ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಜಾನೆ ಅಧಿಕಾರಿಗಳ ವಿರುದ್ಧ ಶಿಕ್ಷಕರ ಪ್ರತಿಭಟನೆ

ಅನಗತ್ಯ ಕಾರ್ಯವಿಳಂಬ, ಲಂಚ ಸ್ವೀಕಾರ ಆರೋಪ
Last Updated 2 ಅಕ್ಟೋಬರ್ 2014, 6:08 IST
ಅಕ್ಷರ ಗಾತ್ರ

ಸಕಲೇಶಪುರ: ಶಿಕ್ಷಕಕರ ವೇತನ ಬಿಲ್‌ ಸೇರಿದಂತೆ, ಗಳಿಕೆ ರಜೆ ಬಿಲ್‌ಗಳು, ಮೆಡಿಕಲ್‌ ಬಿಲ್‌ಗಳು ಹಾಗೂ ಇತರೆ ಬಾಕಿವೇತನ ಬಿಲ್‌ಗಳನ್ನು ನೀಡಲು ಇಲ್ಲಿಯ ಖಜಾನೆ ಇಲಾಖೆಯಲ್ಲಿ ಲಂಚ ಕೇಳುವುದಲ್ಲದೆ ತಿಂಗಳುಗಟ್ಟಲೆ ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಬುಧವಾರ ಸರ್ಕಾರಿ ನೌಕರರ ಸಂಘ ಹಾಗೂ ಶಿಕ್ಷಕರ ಸಂಘದ ಪದಾಧಿಕಾರಿಗಳು ಕಚೇರಿಗೆ ಮುತ್ತಿಗೆ ಹಾಕಿದರು.

ಶಿಕ್ಷಕರು ಮಾತ್ರವಲ್ಲದೆ ಖಜಾನೆಗೆ ಬರುವ ಎಲ್ಲಾ ಇಲಾಖೆಯ ನೌಕರರ ಬಿಲ್‌ಗಳನ್ನು ನಗದೀಕರಣ ಮಾಡಿಕೊಡಲು ಭಾರೀ ವಿಳಂಬ ಮಾಡಿ, ಉದ್ದೇಶಪೂರ್ವಕ ತೊಂದರೆ ನೀಡುತ್ತಿದ್ದಾರೆ.

ನಿವೃತ್ತಗೊಂಡವರಿಗೆ ಡಿಸಿಆರ್‌ಜಿ, ಇನ್ನಿತರ ವೇತನಗಳನ್ನು ಸರ್ಕಾರ ಮಂಜೂರು ಮಾಡಿದ್ದರೂ, ಅದನ್ನು ನಗದೀಕರಣಗೊಳಿಸುವುದಕ್ಕೆ ತಿಂಗಳುಗಟ್ಟಲೆ ಸತಾಯಿಸುತ್ತಾರೆ. ಕೇಳಿದಷ್ಟು ಲಂಚ ನೀಡದೆ ಇದ್ದರೆ,  ಬಿಲ್‌ಗಳಲ್ಲಿ ಲಗತ್ತಿಸಿರುವ ಆದೇಶದ ಪ್ರತಿಗಳನ್ನು ಕಿತ್ತು, ತೊಂದರೆ ನೀಡಲಾಗುತ್ತಿದೆ ಎಂದು ಆರೋಪಿಸಿದರು.

ಹತ್ತಾರು ವರ್ಷಗಳಿಂದ ಇದೇ ಕಚೇರಿಯಲ್ಲಿ ಬೇರು ಬಿಟ್ಟಿರುವ ಪ್ರಥಮದರ್ಜೆ ಸಹಾಯಕ ರಾಜಶೇಖರ್‌ ಲಂಚ ನೀಡದೆ ಇದ್ದರೆ ಕೆಲಸವನ್ನೇ ಮಾಡುವುದಿಲ್ಲ, ಬಾಡೂಟ, ಮದ್ಯಪಾನ ಮಾಡಿಸುವಂತೆ ನೌಕರರನ್ನು ಪೀಡಿಸುತ್ತಾನೆ ಎಂದು ನೌಕರರು ಅಸಮಾಧಾನ ವ್ಯಕ್ತಪಡಿಸಿದರು.

ಖಜಾನೆ ಅಧಿಕಾರಿ ಸುಲೋಚನಾ ಕೂಡ ಬಿಲ್‌ಗಳನ್ನು ನಗದೀಕರಣಗೊಳಿಸುವುದಕ್ಕೆ ಉದ್ದೇಶಪೂರ್ವಕ ವಿಳಂಬ ಮಾಡುತ್ತಿದ್ದಾರೆ.
ಕಚೇರಿಯಲ್ಲಿ ನಡೆಯುತ್ತಿರುವ ಎಲ್ಲ ಅವ್ಯವಹಾರಗಳಿಗೆ ಇವರೇ ನೇರ ಹೊಣೆಗಾರರು ಎಂದು ಆರೋಪಿಸಿದರು.

ತಾಲ್ಲೂಕು ನೌಕರರ ಸಂಘದ ಕಾರ್ಯದರ್ಶಿ ಲಕ್ಕಪ್ಪ, ಜಿಲ್ಲಾ ಖಾಜಾನೆ ಅಧಿಕಾರಿ ಬಾಲಸುಬ್ರಹ್ಮಣ್ಯ ಅವರಿಗೆ ದೂರವಾಣಿ ಕರೆ ಮಾಡಿ ಇಲಾಖೆಯ ತಾಲ್ಲೂಕು ಅಧಿಕಾರಿ ಹಾಗೂ ಸಿಬ್ಬಂದಿಯಿಂದ ಉಂಟಾಗುತ್ತಿರುವ ತೊಂದರೆ ಹಾಗೂ ಲಂಚಕ್ಕಾಗಿ ಪಿಡಿಸುತ್ತಿರುವ ಬಗ್ಗೆ ದೂರು ನೀಡಿದರು. ತಕ್ಷಣ ವ್ಯವಸ್ಥೆಯನ್ನು ಸರಿಪಡಿಸಿ ನೌಕರರ ಬಿಲ್‌ಗಳನ್ನು ತಕ್ಷಣವೇ ವಿಲೆವಾರಿ ಮಾಡದೆ ಇದ್ದರೆ, ಲೋಕಾಯುಕ್ತ ನ್ಯಾಯಮೂರ್ತಿಗಳಿಗೆ ದೂರು ನೀಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ನೌಕರರ ಸಂಘದ ಅಧ್ಯಕ್ಷ ಮಾಳಿಗೇಗೌಡ, ರಾಜ್ಯ ಪರಿಷತ್‌ ಸದಸ್ಯ ಶ್ರೀನಿವಾಸ್‌, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಕಂಠೇಗೌಡ, ಕಾರ್ಯದರ್ಶಿ ತಮ್ಮಣ್ಣಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT