ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ನಗರಿಯ ರೋಚಕ ತಾಣ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ವಿಜಯನಗರ ಸಾಮ್ರಾಜ್ಯದಲ್ಲಿ ಪ್ರವರ್ಧಮಾನಕ್ಕೆ ಬಂದ ಚಿತ್ರದುರ್ಗದ ಪಾಳೆಯಗಾರರು ಎಂದೇ ಸಾಮಾನ್ಯವಾಗಿ ಕರೆಯುವ ಕಾಮಗೇತಿ ವಂಶದ ಸ್ಥಾನಿಕ ಪ್ರಭುಗಳ ಆಳ್ವಿಕೆಗೆ ಒಳಗಾಗಿ ಮೊದಲಿಗೆ ಆ ಸಾಮ್ರಾಜ್ಯದ ಒಂದು ಭಾಗವಾಗಿ, ತದನಂತರ ಒಂದು ಪ್ರತ್ಯೇಕ ಸಂಸ್ಥಾನವಾಗಿ ಬೆಳೆದಷ್ಟು ಜ್ವಾಜ್ವಲ್ಯಮಾನ ಇತಿಹಾಸ. ಕುತೂಹಲಕಾರಿಯಾದ ಸ್ಥಳ ಪುರಾಣಗಳು, ಶಿಲಾಯುಗದಷ್ಟು ಪುರಾತನವಾದ ಮನುಷ್ಯವಾಸದ ನೆಲೆಗಳು, ಪ್ರಾಚೀನ ಗುಹೆಗಳು, ಐತಿಹಾಸಿಕ ಧಾರ್ಮಿಕ ಕೇಂದ್ರಗಳಿಂದ ತುಂಬಿರುವ ಚಿತ್ರದುರ್ಗ ಜಿಲ್ಲೆ ಸಾವಿರಾರು ವರ್ಷಗಳ ನಾಗರಿಕತೆಯುಳ್ಳ ತವರು.

ಇಂತಹ ಸುಪ್ರಸಿದ್ಧ ಕೋಟೆ ಪ್ರದೇಶದಲ್ಲಿ ಪ್ರವಾಸಿಗರಿಗಾಗಿ ಹತ್ತು ಹಲವು ಗಿರಿಶಿಖರಗಳು ಮೈತಳೆದುನಿಂತಿವೆ. ಅವುಗಳಲ್ಲಿ ನೆಲ್ಲಿಕಾಯಿ ಬತೇರಿ, ಲಾಲ್ ಬತೇರಿ, ಝಂಡಾ ಬತೇರಿ, ಕಹಳೆ ಬತೇರಿ, ಹಿಡಿಂಬಗಿರಿ ಹಾಗೂ ತುಪ್ಪದ ಕೊಳ ಶಿಖರಗಳು. ಈ ಶಿಖರಗಳನ್ನು ಹೊರತುಪಡಿಸಿದರೆ ಕೋಟೆಯ ಸುತ್ತ-ಮುತ್ತಲಿನ ಪ್ರದೇಶಗಳಲ್ಲಿ ಚಂದ್ರವಳ್ಳಿಯ ಧವಳಗಿರಿ, ಚೋಳಗುಡ್ಡ, ಜೋಗಿಮಟ್ಟಿಯ ಈರಣ್ಣನಗುಡ್ಡ, ಹಣತೆಗುಡ್ಡ, ಗವಿಬಾಗಿಲು ಗುಡ್ಡ, ಪಾಂಡವರ ಗುಡ್ಡ ಹೀಗೆ ಗಿರಿಶಿಖರಗಳ ಸಾಲುಗಳೇ ಸೇರ್ಪಡೆಯಾಗುತ್ತವೆ. ಇದರಿಂದಲೇ ಈ ಸ್ಥಳವು ಏಳುಸುತ್ತಿನ ಚಿನ್ಮೂಲಾದ್ರಿ ಎಂಬ ಹೆಸರಿನಿಂದ ಪ್ರಖ್ಯಾತಿ ಪಡೆದಿದೆ.

ಈ ಗಿರಿಶಿಖರಗಳ ಸಾಲುಗಳಲ್ಲೊಂದಾದ ತುಪ್ಪದಕೊಳವು ಒಂದು ರೋಚಕ ತಾಣ. ಸಾಮಾನ್ಯವಾಗಿ ಚಿತ್ರದುರ್ಗದ ಕೋಟೆ ವೀಕ್ಷಣೆಗೆಂದು ಹೋಗುವ ಪ್ರವಾಸಿಗರ ಪ್ರಮುಖ ಗುರಿಗಳಲ್ಲೊಂದಾಗಿದೆ ಈ ತುಪ್ಪದಕೊಳ. ಆಬಾಲವೃದ್ಧರಿಗೂ ಸವಾಲಾಗಿ ಪರಿಣಮಿಸುತ್ತದೆ ಈ ತುಪ್ಪದ ಕೊಳಾರೋಹಣ. ಕೋಟೆಯ ಸಂಪಿಗೆ ಸಿದ್ದೇಶ್ವರ ಆವರಣದ ಹಿಂಬದಿಯಲ್ಲಿ ತಲೆಯೆತ್ತಿ ನಿಂತಿರುವ ಏಕಶಿಲಾ ಶಿಖರವಾಗಿದ್ದು, ನೆಲಮಟ್ಟದಿಂದ ಸುಮಾರು 400 ಅಡಿಗಳಿಗೂ ಹೆಚ್ಚೆಂದು ಅಂದಾಜಿಸಲಾಗಿದೆ. ರಾಜ ಅರಸುಗಳ ಕಾಲದಲ್ಲಿ ಈ ಗುಡ್ಡದಲ್ಲಿರುವ ಶಿಲಾರಚಿತ ಕೊಳವೊಂದರಲ್ಲಿ ತುಪ್ಪವನ್ನು ಸಂಗ್ರಹಿಸಿಡುತ್ತಿದ್ದ ಕಾರಣ ಈ ಗುಡ್ಡಕ್ಕೆ ತುಪ್ಪದ ಕೊಳವೆಂದು ಹೆಸರು ಬಂದಿದೆ ಎಂಬ ಪ್ರತೀತಿ. ಈ ಗುಡ್ಡವನ್ನೇರಲು ಯಾವುದೇ ಉನ್ನತ ತಂತ್ರಜ್ಞಾನವಿಲ್ಲ, ಬದಲಾಗಿ ಬಹಳ ಹಿಂದೆಯೇ ನಿರ್ಮಿಸಲಾದ ಆನೆ ಹೆಜ್ಜೆ ಮತ್ತು ಕುದುರೆ ಹೆಜ್ಜೆಗಳ ಸಹಾಯದಿಂದಲೇ ಈ ಗುಡ್ಡವನ್ನೇರಬೇಕಾಗುತ್ತದೆ. ಬೃಹದಾಕಾರವಾಗಿ ಹಬ್ಬಿರುವ ಗುಡ್ಡದ ಹಾಸು ಬಂಡೆಯಲ್ಲಿ ಕುದುರೆ ಮತ್ತು ಆನೆಯ ಪಾದದಗಲದಷ್ಟು ಚೌಕಾಕೃತಿಯ/ ಬಟ್ಟಲಿನಾಕೃತಿಯನ್ನು ಹೋಲುವ ತಗ್ಗುಗಳನ್ನು ಕಟೆದು, ಸಾಗುವ ಜಾಡನ್ನು ನಿರ್ಮಿಸಲಾಗಿದೆ. ಸಾಹಸಿಗರು ಮತ್ತು ಪ್ರವಾಸಿಗರು ಈ ಹೆಜ್ಜೆಯ ಜಾಡನ್ನೇ ಹಿಡಿದು ಆರೋಹಣ ಮಾಡಬೇಕಾಗುತ್ತದೆ.
ಈ ಆರೋಹಣ ಆರಂಭದಿಂದಲೇ ದಿಗಿಲು ಹುಟ್ಟಿಸುವಂಥದ್ದು. ಆದರೂ ಧೃತಿಗೆಡದೆ, ಏರುವ ಸಂದರ್ಭಗಳಲ್ಲಿ ಹಿಂತಿರುಗಿ ನೋಡದೇ, ಕುಳಿತುಕೊಂಡೇ ನಿಧಾನಗತಿಯಲ್ಲಿ ಗುಡ್ಡದ ಅರ್ಧ ಭಾಗವನ್ನು ಹೇಗೋ ತಲುಪಬಹುದು. ತಲುಪಿದಷ್ಟು ಭಯ ಆತಂಕಗಳು ಹೆಚ್ಚಾಗುತ್ತಲೇ ಹೋಗುತ್ತದೆ. ಗುಡ್ಡದ ಅರ್ಧಭಾಗದಷ್ಟು ತಲುಪಿದ ಸಂದರ್ಭದಲ್ಲಿ ಕೊಂಚ ಕೂರಲು ಮತ್ತು ವಿರಮಿಸಿಕೊಳ್ಳುವಷ್ಟು ಸಮತಟ್ಟಿನ ಸ್ಥಳ ಸಹಕರಿಸುತ್ತದೆ.

ಆ ಸ್ಥಳದಿಂದ ವೀಕ್ಷಿಸಿದರೆ ಸಾಗಿಬಂದ ಗುಡ್ಡದ ಬುಡ, ಕುದುರೆ ಮತ್ತು ಆನೆಯ ಹೆಜ್ಜೆಗಳು ಅವಿಸ್ಮರಣೀಯ ಅನುಭವ ನೀಡುತ್ತವೆ. ಏಕನಾಥೇಶ್ವರಿ ಗುಡಿಯ ಆವರಣದ ಉಯ್ಯಾಲೆ ಕಂಬಗಳು, ಹಿಡಿಂಬೇಶ್ವರ ದೇಗುಲ, ಪುರಾತನ ಮುರುಘಾಮಠದ ಮೇಲ್ಛಾವಣಿ, ಠಂಕಸಾಲೆ ಆವರಣ, ಎದುರಿನ ಝಂಡಾ ಬತೇರಿ ಹಾಗೂ ಎಡಭಾಗದಲ್ಲಿ ಗೋಚರಿಸುವ ಚೋಳಗುಡ್ಡದ ವಿಹಂಗಮ ನೋಟವು ನಿಮ್ಮ ಆಯಾಸವನ್ನೆಲ್ಲ ಹೋಗಿಸಿ ನಿರಾಯಾಸಗೊಳಿಸುತ್ತದೆ. ಇನ್ನುಳಿದ ಅರ್ಧಭಾಗದಷ್ಟು ಗುಡ್ಡವನ್ನು ಅಷ್ಟೇನು ಆತಂಕಕ್ಕೊಳಗಾಗದಂತೆ ಏರಬಹುದು. ಗುಡ್ಡದ ಅಂತಿಮ ಘಟ್ಟವನ್ನು ತಲುಪಿದ ನಮಗೆ ‌ ತುಪ್ಪದಕೊಳ ಬತೇರಿಯು ಸ್ವಾಗತಿಸಿ ಚಿತ್ರದುರ್ಗ ನಗರ ಮತ್ತು ವರ್ಣನಾತೀತ ಕೋಟೆಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಲು ಸೂಚಿಸುತ್ತದೆ. ಛಾಯಾಗ್ರಹಣಕ್ಕೂ ವಿಶಿಷ್ಟ ಮೆರುಗನ್ನು ತಂದೊಡ್ಡುತ್ತದೆ ಈ ಬತೇರಿ.  ತುಪ್ಪದ ಕೊಳಾರೋಹಣ ಮಾಡಿದಷ್ಟು, ಬೀಸುವ ಗಾಳಿಯ ರಭಸ ಹೆಚ್ಚುತ್ತಾ ಹೋಗುತ್ತದೆ.

ಬತೇರಿಯ ಮೇಲ್ಭಾಗದಲ್ಲಿ ನಿಂತು ಸುತ್ತಲಿನ ಸೌಂದರ್ಯ ಸವೆಯುವಷ್ಟರಲ್ಲೇ ಮತ್ತೆರಡು ಮನಮೋಹಕ ದೃಶ್ಯಗಳು ನಮ್ಮ ಕಣ್ಣಿಗೆ ಗೋಚರವಾಗುತ್ತದೆ. ಆ ದೃಶ್ಯಗಳೇ ಗುಡ್ಡದ ಹಿಂಬದಿಯ ಅರಮನೆ ಬೈಲು ಮತ್ತು ಪಕ್ಕದ ನೆಲ್ಲಿಕಾಯಿ ಗುಡ್ಡದ ಬತೇರಿ.

ತುಪ್ಪದಕೊಳ ಬತೇರಿಯ ತುತ್ತತುದಿಯನ್ನು ತಲುಪಿದ ನಮಗೆ, ಶಿಲಾರಚಿತ ತುಪ್ಪದಕೊಳವನ್ನು ತಲುಪುವುದು ಬಾಕಿ ಉಳಿದಿರುತ್ತದೆ. ಬತೇರಿಯ ಪಕ್ಕದಲ್ಲೇ ಬೃಹತ್ ಹಾಸು ಬಂಡೆಯ ಇಳಿಜಾರು ಕಂದಕದ ಮುಖಾಂತರ ನಿಧಾನವಾಗಿ ಅದೇ ಮಾದರಿಯ ಹೆಜ್ಜೆ ಜಾಡುಗಳನ್ನಿಡಿದು ಇಳಿಯಬೇಕಾಗುತ್ತದೆ. ಇದೇ ಸ್ಥಳದಲ್ಲಿಯೇ ಪ್ರತಿಯೊಬ್ಬರಿಗೂ ಮೈಪುಳಕಗೊಂಡು ವಿಶೇಷ ಅನುಭವಗಳಾಗುತ್ತವೆ. ಏಕೆಂದರೆ ಈ ಸ್ಥಳದಲ್ಲಿ ಬೃಹದಾಕಾರವಾದ ಕಲ್ಲುಬಂಡೆಗಳು ಸಹಜವಾಗಿಯೇ ಗುಹಾಂತರ ಕಂದಕಗಳನ್ನು ಸೃಷ್ಟಿಸಿಕೊಂಡಿವೆ. ಇಂತಹ ಗುಹಾಂತರ ಜಾಡಿನಲ್ಲೇ ಸಾಗಬೇಕಾಗುತ್ತದೆ. ಇಲ್ಲಿಂದ ಕೇವಲ ಹತ್ತಾರು ಹೆಜ್ಜೆಗಳನ್ನಾಕಿದರೆ ಗೋಚರವಾಗುವುದೇ ತುಪ್ಪದಕೊಳದ ಮೇಲ್ಭಾಗದ ಚಿಕ್ಕಗುಡಿಯಾಕೃತಿಯ ಪ್ರಮುಖ ದ್ವಾರ. ಈ ದ್ವಾರದ ಮುಖಾಂತರ ಕುಳಿತುಕೊಂಡೇ ಒಳಪ್ರವೇಶ ಮಾಡಬೇಕಾಗುತ್ತದೆ.  ಕೇವಲ 10 ರಿಂದ 15 ಮೆಟ್ಟಿಲುಗಳನ್ನೊಂದಿದ ಈ ಕಡಿದಾದ ಮಾರ್ಗದಲ್ಲಿ ಒಮ್ಮೆ ಆರೇಳು ಮಂದಿಗಷ್ಟೇ ಕೊಳ ವೀಕ್ಷಣೆಗೆ ಅವಕಾಶವಿರುತ್ತದೆ.

ಒಳಭಾಗದಲ್ಲಿ ಕ್ರಮಿಸಿದಾಗ ಕತ್ತಲು ಆವರಿಸಿ ಕೊಳವು ಸ್ಪಷ್ಟವಾಗಿ ಗೋಚರಿಸಿದಂತಾಗುತ್ತದೆ. ಇಂತಹ ಸಮಯದಲ್ಲಿ ಬೆಳಕಿಗಾಗಿ ಟಾರ್ಚ್‌ಗಳನ್ನು ಉಪಯೋಗಿಸಬೇಕಾಗುತ್ತದೆ.  ಇದನ್ನು ವೀಕ್ಷಿಸಿ ಹೊರಬಂದರೆ ದೂರದಲ್ಲಿ ಗೋಪಾಲಸ್ವಾಮಿ ದೇವಾಲಯ ಮತ್ತು ಗೋಪಾಲಸ್ವಾಮಿ ಹೊಂಡದ ದರ್ಶನವಾಗುತ್ತದೆ.

ಒಟ್ಟಾರೆ ಈ ತುಪ್ಪದ ಕೊಳವನ್ನು ವೀಕ್ಷಿಸುವುದು ಮತ್ತು ಇಂತಹ ಒಂದು ಸಾಹಸ ಕಾರ್ಯಕ್ಕೆ ಮುಂದಾಗುವುದು ಪ್ರವಾಸಿಗರಿಗೆ ರೋಚಕ ಅನುಭವವನ್ನೇ ನೀಡುತ್ತದೆ. ತುಪ್ಪ ಸವಿದಷ್ಟು ಸುಲಭವಲ್ಲ ಈ ತುಪ್ಪದಕೊಳಾರೋಹಣ ಎಂದೆನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT