ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಲೆಸ್ಟರಾಲ್ ಬಗ್ಗೆ ನಿಮಗೆಷ್ಟು ಗೊತ್ತು?

Last Updated 24 ಜುಲೈ 2015, 19:54 IST
ಅಕ್ಷರ ಗಾತ್ರ

ಇತ್ತೀಚಿನ ದಿನಗಳಲ್ಲಿ ಬದಲಾದ ಜೀವನಶೈಲಿ ಮತ್ತು ಒತ್ತಡದ ಬದುಕಿನಿಂದ ಮಧುಮೇಹ, ಹೃದ್ರೋಗ ಮತ್ತು ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಹೆಚ್ಚುತ್ತಿವೆ. ಒಂದೊಮ್ಮೆ ಐವತ್ತು – ಅರವತ್ತು ದಾಟಿದವರಲ್ಲಿ ಮಾತ್ರ ಕಾಣಿಸುತ್ತಿದ್ದ ಈ ಕಾಯಿಲೆಗಳು ಇಂದು ಯುವಜನತೆಯನ್ನೂ ಆವಾಹಿಸಿಕೊಳ್ಳುತ್ತಿರುವುದರಿಂದ, ಇದರ ಬಗ್ಗೆ ಎಲ್ಲ ವರ್ಗದವರಿಗೂ ಅರಿವು ಅಗತ್ಯ.

ಮಧುಮೇಹ ಮತ್ತು ಹೃದ್ರೋಗಗಳಿಗೆ ಮೂಲ ಕಾರಣವೇನೆಂದು ಹುಡುಕಿದಾಗ ನಮ್ಮ ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಶೇಖರಣೆಯಾದ ಕೊಬ್ಬು ಎಂದು ತಿಳಿದು ಬಂದಿದೆ. ದೇಹದಲ್ಲಿ ಅತಿಯಾದ ಕೊಬ್ಬು ಒಮ್ಮೆಗೆ ಶೇಖರಣೆಯಾಗುವುದು ಅಸಾಧ್ಯ. ಇದು ವರ್ಷಾನುವರ್ಷಗಳಲ್ಲಿ ನಡೆಯುವ ಪ್ರಕ್ರಿಯೆ. ಹೀಗೆ ಶೇಖರಣೆಯಾದ ಕೊಬ್ಬು ರಕ್ತನಾಳಗಳಲ್ಲಿ ಸೇರಿಕೊಂಡು ಅನಾಹುತಗಳಿಗೆ ದಾರಿ ಮಾಡಿಕೊಡುತ್ತದೆ. ಆದ್ದರಿಂದ, ಆಗಾಗ ರಕ್ತಪರೀಕ್ಷೆ ಮಾಡಿಸಿ ಕೊಬ್ಬಿನಂಶ ಎಷ್ಟಿದೆಯೆಂದು ತಿಳಿದುಕೊಳ್ಳುವುದು ಅವಶ್ಯ. WHO ಸಲಹೆಯ ಪ್ರಕಾರ ಮೂವತ್ತೈದು ದಾಟಿದ ಪುರುಷರು ಮತ್ತು ನಲ್ವತ್ತೈದು ದಾಟಿದ ಮಹಿಳೆಯರಲ್ಲಿ ರಕ್ತದಲ್ಲಿನ ಕೊಬ್ಬಿನಂಶ ಪತ್ತೆಹಚ್ಚುವ ಪರೀಕ್ಷೆಗಳು (Lipid profile) ಅತ್ಯವಶ್ಯ.

ಈ ಪರೀಕ್ಷೆಗಳು ಆ ವ್ಯಕ್ತಿಗೆ ಮುಂದೊಂದು ದಿನ ಮಧುಮೇಹ ಅಥವಾ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳು ಬರವ ಸಂಭವಗಳೇನು ಎಂದು ತಿಳಿದುಕೊಳ್ಳಲು ಸಹಾಯಕ. ರಕ್ತದಲ್ಲಿ ಲಿಪಿಡ್‌ ಪ್ರೊಫೈಲ್‌ ಮಾಡಿಸಿದಾಗ ಈ ಅಂಶಗಳನ್ನು ಪರೀಕ್ಷಿಸಲಾಗುತ್ತದೆ.
* ಸಂಪೂರ್ಣ ಕೊಲೆಸ್ಟರಾಲ್‌ನ ಅಂಶ (Total Cholesterol)
* ಕೊಲೆಸ್ಟರಾಲ್‌ ಅಂಶ (ಕೆಟ್ಟ /ಬ್ಯಾಡ್‌ ಕೊಲೆಸ್ಟರಾಲ್‌)
* ಕೊಲೆಸ್ಟರಾಲ್‌ ಅಂಶ (ಒಳ್ಳೆಯ/ ಗುಡ್‌ ಕೊಲೆಸ್ಟರಾಲ್‌)
* ಟ್ರೈಗ್ಲಿಸರೈಡ್‌ (Triglyceride)
ಎಲ್‌ಡಿಎಲ್‌ ಕೊಲೆಸ್ಟರಾಲ್‌ ಅನ್ನು ಕೆಟ್ಟ ಕೊಲೆಸ್ಟರಾಲ್‌ ಎನ್ನಲಾಗಿದ್ದು, ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಾದಷ್ಟೂ, ಹೃದ್ರೋಗ ಮತ್ತು ಸಂಬಂಧಪಟ್ಟ ಕಾಯಿಲೆಗಳ ಪ್ರಮಾಣ ಹೆಚ್ಚುವುದು ದೃಢಪಟ್ಟಿದೆ. ಎಚ್‌ಡಿಎಲ್‌ ಕೊಲೆಸ್ಟರಾಲ್‌ ಅನ್ನು ಒಳ್ಳೆಯ ಕೊಲೆಸ್ಟರಾಲ್‌ ಎನ್ನಲಾಗಿದ್ದು, ರಕ್ತದಲ್ಲಿ ಇದರ ಪ್ರಮಾಣ ಹೆಚ್ಚಾದಷ್ಟೂ ಮಧುಮೇಹ, ಹೃದ್ರೋಗದಂತಹ ಕಾಯಿಲೆಗಳಿಂದ ರಕ್ಷಣೆ ದೊರಕುವುದು ಸಂಶೋಧನೆಗಳಿಂದ ದೃಢಪಟ್ಟಿದೆ. ಆದ್ದರಿಂದ ವೈದ್ಯರು ರಕ್ತದಲ್ಲಿ ಎಲ್‌ಡಿಎಲ್‌ ಮತ್ತು ಎಚ್‌ಡಿಎಲ್‌ ಯಾವ ಪ್ರಮಾಣದಲ್ಲಿವೆ ಎನ್ನುವುದನ್ನು ಪರೀಕ್ಷಿಸಲು ಲಿಪಿಡ್ ಪ್ರೊಫೈಲ್‌ನ ಮೊರೆ ಹೋಗುತ್ತಾರೆ.

ಅಮೆರಿಕದ ಪ್ರತಿಷ್ಠಿತ ಸಂಸ್ಥೆ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಹೆಲ್ತ್ (National Institute of Health–NIH ), 1980 ರಿಂದ ನ್ಯಾಷನಲ್‌ ಕೊಲೆಸ್ಟರಾಲ್‌ ಎಜುಕೇಷನ್‌ ಪ್ರೋಗ್ರಾಮ್‌ (NCEP) ಎಂಬ ಕಾರ್ಯಕ್ರಮ ನಡೆಸುತ್ತಿದ್ದು, ಕೊಲೆಸ್ಟರಾಲ್‌ ಮತ್ತು ಕೊಬ್ಬಿನಂಶಕ್ಕೆ ಸಂಬಂಧಪಟ್ಟ ಅಂಶಗಳಿಂದ ಉದ್ಭವಿಸಬಹುದಾದ ಹೃದಯಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ನಿಭಾಯಿಸುವುದರ ಬಗ್ಗೆ ತಿಳಿದುಕೊಳ್ಳುವ ಕಾರ್ಯಕ್ರಮವಾಗಿದೆ. ಈ ಕಾರ್ಯಕ್ರಮದ ಮೂರನೇ ವರದಿ 2002 ರಲ್ಲಿ ಪ್ರಕಟವಾಗಿದ್ದು, ಅದರಲ್ಲಿ ಕೊಲೆಸ್ಟರಲ್‌, ಅದರಲ್ಲೂ ಎಲ್‌ಡಿಎಲ್‌/ ಕೆಟ್ಟ/ ಬ್ಯಾಡ್‌ ಕೊಲೆಸ್ಟರಾಲ್‌ನಿಂದ ಉಂಟಾಗಬಹುದಾದ ಹಾನಿಗಳು ಮತ್ತು ಅದನ್ನು ನಿಯಂತ್ರಿಸುವುದರಿಂದ ದೊರಕುವ ಪ್ರಯೋಜನಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ವರದಿಯ ಪ್ರಕಾರ ಲಿಪಿಡ್‌ ಪ್ರೊಫೈಲ್‌ನ ಅಂಶಗಳು ಹೇಗಿದ್ದರೆ ಉತ್ತಮ ಮತ್ತು ಯಾವ ಹಂತದಲ್ಲಿ ಹಾನಿಯುಂಟು ಮಾಡುತ್ತವೆ ಎಂದು ತಿಳಿಸಲಾಗಿದೆ. ಆ ವಿವರಗಳನ್ನು ಟೇಬಲ್‌ನಲ್ಲಿ ಗಮನಿಸಿ.

ಎಲ್‌ಡಿಎಲ್‌ನ ಪ್ರಮಾಣ ಸಾಮಾನ್ಯವಾಗಿ ಇರಬೇಕಾಗಿದ್ದಕ್ಕಿಂತ ಹೆಚ್ಚಿದ್ದು ಎಚ್‌ಡಿಎಲ್‌ನ ಪ್ರಮಾಣ ಅಗತ್ಯಕ್ಕಿಂತ ಕಡಿಮೆಯಾದರೆ ವೈದ್ಯರು ಆಹಾರದ ಮೇಲೆ ನಿಗಾ ಇಡುವಂತೆ ಸೂಚಿಸುತ್ತಾರೆ. ನಲವತ್ತೈದು ದಾಟಿದ ಪುರುಷ ಅಥವಾ ಐವತ್ತೈದು ದಾಟಿದ ಮಹಿಳೆಯರಲ್ಲಿ ಎಲ್‌ಡಿಎಲ್‌ ಮತ್ತು ಎಚ್‌ಡಿಎಲ್‌ಗೆ ಸಂಬಂಧಪಟ್ಟ ಬದಲಾವಣೆಗಳ ಜೊತೆಗೆ ರೋಗಿ ಸಿಗರೇಟ್‌ ಸೇವಿಸುತ್ತಿದ್ದು ರಕ್ತದೊತ್ತಡ ಮತ್ತು ಕುಟುಂಬದಲ್ಲಿ ಯಾರಿಗಾದರೂ ಹೃದ್ರೋಗಕ್ಕೆ ಸಂಬಂಧಪಟ್ಟ ಕಾಯಿಲೆಗಳಿದ್ದರೆ ವೈದ್ಯರು ಹೆಚ್ಚು ಜಾಗರೂಕರಾಗಿರುವಂತೆ ಸೂಚಿಸುತ್ತಾರೆ. ಎಲ್‌ಡಿಎಲ್‌ಅನ್ನು ಹತೋಟಿಗೆ ತರಲು ಜೊತೆಗೆ ಎಚ್‌ಡಿಎಲ್‌ ಪ್ರಮಾಣ ವೃದ್ಧಿಸಲು ಆಹಾರ ಮತ್ತು ಜೀವನ ಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳಲು ಸೂಚಿಸಲಾಗುತ್ತದೆ. ಅವುಗಳೆಂದರೆ...

1) ತೂಕ ಹೆಚ್ಚಿದ್ದರೆ ಕಡಿಮೆ ಮಾಡಿಕೊಳ್ಳುವುದು.

2) ಉತ್ತಮ ಆಹಾರ ಕ್ರಮಗಳನ್ನು ರೂಢಿಸಿಕೊಳ್ಳುವುದು.
ನಾವು ಸೇವಿಸುವ ವಿಧ ವಿಧವಾದ ಆಹಾರಗಳಲ್ಲಿ ಸ್ಯಾಚುರೇಟೆಡ್‌ ಮತ್ತು  ಅನ್‌ಸ್ಸಾಚುರೇಟೆಡ್‌ (Saturated and Unsaturated) ಎಂಬ ಎರಡು ವಿವಿಧ ಕೊಬ್ಬು/ ಜಿಡ್ಡಿನಂಶಗಳಿರುತ್ತವೆ. ಸ್ಯಾಚುರೇಟೆಡ್‌ ಅಂಶಗಳು ಹೆಚ್ಚಿರುವ ಮಾಂಸ, ಬೆಣ್ಣೆ, ತುಪ್ಪ, ಚೀಸ್‌ ಇನ್ನಿತರ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಎಲ್‌ಡಿಎಲ್‌ನ ಅಂಶ ಹೆಚ್ಚಾಗಿ ಎಚ್‌ಡಿಎಲ್‌ನ ಅಂಶ ಕಡಿಮೆಯಾಗುತ್ತದೆಯೆಂದು ದೃಢಪಟ್ಟಿದೆ. ಅದೇ ರೀತಿ ಅನ್‌ಸ್ಸಾಚುರೇಟೆಡ್‌ ಅಂಶಗಳು ಹೆಚ್ಚಿರುವ ಆಹಾರಗಳಾದ ಮೀನು, ಬಾದಾಮಿ, ವಾಲ್ನಟ್‌ (ದಿನಕ್ಕೆ 6–8) ಅವಕೆಡೊ, ಆಲಿವ್‌ ಎಣ್ಣೆ, ಸೂರ್ಯಕಾಂತಿ, ಕಡಲೆಕಾಯಿ ಎಣ್ಣೆ, ಕೆನೊಲಾ/ ಕಾರ್ನ್‌ ಎಣ್ಣೆ ಸೇವಿಸುವುದರಿಂದ ಎಲ್‌ಡಿಎಲ್‌ನ ಪ್ರಮಾಣ ತಗ್ಗಿ ಎಚ್‌ಡಿಎಲ್‌ನ ಪ್ರಮಾಣ ವೃದ್ಧಿಸುವುದು ದೃಢಪಟ್ಟಿದೆ.

ಕೊಲೆಸ್ಟರಾಲ್‌ ಹೆಚ್ಚಿರುವ ಆಹಾರಗಳಾದ ಮೊಟ್ಟೆಯ ಹಳದಿ ಭಾಗ, ಮಾಂಸದ ಸೇವನೆ ನಿಯಂತ್ರಿಸುವುದು, ಹೆಚ್ಚು ಹೆಚ್ಚು ಹಣ್ಣು, ತರಕಾರಿಗಳ ಸೇವನೆ, ಆರೋಗ್ಯಕ್ಕೆ ಮಾರಕವಾದ ಅಂಶಗಳನ್ನುಳ್ಳ ಆಹಾರಗಳಾದ ಬೇಕರಿ ಉತ್ಪನ್ನಗಳು, ಪ್ಯಾಕ್‌ ಮಾಡಿದ ತಿಂಡಿ ತಿನಿಸುಗಳ ನಿಯಂತ್ರಣದಿಂದ ಎಚ್‌ಡಿಎಲ್‌ನ ಪ್ರಮಾಣ ಹೆಚ್ಚಿಸುವುದು.

3) ವ್ಯಾಯಾಮ ಯಾವುದೇ ವ್ಯಕ್ತಿ ಗಂಭೀರ ಕಾಯಿಲೆಗಳಿಲ್ಲದೆ, ವ್ಯಾಯಾಮ ಮಾಡಲು ಶಕ್ತನಾಗಿದ್ದರೆ ಪ್ರತಿ ದಿನ ಮೂವತ್ತು ನಿಮಿಷ ವ್ಯಾಯಾಮ ಮಾಡುವುದರಿಂದ ಎಚ್‌ಡಿಎಲ್‌ನ ಪ್ರಮಾಣ ಹೆಚ್ಚಿಸಬಹುದು.

4) ಸಿಗರೇಟ್‌ ಸೇವನೆ ಎಲ್‌ಡಿಎಲ್‌ ಪ್ರಮಾಣ ಹೆಚ್ಚಿಸುತ್ತದೆ ಆದ್ದರಿಂದ, ಅದನ್ನು ತ್ಯಜಿಸುವುದರಿಂದ ಎಚ್‌ಡಿಎಲ್‌ ಪ್ರಮಾಣವನ್ನು ಹೆಚ್ಚಿಸಬಹುದೆಂದು ಸಂಶೋಧನೆಗಳಿಂದ ದೃಢಪಟ್ಟಿದೆ.

5) ಮದ್ಯಪಾನ ತ್ಯಜಿಸುವುರಿಂದಲೂ ಎಲ್‌ಡಿಎಲ್‌ನ ಪ್ರಮಾಣವನ್ನು ಹತೋಟಿಗೆ ತರಬಹುದೆಂದು ತಿಳಿಯಲಾಗಿದೆ. ಮಧುಮೇಹ, ಥೈರಾಯ್ಡ್ ಸಮಸ್ಯೆ, ಯಕೃತ್ತಿನ ಸಮಸ್ಯೆ, ಮೂತ್ರಪಿಂಡದ ಕಾಯಿಲೆ ಮತ್ತು ಕೆಲವೊಂದು ಆರೋಗ್ಯ ಸಮಸ್ಯಗಳಿಗೆ ಸ್ಟೆರಾಯ್ಡ್ ತೆಗೆದುಕೊಳ್ಳುವುದರಲ್ಲಿಯೂ ಎಲ್‌ಡಿಎಲ್‌ನ ಪ್ರಮಾಣ ಅಗತ್ಯಕ್ಕಿಂತ ಹೆಚ್ಚಾಗಿರುತ್ತದೆ. ಅಂತಹವರು ವೈದ್ಯರ ಸಲಹೆಯ ಮೇರೆಗೆ ನಡೆದುಕೊಳ್ಳುವುದು ಉತ್ತಮ.

ಕೊಲೆಸ್ಟರಾಲ್‌ ನಮ್ಮ ದೇಹಕ್ಕೆ ಅತ್ಯವಶ್ಯ ಅಂತ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಹಾರ್ಮೋನುಗಳು ಮತ್ತು ಇನ್ನಿತರ ಕಾರ್ಯಗಳಿಗೆ ಕೊಲೆಸ್ಟರಾಲ್‌ ಬೇಕೇಬೇಕು. ಆದರೆ ಅತಿಯಾದರೆ ಅಮೃತವೂ ವಿಷದಂತೆ ದೇಹದ ಅಗತ್ಯಗಳಿಗಿಂತ ಹೆಚ್ಚಿನ ಪ್ರಮಾಣದಲ್ಲಿ ಕೊಲೆಸ್ಟರಾಲ್‌ ಅದರಲ್ಲೂ ಎಲ್‌ಡಿಎಲ್‌ ಕೊಲೆಸ್ಟರಾಲ್‌ ಶೇಖರಣೆಯಾದರೆ ಎಲ್ಲ ತೊದರೆಗಳಿಗೆ ದಾರಿ ಮಾಡಿಕೊಡುವಂತೆ. ಆದ್ದರಿಂದ ನಿಮ್ಮ ಆಹಾರ ಕ್ರಮ ಮತ್ತು ಜೀವನಶೈಲಿಯ ಮೇಲೆ ನಿಗಾ ಇರಲಿ ಎಚ್ಚರ ತಪ್ಪಿದರೆ ಅನಾಹುತ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT