ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಣಿ ನಿಂತು ಹೋದ ಮೇಲೆ

Last Updated 2 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಗಣಿಗಾರಿಕೆಯಿಂದ ನಲುಗಿ ಹಸಿ ಗಾಯದಂತೆ ಕಾಣುತ್ತಿದ್ದ ಸಂಡೂರಿನ ಗುಡ್ಡಗಳು ಈಗ ಹಸಿರನ್ನು ಮೈದುಂಬಿ ನಿಂತಿವೆ. ಮಲೆನಾಡನ್ನೇ ನಾಚಿಸುವಂತಿರುವ ನಿಸರ್ಗ ಸಿರಿಯನ್ನು ಆವಾಹಿಸಿಕೊಂಡಂತೆ ಕಾಣುತ್ತಿವೆ. ಹಲವು ವರ್ಷಗಳಿಂದ ಕಣ್ಮರೆಯಾಗಿದ್ದ ಅಪರೂಪದ ಖಗ ಸಂಕುಲ ಮತ್ತೆ ಇಲ್ಲಿ ಬೀಡುಬಿಡುತ್ತಿದೆ. ಅವುಗಳ ಗಾನ ಲಹರಿಯನ್ನರಸಿ ಹೋದವರ ಮೈಮನಸ್ಸು ಪುಳಕದಲ್ಲಿ ಮಿಂದೇಳುವುದು ಖಚಿತ. ಆದರೆ ಇದನ್ನು ಜತನವಾಗಿಡುವ ಸಾವಧಾನ ನಮಗಿರಬೇಕಷ್ಟೆ

1989 ರಿಂದ 2002ರವರೆಗೆ ನಾನು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ವಾಸಿಸುತ್ತಿದ್ದಾಗ ಮಲೆನಾಡನ್ನೇ ನಾಚಿಸುವ ಅಲ್ಲಿನ ಅದ್ಭುತ ವನಸಿರಿ, ಪಶ್ಚಿಮ ಘಟ್ಟಗಳ ಪ್ರತಿರೂಪದಂತಹ ಪರ್ವತ ಶ್ರೇಣಿ, ಅಪಾರ ನೈಸರ್ಗಿಕ ಸಂಪತ್ತು, ನದಿ, ಝರಿಗಳು, ವೈವಿಧ್ಯಮಯ ಪ್ರಾಣಿ ಪಕ್ಷಿಗಳನ್ನು ನೋಡಿ ವಿಸ್ಮಿತನಾಗಿದ್ದೆ. ಅಲ್ಲಿನ ಪರಿಸರದ ಬಗ್ಗೆ ಆಗಾಗ್ಗೆ ಲೇಖನಗಳನ್ನೂ ಬರೆಯುತ್ತಿದ್ದೆ. ಆದರೆ ಸಂಡೂರಿನ ಅದ್ಭುತ ರಮ್ಯ ಪಕ್ಷಿಲೋಕದ ಬಗ್ಗೆ ನನಗೆ ಆಗ ಅಷ್ಟೊಂದು ಮಾಹಿತಿ ಇರಲಿಲ್ಲ. ಪಕ್ಷಿ ವೀಕ್ಷಣೆಗೆ ದುರ್ಬೀನು ಇರಲಿಲ್ಲ, ಪಕ್ಷಿಗಳ ಮಾರ್ಗದರ್ಶಿ ಪುಸ್ತಕವೂ ಇರಲಿಲ್ಲ.  ಕಳೆದ ಒಂದೂವರೆ ದಶಕದಿಂದ ಹೊಸಪೇಟೆ ಹಾಗೂ ಉತ್ತರ ಕರ್ನಾಟಕದ ಪಕ್ಷಿ ವೀಕ್ಷಣೆ ಮತ್ತು ದಾಖಲೀಕರಣ ಮಾಡುತ್ತಿದ್ದಾಗ, ಸಂಡೂರಿನಲ್ಲಿ ವಿಶಿಷ್ಟ ಪಕ್ಷಿಗಳನ್ನು ಗುರುತಿಸಿದ್ದೆ. ನಾನು ಬರೆದ ‘ಬರ್ಡ್ಸ್ ಆಫ್ ಹಂಪಿ’ ಪುಸ್ತಕದಲ್ಲಿ ಇಲ್ಲಿನ ವಿಶಿಷ್ಟ ಹಕ್ಕಿಗಳನ್ನು ದಾಖಲಿಸಿದ್ದೆ. ಇನ್ನೂ ಅಪರೂಪದ ಹಕ್ಕಿಗಳ ಹುಡಕಾಟದಲ್ಲಿದ್ದೆ. ಆದರೆ ದಶಕಗಳ ಕಾಲ ನಡೆದ ಹುಚ್ಚು ಗಣಿಗಾರಿಕೆಯಿಂದ ಇಡೀ ಕಣಿವೆ ನಲುಗುತ್ತಿದ್ದಾಗ, ಅಲ್ಲಿ ಕಾಲಿಡಲು ಸಾಧ್ಯವಾಗಲೇ ಇರಲಿಲ್ಲ.

ಮಧ್ಯದಲ್ಲೊಮ್ಮೆ ದಟ್ಟ ವಾಹನಗಳ ದೂಳಿನ ಮಧ್ಯೆ, ಗುಂಡಿಗಳ ರಸ್ತೆಯಲ್ಲಿ ಸಂಡೂರಿಗೆ ಬೈಕಿನಲ್ಲಿ ಹೋಗಿ ಜಾರಿ ಬಿದ್ದ ನಂತರ ಅಲ್ಲಿ ಕಾಲಿಡಲು ಧೈರ್ಯವಿರಲಿಲ್ಲ.

ಭೀಕರ ಸುನಾಮಿ ನಂತರ ಪ್ರಶಾಂತ ಪರಿಸರದಂತೆ, ನಾಲ್ಕು ವರ್ಷಗಳ ಗಣಿ ವಿಶ್ರಾಂತಿಯಿಂದ ಇಡೀ ಸಂಡೂರು ಪರಿಸರ ಗರಿಗೆದರಿ ನಿಂತಿದೆ. ಹಸಿ ಗಾಯದಂತೆ ಕಾಣುತ್ತಿದ್ದ ಗಣಿಗಾರಿಕೆಯಾದ ಗುಡ್ಡಗಳು ಹಸಿರು ಚಾದರ ಹೊದ್ದು ನಿಂತಿವೆ. ಸ್ಟಾಕ್ ಯಾರ್ಡ್‌ಗಳಾಗಿದ್ದ ಹೊಲಗಳು, ಫಲವತ್ತಾತ ಫಸಲನ್ನು ಕೊಟ್ಟಿವೆ. ಮಲೆನಾಡನ್ನೇ ನಾಚಿಸುವಂತೆ ಕಾಡು ನೈಸರ್ಗಿಕವಾಗಿ ಪುನರುತ್ಪತ್ತಿಯಾಗುತ್ತಿದೆ. ಇದರ ಜೊತೆ ಜೊತೆಗೆ ಇಲ್ಲಿನ ವನಸಿರಿ ಮರಳಿ ತನ್ನ ನೆಲೆಯನ್ನರಸಿ ಬರುತ್ತಿದೆ. ನಿಸರ್ಗಕ್ಕೆ ಇರುವ ಸ್ವಯಂ ಚಿಕಿತ್ಸಾ ಶಕ್ತಿ ವಿಸ್ಮಯಕಾರಿ. ಇದಕ್ಕೆ ಸಾಕ್ಷಿ ಇಲ್ಲಿನ ಅದ್ಭುತ ರಮ್ಯ ಖಗಸಿರಿ.

ಹಕ್ಕಿಗಳ ಸ್ವರ್ಗ
ಗಣಿಗಾರಿಕೆ ಸ್ಥಗಿತಗೊಂಡ ಸಕಾರಾತ್ಮಕ ಪರಿಣಾಮ ಏನಾದರೂ ಇರಬಹುದಾ ಎಂದು ಯೋಚಿಸಿದಾಗ, ಹಕ್ಕಿಗಳು ಪರಿಸರ ಆರೋಗ್ಯದ ಸೂಚಕಗಳು ಎಂದು ಅವುಗಳ ಸಂಶೋಧನೆಗೆ ತೊಡಗಿದಾಗ, ವಿಸ್ಮಯಗಳ ಮೇಲೆ ವಿಸ್ಮಯಗಳೇ! ಈಚೆಗೆ  ಹೊಸಪೇಟೆಯಿಂದ ನೇರವಾಗಿ ಗಂಡಿ ನರಸಿಂಹ ಸ್ವಾಮಿ ಹಾಗೂ ಔಷಧಿ ಸಸ್ಯಗಳ ಸಂರಕ್ಷಣಾ ಪ್ರದೇಶಕ್ಕೆ ಹೋಗಿದ್ದೆ. ಅಲ್ಲಿ ಕಾಲಿಡುತ್ತಿದ್ದಂತೆಯೇ ಕೆಲವು ಹಕ್ಕಿಗಳು ಕಲರವ ಮಾಡುತ್ತಾ ಮರದಿಂದ ಮರಕ್ಕೆ ನೆಗೆಯುತ್ತಿದ್ದವು. ಕೆಲವು ನೆಲದ ಮೇಲೆ ಏನನ್ನೋ ಹೆಕ್ಕುತ್ತಿದ್ದವು. ಸರಿ ಇನ್ನೇಕೆ ತಡೆ ಎಂದು ಕೈಲಿದ್ದ ಕ್ಯಾಮೆರಾ ಕ್ಲಿಕ್ಕಿಸತೊಡಗಿದೆ. ನಂತರ ಕ್ಯಾಮೆರಾ ಪರದೆಯ ಮೇಲೆ ಪರಿಶೀಲಿಸಿದಾಗ ಆಶ್ಚರ್ಯವೋ ಆಶ್ಚರ್ಯ!

ದಾಂಡೇಲಿ-ಶಿರಸಿಯ ಕಾಡುಗಳಲ್ಲಿ ಗಿಡಗಂಟಿಗಳ ಮಧ್ಯೆ ಯಾವ ಹಕ್ಕಿಯ ಫೋಟೊ ತೆಗೆಯಲು ಹೆಣಗಾಡುತ್ತಿದ್ದೆನೋ, ಅದೇ ಹಕ್ಕಿ ಇಲ್ಲಿ ಇಷ್ಟೊಂದು ಸುಲಭವಾಗಿ ದೊರೆಯುವುದೇ! ಕಂದು ತಲೆಯ ಸಿಳ್ಳಾರ (ಆರೆಂಜ್ ಹೆಡೆಡ್ ತ್ರಷ್) ಹೀಗೇ ಕುಳಿತಿದ್ದಾಗ ಸವಿಯಾದ ಶಿಳ್ಳೆಯ ಶಬ್ದ ಕೇಳಿ ತಲೆ ಎತ್ತಿ ನೋಡಿದರೆ ಅಲ್ಲಿ ಪೊದೆಯ ಮೇಲೆ ಎಷ್ಟೊಂದು ಕೆಂಪು ಮೀಸೆಯ ಪಿಕಳಾರಗಳು (ರೆಡ್-ವಿಸ್ಕರ್ಡ್ ಬುಲ್‌ಬುಲ್), ಹೀಗೇ ಇಡೀ ಮಧ್ಯಾಹ್ನ ಹಾಗೂ ಮರುದಿನ ನೂರಕ್ಕೂ ಹೆಚ್ಚು ಹಕ್ಕಿಗಳನ್ನು ವೀಕ್ಷಿಸಿದೆ.

ಅದರಲ್ಲಿ ಪಶ್ಚಿಮ ಘಟ್ಟದಲ್ಲಿ ಕಾಣುವ ಹಕ್ಕಿಗಳಾದ ಚುಕ್ಕೆ ಬೆಳುವ (ಸ್ಪಾಟೆಡ್ ಡವ್), ಶ್ವೇತಾಕ್ಷಿ (ಓರಿಯಂಟಲ್ ವೈಟ್ ಐ), ಕಂದು ತಲೆಯ ಕುಟ್ರು ಹಕ್ಕಿ (ಬ್ರೌನ್- ಹೆಡೆಡ್ ಬಾರ್ಬೆಟ್), ಚುಕ್ಕೆ ಹರಟೆಮಲ್ಲ (ಪಫ್-ತ್ರೋಟೆಡ್ ಬ್ಯಾಬ್ಲರ್), ಕೆಂಪು ಕಲ್ಲು ಕೋಳಿ (ರೆಡ್ ಸ್ಪರ್‌ಫೌಲ್), ಶ್ವೇತಕೊರಳಿನ ಬೀಸಣಿಕೆ ಬಾಲದ ಹಕ್ಕಿ (ವೈಟ್-ತ್ರೋಟೆಡ್ ಫ್ಯಾನ್ ಟೇಲ್)... ಇನ್ನೂ ಹೀಗೇ... ಅನೇಕ ಹಕ್ಕಿಗಳಿಗೆ ಇದು ಕಾಯಂ ನೆಲೆಯಾಗಿದೆ. ಜೊತೆಗೆ ಚಳಿಗಾಲಕ್ಕೆ ವಲಸೆ ಬರುವ ಹಕ್ಕಿಗಳಾದ ನೀಲಿ ತಲೆಯ ಬಂಡೆ ಸಿಳ್ಳಾರ (ಬ್ಲೂ ಕ್ಯಾಪ್‌ಡ್ ರಾಕ್ ತ್ರಷ್), ಕೆಂಪು ಕೊರಳಿನ ನೊಣಹಿಡುಕ (ಟಿಕೆಲ್ಸ್ ಬ್ಲು ಫ್ಲೈಕ್ಯಾಚರ್), ಕೆಂಪು ಗಲ್ಲದ ನೊಣಹಿಡುಕ (ರೆಡ್ ಬ್ರೆಸ್ಟೆಡ್ ಫ್ಲೈಕ್ಯಾಚರ್), ನೀಲಿ ನೊಣ ಹಿಡುಕ (ವರ್ಡೀಟರ್ ಫ್ಲೈಕ್ಯಾಚರ್) ಮುಂತಾದವುಗಳೂ ಇಲ್ಲಿನ ಬೆಟ್ಟಗಾಡಿನಲ್ಲಿ ಆಶ್ರಯ ಪಡೆದಿವೆ.

ಹೀಗೆ ಪಕ್ಷಿಗಳನ್ನು ದಾಖಲಿಸುತ್ತಾ ಗಂಡಿ ನರಸಿಂಹ ಸ್ವಾಮಿ ದೇವಸ್ಥಾನದ ಬಳಿಯಿರುವ ಕಣಿವೆಯಲ್ಲಿ ಸಾಗುತ್ತಿದ್ದಾಗ, ನನ್ನ ಅತ್ಯಂತ ಮೆಚ್ಚಿನ ಹಕ್ಕಿ ಕಾಣಿಸಿತು. ಅದೇ ಹಳದಿ ಕೊರಳಿನ ಪಿಕಳಾರ (ಯಲ್ಲೋ ತ್ರೋಟೆಡ್ ಬುಲ್‌ಬುಲ್)! ಐಯುಸಿಎನ್ ಸಂಸ್ಥೆಯ ಕೆಂಪು ಪುಸ್ತಕದಲ್ಲಿ ಅಪಾಯದಂಚಿನಲ್ಲಿರುವ ಹಕ್ಕಿ ಎಂದು ದಾಖಲಿಸಲಾಗಿದೆ. ದಕ್ಷಿಣ ಭಾರತದ ಕಲ್ಲು ಗುಡ್ಡಗಳ ಕೆಲವೇ ಸ್ಥಳಗಳಲ್ಲಿ ಇರುವ ಈ ಅಪರೂಪದ ಹಕ್ಕಿ ಹಂಪಿ-ದರೋಜಿ ಕರಡಿ ಧಾಮದಲ್ಲಿ ಸಾಕಷ್ಟು ಸಂಖ್ಯೆಯಲ್ಲಿವೆ. ನನ್ನ ‘ಬರ್ಡ್ಸ್ ಆಫ್ ಹಂಪಿ’ ಪುಸ್ತಕ ಮುಖಪುಟದಲ್ಲಿರುವುದು ಇದೇ ಹಕ್ಕಿ.

ಮರಳಿ ಬಂದ ನಿಸರ್ಗ ವೈಭವ
ಕರ್ನಾಟಕದ ಬಹುತೇಕ ಜನರಿಗೆ ಬಳ್ಳಾರಿ ಎಂದ ಕೂಡಲೇ ಅಕ್ರಮ ಗಣಿಗಾರಿಕೆ, ಅತಿಯಾದ ಬಿಸಿಲು ಹಾಗೂ ಬರ ಎಂಬ ಭಾವನೆ ಬರುತ್ತದೆ. ಆದರೆ ಸಂಡೂರಿನಲ್ಲಿ ಇದಕ್ಕೆ ಭಿನ್ನವಾದ ಮಲೆನಾಡ ಪರಿಸರ ಇರುವುದು ಬಹುತೇಕ ಜನರಿಗೆ ಗೊತ್ತಿಲ್ಲ. ಒಂದು ದಶಕದ ಆಕ್ರಮ ಗಣಿಗಾರಿಕೆಗೆ ಇಲ್ಲಿನ ಸೂಕ್ಷ್ಮ ಪರಿಸರ ನಲುಗಿಹೋಗಿದ್ದು, ಭೂಗರ್ಭದಲ್ಲಿ ಅಡಗಿರುವ ಅಮೂಲ್ಯ ಸಂಪತ್ತಿಗಾಗಿ ನಿಸರ್ಗದ ಮೇಲೆ ಮಾಡಿದ ಅತ್ಯಾಚಾರಕ್ಕಾಗಿ ಸಂಡೂರು ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಕುಖ್ಯಾತಿ ಗಳಿಸುವಂತಾಗಿದೆ. ಆದರೆ, ಕಳೆದ ಕೆಲವು ವರ್ಷಗಳ ವಿಶ್ರಾಂತಿಯಿಂದ ನೈಸರ್ಗಿಕ ಪುನರುತ್ಪತ್ತಿ ಮರುಕಳಿಸಿದೆ.

ಹೊಸಪೇಟೆಯಿಂದ ಆರಂಭವಾಗಿ ಸಂಡೂರಿನ ಸ್ವಾಮಿಹಳ್ಳಿಯಲ್ಲಿ ಕೊನೆಗೊಳ್ಳುವ ಸುಮಾರು 50 ಕಿ.ಮೀ.ಗಳ ಎರಡು ಪರ್ವತ ಶ್ರೇಣಿಗಳ ಸಂಡೂರಿನ ವಿಶಿಷ್ಟ ಪರಿಸರಕ್ಕೆ ಕಾರಣ. ಅರವತ್ತರ ದಶಕದವರೆಗೆ ಹುಲಿ, ಚಿಂಕಾರ, ಕಡವೆ ಮುಂತಾದ ಪ್ರಾಣಿಗಳು ಇಲ್ಲಿನ ಕಾಡಿನಲ್ಲಿದ್ದವು. ಇಂದು ಚಿರತೆ, ಕರಡಿ, ತೋಳ, ನರಿ, ಕಾಡುಕುರಿ, ಕೊಂಡಕುರಿ ಮುಂತಾದ ಸಸ್ತನಿಗಳು ಇಲ್ಲಿನ ವೃದ್ಧಿಸುತ್ತಿವೆ.

ಪಕ್ಷಿತಜ್ಞರ ನೆಚ್ಚಿನ ತಾಣ
ಸ್ವಾತಂತ್ರ್ಯಪೂರ್ವದಲ್ಲಿ ಬ್ರಿಟಿಷ್ ಅಧಿಕಾರಿಗಳಾದ ಸಿ.ಎಲ್.ವಿಲ್ಸನ್, ವಿಸ್ಲರ್, ಪೂಲರ್ ಮುಂತಾದವರು ಇಲ್ಲಿ ಪಕ್ಷಿ ವೀಕ್ಷಣೆ ಮಾಡಿ ಅನೇಕ ಲೇಖನಗಳನ್ನು ಬರೆದಿದ್ದಾರೆ.

1919ರಲ್ಲಿ ಇ.ಎಚ್.ಪೂಲರ್ ಎಂಬ ಅಧಿಕಾರಿ ರಾಮಗಡ ಬೆಟ್ಟದ ಮೇಲೆ ಹಳದಿ ಗಂಟಲಿನ ಪಿಕಳಾರ (ಯಲ್ಲೋ ತ್ರೋಟೆಡ್ ಬುಲ್‌ಬುಲ್) ಪಕ್ಷಿಯ ಮಾದರಿಯನ್ನು ಸಂಗ್ರಹಿಸಿದ್ದರಂತೆ. ಈ ಅಪರೂಪದ ಹಕ್ಕಿ ಇರುವ ಅನೇಕ ಸ್ಥಳಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಘೋಷಿಸಲಾಗಿದೆ. ಸ್ವಾತಂತ್ರ್ಯಾನಂತರದಲ್ಲಿ ಎಂ.ಕೃಷ್ಣನ್, ಎಂ.ವೈ. ಘೋರ್ಪಡೆ, ಕುಮಾರ ಘೋರ್ಪಡೆ ಮುಂತಾದವರು ಸಂಡೂರಿನ ಹಕ್ಕಿಗಳನ್ನು ದಾಖಲಿಸಿದ್ದಾರೆ. 1973ರಲ್ಲಿ ಕುಮಾರ ಘೋರ್ಪಡೆ 166 ಹಕ್ಕಿಗಳನ್ನು ಸಂಡೂರಿನ ಪ್ರದೇಶದಲ್ಲಿ ವೀಕ್ಷಿಸಿ ದಾಖಲಿಸಿದ್ದಾರೆ. ಅವರು ದಾಖಲಿಸಿದ ಮೂರೂ ರಣಹದ್ದುಗಳು ಇಂದು ಕಣ್ಮರೆಯಾಗಿವೆ. ಇನ್ನು ಉಳಿದ ಅನೇಕ ಹಕ್ಕಿಗಳ ಅಸ್ತಿತ್ವವನ್ನು ಸಂಶೋಧಿಸುವ ಅಗತ್ಯ ಇದೆ.

ಸಂಡೂರಿನ ಪಕ್ಷಿ ವೀಕ್ಷಣೆಯ ತಾಣಗಳು
ಸದಾ ಚಲನಶೀಲ ಹಾಗೂ ಚಟುವಟಿಕೆಯಿಂದ ಕೂಡಿರುವ ಹಕ್ಕಿಗಳು ಎಲ್ಲೆಡೆ ಹರಡಿಕೊಂಡಿವೆ. ಆದರೂ ಕೆಲವು ಪ್ರದೇಶಗಳಲ್ಲಿ ಅವುಗಳ ಸಾಂದ್ರತೆ ಹೆಚ್ಚಾಗಿರುವುದರಿಂದ ವೀಕ್ಷಣೆ ಸುಲಭ. ಅಂತಹ ಕೆಲವು ತಾಣಗಳು: ರಾಮಗಡ ಮತ್ತು ಸುತ್ತಮುತ್ತಲಿನ ಕಾಡು, ಯಶವಂತನಗರದ ಬಳಿಯಿರುವ ಔಷಧಿ ಸಸ್ಯಗಳ ಸಂರಕ್ಷಣಾ ಪ್ರದೇಶ, ಗಂಡಿ ನರಸಿಂಹಸ್ವಾಮಿ ದೇವಸ್ಥಾನದ ಕಣಿವೆ, ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರ, ಹರಿಶಂಕರ ಜಲಧಾರೆ, ಕುಮಾರಸ್ವಾಮಿ ದೇಗುಲ ಪರಿಸರ, ದೇವಗಿರಿ, ದೋಣಿಮಲೈ, ನಾರಿಹಳ್ಳ, ದರೋಜಿ ಕೆರೆ ಇತ್ಯಾದಿ.

ಎಷ್ಟೆಲ್ಲಾ ಗಣಿಗಾರಿಕೆಯಾಗಿ ಎಷ್ಟೊಂದು ಪರಿಸರ ನಾಶವಾದರೂ ನಿಸರ್ಗ ಇನ್ನೂ ನಮಗೊಂದು ಅವಕಾಶ ನೀಡಿದೆ. ಇನ್ನಾದರೂ ಉಳಿದಿರುವ ಅಪರೂಪದ ವನ-ವನ್ಯ ಸಂಪತ್ತು ಸಂರಕ್ಷಿಸಲು ಸಾಧ್ಯವಿದೆ. ಸಂಪತ್ತು ದೊರೆಯುವುದೆಂದು ಅಳಿದುಳಿದಿರುವ ಹಸಿರು ಪರ್ವತ ಶ್ರೇಣಿಯನ್ನು ಬಗೆದು ಬೆಂಗಾಡು ಮಾಡಿದರೆ, ಕೋಟ್ಯಂತರ ವರ್ಷಗಳಿಂದ ಇಲ್ಲಿ ನೆಲೆಗೊಂಡಿರುವ ವನಸಿರಿ, ವನ್ಯ ಸಿರಿ, ಖಗ ಸಿರಿಯನ್ನು ಸರ್ವನಾಶ ಮಾಡುವುದು ನಮ್ಮ ಭವಿಷ್ಯಕ್ಕೇ ಬೆಂಕಿ ಇಡುವಂತಾಗುವುದಿಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT