ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡುಕಲೆಯ ರಂಗಸ್ಥಳದೊಳು...

ಅಂತರಾಷ್ಟ್ರೀಯ ಮಹಿಳಾ ದಿನದ ವಿಶೇಷ
Last Updated 8 ಆಗಸ್ಟ್ 2016, 5:56 IST
ಅಕ್ಷರ ಗಾತ್ರ

ನವ್ಯ ಕಲಾಮಾಧ್ಯಮಗಳ ಭರಾಟೆಯಲ್ಲೂ ಪಾರಂಪರಿಕ ಕಲೆಯಾದ ಯಕ್ಷಗಾನ ತನ್ನ ವ್ಯಾಪ್ತಿಯನ್ನು ವಿಸ್ತರಿಸಿ ಕೊಳ್ಳುತ್ತಿರುವುದು ತನ್ನ ವಿಶಿಷ್ಟ ಸಮಕಾಲೀನ ಶಕ್ತಿಯಿಂದಾಗಿ ಮಾತ್ರ.  ಯಕ್ಷಗಾನವು ಗಾಯನ, ವಾದನ, ನರ್ತನ, ಮಾತುಗಾರಿಕೆ, ವೇಷಭೂಷಣ, ಮುಖವರ್ಣಿಕೆ ಹೀಗೆ ಬಹು ಕಲಾವಿಶೇಷತೆಗಳನ್ನು ಹೊಂದಿರುವ ರಂಗಭೂಮಿಯ ಕಲಾಪ್ರಕಾರ.

ಭಾಗವತಿಕೆಯ ನೆಪದಲ್ಲಿ ಸಂಗೀತ,  ಸ್ವಯಂ ಬಣ್ಣಗಾರಿಕೆಯ ನೆಪದಲ್ಲಿ ಚಿತ್ರ ಕೌಶಲ, ಅತ್ತ ಹೆಜ್ಜೆಗಾರಿಕೆಯಲ್ಲಿ ನೃತ್ಯದ ಸೊಗಡು ಕಲಾವಿದನನ್ನು ರೂಪಿಸುತ್ತದೆ. ಇವೆಲ್ಲದಕ್ಕೂ ಶಿರೋಪ್ರಾಯವೆಂಬಂತೆ ಮಾತುಗಾರಿಕೆಯು ತರ್ಕದ ವಿಕಾಸಕ್ಕೆ, ಜೀವನಾನುಭವದ ಮೂಲಕ ಮೌಲ್ಯಗಳ ಅರಿವಿಗೆ ಸಹಕಾರಿಯಾಗುತ್ತದೆ. ಆಶುಭಾಷಣ­ದಂತೆ ಮಾತುಗಾರಿಕೆ ರಂಗಸ್ಥಳದಲ್ಲೇ ರೂಪುಗೊಳ್ಳುವುದರಿಂದ ಸಮಯ ಪ್ರಜ್ಞೆಯ ಊರುಗೋಲು ಬೇಕು. 

ಯಕ್ಷಗಾನದ ಸೊಗಡಿರುವುದೇ ಕಾಠಿಣ್ಯದಲ್ಲಿ, ಕಂಚಿನ ಕಂಠದಲ್ಲಿ. ಯಕ್ಷಗಾನದಲ್ಲಿ ಬರುವ ಸ್ತ್ರೀವೇಷ ಒಂದನ್ನು ಬಿಟ್ಟರೆ ಮೃದುಕಂಠ, ಸುಕೋಮಲ ಎನ್ನುವುದು ಇಲ್ಲಿ ಇಲ್ಲವೇ ಇಲ್ಲ. ಸ್ತ್ರೀಯರನ್ನು ನಾಚಿಸುವಷ್ಟು ವೈಯ್ಯಾರದಿಂದ ನುಲಿಯುವ ಕೆಲವು ಪುರುಷರೇ ಸ್ತ್ರೀವೇಷಧಾರಿ ಆಗುವ ಕಾರಣ, ಯಕ್ಷಗಾನವನ್ನು ಗಂಡು ಕಲೆ ಎಂದು ಗುರುತಿಸಲಾಗುತ್ತಿದೆ.

ಆದರೆ ಶೃಂಗಾರವನ್ನು ಗ್ರಹಿಸಿದಷ್ಟು ಸೂಕ್ಷ್ಮವಾಗಿ ಪುರುಷ ಎಲ್ಲ ಸಂವೇದನೆಗಳನ್ನು ಗ್ರಹಿಸಲಾರ.  ಸ್ತ್ರೀಯರು ಈ ಕೊರತೆಯನ್ನೀಗ ನೀಗಿಸಿದ್ದಾರೆ, ತಮ್ಮ ಮನೋಧರ್ಮವನ್ನು ಯಕ್ಷಗಾನದ ಮಾತಿನ ಮೂಲಕ ಪ್ರಕಟಿಸುತ್ತಿದ್ದಾರೆ. ಐದು ಶತಮಾನಕ್ಕೂ ಹೆಚ್ಚಿನ ಇತಿಹಾಸ ಇರುವ ತೆಂಕು ತಿಟ್ಟು ಮತ್ತು ಬಡಗು ತಿಟ್ಟು ಶೈಲಿಯ ಯಕ್ಷಗಾನದ ರಂಗಸ್ಥಳಗಳಲ್ಲಿ ಮಹಿಳೆಯರು ಗುರುತಿಸಿಕೊಂಡು 2–3 ದಶಕಗಳೇ ಕಳೆದಿವೆ. ಇಡೀ ಪ್ರಸಂಗ ನಿರ್ವಹಿಸುವಷ್ಟು ಕಲಾವಿದೆಯರು ಬೆಳೆದಿದ್ದಾರೆ. 

ಯಕ್ಷಗಾನದ ಭಾರೀ ವೇಷಭೂಷಣಗಳನ್ನು ಹೊತ್ತು ಕುಣಿಯುವುದು ನಾಜೂಕಿನ (ಸ್ತ್ರೀ) ದೇಹಕ್ಕೆ ಸರಿಹೊಂದುವುದಿಲ್ಲ ಎಂಬ ಕಾರಣಕ್ಕೆ  ಯಕ್ಷಗಾನಕ್ಕೂ ಮಹಿಳೆಗೂ ಆಗಿ ಬರುವುದಿಲ್ಲ ಎಂದು ‘ಪುರುಷ ಕಲೆ’ಯಾಗಿಯೇ ಉಳಿದಿದ್ದ ಈ ಕಲೆಯಲ್ಲಿ ವಯೋಮಾನದ ಹಂಗಿಲ್ಲದೇ ಕಲಾವಿದೆಯರು ಮುನ್ನುಗ್ಗುತ್ತಿದ್ದಾರೆ.
ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರು ತೆಂಕುತಿಟ್ಟು ಯಕ್ಷಗಾನದಲ್ಲಿ ಹಿಮ್ಮೇಳಕ್ಕೂ ಪ್ರವೇಶ ಪಡೆದು ರಂಗವೇರಿದ್ದಾರೆ.

ಕರಾವಳಿಯಲ್ಲಿ ಯಕ್ಷಗಾನದ ಹಿಮ್ಮೇಳಕ್ಕೆ ಮೊದಲು ಪ್ರವೇಶ ಮಾಡಿದವರು  73 ವರ್ಷದ ನರ್ಮದ ಶಿಬರೂರಾಯ. ಯಕ್ಷಗಾನ ನೋಡುವುದು ಬಿಡಿ, ಮನೆ ಚಾವಡಿಯಲ್ಲಿ ಗಂಡಸರ ಮುಂದೆ ಕುಳಿತು ಮಾತನಾಡುವ ಅವಕಾಶವೂ ಮಹಿಳೆಯರಿಗೆ ಇಲ್ಲದ ಕಾಲದಲ್ಲಿ ಅಂದರೆ ಸುಮಾರು 60ರ ದಶಕದಲ್ಲಿ ಇವರು ಭಾಗವತಿಕೆ ಕಲಿತಿದ್ದರು.

ಶಾಲೆಗೆ ಹೋಗುವ ಅವಕಾಶ ಇಲ್ಲದ ನರ್ಮದಾ, ದೊಡ್ಡಪ್ಪನ ಮಗನಿಗೆ ಯಕ್ಷಗಾನ ಹೇಳಿಕೊಡುತ್ತಿರುವುದನ್ನು ಆಲಿಸಿಯೇ ಕಲಿಕೆಯ ದಾಹವನ್ನು ತಣಿಸಿಕೊಂಡವರು. 15ರ ವಯಸ್ಸಿನಲ್ಲಿಯೇ ಹಾಡಲು ಶುರು ಮಾಡಿದ್ದರು. ಹಿಮ್ಮೇಳದಲ್ಲಿ ಮಹಿಳೆಯರ ಪ್ರವೇಶಕ್ಕೆ ಅವರ ಈ ಉತ್ಸಾಹವೇ ನಾಂದಿಹಾಡಿತು. ಅದೇ ಸ್ಫೂರ್ತಿಯಲ್ಲಿ ಭಾಗವತಿಕೆಯನ್ನು ಜಬರ್ದಸ್ತಾಗಿ ಕಲಿತು 25 ವರ್ಷ ಮೇಳದ ತಿರುಗಾಟವನ್ನೂ ಮಾಡಿ ಸೈ ಎನ್ನಿಸಿಕೊಂಡವರು ಲೀಲಾವತಿ ಬೈಪಡಿತ್ತಾಯ.

ಪುರುಷರ ಲೋಕದಂತೆ ಇರುವ ಮೇಳಗಳಲ್ಲಿ ಕೆಲವೊಮ್ಮೆ ರಾತ್ರಿಪೂರ್ತಿ ಭಾಗವತಿಕೆ ಮಾಡಿದ ಅನುಭವವೂ ಅವರ ಜೋಳಿಗೆಯಲ್ಲಿದೆ.  ಭವ್ಯಶ್ರೀ ಮಂಡೆಕೋಲು, ಕಾವ್ಯಶ್ರೀ ಅಜೇರು, ದುರ್ಗಾ ಪರಮೇಶ್ವರಿ ಕುಕ್ಕಿಲ, ಅಮೃತ ಅಡಿಗ ಕೂಡ ಭಾಗವತಿಕೆಯ ಲಹರಿಯನ್ನು ನೆಚ್ಚಿಕೊಂಡು ಮುಂದುವರೆಯುತ್ತಿರುವವರು.

ಹಿಮ್ಮೇಳದಲ್ಲಿ ಹಿರಿಯ ಮಹಿಳೆಯರಿಬ್ಬರ ಪ್ರವೇಶ ಕಂಡು  ಹುಡುಗಿಯರೂ ಧೈರ್ಯಮಾಡಿ ಚೆಂಡೆಯನ್ನೇ ಹೆಗಲಿಗೇರಿಸಿಕೊಂಡಿದ್ದಾರೆ. ಅಪೂರ್ವ ಮತ್ತು ದಿವ್ಯಶ್ರೀ ಮರ್ಕಂಜ ಚೆಂಡೆವಾದನದಲ್ಲಿ ಇಂದು ಯಕ್ಷಗಾನ ಕಾರ್ಯಕ್ರಮಗಳಲ್ಲಿ ಸಾಥ್‌ ನೀಡುತ್ತಿದ್ದಾರೆ. ಪುರುಷರ ಸಂಖ್ಯೆಯೇ ಹೆಚ್ಚಿರುವ ಈ ಕ್ಷೇತ್ರದಲ್ಲಿರುವ ಹೆಣ್ಣುಮಕ್ಕಳ ಕಲಿಕೆಯ ಅನುಭವಗಳನ್ನು ಕೇಳಿದರೆ ಅಲ್ಲಿ ಕಾಣಿಸುವುದು ಹಲವಾರು ಮಂದಿ ಮಾತೃಹೃದಯದ ಪುರುಷರು. ಮೇಳದಲ್ಲಿ ತಿರುಗಾಟ ಮಾಡುವುದೆಂದರೆ ಪ್ರದರ್ಶನವನ್ನು ನೀಡಲು ಯಾವುದೋ ಹಳ್ಳಿಗಳಿಗೆ ತೆರಳಿ ರಾತೋರಾತ್ರಿ ಹಾಡಬೇಕು.

ಲೀಲಾವತಿ ಬೈಪಡಿತ್ತಾಯರು, ತಮ್ಮ  ಪತಿ ಹರಿನಾರಾಯಣ ಬೈಪಡಿತ್ತಾಯ ಅವರು ಮದ್ದಳೆವಾದಕ ಆಗಿದ್ದರಿಂದ ಮೇಳದ ಸುತ್ತಾಟ ತಮಗೆ ಸಾಧ್ಯವಾಯಿತು ಎನ್ನುತ್ತಾರೆ. ಅರುವ ನಾರಾಯಣ ಶೆಟ್ಟರು, ಕಲಾವಿದ ಸುಬ್ರಾಯ ಹೊಳ್ಳರು ಇವರ ಬೆಂಗಾವಲಾಗಿ ನಿಂತವರು. ಇದೇ ಮಾತನ್ನು ನರ್ಮದಾ ಅವರೂ ತಮ್ಮ ದೊಡ್ಡಪ್ಪ ಗೋಪಾಲಕೃಷ್ಣ ಪುಣಿಚಿತ್ತಾಯರ ಬಗ್ಗೆ, ಭಾಗವತಿಕೆಯಲ್ಲಿ ಉದಯೋನ್ಮುಖರಾಗಿರುವ ಭವ್ಯಶ್ರೀ ಮಂಡೆಕೋಲು ಅವರು ತಮ್ಮ ಅಜ್ಜರಾಮಪ್ಪ ಗೌಡರ ಬಗ್ಗೆ ಹೇಳುತ್ತಾರೆ.

ಹಾಡು ಕಲಿಕೆಗೆ ವಿಶ್ವವಿನೋದ ಬನಾರಿ, ಗಣೇಶ್‌ ಕೋಲಕ್ಕಾಡಿ ಅವರು ಮಾರ್ಗದರ್ಶನ ನೀಡಿದ ಬಗೆಯನ್ನು ಅವರು ವಿವರಿಸುತ್ತಾರೆ. ಏಳೆಂಟು ಕೆ.ಜಿ ಭಾರದ ಚೆಂಡೆಯನ್ನು ಹೆಗಲಿಗೇರಿಸಿಕೊಂಡು ನಿರಂತರ ಮೂರು ತಾಸಿನ ಕಾಲ ಚೆಂಡೆ ನುಡಿಸುವ ಅಪೂರ್ವ ಕೂಡ ಮಾಂಬಾಡಿ ಸುಬ್ರಹ್ಮಣ್ಯ ಭಟ್ಟರನ್ನು ನೆನಪಿಸಿಕೊಳ್ಳುತ್ತಾರೆ. 

ನಿಧಾನವಾಗಿ ಅರಳುತ್ತಿರುವ ಮಹಿಳಾ ಯಕ್ಷಗಾನ ಪ್ರತಿಭೆಗಳನ್ನು ಗಮನಿಸಿ ಹಿರಿಯ ವಿದ್ವಾಂಸ ಪ್ರೊ. ಅಮೃತ ಸೋಮೇಶ್ವರ ಅವರು ಮಹಿಳಾ ಭಾವಕೋಶಕ್ಕೆ ಹೊಂದುವ ಪ್ರಸಂಗ­ಗಳ ರಚನೆ ಇಂದಿನ ತುರ್ತಾಗಿದೆ ಎನ್ನುತ್ತಾರೆ. ತೆಂಕು ತಿಟ್ಟಿಗಿಂತಲೂ ಮುಕ್ತವಾಗಿ ಎಲ್ಲವನ್ನೂ ಬರಮಾಡಿಕೊಳ್ಳುವ ಉತ್ಸಾಹದಲ್ಲಿರುವ ಬಡಗುತಿಟ್ಟಿನಲ್ಲಿ ಇತ್ತೀಚೆಗಷ್ಟೆ  ಇಂತಹ ಪ್ರಯತ್ನಗಳು ನಡೆಯುತ್ತಿವೆ. ಮುಮ್ಮೇಳದಲ್ಲಿ ಕಲಾವಿದೆಯರು ಬಂದರೂ ಹಿಮ್ಮೇಳದಲ್ಲಿ ಇನ್ನೂ ರಂಗಸ್ಥಳ ಪ್ರವೇಶ ಆದಹಾಗಿಲ್ಲ ಎನ್ನುತ್ತಾರೆ ಪ್ರೊ.ಎಸ್‌. ವಿ. ಉದಯಕುಮಾರ್‌ ಶೆಟ್ಟಿ. 

ಯಕ್ಷ­ಗಾನದಲ್ಲಿ ಮಹಿಳಾ ಸ್ವಾತಂತ್ರ್ಯದ ಕುರಿತು ಹೇಳುವುದಾದರೆ, ನಾಟಕ ಅಥವಾ ಸಿನಿಮಾಗಳಂತೆ ಸಿದ್ಧ ಸ್ಕ್ರಿಪ್ಟ್‌ ಯಕ್ಷಗಾನದಲ್ಲಿ ಇಲ್ಲದಿರುವುದು ಪಾತ್ರಧಾರಿಗಳಿಗೆ ಹೆಚ್ಚಿನ ಸ್ವಾತಂತ್ರ್ಯ ತಂದುಕೊಟ್ಟಿದೆ. ಈ ‘ಸ್ವಾತಂತ್ರ್ಯ’ ಮಹಿಳೆಯರೂ ಪಡೆದುಕೊಳ್ಳುತ್ತಿರುವುದು ಈಚಿನ ಬೆಳವಣಿಗೆ. ಈಚೆಗಷ್ಟೇ ಯಕ್ಷಲೋಕದಲ್ಲಿ ಛಾಪು ಮೂಡಿಸಿರುವ ಆರು ವರ್ಷದ ಪುಟಾಣಿ ಶಿರಸಿಯ ತುಳಸಿ ಬೆಟ್ಟದಕೊಪ್ಪಳಿಂದ ಹಿಡಿದು ಶ್ರೇಯಾ, ಸಾಕ್ಷಿಯಂಥ ಪುಟಾಣಿಗಳು, ಅರ್ಪಿತಾ, ನಾಗಶ್ರೀ, ನಿಹಾರಿಕಾ, ಭವ್ಯಶ್ರೀ, ಅಪೂರ್ವ, ದಿವ್ಯಶ್ರೀರಂಥ ಯುವ ಕಲಾವಿದೆಯರು, ವಿದ್ಯಾ ಕೋಳ್ಯೂರು, ಪ್ರಜ್ಞಾ ಮತ್ತೀಹಳ್ಳಿ, ಗೀತಾ ಹೆಗಡೆಯವರಂತಹ ಹಿರಿಯ ಕಲಾವಿದೆಯರು... ಹೀಗೆ ಮಹಿಳಾ ಯಕ್ಷಲೋಕದ ಪಟ್ಟಿ ಬೆಳೆಯುತ್ತ ಸಾಗುತ್ತದೆ.

ಆದರೆ ಸಮಕಾಲೀನ ಸಮಸ್ಯೆಗಳ ಚರ್ಚೆಯನ್ನು ಪರಿಣಾಮಕಾರಿಯಾಗಿ ಆ ಕ್ಷಣದಲ್ಲಿಯೇ ಬಿಂಬಿಸಬಲ್ಲ ಶಕ್ತಿಯುಳ್ಳ ಯಕ್ಷಗಾನವನ್ನು ‘ಯಕ್ಷಕನ್ಯೆ’ಯರು ಸಮರ್ಥವಾಗಿ ಬಳಸಿಕೊಳ್ಳುತ್ತಿರುವ ಬೆಳವಣಿಗೆ ಶುರುವಾಗಿದೆ. ಜಾತೀಯತೆಯ ಸಮಸ್ಯೆಯೋ, ಕೌಟುಂಬಿಕ ಕಲಹವೋ, ನೈತಿಕತೆಯ ಪ್ರಶ್ನೆಗಳೊ, ಆಳುವ ವರ್ಗದ ಕ್ರೂರತೆಯೊ ಇಂಥ ಹಲವಾರು ಸೂಕ್ಷ್ಮ ವಿಷಯಗಳನ್ನು  ಆರೋಗ್ಯಕರವಾಗಿ ಟೀಕಿಸಬಲ್ಲ, ಲಘು ಹಾಸ್ಯದಿಂದ ಜನರಲ್ಲಿ ಸರಿಯಾದ ಅರಿವು ಉಂಟು ಮಾಡುವ ಶಕ್ತಿ ಇವರು ಪಡೆದಿದ್ದಾರೆ. 

ಪುರುಷ ಮೇಳದಲ್ಲೂ ‘ಯಕ್ಷಕನ್ಯೆ’ಯರಿಗೆ ಭಾರಿ ಬೇಡಿಕೆ ಬರುತ್ತಿದೆ. ಅದೂ ಪುರುಷ ಪಾತ್ರಕ್ಕೆ ! ಅತಿಥಿ ಕಲಾವಿದೆಯರಾಗಿ ಪುರುಷ ತಂಡಗಳಿಗೆ ಹೋದಾಗ ಕಲಾವಿದೆಯರಿಗೆ ಪ್ರೋತ್ಸಾಹದ ಸ್ವಾಗತ ಎಷ್ಟು ಸಿಗುವುದೋ ಹಾಗೆಯೇ ಕೆಲವೊಮ್ಮೆ ಕಿರಿಕಿರಿ ಅನುಭವವೂ ಆಗುತ್ತಿದೆ. ಅತಿಥಿ ಕಲಾವಿದೆಯರಾಗಿ ಹೋದರೂ ಸಂಭಾವನೆ ಹೆಚ್ಚಿಗೆ ಕೊಟ್ಟರೆಂದೋ, ಮುಖ್ಯ ಪಾತ್ರವನ್ನು ಕಲಾವಿದೆಯರೇ ನಿರ್ವಹಿಸುತ್ತಾ ರೆಂದೋ... ಹೀಗೆ ಪುರುಷರ ಅಸಮಾಧಾನಕ್ಕೆ ಕಾರಣ ಹಲವಾರು.

ಕೆಲವೊಮ್ಮೆ ಪುರುಷರು ಈ ಅಸಮಾಧಾನವನ್ನು ಯಕ್ಷಗಾನದ ಪ್ರಸಂಗದ ವೇಳೆ ವೇದಿಕೆಯ ಮೇಲೆಯೇ ಜನರ ಎದುರು ಪರೋಕ್ಷವಾಗಿ ಮಾತಿನಿಂದ ಕಲಾವಿದೆಯರಿಗೆ ಚುಚ್ಚುವುದೂ ಇದೆ.   ಕಲಾವಿದೆಯರೂ ಮಾತಿನ ಮೂಲಕ ಅದೇ ಧಾಟಿಯಲ್ಲಿ ಉತ್ತರ ಕೊಡುವ ಸಾಮರ್ಥ್ಯವನ್ನು ಈಗ  ಪಡೆದುಕೊಂಡಿದ್ದಾರೆ. ಏಟಿಗೆ ತಿರುಗೇಟು ನೀಡುತ್ತಾ ಯಕ್ಷಗಾನ ಪ್ರಸಂಗಕ್ಕೆ ಸ್ವಲ್ಪವೂ ಚ್ಯುತಿ ಬಾರದ ಹಾಗೆ,  ಮೂರನೇ ವ್ಯಕ್ತಿಗೆ ‘ಮೂಲ’ ಗೊತ್ತಾಗದ ಹಾಗೆ ಮಾತನಾಡುವ ಜಾಣ್ಮೆ ಕಲಾವಿದೆಯರು ತೋರುತ್ತಿದ್ದಾರೆ.    
                    
***
ಸಬಲೀಕರಣ ಎಂದರೆ...
ಸ್ವರಕ್ಷಣೆ ಕೌಶಲ ಅಗತ್ಯ
ಅತ್ಯಾಚಾರ ಮತ್ತು ದೌರ್ಜನ್ಯ ಹೆಚ್ಚುತ್ತಿರುವ ಇಂದಿನ ದಿನಗಳಲ್ಲಿ ಮಹಿಳೆಯರು ಸ್ವರಕ್ಷಣಾ ಕೌಶಲಗಳನ್ನು ಕಲಿಯಬೇಕು. ಇದೇ ಇವತ್ತಿನ ಮಟ್ಟಿಗೆ ಮಹಿಳಾ ಸಬಲೀಕರಣ. ಆಕೆ ತನ್ನ ಕಾಲ ಮೇಲೆ ನಿಲ್ಲಬೇಕು. ಎಂಥದ್ದೇ ಪರಿಸ್ಥಿತಿ ಬಂದರೂ ಒಬ್ಬಳೇ ಎದುರಿಸುವಂತಾಗಬೇಕು. ಉದ್ಯೋಗ ಮಾಡುವ ಸ್ಥಳಗಳಲ್ಲಿ ಯಾವುದೇ ಆತಂಕವಿಲ್ಲದೇ ಕೆಲಸ ಮಾಡುವಂತಹ ವಾತಾವರಣ ಕಲ್ಪಿಸಬೇಕು.
-ಗೀತಾ ನಾಗಭೂಷಣ

***
ಸಮಾನತೆ ಸಿಗಬೇಕು
ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲೂ ಸಮಾನತೆ ಸಿಗಬೇಕು. ಅವಳ ಸ್ತ್ರೀತ್ವವನ್ನು ಗೌರವಿಸಬೇಕು. ಆದರೆ, ಪುರುಷ ಪ್ರಧಾನ ವ್ಯವಸ್ಥೆಯು ಅದನ್ನು ಒಪ್ಪುತ್ತಿಲ್ಲ. ಸಬಲೀಕರಣ ಎಂದಾಕ್ಷಣ ಆಕೆಗೆ ಒಂದಿಷ್ಟು ಹಣಕಾಸು ನೆರವು, ಸೌಲಭ್ಯ ನೀಡುವುದಲ್ಲ. ಮಹಿಳೆಯರ ಸರ್ವತೋಮುಖ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಮಹಿಳೆ ಅಭಿವೃದ್ಧಿ ಹೊಂದಿದರೆ ದೇಶದ ಅಭಿವೃದ್ಧಿ ಸಾಧ್ಯ.
-ಡಾ.ಮೀನಾಕ್ಷಿ ಬಾಳಿ ಪ್ರಾಧ್ಯಾಪಕಿ, ಕಲಬುರ್ಗಿ

***
ಮಹಿಳೆಯರಲ್ಲಿ ಎಲ್ಲಾ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಆತ್ಮವಿಶ್ವಾಸ ಮೂಡಬೇಕು. ಮಹಿಳೆಯು ಯಾವುದೇ ಅತ್ಯಾಚಾರ, ದೌರ್ಜನ್ಯ, ಶೋಷಣೆಯ ವಿರುದ್ಧ ಬಗ್ಗಲಾರದ ಸ್ಥಿತಿ ನಿರ್ಮಾಣವಾಗಬೇಕು. ಅದು ಸಬಲೀಕರಣ. ಆದರೆ, ಈ ಸಂದರ್ಭದಲ್ಲಿ ಅದು ಕನಸಿನ ಮಾತು. ಅದೂ ಆರಂಭವಾದರೂ ಆಗಬೇಕು.
-ವೀಣಾ ಶಾಂತೇಶ್ವರ

***
ಮಹಿಳೆಯನ್ನು  ಆಂತರಿಕವಾಗಿ ಸದೃಢವಾಗುವಂತೆ, ಅವಳ ವ್ಯಕ್ತಿತ್ವವನ್ನು ಬೆಳೆಸಬೇಕು. ಕೇವಲ ಆರ್ಥಿಕ ಬೆಳವಣಿಗೆಯಿಂದ ಮಹಿಳೆಯ ಸಬಲೀಕರಣ ಸಾಧ್ಯವಿಲ್ಲ. ಹಣದಿಂದ ಎಲ್ಲವನ್ನೂ ಸಾಧಿಸುತ್ತೇವೆ ಎಂಬ ಮಾತು ಸುಳ್ಳು.
-ಸುಕನ್ಯಾ ಕನವರಳ್ಳಿ (ಮಾರುತಿ)

***
ಒಂದೇ ದಿನ ವಿಶೇಷವಾಗಿ ಮಹಿಳಾ ದಿನಾಚರಣೆ ಆಚರಿಸಿ, ಮಹಿಳೆ ಸಬಲೆ ಎಂದು ಹೇಳಿದರೆ, ಅವಳು ಸಬಲೆಯಾಗುತ್ತಾಳೆಯೇ? ಅವಳನ್ನು ಪ್ರತಿದಿನ ಗೌರವಿಸಬೇಕು. ಆಗ ಮಹಿಳಾ ದಿನಾಚರಣೆ ಸಾರ್ಥಕವಾಗುತ್ತದೆ. ಮಹಿಳೆಯ ವ್ಯಕ್ತಿತ್ವಕ್ಕೆ ಗೌರವ ದೊರೆತರೆ ಅದೇ ಸಬಲೀಕರಣ.
-ಶಾಂತಾ ಕಣವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT