ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವಿತೆ ; ನಾನೊಂದು ಸಾರ್ವಜನಿಕ ಶೌಚಾಲಯ

Last Updated 29 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ನಾನೊಂದು ಸಾರ್ವಜನಿಕ ಶೌಚಾಲಯ
ನನ್ನ ಒಳಗೋಡೆಗಳ ಮೇಲೆ
ಮರ್ಯಾದಸ್ಥರು ಮೂಗು ಮುಚ್ಚಿಕೊಳ್ಳುವ
ಹೇಲುಚ್ಛೆ ವೀರ‌್ಯದ ವಾಸನೆ
ಅಶ್ಲೀಲ ಸಂಕೇತ ಸಂಭಾಷಣೆ
ಸಿಗರೇಟು ಸೇದಿ ಚುಟುಗಿ ಇಡುವ
ಷಂಡ ಮೈಯ ಸಿಟ್ಟುಗಳು
ಗುಟ್ಕಾ ಜಗಿದು ಕ್ಯಾಕರಿಸಿ ಉಗುಳುವ
ರೋಗಿಷ್ಟ ಮುಖೇಡಿ ಬಯಕೆಗಳು

ನಾನೊಂದು ಸಾರ್ವಜನಿಕ ಶೌಚಾಲಯ
ಬರಿಗಣ್ಣುಗಳಿಂದಲೇ ಬೆತ್ತಲಾಗಿ
ಸಾಮೂಹಿಕ ಅತ್ಯಾಚಾರಕೆ ಒಳಗಾಗಿ
ಅರ್ಧಹರಿದು ಜೋತಾಡುವ
ನೀಲಿ ಸಿನಿಮಾವೊಂದರ ಪೋಸ್ಟರಿನಂತೆ

ನನ್ನ ಅಂಗಾಂಗಗಳ ಮೇಲಾದಷ್ಟು
ಗಜ್ನಿದಾಳಿ
ಜಗದ ಯಾವ ಮಸೀದಿಮಂದಿರಗಳ ಮೇಲೂ
ಆಗಲಿಲ್ಲ

ಆದರೂ ಕೆಲವು ಸಲ
ಪುಳಕಗೊಳ್ಳುತ್ತದೆ ನೂರು ಕುದುರೆಗಳೋಟಕೆ
ಹಾಸಿದ ನನ್ನ ಮೈ ಆಟದ ಮೈದಾನವಾಗಿ

ನಾನೊಮ್ಮೆ ಪಾರ್ಲಿಮೆಂಟು ಇನ್ನೊಮ್ಮೆ ನ್ಯಾಯಾಲಯ
ನಾನು ಧರ್ಮ ಮಗದೊಮ್ಮೆ ದೇವಾಲಯ
ನಾನು ದೇಶ ಕೆಲವೊಮ್ಮೆ ಭಾಷೆ
ನಾನು ಹೆಣ್ಣು ನಾನು ವೇಶ್ಯೆ
ಮನೆಯೊಳಗಿನ ಮನೆ ನಾನು
ಹಲವು ಸಲ ಶೌಚಾಲಯ

ಒಂದಕ್ಕೆ ಒಂದು ರೂಪಾಯಿ
ಎರಡಕ್ಕೆ ಎರಡು ರೂಪಾಯಿ
ರೊಕ್ಕ ಜಾಸ್ತಿ ಕೊಟ್ಟರೆ ನಿಮ್ಮದೇ
ಸೊನ್ನೆಯೊಂದರ ಅಪರಿಮಿತ ಆನಂದ
ನೀವು ನೀವೇ ಆಗುವ ಸಂಪೂರ್ಣ ಸ್ವತಂತ್ರ ಅವಕಾಶ

ಹೌದು
ನಾನೊಂದು ಸಾರ್ವಜನಿಕ ಶೌಚಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT