ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಾಂಧೀಜಿಯ ಸಂಪಾದಕ

Last Updated 26 ಅಕ್ಟೋಬರ್ 2013, 19:30 IST
ಅಕ್ಷರ ಗಾತ್ರ

ಕೆಲವರಿರುತ್ತಾರೆ: ಹಿಡಿದ ಕೆಲಸವನ್ನು ಯಾವುದೇ ಫಲಾಪೇಕ್ಷೆಯಿಲ್ಲದೆ, ಒಂದು ತಪ್ಪಸ್ಸಿನ ರೀತಿಯಲ್ಲಿ ಅಚ್ಚುಕಟ್ಟಾಗಿ ನಿರ್ವಹಿಸಿ, ಕಡೆಗೆ ಸಂಪೂರ್ಣವಾಗಿ ಮರೆಗೆ ಸರಿದುಬಿಡುವವರು. ದಿವಂಗತ ಕೆ. ಸ್ವಾಮಿನಾಥನ್ ಅಂಥ ವಿರಳಾತಿ ವಿರಳರಲ್ಲಿ ಒಬ್ಬರು. ಅವರ ಅಪಾರ ಪಾಂಡಿತ್ಯ, ಪರಿಶ್ರಮ ಇಲ್ಲದೆ ಹೋಗಿದ್ದರೆ ಇವತ್ತು ಮಹಾತ್ಮ ಗಾಂಧಿಯವರ ಸಂಪೂರ್ಣ ಬರಹಗಳು ನಮ್ಮ ಕೈಗೆ ಇಷ್ಟು ಸುಲಭವಾಗಿ ದಕ್ಕುತ್ತಿರಲಿಲ್ಲವೋ ಏನೊ.  

೧೯೫೬ರಲ್ಲಿ ಭಾರತ ಸರ್ಕಾರ ಮಹಾತ್ಮ ಗಾಂಧಿಯವರ ಸಮಗ್ರ ಬರಹಗಳ ಹಲವು ಸಂಪುಟಗಳನ್ನು ಹೊರತರಲೆಂದೇ ವಾರ್ತಾ ಮತ್ತು ಪ್ರಸಾರ ಇಲಾಖೆಯಲ್ಲಿ ‘ಪಬ್ಲಿಕೇಷನ್ ಡಿವಿಜನ್’ ಎಂಬ ಒಂದು ಪ್ರಕಟಣ ವಿಭಾಗವನ್ನು ಪ್ರಾರಂಭಿಸಿತು. ಇದರ ಉದ್ದೇಶ ಗಾಂಧಿಯವರ ಎಲ್ಲ ಬರಹಗಳನ್ನು, ಭಾಷಣಗಳನ್ನು, ಪತ್ರಗಳನ್ನು ಸಂಗ್ರಹಿಸಿ, ಅವುಗಳನ್ನು ಆಮೂಲಾಗ್ರವಾಗಿ ಪರಿಶೀಲಿಸಿ, ವಿಶ್ಲೇಷಿಸಿ ಇಂಗ್ಲಿಷಿನಲ್ಲೂ ಹಿಂದಿಯಲ್ಲೂ ಹಲವು ಸಂಪುಟಗಳಲ್ಲಿ ಪ್ರಕಟಿಸುವುದು.

ಗಾಂಧೀಜಿ ಸ್ವತಃ ಬರೆದದ್ದು ಎರಡೇ ಪುಸ್ತಕಗಳನ್ನು. ಒಂದು ‘ಹಿಂದ್ ಸ್ವರಾಜ್’, ಇನ್ನೊಂದು ‘ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ’. ‘ಸತ್ಯಶೋಧನೆ’ ಎಂಬ ಅವರ ಆತ್ಮಕತೆ ಬಿಡಿ ಲೇಖನಗಳ ಒಂದು ಸಂಗ್ರಹವಷ್ಟೆ. ಆದರೆ ಅವರು ಕಾಲಕಾಲಕ್ಕೆ ಹೊರಡಿಸಿದ ‘ಇಂಡಿಯನ್ ಒಪೀನಿಯನ್’, ‘ಯಂಗ್ ಇಂಡಿಯಾ’, ‘ನವಜೀವನ್’, ‘ಹರಿಜನ್’ ಎಂಬ ತಮ್ಮದೇ ಪತ್ರಿಕೆಗಳಿಗೆ ವಾರವಾರವೂ ತಪ್ಪದೆ ಬರೆಯುತ್ತಿದ್ದರು. ಇನ್ನು ಅವರು ಬರೆದ ಪತ್ರಗಳಿಗಂತೂ ಲೆಕ್ಕವೇ ಇಲ್ಲ.

ಆಕ್ಸ್‌ಫರ್ಡ್ ಪ್ರಕಾಶನ ಸಂಸ್ಥೆಗಾಗಿ ‘ದಿ ಎಸೆನ್ಷಿಯಲ್ ರೈಟಿಂಗ್ಸ್ ಆಫ್ ಮಹಾತ್ಮಾ ಗಾಂಧಿ’ ಎಂಬ ಸಂಕಲನವನ್ನು ಸಂಪಾದಿಸಿರುವ ರಾಘವನ್ ಅಯ್ಯರ್ ಪತ್ರ ಬರೆದವರೆಲ್ಲರಿಗೂ ಉತ್ತರಿಸುತ್ತಿದ್ದ ಗಾಂಧೀಜಿ– ಭಾರತ, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್, ಅಮೆರಿಕ ಮತ್ತು ಯೂರೋಪಿನ ಮಿತ್ರರಿಗೆ ಮತ್ತು ಅನುಯಾಯಿಗಳಿಗೆ ಸುಮಾರು ನಾಲ್ಕು ದಶಕಗಳ ಕಾಲ ದಿನವೊಂದಕ್ಕೆ ಕನಿಷ್ಠ ಎಪ್ಪತ್ತೈದು ಪತ್ರಗಳನ್ನಾದರೂ ಬರೆದದ್ದುಂಟು! ಎಂದಿದ್ದಾರೆ.

ಗಾಂಧಿಯವರು ತಮ್ಮ ಮಾತೃಭಾಷೆ ಗುಜರಾತಿಯಲ್ಲಿ, ಹಿಂದಿಯಲ್ಲಿ ಮತ್ತು ಇಂಗ್ಲಿಷಿನಲ್ಲಿ ತಮ್ಮ ವಿಚಾರಗಳ ಪ್ರತಿಯೊಂದು ಛಾಯೆಯನ್ನೂ ಪ್ರತಿಯೊಂದು ಸೂಕ್ಷ್ಮಾತಿಸೂಕ್ಷ್ಮ ಅರ್ಥವ್ಯತ್ಯಾಸವನ್ನೂ ಸ್ಫಟಿಕಶುಭ್ರ ಗದ್ಯದಲ್ಲಿ ಪಡಿಮೂಡಿಸಿದವರು; ತಮ್ಮ ಆಂತರಿಕ ಬೆಳವಣಿಗೆಯ ಪ್ರತಿಯೊಂದು ಹಂತವನ್ನೂ, ತಮ್ಮ ಪ್ರತಿಯೊಂದು ಗಮನಾರ್ಹ ಕ್ರಿಯೆಯ ಹಿಂದಿನ ಪ್ರೇರಣೆಯನ್ನೂ ಬಹಿರಂಗಪಡಿಸಿದವರು.

ಬರೆಯುತ್ತಿರುವ ಕಾಲದಲ್ಲಿ ನನ್ನ ಚೈತನ್ಯ ನನ್ನನ್ನು ನಡೆಸಿದ ಹಾಗೆ ಬರೆಯುತ್ತೇನೆ... ನಾನು ಬರೆಯುವುದು ನನ್ನ ವಿಚಾರಗಳನ್ನು ಪ್ರಚಾರಮಾಡುವುದಕ್ಕಾಗಿ... ವಿಷಯಗಳ ಹಾಗೂ ಶಬ್ದಗಳ ಆಯ್ಕೆಯಲ್ಲಿ ನಾನೆಷ್ಟು ಸಂಯಮದಿಂದಿರುತ್ತೇನೆಂದು ಓದುಗನಾದವನು ಕಲ್ಪಿಸಿಕೊಳ್ಳಲಾರ. ನನಗೆ ಇದೊಂದು ತರಬೇತಿ. ನಾನು ನನ್ನೊಳಗನ್ನು ನೋಡಿಕೊಳ್ಳಲು, ನನ್ನ ದೌರ್ಬಲ್ಯಗಳನ್ನು ಕಂಡುಕೊಳ್ಳಲು ಇದು ಸಹಾಯಕ.

ನನ್ನ ಪ್ರತಿಷ್ಠೆ ಆಗಾಗ ಒಂದು ಸುಂದರ ಪದಪುಂಜವನ್ನು ಉಪಯೋಗಿಸುವಂತೆ ಮಾಡುತ್ತದೆ ಅಥವಾ ನನ್ನ ಕೋಪ ಕಟುವಾದ ಗುಣವಾಚಕವೊಂದನ್ನು ಬಳಸುವಂತೆ ಪ್ರೇರೇಪಿಸುತ್ತದೆ. ಇಂಥ ಕಳೆಯನ್ನು ಕಿತ್ತುಹಾಕುವುದಿದೆಯಲ್ಲ, ಇದೊಂದು ಭಯಂಕರ ಅಗ್ನಿಪರೀಕ್ಷೆ ಹೇಗೋ ಹಾಗೆ ಒಂದು ಉತ್ತಮ ಅಭ್ಯಾಸಕ್ರಮವೂ ಹೌದು ಎಂದು ಅವರೇ ಒಂದೆಡೆ ಹೇಳಿಕೊಂಡಿದ್ದಾರೆ.

ಭಾರತ ಸರ್ಕಾರ ಪ್ರಾಯೋಜಿಸಿದ ಗಾಂಧಿ ಕೃತಿಶ್ರೇಣಿಯ ಪ್ರಧಾನ ಸಂಪಾದಕರಾಗುವವರಿಗೆ ಭಾಷಣಕಾರ, ಬರಹಗಾರ ಗಾಂಧಿಯ ವಿಚಾರಗಳ ನಿಕಟ ಪರಿಚಯವಿರಬೇಕಿತ್ತು; ಗಾಂಧಿಯವರದೆನ್ನಲಾದ ಬರಹಗಳ ಮತ್ತು ಹೇಳಿಕೆಗಳ ಬೆಲೆಕಟ್ಟಿ, ಪರಿಷ್ಕರಿಸಿ, ಸರಿಯಾದ ಐತಿಹಾಸಿಕ ಸಂದರ್ಭಗಳಿಗೆ ಹೊಂದುವಂತೆ ಅಳವಡಿಸಬಲ್ಲ ಸೂಕ್ಷ್ಮಬುದ್ಧಿಯೂ ಪದ ಪದಕ್ಕೆ, ವಾಕ್ಯ ವಾಕ್ಯಕ್ಕೆ ವಿಪರೀತ ಗಮನಕೊಡುವ ವಿಶೇಷ ಪರಿಣತಿಯೂ ಇರಬೇಕಾಗಿತ್ತು.

ಅಂಥವರಿಗೆ ಮುದ್ರಣಾಲಯದ ಅಗತ್ಯಗಳ ಅರಿವಿರಬೇಕಿತ್ತು; ನಿಗದಿಪಡಿಸಿದ ಕಾಲಕ್ಕೆ ತಕ್ಕಂತೆ ಕೆಲಸ ನಿರ್ವಹಿಸುವ ಸಾಮರ್ಥ್ಯವಿರಬೇಕಿತ್ತು. ಇವೆಲ್ಲದರ ಪ್ರತಿರೂಪದಂತಿದ್ದ ಭರತನ್ ಕುಮಾರಪ್ಪ ಪ್ರಧಾನ ಸಂಪಾದಕರಾದದ್ದು ಸಹಜವೇ. ಆದರೆ ಮೊದಲ ಸಂಪುಟ ಪ್ರಕಟವಾದದ್ದೇ ಅವರು ನಿಧನರಾದರು (೧೯೫೭). ನಂತರ ಅವರ ಕಾರ್ಯವನ್ನು ಮುಂದುವರಿಸಿದ ಜೈರಾಮ್‌ದಾಸ್ ದೌಲತ್‌ರಾಮ್ ಎರಡು ವರ್ಷಗಳ ನಂತರ ರಾಜೀನಾಮೆ ನೀಡಿದರು.

ಆ ಕಾಲದಲ್ಲಿ ‘ಪಬ್ಲಿಕೇಷನ್ಸ್ ಡಿವಿಜನ್’ನ ನಿರ್ದೇಶಕರಾಗಿದ್ದವರು ಯು.ಎಸ್. ಮೋಹನರಾವ್. (ಕನ್ನಡಿಗರಾಗಿದ್ದ ಇವರು ಗಾಂಧೀಸೂಕ್ತಿಗಳ ಸಂಕಲನವೊಂದನ್ನು ಸಂಪಾದಿಸಿದ್ದು ಅದನ್ನು ನಮ್ಮ ಕವಿ ಕೆ.ಎಸ್. ನರಸಿಂಹಸ್ವಾಮಿಯವರು ‘ಮೋಹನ ಮಾಲೆ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದ್ದಾರೆ). ಗಾಂಧಿ ಕೃತಿಶ್ರೇಣಿಯ ಸಂಪಾದಕತ್ವಕ್ಕಾಗಿ ಮದರಾಸಿನ ಪ್ರ್ರೆಸಿಡೆನ್ಸಿ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಕೆ. ಸ್ವಾಮಿನಾಥನ್ ಅವರನ್ನು ಗುರುತಿಸಿ, ಕರೆತಂದವರು ಈ ಮೋಹನರಾಯರು.

ಎಚ್.ವೈ. ಶಾರದಾಪ್ರಸಾದ್ ಬರೆದಿರುವಂತೆ ೧೯೬೦ರಲ್ಲಿ ಸ್ವಾಮಿನಾಥನ್ ಪ್ರಧಾನ ಸಂಪಾದಕರಾದಾಗ ತಮಗೆ ಸಂಬಳವೇ ಬೇಡವೆಂದರಂತೆ. ಹಾಗಾಗಿ ಅವರಿಗೆ ಗೌರವಧನದ ರೂಪದಲ್ಲಿ ನೀಡಿದ್ದು ತಿಂಗಳೊಂದಕ್ಕೆ ಕೇವಲ ೭೨೦ ರೂಪಾಯಿ. ದೆಹಲಿಯ ಸಂಪಾದನ ಕಚೇರಿಯಲ್ಲಿ ೫೦ ಮಂದಿ ಸಂಶೋಧಕರನ್ನೂ ಸಂಪಾದಕರನ್ನೂ ೩೦ ಮಂದಿ ಗುಮಾಸ್ತರನ್ನೂ  ನವಜೀವನ್ ಮುದ್ರಣಾಲಯದಲ್ಲಿ ಮತ್ತಷ್ಟು ಜನರನ್ನೂ ನಿಭಾಯಿಸಿದ ಸ್ವಾಮಿನಾಥನ್ ಅಧಿಕಾರಶಾಹಿ ಕಿರುಕುಳಗಳನ್ನು ಒಬ್ಬ ಸ್ಥಿತಪ್ರಜ್ಞನಂತೆ ಸಹಿಸಿಕೊಂಡರು; ತಮ್ಮ ಕೆಲಸದ ಹಾದಿಯಲ್ಲಿ ಯಾವ ವಿಘ್ಞವೂ ಬರದಂತೆ ನೋಡಿಕೊಂಡರು. ಕಡೆಗೆ ಅವರಂಥ ಇನ್ನೊಬ್ಬ ಸಂಪಾದಕ ಇಲ್ಲ ಎನ್ನುವಂತಾಯಿತು.

ಸಮಗ್ರ ಬರಹಗಳ ಮೊದಲ ಮಾತುಗಳಲ್ಲಿರುವ ಈ ಭಾಗವನ್ನು ಗಮನಿಸಿ: ಈ ಗ್ರಂಥಮಾಲೆ ಗಾಂಧೀಜಿ ದಿನದಿನವೂ ವರ್ಷವರ್ಷವೂ ಆಡಿದ ಎಲ್ಲ ಮಾತುಗಳನ್ನು, ಬರೆದ ಎಲ್ಲ ಬರಹಗಳನ್ನು ಒಟ್ಟಿಗೆ ತರಲು ಯೋಜಿಸಿದೆ... ಪ್ರತಿಯೊಂದು ಕ್ಷಣವೂ ತಾವು ಏನನ್ನು ನಂಬಿದ್ದರೋ ಅದನ್ನು ರೂಢಿಸಿಕೊಳ್ಳಲು ಹೆಣಗುತ್ತ ಈ ಭೂಮಿಯ ಮೇಲೆ ನಡೆದಾಡಿದ (ಗಾಂಧಿಯವರನ್ನು) ಜೀವಂತವಾಗಿ ನೋಡಿದವರೆಲ್ಲರೂ, ಅವರನ್ನು ಪ್ರತ್ಯಕ್ಷವಾಗಿ ನೋಡದ, ಅವರ ನಿದರ್ಶನದಿಂದ ಕಲಿಯುವ ಅವಕಾಶವಿಲ್ಲದ ಜನರಿಗೆ ಒಂದು ಋಣ ತೀರಿಸಬೇಕಾಗಿದ್ದು, ಅವರು ಮುಂಬರುವ ಪೀಳಿಗೆಗಳಿಗೆ ಸಾಧ್ಯವಿರುವಷ್ಟೂ ಸಂಪೂರ್ಣವಾಗಿ ಅವರ ಬೋಧನೆಗಳ ಸಮೃದ್ಧ ಸಂಪತ್ತನ್ನು ಹಸ್ತಾಂತರಗೊಳಿಸಬೇಕಿದೆ.

ಇದಂತೂ ತೀರ ಅದಮ್ಯವಾಗಿದ್ದ ಕಾರ್ಯಭಾರವಾಗಿತ್ತೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ವೇದ್ ಮೆಹ್ತಾ ಅವರ ‘ಮಹಾತ್ಮ ಗಾಂಧಿ ಅಂಡ್ ಹಿಸ್ ಅಪೋಸಲ್ಸ್’ (೧೯೭೭) ಎಂಬ ಕೃತಿಯಲ್ಲಿ ಸ್ವಾಮಿನಾಥನ್ ಅವರ ಸಂದರ್ಶನದ ಕೆಲವು ತುಣುಕುಗಳಿವೆ. ಅದರಲ್ಲಿ ಒಂದೆಡೆ ಅವರು ಹೇಳಿರುವುದನ್ನು ನೋಡಿ: ‘ಗಾಂಧಿಯವರ ಬಹುಮುಖ್ಯ ವಾಂಗ್ಞಯದ ಸಂರಕ್ಷಕರಾದ ಪ್ಯಾರೇಲಾಲರ ಸಹಕಾರಕ್ಕೆ ಪ್ರತಿಯಾಗಿ ನಾವು ಅವರಿಗೆ ಎರಡು ವರ್ಷ ಒಬ್ಬ ಸಹಾಯಕರನ್ನು ಒದಗಿಸಬೇಕಾಯಿತು.

ಗಾಂಧಿಯವರನ್ನು ಕುರಿತ ಸಾಹಿತ್ಯದ ವಿಷಯಕ್ಕೆ ಬಂದಾಗ ಪ್ಯಾರೇಲಾಲರು ಡೆಸ್ಡೆಮೋನಾಳನ್ನು ರಕ್ಷಿಸುತ್ತಿದ್ದ ಒಥೆಲೋ ಇದ್ದಂತೆ. (ಗಾಂಧಿಯವರ) ರಾಶಿ ರಾಶಿ ಸಾಮಗ್ರಿಯಿದೆ. ಜನರಿಗೆ ಬಹುಬೇಗ ಗಾಂಧಿ ಒಬ್ಬ ಮಹಾಪುರುಷರೆಂದು ಗೊತ್ತಾಗಿತ್ತು; ಅವರು ಹೇಳಿದ ಅಥವಾ ಮಾಡಿದ ಪ್ರತಿಯೊಂದನ್ನೂ ದಾಖಲಿಸಿಕೊಂಡು ಸಂರಕ್ಷಿಸಲಾಯಿತು. ಒಮ್ಮೊಮ್ಮೆ ಗಾಂಧೀಜಿಯವರಿಗೆ ಹತ್ತಿರವಾಗಿದ್ದ ಪ್ರತಿಯೊಬ್ಬರೂ ಸಂದರ್ಶಕರ ಜೊತೆ ಅವರಾಡುತ್ತಿದ್ದ ಮಾತುಕತೆಯನ್ನು ದಾಖಲಿಸಿಕೊಳ್ಳುತ್ತಿದ್ದರು.

ಹಾಗೆ ದಾಖಲಿಸಿಕೊಂಡದ್ದನ್ನು ಗಾಂಧೀಜಿಯವರು ನಂತರ ಪರಾಮರ್ಶಿಸಿ, ಅದರಲ್ಲಿ ತಮಗೆ ಇಷ್ಟವಾದದ್ದನ್ನು ಆಯ್ಕೆಮಾಡಿ, ತಿದ್ದಿ ತಮ್ಮ ‘ಇಂಡಿಯನ್ ಒಪೀನಿಯನ್’, ‘ಯಂಗ್ ಇಂಡಿಯಾ’, ‘ನವಜೀವನ್’, ‘ಹರಿಜನ್’ ಎಂಬ ವಾರಪತ್ರಿಕೆಗಳಲ್ಲಿ ಯಾವುದಾದರೊಂದಕ್ಕೆ ಪ್ರಕಟನೆಗಾಗಿ ಕಳಿಸುತ್ತಿದ್ದರು... ನಮ್ಮ ಕಾರ್ಯಭಾರ ಎಲ್ಲ ಸಾಮಗ್ರಿಯನ್ನೂ ಒಂದೆಡೆ ಸಂಕಲಿಸುವುದಷ್ಟೇ ಅಲ್ಲ, ಅದನ್ನು ಹಿಂದಿಗೆ ಅಥವಾ ಇಂಗ್ಲಿಷಿಗೆ ಅಥವಾ ಎರಡೂ ಭಾಷೆಗಳಿಗೆ ಭಾಷಾಂತರಿಸಿ... ಸಾಧ್ಯವಿರುವ ಕಡೆಗಳಲ್ಲೆಲ್ಲ ಅಗತ್ಯವಾದ ಅಡಿಟಿಪ್ಪಣಿಗಳನ್ನು, ಅನುಬಂಧಗಳನ್ನು, ಅನುಕ್ರಮಣಿಕೆಗಳನ್ನು ಒದಗಿಸುವುದು... ಪತ್ರವೊಂದಕ್ಕೆ ಗಾಂಧೀಜಿಯ ಸಹಿಯಿರಲೇಬೇಕು, ಅವರು ಮಾಡಿದ ಭಾಷಣ ಒಂದೆರಡು ದಿನದಲ್ಲೇ ಪತ್ರಿಕೆಗಳಲ್ಲಿ ವರದಿಯಾಗಿರಬೇಕು.

ಒಂದು ಬರಹದ ಬಗ್ಗೆ ಸಂದೇಹವುಂಟಾದಾಗಲೆಲ್ಲ– ಉದಾಹರಣೆಗೆ ನಿರ್ಣಯವೊಂದರ ಕರಡನ್ನು ಅವರೇ ಸಿದ್ಧಪಡಿಸಿದರೋ ಇಲ್ಲವೋ ಎಂಬುದನ್ನು ಕುರಿತು– -ನಾವು ಅದನ್ನು ಅವರೇ ಬರೆದರೆಂದು ತಿಳಿಯುವುದಕ್ಕೆ ಯಾವುದು ಕಾರಣವಾಗುವುದೋ ಅದರ ಬಗ್ಗೆ ಒಂದು ಟಿಪ್ಪಣಿಯನ್ನು ಸೇರಿಸುತ್ತೇವೆ. ಸಂಪುಟವೊಂದು ಪ್ರಕಟವಾದ ಮೇಲೆ ಮತ್ತೆ ಮತ್ತೆ ಹೊಸ ಹೊಸ ದಾಖಲೆಗಳು ಕಾಣಿಸಿಕೊಳ್ಳುತ್ತವೆ. ಅದನ್ನು ಪೂರಕ ಸಂಪುಟಗಳಲ್ಲಿ ಪ್ರಕಟಿಸಬೇಕೆಂದಿದ್ದೇವೆ.

ಸಂಪಾದನ ಕಾರ್ಯ ಮುಂದುವರಿಯುತ್ತಿದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಯಿತು. ‘ಪ್ರಕಟಣಾ ವಿಭಾಗ’ದ ನಿರ್ದೇಶಕರಾಗಿ ನಿವೃತ್ತರಾದ ಮದನ ಗೋಪಾಲ್ ಒಂದೆಡೆ ಬರೆದಿರುವಂತೆ ಒಂದು ನಾಟಕೀಯ ಘಟನೆಯೂ ನಡೆದುಹೋಯಿತು. ಆಗ ಗಾಂಧಿ ಕೃತಿಶ್ರೇಣಿಯನ್ನು ಮುದ್ರಿಸುತ್ತಿದ್ದ ಅಹಮದಾಬಾದಿನ ನವಜೀವನ್ ಪ್ರೆಸ್ ಸರ್ಕಾರವನ್ನು ಟೀಕಿಸುವಂಥ ಕೆಲವು ಪುಸ್ತಿಕೆಗಳನ್ನು ಮುದ್ರಿಸಿತ್ತು.

ಇದರ ಪರಿಣಾಮವಾಗಿ ಆ ಮುದ್ರಣಾಲಯಕ್ಕೆ ಬೀಗ ಬಿದ್ದಿತು; ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯ ಮಾಲಿಕ ಆರ್.ಎನ್. ಗೋಯೆಂಕಾ ಅವರ ಜೊತೆ ಸಂಪರ್ಕವಿದ್ದವರ ಮೇಲೆಲ್ಲ ಕಣ್ಣಿಡಲಾಯಿತು. ಸ್ವಾಮಿನಾಥನ್ ಒಂದು ಕಾಲದಲ್ಲಿ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯಲ್ಲಿ ಕೆಲಸಮಾಡಿದ್ದವರು. ಹಾಗಾಗಿ ಅವರ ಮೇಲೂ ನಿಗಾ ಇಡಲಾಯಿತು. ಆಗ ಕೃತಿಶ್ರೇಣಿಯ ಸಂಪಾದಕ ಮಂಡಲಿಯ ಅಧ್ಯಕ್ಷರಾಗಿದ್ದವರು ಮೊರಾರ್ಜಿ ದೇಸಾಯಿ. ‘ಇಂಡಿಯಾ ಎಂದರೆ ಇಂದಿರಾ, ಇಂದಿರಾ ಎಂದರೆ ಇಂಡಿಯಾ’ ಎಂಬ ಡಿ.ಕೆ. ಬರೂವ ಅವರ ಘೋಷಣೆ ಮುಗಿಲುಮುಟ್ಟುತ್ತಿದ್ದ ಕಾಲವದು. 

ಒಂದು ದಿನ ಸರ್ಕಾರದ ಕಾರ್ಯದರ್ಶಿಯೊಬ್ಬರು ಈಗ ಪ್ರಸ್ತುತರಾಗಿರುವವರು ಒಬ್ಬರೇ ಗಾಂಧಿ (ಇಂದಿರಾ ಗಾಂಧಿ). ವಸ್ತುಸ್ಥಿತಿ ಹೀಗಿರುವಾಗ ಮಹಾತ್ಮ ಗಾಂಧಿ ಸಮಗ್ರ ಬರಹಗಳ ಯೋಜನೆಯನ್ನು ಯಾವ ಪುರುಷಾರ್ಥಕ್ಕಾಗಿ ಮುಂದುವರಿಸಬೇಕು ಎಂದು ಕೇಳಿದರಂತೆ. ಈ ಸಂದೇಶ ಸಂಪಾದಕ ಮಂಡಲಿಯ ಅಧ್ಯಕ್ಷ  ಮೊರಾರ್ಜಿಯವರಿಗೂ ಪ್ರಧಾನ ಸಂಪಾದಕ ಸ್ವಾಮಿನಾಥನ್ ಅವರಿಗೂ ತಲಪಿತು. ಆಮೇಲೆ ಅದೇ ಕಾರ್ಯದರ್ಶಿ ಸ್ವಾಮಿನಾಥನ್ನರ ಜಾಗಕ್ಕೆ ಕೆ.ಕೆ.ನಾಯರ್ (ಕೃಷ್ಣ ಚೈತನ್ಯ) ಎನ್ನುವವರನ್ನು ನೇಮಿಸಬೇಕೆಂದು ಶಿಫಾರಸು ಮಾಡಿದರಂತೆ.

ಸ್ವಾಮಿನಾಥನ್ ತಮ್ಮನ್ನು ಮನೆಗೆ ಕಳಿಸುವ ಆಜ್ಞೆಗೆ ಕಾಯದೆ ದೀರ್ಘ ಕಾಲ ರಜೆ ಹಾಕಿದರು (೧೯೭೭). ಆ ಸಂದರ್ಭದಲ್ಲಿ ಅವರು ಮದನ ಗೋಪಾಲರಿಗೆ ಬರೆದ ಪತ್ರವಿದು: ‘ನನ್ನ ಜಾಗಕ್ಕೆ ಒಬ್ಬ ಮಹಾನ್ ವಿದ್ವಾಂಸರು ಮತ್ತು ಅದ್ವಿತೀಯ ಚಿಂತಕರು ಬರುತ್ತಾರೆಂದು ತಿಳಿದು ನನಗೆ ಸಂತೋಷವಾಗಿದೆ... ಪಠ್ಯಗಳನ್ನು ಹಾಗೂ ಹಿನ್ನೆಲೆಯ ಸಾಮಗ್ರಿಯನ್ನು ಪುನರ್ಮುದ್ರಿಸುವ ಮತ್ತು ವಿಶ್ಲೇಷಿಸುವ ದಿಸೆಯಲ್ಲಿ ನಾವೀಗ ಅನುಸರಿಸುತ್ತಿರುವ ಕ್ರಮವನ್ನೇ (ಅವರೂ) ಮುಂದುವರಿಸುವುದೊಳ್ಳೆಯದು... ನನಗೆ ಈ ಯೋಜನೆಯ ಜೊತೆ ನಿಕಟ ಸಂಪರ್ಕವಿಟ್ಟುಕೊಂಡು ಅದರ ಯಶಸ್ಸಿಗೆ ನನ್ನ ಕೊಡುಗೆಯನ್ನೂ ಸಲ್ಲಿಸುವ ಅವಕಾಶಮಾಡಿಕೊಡಬೇಕೆಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ. ಆ ಹೊತ್ತಿಗೆ ಇಂಗ್ಲಿಷಿನ ೮೩ ಸಂಪುಟಗಳು, ಹಿಂದಿಯ ೭೩ ಸಂಪುಟಗಳು ಪ್ರಕಟವಾಗಿದ್ದವು. 

ಮುಂದೆ ಯಾರೂ ನಿರೀಕ್ಷಿಸದಿದ್ದ ಬೆಳವಣಿಗೆಯೊಂದು ನಡೆದುಬಿಟ್ಟಿತು. ಚುನಾವಣೆಯಲ್ಲಿ ಕಾಂಗ್ರೆಸ್ (ಇಂದಿರಾ) ಪರಾಭವಗೊಂಡು ಜನತಾ ಪಕ್ಷದ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು. ಮೊರಾರ್ಜಿ ಪ್ರಧಾನಿಯಾದರು. ಅವರು ಕೂಡಲೇ ಮಾಡಿದ ಕೆಲಸ ಸ್ವಾಮಿನಾಥನ್ ಅವರನ್ನು ಕರೆಸಿದ್ದು. ಅವರನ್ನು ಕೇಳಿದ ಮೊದಲ ಪ್ರಶ್ನೆ– ಯಾರು ಈ ಕೆ.ಕೆ.ನಾಯರ್? ಎರಡನೆಯ ಪ್ರಶ್ನೆ– ಇದುವರೆಗೆ ಕೃತಿಶ್ರೇಣಿಯ ಎಷ್ಟು ಸಂಪುಟಗಳು ಹೊರಬಂದಿವೆ, ಎಷ್ಟು ಇನ್ನೂ ಹೊರಬರಬೇಕು? ಸ್ವಾಮಿನಾಥನ್ ತಾವು ನಿವೃತ್ತರಾಗಬಯಸುವುದಾಗಿ ಹೇಳಿದರು. ‘ಯಾಕೆ?’. ‘ವಯಸ್ಸಾಗುತ್ತಿದೆ. ನನಗೆ ೮೦ ವರ್ಷ’. ‘ಇಲ್ಲ, ನೀವು ಹೋಗುವಂತಿಲ್ಲ. ಈ ಯೋಜನೆಯನ್ನು ಪೂರ್ಣಗೊಳಿಸಲೇಬೇಕು’.

೧೯೬೦ರಿಂದ ೧೯೯೧ರವರೆಗೆ ಪ್ರಧಾನ ಸಂಪಾದಕರಾಗಿದ್ದ ಸ್ವಾಮಿನಾಥನ್ ಇಳಿವಯಸ್ಸಿನ ಬಳಲಿಕೆಯಿಂದಾಗಿ ನಿವೃತ್ತರಾಗಬೇಕೆಂದು ನಿರ್ಧರಿಸಿದಾಗ ಕೃತಿಶ್ರೇಣಿಯ ೯೩ ಸಂಪುಟಗಳು ಪ್ರಕಟವಾಗಿದ್ದುವು. ೯೦ ಸಂಪುಟಗಳಿಗೆ ಅವರೇ ಸುದೀರ್ಘ ಪೀಠಿಕೆಗಳನ್ನು ಬರೆದಿದ್ದರು. ಪೂರಕ ಸಂಪುಟಗಳ ಹಾಗೂ ಅನುಕ್ರಮಣಿಕೆಯ ಕೆಲಸ ಮುಂದುವರಿದಿತ್ತು. ಅವರು ಮದರಾಸಿಗೆ ಹಿಂತಿರುಗಿದ ಮೇಲೆ ಕೂಡ ಉಳಿದ ಸಂಪುಟಗಳ ಪ್ರಗತಿಗೆ ಸಂಬಂಧಿಸಿದಂತೆ ನಿರಂತರ ಸಂಪರ್ಕದಲ್ಲಿದ್ದರು. 

ಸ್ವಾಮಿನಾಥನ್ ಸಂಪಾದಕರಾದಾಗ ನಾಲ್ಕು ಸಂಪುಟಗಳಷ್ಟೆ ಪ್ರಕಟವಾಗಿದ್ದುವು. ನಂತರದ ಇಪ್ಪತ್ತು ವರ್ಷಗಳಲ್ಲಿ ಅವರ ಪ್ರಧಾನ ಸಂಪಾದಕತ್ವದಲ್ಲಿ ೮೮ ಸಂಪುಟಗಳು ಹೊರಬಂದುವು. ಎಲ್ಲಕ್ಕಿಂತ ಮುಖ್ಯವಾಗಿ ಅವರ ನೇತೃತ್ವದಲ್ಲಿ ಪ್ರಕಟವಾಗಿರುವ ಆ ಸಂಪುಟಗಳಲ್ಲಿ ಒಂದೇ ಒಂದು ತಪ್ಪಾಗಲೀ ಅಕ್ಷರ ದೋಷವಾಗಲೀ ಇಲ್ಲದಿರುವುದು. 

ಅವರು ಮುದ್ರಣಕ್ಕೆ ಕಳುಹಿಸಲಾಗುತ್ತಿದ್ದ ಪ್ರತಿಯೊಂದು ಸಂಪುಟವನ್ನೂ ಕೂಲಂಕಷವಾಗಿ ಪರಿಶೀಲಿಸಿ, ಅಂತಿಮ ಕರಡು ಪ್ರತಿಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡಿ, ಅಕ್ಷರ ದೋಷಗಳನ್ನು ತಿದ್ದಿ ಸಂಬಂಧಪಟ್ಟ ಸಂಪಾದಕರಿಗೆ ಕಳುಹಿಸುತ್ತಿದ್ದರು. ಅವರಿಗೆ ಗಾಂಧೀಜಿಯ ಭಾಷೆ, ವಾಕ್ಯಸರಣಿ, ನಿರೂಪಣಾ ಕ್ರಮ, ಎಲ್ಲವೂ ಕರಗತವಾಗಿಬಿಟ್ಟಿದ್ದವು. ಹಾಗಾಗಿ ಮಹಾತ್ಮರ ಗುಜರಾತಿ ಮತ್ತು ಹಿಂದಿ ಬರಹಗಳ ಇಂಗ್ಲಿಷ್ ಅನುವಾದಗಳಿಗೆ ಅವರು ಮಹಾತ್ಮರದೇ ಇಂಗ್ಲಿಷ್ ಶೈಲಿಯನ್ನು ಅನುಸರಿಸಿದರೆನ್ನಬೇಕು. 

ಸ್ವಾಮಿನಾಥನ್ ಗಾಂಧೀವಾದಿ, ಹೌದು. ಆದರೆ ಕಟ್ಟಾ ಗಾಂಧೀವಾದಿಯಲ್ಲ. ಸಮಗ್ರ ಬರಹಗಳ ಅಧಿಕೃತತೆಗೆ, ಅದರ ಯಶಸ್ಸಿಗೆ ಇದೂ ಒಂದು ಕಾರಣವಿದ್ದೀತು. ಆಶ್ಚರ್ಯ ಹುಟ್ಟಿಸುವ ಸಂಗತಿಯೆಂದರೆ ಅವರು ಸಂಪಾದಿಸಿದ ಯಾವುದೇ ಸಂಪುಟದಲ್ಲೂ ಅವರ ಹೆಸರಿಲ್ಲ. ಅವರ ಹೆಸರಿರುವುದು ಆ ಯೋಜನೆಯಲ್ಲಿ ಕೆಲಸಮಾಡಿದ ಎಲ್ಲರ ಹೆಸರುಗಳಲ್ಲಿ ಒಂದಾಗಿ -ಕೊನೆಯ ಸಂಪುಟದಲ್ಲಿ. ಇಂಥ ನಿಸ್ವಾರ್ಥ, ನಿರ್ಮಮಕಾರ ತೀರ ಅಪರೂಪ; ಅದನ್ನು ಮಹಾತ್ಮರು ಮಾತ್ರ ಮೆಚ್ಚಿಕೊಳ್ಳುತ್ತಿದ್ದರೇನೊ.

ಸಇಂಗ್ಲೆಂಡಿನ ‘ಜರ್ನಲ್ ಆಫ್ ಮಾಡರ್ನ್ ಹಿಸ್ಟರಿ’ ಎಂಬ ಪ್ರಸಿದ್ಧ ಪತ್ರಿಕೆ ಗಾಂಧಿ ಕೃತಿಶ್ರೇಣಿಯನ್ನು ವಿಮರ್ಶಿಸುತ್ತಾ ಬರೆದಿರುವುದನ್ನು ನೋಡಿ: ‘ಮೂಲ ಆಕರಗಳನ್ನು ಪರಿಶೀಲಿಸಿ ನಿರ್ಧರಿಸುವಲ್ಲಿ, ಬರೆದದ್ದು ಯಾರೆಂದು ಅಧಿಕೃತವಾಗಿ ಕಂಡುಕೊಳ್ಳುವಲ್ಲಿ, ಪತ್ರಗಳಲ್ಲಿ ಕಾಣಿಸಿಕೊಳ್ಳುವ ಅಷ್ಟೇನೂ ಪರಿಚಿತರಲ್ಲದ ವ್ಯಕ್ತಿಗಳನ್ನು ಗುರುತು ಹಿಡಿಯುವುದರಲ್ಲಿ, ಮೌಲಿಕ ಹಿನ್ನೆಲೆಯನ್ನೂ ಅನುಬಂಧದ ಸಾಹಿತ್ಯವನ್ನೂ ಒದಗಿಸುವಲ್ಲಿ ಅವರು ಪಾಂಡಿತ್ಯದ ಅತ್ಯುನ್ನತ ಮಟ್ಟವನ್ನು ಕಾಯ್ದುಕೊಂಡಿದ್ದಾರೆ’ ಎಂದು ಬರೆಯಿತು.  
  
೧೯೯೦ರ ಅಕ್ಟೋಬರ್ ತಿಂಗಳಲ್ಲಿ ತಮ್ಮ ಮಿತ್ರರೊಬ್ಬರಿಗೆ ಪತ್ರ ಬರೆಯುತ್ತಾ ಸ್ವಾಮಿನಾಥನ್, ‘ಗಾಂಧಿಯವರ ಧರ್ಮ ವೋಟಿಗಾಗಿ ಹಸಿದುಕೊಂಡಿರುವ ತೋಳಗಳಿಂದ, ಹುಲಿಗಳಿಂದ ದೇಶವನ್ನು ಸಂರಕ್ಷಿಸುತ್ತದೆ ಎಂಬ ನಂಬಿಕೆಯಲ್ಲಿ, ಭರವಸೆಯಲ್ಲಿ ನಾನಿದ್ದೇನೆ’ ಎಂದರು. ರಾಮಜನ್ಮಭೂಮಿ -ಬಾಬರಿ ಮಸೀದಿ ವಿವಾದವಂತೂ ಅವರನ್ನು ಹಿಂಡಿಬಿಟ್ಟಿತ್ತು. ಮಾಜಿ ರಾಷ್ಟ್ರಪತಿ ಆರ್. ವೆಂಕಟರಾಮನ್ ಚಿದಂಬರಂನ ಶ್ರೀ ಮೀನಾಕ್ಷಿ ಕಾಲೇಜಿನಲ್ಲಿ ಅವರ ವಿದ್ಯಾರ್ಥಿಯಾಗಿದ್ದವರು.

ಗೌರವಾನ್ವಿತ ಮುತ್ಸದ್ಧಿ ರಾಜಕಾರಣಿ ಆರ್. ಪಾರ್ಥಸಾರಥಿ ಮದರಾಸಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅವರ ಸಹಪಾಠಿ. ಪ್ರಸಿದ್ಧ ಇತಿಹಾಸಕಾರ ರಾಮಚಂದ್ರ ಗುಹ ತಮ್ಮ ‘ಅನ್ ಆಂತ್ರಪಾಲಜಿಸ್ಟ್ ಅಮಾಂಗ್ ಮಾರ್ಕ್ಸಿಸ್ಟ್ಸ್ ಅಂಡ್ ಅದರ್ ಎಸ್ಸೇಸ್’ ಎಂಬ ಗ್ರಂಥದಲ್ಲಿ ಬರೆದಿರುವಂತೆ ೧೯೯೦ ಮತ್ತು ೧೯೯೧ರಲ್ಲಿ ಸ್ವಾಮಿನಾಥನ್ ಈ ಇಬ್ಬರಿಗೂ ಹಲವಾರು ಪತ್ರಗಳನ್ನು ಬರೆದು ಅಯೋಧ್ಯಾ ವಿವಾದವನ್ನು ಉಭಯ ಪಕ್ಷಗಳಿಗೂ ಗೌರವ ತರುವಂಥ ರೀತಿಯಲ್ಲಿ ಶಾಂತಿಯುತವಾಗಿ ಬಗೆಹರಿಸುವ ದೃಷ್ಟಿಯಿಂದ ಮಧ್ಯೆ ಪ್ರವೇಶಿಸಬೇಕೆಂದು ಕೇಳಿಕೊಂಡರು.

ಆಗ ಪಾರ್ಥಸಾರಥಿಯವರಿಗೆ ಮೊದಲಿದ್ದಂತೆ ಪ್ರಭಾವವಿರಲಿಲ್ಲ. ವೆಂಕಟರಾಮನ್ ಅವರಿಗೆ ತಮ್ಮ ಪ್ರಭಾವವನ್ನು ಚಲಾಯಿಸುವ ಸಾಮರ್ಥ್ಯವಿರಲಿಲ್ಲ ಅಥವಾ ಆಸಕ್ತಿಯಿರಲಿಲ್ಲ. ೧೯೨೨ರ ಡಿಸೆಂಬರ್‌ನಲ್ಲಿ ಮಂದೆ ಮಂದೆ ಹನುಮಂತರು ಅಯೋಧ್ಯೆಯ ಮಸೀದಿಯನ್ನು ನೆಲಸಮಮಾಡುವುದರಲ್ಲಿ ಅಂತಿಮವಾಗಿ ಜಯಶೀಲರಾದರು. ಈ ಕೃತ್ಯ ದೇಶಭಕ್ತ, ಗಾಂಧಿವಾದಿ, ಹಿಂದೂ- ಈ ಮೂರು ಆಗಿದ್ದ ಸ್ವಾಮಿನಾಥನ್ನರನ್ನು ಘಾಸಿಗೊಳಿಸಿತು.

ಸ್ವಾಮಿನಾಥನ್‌ರಿಗೆ ನಮ್ಮ ಮಾಸ್ತಿಯವರ ನಿಕಟ ಸಂಪರ್ಕವೂ ಇತ್ತು. ಮಾಸ್ತಿಯವರು ನಿಧನರಾದಾಗ ಎಚ್.ವೈ. ಶಾರದಾಪ್ರಸಾದರಿಗೆ ಬರೆದೊಂದು ಪತ್ರದಲ್ಲಿ, ದಿಗ್ಗಜರು ಒಬ್ಬೊಬ್ಬರಾಗಿ ಕಣ್ಮರೆಯಾಗುತ್ತಿದ್ದಾರೆ. ಈಗ ಮಾಸ್ತಿಯವರು, ಜೆ.ಕೆ. (ಜಿಡ್ಡು ಕೃಷ್ಣಮೂರ್ತಿ), ರುಕ್ಮಿಣಿದೇವಿ, ಕೆ. ನಾಗರಾಜನ್ ಮತ್ತು ಪಿ.ಎನ್. ಅಪ್ಪುಸ್ವಾಮಿಯವರನ್ನು ಹಿಂಬಾಲಿಸಿಕೊಂಡು ಸೂರ್ಯಾಸ್ತದ ನಾಡಿಗೆ ಹೊರಟಿದ್ದಾರೆ ಎಂದು ಹಳಹಳಿಸಿದರು.

ಜೊತೆಗೆ ೧೯೩೦-೧೯೬೦ರ ಕಾಲದಲ್ಲಿ ತಮಗೆ ಪರಿಚಿತರಾಗಿದ್ದ ಬೆಂಗಳೂರಿನ ಕೆಲವರು ಸ್ನೇಹಿತರನ್ನೂ ಅವರ ಜೊತೆ ತಾವು ನಡೆಸಿದ ಮಾತುಕತೆಗಳನ್ನೂ ನೆನಪಿಸಿಕೊಂಡು, ‘ಆ ನಕ್ಷತ್ರ ಮಂಡಲದಲ್ಲಿ ಮಾಸ್ತಿಯವರದು ಅತ್ಯಂತ ಪರಿಪಕ್ವ ವ್ಯಕ್ತಿತ್ವ, ಕಾವ್ಯಸಹಜ ಮನೋಧರ್ಮ.

ಅವರು ನನ್ನಂಥ ಯುವಕರ ಜೊತೆ ತಮ್ಮ ಒಳನೋಟಗಳನ್ನು ಹಂಚಿಕೊಳ್ಳುವಲ್ಲಿ ತುಂಬ ಧಾರಾಳಿಯಾಗಿದ್ದರು. ಅವರ ದೃಷ್ಟಿಯಲ್ಲಿ ಇತಿಹಾಸವೆನ್ನುವುದು ರಾಮಾಯಣದಲ್ಲೂ ಮಹಾಭಾರತದಲ್ಲೂ ಕಂಡುಬರುವ  ಹಲವು ಪ್ರಸಂಗಗಳ ಮರುರೂಪವಷ್ಟೇ. ಇನ್ನು ಅವರ ಕತೆಗಳ ನಿರೂಪಣಾ ವಿಧಾನದ ಅಡಿಯಲ್ಲಿ ಅಂತರ್ಗತ ಅರ್ಥದ ಪದರ ಪದರಗಳೇ ಅಡಗಿರುತ್ತಿದ್ದವು’ ಎಂದು ವಿಶ್ಲೇಷಿಸಿದ್ದುಂಟು.

ಗಾಂಧೀಜಿ ಕವಿಯಲ್ಲ, ಸಾಹಿತಿಯಲ್ಲ. ತಮ್ಮ ಮಾತಾಗಲೀ ಬರಹವಾಗಲೀ ಸಾಹಿತ್ಯವಾಗಬೇಕೆಂಬ ಅಪೇಕ್ಷೆ ಅವರಿಗೆ ಎಳ್ಳಷ್ಟೂ ಇರಲಿಲ್ಲ. ಅವರ ನೂರಾರು ಭಾಷಣಗಳ, ಬರವಣಿಗೆಯ ಸಾವಿರಾರು ಪುಟಗಳ ಉದ್ದೇಶ ಒಂದೇ,- ತಮ್ಮ ಮನಸ್ಸಿನ ಅಭಿಪ್ರಾಯ ಭರತಖಂಡದ ಅತ್ಯಂತ ಸಾಮಾನ್ಯ ಮನುಷ್ಯನಿಗೂ ನೇರವಾಗಿ ಅರ್ಥವಾಗಬೇಕು ಎಂಬುದು.

ತಮ್ಮ ಮಾತೃಭಾಷೆಯಾದ ಗುಜರಾತಿಯಲ್ಲಾಗಲಿ, ಅನಂತರ ತಾವು ಕಲಿತ ಹಿಂದಿ–ಇಂಗಿಷುಗಳಲ್ಲಾಗಲಿ ಬರೆಯುವಾಗ, ನುಡಿಯುವಾಗ ಅವರಿಗೆ ಇದೊಂದೇ ಗುರಿ. ಈಗ ಅಚ್ಚಾಗಿ ಗಾಂಧಿಸಾಹಿತ್ಯ ಎಂಬ ಹೆಸರಿನಿಂದ ಪ್ರಕಟವಾಗಿರುವ ಪುಸ್ತಕಗಳನ್ನೆಲ್ಲ ತಿರುವಿದರೆ ಅವರ ಉದ್ದೇಶ ನೂರಕ್ಕೆ ನೂರರಷ್ಟು ಸಫಲವಾಯಿತು ಎಂಬುದು ಯಾರಿಗೂ ಸ್ಪಷ್ಟವಾಗುವಂತಹ ವಿಷಯ... ಗಾಂಧೀಜಿಯವರ ಬರವಣಿಗೆಯನ್ನು ನೋಡಿದರೆ ಅದರ ಮತ್ತೊಂದು ವಿಶಿಷ್ಟ ಲಕ್ಷಣ ಎದ್ದು ಕಾಣುತ್ತದೆ.

ಅವರ ವಾಕ್ಯಗಳೆಲ್ಲ ಸಾಮಾನ್ಯವಾಗಿ ತೀರ ಹ್ರಸ್ವ. ಉದ್ದವಾಗಿ ಓದುವವನ ಉಸಿರು ಕಟ್ಟಿಸುವ ವಾಕ್ಯಗಳು ತೀರಾ ಕಡಮೆ, ಇಲ್ಲ ಎಂದೇ ಹೇಳಬಹುದು. ಆ ವಾಮನ ಪಾದಗಳಲ್ಲೇ ಅಪಾರವಾದ ಶಕ್ತಿಯನ್ನು ತುಂಬಿದ್ದು ಅದರ ವೈಶಿಷ್ಟ್ಯ... ಇವು ನಮ್ಮ ಪ್ರಸಿದ್ಧ ಲೇಖಕ ಪ್ರಭುಶಂಕರ ಅವರ ಕೆಲವು ಸಾಲುಗಳು.  ಸ್ವಾಮಿನಾಥನ್ ಇಲ್ಲದಿದ್ದಿದ್ದರೆ ನಮಗೆಲ್ಲರಿಗೂ ಇಂಥ ಅನುಭವವನ್ನು ತಂದುಕೊಡುವ ಮಹಾತ್ಮರ ಸಮಗ್ರ ಸಾಹಿತ್ಯವೇ ದೊರೆಯುತ್ತಿರಲಿಲ್ಲವೇನೊ.  
  
ಸ್ವತಃ ಗಾಂಧಿಯವರಿಗೇ ತಮ್ಮ ಸಮಗ್ರ ಕೃತಿಶ್ರೇಣಿ ಸಿದ್ಧವಾಗುತ್ತಿದೆಯೆಂದು ಗೊತ್ತಾಗಿದ್ದಿದ್ದರೆ ಅವರು ಏನು ಹೇಳಬಹುದಿತ್ತು? ಸ್ವಾಮಿನಾಥನ್ ಬರೆದಿರುವಂತೆ, ಅವರಿಗೆ ನಿಜಕ್ಕೂ ಇಷ್ಟವಾಗುತ್ತಿರಲಿಲ್ಲ. ಯಾಕೆಂದರೆ ‘ನಾನು ಹೇಳುವುದು ಮುಖ್ಯವಲ್ಲ, ನಾನು ಮಾಡುವುದಷ್ಟೇ ಮುಖ್ಯ’ ಎಂದು ಅವರು ಪದೇ ಪದೇ ಹೇಳುತ್ತಿದ್ದರು.

ಸ್ವಾಮಿನಾಥನ್ ಮೊಟ್ಟಮೊದಲು ಗಾಂಧೀಜಿಯನ್ನು ನೋಡಿದ್ದು ೧೯೧೫ರ ಏಪ್ರಿಲ್ ತಿಂಗಳಲ್ಲಿ, ಮದರಾಸಿನಲ್ಲಿ. ಆಗ ಗಾಂಧಿಯವರು ಕೆಲವು ದಿನ ಸಂಪಾದಕ-–ಪ್ರಕಾಶಕ ಜಿ.ಎ. ನಟೇಷನ್ ಅವರ ಮನೆಯಲ್ಲಿ ತಂಗಿದ್ದರು. ಅವರನ್ನು ನೋಡಿಕೊಳ್ಳುತ್ತಿದ್ದ ವಿದ್ಯಾರ್ಥಿಗಳಲ್ಲಿ ನಮ್ಮ ಸ್ವಾಮಿನಾಥನ್ನರೂ ಒಬ್ಬರು.

ಅವರ ಕೆಲಸ ಹಕ್ಕಿಗರಿಯ ಲೇಖನಿಯನ್ನು (ನಿಬ್ಬುಗಳು ಆಮದಾಗುತ್ತಿದ್ದುದರಿಂದ ಗಾಂಧಿಯವರು ಅದನ್ನು ಉಪಯೋಗಿಸುತ್ತಿರಲಿಲ್ಲ) ಶುಚಿಗೊಳಿಸುವುದು, ಮಸಿ ಕುಡಿಕೆಯಲ್ಲಿ ಸ್ವದೇಶಿ ಮಸಿ ತುಂಬಿಸಿಡುವುದು, ಗಾಂಧಿಯವರ ಜೊತೆ ಕಾಲ್ನಡಿಗೆಯಲ್ಲಿ ಅಥವಾ ಟ್ರಾಮಿನಲ್ಲಿ ಸ್ಯಾನ್ ಥೋಮ್‌ನಲ್ಲಿದ್ದ ರೋಮನ್ ಕ್ಯಾಥೊಲಿಕ್ ಬಿಷಪ್ಪರ ಮನೆಗೋ, ಸೇಂಟ್ ಜಾರ್ಜ್ ಕೆಥೀಡ್ರಲ್ ಬಳಿಯಿದ್ದ ಆಂಗ್ಲಿಕನ್ ಬಿಷಪ್ಪರ ಮನೆಗೋ, ಮೌಟ್ ರೋಡಿನ ಮಹಾಜನ ಸಭಾ ಹಾಲಿಗೋ, ಮೈಲಾಪುರದ ರಾನಡೆ ಹಾಲಿಗೋ ಹೋಗಿಬರುವುದು. ಐದು ವರ್ಷಗಳ ನಂತರ ಅವರು ಮತ್ತೆ ಮದರಾಸಿನಲ್ಲಿಯೇ ಮಹಾತ್ಮರನ್ನು ಭೇಟಿಯಾದರು.

ಮಹಾತ್ಮರು ದೇಶಕಾರ್ಯಕ್ಕಾಗಿ ದೃಢಕಾಯರೂ ಅಹಿಂಸಾಪರರೂ ಆದ ಸ್ವಯಂಸೇವಕರನ್ನು ಆಯ್ಕೆಮಾಡಿಕೊಳ್ಳುತ್ತಿದ್ದ ಕಾಲವದು. ಸ್ವಾಮಿನಾಥನ್ ಆಯ್ಕೆಯಾಗಲಿಲ್ಲ. ಅವರ ನಿರಾಶೆಯನ್ನು ಗಮನಿಸಿದ ಮಹಾತ್ಮರು, ನೀನೀಗ ನನ್ನ ಜೊತೆ ಸೇರಿಕೊಳ್ಳದಿರಬಹುದು. ಆದರೆ ನನಗೆ ಅಗತ್ಯವಾದಾಗ, ನೀನೂ ಸಿದ್ಧವಾಗಿರುವಾಗ ನಿನಗೆ ಖಂಡಿತ ಕರೆಕಳಿಸುತ್ತೇನೆ ಎಂದರು. ಹೌದು, ಮಹಾತ್ಮರು ಹೇಳಿದಂತೆ ನಡೆದುಕೊಂಡರು -ತಮ್ಮ ನಿಧನಾನಂತರ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT