ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇಳದವರಿಗೆ ಧ್ವನಿಯಾಗುತ್ತಾ...

Last Updated 18 ಮೇ 2015, 19:30 IST
ಅಕ್ಷರ ಗಾತ್ರ

‘ನಾನು ಪ್ರಾಥಮಿಕ ಶಾಲೆಯಲ್ಲಿದ್ದಾಗ ಶಿಕ್ಷಕರು ನನಗೆ ಪ್ರಶ್ನೆಯೊಂದನ್ನು ಕೇಳಿದರು. ಪದೇ ಪದೇ ಪ್ರಶ್ನಿಸುತ್ತಿ ದ್ದರೂ ಅದರ ಅರಿವಿಲ್ಲದೇ ಕುಳಿತಿದ್ದ ನನ್ನ ನೆರವಿಗೆ ಬಂದ ಗೆಳತಿಯೊಬ್ಬಳು, ಚೀಟಿಯಲ್ಲಿ ಆ ಪ್ರಶ್ನೆಯನ್ನು ಬರೆದು ತೋರಿಸಿದಳು. ಆಗ ನಾನು ಉತ್ತರಿಸಲು ಪ್ರಾರಂಭಿಸಿದೆ.

ಅಷ್ಟರಲ್ಲಾಗಲೇ ಶಿಕ್ಷಕರು ಹಿಂದೆ ಕೇಳಿದ್ದ ಪ್ರಶ್ನೆಯನ್ನು ಬದಲಾಯಿಸಿ, ಬೇರೊಂದು ಪ್ರಶ್ನೆ ಕೇಳಿದ್ದರು. ಅದನ್ನು ಅರಿಯದೆ ಮೊದಲಿನ ಉತ್ತರವನ್ನೇ ಮುಂದುವರಿಸಿದ್ದೆ. ಇದರಿಂದ ಕೆರಳಿದ ಶಿಕ್ಷಕರು  ಬೈಯಲು ಪ್ರಾರಂಭಿಸಿದರು. ಅವಮಾನದಿಂದ ಕುಗ್ಗಿಹೋದ ನನ್ನನ್ನು ತರಗತಿಯಿಂದ ಹೋರಹೋಗುವಂತೆ ತಿಳಿಸಿದರು...’

ಹೀಗೆ ಶ್ರವಣದೋಷ ಇರುವ ವ್ಯಕ್ತಿಯೊಬ್ಬರು ತಮ್ಮ ಅನುಭವವನ್ನು, ಧ್ವನಿ ಕೇಳಿಸದವರಿಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಾಗಾರದಲ್ಲಿ ವಿವರಿಸುತ್ತಿದ್ದರು. ಅದನ್ನು ಕೇಳಿ ಸಭೆಯಲ್ಲಿದ್ದವರ ಮನ ಕಲಕಿತು. ಹೌದು, ಧ್ವನಿ ಕೇಳಿಸದವರದು ಒಂದು ರೀತಿಯ ವಿಶಿಷ್ಟ ಸಮಸ್ಯೆ. ಸಾಮಾನ್ಯವಾಗಿ ಶೇ 90ರಷ್ಟು ಧ್ವನಿ ಕೇಳಿ ಸದವರಿಗೂ ಇತರ ಯಾವುದೇ ನ್ಯೂನತೆ ಇರುವುದಿಲ್ಲ.

ಅವರಿಗೆ ಸಾಮಾನ್ಯರಷ್ಟು ಅಥವಾ ಅದಕ್ಕಿಂತಲೂ ಹೆಚ್ಚು ಬುದ್ಧಿಶಕ್ತಿ ಇರುತ್ತದೆ. ಆದರೂ ಇತರರು ಅವರೊಂದಿಗೆ ಒಡನಾಡುವ ಕೌಶಲ, ಸೂಕ್ಷ್ಮತೆ ತಿಳಿಯದ ಕಾರಣ ಶ್ರವಣ ಸಮಸ್ಯೆ ಇರುವವರು ಅನೇಕ ಸಮಸ್ಯೆಗಳನ್ನು ಎದುರಿಸು ತ್ತಾರೆ. ಅವರು ಹೋರ ನೋಟಕ್ಕೆ ಯಾವುದೇ ನ್ಯೂನತೆ ಇರುವವರಂತೆ ಕಾಣದೇ ಇದ್ದರೂ, ಪರಿಸರದಲ್ಲಾಗುವ ಚಟುವಟಿಕೆಗಳ ಅರಿವಾಗದೆ ಸಾಮಾಜಿಕ ಮತ್ತು ಭಾವ ನಾತ್ಮಕ ಸಂಘರ್ಷಗಳಿಗೆ ಒಳಗಾಗಿ ಒಂಟಿತನ, ನೋವು, ಆಘಾತ  ಎದುರಿಸುತ್ತಾರೆ.

ಶ್ರವಣ ಸಮಸ್ಯೆ ಇರುವ ಶೇ 90ರಷ್ಟು ಮಂದಿ ಶ್ರವಣ ದೋಷ ಇರದ ಸಾಮಾನ್ಯ ಪೋಷಕರಿಗೆ ಜನಿಸಿರುತ್ತಾರೆ. ಹೀಗಾಗಿ ಧ್ವನಿ ಕೇಳಿಸದವರ ಸಮಸ್ಯೆ ತಿಳಿಯದ ತಂದೆ-ತಾಯಿ ತಮ್ಮ ಮಗುವಿಗೆ ಆ ರೀತಿ ಆಗಿರುವುದನ್ನು ಗುರುತಿಸಿ, ಒಪ್ಪಿಕೊಂಡು,  ಪೂರಕವಾದ ಕ್ರಮಗಳನ್ನು ತೆಗೆದುಕೊಳ್ಳುವುದು ನಿಜಕ್ಕೂ ಸವಾಲಿನ ಸಂಗತಿ.

ತಜ್ಞರ ಪ್ರಕಾರ, ಮಗು ಹುಟ್ಟಿದ ಮೂರು ವರ್ಷದೊಳಗೆ ಎಷ್ಟು ಸಾಧ್ಯವೋ ಅಷ್ಟು ತುರ್ತಾಗಿ ಅದರ ಶ್ರವಣ ನ್ಯೂನತೆಯ ಮಟ್ಟವನ್ನು ತಜ್ಞ ವೈದ್ಯರಿಂದ ಗುರುತಿಸಿ, ಪೂರಕವಾದ ಸಾಧನವನ್ನು ಅಳವಡಿಸಿದರೆ ಮಗು ಪರಿಸರಕ್ಕೆ ಹೊಂದಿಕೊಳ್ಳಲು, ಇತರರೊಂದಿಗೆ ಬೆರೆಯಲು ಅನುಕೂಲವಾಗುತ್ತದೆ. ನಮ್ಮ ಎಷ್ಟು ಪೋಷಕರಿಗೆ ಇದು ಸಾಧ್ಯವಾಗುತ್ತದೆ ಎಂಬುದೇ ಪ್ರಶ್ನೆ.

ಶ್ರವಣ ದೋಷದ ಮಗುವನ್ನು ಪೋಷಕರು  ಸಾಮಾನ್ಯ ಮಗುವಿನಂತೆ ಪರಿಗಣಿಸಿ, ಬೆಳೆಸುವುದು ಪ್ರಮುಖ ಅಂಶ. ಅವರೊಂದಿಗೆ ‘ಸಂವಹನ’ ನಡೆಸು ವುದೇ ಮುಖ್ಯವಾದ ಸಮಸ್ಯೆ. ಇಂತಹ ಮಕ್ಕಳೊಂದಿಗೆ ಒಡನಾಡುವ ಪೋಷಕರಿಗೆ ಸಂಜ್ಞೆ ಭಾಷೆಯ ಅರಿವಿದ್ದರೆ ಒಳಿತು.

ಇನ್ನು ತೊಂದರೆಯಿರುವ ಮಗುವಿಗೆ ಇತರ ರೊಂದಿಗೆ ಸಂವಹನ ಮಾಡಲು ಆರಂಭದಲ್ಲಿ ಸಂಜ್ಞೆ ಭಾಷೆಯ ಜೊತೆಗೆ ಶಾಬ್ದಿಕ ಭಾಷೆಯನ್ನು ಕಲಿಸಲು ಪ್ರಾರಂ ಭಿಸಿದರೆ ಪರಿಣಾಮಕಾರಿ ಆಗುತ್ತದೆ. ಕುಟುಂಬದ ಸದಸ್ಯ ರೆಲ್ಲರೂ ಮಗುವಿನೊಂದಿಗೆ ಆಟ, ಪಾಠದ ಮೂಲಕ ಒಡನಾಡುವ ಪ್ರಸಂಗಗಳು ಶ್ರವಣ ದೋಷದ ಮಕ್ಕಳಲ್ಲಿ ಹೆಚ್ಚಿನ ಆತ್ಮವಿಶ್ವಾಸ ಮೂಡಿಸಬಲ್ಲವು.

ತಜ್ಞರ ಪ್ರಕಾರ, ಶ್ರವಣ ದೋಷ ಅಥವಾ ಇತರ ಯಾವುದೇ ನ್ಯೂನತೆಯಿರುವ ಮಕ್ಕಳಿಗೆ ಸಾಮಾನ್ಯ ಶಾಲೆಗಳಲ್ಲಿ ಕಲಿಸಿದರೆ ಹೆಚ್ಚು ಪರಿಣಾಮಕಾರಿ ಆಗುತ್ತದೆ. ಸಮಸ್ಯೆ ಇರುವ ಮಕ್ಕಳು ಇತರ ಮಕ್ಕಳೊಂದಿಗೆ ಆಟ, ಪಾಠಗಳಂತಹ ಸಹಜ ಚಟುವಟಿಕೆಗಳ ಮೂಲಕ ಬೆಳೆಯುವುದರಿಂದ ಅವರಿಗೆ ವಿಶೇಷ ಶಾಲೆಗಳಲ್ಲಿ ದೊರೆ ಯದ ಸಾಮಾಜೀಕರಣದ ಕೌಶಲಗಳು ದೊರೆತು, ಸಮಾಜದ ಮುಖ್ಯವಾಹಿನಿಯಲ್ಲಿ ಒಂದಾಗಲು ಅವಕಾಶವಾಗು ತ್ತದೆ.

ಆದರೆ, ಅವರು ಇತರ ಮಕ್ಕಳ ಅವಹೇಳನಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಇದಕ್ಕಾಗಿ ಶಿಕ್ಷಕರು ಹಾಗೂ ಶಾಲೆಯ ಇತರ ಮಕ್ಕಳಿಗೆ ಸೂಕ್ತ ತಿಳಿವಳಿಕೆ, ಸೂಕ್ಷ್ಮ ಮನೋಭಾವ ಮೂಡಿಸಲು ಸಾಮೂಹಿಕ ಅರಿವಿನ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬೇಕು.

ಕೆಲವೊಮ್ಮೆ ಕುಟುಂಬದಲ್ಲಿ ಮಕ್ಕಳಿಗಿರುವ ಶ್ರವಣ ನ್ಯೂನತೆಯ ಪ್ರಮಾಣ ಗಮನಕ್ಕೆ ಬಾರದೇ ಹೋಗ ಬಹುದು ಅಥವಾ ಬಂದರೂ ಯಾವುದೇ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳದೇ ಇರಬಹುದು. ಇಂತಹ ಸನ್ನಿವೇಶಗಳಲ್ಲಿ ಶಾಲೆಗಳಲ್ಲಿ ಆಯೋಜಿಸುವ ವೈದ್ಯಕೀಯ ಶಿಬಿರಗಳಲ್ಲಿ ಮಕ್ಕಳ ಸಮಸ್ಯೆಯ ಪ್ರಮಾಣ ತಿಳಿದು, ಅದಕ್ಕೆ ತಕ್ಕಂತಹ ಸಾಧನ ಹಾಗೂ ಇತರ ಪೂರಕ ಕ್ರಮಗಳನ್ನು ತೆಗೆದುಕೊಳ್ಳುವ ಹೊಣೆ ಶಿಕ್ಷಕರ ಮೇಲಿರುತ್ತದೆ.

ಅಂತಹ ಮಕ್ಕಳನ್ನು ತರಗತಿಯ ಮುಂದಿನ ಸಾಲಿನಲ್ಲಿ ಕೂರಿಸು ವುದು, ಬೋಧನೆಯಲ್ಲಿ ಹೆಚ್ಚು ಪಾಠೋಪಕರಣಗಳನ್ನು ಬಳಸುವುದು, ಅವರೊಂದಿಗೆ ಇತರ ಮಕ್ಕಳು ಸಹಜ ವಾಗಿ ಬೆರೆಯುವಂತೆ ನೋಡಿಕೊಳ್ಳುವುದು, ಶ್ರವಣ ದೋಷವಿರುವ ಮಕ್ಕಳ ಕಲಿಕೆಯ ಮೌಲ್ಯಮಾಪನದ ಸಂದರ್ಭದಲ್ಲಿ ಬಾಯ್ದೆರೆ ಪರೀಕ್ಷೆಯ ಬದಲು ಬರವಣಿಗೆ ಅಥವಾ ಸಂಜ್ಞೆ ಬಳಕೆಯ ಪರೀಕ್ಷೆಗಳನ್ನು ಬಳಸುವುದು ಪರಿಣಾಮಕಾರಿಯಾಗುತ್ತದೆ.

ಮಕ್ಕಳೊಂದಿಗೆ ಆತ್ಮೀಯ ವಾಗಿ ಒಡನಾಡುವ ಹಾಗೂ ಸೂಕ್ಷ್ಮ ಸಂವೇದನೆ ಹೊಂದಿ ರುವ ಶಿಕ್ಷಕರು ಮಕ್ಕಳ ಅಸಹಜ ವರ್ತನೆಯನ್ನು ಗಮನಿಸಿ ಪರಿಹಾರಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಇಂತಹ ಮನೋಭಾವವನ್ನು ಎಲ್ಲ ಶಿಕ್ಷಕರೂ ಬೆಳೆಸಿಕೊಳ್ಳಬೇಕು. ಶ್ರವಣ ಸಮಸ್ಯೆಯು ಅತಿ ಗಂಭೀರವಾದ ಸಮಸ್ಯೆಯಲ್ಲ. ಅನೇಕರು ಭಾವಿಸಿರುವಂತೆ ಅದೊಂದು ಕಲಿಕಾ ನ್ಯೂನತೆಯೂ ಅಲ್ಲ.

ಕೇಳಿಸಿಕೊಳ್ಳುವಿಕೆಯ ನಾಶ, ಕೊರ ತೆಗೆ ಸಾಧನದ ನೆರವು ಅಥವಾ ಸಂಜ್ಞೆ ಭಾಷೆಯ ನೆರ ವನ್ನು ಹೊಂದಿದರೆ ಅವರು ಸಾಮಾನ್ಯರಂತೆಯೇ ಜೀವನ ನಿರ್ವಹಿಸಲು ಸಾಧ್ಯ. ಈ ಹಿನ್ನೆಲೆಯಲ್ಲಿ ಅಂತಹ  ಮಕ್ಕ ಳನ್ನು ಗುರುತಿಸಿ, ನ್ಯೂನತೆಗೆ ತಕ್ಕಂತಹ ಸಾಧನ ಪೂರೈ ವುದರ ಜತೆಗೆ ಪೋಷಕರು, ಶಿಕ್ಷಕರು, ಓರಗೆಯ ಇತರ ಸಾಮಾನ್ಯ ಮಕ್ಕಳಿಗೆ ಸಂಜ್ಞೆ ಭಾಷೆ ಕುರಿತು ತಿಳಿವಳಿಕೆ ನೀಡುವ ಕ್ರಮಗಳನ್ನು ಪರಿಣಾಮಕಾರಿ ಆಗಿಸಬೇಕಿದೆ.

ಸಾಮಾನ್ಯರಿಗೆ ಅಥವಾ ಸಮಸ್ಯೆಯಿರುವ ಯಾರಿಗೇ ಆಗಲಿ ತಮಗೆ ಅವಶ್ಯವಾದ ಬೆಂಬಲ ಅಥವಾ ಸಹಾಯ ವನ್ನು ಹೊಂದುವ ಹಕ್ಕಿದೆ. ಈ ನಿಟ್ಟಿನಲ್ಲಿ, ಶ್ರವಣ ದೋಷದ ವ್ಯಕ್ತಿಗಳು ಮತ್ತು ಅವರ ಪೋಷಕರು ತಮಗೆ ಬೇಕಾದ ಅನುಕೂಲ,  ಬೆಂಬಲವನ್ನು ಹೊಂದಲು ಧ್ವನಿ ಯೆತ್ತಬೇಕಿದೆ.

ತಮಗಿರುವ ಸೌಲಭ್ಯಗಳ ಬಗ್ಗೆ ಅರಿವು ಹೊಂದಿ, ಅಡಚಣೆಗಳನ್ನು ನಿವಾರಿಸಿಕೊಂಡು, ಸೌಲಭ್ಯ ಪೂರ್ಣ ಬದುಕು ಹೊಂದಲು ಶ್ರಮಿಸಬೇಕಾಗಿದೆ. ಅದೇ ರೀತಿ ಸಾಮಾನ್ಯರೂ ಶ್ರವಣ ಸಮಸ್ಯೆಯಿರುವ ವ್ಯಕ್ತಿಗಳ, ಮಕ್ಕಳ ತೊಂದರೆಗಳನ್ನು ಅರ್ಥ ಮಾಡಿಕೊಂಡು, ಅವರಿಗೆ ಅನುಕೂಲ ಕಲ್ಪಿಸುವತ್ತ ಸ್ಪಂದಿಸಬೇಕು.

ಧ್ವನಿ ಕೇಳಿಸದವರ ಕುರಿತಾದ ನಮ್ಮ ಮನೋಭಾವ ಹಾಗೂ ಗ್ರಹಿಕೆಗಳಲ್ಲಿ ಧನಾತ್ಮಕ ಮಾರ್ಪಾಡಾಗಿ, ಅವರಿಗೆ ಅಗತ್ಯವಾದ ಬೆಂಬಲವನ್ನು ಒದಗಿಸಬೇಕಾಗಿದೆ. ಧ್ವನಿ ಕೇಳಿಸದವರಿಗೆ ಧ್ವನಿಯಾಗುವತ್ತ ನಾಗರಿಕ ಸಮಾಜ ಹೆಜ್ಜೆ ಇಡಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT