ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥಾಮಂಜರಿ: ಮೂರು ಭಿನ್ನ ಆವೃತ್ತಿಗಳು

ಹಳತು ಹೊನು�
Last Updated 18 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರಿನ ವೆಸ್ಲಿಯನ್ ಮಿಷನ್ ಅಚ್ಚುಕೂಟದಿಂದ 1841ರಲ್ಲಿ ಮುನ್ಷಿ ಗೋಪಾಲ ಆಚಾರೂ ಮತ್ತು ಮೈಸೂರು ಧಾಟಿಗೋಪಾಲಾಚಾರ್ಯರಿಂದ ಪ್ರಕಾಶಗೊಂಡ ‘ಕಥಾಮಂಜರಿ’ಯ ಒಂದು ಆವೃತ್ತಿ KATHA MANJARE. ಬೆಂಗಳೂರಿನ ವೆಸ್ಲಿಯನ್ ಮಿಷನ್ ಪ್ರೆಸ್ಸಿನಿಂದ 1855ರಲ್ಲಿ Vernacular School Series ಅಡಿಯಲ್ಲಿ ಪ್ರಕಟವಾಗಿರುವ ಮಾರಿಸ್‌ ಪಾದರಿ ಅವರ ‘ಕಥಾಮಂಜರಿ’ (The KATHA MANJARI or Bunch of Stories edited by The Rev. J. Morris) ಇನ್ನೊಂದು ಬೇರೆ ಆವೃತ್ತಿ. 1866ರಲ್ಲಿ ಬೆಂಗಳೂರಿನ ದಿ ಮೈಸೂರು ಗವರ್ನಮೆಂಟ್ ಪ್ರೆಸ್ಸಿನಿಂದ ಜಾನ್ ಗ್ಯಾರೆಟ್ ಅವರ ಸಂಪಾದಕತ್ವದಲ್ಲಿ ಪ್ರಕಟಗೊಂಡ ‘ಕಥಾಮಂಜರಿ’ (2ನೇ ಮುದ್ರಣ) ಮತ್ತೊಂದು ಭಿನ್ನ ಆವೃತ್ತಿ. ಹೀಗೆ ಕನ್ನಡ ಭಾಷೆಯಲ್ಲಿ 19ನೇ ಶತಮಾನದ ಮಧ್ಯಭಾಗದಲ್ಲಿ ‘ಕಥಾಮಂಜರಿ’ ಹೆಸರಿನ ಮೂರು ಭಿನ್ನ ಆವೃತ್ತಿಗಳ ಹಲವು ಮುದ್ರಣಗಳು ಹೊರಬಂದಿವೆ.

ಈ ಕಥಾ ಮಂಜರಿಯ ಮೂರು ಆವೃತ್ತಿಗಳ ಮೂಲ ಮಾತೃಕೆ, ತಮಿಳು ಭಾಷೆಯಲ್ಲಿ 1840ರ ದಶಕದಲ್ಲಿ ಪ್ರಕಟಗೊಂಡ ತಾಂಡವರಾಯ ಮೊದಲಿಯಾರ್ ಅವರು ಬರೆದ ಕಥಾಮಂಜರಿ ಎನ್ನುವ ಕೃತಿ. The Katha Manjari or Bouquet of
Stories in Tamil and English ಹೆಸರಿನ 85 ಪುಟಗಳ ತಮಿಳು ಕೃತಿಯ ಮೊದಲ ಆವೃತ್ತಿಯೇ (ಪ್ರಕಟಣ ವರ್ಷ ಗೊತ್ತಿಲ್ಲ) ಮೇಲಿನ ಕನ್ನಡದ ಮೂರು ವಿವಿಧ ಆವೃತ್ತಿಗಳಿಗೆ ಮೂಲ. ಯಾವುದೇ ಸಂಸ್ಕೃತ ಅಥವಾ ಇಂಗ್ಲಿಷ್ ಕೃತಿ ಇವುಗಳ ಮೂಲವಲ್ಲ ಎನ್ನುವುದು ಗಮನಾರ್ಹ. ಆ ಕಾಲಘಟ್ಟದಲ್ಲಿ ಭಾರತೀಯ ದೇಶಭಾಷೆಗಳ ನಡುವೆ ಕೃತಿಗಳ ಕೊಡು ಕೊಳೆಗಳು ನಡೆಯುತ್ತಿದ್ದವು ಎನ್ನುವುದಕ್ಕೆ ಈ ಪ್ರಯತ್ನಗಳು ನಿದರ್ಶನ. ಅರಮನೆ ಜಯರಾಯಾಚಾರ್ಯರ ‘ಪಾಕಶಾಸ್ತ್ರ’ ಎನ್ನುವ ಕನ್ನಡ ಕೃತಿ 1900ರ ಸುಮಾರಿನಲ್ಲಿ ತಮಿಳು ಹಾಗೂ ತೆಲುಗು ಭಾಷೆಗಳಿಗೆ ಅನುವಾದ ಆದುದನ್ನು ಕೂಡ ಈ ಹಿನ್ನೆಲೆಯಲ್ಲೇ ಗಮನಿಸಬೇಕು.

1841ರ ಮುನ್ಷಿ-ಧಾಟಿ ಅವರ ಹಾಗೂ ಸುಮಾರು 1860ರಲ್ಲಿ ಗ್ಯಾರೆಟ್ ಸಂಪಾದಿಸಿ ಪ್ರಕಟಿಸಿದ ‘ಕಥಾ ಮಂಜರಿ’ (1ನೇ ಮುದ್ರಣ) ಬಗ್ಗೆ ಒಂದು ಮಾತನ್ನು ಹೇಳಬೇಕು. ಇದು 1860ರ ದಶಕದಲ್ಲಿ ಮುಂಬಯಿ ಪ್ರಾಂತದ ಮೆಟ್ರಿಕ್ ಪರೀಕ್ಷೆಗೂ ನಂತರ 1901ರಿಂದ 1912ರವರೆವಿಗೆ ಮುಂಬಯಿ ವಿಶ್ವವಿದ್ಯಾಲಯದ ಬಿ.ಎ. ಮತ್ತು ಎಂ.ಎ. ತರಗತಿಗಳಿಗೂ ಬಹುಕಾಲ ಪಠ್ಯವಾಗಿದ್ದಿತು. ಈ ಪಠ್ಯವನ್ನೋದಿ 1861ರಲ್ಲಿ ಮೆಟ್ರಿಕ್ ಪರೀಕ್ಷೆಯಲ್ಲಿ ಮೊದಲಿಗೆ ಪಾಸಾದವರು ಕನ್ನಡದವರಾದ ವೀರಭದ್ರಯ್ಯ ಮಡಿವಾಳಯ್ಯ ಪಂಡಿತರು.

1902ರಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಜಯರಾವ ಮಾಧವರಾವ ದೇಶಪಾಂಡೆ ಎನ್ನುವವರು ಕನ್ನಡ – ಇಂಗ್ಲಿಷು ಭಾಷೆಗಳೆರಡನ್ನೂ ಆಯ್ಕೆ ಮಾಡಿಕೊಂಡು ಎಂ.ಎ. ಪಾಸುಮಾಡಿದ ಮೊದಲ ಕನ್ನಡಿಗರು. ನಂತರ ಕನ್ನಡದಲ್ಲಿ 1902ರಲ್ಲಿ ಎಂ.ಎ. ಪದವೀಧರರಾದವರು ಆರ್.ಎ. ಜಹಗೀರದಾರ್ ಅವರು. ಇಂತಹ ಮೊದಲಿಗರು ಓದಿ ಪಾಸಾಗುವುದಕ್ಕೆ ಈಡಾದ ಈ ‘ಕಥಾ ಮಂಜರಿ’ಗೆ ಐತಿಹಾಸಿಕ ಮಹತ್ವವಿದೆ.

ಮೂಲ ತಮಿಳು ಕೃತಿಯಲ್ಲಿ ತಮಿಳು ಹಾಗೂ ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಕಥೆಗಳಿರುವಂತೆ ಕನ್ನಡದ ಕಥಾಮಂಜರಿಯಲ್ಲಿ ಕೂಡ ಕನ್ನಡ – ಇಂಗ್ಲಿಷ್ ಭಾಷೆಗಳೆರಡರಲ್ಲಿಯೂ ಕಥೆಗಳನ್ನು ಅನುವಾದಿಸಲಾಗಿದೆ. ಈ ಕೃತಿಯ ರೂವಾರಿಗಳಾದ ಮುನ್ಷಿ ಗೋಪಾಲ ಆಚಾರೂ ಹಾಗೂ ಮೈಸೂರು ಧಾಟಿಗೋಪಾಲಾಚಾರ್ಯ ಅವರನ್ನು ಕುರಿತು ಯಾವುದೇ ಮಾಹಿತಿಗಳು ದೊರೆಯುತ್ತಿಲ್ಲ. 86 ಪುಟಗಳ ಈ ಆವೃತ್ತಿಯಲ್ಲಿ ಒಟ್ಟು 78 ಕಥೆಗಳಿವೆ. ಪುಸ್ತಕದ ಅಂದಿನ ಬೆಲೆ ಎರಡು ರುಪಾಯಿ. ಪುಸ್ತಕದ ಆರಂಭದಲ್ಲಿ 650 ಇಂಗ್ಲಿಷ್ ಶಬ್ದಗಳಿಗೆ ಕನ್ನಡದಲ್ಲಿ ಅರ್ಥವನ್ನು ನೀಡಲಾಗಿದೆ. ಯಾವುದೇ ಕಥೆಗೆ ಹೆಸರನ್ನು ನೀಡದೆ 1ರಿಂದ 78 ಸಂಖ್ಯೆಗಳನ್ನು ಸೂಚಿಸಲಾಗಿದೆ. ಯಾವುದೇ ಕಥೆಯೂ ಒಂದು ಪುಟದ ದೀರ್ಘತೆಯನ್ನು ಮೀರಿಲ್ಲ.

ವೆಸ್ಲಿಯನ್ ಮಿಷನ್ ಪ್ರೆಸ್ಸಿನಿಂದ 1855ರಲ್ಲಿ ತೃತೀಯ ಮುದ್ರಣವನ್ನು ಕಂಡ ‘ರೆವರೆಂಡ್ ಜೆ. ಮಾರಿಸ್ ಪಾದರಿಯಿಂದ ಬರೆದದ್ದು’ ಎನ್ನಿಸಿಕೊಂಡಿರುವ ‘ಕಥಾ ಮಂಜರಿ’ಯು 76 ಕಥೆಗಳನ್ನೊಳಗೊಂಡಿರುವ 152 ಪುಟಗಳ ಹೊತ್ತಿಗೆ. ಇದರ ಅಂದಿನ ಬೆಲೆ 1 ರೂಪಾಯಿ 4 ಆಣೆ. ಇದರಲ್ಲಿ ಇಂಗ್ಲಿಷ್ ಅನುವಾದ ನೀಡಿಲ್ಲ. ಕೇವಲ ಕನ್ನಡದಲ್ಲಿ ಮಾತ್ರವಿದೆ. ಒಂದೊಂದು ಕಥೆಯೂ 2/3 ಪುಟಗಳಷ್ಟು ದೀರ್ಘವಾಗಿದೆ. ಪರಿವಿಡಿಯಲ್ಲಿ 76 ಕಥೆಗೂ ಸಂಖ್ಯೆಯ ಜೊತೆಗೆ ಇಂಗ್ಲಿಷ್‌ನಲ್ಲಿ ಹೆಸರುಗಳನ್ನು ನೀಡಲಾಗಿದೆ. ಉದಾಹರಣೆಗೆ ೪೦ನೇ ಕಥೆಯ ಹೆಸರು The Elephant and the Mouse. ಪರಿವಿಡಿಯಲ್ಲಿ ಕನ್ನಡದಲ್ಲಿ ಕಥೆಯ ಹೆಸರುಗಳನ್ನು ನೀಡಿಲ್ಲ.

ಮುನ್ಷಿ ಮತ್ತು ಧಾಟಿಯವರ ಕಥೆಗಳು ಅಡಕವಾಗಿದ್ದರೆ ಮಾರಿಸ್ ಅವರ ಕಥೆಗಳು ವಿಸ್ತೃತವಾಗಿರುತ್ತದೆ. ನಿದರ್ಶನಕ್ಕೆ ಮೊದಲನೆಯ ಕಥೆ ಮುನ್ಷಿ-ಧಾಟಿಯರದ್ದು ಹೀಗಿದೆ:
ಯಾವ ಪ್ರಾಣಿಯನ್ನು ಕೊಲ್ಲದ ಒಬ್ಬ ಸನ್ಯಾಸಿ ಒಂದು ಕೆರೆ ಕಟ್ಟೆಯ ಮೇಲೆ ಹೋದನು. ಹೋಗುವಾಗ ಒಬ್ಬ ಬೆಸ್ತನು ಆ ಕೆರೆಯೊಳಗೆ ಮೀನುಗಳನ್ನು ಹಿಡಿಯುತ್ತಲಿದ್ದನು. ಸನ್ಯಾಸಿ ಬೆಸ್ತನನ್ನು ನೋಡಿ, ‘ಅಯ್ಯೋ, ನೀನು ಯಾವಾಗ ಕಟ್ಟೆ ಹೇರುವಿ’ಯೆಂದನು. ‘ಅಪ್ಪಾ, ನನ್ನ ಬುಟ್ಟಿ ತುಂಬಿದರೆ ಕಟ್ಟೆ ಹೇರುವೆನೆಂ’ದನು.

ರೆವರೆಂಡ್ ಮಾರಿಸ್ ಪಾದರಿಯವರದ್ದು ಇಂತಿದೆ (ಮೊದಲನೇ ಕಥೆ. ಸನ್ಯಾಸಿಯನ್ನು ಬೆಸ್ತರನ್ನು ಕುರಿತದ್ದು): ಯಾವ ಪ್ರಾಣಿಯನ್ನೂ ಕೊಲ್ಲದ ಒಬ್ಬ ಸನ್ಯಾಸಿ ಇದ್ದನು. ಅವನು ಒಂದಾನೊಂದು ದಿನ ಒಂದು ಕೆರೆ ಕಟ್ಟೆಯ ಮೇಲೆ ಹೋಗುತ್ತಿರುವಾಗ, ಆ ಕೆರೆಯಲ್ಲಿ ಬೆಸ್ತರು ಮೀನು ಹಿಡಿಯುತ್ತಾ ಇದ್ದರು; ಅದನ್ನು ನೋಡಿ ಬಹಳ ಕನಿಕರದಿಂದ, ಈ ಸನ್ಯಾಸಿಯು ಎಲಾ ಮನುಷ್ಯರಿರಾ, ನಿಮ್ಮ ಕೆಲಸವನ್ನು ನೋಡಿ ನನಗೆ ಬಹಳ ದುಃಖ ಉಂಟಾಗಿದೆ. ಅಯ್ಯೋ ಪಾಪವೇ! ನೀವು ಯಾವಾಗ್ಯೆ ಕಟ್ಟೆಯ ಮೇಲಕ್ಕೆ ಹತ್ತಿ ಬರುವಿರಿ ಅನ್ನಲು; ಆ ಬೆಸ್ತರು ಅಯ್ಯಾ ನಮ್ಮ ಬುಟ್ಟಿಗಳು ತುಂಬಿದರೆ ಕಟ್ಟೆಯ ಮೇಲಕ್ಕೆ ಹತ್ತುತ್ತೇವೆ ಅಂದರು. ಹೀಗೆ ಲೋಕದಲ್ಲಿ ಅವರವರಿಗೆ ಬೇಕಾದ ಕೆಲಸಗಳೇ ಅಗತ್ಯವಲ್ಲದೆ ಒಬ್ಬರ ಮಾತು ಒಬ್ಬರು ಕೇಳುವದಿಲ್ಲ.

ಇಲ್ಲಿ ಮುನ್ಷಿ–ಧಾಟಿ ಅವರದ್ದು ಕೇವಲ ಕಥೆ ಮಾತ್ರ ಇದ್ದರೆ ಪಾದರಿ ಮಾರಿಸ್ ಅವರದ್ದರಲ್ಲಿ ಕಥೆಯ ಜೊತೆಗೆ ಕಥೆಯು ಪ್ರಸ್ತುತಿ ಪಡಿಸುವ ಒಂದು ನೀತಿ ಹಾಗೂ ಕಥೆಗಳನ್ನು ಕುರಿತ ತಮ್ಮ ವ್ಯಾಖ್ಯಾನಗಳನ್ನು ಸೇರಿಸಲಾಗಿದೆ. ಮಾರಿಸ್ ಅವರು ಕಥೆಗಳಿಗೆ ನೀಡಿರುವ ಹೆಸರುಗಳಲ್ಲಿ ಕೆಲವು ಸಂಗತಿಗಳನ್ನು ಗಮನಿಸಬಹುದು. ಪ್ರಾಣಿಗಳ, ಮನುಷ್ಯರ ಜಾತಿಯ, ವೃತ್ತಿಯ, ಮನುಷ್ಯರ ಮನೋಧರ್ಮಗಳನ್ನು ಕುರಿತ ನೀತಿಯ ಸೂಚನೆಗಳು ಕಥೆಗಳ ಹೆಸರಿನಲ್ಲಿ ಅಡಗಿರುವುದನ್ನು ಗಮನಿಸಬಹುದು. ಆಶ್ಚರ್ಯವೆಂದರೆ ಶ್ರೀನಿವಾಸ ಹಾವನೂರರ ‘ಹೊಸಗನ್ನಡ ಅರುಣೋದಯ’, ಐ.ಮಾ. ಮುತ್ತಣ್ಣ ಅವರ 19ನೇ ಶತಮಾನದಲ್ಲಿ ‘ಪಾಶ್ಚಾತ್ಯ ವಿದ್ವಾಂಸರ ಕನ್ನಡ ಸೇವೆ’, ಬಿ.ಎಸ್. ತಲ್ವಾಡಿ ಅವರ ‘ಕರ್ನಾಟಕ ಕ್ರೈಸ್ತರ ಇತಿಹಾಸ’ ಹಾಗೂ ‘ಮೈಸೂರು ವಿಶ್ವವಿದ್ಯಾನಿಲಯದ ಗ್ರಂಥಕೋಶ’– ಈ ಕೃತಿಗಳಲ್ಲಿ ರೆವರೆಂಡ್ ಜೆ. ಮಾರಿಸ್ ಅವರ ಹೆಸರಾಗಲೀ, ಅವರ ಪುಸ್ತಕವಾಗಲೀ, ಅವರನ್ನು ಕುರಿತ ಮಾಹಿತಿಗಳಾಗಲೀ ಇಲ್ಲದಿರುವುದು ನಿಜಕ್ಕೂ ಆಶ್ಚರ್ಯವನ್ನುಂಟು ಮಾಡುತ್ತದೆ.

ಮೈಸೂರು ಸರ್ಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕನಾಗಿದ್ದ  ಜಾನ್ ಗ್ಯಾರೆಟ್ 1866ರಲ್ಲಿ (2ನೇ ಮುದ್ರಣ) ಸಂಪಾದಿಸಿ, ಬೆಂಗಳೂರಿನ ಮೈಸೂರು ಗವರ್ನಮೆಂಟ್ ಪ್ರೆಸ್ಸಿನಿಂದ ಪ್ರಕಟಿಸಿದ ‘ಕಥಾ ಮಂಜರಿ’ ಬಹುಪಾಲು ಜೆ. ಮಾರಿಸ್ ಪಾದರಿ ಅವರ ಅನುವಾದವನ್ನೇ ಅನುಸರಿಸಿದೆ. 188 ಪುಟಗಳ ಈ ಕೃತಿಯಲ್ಲಿ ಕಥೆಗಳಿಗೆ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಹೆಸರುಗಳನ್ನು ನೀಡಲಾಗಿದೆ. ಜುಲೈ 1864ರಲ್ಲಿ ಗ್ಯಾರೆಟ್ ಬರೆದ ಮುನ್ನುಡಿಯಲ್ಲಿ ಈ ಕೃತಿ ಹೊರಬರುವುದಕ್ಕೆ ಮತ್ತು ಈ ಕೃತಿಯ ಪರಿಷ್ಕರಣೆಗೆ ನೆರವು ನೀಡಿದ ಮೈಸೂರಿನಲ್ಲಿದ್ದ ಎಚ್. ಸ್ಟೋಕ್ಸ್ ಹಾಗೂ ಎಂ.ಡಿ. ಸಿಂಗರಾಚಾರಿ ಅವರುಗಳನ್ನು ಸ್ಮರಿಸಿಕೊಂಡಿದ್ದಾನೆ. ಅದೇ ಕಾಲಘಟ್ಟದಲ್ಲಿ ಮುಂಬಯಿ ಪ್ರಾಂತದ ಜೊತೆಗೆ ಮೈಸೂರು ಹಾಗೂ ಮಡಿಕೇರಿ ಪ್ರಾಂತಗಳಲ್ಲಿಯೂ ಈ ಪುಸ್ತಕವು ಪ್ರೌಢ ಶಾಲಾ ತರಗತಿಗಳಿಗೆ ಪಠ್ಯವಾಗಿದ್ದಿತು. ಬೆಸ್ತ, ಕೋಮಟಿ, ಕುಂಬಾರ, ತಿಗಳ, ಬಣಜಿಗ, ಬೇಡ, ಚಿಪ್ಪಿಗ– ಈ ಮುಂತಾದ ಜಾತಿಗಳ ಪಾತ್ರಗಳು ಇಲ್ಲಿನ ಕಥೆಗಳಲ್ಲಿ ಬರುತ್ತದೆ. ಆದರೆ ಇದರ ಮೂಲ ತಮಿಳು ಎಂಬುದನ್ನು ಮರೆಯಬಾರದು.

ಅಂದಿನ ಕಾಲಘಟ್ಟದಲ್ಲಿ ದೇಸಿ ವಿದ್ವಾಂಸರೂ ಹಾಗೂ ಪಾಶ್ಚಾತ್ಯ ವಿದ್ವಾಂಸರೂ ಹಳಗನ್ನಡ ಕಾವ್ಯ ಗ್ರಂಥಗಳ ಸಂಪಾದನೆ, ವಿವಿಧ ನಿಘಂಟುಗಳು, ವ್ಯಾಕರಣ, ಸ್ವತಂತ್ರ ಹಾಗು ವಿವಿಧ ಭಾಷೆಗಳಿಂದ ಕಥಾ ಸಂಗ್ರಹಗಳ ಅನುವಾದಗಳನ್ನು ಸ್ಪರ್ಧೆಯೋ ಎನ್ನುವಷ್ಟರ ಮಟ್ಟಿಗೆ ಕಾಳಜಿಯಿಂದ ಸೇವೆ ಮಾಡಿರುತ್ತಾರೆ. ಅಂತಹ ಕೃತಿಗಳ ಸರಣಿಯಲ್ಲಿ ತಮಿಳಿನ ಕಥಾ ಮಂಜರಿಯೊಂದಿಗೆ ಈ ಕಥಾ ಮಂಜರಿಯ ಕನ್ನಡದ ಮೂರು ಭಿನ್ನ ಆವೃತ್ತಿಗಳ ಅಧ್ಯಯನ ಕುತೂಹಲಕಾರಿ ಫಲಿತಗಳನ್ನು ನೀಡಬಹುದು. ನವೋದಯ ಆಧುನಿಕ ಪೂರ್ವ 19ನೇ ಶತಮಾನದ ಮಧ್ಯಕಾಲೀನ ಕೃತಿ ಸರಣಿಯ ಸಾಲಿನಲ್ಲಿ ‘ಕಥಾ ಮಂಜರಿ’ಯ ಭಿನ್ನ ಆವೃತ್ತಿಗಳು ವಿಶಿಷ್ಟ ಸ್ಥಾನವನ್ನು ಹೊಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT