ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಕಾಕ ಚಳವಳಿಯ ವಸ್ತುನಿಷ್ಠತೆ

ಅಕ್ಷರ ಗಾತ್ರ

ಗೋಕಾಕ ಭಾಷಾ ಚಳವಳಿ ಬಗ್ಗೆ ಆರ್‌.  ವೆಂಕಟರಾಜು ಎತ್ತಿರುವ ಅನುಮಾನದ ಬಗ್ಗೆ (ವಾ.ವಾ., ಜೂನ್‌ 11) ಕಿರು ವಿವರಣೆ. ರಾಜ್ಯದ ಪ್ರೌಢ ಶಾಲೆಗಳಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡುವಂತೆ (ಸಾಹಿತಿ ವಿ.ಕೃ. ಗೋಕಾಕ ನೇತೃತ್ವದ ಸಮಿತಿಯ ಶಿಫಾರಸು ಜಾರಿ) ಆಗ್ರಹಿಸಿ 1982ರ ಮಾರ್ಚ್‌, ಏಪ್ರಿಲ್‌, ಮೇ ತಿಂಗಳುಗಳಲ್ಲಿ ರಾಜ್ಯದಾದ್ಯಂತ ಗೋಕಾಕ ಚಳವಳಿ ನಡೆಯಿತು.

ಸಾಹಿತಿ ಮತ್ತು ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಗಳೂ ಆಗಿದ್ದ ಪ್ರೊ. ದೇ. ಜವರೇಗೌಡ ಅವರು ಆ ದಿನಗಳಲ್ಲಿ ಮೈಸೂರಿನಲ್ಲಿ ಇರಲಿಲ್ಲ.ಅಮೆರಿಕದಲ್ಲಿದ್ದರು.

ಆ ಕಾರಣ ಅವರಿಗೆ ಗೋಕಾಕ ಭಾಷಾ ಚಳವಳಿಯಲ್ಲಿ ಭಾಗವಹಿಸುವ ಅವಕಾಶ ಒದಗಿ ಬರಲಿಲ್ಲ. ಹಾಗಾಗಿ, ‘ಮೇರುನಟ ರಾಜ್‌ಕುಮಾರ್‌ ಅವರು ಗೋಕಾಕ  ಚಳವಳಿಯಲ್ಲಿ ಭಾಗವಹಿಸಲು  ದೇಜಗೌ  ಮೂಲಕಾರಣ’ ಎಂಬ ಜಾಣಗೆರೆ ವೆಂಕಟರಾಮಯ್ಯನವರ ಅಭಿಪ್ರಾಯ ವಸ್ತುಸ್ಥಿತಿಗೆ ದೂರವಾದುದು. ಆದರೆ ದೇಜಗೌ ಅವರು 1991–92 ರಲ್ಲಿ ನಡೆದ ಕಾವೇರಿ ಚಳವಳಿ, ಆ ಮುಂದಿನ ಚಳವಳಿಗಳಲ್ಲಿ ಭಾಗವಹಿಸಿದರು.

ವಾಸ್ತವವಾಗಿ  ರಾಜ್‌ಕುಮಾರ್‌ ಅವರು ಕನ್ನಡ ಚಲನಚಿತ್ರ ನಟ–ನಟಿಯರೊಂದಿಗೆ ಈ ಭಾಷಾ ಚಳವಳಿಯಲ್ಲಿ ಭಾವಹಿಸಿದ್ದು  1982ರ ಮೇ ತಿಂಗಳಲ್ಲಿ  (ಮೇ 18ರಂದು  ಮೈಸೂರು ಪುರಭವನದಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿ ಈ ನಟ–ನಟಿಯರು  ಚಳವಳಿಗೆ ಬೆಂಬಲವಿತ್ತರು).

ಆ ಹೊತ್ತಿಗೆ ಚಳವಳಿಯು ಪ್ರಾರಂಭವಾಗಿ ಸುಮಾರು ಎರಡು ತಿಂಗಳಾಗಿತ್ತು. ಚಳವಳಿಯು ಮೊದಲು ದಕ್ಷಿಣ ಕರ್ನಾಟಕದ ಮೈಸೂರಿನಲ್ಲೂ ಮತ್ತು ಉತ್ತರ ಕರ್ನಾಟಕದ ವಿಜಾಪುರದಲ್ಲೂ (ಈಗಿನ ವಿಜಯಪುರ) 1982ರ ಮಾರ್ಚ್‌ 15ರಂದು  ಏಕಕಾಲದಲ್ಲಿ ಪ್ರಾರಂಭವಾಯಿತು. ಧಾರವಾಡ, ಬೆಂಗಳೂರಿನಲ್ಲಿ ಅಲ್ಲ.

ಮೈಸೂರಿನಲ್ಲಿ ಕನ್ನಡ ಮಾಧ್ಯಮ ಹೋರಾಟ ಸಮಿತಿಯ ನೇತೃತ್ವದಲ್ಲಿ 1982ರ ಮಾರ್ಚ್‌ 15 ರಿಂದ ಒಂದು ವಾರ ಕಾಲ ನಡೆಯಿತು.  ಆ ಸಮಿತಿಯ ಸಂಚಾಲಕರಾಗಿ ಸ.ರ. ಸುದರ್ಶನ, ನಾ. ಮಹಾವೀರಪ್ರಸಾದ ಮತ್ತು ನಾನು ಕಾರ್ಯ ನಿರ್ವಹಿಸುತ್ತಿದ್ದೆವು.

ಆದರೆ, ಅಂದಿನ ಪರಿಸ್ಥಿತಿಯ ಅಪೇಕ್ಷೆಯಂತೆ ಆ ಏಳೂ ದಿನಗಳಲ್ಲಿ ನಾನು ಹೆಚ್ಚಿನ ಜವಾಬ್ದಾರಿಯನ್ನು ನಿರ್ವಹಿಸಬೇಕಾದುದು ಅನಿವಾರ್ಯವಾಯಿತು. ಮೈಸೂರಿನ ಹೃದಯ ಭಾಗದಲ್ಲಿ ತಾತಯ್ಯ ಪ್ರತಿಮೆ ಇರುವ ಪಾರ್ಕನ್ನು  ಕೇಂದ್ರವಾಗಿಸಿಕೊಂಡು ಧರಣಿ ಸತ್ಯಾಗ್ರಹ, ಬೀದಿ ಭಾಷಣ, ಮೆರವಣಿಗೆ, ಸಭೆ ಮುಂತಾದವುಗಳು ನಡೆದವು.

ಪ್ರತಿ ದಿನ ಬೆಳಿಗ್ಗೆ 8 ರಿಂದ ಸಂಜೆ 5.30ರ ವರೆಗೆ ಭಾಷಾ ಚಳವಳಿಯು ಮುಂದುವರೆಯುತ್ತಿತ್ತು. ಚಳವಳಿಯ ನಾಲ್ಕನೆಯ ದಿನ ಬೆಂಗಳೂರಿನಿಂದ ಪ್ರೊ. ಎಂ. ಚಿದಾನಂದಮೂರ್ತಿ ಧರಣಿ ಸ್ಥಳಕ್ಕೆ ಬಂದರು. ಧರಣಿಯ ಜವಾಬ್ದಾರಿ ಹೊತ್ತಿದ್ದ ನಾನು ಅವರನ್ನು ಆದರದಿಂದ ಸ್ವಾಗತಿಸಿ, ‘ಸರ್‌, ನಾನು ಎಂ.ಎ.ನಲ್ಲಿ ನಿಮ್ಮ ಶಿಷ್ಯನಾಗಿದ್ದೆ’, ಅಂತ ಹೇಳಿದೆ. ಅದಕ್ಕೆ ಚಿಮೂ ಅವರು ಬಹು ಗಂಭೀರವಾಗಿ, ‘ಹೌದಪ್ಪಾ, ಆಗ ನೀನು ನನ್ನ ಶಿಷ್ಯನಾಗಿದ್ದೆ. ಈಗ ನಾನು ನಿನ್ನ ಶಿಷ್ಯ’ ಅಂದರು. ನಾನು ಮೌನಿಯಾದೆ. ಅವರ ದೊಡ್ಡತನಕ್ಕೆ ತಲೆಬಾಗಿದೆ.

ಚಳವಳಿಯ ಐದನೆಯ ದಿನ ಚಲನಚಿತ್ರ ನಟ ತೂಗುದೀಪ ಶ್ರೀನಿವಾಸ್‌ ಅವರು, ನನ್ನ ಹೈಸ್ಕೂಲು ಸಹಪಾಠಿ ಹಾಗೂ ರಂಗಕರ್ಮಿ (ಈಗ ದಿವಂಗತ) ಬಿ. ಜಯರಾಂ ಜತೆ ಬಂದು ಹೋರಾಟಕ್ಕೆ ಬೆಂಬಲವಿತ್ತರು. ನಮ್ಮೊಂದಿಗೆ ಬಹಳ ಹೊತ್ತಿನವರೆಗೆ ಇದ್ದರು. ‘ಕರ್ನಾಟಕದಲ್ಲಿ ಕನ್ನಡ, ಊಟದಲ್ಲಿ ಅನ್ನವಿದ್ದ ಹಾಗೆ. ಉಳಿದ ಭಾಷೆಗಳು ನಂಜಿಕೊಳ್ಳುವ ಪರಿಕರಗಳಿದ್ದ ಹಾಗೆ’ ಎಂದು ಮುಂತಾಗಿ ಹೇಳಿ, ಚಳವಳಿಗೆ ತಮ್ಮ  ಬೆಂಬಲವಿತ್ತರು.

ಅದೇ ರೀತಿ ಮೈಸೂರು ನಗರ ಹಾಗೂ ಸುತ್ತಮುತ್ತಲಿನ ಸಾಹಿತಿಗಳೂ, ರಂಗಕರ್ಮಿಗಳೂ, ನಾಗರಿಕರು, ವಿವಿಧ ಸಂಘ – ಸಂಸ್ಥೆಗಳ ಸಂಘಟಕರು ಚಳವಳಿಯಲ್ಲಿ ಭಾಗವಹಿಸಿದರು. 1982ರ ಮಾರ್ಚ್‌ 21ರ ವರೆಗೆ ಈ ರೀತಿ ಗೋಕಾಕ  ಚಳವಳಿಯ ಮೊದಲ ಹಂತದ ಹೋರಾಟ ನಡೆಯಿತು.

ನಂತರದ ಒಂದು ವಾರದಲ್ಲಿ ಮೈಸೂರು ನಗರದ ಪುರಭವನದ ಮೈದಾನದಲ್ಲಿ ಒಂದು ಬಹಿರಂಗ ಸಭೆಯನ್ನು ಏರ್ಪಡಿಸಲಾಗಿತ್ತು. ಅದರಲ್ಲಿ ಸಾಹಿತಿಗಳಾದ ಅಕಬರ ಅಲಿ, ಯು.ಆರ್‌. ಅನಂತಮೂರ್ತಿ ಮುಂತಾದವರು ಭಾಗವಹಿಸಿ,  ಒಂದರಿಂದ ಹತ್ತನೆಯ ತರಗತಿವರೆಗೆ ಕನ್ನಡ ಭಾಷಾ ಮಾಧ್ಯಮವೇ ಇರಬೇಕೆಂದು ಆಗ್ರಹಿಸಿ, ಅಂದಿನ ಭಾಷಾ ಚಳವಳಿಗೆ ಬೆಂಬಲವಿತ್ತರು.

ಅದಾದ ನಂತರ ಮೈಸೂರಿನಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅದರ ಬಹು ದೀರ್ಘಕಾಲದ ಅಧ್ಯಕ್ಷ (ಈಗ ದಿವಂಗತರಾಗಿರುವ) ವಿ.ಎಚ್. ಗೌಡ ಅವರ ನೇತೃತ್ವದಲ್ಲಿ ಭಾಷಾ ಚಳವಳಿಯ ಹೋರಾಟ ಮುಂದುವರೆಸಿತು. ಕನ್ನಡ ಮಾಧ್ಯಮ ಹೋರಾಟ ಸಮಿತಿ ಸಹಭಾಗಿಯಾಗಿ ಮುಂದುವರೆಯಿತು. ಆ ದಿನಗಳಲ್ಲೊಮ್ಮೆ ನಟ ಎಂ.ಪಿ. ಶಂಕರ್‌ ತಮಟೆ ಹೊಡೆದುಕೊಂಡು ಮೆರವಣಿಗೆ ತೆಗೆದು ಚಳವಳಿಗೆ ಜೊತೆ ನೀಡಿದರು.

ಅವರಿಗೆ ಬೆಂಗಾವಲಾಗಿ ನಾನು, ಸಾಹಿತಿ ಗೆಳೆಯ ಮಳಲಿ ವಸಂತಕುಮಾರ್‌ ಮತ್ತಿತರರು ನಿಂತೆವು. ಆ ನಂತರದ  ಒಂದೆರಡು ದಿನಗಳಲ್ಲಿ ನಟ ವಿಷ್ಣುವರ್ಧನ್‌ರವರು, ಹತ್ತಿರದಲ್ಲೇ ಇದ್ದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಧರಣಿ ಸ್ಥಳಕ್ಕೆ ಬಂದು ಸ್ವಲ್ಪ ಹೊತ್ತು ಕುಳಿತಿದ್ದರು. ಬಳಿಕ ಸಯ್ಯಾಜಿರಾವ್‌ ರಸ್ತೆ ಮೂಲಕ ಭಾಷಾ ಚಳವಳಿ ಬೆಂಬಲಿಸಿ ಅಪಾರ ಜನಸ್ತೋಮದೊಂದಿಗೆ ಮೆರವಣಿಗೆ ನಡೆಸಿದರು.

ಆಗಲೂ ನಾನು, ಮಳಲಿ ವಸಂತಕುಮಾರ್‌ ಮತ್ತಿತರರು ಸರಪಳಿ ಜೋಡಿಸಿ, ಅವರ ಬೆಂಗಾವಲಿಗೆ ನಿಂತೆವು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ನೇತೃತ್ವದಲ್ಲಿ ಚಳವಳಿ ಮುಂದುವರೆಯಿತು. ಈ ಧರಣಿಗೆ ಕುವೆಂಪು, ಪುತಿನ, ಚದುರಂಗ ಇತ್ಯಾದಿಯವರು ಬೆಂಬಲ ಇತ್ತಿದ್ದರು.

ಆ ನಂತರ ಏಪ್ರಿಲ್‌ ಕೊನೆ ದಿನಗಳಲ್ಲಿ ಕನ್ನಡ ಕ್ರಿಯಾ ಸಮಿತಿ ಅಸ್ತಿತ್ವಕ್ಕೆ ಬಂತು. ಅದಕ್ಕೆ ಧಾರವಾಡ ಮೂಲ ಪ್ರೇರಣೆಯಾಯಿತು. ಪ. ಮಲ್ಲೇಶ್‌ರವರು ಮೈಸೂರು ಘಟಕದ ಅಧ್ಯಕ್ಷರಾಗಿ ಹೋರಾಟದ ಮೂರನೆಯ  ಹಂತವನ್ನು ಮುಂದುವರೆಸಿದರು. ಇಂದಿಗೂ ಅವರೇ ಅಧ್ಯಕ್ಷರು. ಅದೇ ರೀತಿ, 1982ರ ಮಾರ್ಚ್‌ 15 ರಂದು ವಿಜಾಪುರದಲ್ಲಿ   ಗಂಗಾಧರ ಕೊರಳ್ಳಿ (ಈಗ ದಿವಂಗತರು) ಭಾಷಾ ಚಳವಳಿಯ ಉಪವಾಸ ಸತ್ಯಾಗ್ರಹ ಕೈಗೊಂಡರು. 58 ದಿನಗಳ ಕಾಲದ ಅವರ ಸತ್ಯಾಗ್ರಹ ಹೋರಾಟ ಅನುಪಮವಾದುದು. ಸ್ಮರಣೀಯವಾದುದು.

ಹೀಗೆ, ಮೈಸೂರು ಮತ್ತು ವಿಜಾಪುರದ ಈ ಎರಡು ಪ್ರಾಥಮಿಕ ಚಳವಳಿಗಳು ಭಾಷಾ ಚಳವಳಿಯ ಆದ್ಯ ನಡೆಗಳಾದವು. ಬೆಂಗಳೂರಿನಲ್ಲಿ ಸಾಹಿತಿ ಕಲಾವಿದರ ಬಳಗ, ಕನ್ನಡ ಶಕ್ತಿ ಕೇಂದ್ರ ಆ ಕೆಲಸ ಮುಂದುವರೆಸಿದವು. ಇದು ಗೋಕಾಕ ಚಳವಳಿಯ ಸ್ಥೂಲ ಇತಿಹಾಸ.

ಆದರೆ, ‘ಶ್ರೀ ಶಂಬಾ ಜೋಶಿಯವರ ನೇತೃತ್ವದಲ್ಲಿ ಧಾರವಾಡದಲ್ಲಿ ಕನ್ನಡ ಕ್ರಿಯಾ ಸಮಿತಿಯಿಂದ ಮೊದಲು ನೇರ ಹೋರಾಟ ಪ್ರಾರಂಭವಾಯಿತು’ ಎಂದು  ‘ಕನ್ನಡ– ಕನ್ನಡಿಗ– ಕರ್ನಾಟಕ’ದಲ್ಲಿ (ಪ್ರ: ಕನ್ನಡ ಪುಸ್ತಕ ಪ್ರಾಧಿಕಾರ, ಎರಡನೆಯ ಮುದ್ರಣ, 1996, ಪುಟ: 78) ಡಾ. ಪಿ.ವಿ. ನಾರಾಯಣರವರು ಬರೆದಿರುವುದು ಸರಿಯಲ್ಲ. ಇಲ್ಲಿ ‘ಮೊದಲು’  ಪದ ತೆಗೆದು ಹಾಕಬೇಕು.

ಆ ಬಳಿಕ ನಟ ರಾಜ್‌ಕುಮಾರ್‌ರವರು ಧಾರವಾಡದ ಕನ್ನಡ ಕ್ರಿಯಾ ಸಮಿತಿಯ ಕರೆಗೆ ಓಗೊಟ್ಟು 1982ರ ಮೇ ತಿಂಗಳಲ್ಲಿ ಚಳವಳಿಗೆ ಅಡಿಯಿಕ್ಕಿದರು. ಇದು ಗೋಕಾಕ ಭಾಷಾ ಚಳವಳಿ ಪ್ರಾರಂಭದಲ್ಲಿ ಸಾಗಿ ಬಂದ ದಾರಿ. ಅದರ ಫಲವಾಗಿ, ಪ್ರೌಢಶಾಲೆಯಲ್ಲಿ ಕನ್ನಡ ಮೊದಲನೆಯ ಭಾಷೆಯಾಗಿ 125 ಅಂಕಗಳಿಗೆ ಏರಿಕೆಯಾಯಿತು. 100 ಅಂಕಗಳ ಇನ್ನೆರಡು ಭಾಷೆಗಳು ಸೇರ್ಪಡೆಯಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT