ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಲಿಕೆಯ ಬೀಜಗಳ ಬಿತ್ತಿದ ಶಿಕ್ಷಣ ಕೃಷಿಕ ಗಂಗಾಧರಯ್ಯ

Last Updated 25 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಸಮಾಜದ ಕಟ್ಟ ಕಡೆಯವರಿಗೂ ಶಿಕ್ಷಣವನ್ನು ನೀಡುವ ಉದ್ದೇಶದಿಂದ ಎಚ್‌.ಎಂ. ಗಂಗಾಧರಯ್ಯ ಆರಂಭಿಸಿದ ‘ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಇಂದು ನಾಡಿನ ವಿವಿಧ ಭಾಗಗಳಲ್ಲಿ ತನ್ನ ಕವಲುಗಳನ್ನು ಹರಡಿಕೊಂಡಿದೆ. ಶಿಕ್ಷಣದ ಮೂಲಕ ಸಾಮಾಜಿಕ ಬದಲಾವಣೆಯನ್ನು ಹಂಬಲಿಸಿದ ಹಾಗೂ ‘ಶಿಕ್ಷಣ ಭೀಷ್ಮ’ ಎಂದು ಪ್ರಸಿದ್ಧರಾದ ಗಂಗಾಧರಯ್ಯ ಅವರ ಜನ್ಮಶತಾಬ್ದಿ ವರ್ಷ ಇದು.

ಸಾಮಾಜಿಕ ಬದುಕಿನ ಎಲ್ಲ ಬಾಗಿಲುಗಳನ್ನು ಮುಚ್ಚಿದ ಅಮಾನವೀಯ ಅಸ್ಪೃಶ್ಯತೆ ಆಚರಣೆ, ಎಲ್ಲೇ ಹೋದರೂ ಬೆನ್ನತ್ತಿದ ಜಾತಿ ತಾರತಮ್ಯದ ಭೂತ, ಕಿತ್ತು ತಿನ್ನುವ ಬಡತನ; ಮತ್ತೊಂದು ಕಡೆ ಗಾಂಧಿ, ವಿನೋಬ ಭಾವೆ, ಬುದ್ಧ ಮತ್ತು ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡುತ್ತಿದ್ದ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರ ಧಾರೆಯ ಸಂಪರ್ಕದ ಸೆಳೆತ.

ಇಂತಹ ಸಮಸ್ಯೆ ಮತ್ತು ದೇಶಕ್ಕೆ ವಿಮೋಚನೆಯ ಹಾದಿ ತೋರಿದ ಉನ್ನತ ವ್ಯಕ್ತಿಗಳ ಆದರ್ಶವನ್ನೇ ತನ್ನ ಬದುಕಿನಲ್ಲಿ ಬೆಳಕಾಗಿ  ಕಂಡುಕೊಂಡ ಅಸಾಮಾನ್ಯ ಸಾಧಕ ಹೆಬ್ಬಳ್ಳು ಗಂಗಮರಿಯಣ್ಣ ಗಂಗಾಧರಯ್ಯ ಈಗ ಅನುಕರಣೀಯ ವ್ಯಕ್ತಿಶಕ್ತಿ. ಚಿತ್ರಕಲಾ ಶಿಕ್ಷಕರಾಗಿ ಜೀವನ ಆರಂಭಿಸಿದ ದಲಿತ ವರ್ಗದ ಒಬ್ಬ ಸಾಮಾನ್ಯ ವ್ಯಕ್ತಿಯು ಸರ್ಕಾರಿ ಹುದ್ದೆಯನ್ನು ತ್ಯಜಿಸಿ, ಶಿಕ್ಷಣ ಕ್ಷೇತ್ರವನ್ನು ತನ್ನ ಕರ್ಮಭೂಮಿಯನ್ನಾಗಿ ಮಾಡಿಕೊಂಡು ಅದರಲ್ಲಿ ಮಾಡಿರುವ ಅದ್ಭುತ ಸಾಧನೆಯನ್ನು ನೋಡಿದರೆ ಆ ವ್ಯಕ್ತಿಯ ಸಾಹಸ ಎಂತಹವರನ್ನೂ ಬೆರಗುಗೊಳಿಸುತ್ತದೆ.

ಇಂದು ತುಮಕೂರಿನಲ್ಲಿ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು ಒಂದು ಖಾಸಗಿ ವಿಶ್ವವಿದ್ಯಾಲಯವಾಗಿ ಬೃಹತ್ತಾಗಿ ಬೆಳೆಯಲು ಅಡಿಪಾಯ ಹಾಕಿದ ಹೆಚ್.ಎಂ. ಗಂಗಾಧರಯ್ಯ ಅವರ ಕಾರ್ಯ, ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಸಾಧನೆ ಜೊತೆಗೆ ತುಮಕೂರು ಒಂದು ಶೈಕ್ಷಣಿಕ ನಗರವಾಗಿ ಬೆಳೆಯಲು ಕಾರಣ ಎಂದರೆ ತಪ್ಪಾಗಲಾರದು.

‘ಶಿಕ್ಷಣ ಭೀಷ್ಮ’ ಎಂದೇ ಕರೆಯಲಾಗುವ ಎಚ್.ಎಂ. ಗಂಗಾಧರಯ್ಯ ಅವರದು ಈಗ ಜನ್ಮಶತಾಬ್ದಿ ವರ್ಷ. ಗಂಗಾಧರಯ್ಯ ಅವರು ಹುಟ್ಟಿದ್ದು (ಜ. 10, 1915) ಕುಣಿಗಲ್ ತಾಲ್ಲೂಕಿನ ಅಮೃತೂರಿನಲ್ಲಿ. ಅವರು ಹುಟ್ಟಿ ಬೆಳೆದದ್ದು ಅಮೃತೂರಿನ ಪರಿಶಿಷ್ಟ ಜಾತಿಯ ಒಬ್ಬ ಬಡ ಶಿಕ್ಷಕನ ಮಗನಾಗಿ. ಅವರ ತಂದೆ ಮತ್ತು ಪೂರ್ವಿಕರ ಊರು ಈಗಿನ ರಾಮನಗರ ಜಿಲ್ಲೆ ಮಾಗಡಿ ತಾಲ್ಲೂಕಿನ ಹೆಬ್ಬಳ್ಳು ಎಂಬ ಪುಟ್ಟ ಹಳ್ಳಿ.

ಗಂಗಾಧರಯ್ಯ ಅವರ ತಾತ ಗಂಗ ಮರಿಯಣ್ಣ ಮೈಸೂರು ಅರಸರ ಸೈನ್ಯದಲ್ಲಿ ಸುಭೇದಾರರಾಗಿದ್ದ ಕಾರಣ ತಂದೆ ಮರಿಯಪ್ಪ ಮಿಲಿಟರಿ ಶಾಲೆಯಲ್ಲಿ ಓದಿ ಶಿಕ್ಷಕರಾಗಲು ಸಾಧ್ಯವಾಗಿತ್ತು. ಹಾಗಾಗಿಯೇ ಗಂಗಾಧರಯ್ಯನವರು ಚಿತ್ರಕಲಾ ಶಿಕ್ಷಕರಾಗಿ ಮತ್ತು ಸಮಾಜ ಸೇವೆಯಲ್ಲಿ ವಿಶೇಷವಾಗಿ ಶಿಕ್ಷಣ ಕ್ಷೇತ್ರದಲ್ಲಿ ತಮ್ಮದೇ ಹೆಜ್ಜೆಗಳನ್ನು ಇಡಲು ಕಾರಣವಾಯಿತು.

ಪರಿಶಿಷ್ಟ ಜಾತಿಯ ಜನರು ಇಂದಿನ ದಿನಗಳಲ್ಲಿಯೂ ಹಳ್ಳಿಗಳಲ್ಲಿ ಅಸ್ಪೃಶ್ಯತೆ, ಜಾತಿ ನಿಂದನೆ ಮತ್ತು ಹಸಿವು ಬಡತನವನ್ನೇ ಹೊದ್ದು ಮಲಗಿರುವಾಗ ನೂರು ವರ್ಷಗಳ ಹಿಂದಿನ ಅವರ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ ಹೇಗಿತ್ತು ಎನ್ನುವುದನ್ನು ಊಹಿಸಿಕೊಳ್ಳುವುದು ಕಷ್ಟ. ತಂದೆ ಶಿಕ್ಷಕರಾಗಿದ್ದರೂ, ಗಂಗಾಧರಯ್ಯ ಅವರ ಬದುಕು ಸುಖಕರವಾಗೇನೂ ಇರಲಿಲ್ಲ. ಮಗನ ಓದಿಗೆ ತಂದೆ ಬೆನ್ನೆಲುಬಾಗಿ ನಿಂತರೂ, ಅಸ್ಪೃಶ್ಯತೆ ಮತ್ತು ಜಾತಿ ತಾರತಮ್ಯ ಗಂಗಾಧರಯ್ಯ ಅವರನ್ನು ಹೆಜ್ಜೆ ಹೆಜ್ಜೆಗೂ ಅವಮಾನ ಮತ್ತು ನೋವನ್ನು ಅನುಭವಿಸುವಂತೆ ಮಾಡಿತ್ತು.

ಇಂತಹ ಅನುಭವ ಆಗಿನ ಮತ್ತು ವಾಸ್ತವವಾಗಿ ಈಗಲೂ ಎಲ್ಲ ದಲಿತರದ್ದೂ ಆಗಿದೆಯಾದರೂ, ತನ್ನ ಬದುಕಿನಲ್ಲಿ ಏನಾದರೊಂದು ಸಾಧನೆ ಮಾಡಬೇಕೆಂಬ ಹಂಬಲದಿಂದ ಮುನ್ನಡೆಯನ್ನಾರಂಭಿಸಿದ ಗಂಗಾಧರಯ್ಯ ಅವರಿಗೆ ಜಾತಿ ಎನ್ನುವುದು ಹೆಜ್ಜೆ ಹೆಜ್ಜೆಗೆ ಎಡತಾಕುವ ಸಮಸ್ಯೆಯಾಗಿತ್ತು. ಅವರ ಬದುಕಿನ ಬುತ್ತಿಯನ್ನು ಬಿಚ್ಚಿದಾಗ ಅವರು ಅನುಭವಿಸಿದ ಕಷ್ಟಕೋಟಲೆಗಳೆಲ್ಲವನ್ನು ದಾಟಿ ಒಂದು ಗುರಿ ತಲುಪಿದ್ದು ಅಚ್ಚರಿಯ ಸಂಗತಿ.

ಕಲೆಯಿಂದ ಕಲಿಕೆಗೆ...
ಗಂಗಾಧರಯ್ಯ ಅವರು ಮೂಲತಃ ಕಲಾವಿದ. ಚಿತ್ರಕಲೆಯಲ್ಲಿ ಅವರದು ಎತ್ತಿದ ಕೈ. ಕಲಾ ಶಿಕ್ಷಕರಾಗಿ ತೀರ್ಥಹಳ್ಳಿ ಸೇರಿದಂತೆ ಹಲವಾರು ಕಡೆ ಕೆಲಸ ಮಾಡಿದ್ದರೂ, ಅವರು ಕೊನೆಗೆ ಹಿಡಿದದ್ದು ಶಿಕ್ಷಣ ಕ್ಷೇತ್ರವನ್ನು. ಅರವತ್ತು ಎಪ್ಪತ್ತು ವರ್ಷಗಳ ಹಿಂದೆ ಒಂದಿಷ್ಟು ಕಲಿತ ಪರಿಶಿಷ್ಟ ಜಾತಿಯ ವ್ಯಕ್ತಿ ಸಿಕ್ಕರೆ ಸಾಕು, ಅವರಿಗೆ ಕೆಲವು ಉದ್ಯೋಗ ಮತ್ತು ಸಾಮಾಜಿಕ ಕ್ಷೇತ್ರ ಕೈಬೀಸಿ ಕರೆಯುತ್ತಿತ್ತು. ಆದರೆ ಆ ಪರಿಸ್ಥಿತಿಯನ್ನು ಆಮಂತ್ರಿಸಿಕೊಳ್ಳಲು ಈ ಜನರಿಗೆ ಶಿಕ್ಷಣ ಎಂಬುದು ಕನಸಿನ ಮಾತಾಗಿತ್ತು.

ಬಡತನದ ನಡುವೆ ಶಾಲೆಗೆ ಹೋಗಿ ಕಲಿಯುವುದು ಇಂದಿನಂತೆ ಸುಲಭದ ಸಂಗತಿ ಆಗಿರಲಿಲ್ಲ. ಮೈಸೂರು ಸಂಸ್ಥಾನದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ದೂರದೃಷ್ಟಿಯಿಂದ ಆರಂಭವಾಗಿದ್ದ ಬೋರ್ಡಿಂಗ್ ಶಾಲೆಗಳು ಅಸ್ಪೃಶ್ಯ ಜನರಿಗೆ ವರದಾನವಾಗಿದ್ದವು. ಅಂತಹ ಕಡೆ ಕಲಿತ ಬೆರಳೆಣಿಕೆಯ ಜನರಲ್ಲಿ ಕೆಲವರು ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಯಿತು. 

ತಂದೆಯ ಸಂಬಳ ಸಾಲದಾಗಿ, ಕುಟುಂಬದ ನಿರ್ವಹಣೆಗೆ ಬಾಲ್ಯದಲ್ಲಿ ಹೊಲಗದ್ದೆಗಳಲ್ಲಿ ಕೂಲಿ ಮಾಡಿ ಮತ್ತು ಮೇಕೆಗಳನ್ನು ಮೇಯಿಸುತ್ತಾ ಹಾವಿನಿಂದ ಕಚ್ಚಿಸಿಕೊಂಡು ಬದುಕುಳಿದ ಗಂಗಾಧರಯ್ಯ, ತುಮಕೂರು–ಮೈಸೂರು ಮತ್ತು ಬೆಂಗಳೂರಿನಲ್ಲಿ ವ್ಯಾಸಂಗ ಮಾಡಿ ಕಲಾಶಿಕ್ಷಕರಾಗಿ ಹಲವು ವರ್ಷ ಕೆಲಸ ಮಾಡಿದರು. ಆದರೆ ಆ ದಿನಗಳಲ್ಲಿ ಅವರನ್ನು ಹೆಚ್ಚು ಸೆಳೆದದ್ದು, ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿದ್ದ ಮಹಾತ್ಮಾ ಗಾಂಧಿ, ಭೂದಾನ ಚಳವಳಿಯ ವಿನೋಬಾ ಭಾವೆ, ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡುತ್ತಿದ್ದ ಡಾ. ಬಾಬಾಸಾಹೇಬರು ಮತ್ತು ಮಾನವೀಯತೆ, ಕರುಣೆಯನ್ನು ಬೋಧಿಸಿದ ಗೌತಮ ಬುದ್ಧರ ವಿಚಾರಧಾರೆ.

1927ರಲ್ಲಿ ಗಾಂಧಿ ದೇಶದಾದ್ಯಂತ ಪ್ರವಾಸ ಕೈಗೊಂಡಾಗ ತುಮಕೂರಿಗೂ ಆಗಮಿಸಿ ಒಂದು ದಿನ ತಂಗಿದ್ದರು. ಆ ಸಮಯದಲ್ಲಿ ಅವರು ಸ್ಥಳೀಯ ಹರಿಜನ ಹಾಸ್ಟೆಲಿಗೂ ಭೇಟಿ ನೀಡಿದ್ದರು. ಆಗ ಗಂಗಾಧರಯ್ಯ ಅವರನ್ನು ಗಾಂಧಿ ಮಾತನಾಡಿಸಿದ್ದರು. ಗಾಂಧಿ ಅವರು ಉಳಿದುಕೊಂಡಿದ್ದಾಗ ಸ್ಥಳೀಯ ವ್ಯವಸ್ಥಾಪಕರು, ಬೆಳಗ್ಗಿನ ಉಪಹಾರಕ್ಕೆ ರಾಗಿ ರೊಟ್ಟಿ ಮತ್ತು ಹುಚ್ಚೆಳ್ಳು ಚಟ್ನಿ ಸಿದ್ಧಪಡಿಸಿಕೊಂಡಿದ್ದರು. ಈ ಉಪಹಾರವನ್ನು ಹರಿಜನ ಬಾಲಕನೊಬ್ಬನಿಂದ ಗಾಂಧಿ ಅವರಿಗೆ ಬಡಿಸಬೇಕೆಂದು ತೀರ್ಮಾನಿಸಿದ್ದರಂತೆ. ಗಾಂಧಿ ಅವರಿಗೆ ಈ ಉಪಹಾರ ಬಡಿಸುವ ಅವಕಾಶ ಸಿಕ್ಕಿದ್ದು ಗಂಗಾಧರಯ್ಯ ಅವರಿಗೆ.

ಬೆಂಗಳೂರಿನ ಕೋಟೆ ಹೈಸ್ಕೂಲಿನಲ್ಲಿ ವ್ಯಾಸಂಗ ಮಾಡುವಾಗ ಒಮ್ಮೆ ಗಾಂಧೀಜಿ ಆಗಮಿಸಿದ್ದರು. ಆಗ ಗಾಂಧಿ ಅವರ ಚಿತ್ರವನ್ನು ಬರೆದ ಗಂಗಾಧರಯ್ಯ, ಗೋಪಾಲಸ್ವಾಮಿ ಅಯ್ಯರ್ ಅವರ ನೆರವು ಪಡೆದು ಗಾಂಧಿ ಅವರನ್ನು ಭೇಟಿಯಾಗಿ ಅರ್ಪಿಸಿದ್ದರು. ಗಂಗಾಧರಯ್ಯ ಅವರು ತಮ್ಮ ಜೀವಿತ ಕಾಲದಲ್ಲಿ ಗಾಂಧಿ ಅವರ ಈ ಭೇಟಿಯ ದಿನಗಳನ್ನು ಸದಾ ಸ್ಮರಿಸಿಕೊಳ್ಳುತ್ತಾ ತಮ್ಮ ಬದುಕಿನಲ್ಲಿ ಆದ ಬದಲಾವಣೆಗೆ ಇದೆಲ್ಲ ಕಾರಣ ಎಂದು ತಮ್ಮ ಆಪ್ತರೊಡನೆ ಹೇಳಿಕೊಳ್ಳುತ್ತಿದ್ದರು.

ತಿರುವು ನೀಡಿದ ವಿನೋಬಾ
ಭೂದಾನ ಚಳವಳಿಯ ನೇತಾರ ವಿನೋಬಾ ಭಾವೆ ಅವರು ದೇಶದಾದ್ಯಂತ ಕಾಲ್ನಡಿಗೆಯಲ್ಲಿ ಪ್ರವಾಸ ಮಾಡಿ ಚಳವಳಿ ಆರಂಭಿಸಿದ್ದರು. ಅವರೊಮ್ಮೆ ತುಮಕೂರಿಗೆ ಭೇಟಿ ನೀಡಿದಾಗ ಪಕ್ಕದ ಗೊಲ್ಲಹಳ್ಳಿಯ ಗಂಗಾಧರಯ್ಯ ಅವರ ಮನೆಯಲ್ಲಿ ತಂಗಿದ್ದರು. ಆಗ ಅವರು, ಗೊಲ್ಲಹಳ್ಳಿಯ ಪರಿಸರವನ್ನು ಮೆಚ್ಚಿ– ‘ನೀವು ಇಲ್ಲಿ ಬಡ ಮಕ್ಕಳಿಗಾಗಿ ಶಾಲೆ ಆರಂಭಿಸಿ. ಇದೊಂದು ಶಾಂತಿನಿಕೇತನವಾಗಲಿದೆ’ ಎಂದು ಸಲಹೆ ನೀಡಿದ್ದರಂತೆ.

ವಿನೋಬಾ ಅವರ ಸಲಹೆಯನ್ನು ದೈವಾಜ್ಞೆಯಂತೆ ಪಾಲಿಸಿದ ಗಂಗಾಧರಯ್ಯ ಅವರು ‘ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ’ ಆರಂಭಿಸಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಆರಂಭಿಸಿದರು. ಅಂದು ಆರಂಭಿಸಿದ ಶಿಕ್ಷಣ ಸಂಸ್ಥೆ ವರ್ಷ ವರ್ಷ ಬೆಳೆಯುತ್ತಾ ಬಂದಿತು. ತುಮಕೂರು ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು, ಮಂಡ್ಯ, ಮೈಸೂರು, ಕೋಲಾರ ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲೂ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯ ಶಾಲೆಗಳು ನಡೆಯುತ್ತಿವೆ.

ಗೊಲ್ಲಹಳ್ಳಿ ಮತ್ತು ತುಮಕೂರಿನಲ್ಲಿನ ಹಾಸ್ಟೆಲುಗಳನ್ನು ನಡೆಸಲು ಗಂಗಾಧರಯ್ಯ ಅವರು, ಕುಣಿಗಲ್ ಮತ್ತು ಇತರೆ ಊರುಗಳಲ್ಲಿನ ಉಳ್ಳವರ ಬಳಿ ರಾಗಿ ಮತ್ತು ಅಕ್ಕಿಯನ್ನು ಸಂಗ್ರಹಿಸಿ, ಬಸ್ಸಿಗೆ ಕಾಸಿಲ್ಲದೆ ಸ್ವತಃ ತಲೆಯ ಮೇಲೆ ಹೊತ್ತುಕೊಂಡು ಹತ್ತಾರು ಮೈಲಿ ನಡೆಯುತ್ತಿದ್ದರು. ಸುಸ್ತಾದಾಗ ಮರದಡಿಯಲ್ಲಿ ವಿಶ್ರಮಿಸಿ ಮತ್ತೆ ಪ್ರಯಾಣ ಮುಂದುವರಿಸಿದ ಕಷ್ಟದ ದಿನಗಳನ್ನು ಅವರು ತಮ್ಮ ಆಪ್ತರೊಂದಿಗೆ ಹಂಚಿಕೊಂಡಿದ್ದಾರೆ.

ಇಂದು ಗಂಗಾಧರಯ್ಯ ಅವರು ಕಟ್ಟಿದ ಶಿಕ್ಷಣ ಸಂಸ್ಥೆ ಬೃಹತ್ತಾಗಿ ಬೆಳೆದಿದೆ. 94 ಶಾಲೆ ಕಾಲೇಜುಗಳನ್ನು ಹೊಂದಿದೆ.  ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜನ್ನು ಹೊಂದಿದೆ. ನೆಲಮಂಗಲದ ಬಳಿ ಮತ್ತೊಂದು ಅತ್ಯಾಧುನಿಕ ಮೆಡಿಕಲ್ ಕಾಲೇಜು ಮತ್ತು ಬೃಹತ್ತಾದ ಆಸ್ಪತ್ರೆ ತಲೆ ಎತ್ತುತ್ತಿದೆ. ಅವರ ಮಕ್ಕಳಾದ ಡಾ. ಜಿ. ಶಿವಪ್ರಸಾದ್ ಮತ್ತು ಡಾ. ಜಿ. ಪರಮೇಶ್ವರ ಅವರು ತಂದೆ ಕಟ್ಟಿದ ಶಿಕ್ಷಣ ಸಂಸ್ಥೆ ಬೃಹತ್ತಾಗಿ ಬೆಳೆಯಲು ಕಾರಣರಾಗಿದ್ದಾರೆ. ತಮ್ಮ ತಂದೆಯ ಈ ಜನ್ಮ ಶತಾಬ್ದಿ ವರ್ಷದಲ್ಲಿ ಸಿದ್ಧಾರ್ಥ ಶಿಕ್ಷಣ ಸಂಸ್ಥೆಯು 100 ಶಾಲೆಗಳನ್ನು ಹೊಂದುವ ಗುರಿ ಹಾಕಿಕೊಂಡಿದ್ದಾರೆ.

ಬೆಂಗಳೂರಿನ ಮಹಾನಗರಕ್ಕಿಂತ ಗ್ರಾಮಾಂತರ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದ ಗಂಗಾಧರಯ್ಯ ಅವರ ಹೆಚ್ಚು ಶಾಲಾ ಕಾಲೇಜುಗಳಿರುವುದು ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ. ಡಾ. ಜಿ. ಪರಮೇಶ್ವರ್ ಹೇಳುವಂತೆ, ಒಮ್ಮೆ ಅವರು ತಮ್ಮ ತಂದೆಯೊಡನೆ– ‘ಬೆಂಗಳೂರಿನಲ್ಲಿ ಕಾಲೇಜು ಆರಂಭಿಸೋಣ’ ಎಂದರಂತೆ. ಆಗ ಗಂಗಾಧರಯ್ಯ ಅವರು, ‘ನೀನೊಬ್ಬ ಹುಚ್ಚ. ಬೆಂಗಳೂರಿನಲ್ಲಿ ಕಾಲೇಜು ಮಾಡುವವರು ಬೇಕಾದಷ್ಟು ಜನ ಇದ್ದಾರೆ. ನಾವು ನಮ್ಮ ಹಳ್ಳಿ ಮಕ್ಕಳ ಕಡೆ ನೋಡಬೇಕಾಗಿದೆ. ನಮ್ಮ ಹಳ್ಳಿ ಮಕ್ಕಳಿಗಾಗಿ ನಾವು ಶಾಲೆ ಕಾಲೇಜುಗಳನ್ನು ನಡೆಸಬೇಕು’ ಎಂದಿದ್ದರಂತೆ. ಅವರ ಈ ಉದ್ದೇಶ ಹಳ್ಳಿಯ ಬಡಮಕ್ಕಳಿಗೆ ಶಿಕ್ಷಣ ನೀಡಬೇಕೆನ್ನುವುದಾಗಿತ್ತು.

ಜಾತ್ಯತೀತ ಸಂಸ್ಥೆ
ನಾವು ಯಾವುದಾದರೂ ಒಂದು ಜಾತಿಯ ಅಥವಾ ಮಠಗಳು ನಡೆಸುವ ಶಿಕ್ಷಣ ಸಂಸ್ಥೆಗಳನ್ನು ಪ್ರವೇಶಿಸಿದರೆ ಅಲ್ಲಿನ ಶೇಕಡ 100 ಅಥವಾ ಶೇ 90ರಷ್ಟಾದರೂ ಅದೇ ಜಾತಿಯ ಸಿಬ್ಬಂದಿ ಕಾಣುತ್ತಾರೆ. ಆದರೆ ಶ್ರೀ ಸಿದ್ಧಾರ್ಥ ಶಿಕ್ಷಣ ಸಂಸ್ಥೆ ಇದಕ್ಕೆ ಅಪವಾದ. ಇದೊಂದು ಜಾತ್ಯತೀತ ಶಿಕ್ಷಣ ಸಂಸ್ಥೆ. ಇಲ್ಲಿ ಬ್ರಾಹ್ಮಣ, ಲಿಂಗಾಯತ, ಒಕ್ಕಲಿಗ ಮತ್ತು ಇತರೆ ಹಿಂದುಳಿದವರು ಸೇರಿದಂತೆ ಎಲ್ಲ ಜಾತಿಯವರಿಗೂ ಉದೋಗದಲ್ಲಿ ಅವಕಾಶ ನೀಡಲಾಗಿದೆ. ಒಂದು ಶಿಕ್ಷಣ ಸಂಸ್ಥೆ ಜನಪ್ರಿಯವಾಗಲು ಮತ್ತು ಅದನ್ನು ಎಲ್ಲರೂ ಇಷ್ಟಪಡುವಂತೆ ಮಾಡಲು ಎಲ್ಲ ಜನರನ್ನು ಒಳಗೊಳ್ಳಬೇಕೆನ್ನುವ ತಂದೆಯ ಸಿದ್ಧಾಂತವನ್ನು ಅವರ ಮಕ್ಕಳೂ ಮುಂದುವರಿಸಿದ್ದಾರೆ.

ಜಾತಿ ಮತ್ತು ಅಸ್ಪೃಶ್ಯತೆಯ ಹಿಂದೂ ಧರ್ಮದ ಸಂಕೋಲೆಯಿಂದ ವಿಮೋಚನೆ ಪಡೆಯಲು ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಪಾಠವನ್ನು ಹೇಳಿಕೊಟ್ಟ ಅಂಬೇಡ್ಕರ್ ಅವರ ಮೊದಲ ಉದ್ದೇಶ ಶಿಕ್ಷಣ ನೀಡಿಕೆಯನ್ನು ಗಂಗಾಧರಯ್ಯ ತಮ್ಮ ಸಾತ್ವಿಕ ಹಾದಿಯ ಮೂಲಕ ಪಾಲಿಸಿದ್ದಾರೆ. ಅಷ್ಟೇ ಅಲ್ಲ, ಅಂಬೇಡ್ಕರ್ ಅವರು ಅನುಸರಿಸಿದ ಬೌದ್ಧ ಧರ್ಮವನ್ನು ಸ್ವೀಕರಿಸಿ ಅದರಂತೆ ತಮ್ಮ ಜೀವನದುದ್ದಕ್ಕೂ ನಡೆದುಕೊಂಡಿದ್ದಾರೆ. ಅವರ ಆಸೆಯಂತೆಯೇ– 1996ರ ಡಿ. 5ರಂದು ಅವರು ನಿಧನರಾದಾಗ, ಬೌದ್ಧ ಧರ್ಮದ ಸಂಪ್ರದಾಯದಂತೆಯೇ ಅವರ ಅಂತ್ಯಕ್ರಿಯೆ ನೆರವೇರಿದೆ. ತಮ್ಮ ಬದುಕಿನಲ್ಲಿ ನಂಬಿಕೊಂಡಿದ್ದ ತತ್ವಗಳಂತೆ ಅವರು ಬದುಕಿ ಬಾಳಿದರು.

ಗಂಗಾಧರಯ್ಯ ಅವರು ಕೆಲ ಕಾಲ ರಾಜಕೀಯ ಕ್ಷೇತ್ರಕ್ಕೂ ಕಾಲಿಟ್ಟಿದ್ದರು. 1945ರಲ್ಲಿ ನ್ಯಾಯ ವಿಧಾಯಕ ಸಭೆಗೆ ಆಯ್ಕೆಯಾಗಿದ್ದ ಅವರು, ಮೈಸೂರು ಲೆಜಿಸ್ಲೇಟಿವ್ ಕೌನ್ಸಿಲ್‌ನ ಸದಸ್ಯರೂ ಆಗಿದ್ದರು. ಚಿಕ್ಕಮಗಳೂರಿನ ಮೀಸಲು ಕ್ಷೇತ್ರದಿಂದ ಪ್ರಜಾ ಪಕ್ಷದ ಅಭ್ಯರ್ಥಿಯಾಗಿ ವಿಧಾನ ಸಭೆಗೆ ಆಯ್ಕೆಯಾಗಿದ್ದರು. ಕೆಂಗಲ್ ಹನುಮಂತಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ ಗಂಗಾಧರಯ್ಯ ಅವರನ್ನು ವಿಧಾನ ಪರಿಷತ್ತಿಗೆ ನಾಮಕರಣ ಮಾಡಿದ್ದರು.

ಹೀಗೆ ಅವರು ಸುಮಾರು ಒಂಬತ್ತು ವರ್ಷ ರಾಜಕೀಯ ಅಧಿಕಾರವನ್ನೂ ನೋಡಿದ್ದಾರೆ. ಆದರೆ ಅವರು ಕೊನೆಗೆ ಗಟ್ಟಿಯಾಗಿ ಆರಿಸಿಕೊಂಡ ಕ್ಷೇತ್ರ ಶಿಕ್ಷಣ. ಅವರ ಶ್ರಮದಿಂದ ಇಂದು ಸಾವಿರಾರು ಮಂದಿಗೆ ವಿದ್ಯೆ ಮತ್ತು ಉದ್ಯೋಗಾವಕಾಶಗಳು ತೆರೆದುಕೊಂಡಿವೆ. ದಲಿತ ವರ್ಗದಿಂದ ಬಂದು ತನ್ನ ವೈಯಕ್ತಿಕ ಬದುಕಿನಲ್ಲಿ ಒಂದು ಸಮಾಜಕ್ಕೆ ಇದಕ್ಕಿಂತ ಇನ್ನೇನು ಸಾಧನೆ ಮಾಡಬಹುದು! ಹಾಗಾಗಿಯೇ ದಿವಂಗತ ಎಚ್.ಎಂ. ಗಂಗಾಧರಯ್ಯ ಅವರ ಜನ್ಮಶತಾಬ್ದಿ ನಿಜಕ್ಕೂ ಸ್ಮರಣೀಯ.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT