ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮದ ಆಸೆಗೆ ಕೊಲೆಗಾರನೆಂಬ ಪಟ್ಟವೇರಿ...

ಕಟಕಟೆ–13
Last Updated 30 ಏಪ್ರಿಲ್ 2016, 20:24 IST
ಅಕ್ಷರ ಗಾತ್ರ

ಲಕ್ಷ್ಮಿ ಸ್ಫುರದ್ರೂಪಿ ಹೆಣ್ಣುಮಗಳು. ಆಂಧ್ರ ಪ್ರದೇಶದ ಆಗರ್ಭ ಶ್ರೀಮಂತ ಮನೆಗೆ ಸೊಸೆಯಾಗಿ ಸೇರಿದರು. ಹತ್ತು ಹಲವು ಐಶಾರಾಮಿ ಬಂಗಲೆಗಳು, ಕೋಟಿ ಕೋಟಿ ಬೆಲೆ ಬಾಳುವ ಕಾರು, ಎಣಿಸಿದರೂ ಮುಗಿಯದಷ್ಟು ಚಿನ್ನಾಭರಣಗಳು, ಕೈಗೆ ಕಾಲಿಗೆ ಆಳುಗಳು. ಆದರೇನು ಬಂತು? ಅಂಗವಿಕಲ ಪತಿಯಿಂದಾಗಿ ದಾಂಪತ್ಯ ಸುಖದಿಂದ ವಂಚಿತರಾದ ಲಕ್ಷ್ಮಿಗೆ ಯಾವ ಸಿರಿವಂತಿಕೆಯೂ ಬೇಡವಾಗಿತ್ತು. ದೈಹಿಕ ಸುಖಕ್ಕಾಗಿ ಮನಸ್ಸು ಹಾತೊರೆಯುತ್ತಿತ್ತು. ಮನೆಯಿಂದ ದೂರ ಹೋಗಿಬಿಡುವ ಹಂಬಲವಾಗುತ್ತಿತ್ತು. ಈ ಕಾರಣಕ್ಕೆ ಅವರು ಆಯ್ದುಕೊಂಡದ್ದು ಕಾರನ್ನು ರಿಪೇರಿ ಮಾಡಿಸುವ ನೆಪ. ಕಾರುಗಳನ್ನು ಸರ್ವಿಸ್ ಮಾಡಿಸುವ ನೆಪದಲ್ಲಿ ಬೆಂಗಳೂರಿಗೆ ಬರತೊಡಗಿದರು. ಅವರು ಬರುತ್ತಿದ್ದ ಗ್ಯಾರೇಜ್ ಮಾಲೀಕನ ಹೆಸರು ಶಂಕರ.

ಇವರೂ ಸುರಸುಂದರ. ಒಂದು ಮಗುವಿನ ತಂದೆ ಕೂಡ. ಪದೇ ಪದೇ ಗ್ಯಾರೇಜ್‌ಗೆ ಬರುತ್ತಿದ್ದ ಇವರ ದೃಷ್ಟಿ ಲಕ್ಷ್ಮಿಯ ಮೇಲೆ ಬಿತ್ತು. ಇವರ ಸೌಂದರ್ಯಕ್ಕೆ ಲಕ್ಷ್ಮಿಯೂ ಮನಸೋತರು. ಮೊದಲೇ ಸುಖವನ್ನು ಬಯಸುತ್ತಿದ್ದ ದೇಹವದು. ಭೇಟಿ ಹೆಚ್ಚಾಯಿತು. ಪರಸ್ಪರ ಆಕರ್ಷಣೆಯೂ ಅದೇ ವೇಗದಲ್ಲಿ ಹೆಚ್ಚಿತು. ತಮಗೆ ಸಿಗದ ಸುಖವನ್ನು ಶಂಕರ ಅವರಿಂದ ಲಕ್ಷ್ಮಿ ಬಯಸಿದರೆ, ಲಕ್ಷ್ಮಿಯ ರೂಪಕ್ಕೆ ಮನಸೋತುಹೋಗಿದ್ದ ಶಂಕರ ಅವರಿಗೂ ಬೇಕಿದ್ದುದು ಅದೇ. ರೋಗಿ ಬಯಸಿದ್ದೂ ಹಾಲು ಅನ್ನ... ಅನ್ನೋ ಹಾಗೆ. ಬೇರೆ ಬೇರೆ ನೆಪ ಹೇಳಿ ಬೆಂಗಳೂರಿಗೆ ಬರತೊಡಗಿದರು ಲಕ್ಷ್ಮಿ. ತಾವು ದಂಪತಿ ಎಂದು ಹೋಟೆಲ್ ದಾಖಲೆಗಳಲ್ಲಿ ಬರೆಸಿ ತಿಂಗಳಿಗೆ ಒಂದೆರಡು ಬಾರಿಯಾದರೂ ಇಬ್ಬರೂ ಕಾಲ ಕಳೆಯತೊಡಗಿದರು.

ಹಣಕ್ಕೆ ಕೊರತೆಯಿಲ್ಲದ ಲಕ್ಷ್ಮಿ ಹೋಟೆಲ್ ನೌಕರರಿಗೆ ಹೆಚ್ಚು ಹೆಚ್ಚು ಟಿಪ್ಸ್ ಕೊಡುತ್ತಿದ್ದ ಕಾರಣ, ಈ ಜೋಡಿ ಬಂದರೆ ಅವರಿಗೂ ಖುಷಿಯೋ ಖುಷಿ. ಇವರಿಗೆ ಬೇಕಾದದ್ದನ್ನೆಲ್ಲ ಬೇಗಬೇಗನೆ ಪೂರೈಸುತ್ತಿದ್ದರು ಅವರು. ಹೀಗೆ ವರ್ಷಗಳು ಉರುಳಿದವು.  ಗುಟ್ಟು ಮಾತ್ರ ಎಲ್ಲಿಯೂ ರಟ್ಟಾಗಲಿಲ್ಲ. ಆದರೆ 2001ನೇ ಸಾಲಿನಲ್ಲಿ ಇದ್ದಕ್ಕಿದ್ದಂತೆಯೇ ಲಕ್ಷ್ಮಿ ಬೆಂಗಳೂರಿಗೆ ಬರುವುದನ್ನು ನಿಲ್ಲಿಸಿಬಿಟ್ಟರು. ಏಳೆಂಟು ತಿಂಗಳಾದರೂ ಗ್ಯಾರೇಜ್ ಬಳಿ ಅವರು ಬರಲೇ ಇಲ್ಲ. ಅವರನ್ನು ಕಾಣದೆ ಶಂಕರ ಪರಿತಪಿಸತೊಡಗಿದರು. ಏನಾಯಿತೆಂದು ತಿಳಿದುಕೊಳ್ಳಲೂ ಆಗಲಿಲ್ಲ.  ಇದಕ್ಕಿದ್ದಂತೆಯೇ ಒಂದು ದಿನ ಲಕ್ಷ್ಮಿ ಕಾರಿನ ಜೊತೆ ಪುನಃ ಪ್ರತ್ಯಕ್ಷರಾದರು. ಶಂಕರ ಅವರಿಗೆ ಸ್ವರ್ಗಕ್ಕೆ ಮೂರೇ ಗೇಣು ಅನ್ನುವಂತಾಯಿತು.

ಇಷ್ಟು ತಿಂಗಳು ಏಕೆ ಬರಲಿಲ್ಲ ಎಂಬ ಬಗ್ಗೆ ಲಕ್ಷ್ಮಿ ಸಕಾರಣಗಳನ್ನು ನೀಡಲಿಲ್ಲ. ಸರಿಯಾದ ಕಾರಣ ಕೇಳುವ ವ್ಯವಧಾನವೂ ಶಂಕರ್‌ ಅವರಲ್ಲಿ ಇರಲಿಲ್ಲ ಅನ್ನಿ. ಲಕ್ಷ್ಮಿಯನ್ನು ಕರೆದುಕೊಂಡು ಹೋಟೆಲ್‌ಗೆ ಹೋಗುವ ತರಾತುರಿ ಅವರದ್ದಾಗಿತ್ತು. ಲಕ್ಷ್ಮಿ ಒಲ್ಲದ ಮನಸ್ಸಿನಿಂದ ಹೋಟೆಲ್‌ಗೆ ಹೋದರು. ದೇಹ ಸುಖಕ್ಕಾಗಿ ಬಯಸುತ್ತಿದ್ದ ಇಬ್ಬರೂ ಲೈಂಗಿಕ ಕ್ರಿಯೆಗೆ ಮುಂದಾದರು. ಒಂದೇ ಕ್ಷಣ. ಲಕ್ಷ್ಮಿ ವಿಲವಿಲ ಒದ್ದಾಡಿ ಬಿಟ್ಟರು. ಒಂದೇ ಸಮನೆ ರಕ್ತಸ್ರಾವವಾಯಿತು. ಇದನ್ನು ನೋಡಿ ಗಾಬರಿಗೊಂಡ ಶಂಕರ ಕಾರಣ ಕೇಳಿದಾಗ ಲಕ್ಷ್ಮಿ ತಾವು ಕೆಲವೇ ದಿನಗಳ ಹಿಂದೆ ಗರ್ಭಪಾತ ಮಾಡಿಸಿಕೊಂಡಿದ್ದು, ಹೊಲಿಗೆ ಹಾಕಿದ್ದ ಜಾಗದ ಗಾಯ ಇನ್ನೂ ಮಾಗಿಲ್ಲದುದರಿಂದ ಹೀಗೆ ರಕ್ತಸ್ರಾವ ಆಗುತ್ತಿದೆ ಎಂದರು.

ಭಯಗೊಂಡ ಶಂಕರ ಹತ್ತಿರದ ಔಷಧಿಯ ಅಂಗಡಿಯಿಂದ ಮಾತ್ರೆಗಳನ್ನು ತಂದು ಪುಡಿ ಮಾಡಿ ರಕ್ತಸ್ರಾವ ಆಗುತ್ತಿದ್ದ ಜಾಗಕ್ಕೆ ಹಾಕಿದರೂ ಅದು ನಿಲ್ಲಲಿಲ್ಲ. ಲಕ್ಷ್ಮಿ ಅರೆಪ್ರಜ್ಞಾ ಸ್ಥಿತಿಗೆ ಹೋದರು. ಹೋಟೆಲ್ ನೌಕರರ ಸಹಾಯದಿಂದ ಲಕ್ಷ್ಮಿಯನ್ನು ಕಾರಿನಲ್ಲಿ ಕರೆದುಕೊಂಡು ಸಮೀಪದ ಬೌರಿಂಗ್ ಆಸ್ಪತ್ರೆಗೆ ಹೋದ ಶಂಕರ, ಲಕ್ಷ್ಮಿ ತಮ್ಮ ಪತ್ನಿಯೆಂದು ಹೇಳಿ ನಡೆದ ವಿಷಯ ತಿಳಿಸಿದರು. ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ವಿಷಯ ತಿಳಿಸಿದಾಗ ಅವರು ಆಸ್ಪತ್ರೆಗೆ ಧಾವಿಸಿದರು. ಲಕ್ಷ್ಮಿ ಹೇಳಿಕೆ ಪಡೆದುಕೊಳ್ಳಲು ಪೊಲೀಸರು ಅವರಿದ್ದ ವಾರ್ಡ್‌ಗೆ ಬರುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದರು. ಅಲ್ಲಿಂದ ಪ್ರಾರಂಭವಾಯ್ತು ಶಂಕರ ಅವರಿಗೆ ಗ್ರಹಚಾರ. ಘಟನೆಯ ಪ್ರಾಥಮಿಕ ವರದಿಯನ್ನು ಪೊಲೀಸರು ಕಬ್ಬನ್ ಪಾರ್ಕ್‌ ಠಾಣೆಗೆ ಸಲ್ಲಿಸಿದರು.

ಆಗ ಈ ಠಾಣೆಯ ಉಸ್ತುವಾರಿ ವಹಿಸಿದ್ದ ಇನ್ಸ್‌ಪೆಕ್ಟರ್‌ ಇಕ್ಬಾಲ್ ಅವರು ಭೂಗತ ಜಗತ್ತಿನ ರೌಡಿಗಳನ್ನು ರಸ್ತೆಯಲ್ಲಿ ಬಡಿದು ತರುತ್ತಿದ್ದ ಖಡಕ್ ಅಧಿಕಾರಿಯಾಗಿದ್ದರು.  ಸುದ್ದಿ ತಿಳಿದ ತಕ್ಷಣ ಇನ್ನೊಂದು ಬೇಟೆಗೆ ಅವರು ಸನ್ನದ್ಧಗೊಂಡರು. ಆಸ್ಪತ್ರೆಗೆ ಧಾವಿಸಿ ಪರಿಶೀಲಿಸಿದ ಅವರಿಗೆ ಕೊಲೆಯ ವಾಸನೆ ಬರಲಾರಂಭಿಸಿತು. ತಕ್ಷಣವೇ ಅಲ್ಲಿದ್ದ ಶಂಕರ ಅವರನ್ನು ವಶಕ್ಕೆ ತೆಗೆದುಕೊಂಡು ಸುದೀರ್ಘ ವಿಚಾರಣೆ ನಡೆಸಿದರು. ಶಂಕರ ಸತ್ಯವನ್ನೇ ನುಡಿದರು. ಆದರೆ ಅದನ್ನು ನಂಬುವ ಸ್ಥಿತಿಯಲ್ಲಿ ಪೊಲೀಸರು ಇರಲಿಲ್ಲ. ಇದೊಂದು ಕೊಲೆ ಪ್ರಕರಣವೆಂದು ಹೇಳಿ ಕೊಲೆ ಆಪಾದನೆ (ಭಾರತೀಯ ದಂಡ ಸಂಹಿತೆಯ 302ನೇ ಕಲಮಿನ) ಅಡಿ ಕೇಸನ್ನು ದಾಖಲಿಸಿಯೇ ಬಿಟ್ಟರು. ಆದರೆ ಇದು ಕೊಲೆಯೇ ಎನ್ನಲು ಸಾಕ್ಷ್ಯಾಧಾರ ಪೊಲೀಸರಿಗೆ ಬೇಕಿತ್ತಲ್ಲ.

ಅದಕ್ಕಾಗಿ ಘಟನೆ ನಡೆದ ಸ್ಥಳದಲ್ಲಿ ಒಂದು ಕಬ್ಬಿಣದ ರಾಡ್ ಇಟ್ಟರು. ಇದು ಘಟನೆ ನಡೆದ ಸ್ಥಳದಲ್ಲಿ ಸಿಕ್ಕಿತೆಂದು ಮಹಜರ್ ತಯಾರಿಸಿದರು. ಶಂಕರ ಅವರನ್ನು ಬಂಧಿಸಿದರು. ತಮಗೆ ಬೇಕಾದ ರೀತಿಯಲ್ಲಿ ಪೊಲೀಸರು ಹೇಳಿಕೆಗಳನ್ನು ಬರೆದುಕೊಂಡರು. ಅಲ್ಲಿಂದ ಪ್ರಾರಂಭವಾಯ್ತು ಪೊಲೀಸರ ಸುಳ್ಳಿನ ಕಂತೆ. ‘ಆರೋಪಿ ಶಂಕರ ತಾನು ಲಕ್ಷ್ಮಿಯನ್ನು ಬಲವಂತವಾಗಿ ಹೋಟೆಲ್‌ಗೆ ಕರೆದುಕೊಂಡು ಹೋಗಿ ಹಟ­ ಸಂಭೋಗ ಮಾಡಿರುವುದಾಗಿ, ತಾನು ಮಾಡಿದ ಕೃತ್ಯ ಬಯಲಿಗೆ ಬರಬಾರದು ಎಂದು ಅಲ್ಲಿದ್ದ ರಾಡ್‌ನಿಂದ ಲಕ್ಷ್ಮಿಯ ಗುಪ್ತಾಂಗಕ್ಕೆ ಚುಚ್ಚಿ ಸಾಯಿಸಿರುವುದಾಗಿ ಒಪ್ಪಿಕೊಂಡಿದ್ದಾನೆ’ ಎಂದು ಪೊಲೀಸರು ಹೇಳಿಕೆ ಸಿದ್ಧಪಡಿಸಿದರು. ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು.

ಶಂಕರನೇ ಕೊಲೆಗಾರ ಎನ್ನುವಂತೆ ಎಲ್ಲ ಪತ್ರಿಕೆಗಳಲ್ಲೂ ಸುದ್ದಿಗಳು ಪ್ರಕಟಗೊಂಡವು.  ಆದ್ದರಿಂದ ಎಲ್ಲರ ದೃಷ್ಟಿ ಕೋರ್ಟ್ ಕೊಡುವ ತೀರ್ಪಿನತ್ತ ನೆಟ್ಟಿತ್ತು. ಶಂಕರ ಅವರ ಪತ್ನಿ, ತಮ್ಮ ಗಂಡ ಕೊಲೆ ಮಾಡಲು ಸಾಧ್ಯವೇ ಇಲ್ಲವೆಂದು ಗೋಗರೆದರೂ ಯಾರೂ ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಆಗ ಅವರು ನನ್ನ ಕಚೇರಿಗೆ ಬಂದು ಶಂಕರ ಅವರ ಪರವಾಗಿ ವಕಾಲತ್ತು ವಹಿಸುವಂತೆ ಕೋರಿದರು. ನಾನು ಒಪ್ಪಿಕೊಂಡೆ. ಈ ಮಧ್ಯೆ, ಪೊಲೀಸ್ ಅಧಿಕಾರಿಗಳು ಲಕ್ಷ್ಮಿ ಅವರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು. ಆಗ ವಿಧಿವಿಜ್ಞಾನ ಪ್ರಯೋಗಾಲಯದ ವೈದ್ಯರಾಗಿದ್ದ ಡಾ. ಚಂದ್ರೇಗೌಡರು ತುಂಬಾ ಒಳ್ಳೆಯವರೆ. ಆದರೆ ತಮ್ಮನ್ನು ಕೆಣಕಿದರೆ ಅಥವಾ ಅವರ ವೃತ್ತಿ ಕೌಶಲವನ್ನು ಪ್ರಶ್ನಿಸಿದರೆ ತಮಗಿಷ್ಟ ಬಂದಂತೆ ವರದಿ ಕೊಟ್ಟುಬಿಡುತ್ತಿದ್ದರು.

ಅವರು ಸಾಕ್ಷಿದಾರರಾಗಿ ಕೋರ್ಟ್‌ಗೆ ಬಂದಾಗ ಅವರನ್ನು ಪ್ರಶ್ನಿಸುವುದೂ ಸುಲಭವಾಗಿರಲಿಲ್ಲ. ಏಕೆಂದರೆ ಸಹಾಯ ಮಾಡಬೇಕೆಂದು ಬಯಸಿದರೆ, ಕೇಸುಗಳನ್ನು ಉಲ್ಟಾ ಮಾಡುವ ಪ್ರವೃತ್ತಿಯನ್ನೂ ಬೆಳೆಸಿಕೊಂಡವರವರು! ಇದೇ ಕಾರಣಕ್ಕೆ ವಕೀಲರೊಬ್ಬರು ಅವರನ್ನು ಚೆನ್ನಾಗಿ ಉಪಯೋಗಿಸಿಕೊಂಡು ಹತ್ತಾರು ಕೊಲೆ ಪ್ರಕರಣಗಳಲ್ಲಿ ಆರೋಪಿಗಳನ್ನು ಬಿಡುಗಡೆಗೊಳಿಸಿ ಖ್ಯಾತನಾಮರಾಗಿದ್ದರು. ತನಿಖೆ ಪೂರ್ಣಗೊಂಡು ಪೊಲೀಸರು ದೋಷಾರೋಪಣೆ ಪಟ್ಟಿಯನ್ನು ಸಲ್ಲಿಸಲು ಮರಣೋತ್ತರ ಪರೀಕ್ಷೆಯ ವರದಿಗೆ ಕಾಯುತ್ತಿದ್ದರು. ಪೊಲೀಸರೇನೋ ಇದನ್ನು ಕೊಲೆ ಎಂದುಬಿಟ್ಟರು. ಆದರೆ ವಿಧಿ ವಿಜ್ಞಾನ ಪ್ರಯೋಗಾಲಯದ ವೈದ್ಯರು ಸಾವಿನ ಕಾರಣವನ್ನು ತಿಳಿಸಲೇಬೇಕಲ್ಲ!

ಆದರೆ ಈ ಘಟನೆಯಲ್ಲಿ ಅದು ಕೊಲೆ ಎಂದು ಹೇಳುವಂಥ ಕುರುಹು ಲಕ್ಷ್ಮಿಯ ಮೈಮೇಲೆ ಯಾವುದೂ ಇರಲಿಲ್ಲ. ಆದರೆ ಪೊಲೀಸರು ಬಿಟ್ಟಿಲ್ಲ. ‘ಲಕ್ಷ್ಮಿಯ ಗುಪ್ತಾಂಗಕ್ಕೆ ಕಬ್ಬಿಣದ ರಾಡಿನಿಂದ ಚುಚ್ಚಿರುವ ಪರಿಣಾಮ ರಕ್ತಸ್ರಾವವಾಗಿ ಆಕೆ ಸತ್ತಿರಬಹುದು’ ಎಂಬ ವರದಿ ನೀಡುವಂತೆ ಡಾ. ಚಂದ್ರೇಗೌಡರನ್ನು ಒತ್ತಾಯಿಸಿ ಯಶಸ್ವಿಯೂ ಆದರು. ಖುದ್ದಾಗಿ ವರದಿಯನ್ನು ಬರೆಸಿ ಅದರ ಬರುವಿಕೆಗಾಗಿ ಕಾಯುತ್ತಿದ್ದರು. ಅದೃಷ್ಟ ಕೆಲವೊಮ್ಮೆ ಕೈಹಿಡಿಯುತ್ತದೆ. ಈ ಸಲ ನಿರಪರಾಧಿ ಶಂಕರ ಅವರ ಕೈಹಿಡಿದಿತ್ತು ಅದೃಷ್ಟ. ವರದಿ ಸಿದ್ಧಪಡಿಸುವ ಮೊದಲೇ ಡಾ. ಚಂದ್ರೇಗೌಡರಿಗೆ ಬೇರೆಡೆ ವರ್ಗವಾಯಿತು. ಆ ಜಾಗಕ್ಕೆ ಇನ್ನೊಬ್ಬ ವೈದ್ಯ ಡಾ. ಸೋಮಯ್ಯ ಅಧಿಕಾರ ವಹಿಸಿಕೊಂಡರು. ಇವರಿಬ್ಬರಲ್ಲಿ ವೃತ್ತಿ ವೈಷಮ್ಯವೂ ಇದ್ದುದು ಶಂಕರ ಅವರಿಗೆ ವರದಾನವಾಯ್ತು.

ಈ ಪ್ರಕರಣದಲ್ಲಿ ಡಾ. ಚಂದ್ರೇಗೌಡರು ಸಿದ್ಧಪಡಿಸಿದ ವರದಿಯನ್ನು ನೋಡಿದ ಡಾ. ಸೋಮಯ್ಯನವರು, ‘ಈ ವರದಿ ಸರಿಯಿಲ್ಲ. ಈ ಪ್ರಕರಣದಲ್ಲಿ ನಡೆದಿರುವುದು ಕೊಲೆಯಲ್ಲ. ಇದು ಗರ್ಭಪಾತ ಮಾಡಿಸಿಕೊಂಡ ಹೆಣ್ಣಿನ ಮೇಲೆ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷ್ಯದಿಂದ ಮಾಡಿದ ಸಂಭೋಗದ ಫಲ. ಇದರಿಂದಾಗಿ ಗುಪ್ತಾಂಗದ ಮೇಲೆ ಹೆಚ್ಚು ಒತ್ತಡ ಬಿದ್ದು ತೀವ್ರ ರಕ್ತಸ್ರಾವವಾಗಿ ಲಕ್ಷ್ಮಿ ಸತ್ತಿದ್ದಾರೆ ಅಷ್ಟೆ’ ಎಂದು ವರದಿ ಸಿದ್ಧಪಡಿಸಿದರು. ಪೊಲೀಸರಿಂದ ಎಷ್ಟೇ ಒತ್ತಡ ಬಂದರೂ ‘ಕೊಲೆ’ ಎಂದು ವರದಿ ನೀಡದೇ ನಿರ್ಭೀತಿಯಿಂದ ಸತ್ಯವಾದ ವರದಿ ಸಿದ್ಧಪಡಿಸಿದರು. ಪೊಲೀಸರಿಗೆ ಬೇರೆ ವಿಧಿಯಿರಲಿಲ್ಲ. ಇದೇ ವರದಿಯನ್ನು ಇಟ್ಟುಕೊಂಡು ಐಪಿಸಿಯ 304 ಎ (ನಿರ್ಲಕ್ಷ್ಯದಿಂದ ಆಗಿರುವ ಅಜಾಗರೂಕತೆ) ಕಲಮಿನ ಅಡಿ ಅಂತಿಮ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು.

ನ್ಯಾಯಾಧೀಶ ತಮ್ಮಯ್ಯನವರ ಎದುರು ನಾನು ಹೇಳಿದಂತೆ ಸಂಪೂರ್ಣ ಸತ್ಯ ನುಡಿದರು ಶಂಕರ. ಅವರ ಹೇಳಿಕೆ ಹಾಗೂ ನನ್ನ ವಾದ ಆಲಿಸಿದ ನ್ಯಾಯಾಧೀಶರು ಶಂಕರ ಕೊಲೆ ಮಾಡಿಲ್ಲ ಎಂಬ ತೀರ್ಮಾನಕ್ಕೆ ಬಂದರು. ಆದರೆ ಅವರು ಮಾಡಿದ ತಪ್ಪಿಗೆ ಆರು ತಿಂಗಳ ಶಿಕ್ಷೆ ವಿಧಿಸಿದರು. ವಿಚಾರಣೆ ವೇಳೆ ಆರು ತಿಂಗಳು ಜೈಲಿನಲ್ಲಿಯೇ ಶಂಕರ ಕಳೆದುದರಿಂದ ಅವರನ್ನು ಬಿಡುಗಡೆಗೊಳಿಸುವಂತೆ ಆದೇಶಿಸಿದರು. ಕುತ್ತಿಗೆಯ ಮಟ್ಟಕ್ಕೆ ಬಂದಿದ್ದ ಕೊಲೆ ಆರೋಪದಿಂದ ಕೊನೆಗೂ ಶಂಕರ ಬಿಡುಗಡೆಗೊಂಡರು. ಪ್ರಕರಣ ಸುಖಾಂತ್ಯವಾಯಿತು. ಮುಂದೆ ಕೇಳಿ... ಲಕ್ಷ್ಮಿಯನ್ನು ಆಸ್ಪತ್ರೆಗೆ ಕರೆತಂದಿದ್ದಾಗ ಅವರ ಬಳಿಯಿದ್ದ ಒಡವೆಗಳನ್ನೆಲ್ಲ ಶಂಕರ ಇಟ್ಟುಕೊಂಡಿದ್ದರು. ಅವನ್ನು ವಿಚಾರಣೆ ವೇಳೆ ಪೊಲೀಸರು ಅಮಾನತುಪಡಿಸಿಕೊಂಡಿದ್ದರು.

ಲಕ್ಷ್ಮಿಯ ಸಾವಿನ ನಂತರ ಅವರ ಪತಿ ಮನೆಯವರು ಶವವನ್ನು ತೆಗೆದುಕೊಂಡು ಹೋದವರು ಇತ್ತ ಸುಳಿಯಲಿಲ್ಲ. ಪೊಲೀಸರು ಯಾರಿಂದ ಒಡವೆಗಳನ್ನು ಅಮಾನತು ಪಡಿಸಿಕೊಂಡಿದ್ದರೋ ಅವರಿಗೇ ಅದನ್ನು ವಾಪಸ್ ನೀಡಬೇಕು ಎನ್ನುವುದು ಕಾನೂನು. ಕೋರ್ಟ್ ಆದೇಶದಂತೆ ಒಡವೆಗಳನ್ನು ಪೊಲೀಸರು ಶಂಕರ ಅವರಿಗೇ ನೀಡಿದರು. ವಶಪಡಿಸಿಕೊಂಡ ಒಡವೆ ಆಗ ಹತ್ತು ಲಕ್ಷಕ್ಕೂ ಅಧಿಕ ಮೊತ್ತದ್ದಾಗಿತ್ತು! ಆದರೆ  ತಮ್ಮ ಮರ್ಕಟ ಮನಸ್ಸಿನಿಂದ ಸ್ನೇಹಿತೆಯನ್ನು ಕಳೆದುಕೊಂಡ ಪಾಪಪ್ರಜ್ಞೆಯಿಂದ ನರಳುತ್ತಿದ್ದ ಶಂಕರ ಆ ಆಭರಣ ತಮಗೆ ಬೇಡ ಎಂದರು. ನ್ಯಾಯಾಲಯದಿಂದ ಆಭರಣ ಪಡೆದು ನೇರವಾಗಿ ನನ್ನ ಕಚೇರಿಗೆ ಬಂದು ‘ನನ್ನನ್ನು ಕಾಪಾಡಿದ್ದೀರಿ. ಇದನ್ನು ನೀವೇ ತೆಗೆದುಕೊಳ್ಳಿ’ ಎಂದು ಒತ್ತಾಯಿಸಿದರು. ಅದಕ್ಕೆ ನಾನು ‘ನಿಮ್ಮ ಪರ ವಕಾಲತ್ತು ವಹಿಸಿ ನಿಮ್ಮನ್ನು ಕಾಪಾಡಬೇಕಾದದ್ದು ನನ್ನ ಕರ್ತವ್ಯವಾಗಿತ್ತು.

ಅದನ್ನು ಮಾಡಿದ್ದೇನೆ.  ಇವೆಲ್ಲಾ ಬೇಡ’ ಅಂದೆ. ಪರಸ್ತ್ರೀಗೆ ಸೇರಿದ ಒಡವೆಗಳನ್ನು ಇಟ್ಟುಕೊಳ್ಳಲು ಶಂಕರನ ಪತ್ನಿಯೂ ಒಪ್ಪಲಿಲ್ಲ. ಹಾಗಿದ್ದರೆ ಒಡವೆ ಗತಿ ಏನಾಯಿತು...? ಕೆಲವೇ ದಿನಗಳಲ್ಲಿ ಪತ್ರಿಕೆಗಳ ಮುಖಪುಟಗಳಲ್ಲಿ ದೊಡ್ಡ ತಲೆಬರಹದ ವರದಿ ಕಾಣಿಸಿಕೊಂಡಿತು. ಅದೇನೆಂದರೆ ‘ಆಗರ್ಭ ಶ್ರೀಮಂತನೊಬ್ಬ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಒಡವೆಗಳನ್ನು ತಿರುಪತಿ ಹುಂಡಿಗೆ ಕಾಣಿಕೆಯಾಗಿ ಸಲ್ಲಿಸಿದ್ದಾನೆ’ ಎಂದು. ಯಾರಪ್ಪಾ ಈ ಆಗರ್ಭ ಶ್ರೀಮಂತ ಎಂದು ನಾನೂ ಪ್ರಶ್ನಿಸಿಕೊಂಡಿದ್ದೆ. ಮರುದಿನ ಶಂಕರ ಬೋಳಿಸಿಕೊಂಡ ತಲೆಯೊಂದಿಗೆ ತಿರುಪತಿ ಪ್ರಸಾದ ತಂದಾಗಲೇ ಗೊತ್ತಾಯಿತು ಈ ‘ಆಗರ್ಭ ಶ್ರೀಮಂತ’ ಯಾರೆಂದು! ಇದಕ್ಕಾಗಿಯೇ, ವಕೀಲನಾಗಿ, ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ವೃತ್ತಿ ಜೀವನದಲ್ಲಿ ಕಂಡಂತಹ ಅನುಭವಗಳ ನೆನಪಿನ ಬುತ್ತಿಯನ್ನು ಬಿಚ್ಚುತ್ತಾ ಹೋದಾಗ, ಈ ಪ್ರಕರಣ ಅಪರೂಪ ಎಂದು ನನಗನಿಸಿದ್ದುಂಟು.

(ಲಕ್ಷ್ಮಿ ಹಾಗೂ ಶಂಕರ ಕಾಲ್ಪನಿಕ ಹೆಸರುಗಳು) 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT