ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಬ್ಬಿ ಮತ್ತು ಬ್ರಹ್ಮಾಸ್ತ್ರ

ಅಶಕ್ತ ರೈತನ ಕೈಗೆ ಪ್ರಬಲ ಅಸ್ತ್ರ ಕೊಡುವವರು ಯಾರು?
Last Updated 26 ಜುಲೈ 2015, 19:30 IST
ಅಕ್ಷರ ಗಾತ್ರ

ರೈತರ ಆತ್ಮಹತ್ಯೆಗೆ ಕಾರಣಗಳನ್ನು ಹುಡುಕಲು ಸರ್ಕಾರದ ಸಮಿತಿ ಸಿದ್ಧವಾಗಿದೆ. ಅದು ‘ನಿಧಾನಕ್ಕೆ’ ತನ್ನ ವರದಿ ನೀಡುತ್ತದೆ. ಅದಕ್ಕೂ ಮುಂಚೆ ‘ನಾಗರಿಕ’ ವಲಯ ಹಲವು ಕಾರಣಗಳನ್ನು ಗುರುತಿಸಿ, ಬೊಟ್ಟು ಮಾಡಿ ತೋರಿಸುತ್ತಿದೆ. ಅದರಲ್ಲಿ ಬಹುಚರ್ಚಿತವಾಗುತ್ತಿರುವ ಕಾರಣವೆಂದರೆ, ವರದಕ್ಷಿಣೆ ಪಿಡುಗು ಮತ್ತು ರೈತರು ಮಾಡುವ ದುಂದುವೆಚ್ಚ.

ವರದಕ್ಷಿಣೆ ಎಂಬುದು ಸಾರ್ವತ್ರಿಕ ಸಮಸ್ಯೆ. ಅದು ಹಳ್ಳಿಗಳಲ್ಲಿ ಮಾತ್ರ ಇಲ್ಲ. ನಗರಗಳ ಪ್ರಜ್ಞಾವಂತರು,  ವಿಶ್ವವಿದ್ಯಾಲಯಗಳ ದೊಡ್ಡ ಓದಿನ ವಿದ್ಯಾವಂತರೂ, ಭಾರೀ ತೂಕದ ವರದಕ್ಷಿಣೆ ಪಡೆದ ಉದಾಹರಣೆಗಳು ಸಾಕಷ್ಟಿವೆ. ಅದಕ್ಕೆ ಹೋಲಿಸಿದರೆ ಹಳ್ಳಿಗಳ ವರದಕ್ಷಿಣೆ ಪ್ರಮಾಣ ತುಸು ಕಡಿಮೆ ಎಂದೇ ಹೇಳಬೇಕು. ಆದರೆ ವರದಕ್ಷಿಣೆಯೊಂದಿಗೆ ಮದುವೆಯ ಒಟ್ಟು ಖರ್ಚಿದೆಯಲ್ಲ? ಅದು ರೈತನಿಗೆ ಹೊರಲು ಸಾಧ್ಯವಾಗುವುದಕ್ಕಿಂತ ತುಸು ಹೆಚ್ಚಿನ ಭಾರದ್ದೇ ಆಗಿರುತ್ತದೆ. ಆದರೆ ರೈತರು ಮಾಡುವ ದುಂದು ವೆಚ್ಚದ ಮದುವೆಗಳೆಂಬ ಸಾಮಾಜಿಕ ಸಮಸ್ಯೆಯ ಹಿಂದಿನ ಕಾರಣವನ್ನೂ  ಕೆದಕಬೇಕಾಗುತ್ತದೆ. ರೋಗ ಮೂಲ ತಿಳಿದರೆ ಮದ್ದು ಹುಡುಕುವುದೂ ಸುಲಭ.

ಹಿಂದೆ ಮದುವೆಗಳು ಊರಲ್ಲಿ ನಡೆಯುತ್ತಿದ್ದವು. ಊರವರೆಲ್ಲ ಸಹಕರಿಸಿ ಅದನ್ನು ನೆರವೇರಿಸುತ್ತಿದ್ದರು. ಆದರೆ ಈಗ ಹಳ್ಳಿಯ ಮದುವೆಗಳೆಲ್ಲ ಪಾತ್ರೆ-ಪಗಡೆ ಸಮೇತ ನಗರಕ್ಕೆ ಬಂದು ಬೀಳುತ್ತಿವೆ. ಈ ಬದಲಾವಣೆಗೆ ಕಾರಣ, ಹಳ್ಳಿಗಳಲ್ಲಿ ಈಗ ಇಲ್ಲದ ಒಗ್ಗಟ್ಟು. ಈ ಒಗ್ಗಟ್ಟನ್ನು ಮುರಿದದ್ದು ಹಳ್ಳಿಗೆ ನುಸುಳಿರುವ ‘ರಾಜಕೀಯ’. ಈಗ ಹಳ್ಳಿಗಳಲ್ಲಿ ಯಾರೂ ಯಾರ ಮಾತನ್ನೂ ಕೇಳುವುದಿಲ್ಲ.  ಹಾಗಾಗಿಯೇ ಊರವರು ನಿಂತು ಊಟ ಬಡಿಸಬೇಕಿದ್ದ ಜಾಗಕ್ಕೆ, ಕಾಂಟ್ರಾಕ್ಟಿನವರು ಬಂದಿದ್ದಾರೆ.

ರೈತನ ಬೇಕುಗಳು ಹಿಂದೆ ಇಷ್ಟೆಲ್ಲ ಇರಲಿಲ್ಲ. ಇದಕ್ಕೆ ಕಾರಣ ಹುಡುಕಬೇಕಾದರೆ, ‘ಬಿಡುವಿನಲ್ಲಿ ಜನಪದ ಹಾಡುತ್ತಿದ್ದವರಿಗೆ ಟಿ.ವಿ ತೋರಿಸಿದವರು ಯಾರು? ಲಂಗ ರವಿಕೆಯ ಹುಡುಗಿಯ ಪೆದ್ದಿ ಮಾಡಿ, ಜೀನ್ಸಿನ ಹುಡುಗಿಯ ಜಾಣೆ ಎಂದವರು ಯಾರು? ಹೊರಳುಕಲ್ಲಿನ ಜಾಗಕೆ ಮಿಕ್ಸಿ ಕೊಟ್ಟವರು ಯಾರು?’ ಎಂಬ ಪ್ರಶ್ನೆಗಳಿಗೆಲ್ಲ ಮೊದಲು ಉತ್ತರ ಕಂಡುಕೊಳ್ಳಬೇಕು.

ಕೃಷಿಕರ ಭಾರತ ಕೈಗಾರಿಕೀಕರಣಕ್ಕೆ ಹೊರಳಿಕೊಳ್ಳುತ್ತಾ, ಓದು ಕಲಿತ ರೈತನ ಮಗ ಊರು ಬಿಡತೊಡಗಿದ. ಸೂಟು ಬೂಟು ಏರಿಸಿಕೊಂಡ. ಸಂಪರ್ಕ ಕ್ರಾಂತಿಯಾಯಿತು. ನಗರಗಳು ಹಳ್ಳಿಗಳಿಗೆ ಹತ್ತಿರವಾದವು, ಟಿ.ವಿ ಜಾಹೀರಾತುಗಳು ನೂರಾರು ಸರಕುಗಳನ್ನು ತಂದು ರೈತನ ಮನೆ ಅಂಗಳದಲ್ಲಿ ಸುರಿದು ನಕ್ಕವು. ರೈತ ಅದನ್ನೆಲ್ಲ ಕೈಗೆತ್ತಿಕೊಂಡ. ಮಣ್ಣಿನ ಕೈಯನ್ನು ಜಾಹೀರಾತಿನಲ್ಲಿ ಕಂಡ ಸೋಪಲ್ಲಿ ತೊಳಕೊಂಡ. ಇತ್ತ, ಸಗಣಿ ಹಾಕಿ ಬೆಳೆಯುತ್ತಿದ್ದವನಿಗೂ ಹೊಸ ಉತ್ಪನ್ನ ಬಂದಿತ್ತು. ವಿದೇಶಿ ರಾಸಾಯನಿಕ, ಹೊಸ ಗೊಬ್ಬರಗಳು ಜಾದೂ ತೋರಿಸತೊಡಗಿದ್ದವು. ಇವರ ಪರವಾಗಿ ಅಲ್ಲಿ ಯಾರೋ ಯಾರೊಂದಿಗೋ ಕೈಕುಲುಕಿ ಸಹಿ ಹಾಕಿದ್ದರು.

ಬೀಜಗಳು, ಮ್ಯಾಜಿಕ್ ಗೊಬ್ಬರಗಳು ನಿಧಾನಕ್ಕೆ ದರ ಹೆಚ್ಚಿಸಿಕೊಳ್ಳುತ್ತಲೇ ಹೋದವು. ಅದರ ಫಲವಾಗಿ ಭೂಮಿಯೊಂದಿಗೆ ರೈತನೂ ಫಲವತ್ತತೆ ಕಳೆದುಕೊಂಡ.  ಅಲ್ಲಿ ಗೊಬ್ಬರವನ್ನೂ ಕೊಟ್ಟರು, ಇಲ್ಲಿ ಸೋಪು ಪೌಡರು, ಸೆಂಟು ಬಾಟಲುಗಳನ್ನೂ ಕೊಟ್ಟರು. ಮನುಷ್ಯ ಸ್ವಭಾವದವನೇ ಆದ ರೈತ ಏನು ಮಾಡಬೇಕಿತ್ತು? ಆಯ್ಕೆ ಏನಿತ್ತು? ಅಥವಾ ಇದು ತಪ್ಪು ಆಯ್ಕೆ. ಮುಂದೆ ಹಾನಿಯಾಗಲಿದೆ ಎಂದು ಹೇಳಿದವರು ಯಾರು? 20-25 ವರುಷಗಳ ಹಿಂದೆ, ಬೆಳೆಗಳಿಗೆ ಬರುವ ರೋಗಗಳಿಗೆ ಇಂತಿಂಥ ಔಷಧಿಗಳನ್ನು ಇಷ್ಟಿಷ್ಟು ಪ್ರಮಾಣದಲ್ಲಿ ಹಾಕಿ ಎಂದು ರೈತರಿಗೆ ಸಲಹೆ ಕೊಡುತ್ತಿದ್ದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಇಂದು ಸಾವಯವ, ಸಗಣಿ, ಗಂಜಲ ಅಂತೆಲ್ಲ  ಮಾತುಬದಲಿಸಿದರೆ, ಗೊಂದಲಕ್ಕೀಡಾದ ರೈತ, ಮತ್ತು ಕಂಪೆನಿ ಗೊಬ್ಬರಕ್ಕೆ ಒಗ್ಗಿಹೋದ ಭೂಮಿ, ಏನು ಮಾಡಬೇಕು? ಹಾಗೆ ದಿಢೀರನೆ ಬದಲಾಗಲು ಮಣ್ಣೆಂಬುದು ಮನುಷ್ಯರ ನಾಲಗೆಯಲ್ಲವಲ್ಲ?

ತನ್ನ ಮನೆಗೆ ಬೇಕಾದ್ದನ್ನು ಬೆಳೆದುಕೊಂಡು ಅದನ್ನೇ ಆನಂದದಿಂದ ಉಣ್ಣುತ್ತಿದ್ದ ರೈತನಿಗೆ, ಏಕಬೆಳೆಯ ಯೋಚನೆ ಬಿತ್ತಿ, ಲಕ್ಷಗಳ ಆಸೆ ಹುಟ್ಟಿಸಿದವರಾರು? ಆಗ, ಸಕ್ಕರೆ ಕಾರ್ಖಾನೆಗಳು ಬಂದು ಸುತ್ತಲ ರೈತರನ್ನೆಲ್ಲ ಪ್ರೇರೇಪಿಸಿದವು.  ಮುಂದಾಗಬಹುದಾದ ಅಪಾಯ ಅರಿಯಲು ರೈತನೇನೂ ತ್ರಿಕಾಲ ಜ್ಞಾನಿಯಲ್ಲವಲ್ಲ? ಒಮ್ಮೆ ನೆಟ್ಟ ಮೇಲೆ ವರ್ಷಪೂರ್ತಿ ಕಬ್ಬಿಗೇನು ಕೆಲಸ? ಮೋಟರು, ಆಟೊ ಸ್ಟಾರ್ಟರು ಇದ್ದರಂತೂ ಇನ್ನೂ ಸುಲಭ. ಹೆಚ್ಚೇನೂ ಶ್ರಮವಿಲ್ಲದ ಕೆಲಸ. ಲಕ್ಷದ ಆದಾಯ. ಕೆಲಸವಿಲ್ಲದಾಗ ನೋಡಲು ಟಿ.ವಿ. ಹೀಗೆ, ಪ್ಯಾರಾಚೂಟಿನಲಿ ಹಾರಿದಂತಿದ್ದ ರೈತನನ್ನು ಯಾವುದೋ ಎತ್ತರಕ್ಕೆ ಕೊಂಡೊಯ್ದು ಕೈಬಿಟ್ಟಿದ್ದಾರೆ, ಬಿದ್ದ ಏಟಿಗೆ ಕೆಲವರು ಸತ್ತೇ ಹೋಗಿದ್ದಾರೆ. ಮತ್ತೆ ಕೆಲವರು ಅಸ್ವಸ್ಥರಾಗಿದ್ದಾರೆ. ಪ್ಯಾರಾಚೂಟಿನಾಟದಲಿ, ಸರ್ಕಾರಿ ಆಸ್ಪತ್ರೆಯಲಿ ಉಳಿಯುವವರೆಷ್ಟೋ. ಸಾಯುವವರೆಷ್ಟೋ?‌

ದುಂದು ವೆಚ್ಚದ ಮೂಲವೂ ಇದರಲ್ಲೇ ಇದೆ.  ನಗರದ ಸುತ್ತಲ ಹಳ್ಳಿಗಳನ್ನು ರಿಯಲ್‍ ಎಸ್ಟೇಟಿನವರು ಕೊಂಡರು. ಜೀವಮಾನ ದುಡಿದರೂ ಕಾಣಲಾಗದ ಮೊತ್ತವ ಒಂದೇ ಏಟಿಗೆ ಕೊಟ್ಟರು. ಆ ಹಣ ಹಳ್ಳಿಗರ ಕೈಲಿ ಮಾಡಬೇಕಾದ್ದು, ಮಾಡಬಾರದ್ದು ಎಲ್ಲವನ್ನೂ ಮಾಡಿಸಿತು. ನಗರಗಳ ಸುತ್ತಲ ಹಳ್ಳಿಗೆ ಹರಡಿದ ಈ ಸಾಂಕ್ರಾಮಿಕ ಅದರ ಪಕ್ಕದ ಹಳ್ಳಿಗೆ ಮತ್ತದರ ಪಕ್ಕಕ್ಕೆ ಹರಡುತ್ತಾ, ನಿಧಾನಕ್ಕೆ ರೈತನ ಬದುಕಿಗೂ ಒಂದು ಕೈ ಮೀರಿದ ಖರ್ಚು ಸೃಷ್ಟಿಸಿದೆ. ಸಮೂಹ ಸನ್ನಿಗೊಳಗಾದವರಂತೆ ಅವರ ನೋಡಿ ಇವರು, ಇವರ ನೋಡಿ ಅವರು ಅದ್ಧೂರಿತನ ಮಾಡುತ್ತಾ, ಹೇಳಲಾರದ, ನುಂಗಲಾರದ ಸಂಕಟ ಅನುಭವಿಸುತ್ತಿದ್ದಾರೆ.‌ ಇಂಥ ಸಮಯದಲ್ಲಿ ರೈತರು ಸರಳ ವಾಗಿರಬೇಕು, ದುಂದುವೆಚ್ಚ ಮಾಡಬಾರದು ಅಂತೆಲ್ಲ ಹೇಳುವ ಬದಲು, ‘ಹಳ್ಳಿ ಯಾರನ್ನು ಅನುಕರಿಸುತ್ತಿ ದೆಯೋ, ಅಂತಹ ನಗರಗಳು, ಅವರ ಮನಸ್ಥಿತಿಗಳು, ಆಚರಣೆಗಳ ರೀತಿಗಳು ಬದಲಾಗಬೇಕಿದೆ’ ಎಂದು ಹೇಳಬೇಕು. ಆದರೆ ನಗರವೇ ಬೇರೆ ಯಾರನ್ನೋ ಅನುಸರಿಸುತ್ತಿದೆ. ನಗರದಲ್ಲಿ ಪಿಜ್ಜಾ ಅಂಗಡಿ ಇದ್ದಮೇಲೆ ಹಳ್ಳಿಯಲ್ಲಿ ಬೇಕರಿ ಬರಲೇಬೇಕಲ್ಲ? ಇದು ಅನುಕರಣಾ ಸರಪಳಿ. ಮೂಲಕೊಂಡಿ ಹುಡುಕಿ ಬಿಡಿಸಿಕೊಳ್ಳಬೇಕಿದೆ.

ರೈತನೂ ಅರಿಷಡ್ವರ್ಗಗಳುಳ್ಳ ಸಾಮಾನ್ಯ ಮನುಷ್ಯ. ಮೊಡವೆ ತೊಲಗಿಸುವ ಜಾಹೀರಾತಿಗೆ ರೈತನ ಮಗಳಾದರೇನು, ಉದ್ಯಮಿಯ ಮಗಳಾದರೇನು? ಬದುಕಿನ ಗುಣಮಟ್ಟ ಸುಧಾರಿಸಲು ಬರುವ ಅನ್ವೇಷಣೆಗಳು, ತಂತ್ರಜ್ಞಾನಗಳೆಲ್ಲ ರೈತನಿಗಾಗಿ ಅಲ್ಲ ಎನ್ನುವುದು ತಪ್ಪಾಗುತ್ತದೆ. ರೈತನೀಗ ಸಹ ಪ್ರಯಾಣಿಕ.  ‘ರೈತನೇ, ನೀನು ಹಾಸಿಗೆಯಿದ್ದಷ್ಟು ಕಾಲು ಚಾಚಬೇಕಪ್ಪ’ ಎಂದು ಹೇಳುವ ಮುನ್ನ, ಲಕ್ಷಾಂತರ ರೈತರ ಹರಿದ ಚಾಪೆಯ ಮೇಲಷ್ಟು ಗಮನ ಹರಿಸಬೇಕು. ತಮ್ಮ ಅಳತೆಯ ನೂರುಪಟ್ಟು ಹೆಚ್ಚಿನ ಹಾಸಿಗೆಯುಳ್ಳವರ ಎಚ್ಚರಿಸಬೇಕು. ಗ್ಯಾಟ್‌ನಂತಹ ಒಪ್ಪಂದಗಳು ಜಾರಿಯಾಗುತ್ತಿರುವ ಹೊತ್ತಲ್ಲಿ, ಭಾರತದ ರೈತನೆಂಬ ಗುಬ್ಬಿ, ಎಂಎನ್‌ಸಿಗಳೆಂಬ ಬ್ರಹ್ಮಾಸ್ತ್ರದ ಜೊತೆಗೆ ಹೋರಾಡಲಾಗದೆ ಜೀವ ಬಿಡುತ್ತಿದ್ದಾನೆ. ಅಶಕ್ತ ರೈತನ ಕೈಗೆ  ಪ್ರಬಲ ಅಸ್ತ್ರ ಕೊಡುವವರು ಯಾರು?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT