ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇರಳದ ‘ಇಕ್ಕಳ’ದಲ್ಲಿ ಕನ್ನಡ

Last Updated 8 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಗರಿಗರಿ ಸೂಟು–ಬೂಟು, ಸಾಧಾರಣ ಸಮವಸ್ತ್ರ ಮತ್ತು ಮಾಸಲು ಬಟ್ಟೆ! ಕಾಸರಗೋಡಿನ ಯಾವುದೇ ಮೂಲೆಗೆ ಹೋದರೂ ಶಾಲಾ ವಿದ್ಯಾರ್ಥಿಗಳ ಇಂತಹ 3 ಬಗೆಯ ಚಿತ್ರಗಳು ಕಾಣಿಸುತ್ತವೆ.  ಇದರ ಹೊರತಾಗಿ ಕಾಣಿಸುವ ವಿಶಿಷ್ಟ ಚಿತ್ರ ಎಂದರೆ ಮಂಗಳೂರಿನ ಶಾಲೆ–-ಕಾಲೇಜುಗಳಿಗಾಗಿ ಕಾಸರ­ಗೋಡು, ಕುಂಬಳೆ, ಉಪ್ಪಳ ಮತ್ತು ಮಂಜೇಶ್ವರ ರೈಲು ನಿಲ್ದಾಣಗಳಲ್ಲಿ ರೈಲಿಗಿಂತ ಉದ್ದಕ್ಕೆ ನಿಲ್ಲುವ ಮಕ್ಕಳ ಸಾಲು. ಕಾಸರಗೋಡಿನ ಆತ್ಮ­ವನ್ನು ಕರ್ನಾಟಕಕ್ಕೆ ನಿತ್ಯ ಕರೆದೊಯ್ಯುವಂತೆ ಬೆಳಗಿನ ಲೋಕಲ್ ರೈಲುಗಳು ಮಕ್ಕಳನ್ನು ಮಂಗಳೂರಿಗೆ ಹೊತ್ತೊಯ್ಯುತ್ತವೆ.

ಒಂದೆಡೆ ಖಾಸಗಿ ಅನುದಾನರಹಿತ ಹೈ–-ಫೈ ಶಾಲೆಗಳು, ಖಾಸಗಿ ಅನುದಾನಿತ ಶಾಲೆಗಳು ಮತ್ತು ಸರ್ಕಾರಿ ಶಾಲೆಗಳು– ಹೀಗೆ ಮೇಲು, -ಮಧ್ಯಮ,- ಕೆಳ ಎಂಬ ವರ್ಗಗಳು ಸೃಷ್ಟಿಯಾಗಿವೆ. ಅಂತರರಾಷ್ಟ್ರೀಯ-, ರಾಷ್ಟ್ರೀಯ-, ರಾಜ್ಯ ಪಠ್ಯ­ಕ್ರಮ­ಗಳ ವರ್ಗಗಳು ಬೇರೆ ಇವೆ. ಕೊಲ್ಲಿ ರಾಷ್ಟ್ರಗಳಲ್ಲಿ ದುಡಿಯುವ ಇಲ್ಲಿನ ಮಂದಿ ತಮ್ಮ ಮಕ್ಕಳನ್ನು ಅಂತರರಾಷ್ಟ್ರೀಯ ಮಟ್ಟದ ಸನಿವಾಸ ಶಾಲೆಗಳಿಗೆ ಕಳುಹಿಸಿದರೆ, ಮಂಗಳೂರು, ಬೆಂಗ­ಳೂರು, ಮುಂಬೈ ಮತ್ತಿತರ ಕಡೆಗಳಿಗೆ ವಲಸೆಗೆ ಸಜ್ಜಾಗುವ ಹೆತ್ತವರು ತಮ್ಮ ಮಕ್ಕಳನ್ನು ರಾಷ್ಟ್ರೀಯ ಪಠ್ಯಕ್ರಮದ ಶಾಲೆಗಳಿಗೆ ಸೇರಿಸುತ್ತಿ­ದ್ದಾರೆ. ಉಳಿದ ಬಡವರು ಸರ್ಕಾರಿ ಶಾಲೆಯ ಕಡೆಗೆ ಮುಖ ಮಾಡುತ್ತಾರೆ.

ಜಾಗತೀಕರಣದ ಒತ್ತಡದಲ್ಲಿ ಇಂಗ್ಲಿಷ್ ಮಾಧ್ಯಮ, ಕೇರಳೀಕರಣದ ಒತ್ತಡದಲ್ಲಿ ಮಲ­ಯಾಳಂ ಮಾಧ್ಯಮ, ದೇಸೀಕರಣ ಮತ್ತು ದೇಸಿಗ­ಕರಣದ (ದಿಕ್ಕಿಲ್ಲದವನ) ಒತ್ತಡದಲ್ಲಿ ಕನ್ನಡ ಮಾಧ್ಯಮದ ಆಯ್ಕೆ ನಡೆಯುತ್ತದೆ. ಕಾಸರ­ಗೋಡಿನ ಕನ್ನಡ ಶಾಲೆಗಳು ಇಂಗ್ಲಿಷ್‌ನ ಪ್ರಬಲ, ಆದರೆ ಕಾಣದ ಒತ್ತಡವನ್ನೂ, ಮಲಯಾಳಂನ ಅಷ್ಟೇನೂ ಪ್ರಬಲವಲ್ಲದ, ಆದರೆ ಕಾಣುವ ಒತ್ತಡಗಳನ್ನೂ ಎದುರಿಸಬೇಕಾಗಿದೆ. ಒಂದೆಡೆ ಪರಕೀಯನ ಜತೆಗೂ, ಇನ್ನೊಂದೆಡೆ ಸ್ವಕೀಯನ ಜತೆಗೂ ಕುಸ್ತಿಗೆ ನಿಲ್ಲಬೇಕಾಗಿದೆ ಕನ್ನಡ.

ಕಾಸರಗೋಡು ಅಭಿವೃದ್ಧಿ ವರದಿ ಎಚ್ಚರಿಕೆ: ಕಾಸರಗೋಡಿನ ಅಭಿವೃದ್ಧಿ ಕುರಿತು  ಕೇರಳ ಸರ್ಕಾರಕ್ಕೆ ಇತ್ತೀಚೆಗೆ ಸಲ್ಲಿಕೆ ಆಗಿರುವ ಪ್ರಭಾಕ­ರನ್ ಆಯೋಗದ ವರದಿಯಲ್ಲಿ ಇಲ್ಲಿನ ಶೈಕ್ಷಣಿಕ ಸಮಸ್ಯೆಗಳ ಕುರಿತು ಎಚ್ಚರಿಕೆಯ ಮಾತುಗಳಿವೆ. ‘ರಿಪೋರ್ಟ್ ಆನ್ ದಿ ಡೆವಲಪ್‌ಮೆಂಟ್ ಆಫ್ ಕಾಸರಗೋಡ್ ಡಿಸ್ಟ್ರಿಕ್ಟ್‌’ನ ೫೮೯ನೆಯ ಪುಟದ­ಲ್ಲಿನ ಉಲ್ಲೇಖ ಹೀಗಿದೆ:- ಮಲಯಾಳವನ್ನು ಕಡ್ಡಾಯ­ಗೊಳಿಸಿದರೆ ಇಲ್ಲಿನ ಶಾಲೆಗಳು ಸಮ­ಸ್ಯೆಯ ಸುಳಿಯಲ್ಲಿ ಸಿಕ್ಕಿಹಾಕಿ­ಕೊಳ್ಳಲಿವೆ. ಕೊರಗ ಸಮುದಾಯದಂತಹ ಸಮುದಾಯಗಳ ಮಕ್ಕಳು ಮೂಲತಃ ತುಳುವರೂ ಆಗಿರುವ ಕಾರಣ ಇಂತಹ (ಮಲಯಾಳ ಕಡ್ಡಾಯದ) ನಡೆ ಕಠಿಣ ಎನ್ನಿಸಲಿದೆ.

ಅದರ ಮುಂದಿನ ಪುಟವು ಭಾಷಿಕ ಅಲ್ಪ­ಸಂಖ್ಯಾತರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕೆಂದು ಹೇಳುತ್ತದೆ: ‘೧೯೬೧ರ ಡಿಸೆಂಬರ್ ೨೬ರ ಸರ್ಕಾರಿ ಆದೇಶ ೭೫೮/ಶಿಕ್ಷಣ- ಇದು ಭಾಷಿಕ ಅಲ್ಪಸಂಖ್ಯಾತರ ರಕ್ಷಣೆಗಾಗಿ ಅನೇಕ ನಿಯಮ­ಗಳನ್ನು ರೂಪಿಸಿದೆ. ಭಾಷಿಕ ಅಲ್ಪ­ಸಂಖ್ಯಾತ -ಪ್ರದೇಶದಲ್ಲಿ ದ್ವಿಭಾಷಾ ಅರ್ಜಿನಮೂನೆಗಳು ಸಿಗುವಂತೆ ತತ್‌ಕ್ಷಣದಿಂದಲೇ ಖಾತರಿಪಡಿಸಿಕೊ­ಳ್ಳ­ಬೇಕಾಗಿದೆ’ ಎನ್ನುತ್ತದೆ. ಹೀಗೆ ಮಾಡದೇ ಹೋದರೆ ಬಹುಸಂಸ್ಕೃತಿ, ಬಹುಭಾಷಿಕ ಮತ್ತು ಬಹುತ್ವದ ಸಾಮಾಜಿಕ ರಚನೆಗೆ ಧಕ್ಕೆ ಬರಲಿದೆ ಎಂದು ಎಚ್ಚರಿಸಿದೆ.
ಕೇರಳದಲ್ಲಿರುವ ಭಾಷಿಕ ಅಲ್ಪಸಂಖ್ಯಾತ ರಕ್ಷಣಾ ಕ್ರಮ, ಭಾಷಾ ಅಲ್ಪಸಂಖ್ಯಾತರ ೨೦೦೨ ಶಾಲೆಗಳಿಗೆ ಅನೇಕ ಸವಲತ್ತುಗಳನ್ನು ಪ್ರಕಟಿಸಿದೆ. ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿ­ರು­ವುದನ್ನು ಗಮನಿಸಿದ್ದು, ಅದಕ್ಕಾಗಿ ವಿದ್ಯಾರ್ಥಿಗಳ ಸಂಖ್ಯೆ ಕುರಿತ ನಿಯಮಾ­ವಳಿಗಳಲ್ಲಿ ಸಡಿಲಿಕೆ ಮಾಡಿದೆ. ಪ್ಲಸ್‌ಟೂ ಸೇರುವ ಭಾಷಾ ಅಲ್ಪ­ಸಂಖ್ಯಾತ ವಿದ್ಯಾರ್ಥಿಗಳಿಗೆ ಶೇಕಡ ೫ರಷ್ಟು ಮೀಸಲಾತಿಯನ್ನೂ ಕಲ್ಪಿಸಿದೆ. ಇಂತಹ ಮೀಸ­ಲಾತಿ ವ್ಯವಸ್ಥೆ ಕಾಲೇಜು ಶಿಕ್ಷಣದಲ್ಲೂ ಇದ್ದು ಕಾಸರಗೋಡು ಮತ್ತು ಮಂಜೇಶ್ವರದ ಸರ್ಕಾರಿ ಕಾಲೇಜುಗಳಲ್ಲಿ ಲಭ್ಯ.

ಕನ್ನಡ ಶಾಲೆ: ಮಲಯಾಳಿ ಅಧ್ಯಾಪಕಿ: ಕೇರಳ ಲೋಕಸೇವಾ ಆಯೋಗ ನಡೆಸಿದ ಪ್ರೌಢಶಾಲಾ ಮಟ್ಟದ ಕನ್ನಡ ಮಾಧ್ಯಮದ ಸಹಾಯಕ ಅಧ್ಯಾಪಕ ಹುದ್ದೆಯ ಸಂದರ್ಶನದಲ್ಲಿ ಆಯ್ಕೆ ಆದದ್ದು ಮಲಯಾಳಿ ಅಧ್ಯಾಪಕಿ! ಕನ್ನಡದ ಗಂಧಗಾಳಿ ತಿಳಿಯದ ಅಧ್ಯಾಪಕಿ ತರಗತಿಯಲ್ಲಿ ಮೈಮ್‌ಷೋಗೆ ಮುಂದಾದಾಗ ವಿದ್ಯಾರ್ಥಿಗಳು ಸುಮ್ಮನಿದ್ದರು. ಆನಂತರ ಮಲಯಾಳದಲ್ಲೇ ಪಾಠ-–ಪ್ರವಚನ ಆರಂಭಿಸಿದಾಗ ಪ್ರತಿಭಟಿಸಿ­ದರು. ಹೆತ್ತವರೂ- ಊರವರೂ ಅನ್ಯಾಯದ ವಿರುದ್ಧ ಸಿಡಿದು ನಿಂತರು. ಪರಿಣಾಮ ಆ ಅಧ್ಯಾಪಕಿ ‘ಬ್ಲಾಕ್‌ ರಿಸೋರ್ಸ್ ಸೆಂಟರ್‌’ಗೆ ಎತ್ತಂಗಡಿ. ಕನ್ನಡ ತರಗತಿಗೆ ಮಲಯಾಳ ಅಧ್ಯಾ­ಪಕಿ ನೇಮಕ ಗದ್ದಲ ಎಬ್ಬಿಸಿದಾಗ ಕಾಞಂಗಾಡು ಜಿಲ್ಲಾ ಶಿಕ್ಷಣಾಧಿಕಾರಿಯವರು ನೀಡಿದ ಮಲಯಾಳ ವರದಿ, ಘಟನೆಯ ತೀವ್ರತೆಗೆ ಕನ್ನಡಿ ಹಿಡಿಯುತ್ತದೆ.

ಹೊಸದುರ್ಗ ಸರ್ಕಾರಿ ಪ್ರೌಢಶಾಲೆಗೆ ನೇಮಕಗೊಂಡ ಈ ಅಧ್ಯಾಪಕಿ ತಿರುವನಂತ­ಪುರದವರು. ಪದವಿತನಕ ಕನ್ನಡ ಮಾಧ್ಯಮ­ದಲ್ಲಿ ಓದಿದವರಲ್ಲ. ಸಂದರ್ಶನದ ವೇಳೆ ಸಂದ­ರ್ಶಕರಿಗೆ ತಮ್ಮ ‘ಕನ್ನಡ ಜ್ಞಾನ’ ವನ್ನು ಮನದಟ್ಟು ಮಾಡಿರಬೇಕೆನ್ನಿಸುತ್ತದೆ. ಈಕೆ ಮಲಯಾಳ ಮಾಧ್ಯಮದಲ್ಲಿ ತರಗತಿ ನಿರ್ವಹಿಸುತ್ತಿದ್ದಾರೆ ಎಂಬ ದೂರುಗಳು ಮಕ್ಕಳಿಂದ,  ಹೆತ್ತವರಿಂದ ಮತ್ತು ಕನ್ನಡ ಸಂಘ-–ಸಂಸ್ಥೆಗಳಿಂದ ಬಂದಿದ್ದುವು. ಮಕ್ಕಳು ಇವರ ತರಗತಿಗೆ ಬಹಿಷ್ಕಾರ ಹಾಕುವ ಪರಿಸ್ಥಿತಿ ನಿರ್ಮಾಣ ಆಯಿತು. ಶಾಲೆಗೆ ಭೇಟಿ ನೀಡಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಬಗೆಹರಿಸ­ಲಾಗಿದೆ. ಲೋಕಸೇವಾ ಆಯೋಗ ನಿರ್ದೇಶನ­ದಂತೆ ಶಿಕ್ಷಣ ಉಪನಿರ್ದೇಶಕರು ನೇಮಕ ಮಾಡಿದ ಅಧ್ಯಾಪಕಿ ಇವರಾಗಿದ್ದು, ಈ ವಿಚಾರ­ದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳುವಂತೆ ಶಿಕ್ಷಣ ಉಪನಿರ್ದೇಶಕರಿಗೆ ಮತ್ತು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಲಾಗಿದೆ. ಆಯೋಗ ನೇಮಕ ಮಾಡಿದ ಅಧ್ಯಾಪಕಿ ಆದ ಕಾರಣ ಸೇವೆಯಿಂದ ಕೈಬಿಡುವುದು ಸಾಧ್ಯವಿಲ್ಲ. ಈಕೆಯನ್ನು
ಮಲ­ಯಾಳಂ ಮಾಧ್ಯಮಕ್ಕೆ ವರ್ಗಾಯಿಸಿ, ಕನ್ನಡ ಚೆನ್ನಾಗಿ ಬಲ್ಲ ಅಧ್ಯಾಪಕರನ್ನು ನೇಮಕ ಮಾಡು­ವುದು ಸೂಕ್ತ. ಅಲ್ಲದೆ ಇನ್ನು ಮುಂದೆ ಆಯೋ­ಗವು ಕನ್ನಡ ಮಾಧ್ಯಮ ಅಧ್ಯಾಪಕರ ಹುದ್ದೆಗೆ ಅರ್ಜಿ ಆಹ್ವಾನಿಸುವಾಗ ಎಸ್ಸೆಸ್ಸೆಲ್ಸಿ ಭಾಗ–೧ ಮತ್ತು ೨ರಲ್ಲಿ ಕನ್ನಡ ಕಲಿತವರಾಗಿರಬೇಕು ಎಂಬ ನಿಬಂಧನೆ ಹೇರಬೇಕಾಗಿದೆ ಎಂದು ಜಿಲ್ಲಾ ಶಿಕ್ಷಣಾಧಿಕಾರಿ ತಮ್ಮ ವರದಿಯಲ್ಲಿ ಹೇಳಿ ವರ್ಷವೊಂದು ಉರುಳಿಹೋಗಿದೆ.

ಶಿಕ್ಷಣ ಇಲಾಖೆ ದಿನವೇತನದ ಶಿಕ್ಷಕರನ್ನು ಸೇವೆ­ಯಿಂದ ಕೈಬಿಟ್ಟಿರುವ ಘಟನೆ ಈಗ ಅಧ್ಯಾ­ಪಕರ ಕೊರತೆಗೆ ಕಾರಣವಾ­ಗುತ್ತಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಸಂಕಷ್ಟ ಎದುರಿಸುವಂತಾಗಿದೆ.  ಕೇರಳದ ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ಕಾಸರಗೋಡು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ. ಸರ್ಕಾರಿ ನೇಮಿತ ಶಾಶ್ವತ ಅಧ್ಯಾಪಕರ ಸಂಖ್ಯೆ ಕಡಿಮೆ, ಮೂಲ ಸೌಕರ್ಯದ ಅಭಾವ, ಸಾರಿಗೆ, ವಿದ್ಯುತ್, ವಸತಿ ಇತ್ಯಾದಿ ಸಮಸ್ಯೆಗಳಿವೆ.

ಕೇರಳದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅಂಕಗಳನ್ನು ಬಿಟ್ಟು ಶ್ರೇಣಿ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ. ಕರ್ನಾಟಕ ಸೇರಿದಂತೆ ಇತರ ರಾಜ್ಯಗಳಿಗೆ ಉನ್ನತ ಶಿಕ್ಷಣಕ್ಕೆ ತೆರಳುವ ವಿದ್ಯಾರ್ಥಿಗಳು ಇದರಿಂದ ತೊಂದರೆ ಅನುಭವಿಸುವಂತಾಗಿದೆ. ಇಲ್ಲಿ ಪದವಿ ವಿದ್ಯಾರ್ಥಿ­ಗಳಂತೂ ಶ್ರೇಣಿ ಪ್ರಮಾಣ ಪತ್ರವನ್ನು ನೋಡಿ ಉತ್ತೀರ್ಣ-ಅನುತ್ತೀರ್ಣತೆಯನ್ನು ತಿಳಿಯಲಾರದ ಸ್ಥಿತಿ ತಲುಪಿದ್ದಾರೆ.

ಹಳೆಯ ಅಧ್ಯಾಪಕರು ಉದುರಿಸುತ್ತಿದ್ದ, ‘ನೀವು ಕಲಿತರೆಷ್ಟು ಬಿಟ್ಟರೆಷ್ಟು? ನಮಗೆ ಸರ್ಕಾರ ಸಂಬಳ ಕೊಡುತ್ತದೆ’ ಮುಂತಾದ ಮಾತಿನ ದಿನಮಾನಗಳು ಈಗ ಮುಗಿದು ಹೋಗಿವೆ. ವಿದ್ಯಾರ್ಥಿಗಳನ್ನು ಹುಡುಕಿಕೊಂಡು ಶಾಲೆಗೆ ಕರೆತರಬೇಕಾದ ಪರಿಸ್ಥಿತಿ ಕಾಸರಗೋಡಿಗೆ ಕಾಲಿ­ಟ್ಟಿದೆ. ಶಾಲಾ ಪ್ರವೇಶೋತ್ಸವವನ್ನು ಇದಕ್ಕಾಗಿ ವಿಜೃಂಭಣೆಯಿಂದ ನಡೆಸಬೇಕಾದ ಪರಿಸ್ಥಿತಿ ಇದೆ.

ಕಾಸರಗೋಡಿನಲ್ಲಿ ಕಂಪ್ಯೂಟರ್ ಅಧ್ಯಾಪಕ­ನೊಬ್ಬ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪ್ರಕರಣ ಮತ್ತು ಬದಿಯಡ್ಕ­ದಲ್ಲಿ ಅಧ್ಯಾಪಕನೊಬ್ಬ ವಿದ್ಯಾರ್ಥಿಯ ಮೇಲೆ ಹಿಂಸಾತ್ಮಕ ದೌರ್ಜನ್ಯ ಎಸಗಿದ ಪ್ರಕರಣ ಭಾರೀ ವಿವಾದ ಎಬ್ಬಿಸಿದ್ದೂ ಇದೆ. ಇದಲ್ಲದೆ ಮಾದಕ ದ್ರವ್ಯ ಮಾಫಿಯಾ, ಹೆಣ್ಣುಮಕ್ಕಳ ಕಳ್ಳಸಾಗಾಣಿಕೆ ದಂಧೆ, ಬಾಲ್ಯ ವಿವಾಹ, ಜಾತೀಯವಾದ, ಧಾರ್ಮಿಕ ಅಸಹನೆ ಇತ್ಯಾದಿಗಳ ಕಾರಣ­ದಿಂದಲೂ ಕಾಸರಗೋಡಿನ ಶೈಕ್ಷಣಿಕ ಪರಿಸರ ಕಲುಷಿತಗೊಂಡಿದೆ.

ಆಗೀಗ ಧೂಮಕೇತುಗಳಂತೆ ಅಪ್ಪಳಿಸುವ ಹರತಾಳಗಳಿಂದ ಶೈಕ್ಷಣಿಕ ಬದುಕು ಉಧ್ವಸ್ತ­ಗೊಳ್ಳುತ್ತಿದೆ. ಇದೇ ಕಾರಣಕ್ಕೆ ಮಂಗಳೂರಿನ ಲೋಕಲ್ ರೈಲು ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT