರೆ ಮಾನದಂಡಗಳನ್ನು ನೋಡಿದರೆ, ಯಾರೂ ಅವುಗಳನ್ನು ಸಂಪೂರ್ಣ ತೃಪ್ತಿಗೊಳಿಸಿ ಯಶಸ್ವಿಯಾಗುವುದು ಸಾಧ್ಯವೇ ಇಲ್ಲ; ಯಾರೇ ಆಗಲಿ, ಒಂದು ಮಾನದಂಡದಲ್ಲಿ ಉತ್ತೀರ್ಣ­ರಾದರೆ ಮತ್ತೊಂದರಲ್ಲಿ ಅನುತ್ತೀರ್ಣರಾಗುವ ವಿಪರ್‍ಯಾಸಕ್ಕೆ ಆಸ್ಪದವಿದೆ. ಇನ್ನು ಪುರಸ್ಕಾರಕ್ಕೆ ಅರ್ಹತೆಯಾದರೂ ಯಾರಿಗೆ?

ಆಯ್ಕೆ ಸಮಿತಿಯ ಮಾನದಂಡಗಳಾದರೂ ಯಾವುವು? ‘ಕನ್ನಡ ಹಿತರಕ್ಷಣೆಗೆ, ಕರ್ನಾಟಕ ಅಭಿವೃದ್ಧಿಗೆ ಶ್ರಮಿಸಿದವರು, ಸಂಸ್ಕೃತಿ ಉನ್ನತಿ­ಗಾಗಿ ದುಡಿದವರು’ ಎಂಬ ಅರ್ಹತೆ­ಗಳಲ್ಲಿ ವಿಶೇಷವೇನಿಲ್ಲ. ಇನ್ನು, ವಿಶಿಷ್ಟ ಅರ್ಹತೆ­ಗಳಲ್ಲಿ ‘ದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗ­ವಹಿಸಿ, ಸ್ಪಂದಿಸಿ ಸಾಹಿತ್ಯ ರಚಿಸಿದವರು, ಮೇರು ಸದೃಶ ವ್ಯಕ್ತಿತ್ವದವರು, ವಿಶ್ವಮಾನವ ದೃಷ್ಟಿ­ಯಲ್ಲಿ ನಂಬಿಕೆ ಇರುವಂಥ ದಿವ್ಯಜೀವಿ­ಗಳಾಗಿರ­ಬೇಕು ಎಂಬಂತಹ ಸಂಗತಿಗಳನ್ನು ಮಾನದಂಡ­ಗಳು ಒಳಗೊಂಡಿವೆ. ಇವೆಲ್ಲ ಶುದ್ಧ ಆದರ್ಶ­ಗಳು ಮಾತ್ರ ಎಂಬುದು ಮೇಲ್ನೋಟಕ್ಕೇ ವಿಧಿತ! 

ಆಯ್ಕೆ ಮಾನದಂಡ
‘ರಾಷ್ಟ್ರಕವಿ’ ಆಯ್ಕೆಗಾಗಿ ಹೆಸರು ಸೂಚಿಸುವ ನಾಗರಿಕರಿಗೆ ‘ರಾಷ್ಟ್ರಕವಿ ಆಯ್ಕೆ ಸಮಿತಿ’ ವಿಧಿಸಿರುವ ಮಾನದಂಡಗಳು:

* ಹೆಸರು ಸೂಚಿಸುವಾಗ ಕವಿ, ಸಾಹಿತಿಯ ಸಾಹಿತ್ಯ ಕೃತಿಗಳಲ್ಲಿರುವ ಶಾಶ್ವತ ಸತ್ಯ ಎನಿಸುವ ಸಾಲು ಮತ್ತು ಅವುಗಳ ವೈಶಿಷ್ಟ್ಯ ವಿವರಿಸಬೇಕು.
* ಗುಣ ಮತ್ತು ಗಾತ್ರದಲ್ಲಿ ಗಣನೀಯವಾದ, ಶಾಶ್ವತ ಮತ್ತು ಅಸಾಧಾರಣ ಎನಿಸುವ ಕಾವ್ಯ–ಗದ್ಯ ಸೇರಿದಂತೆ ವಿವಿಧ ಪ್ರಕಾರಗಳಲ್ಲಿ ಸಾಹಿತ್ಯ ಸೃಷ್ಟಿಸಿರಬೇಕು.
* ಸ್ವಾತಂತ್ರ್ಯ ಹೋರಾಟಕ್ಕೆ ಸ್ಪಂದಿಸಿ ಸಾಹಿತ್ಯ ರಚಿಸಿದವರು, ರಾಜ್ಯದ ಏಕೀಕರಣಕ್ಕೆ, ಕನ್ನಡದ ಹಿತರಕ್ಷಣೆಗೆ, ನಾಡಿನ ಅಭಿವೃದ್ಧಿಗೆ ಶ್ರಮಿಸಿದವರು, ಸಂಸ್ಕೃತಿಯ ಉನ್ನತಿಗೆ ದುಡಿದವರು, ಗಡಿನಾಡು–ಹೊರನಾಡಿನ ಕನ್ನಡಿಗರಿಗೆ ಸಹಾಯ ಮಾಡಿದವರಾಗಿರಬೇಕು.
* ಮೇರುಸದೃಶ ವ್ಯಕ್ತಿತ್ವ, ಆದರ್ಶ ಜೀವನ ಸಾಗಿಸುತ್ತಿರಬೇಕು. ಇಡೀ ಜನಾಂಗ ಅವರ ಮಾತು ಕೇಳುವಂತಿರಬೇಕು. ಅವರು ನಾಡಿನ ಗುರುವಿನಂತೆ ಇರಬೇಕು.
* ‘ಮನುಜ ಕುಲ ತಾನೊಂದೆ ವಲಂ’ ಎಂದು ಹೇಳಿದ ಪಂಪನ ಜಾತ್ಯತೀತ ವಿಶ್ವಮಾನವ ದೃಷ್ಟಿ ಇರಬೇಕು. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಕುವೆಂಪು ಮಾತಿನಲ್ಲಿ ನಂಬಿಕೆ ಇರುವ ದಿವ್ಯ ಜೀವಿ ಆಗಿರಬೇಕು.
* ರಾಷ್ಟ್ರಕವಿ ಗೌರವ ಪಡೆಯುವವರು ಎಂದಿಗೂ ಯಾವುದೇ ಆಪಾದನೆಗೆ ಗುರಿಯಾಗಿರಬಾರದು.

‘ಮೇರು’ ಸದೃಶ ವ್ಯಕ್ತಿತ್ವದವರು ಎಂಬ ಉಲ್ಲೇಖ­ವನ್ನು ತೆಗೆದುಕೊಂಡರೆ, ‘ರಾಷ್ಟ್ರಕವಿ ಪುರಸ್ಕಾರ’ ಪಡೆದ ಮೊದಲ ಇಬ್ಬರು ಮಹ­ನೀಯ­ರಾದ ಗೋವಿಂದ ಪೈ ಮತ್ತು ಕುವೆಂಪು ‘ಮೇರುಸದೃಶ ವ್ಯಕ್ತಿತ್ವ’ ಉಳ್ಳವರಾಗಿದ್ದರು (ಮೂರನೆಯವರಾದ ಜಿ.ಎಸ್‌.ಎಸ್‌ ಉತ್ತಮ ಕವಿಯಾದರೂ ಆ ಎತ್ತರದವರಲ್ಲ); ಅವರ ಬದುಕು ಬರಹ ಎರಡೂ ಉತ್ತುಂಗವಾಗಿದ್ದವು; ಟ್ಯಾಗೋರ್‌, ಇಕ್ಬಾಲ್‌ ಮುಂತಾದವರಿಗೆ ಅವರು ಹೆಗಲೆಣೆ­ಯಾಗಿದ್ದರು. ಇಂದು ಅಂಥ­ವರು ಕರ್ನಾಟಕ­ದಲ್ಲಿ ಯಾರಿದ್ದಾರೆ, ಎಲ್ಲಿ­ದ್ದಾರೆ? ‘ಸ್ವಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿ­ಸಿದ ತ್ಯಾಗಿಗಳು (ಲೇಖಕರಲ್ಲಿ) ಯಾರುಂಟು? ‘ತ್ಯಾಗ’­ವೆಂದರೆ ಏನೆಂದು ಕೇಳಬೇಕಾದ ದಿನಗಳಿವು!

ಇನ್ನು, ಇತರ ಮಾನದಂಡ­ಗಳನ್ನು ಪರಿಗಣಿಸಿ­ದರೆ, ಅದರಲ್ಲೂ ‘ದಿವ್ಯಜೀವಿ­ಗಳಾ­ಗಿರಬೇಕು’ ಇತ್ಯಾದಿ.  ಹಿಮಾಲ­ಯದ ಬಗೆಗಿನ ಕಾಳಿದಾಸನ ‘ಪೃಥಿವ್ಯಾ ಇವ ಮಾನದಂಡಃ’ ಎಂಬ ಉಕ್ತಿ ನೆನ­ಪಾ­ಗುತ್ತದೆ; ಅಂತೆಯೇ ರಾಮಾಯಣದ ಆದಿ­ಯಲ್ಲಿ ಬರುವ ರಾಮನ ಗುಣಗಳ ಪಟ್ಟಿ ಕೂಡ!

ಈಗ ಅಂತಹ ಉದಾತ್ತ ಚೇತನಗಳನ್ನು ಎಲ್ಲಿ ತರೋಣ? ಭವಿಷ್ಯದಲ್ಲಾದರೂ ಅಂತಹವರನ್ನು ನಿರೀಕ್ಷಿಸಬಹುದೆ? ‘ಇಡೀ ಜನಾಂಗ ಅವರ ಮಾತನ್ನು ಕೇಳಬೇಕು’ ಎಂಬುದಂತೂ ನಗು ಬರಿಸುತ್ತದೆ: ಈಗ ಯಾರ ಮಾತನ್ನು ಯಾರು ಕೇಳುತ್ತಾರೆ?
ಸರ್ಕಾರ ಪುರಸ್ಕಾರ ಸಂಬಂಧವಾಗಿ ಸಾರ್ವಜನಿಕರ ಅಭಿಪ್ರಾಯಗಳನ್ನು ಕರೆದಿದೆ (ಈ ಜನಮತ ಸಂಗ್ರಹ ನೆಪಮಾತ್ರಕ್ಕೆ ಎನಿಸುತ್ತದೆ). ಪರಿಣಾಮ­ವಾಗಿ, ಲಕ್ಷಾಂತರ ಪತ್ರ­ಗಳು ಅಭಿಮತಗಳನ್ನು ಹೊತ್ತು ಸರ್ಕಾರ­ವನ್ನು ತಲುಪುತ್ತವೆ. ಅವುಗಳ ರಾಶಿಯಿಂದ ದೊಡ್ಡ ತಲೆನೋವಿನ ಹೊರತು ಅನ್ಯ ಪ್ರಯೋಜನವಿಲ್ಲ!

ಇನ್ನು ಪುರಸ್ಕಾರಕ್ಕಾಗಿ ಸಹಜವಾಗಿಯೇ ಪರಮ ‘ಲಾಬಿ’, ‘ಸಾಹಿತ್ಯಕ ರಾಜಕೀಯ’ ನಡೆ­ಯು­­ವುದನ್ನು ಅಲ್ಲಗಳೆಯುವಂತಿಲ್ಲ. ಜಾತಿ, ಮತ, ಪ್ರಾಂತ, ಪ್ರದೇಶ ಮೊದಲಾದ ಪರಿ­ಗಣನೆಗಳು ಖಂಡಿತಾ ಮುಂದೆ ಬಂದು ಕಾಡು-­ತ್ತವೆ! ಒಟ್ಟಿನಮೇಲೆ ‘ರಾಷ್ಟ್ರಕವಿ’ಯ ಆಯ್ಕೆ ಸುಗಮವಾಗಿ ನಡೆಯದೆ ಕಗ್ಗಂಟಾ­ಗುತ್ತದೆ; ಕನಸಿನ ಗಂಟಾಗಲೂ­ಬಹುದು! (ಆದರೆ ಮಾನದಂಡ­ಗಳನ್ನು ಸಡಿಲಿಸುವುದೂ ಅಪೇಕ್ಷಣೀಯವಲ್ಲ) ಇದೆಲ್ಲ ವಿಷಯದ ಒಂದು ಮುಖ. ಇನ್ನೊಂದು ಮುಖ್ಯವಾದ ಮನನಯೋಗ್ಯ ಮುಖ­­ವಿದೆ. ಮೂಲಭೂತವಾಗಿ ‘ರಾಷ್ಟ್ರಕವಿ’ ಅಭಿದಾನದಲ್ಲಿರುವ ‘ರಾಷ್ಟ್ರ’ ಶಬ್ದಕ್ಕೆ ರಾಜ್ಯ­ದಲ್ಲಿ ಈ ಹೊತ್ತು ಅರ್ಥವಿದೆಯೆ?

(ಮಹಾ­‘­ರಾಷ್ಟ್ರ’­­ವೊಂದು ಅಪವಾದ!) ಜ್ಞಾನ­ಪೀಠ ಪ್ರಶಸ್ತಿಯಲ್ಲಿ ಈ ಆಭಾಸವಿಲ್ಲ. ಬೇಕಾದರೆ ‘ರಾಜ್ಯಕವಿ’ ಎನ್ನಬಹುದು. ಆದರೆ ಅದಕ್ಕೆ ಸಂವಾದಿಯಾಗಿ ‘ಕರ್ನಾಟಕ ರತ್ನ’ ಇದೆಯಷ್ಟೆ. ಈ ಎಲ್ಲ ಕಾರಣಗಳಿಂದ, ವಿವಾದಗ್ರಸ್ತ (ವಾಗುವ) ‘ರಾಷ್ಟ್ರಕವಿ’ ಪ್ರಶಸ್ತಿಯನ್ನು ಸರ್ಕಾರ ರದ್ದು ಮಾಡುವುದೇ ಲೇಸು; ವಿದ್ವಾಂಸ­ರೊ­ಬ್ಬರು ಅಭಿಪ್ರಾಯ ಪಟ್ಟಿರುವಂತೆ ಆಯ್ಕೆ  ಪ್ರಕ್ರಿಯೆ ಮುಂದೆ ಹಾಕು­ವುದಲ್ಲ. (ಅದರಿಂದ ‘ಮಾನ ದಂಡ’­ವಾಗು­ವುದು ತಪ್ಪಬಹುದು!) ರದ್ದತಿ­ಯಿಂದ ಯಾರಿಗೂ ನಷ್ಟವಿಲ್ಲ, ಆರ್ಥಿಕವಾಗಿ ಕೂಡ! 

ರಾಜ್ಯಶಾಹಿ ವ್ಯವಸ್ಥೆ
ರಾಷ್ಟ್ರಕವಿ ಎಂಬ ಪದವಿಯನ್ನೇ ತೆಗೆದುಹಾಕಬೇಕು. ಅದು ಅನವಶ್ಯಕ. ಯಾವ ರಾಜ್ಯದಲ್ಲಿಯೂ ಈ ಪದ್ಧತಿ ಇಲ್ಲ. ಕವಿಗಳಲ್ಲಿ ಶ್ರೇಷ್ಠರು–ಕನಿಷ್ಠರು ಎಲ್ಲರೂ ಇರುತ್ತಾರೆ. ಒಬ್ಬರನ್ನು ಮೇಲೆ ತಂದು ಕೂರಿಸಿದರೆ ಏನು ಪ್ರಯೋ­ಜನ? ಎಲ್ಲರೂ ತಮ್ಮ ಅಭಿಪ್ರಾಯ ಕೊಡುತ್ತಾರೆ. ಹತ್ತಾರು ಮಂದಿಯ ಹೆಸರು ಸೂಚಿಸುತ್ತಾರೆ. ಅಂತಿಮವಾಗಿ ಯಾರನ್ನೋ ಒಬ್ಬರನ್ನು ಆಯ್ಕೆ ಮಾಡಿ­ದಾಗ, ಇನ್ನೊಬ್ಬರಿಗೆ ನಿರಾಶೆಯಾಗುತ್ತದೆ. ಅದೆಂತಹ ರಾಷ್ಟ್ರಕವಿ ಪಟ್ಟ? ಈ ಪದವಿ ಕೊಡು­ವುದು ಅರ್ಥಹೀನ. ಎಲ್ಲರೂ ತಮ್ಮ ತಮ್ಮ ಯೋಗ್ಯತೆಗೆ ತಕ್ಕ ಸ್ಥಾನಮಾನ ಪಡೆದಿದ್ದಾರೆ. ಅವರಿಗೆ ಕವಿಗಳು ಎಂಬ ಗೌರವ ಕೊಡಬೇಕಷ್ಟೇ. ರಾಜ್ಯಶಾಹಿಯ ವ್ಯವಸ್ಥೆ ಇದು. ಆಸ್ಥಾನ ಕವಿಗೆ ಪ್ರಜಾ­ಪ್ರಭುತ್ವದಲ್ಲಿ ಸ್ಥಾನ ಇಲ್ಲ. 
–ಚಂದ್ರಕಾಂತ ಕುಸನೂರ, ಸಾಹಿತಿ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT