ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಮನ ಸೆಳೆದ ಹಲಸಿನ ಖಾದ್ಯ

ಹಲಸಿನ ಹಬ್ಬ: ತಳಿ ಪ್ರದರ್ಶನ – ಎಲ್ಲರ ಚಿತ್ತ ತೂಬಗೆರೆ ಹಲಸಿನತ್ತ
Last Updated 2 ಜುಲೈ 2016, 4:58 IST
ಅಕ್ಷರ ಗಾತ್ರ

ಉಡುಪಿ: ಬಾಯಿಯಲ್ಲಿ ನೀರೂರಿಸುವಂತಹ ಬಗೆ ಬಗೆಯ ಹಲಸಿನ ಹಣ್ಣು, ಹಲಸಿನಿಂದ ತಯಾರಿಸಿದ ವಿವಿಧ ಬಗೆಯ ಖಾದ್ಯಗಳು, ಹಲಸಿನ ಹಣ್ಣಿನ ರಸ... ಹಲಸು ಹಾಗೂ ಹಲಸಿನ ಖಾದ್ಯಗಳನ್ನು ಸವಿದು ಹಲಸು ಪ್ರಿಯರು ಹಬ್ಬ ಆಚರಿಸಿದರು. ಹಲಸಿನ ಹಣ್ಣು ಹಾಗೂ ತೊಳೆ ಖರೀದಿಸಲು ಮುಗಿಬಿದ್ದರು.

ರಾಜಾಂಗಣದಲ್ಲಿ ನಡೆಯುತ್ತಿರುವ ‘ಹಲಸಿನ ಹಬ್ಬ’ದಲ್ಲಿ ವಿವಿಧ ಬಗೆಯ ಹಲಸಿನ ತಳಿಗಳನ್ನು ಪ್ರದರ್ಶಿಸಲಾಯಿತು. ಬಣ್ಣ, ರುಚಿ, ಸ್ವಾದದಲ್ಲಿ ಒಂದೊಂದು ತಳಿಯೂ ವಿಭಿನ್ನವಾಗಿತ್ತು. ಹಲಸಿನ ಹಬ್ಬದಲ್ಲಿ ಬಹು ಗಮನ ಸೆಳೆದದ್ದು ದೊಡ್ಡಬಳ್ಳಾಪುರ ತಾಲ್ಲೂಕಿನ ತೂಬಗೆರೆ ಹಲಸು. ಪರಿಮಳ ಬೀರುವ ತೂಬಗೆರೆ ಹಲಸಿನ ರುಚಿಯೂ ಸೊಗಸಾಗಿತ್ತು. ಈ ಹಣ್ಣಿನಲ್ಲಿ ಸೊನೆ ಕಡಿಮೆ ಹಣ್ಣುಗಳು ಜಾಸ್ತಿ.

12 ಹಣ್ಣಿಗೆ ಸುಮಾರು ₹40 ನಿಗದಿ ಮಾಡಲಾಗಿತ್ತು. ಉಳಿದಂತೆ ಗಾತ್ರದ ಆಧಾರದ ಮೇಲೆ ಹಣ್ಣಿನ ಬೆಲೆ ನಿಗದಿ ಮಾಡಲಾಗಿತ್ತು. ₹450ರ ವರೆಗೂ ಹಣ್ಣುಗಳು ಮಾರಾಟವಾದವು. ತೂಬಗೆರೆ ಹೋಬಳಿಯಲ್ಲಿ ಸುಮಾರು 120 ಮಂದಿ ರೈತರು ಹಲಸು ಬೆಳೆಗಾರರ ಸಂಘ ಸ್ಥಾಪಿಸಿದ್ದಾರೆ. ಇಲ್ಲಿ ಬೆಳೆಯುವ ಹಲಸಿಗೆ ಭಾರಿ ಬೇಡಿಕೆ ಇದೆ.

‘ಗಿಡವನ್ನು ನೆಟ್ಟ 7–8 ವರ್ಷಗಳಲ್ಲಿ ಫಸಲು ಬರುತ್ತದೆ. ಇದಕ್ಕಾಗಿ ವಿಶೇಷ ಪೋಷಣೆ ಏನೂ ಮಾಡಬೇಕಿಲ್ಲ. ಮೊದಲು ಮಧ್ಯವರ್ತಿಗಳ ಮೂಲಕ ಹಣ್ಣನ್ನು ಮಾರಾಟ ಮಾಡಲಾಗುತ್ತಿತ್ತು. ಆದರೆ ಹಲಸಿನ ಮೇಳಗಳು ಆರಂಭವಾದ ನಂತರ ಹೆಚ್ಚಿನ ಪ್ರಮಾಣದ ಹಣ್ಣನ್ನು ಖುದ್ದು ನಾವೇ ಮಾರಾಟ ಮಾಡುತ್ತಿದ್ದೇವೆ. ನನ್ನದು 10 ಗಿಡ ಇದೆ.

ವರ್ಷಕ್ಕೆ ಸುಮಾರು ₹60ರಿಂದ ₹70 ಸಾವಿರ ರೂಪಾಯಿ ದುಡಿಯುತ್ತೇನೆ. ಮಧ್ಯವರ್ತಿಗಳಿಗೆ ಮಾರಿದರೆ ಇಷ್ಟು ಹಣ ಸಿಗದು’ ಎನ್ನುತ್ತಾರೆ ತೂಬಗೆರೆಯ ಮುನಿರಾಜು.‘ಹಲಸಿನ ಮೇಳಗಳಲ್ಲಿ ತೂಬಗೆರೆ ಹಲಸಿಗೆ ಭಾರಿ ಬೇಡಿಕೆ ಇದೆ. ಲಾಲ್‌ಬಾಗ್‌ನಲ್ಲಿ ನಡೆಯುವ ಹಲಸಿನ ಮೇಳದಲ್ಲಿ ಹಣ್ಣು ಮಾರಾಟ ಮಾಡುತ್ತೇವೆ. ಅಲ್ಲಿನ ಜನರು ಈ ಹಲಸನ್ನು ಇಷ್ಟಪಟ್ಟು ಖರೀದಿಸುತ್ತಾರೆ. ಉಡುಪಿಗೆ ಹಲಸನ್ನು ತರಲು ಸಾಗಣೆ ವೆಚ್ಚ ಹೆಚ್ಚು ಖರ್ಚಾಗಿರುವುದರಿಂದ ಇಲ್ಲಿ ಸ್ವಲ್ಪ ಬೆಲೆ ಹೆಚ್ಚಿಟ್ಟಿದ್ದೇವೆ’ ಎಂದು  ಹೇಳುತ್ತಾರೆ.

ತೂಬಗೆರೆ ಹಲಸನ್ನು ಬಳಸಿ ಹಪ್ಪಳ, ಮಿಕ್ಸರ್‌, ಚಿಪ್ಸ್‌ ತಯಾರಿಸುವ ಸ್ವ ಸಹಾಯ ಸಂಘಗಳು ಹುಟ್ಟಿಕೊಂಡಿವೆ. ಅದಕ್ಕೂ ಹೆಚ್ಚಿನ ಬೇಡಿಕೆ ಇದೆ ಎನ್ನುತ್ತಾರೆ ಅವರು.
ಮಿಕ್ಕಂತೆ ‘ಚಂದ್ರ ಹಲಸಿ’ಗೆ ಬೇಡಿಗೆ ಇತ್ತು. ಹುಣ್ಣಿಮೆ ಚಂದ್ರನ ಬಣ್ಣವನ್ನು ಹಲಸಿನ ತೊಳೆ ಹೋಲುವುದರಿಂದ ಇದಕ್ಕೆ ಚಂದ್ರ ಹಸಲು ಎನ್ನುತ್ತಾರೆ. ‘ಮೇಣ ರಹಿತ ಹಲಸು’ ಇನ್ನೊಂದು ಬಗೆಯಾಗಿದೆ.

ಹೆಸರೇ ಹೇಳುವಂತೆ ಇದರಲ್ಲಿ ಮೇಣ (ಅಂಟು) ಪ್ರಮಾಣ ತುಂಬಾ ಕಡಿಮೆ ಇರುತ್ತದೆ. ‘ಬಿಳುವ ಹಸಲು’ ಸಹ ತನ್ನದೇ ಆದ ರುಚಿ ಹಾಗೂ ಪರಿಮಳ ಹೊಂದಿದೆ. ಇದು ತೀರ ಮೆತ್ತಗಿರುವುದರಿಂದ ಖಾದ್ಯಗಳನ್ನು ತಯಾರಿಸಲು ಬಳಸಲಾಗುತ್ತದೆ. ಪುಟ್ಟ ಗಾತ್ರದ ರುದ್ರಾಕ್ಷಿ ಹಲಸಿಗೂ ಬೇಡಿಕೆ ಇತ್ತು. ಕೆಂಪು ರುದ್ರಾಕ್ಷಿ ಹಾಗೂ ಅರಿಶಿನ ರುದ್ರಾಕ್ಷಿ ಹಲಸನ್ನು ಜನರು ಖರೀದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT