ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲೇಜಿನ ಮೊದಲ ದಿನ

Last Updated 1 ಜೂನ್ 2016, 19:47 IST
ಅಕ್ಷರ ಗಾತ್ರ

ಎದೆಯಲ್ಲಿ ನಿರಂತರ ಭೋರ್ಗರೆವ ಕಡಲು... ಗೊತ್ತಿಲ್ಲದ ಆತಂಕದ ನಡುವೆಯೇ ತುಸು ಸಂತಸವನ್ನೂ ಹೊತ್ತಿರುವ ಒಡಲು... ಕಾದಿವೆ ಎಷ್ಟೆಲ್ಲ ಕಣ್ಣುಗಳು ಬರಿನೋಟದಲ್ಲಿಯೇ ಬೆನ್ನ ಸುಡಲು...  ಮೊದಲ ದಿನ ಕಾಲೇಜಿನ ಮೆಟ್ಟಿಲು ಹತ್ತುವ ಮುನ್ನಿನ ಮನಸ್ಥಿತಿ ಇದು. ಸಂಕೋಚ, ಸಂಭ್ರಮ, ಆತಂಕ, ನಿರೀಕ್ಷೆ ಎಲ್ಲ ಬೆರೆತ ಮನಸ್ಸಿಗೆ ಹೊಸದಾಗಿ ಕನಸಿನ ರೆಕ್ಕೆಯೂ ಮೂಡಿ ‘ಹೇಳಲಾರೆನು ತಾಳಲಾರೆನು...’ ಎಂದು ಹೃದಯ ಹಾಡಲಾರಂಭಿಸುತ್ತದೆ.

ಕಾಲೇಜಿನ ಮೊದಲ ದಿನದ ಅನುಭವ ಪ್ರತಿಯೊಬ್ಬರಿಗೂ ಭಿನ್ನ, ಅನನ್ಯ. ಅವುಗಳನ್ನು ಕೆದಕುವುದೆಂದರೆ ನೆನಪಿನ ಹೂದೋಟದಲ್ಲಿ ಬಣ್ಣಗಣನೆಗೆ ತೊಡಗಿದಂತೆ... ಎಷ್ಟೊಂದು ಬಗೆಗಳು, ಎಷ್ಟೆಲ್ಲ ವಿಧಗಳು... ಪ್ರತಿಯೊಂದರ ರೂಪ ರಸ ಗಂಧಗಳು ಭಿನ್ನ ಭಿನ್ನ... ಅಂಥ ತಾಜಾ ಅನುಭವಗಳನ್ನು ಹೊತ್ತು ಬಂದ ಅಸಂಖ್ಯ ಪತ್ರಗಳಲ್ಲಿ ಆಯ್ದ ಕೆಲವು ಮಾದರಿಗಳು ಇಲ್ಲಿವೆ. ಓದಿ ನೋಡಿ... ಅದು ನಿಮ್ಮ ಅನುಭವವೂ ಆಗಿಬರಹುದು.

***
ಮೊದಲ ದಿನ ಮಿಡಿ ವಿತ್ ಜಡಿ

ನಮ್ದು ಕಾಲೇಜುಗಳಿಲ್ಲದ ಕುಗ್ರಾಮ. ನಾನು 10ನೇ ತರಗತಿನಾ ಎಮ್ಮಿ ಕಾಯ್ಕೊಂತ 70% ಮಾಡಿದ್ದೆ. 50 ಮಾಡಿದ್ನೆಪಾ ಅಂದ್ರ ಖಡಾಖಂಡಿತವಾಗಿ ಸಾಲಿ ಬಿಡ್ಸ ಪ್ಲ್ಯಾನಿತ್ತೋ ಏನೋ. ಅಪ್ಪಾ ಕಾಲೇಜಿನ ಸುದ್ದಿ ತಗದ್ರ ಗೊಣಗಾಕ ಸುರುಮಾಡಿದ. ‘ಪರವೂರಿಗೆ, ಅದೂ ನಮ್ಮ ಪೋರಿನೊಂದ ಕಾಲೇಜಿಗೆ ಹೆಂಗ ಕಳ್ಸದು?’ ಅಂತ ತ್ರಾಸ್ ಮಾಡ್ಕೊಳ್ಳಾಕತ್ರು.

ನಾನೂ ಪಟ್ಟು ಬಿಡ್ದ... ನಾ ಕಾಲೇಜಿಗೆ ಹೋಗಾಕೆ ಅಂದು ಮೋತಿ ಸಿಂಡರಿಸಿಕೊಂಡು ಕುಂತೆ. ಅಪ್ಪ ವಿಧಿಯಿಲ್ಲದೇ ಪಕ್ಕದ ಶಿಗ್ಗಾವಿಯ ಪುಟ್ಟ ಕಾಲೇಜು, ಫೀ ಕಡಿಮೆ ಇದ್ದು, ಬಸ್‌ ಸ್ಟ್ಯಾಂಡಿಗೆ ಲಗತಿರೋದ್ನ ನೋಡಿ ಹೆಸ್ರಚ್ಚಿ ಬಂದ್ರು. ಯಾವ ಕಾಲೇಜಾದ್ರೇನು ಒಟ್ನಲ್ಲಿ ಕಾಲೇಜ್ಪಾ.... ಅನ್ಕಂಡು ನಾನು ಬೋ ಖುಸಿ ಪಟ್ಟೆ. ಕಾಲೇಜ್ ಸುರುವಾಗಾಕ ಇನ್ನೆರಡು ದಿನಾ ಬಾಕಿ ಇತ್ತು. ದೌಡ್ ದೌಡು ಹೊತ್ತ್ ಹೋಗ್ವಲ್ದಾಗಿತ್ತು. ನಾನರ... ದೌಡು ಕಾಲೇಜಿಗೆ ಸಿಂಗಾರ ಮಾಡ್ಕಂಡು ಹೊಗ್ಬೇಕಾಗಿತ್ತು.

ಇನ್ನೇನು ಆ ದಿನ ಬಂದೇ ಬಿಡ್ತು. ಬೆಳಗಿನ ನಾಲ್ಕು ಗಂಟೆಗೆ ಎಚ್ಚರವಾಗಿ ನಿದ್ದೀನ ಹತ್ಲಿಲ್ಲ. ಇವತ್ತ ಮದಲ್ನೇ ದಿನ. ಯಾವ ಅಂಗಿ ಹಕ್ಕೊಂಡು ಹೋಗ್ಲಿ? ಹೇರ್ ಸ್ಟೈಲ್ ಹೆಂಗ್ಮಾಡ್ಲಿ? ಬ್ಯಾಗ್ ಒಸಿ ಉದ್ದ ಬಿಟ್ಟ ಹಾಕಿದ್ರಾತು, ವಾರಿಗಿಯವ್ರನ್ನೆಲ್ಲಾ ಹೆಂಗ ಮಾತಾಡಸ್ಲಿ? ಹಿಂಗ ಒಂದ.. ಎರಡ... ಇದ... ಕನವರಿಕ್ಯಾಗ 6 ಗಂಟಿ ಹೊಡೀತು.

ಅವ್ವ ಏಳ ತಂಗಿ ಸಾಲಿಗೆ ಹೋಗ್ಬಕು... ಬಸ್ಸಿಡಿಬಕು.... ಏಳ ದೌಡು  ಅಂದಾಗ ಸೋಗು ಮಾಡಿ ಆಕಳಿಸಿ ನಗುತ್ತಲೇ ಮೇಲೆದ್ದು ನಿತ್ಯ ಕರ್ಮ ಮುಗಿಸಿ ಎಣ್ಣೆ ಬಳಿದ ತಲೆಗೆರಡು ಶ್ಯಾಂಪು ಹಾಕಿ ತೊಳೆದೆ. ಅಷ್ಟರಲ್ಲೇ 8 ಗಂಟೆಯಾಗಿತ್ತು. ಕನಡಿ ಹಿಡ್ದು... ಎರಡು ಜಡೆ ಹಾಕಿ ನನ್ನಿಷ್ಟದ ಮಿಡಿ ತೊಟ್ಟು ಹಾಡು ಗುನುಗುತ್ತಾ ಕಣ್ಣಿಗೆ ಕಪ್ಪು ಬಳೀತಿದ್ದೆ. ಅವ್ವ ತುಸು ನಕ್ಕು ಮತ್ತೆ ಸಿಡಿಮಿಡಿಗೊಂಡು ‘ಯವ್ವ ಎಷ್ಟರ ಕನಡೀ ನೋಡ್ತಿ?

ಹಿರೇರು ಸುಮ್ನ ಹೇಳಿಲ್ಲ ಹುಚ್ಚು ಕೋಡಿ ಮನಸು... ಅದು ಹದಿನಾರರ ವಯಸು... ಸಾಕು ಮಾರಿ ನೋಡ್ಕೊಂಡಿದ್ದು ಬಸ್ಸು ತಪ್ಪಿಸ್ಕೊಂಡಿ ಒಸಿ ತಿಂದು ಹೊಂಡಿನ್ನ ಹೊತ್ತಾಕ್ಕೇತಿ’ ಅಂದು. ಬಾಗಿಲಿಗೆ ನನ್ನ ಕೂಡ ಹೆಜ್ಜಿ ಹಾಕ್ತಾ... ‘ನೋಡೆವ್ವಾ ಭಾಳ ಎಚ್ಚರಿಕಿಯಿಂದ ಹೋಗಿ ಬಾ. ತುಂಡೈಕ್ಳು ಉಡಾಳಿರ್ತಾವ. ಮಂದ ನಿನ್ನ ಕಡಿಗೆ ಬಳ್ಳ ಮಾಡಿ ತೋರಿಸಿದಬಾರ್ದು ನೋಡ್ವ...’ ಅಂದು ನಾ ಕಾಣಾಮಟ ನಿಂತು ಟಾಟಾ ಮಾಡಿದ್ಲು.

ನಂಗೋ ಎದಿ- ಗುದಿ. ಹಿಡ್ತ ತಪ್ಪಿ ಎದಿ ಬಡ್ಕಳ್ಳಾಕತ್ತಿತ್ತು. ಹೈಟ್ ಕಮ್ ಫೈಟ್ ಜಾದಾ ಇದ್ದ ನಾನು ಬಸ್ಸು ಬರೋಹೊತ್ಗೆ ಜಿಗಿದು ಹತ್ತಿದೆ. ಎಲ್ಲಾ ಹುಡ್ಗುರು ನಾ ತೊಟ್ಟ ಮಿಡೀನಾ ಮತ್ತೆ ನನ್ನ ನೋಡಾಕತ್ತಾರ. ನಂಗೋ ನಾಚಿಕೆ ಸಾವು. ಅವ್ವ ಹುಷಾರಿ! ಅಂದ ಮಾತು ಒಮ್ಮೆ ಕಿವ್ಯಾಗ ಟಣ್! ಅಂತ ಹಾದು ಹೋತು. ಬೆಚ್ಚಿ ನೆಲಕ್ಕ ಚೆಂಡ ಹಾಕಿ ಮನಸಿಲ್ಲದಿದ್ರೂ ಪುಸ್ತಕ ತೆರ್ದು ಸುಮ್ನ... ನೋಡ್ಕೊಂತ ಕುಂತೆ.

ಬಸ್ಸು ಶಿಗ್ಗಾವ ತಲುಪಿ ಇಳಿಯುವಾಗ ಯಾರೋ ನೋಡಿ ನಕ್ರು. ಆ ಕಡೆಗೊಂದು ಸಣ್ಣ ಸ್ಮೈಲ್ ಕೊಟ್ಟು  ಸೀದಾ ಕಾಲೇಜಿನೆಡೆಗೆ ಹೆಜ್ಜೆ ಹಾಕಿದೆ. ತರಗತಿ ಎಲ್ಲಿ ಅಂತ ಗೊತ್ತಿಲ್ಲ. ಯಾರನಾರ... ಕೇಳ್ಬೇಕಂದ್ರ ಮತ್ತೆಲ್ಲೆ ಟಿವ್ಯಾನಂಗ ರ್‍ಯಾಗಿಂಗ್ ಮಾಡಿದ್ರ ಅನ್ನೋ ಭಯ. ಅಷ್ಟರಾಗ ಸಿಕ್ಕಾಕೇಕೊಂಡ್ಯಾ. ‘ಏ ಮಗಾ ಮಿಡಿ ಸಕತ್ತಾಗೈತ್ಲಾ... ಅದ್ಕೆ 2 ಜಡೆ ಹೇಳಿ ಮಾಡ್ಸಿದಂಗೈತ್ಲಾ... ಹಿಂಗಿರಬೇಕ್ಲಾ ಹುಡ್ಗಿ ಅಂದ್ರೆ’ ಅಂದಾಗಂತು ಪುಳಕ- ನಡುಕ ಒಟ್ಟೊಟ್ಟಿಗೆ ಬಂದು ಬಿಕ್ಕಳಿಕೆ ಸುರುವಾಯ್ತು.

ಅಲ್ಲೊಬ್ಬ ನೀರ್‌ಕೊಡ್ಲಾ ಮೇಡಂಗೆ ಬಿಕ್ಕಲಸ್ತವ್ರೆ ಪಾಪಾ! ಅಂದ. ನಾನು ಸರಸರ ನಡ್ದು ರೂಮ್ ನಂಬರ್ ನೋಡಿ ಇಣುಕೋದ್ರಾಗ ಮೇಷ್ಟ್ರು ‘ದಿ ಗರ್ಲ್ ಅಗೇನೆಸ್ಟ ದಿ ಜಂಗಲ್’ ಪಾಠ ಮಾಡ್ತಿದ್ರು. ಉಗುಳು ನುಂಗಿ ಅವಡುಗಚ್ಚಿ ಅಂಜಕೋತ  ‘ಮೇ ಐ ಕಮ್ ಇನ ಸರ.....’ ಅಂದೆ. ಎಸ್ ಎಷ್ಟೊತ್ತಮ್ಮ ಬರೋದು ಇದೇನು ದನದ ದೊಡ್ಡೀನೇ ಅಂದು ಒಂದಷ್ಟು ಇಂಗ್ಲೀಷಿನ್ಯಾಗು ಬೈದು ಕರದ್ರು.

ನಾಳೀ ಇಂದ ರಿಪೀಟ್ ಆಗಂಗಿಲ್ಲ ಅಂದ್ರು. ಗೋಣು ಹಾಕ್ತಾ ಒಳ್ಗ ಕಾಲಿಡೋದ್ರಾಗ ವ್ಹಾವ್! ಅಂದ ಶಬುದ ಕೇಳಿ ಮೈ ಜುಮ್ಮೆಂತು. ಸೀದಾ ಲಾಸ್ಟ್ ಬೇಂಚ್‌ಗೆ ಹೋಗಿ ಕುಂತ್ರೆ ಐಕ್ಳೆಲ್ಲ ನನ್ನ ತಿರ್ಗಿ ನೋಡ್ತವೆ. ನಂಗೊತ್ತಿದ್ದ ಒಂದು ಮಾರಿನೂ ಅಲ್ಲಿಲ್ಲ. ಎಲ್ಲವೂ ಹೊಸದು. ಹತ್ನೆತ್ತದಾಗ ಇಂಗ್ಲೀಷಿಗೆ ತಿಣಕ್ಯಾಡಿ 35 ತೊಗೊಂಡು ಪಾಸಾಗಿ ಬಂದ ನನಗ ಆ ಮಾಸ್ತರ ದೌಡ್ ದೌಡ ಇಂಗ್ಲೀಷು ಚೂರು ತಿಳಿವಲ್ದಾಗಿತ್ತು.

ತಲಿ ಕೆರಕೊಂಡ್ರು ಒಳಹೋಗದ ಎಕನಾಮಿಕ್ಸು... ‘ಮೂರೇ ತಾಸು. ಕಾಲೇಜ್ ಮುಗೀತು. ಕರದು ಕಟ್ಟೋರಿಲ್ಲ; ತುರಿಸಿ ಮೇವ ಹಾಕೋರಿಲ್ಲ’ ಒಟ್ನ್ಯಾಗ 10 ವರ್ಸ ಜೈಲ್ನ್ಯಾಗಿದ್ದು ಈಗ ಕಣ್ಣಿ ಬಿಚ್ಚಿ ರಿಲೀಸ್ ಮಾಡಿದ ಅನುಭವ ನನ್ನ ಕಾಲೇಜಿನ ಮೊದಲ ­ದಿನ ನಂಗಾಗಿತ್ತು ನೋಡ್ರಿ.....
–ಸಾವಿತ್ರಿ ಹಿರೇಮಠ, ಧಾರವಾಡ

***
ಸಿನಿಮಾ ಥೇಟರೋ, ಕ್ಲಾಸ್‌ ರೂಮೋ...
ಪ್ರತಿಯೊಬ್ಬರ ಜೀವನದಲ್ಲಿ ಎಲ್ಲ ಮೊದಲಗಳು ವಿಶೇಷ ಅನುಭವ ನೀಡಿರಲಿಕ್ಕೆ ಬೇಕು. ಹಾಗೆ ಮೊದಲ ಸಲ ಕಾಲೇಜಿಗೆ ಹೋದಾಗ ಹೃದಯಕ್ಕೆ ಆನಂದ, ಮನಸ್ಸಿಗೆ ತವಕ, ಭಯ ಎಲ್ಲವುಗಳು ಒಟ್ಟಿಗೆ ಲಗ್ಗೆ ಇಡುವಂಥ ಸನ್ನಿವೇಶ. ನಾನು ಕೂಡಲ ಸಂಗಮ ಗ್ರಾಮದಿಂದ ಬಾಗಲಕೋಟೆಯ ಬಸವೇಶ್ವರ ಕಾಲೇಜಿಗೆ ಪದವಿ ಪಡೆಯಲು ಹೋದೆ, ಅಯ್ಯೋ ತರಹೇವಾರಿ ರಂಗಿತರಂಗಿ ಬಟ್ಟೆ ಹಾಕಿಕೊಂಡು ಬಂದ ಹುಡುಗ ಹುಡುಗಿಯರ ಮಧ್ಯೆ ಲಿಂಗ ತಾರತಮ್ಯವೇ ಸುಳಿಯದ ಸನ್ನಿವೇಶ, ನಾನೋ ಅದೊಂದು ಮಾಸಿದ ಕೆಂಪಂಗಿ ಉದ್ದನೇ ಪ್ಯಾಂಟು, ಜೊತೆಗೊಂದು ಅಪ್ಪನ ಹಳೆ ಸೈಕಲ್‌ನೊಂದಿಗೆ ಕಾಲೇಜು ಪ್ರವೇಶ.

ಮನಸ್ಸಿನೊಳಗೆ ತವಕ, ನಾಚಿಕೆ, ಭಯ. ನಾನೇಕೆ ಶ್ರೀಮಂತರ ಮಗನಾಗಿ ಹುಟ್ಟಲಿಲ್ಲ ಎಂಬ ಪ್ರಶ್ನೆಮೂಡಿದ್ದೂ ಆಯಿತು. ಹೇಗೋ ಸೈಕಲ್ ಪಾರ್ಕ್ ಮಾಡಿ ಒಳಗೆ ಹೋದರೆ ಅದೋ ಭವ್ಯ ಕಟ್ಟಡ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಿದ ಕೆಂಪುಗಲ್ಲಿನ ಸೌಧ, ಸಾವರಿಕೊಂಡು ಯಾರ ಬಳಿಯೂ ಯಾವ ಮಾಹಿತಿಯನ್ನು ಕೇಳದೇ ನನ್ನ ಕ್ಲಾಸಿನ ರೂಮ್ ಹುಡುಕಿದೆ, ಒಳಗೆ ಹೆಜ್ಜೆ ಇಟ್ಟು ಒಮ್ಮೆ ಎಡಗಡೆ ತಿರುಗಿದರೆ ಕಕ್ಕಾಬಿಕ್ಕಿ! ಇದೇನು ಕಾಲೇಜಾ? ಅಥವಾ ಥಿಯೇಟರಾ? ಏರು ಮೆಟ್ಟಲಿನ ರೂಂ ಅದಾಗಿತ್ತು, ಹೇಗೋ ಮೇಲ್ಗಡೆ ಬಾಲ್ಕನಿಗೆ ತಲುಪಿ ಕುಳಿತೆ. ಅಂದು ಯಾರ ಜೊತೆಗೂ ಮಾತಿಲ್ಲ ಅತ್ತಿತ್ತ ನೋಡದ ಕುದುರೆಯ ಹಾಗೆ ಬಂದು ಹೋದಂಥ ಅನುಭವ.

ಅರೇ ಇದೇನಿದು ಹುಡುಗಿಯರೊಂದಿಗೆ ಹುಡುಗರ ಹರಟೆ ಅಬ್ಬಾ! ನನ್ನಿಂದಾಗದು ಯಾಕೆಂದ್ರೆ ಹುಡುಗಿಯರನ್ನು ನಾನು ಮಾತನಾಡಿಸಿದ್ದೇ ಪದವಿಗೆ ಸೇರಿ ತಿಂಗಳಾದ ಮೇಲೆ. ಹೆಣ್ಣು ಮಕ್ಕಳನ್ನು ಕಂಡು ಮಾರುದ್ದ ಪಕ್ಕಕ್ಕೆ ಜಿಗಿಯುವ ಸ್ವಭಾವ ನನ್ನದು. ಅಲ್ಲಿನ ವಾತಾವರಣ ನೋಡಿ ಇಲ್ಲಿ ನನ್ನಂಥವರಿಗೆ ಜಾಗವಿಲ್ಲ, ಈ ಕಾಲೇಜಿನ ಸಹವಾಸವೇ ಬೇಡ ಎನ್ನಿಸಿದ್ದೂ ಉಂಟು. ಮೊದಲ ದಿನ ನಾನು ಮನಃಶಾಸ್ತ್ರದ ಕ್ಲಾಸಿಗೆ ಹೋದರೆ ಪ್ರೊಫೆಸರ್ ಮುಖದಲ್ಲಿ ನಗುವೇ ಇಲ್ಲ. ಧ್ವನಿಯಲ್ಲಿ ಮೃದುತ್ವ ಕಾಣಲೇ ಇಲ್ಲ, ಓಹ್ ಬಹುಶಃ ನಮ್ಮ ಮನಸ್ಸಿನ ಅಧ್ಯಯನ ಮಾಡ್ತಿರಬೇಕು ಅನ್ಕೊಂಡೆ, ಆದರೆ ಆಮೇಲೆ ಗೊತ್ತಾಯ್ತು ಅವರೇ ಬೇರೇ ಅವರ ಸ್ಟೈಲೇ ಬೇರೇ ಅಂತ.

ಅಂತಹ ದೊಡ್ಡ ಕಾಲೇಜಿನಲ್ಲಿ ನನ್ ಕೊನೆ ಕ್ಲಾಸ್ ಕನ್ನಡ. ಅಯ್ಯೋ ರಾಮ ಇದೇನೊ ಮಾರಾಯಾ ಮದುವೆ ಮನೆ ಏನ್ಲೆ ಇದು ಇಷ್ಟು ಜನ ಸೇರ‍್ಯಾರ (ಸರಾಸರಿ 600ಕ್ಕೂ ಹೆಚ್ಚು) ಅದಲ್ದೆ ಪ್ರೊಫೆಸರ್ ಕೈಯಲ್ಲಿ ಮೈಕು ಬೇರೆ, ಇದಂತೂ ನನ್ನನ್ ತಬ್ಬಿಬ್ಬು ಮಾಡ್ಬಿಡ್ತು. ಹತ್ತೈವತ್ತು ವಿದ್ಯಾರ್ಥಿಗಳ ಜೊತೆ ಕಲ್ತು ಹೋದ ನನ್ನಗತಿ ಹೇಗಾಗಿರಬೇಡ ಅಲ್ಲಿ. ಇನ್ನೊಂದ್ ವಿಷ್ಯ, ಪ್ರತಿಕ್ಲಾಸ್ ರೂಂಗೆ ಎರಡೆರಡು ಬಾಗಿಲು, ಅರೇ ಕ್ಲಾಸ್ ನಡೆದಾಗ ಎದ್ಹೊಗೋ ವಿದ್ಯಾರ್ಥಿಗಳು, ಹಿಂದಿನ ಬಾಗಿಲ್ನಿಂದ ಅರ್ಧ ಗಂಟೆ ತಡ ಮಾಡಿ ಬರುವ ವಿದ್ಯಾರ್ಥಿಗಳು ಅಂತೂ ಇಂತೂ ಕಾಲೇಜಿನ ಕೊನೆ ಕ್ಲಾಸಿನ್ ಬೆಲ್ ಟ್ರೀsssನ್ ಅಂದಾಗ ದೊಡ್ಡ ಸಿನಿಮಾ ಬಿಟ್ಟಂತಾಗಿತ್ತು. ಅದೇನು ಹುಡುಗ್ರೂ ಅದೇನ್ ಹುಡ್ಗೀರೂ ಅಬ್ಬಾ! ನನಗಂತೂ ಮೊದಲ ದಿನ ತಲೆಗೆ ಅಕ್ಷರವಂತೂ ಪ್ರವೇಶ ಪಡೆಯಲಿಲ್ಲ ಬರೀ ಹೊಸತುಗಳನ್ನು ಕಂಡು ಬೆರಗು ನಿಬ್ಬೆರಗು ಆಗಿದ್ದೇ ಆಯಿತು. ಉಶ್ಯsssಪ್ಪ......
-ಗಂಗಾಧರ ಗು. ಹಿರೇಮಠ, ಕೂಡಲಸಂಗಮ

***
ಮೊದಲ ದಿನವದು ಮೌನ

ಮೊದಲ ದಿನ ಮೌನ... ಅಲ್ಲಲ್ಲ.. ನಿಧಾನ... ಹೌದು ಅದುವರೆಗೂ ಎರಡು ತೋಳುಗಳ ಏರಿ ಮಣ ಭಾರದ ಪುಸ್ತಕ ಹೊತ್ತು ಬೆನ್ನು ಬಾಗಿಸಿದ್ದ ಪಾಟೀಚೀಲ ಕಿತ್ತೆಸೆದು ಸೈಡ್ ಬ್ಯಾಗ್ ಹಾಕಿ ಎಣ್ಣೆ ಹಚ್ಚಿದ ಎರಡು ಉದ್ದ ಜಡೆಗೆ ಅಂತ್ಯ ಕಾಣಿಸಿ ಬಾಚಣಿಕೆಗೆ ತುಸು ಹೆಚ್ಚು ಕೆಲಸ ನೀಡಿ ಹೊಸ ವಿನ್ಯಾಸ ಮಾಡಿ ಅಂದದ ಬಿಂದಿ, ಚೆಂದದ ಚಪ್ಪಲಿಗಳೊಂದಿಗೆ ಮನದಲ್ಲಿ ಕುತೂಹಲ ಆತಂಕ, ಪುಳಕ ಸಂಭ್ರಮಗಳನ್ನೆಲ್ಲ ತುಂಬಿಕೊಂಡು ನಾನು, ನನ್ನ ಗೆಳತಿ ಅಕ್ಷತಾ ಹತ್ತಿರದ ಪಿಯುಸಿ ಕಾಲೇಜಿನ ಮೊದಲ ದಿನದ ಸ್ವಾಗತಕ್ಕೆ ಸಿದ್ಧರಾಗಿ ಬಸ್ಸೇರಿದ್ದೆವು.. ‘ಮುಂದೆ ಹೋಗಿ ಮುಂದೆ ಹೋಗಿ’ ಎನ್ನುವ ಕಂಡಕ್ಟರ್ ಕೂಗು. ‘ಕಾಲೇಜು ಮಕ್ಕಳು ಸೀಟ್ ಬಿಟ್ಕೊಡಿ, ಪಾಸ್ ಇದ್ಯಾ ...?’ ಹೀಗೆ ಆತನ ಮಾತು ಕಿರಿಕಿರಿ ಹುಟ್ಟಿಸುತ್ತಿತ್ತು.

ಇದರ ಮಧ್ಯೆ ಟಿಕೆಟ್ ಕೇಳುತ್ತ ಬಂದ ಕಂಡಕ್ಟರ್ 2 ರೂಪಾಯಿ ಚಿಲ್ಲರೆ ಕೊಡದೆ ‘ಆಮೇಲೆ ಕೊಡ್ತೀನಿ’ ಎಂದವರು ಕಾಲೇಜ್ ಬಂದ್ರೂ ಚಿಲ್ಲರೆ ಕೊಡದೆ ಕೇಳಿದರೆ ಕೇಳಿಸದ ಹಾಗೆ ನಿಂತಾಗ ‘ಮೊದ್ಲು ಚಿಲ್ರೆ ಕೊಡಿ’ ಎಂದು ನನ್ನ ಗೆಳತಿ, ನಾನು ದಬಾಯಿಸಿದ್ರೆ, ‘ಸರಿಯಾಗಿ ಚೇಂಜ್ ಕೊಡಿ ಇಲ್ಲಂದ್ರೆ ನಾನು ಫುಲ್ ಟಿಕೇಟ್ ಮಾಡ್ತಿನಿ, ಈಗ ಚಿಲ್ರೆ ಇಲ್ಲ. ನಾಳೆ ಕೊಡ್ತೀನಿ’. ಎಂದು ಜೋರು ಮಾಡಿದ್ದರು. ನಮ್ಮ ಗಲಾಟೆ ಕೇಳಿದ ವ್ಯಕ್ತಿಯೊಬ್ಬರು ‘ನಾಳೆ ಇಸ್ಕೊಳ್ರಮ್ಮ ಹೇಗೂ ದಿನಾ ಇದೇ ಬಸ್ಸಿಗೆ ಬರ್ತೀರಲ್ಲ’ ಎಂದು ಸಮಾಧಾನಿಸಿದರು. ತಕ್ಷಣ ನಾವು ‘ಅಲ್ಲ ಅಂಕಲ್ ಈ ಬಸ್ಸಿನೋರು ನಾವ್ ಕಡಿಮೆ ಕೊಟ್ರೆ ತಗೋತಾರ, ಮತ್ತೆ ನಮ್ಗೆ ಯಾಕೆ ಚಿಲ್ರೆ ಕೊಡಲ್ಲ’ ಎಂದು ವಾದ ಮಾಡುತ್ತ ಹಕ್ಕು ಸ್ಥಾಪಿಸುವ ಹೊತ್ತಿಗೆ ಕಾಲೇಜು ಬಂದಿದ್ದರಿಂದ ಕೆಳಗಿಳಿದೆವು.

ತರಗತಿಯನ್ನು ಹುಡುಕಿ ಕುಳಿತಾಗ ನಿರಾಳ ಎನ್ನಿಸುವ ಭಾವ. ಬಸ್ಸಿನ ಅವಾಂತರ ಮರೆಯಾಗಿ ಹೊಸ ಸ್ನೇಹಿತರು ತರಗತಿಯನ್ನು ನೋಡುತ್ತ ಕುಳಿತೆವು. ಮೊದಲ ಪಿರಿಯಡ್‌ನಲ್ಲಿ ಬಂದ ಕನ್ನಡ ಸರ್ ಎಲ್ಲರಿಗೂ ಸ್ವಾಗತ ಕೋರಿ ಕಾಲೇಜಿನ ಬಗ್ಗೆ ತಿಳಿವಳಿಗೆ ನೀಡಿ ಪ್ರೀತಿಯಿಂದ ಎಲ್ಲರನ್ನು ಮಾತಾಡಿಸಿದಾಗ ಮನದ ಭಯ ಮಾಯವಾಗಿತ್ತು. ಇನ್ನೇನು ಬಾನಾಡಿಯಂತೆ ಹಾರಲು ಸಿದ್ಧವಾಗುತ್ತಿದ್ದ ಮನಸ್ಸು 2ನೇ ಪಿರಿಯಡ್‌ಗೆ ಬಂದ ಅದೇ ವ್ಯಕ್ತಿಯನ್ನು ಕಂಡು ಕುಸಿದು ಬಿದ್ದಿತ್ತು. ಬೆಳಿಗ್ಗೆ ಬಸ್ಸಿನಲ್ಲಿ ಸಮಾಧಾನಿಸಿದ ವ್ಯಕ್ತಿಯೇ ಅವರಾಗಿದ್ದರು. ನಿಧಾನವಾಗಿ ಕಾಲಿನಲ್ಲಿ ಆರಂಭವಾದ ನಡುಕ ದೇಹದ ತುಂಬ ವ್ಯಾಪಿಸಿ ಮಳೆಗಾಲದಲ್ಲೂ ಬೆವರುವಂತಾಯಿತು.

ಮುಕ್ಕಾಲು ಭಾಗ ಪಿರಿಯಡ್ ಮುಗಿದರೂ ತಲೆತಗ್ಗಿಸಿ ಕುಳಿತಿದ್ದ ನಮ್ಮನ್ನು ನೋಡಿ ನಗುತ್ತಿದ್ದ ಸರ್ ಎದ್ದು ನಿಲ್ಲುವಂತೆ ಸೂಚಿಸಿದರು. ನಾನಂತು ‘ಅಯ್ಯೋ ಮೊದಲ ದಿನವೇ ಏನು ಗ್ರಹಚಾರ ಕಾದಿದೆಯೋ’ ಎಂದು ಅಳುಕುತ್ತಲೇ ಎದ್ದು ನಿಂತಾಗ ‘ನಿನ್ನ ಹೆಸರೇನಮ್ಮ, ಏನು ಹವ್ಯಾಸಗಳಿವೆ..?’ ಎಂದರು. ಕಕ್ಕಾಬಿಕ್ಕಿಯಾದ ನಾನು ಸುಧಾರಿಸಿಕೊಂಡು ಮೆಲ್ಲನೆ ‘ಹಾಡು, ಡ್ಯಾನ್ಸ್, ಪುಸ್ತಕ ಓದ್ತೀನಿ, ಕವನ ಬರೀತಿನಿ..’ ಎಂದು ತೊದಲಿದೆ. ತತ್ ಕ್ಷಣ ಸರ್ ‘ತುಂಬಾ ಒಳ್ಳೆಯದು ನೀನೇನೇ ಬರೆದ್ರು ತಂದುಕೊಂಡಮ್ಮ ತರಗತಿಯಲ್ಲಿ ಓದೋಣ.

ಒಳ್ಳೆಯ ಹವ್ಯಾಸಗಳಿವೆ ಇದನ್ನು ಮುಂದುವರೆಸು, ಕೂತ್ಕೊ’ ಎಂದಾಗ ಈ ಮೊದಲು ನನ್ನಲ್ಲೆ ಕಟ್ಟಿಕೊಂಡ ಸರ್ ಏನ್ ಹೇಳ್ತಾರೋ ಏನೋ... ಎನ್ನುವ ಕಲ್ಪನೆಯಿಂದ ಅವರ ಕ್ಲಾಸನ್ನೇ ಕೇಳಲಾಗದ ಸ್ಥಿತಿ ನೆನಸಿಕೊಂಡರೆ ನಗು ಬರುವಂತಾಯಿತು. ಮುಂದೆ ಚಿಲ್ಲರೆಗಾಗಿ ಕಾಡಿದ ಕಂಡಕ್ಟರ್, ಕಂಡಕ್ಟ್ರಣ್ಣ ಆಗಿ, ಆತಂಕ ಹುಟ್ಟಿಸಿದ ಕಾಲೇಜು ಮನೆಗಿಂತಲೂ ಹೆಚ್ಚು ಅಪ್ಯಾಯಮಾನವಾಗಿ ಬದಲಾದರೂ ಇಂದಿಗೂ ಕಾಲೇಜಿನ ಮೊದಲ ದಿನ ಎಂದಾಗ ಥಟ್ಟನೆ ಈ ಘಟನೆ ನೆನಪಾಗುತ್ತದೆ. ಇಂದು ನಾನು ಪಿಯುಸಿ ಕಾಲೇಜಿನಲ್ಲಿ ಉಪನ್ಯಾಸಕಿ. ಮೊದಲ ಪಿಯು ತರಗತಿಗೆ ಬರುವ ಮಕ್ಕಳ ಕಣ್ಣಲ್ಲಿ ತುಳುಕುವ ಆಸೆ, ಪುಳಕ, ಕುತೂಹಲಗಳೆಲ್ಲ ನನ್ನ ಕಾಲೇಜಿನ ಮೊದಲ ದಿನವನ್ನು ಮತ್ತೆ ಮತ್ತೆ ನೆನಪಿಸುತ್ತವೆ...
-ಗೀತಾ, ದಾವಣಗೆರೆ

***
ಭಯ–ಅಪರಿಚಿತರ ನಡುವೆ

ನಮ್ಮೂರಿನ ಸುತ್ತಮುತ್ತ ಕಾಲೇಜುಗಳು ಇರಲಿಲ್ಲವಾದ್ದರಿಂದ ಬೆಂಗಳೂರಿನ ಕಾಲೇಜಿನಲ್ಲಿ ಬಿ.ಎ ಓದಲು ಸೇರಿದೆ. ಕಾಲೇಜಿಗೆ ಹೋಗುವ ಮೊದಲ ದಿನವೂ ಬಂದೇ ಬಿಟ್ಟಿತು. ಬಾಲ್ಯದಲ್ಲಿ ಒಂದೆರಡು ಬಾರಿ ಅಮ್ಮನ ಜೊತೆ ಬೆಂಗಳೂರಿನ ನೆಂಟರ ಮನೆಗೆ ಬಂದಿದ್ದೆನಾದರೂ ಮಾಯಾನಗರಿ ಪರಿಚಯವಿರಲಿಲ್ಲ. ಮೆಜೆಸ್ಟಿಕ್‌ನಲ್ಲಿ ಬಸ್ಸಿಳಿದು ಅಂಜುತ್ತಾ ಕಾಲೇಜಿನತ್ತ ಹೆಜ್ಜೆ ಹಾಕಿದೆ. ಸುತ್ತಲೂ ಬರೀ ಜನ, ರಸ್ತೆ ತುಂಬೆಲ್ಲ ವಾಹನಗಳು, ಕಿವಿಗಡಚಿಕ್ಕುವ ಹಾರನ್, ಹಾದಿಯಲ್ಲಿ ಗಣೇಶನಿಗೆ ಭಯದ ನಮಸ್ಕಾರ ಹೊಡೆದು, ಕಾಲೇಜಿನ ಸೂಚನಾ ಫಲಕದಲ್ಲಿ ನಮ್ಮ ತರಗತಿ ವಿವರ ಓದಿ ಕೊಠಡಿಗೆ ಬಂದು ಕುಳಿತೆ.

ಬಣ್ಣಬಣ್ಣದ ಬಟ್ಟೆ ತೊಟ್ಟಿದ್ದ, ತರಹೇವಾರಿ ಚಪ್ಪಲಿ, ಶೂ ಧರಿಸಿದ್ದ ಸ್ಟೈಲಾಗಿದ್ದ ಹುಡುಗರು ಗಲಾಟೆ ಮಾಡುತ್ತಿದ್ದರು. ಚಪ್ಪಲಿಯಿಲ್ಲದೆ ಬರಿಗಾಲಲ್ಲಿ ಕುಳಿತಿದ್ದ ನಾನು ಹಿಂಜರಿಕೆಯಿಂದ  ಮುದುಡಿಕುಳಿತಿದ್ದೆ. ಹುಡುಗರ ಮುಖಗಳನ್ನೇ ನೋಡುವ ಧೈರ್ಯ ಮಾಡದ ನಾನು ಹುಡುಗಿಯರನ್ನು ನೋಡುವ ಮಾತು ದೂರವೇ ಉಳಿದಿತ್ತು. ಕಾಲೇಜಿನ ಮೊದಲ ಬೆಲ್ ಒಡೆದಾಗ ಕನ್ನಡ ಅಧ್ಯಾಪಕಿ ಬಂದರು. ಅದೇ ಮೊದಲ ಬಾರಿ ಮಹಿಳೆ ಪಾಠ ಮಾಡುವುದನ್ನು ಕಂಡಿದ್ದು. ಅವರು ಕನ್ನಡವನ್ನು ಇಂಗ್ಲಿಷ್‌ನಂತೆ ಪಾಠ ಮಾಡುತ್ತಿದ್ದರು. ಮಾತಿನ ಮಧ್ಯೆ ಇಂಗ್ಲಿಷ್ ಕವಿಗಳು ಮತ್ತು ಅವರ ಕೃತಿಗಳನ್ನು ನೀವು ಓದಿದ್ದೀರ? ಎಂದು ಕೇಳಿದರು.

ಹಳ್ಳಿ ಶಾಲೆಯಲ್ಲಿ ಮೇಷ್ಟ್ರುಕೇಳುವ ಪ್ರಶ್ನೆಗಳಿಗೆ ಮೊದಲೇ ಉತ್ತರಿಸುತ್ತಿದ್ದ ನಾನು ಮೊದಲ ಬಾರಿಗೆ ನಿರುತ್ತರನಾದೆ. ಇದುವರೆಗೂ ನನ್ನ ಹಳ್ಳಿಯ ಶಾಲೆಗಳಲ್ಲಿ ನಾನೇ ಮೊದಲಿಗನಾಗಿದ್ದವನು; ನನಗೇನೂ ಗೊತ್ತಿಲ್ಲ, ನಾನೇನು ಓದಿಲ್ಲವೆಂಬುದನ್ನು ಅಂದು ಅನುಭವಿಸಿದೆ. ನಾನು ಉತ್ತರ ಹೇಳದಿದ್ದರೇನಂತೆ ನನ್ನ ತರಗತಿಯ ಹುಡುಗರಾದರೂ ಹೇಳುತ್ತಾರೆಂದರೆ ಅವರೂ ನಿರುತ್ತರಿಗಳೇ. ಆ ಮೊದಲ ದಿನದ ಒಂದು ಅವಧಿ ಒಂದು ದಿನದಂತೆ ಭಾಸವಾಯಿತು.

ಅದುವರೆಗೂ ಹಿಂದಕ್ಕೆ ತಿರುಗುವುದಿರಲಿ ಅಕ್ಕಪಕ್ಕದವರನ್ನು ನೋಡುವುದಾಗಲಿ, ಮಾತನಾಡಿಸುವ ಧೈರ್ಯ ಮಾಡಿರಲಿಲ್ಲ. ತರಗತಿ ಮುಗಿದ  ಮೇಲೆ ಕೆಲವರ ಪರಿಚಯವಾಯಿತು. ಪುಣ್ಯಕ್ಕೆ ಅವರೆಲ್ಲರೂ ಹಳ್ಳಿಯವರೇ ಆಗಿದ್ದರು. ಪರವಾಗಿಲ್ಲ ಈ ಜಗತ್ತಿನಲ್ಲಿ ನಾನೊಬ್ಬನೇ ದುಃಖಿಯಲ್ಲ, ನನ್ನ ಹಾಗೆ ಇತರರೂ ಇದ್ದಾರೆಂದು ಅವರಿಗೆ ನಾನು, ನನಗೆ ಅವರು ಸಮಾಧಾನ ಮಾಡಿಕೊಂಡೆವು. ಮುಂದೆ ಓದಿನಲ್ಲಿ, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾ, ಬದುಕಿನಲ್ಲಿ ಆತ್ಮವಿಶ್ವಾಸ, ಸಾಹಿತ್ಯ ಪ್ರೀತಿ ಬೆಳೆಸಿಕೊಂಡು ಕನ್ನಡದಲ್ಲಿ ಎಂ.ಎ ಪಡೆದು ಅದೇ ಕಾಲೇಜಿನಲ್ಲಿ ಗುರುಗಳೊಂದಿಗೆ ಸಹೋದ್ಯೋಗಿಯಾದದ್ದು ಅವಿಸ್ಮರಣೀಯ.
-ರುದ್ರೇಶ್ ಬಿ. ಅದರಂಗಿ

***
ಗೆಳೆಯನೇ ಲೆಕ್ಚರರ್ ಆದಾಗ!
ನಾನು ಓದುತ್ತಿದ್ದುದು ಬಸವನಗುಡಿಯ ವಿಜಯ ಸಂಜೆ ಕಾಲೇಜಿನಲ್ಲಿ. ಸಂಜೆ ಕಾಲೇಜು ಎಂದ ಮೇಲೆ ಎಲ್ಲರೂ ಒಂದಲ್ಲಾ ಒಂದು ರೀತಿ ಉದ್ಯೋಗಿಗಳೇ. ಅನೇಕ ವಿದ್ಯಾರ್ಥಿಗಳು ಕೆಲಸ ಮುಗಿಸಿ ಸಂಜೆ 6 ರಿಂದ ರಾತ್ರಿ 9 ಗಂಟೆವರೆಗೆ ಕಾಲೇಜಿಗೆ ಬರುತ್ತಿದ್ದರು. ಹಾಜರಾತಿ ಕಡ್ಡಾಯ ಇರಲಿಲ್ಲ. ಅಟೆಂಡನ್ಸ್‌ ಪುಸ್ತಕದಲ್ಲಿ ಮಾತ್ರ 50 ರಿಂದ 60 ಜನರ ಹೆಸರಿರುತ್ತಿತ್ತು. ಆದರೆ ಕ್ಲಾಸಿಗೆ ಬರುತ್ತಿದ್ದುದು 8ರಿಂದ 10 ವಿದ್ಯಾರ್ಥಿಗಳು. ಅದರಲ್ಲಿ ನಾನು ವರ್ಷಕ್ಕೆ 15ರಿಂದ 20 ದಿನ ಕ್ಲಾಸಿಗೆ ಹೋದರೇ ಹೆಚ್ಚಾಗಿತ್ತು. ನಾನು ಅಂತಿಮ ವರ್ಷದ ಬಿ.ಎ. ತರಗತಿಗೆ ಮೊದಲ ದಿನ ಸೈಕಲ್‌ನಲ್ಲಿ ಹೊರಟಿದ್ದೆ. ಕಾಲೇಜಿನ ಸೈಕಲ್ ಸ್ಟ್ಯಾಂಡ್ ಬಳಿ ಸೈಕಲ್ ನಿಲ್ಲಿಸಲು ಹೋದಾಗ ನನ್ನ 9ನೇ ತರಗತಿಯ ಗೆಳೆಯ ಲಕ್ಷ್ಮಣ ಸ್ಕೂಟರ್‌ ನಿಲ್ಲಿಸುತ್ತಿದ್ದ. 

ನಾನು, ಲಕ್ಷ್ಮಣ, ಸುರೇಶ ಮುಂತಾದವರು ಗೆಳೆಯರಾಗಿದ್ದೆವು. ಅವರೆಲ್ಲಾ ತುಂಬಾ ಬುದ್ಧಿವಂತರು. ನಾನು ಮಾತ್ರ ಏಳನೇ ತರಗತಿಯಲ್ಲಿ ಎರಡು ಸಲ ಫೇಲ್ ಆಗಿ ಮೂರನೇ ಸಲ ಪಾಸು ಮಾಡಿದ್ದೆ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ, ಪಿಯುಸಿಯಲ್ಲಿ  ಫೇಲ್ ಆಗಿ ನಂತರ ಹಂತ ಹಂತವಾಗಿ ಪಾಸು ಮಾಡಿ ಎಲ್ಲೂ ಕೆಲಸ ಸಿಗದೆ ಪೊಲೀಸ್ ಕಾನ್‌ಸ್ಟೆಬಲ್ ಕೆಲಸಕ್ಕೆ ಸೇರಿದೆ. ಡ್ಯೂಟಿಯಲ್ಲಿ ರೆಸ್ಟ್ ಸಿಕ್ಕಾಗ ಕಾಲೇಜಿಗೆ ಹೋಗುತ್ತಿದ್ದೆ. ಹೇಗಾದರೂ ಮಾಡಿ ಡಿಗ್ರಿ ಮುಗಿಸಿದರೆ ಸಬ್ ಇನ್‌ಸ್ಪೆಕ್ಟರ್ ಆಗಬಹುದು ಎಂಬ ಆಸೆಯಿಂದ ಒಂದು ಮತ್ತು ಎರಡನೇ ವರ್ಷದ ಡಿಗ್ರಿಯಲ್ಲಿ ಮರಳಿ ಯತ್ನವ ಮಾಡುತ್ತಲೇ ಒಂದೊಂದೇ ಸಬ್ಜೆಕ್ಟ್ ಪಾಸು ಮಾಡುತ್ತಾ ಬಂದೆ.

ಆದರೆ ಲಕ್ಷ್ಮಣ ಆ ತರಹದವನಲ್ಲ, ಇವನೇಕೆ ಇಲ್ಲಿ ಎಂದು ಸೈಕಲ್ ಕ್ಯಾರಿಯರ್‌ನಲ್ಲಿದ್ದ ಪುಸ್ತಕ ಎತ್ತಿಕೊಳ್ಳುತ್ತಾ ‘ಏನೋ ಲಕ್ಷ್ಮಣ ನೀನು ಇಲ್ಲಿ’ ಎಂದು ದೂರದಿಂದ ಏಕವಚನದಲ್ಲಿ ಮಾತನಾಡಿಸಿದೆ. ಅವನು ಸುಮ್ಮನೆ ಮುಗುಳು ನಕ್ಕು ನನ್ನೊಂದಿಗೆ ಮಾತನಾಡದೇ ಕಾಲೇಜಿಗೆ ಹೊರಟುಹೋದ. ನಾನು ನಿಧಾನವಾಗಿ ತರಗತಿಗೆ ಹೋದಾಗ ನಾನು ಹೊರಟ ಮೂರು ನಾಲ್ಕು ನಿಮಿಷದ ನಂತರ ಲಕ್ಷ್ಮಣನೂ ನನ್ನ ತರಗತಿಗೇ ಬಂದ. ಬಂದವನೇ ಬೋರ್ಡಿನ ಮೇಲೆ ಅಂದಿನ ಪಾಠದ ವಿಷಯವನ್ನು ಬರೆಯತೊಡಗಿದೆ. ಎಲ್ಲಾ ವಿದ್ಯಾರ್ಥಿಗಳೂ ನಿಂತು ನಮಸ್ಕಾರ ಸಾರ್ ಎಂದರು. ನಾನೂ ಎದ್ದು ನಿಂತು ನಮಸ್ಕಾರ ಸಾರ್ ಎಂದು ಗುಂಪಿನಲ್ಲಿ ಹೇಳಿದೆ.

ಪುನಃ ತರಗತಿಯಲ್ಲಿ ನನ್ನ ತಲೆ ಎತ್ತಲಿಲ್ಲ. ಅವನು ಉತ್ತಮವಾಗಿ ಓದಿ ನನಗೆ ಲೆಕ್ಚರರ್ ಆಗಿ ಬಂದಿದ್ದ. ಅದೇ ನನ್ನ ಕಾಲೇಜಿನ ಕೊನೆಯ ದಿನವೂ ಆಯಿತು. ಅಷ್ಟು ಹೊತ್ತಿಗಾಗಲೇ ನನಗೂ ಮದುವೆ ಆಗಿ ಹತ್ತು ವರ್ಷದ ಮಗನಿದ್ದ. ನಡೆದ ವಿಷಯವನ್ನು ನನ್ನ ಹೆಂಡತಿಗೆ ಹೇಳಿದೆ. ಹೆಂಡತಿ ನಕ್ಕು ಸುಮ್ಮನಾದಳು. ಆದರೆ ಮಗ ಹೇಳಿದ– ‘ಅಪ್ಪ ಸ್ವಲ್ಪ ದಿನ ಇರು. ನಾನೂ ನಿನ್ನ ಜೊತೆಯಲ್ಲಿ ಕಾಲೇಜಿಗೆ ಬರುತ್ತೇನೆ ಇಬ್ಬರೂ ಒಟ್ಟಿಗೆ ಹೋಗೋಣ’ ಎಂದು. ಅಂದಿನಿಂದ ಕಾಲೇಜಿಗೆ ಹೋಗಲಿಲ್ಲ. ಮರಳಿ ಪರೀಕ್ಷೆಯನ್ನೂ ಕಟ್ಟಲಿಲ್ಲ. ಡಿಗ್ರಿಯನ್ನು ಪಡೆಯಲಿಲ್ಲ. ಸಬ್ ಇನ್‌ಸ್ಪೆಕ್ಟರ್ ಕೂಡ ಆಗಲಿಲ್ಲ. ಈಗ ಪೇದೆಯಾಗಿ 25 ವರ್ಷ ಸೇವೆ ಸಲ್ಲಿಸಿದಕ್ಕಾಗಿ ಸರ್ಕಾರದವರೇ ಮುಖ್ಯ ಪೇದೆ ಬಡ್ತಿ ನೀಡಿದ್ದಾರೆ. ಮನೆಯ ಮುಂದೆ ಮಾತ್ರ ಕೃಷ್ಣಮೂರ್ತಿ (ಬಿ.ಎ)ಎಂದು ಬೋರ್ಡ್ ಹಾಕಿದ್ದೇನೆ.
-ಟಿ.ಕೃಷ್ಣಮೂರ್ತಿ, ಬೆಂಗಳೂರು

***
ಖುಷಿ ಕೊಟ್ಟಿತು ಕಾಲೇಜಿನಲ್ಲಿ ಹುಟ್ಟು ಹಬ್ಬ
ನನ್ನ ಕಾಲೇಜು ಜೀವನ ಆರ೦ಭವಾದದ್ದು ಬೆ೦ಗಳೂರಿನ ಮೌ೦ಟ್ ಕಾರ್ಮಲ್ ಕಾಲೇಜಿನಲ್ಲಿ. ಅಲ್ಲಿನ ಪರಿಸರ ನಾನು ಆವರೆಗೂ ಓದಿ ಬೆಳೆದಿದ್ದ ಪರಿಸರಕ್ಕಿ೦ತ ಭಿನ್ನವಾಗಿತ್ತು.  ತು೦ಬಾ ವಿಶಾಲವಾದ ಕ್ಯಾ೦ಪಸ್, ದೊಡ್ಡ ಕ್ಲಾಸ್ ರೂ೦, ಒ೦ದು ಹೊಸ ಸ೦ಸ್ಕೃತಿ ಇವೆಲ್ಲವೂ ನನಗೆ ಅಚ್ಚರಿ ಮೂಡಿಸಿ ಮಾಯಾ ಲೋಕವಾಗಿ ಕ೦ಡಿತು. ಅ೦ದು ಜೂನ್ 16, ಕಾಲೇಜಿನ ಮೊದಲ ದಿನ,  ಅದಲ್ಲದೆ ನನ್ನ ಹುಟ್ಟು ಹಬ್ಬ ಕೂಡ. ನನಗೆ ಕಾಲೇಜಿಗೆ ಹೋಗಲು ದಾರಿ ಕೂಡ ತಿಳಿಯದು. ನನ್ನ ತಾಯಿ ನನ್ನನು ಕಾಲೇಜಿಗೆ ಕರೆದುಕೊ೦ಡು ಹೋಗಿ ಬಿಟ್ಟರು.

ಕಾಲೇಜಿನೊಳಗೆ ಹೊಗುತ್ತಿದ್ದ೦ತೆ ಏನೋ ಒ೦ಥರಾ ಭಯ, ಆತ೦ಕ, ಖುಷಿ ಎಲ್ಲಾ ಥರದ ಮಿಶ್ರ ಭಾವನೆಗಳು ನನ್ನಲ್ಲಿ ಉ೦ಟಾಗಿದ್ದವು. ಮೊದಲ ದಿನವಾದ ಕಾರಣ ಒಳಗೆ ಹೋಗುತ್ತಿದ್ದ೦ತೆ ನಮಗೆ ಆಡಿಟೋರಿಯಂಗೆ ಹೋಗಲು ಸೂಚಿಸಿದರು. ಸುಮಾರು ಮೂರು ಸಾವಿರ ವಿದ್ಯಾರ್ಥಿನಿಯರಿದ್ದರು. ಆರ್ಟ್ಸ್, ಸೈನ್ಸ್, ಕಾಮರ್ಸ್ ಎಲ್ಲವನ್ನು ಒಳಗೊ೦ಡ೦ತೆ. ಅಲ್ಲಿ ನಮಗೆ ಕಾಲೇಜಿನ ನೀತಿ ನಿಯಮ ಎಲ್ಲದರ ಬಗ್ಗೆಯೂ ಮಾಹಿತಿ ತಿಳಿಸಿದರು. ಇದಾದ ನ೦ತರ ಕೊನೆಯಲ್ಲಿ ಆಶ್ಚರ್ಯ ಎನ್ನುವ೦ತೆ ಫನ್‌ ಗೇಮ್ ಎ೦ದು ಜೂನ್ ತಿ೦ಗಳಿನಲ್ಲಿ ಹುಟ್ಟು ಹಬ್ಬ ಇದ್ದವರನ್ನೆಲ್ಲಾ ಸ್ಟೇಜ್ ಮೇಲೆ ಕರೆದರು.

ನನ್ನದು ಬೇರೆ ಅವತ್ತೆ ಇತ್ತು. ಅಯ್ಯೊ ಗ್ರಹಚಾರವೇ ಎ೦ದು ಗಾಬರಿಯಿ೦ದ ಹೋದೆ. ನನ್ನ೦ತೆಯೆ ಸುಮಾರು 30 ಹುಡುಗಿಯರು ಸಹ ಬಂದಿದ್ದರು. ನಮ್ಮ ಪ್ರಿನ್ಸಿಪಾಲ್ ನಮ್ಮನ್ನೆಲ್ಲಾ ಮಾತಾಡಿಸಿ ಯಾವ ದಿನ ನಿಮ್ಮ ‘ಬರ್ತ್‌ಡೇ’ ಎ೦ದೆಲ್ಲಾ ಕೇಳಿದರು. ನನ್ನದು ಮತ್ತು ಇನ್ನೊಬ್ಬ ಹುಡುಗಿಯದು ಅವತ್ತೇ ಎ೦ದು ತಿಳಿದು ನಮಗೆಲ್ಲಾ ಕೇಕ್ ಕಟ್ ಮಾಡಲು ಹೇಳಿದರು. ಸುಮಾರು ಮೂರು ಸಾವಿರ ಜನ ‘ಹ್ಯಾಪಿ ಬರ್ತ್ ಡೇ.....’ಎಂದು ಹಾಡುವಾಗ ಹೆದರಿದ್ದ ನನಗೆ ಆಕಾಶದಲ್ಲಿ ಹಾರಾಡುವ೦ತೆ ಅನಿಸಿತ್ತು.  

ಅದೇ ಖುಷಿಯಲ್ಲಿ ತೇಲಾಡುತ್ತಾ ಕಾರ್ಯಕ್ರಮ ಮುಗಿದ ನ೦ತರ ತರಗತಿಗೆ ತೆರಳಿದೆ. ನನ್ನನ್ನು ಸ್ಟೇಜ್ ಮೇಲೆ ನೋಡಿದ ನನ್ನ ಸಹಪಾಠಿಗಳು ಮತ್ತೊಮ್ಮೆ ಶುಭ ಹಾರೈಸಿದರು. ಇದರಿ೦ದ ಮೊದಲ ದಿನವೇ ಬಹಳಷ್ಟು ಜನ ಸ್ನೇಹಿತರಾದರು.  ಹೀಗೆ ನನ್ನ ಕಾಲೇಜಿನ ಮೊದಲ ದಿನ ನಾನು ಎ೦ದೂ ಮರೆಯಲಾರದ ದಿನವಾಯಿತು. ನನ್ನ ಸ್ವೀಟ್ ಸಿಕ್ಸ್ಟೀನ್ ಬರ್ತ್‌ಡೇ ಒ೦ದು ಸ್ವೀಟ್ ಮೆಮೊರಿಯಾಗಿ ಇನ್ನೂ ನನ್ನನ್ನು ಸಂತಸದಿಂದ ಕಾಡುತ್ತದೆ.
-ಕುಸುಮಾ. ಆರ್. ಎಸ್, ಬೆ೦ಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT