ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಮ ಸ್ವರಾಜ್ಯ ಇನ್ನೂ ದೂರದ ಕನಸು

ಪಂಚಾಯತ್ ರಾಜ್ ತಿದ್ದುಪಡಿ ಮಸೂದೆಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಆದರೆ...?
Last Updated 1 ಮೇ 2015, 19:30 IST
ಅಕ್ಷರ ಗಾತ್ರ

ಕವಲು ದಾರಿಯಲ್ಲಿ ನಿಂತಂತಹ ಕ್ಷಣಗಳು ರಾಷ್ಟ್ರದ ಇತಿಹಾಸದಲ್ಲಿ ಅನೇಕ ಬಾರಿ ಎದುರಾಗಿವೆ. ಈಗಲೂ ಭಾರತದಲ್ಲಿ ಅಂತಹದೇ ಒಂದು ಸಂದರ್ಭ. ಕರ್ನಾಟಕ ಕೆಲವೊಂದು ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಸ್ಥಿತಿ ಇಂದಿನದು. ಸಿದ್ದರಾಮಯ್ಯ ಮತ್ತು ಅವರ ನೇತೃತ್ವದ ಸರ್ಕಾರ, ಮೋದಿ ಮಾರ್ಗದಲ್ಲಿ ಹೋಗಲು ನಿರ್ಧರಿಸಬಹುದು (ಈಗಾಗಲೇ ಅವರು ಅಂತಹ ಪ್ರವೃತ್ತಿಗಳನ್ನು  ಪ್ರದರ್ಶಿಸಿದ್ದಾರೆ) ಹಾಗೂ ನಮ್ಮ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡಬಹುದು. ಭೀತಿ ಹಾಗೂ ಆಮಿಷಗಳ ಮೂಲಕ ಪ್ರತಿರೋಧ ಅಳಿಸಿಹಾಕಿ ಇದನ್ನು ನಿರಂಕುಶ ಪ್ರಭುತ್ವವಾಗಿ ಸರ್ಕಾರ ರೂಪಾಂತರಗೊಳಿಸಬಹುದು ಅಥವಾ ನಾವು ನಿಜವಾಗಿ ಇರಬೇಕಾದ ಸಾರ್ವಭೌಮ, ಸಮಾಜವಾದಿ, ಪ್ರಜಾತಂತ್ರ ಗಣರಾಜ್ಯವನ್ನು ತಳಮಟ್ಟ ದಿಂದ ಪುನರುತ್ಥಾನಗೊಳಿಸಿ, ಸಾಮಾಜಿಕ ನ್ಯಾಯದ ಆಧಾರದ ಮೇಲೆ ಅಭಿವೃದ್ಧಿಯ ನಿಜವಾದ ಅರ್ಥವನ್ನು  ಸಾಧಿಸಿ ತೋರಿಸಬಹುದು. ಇದನ್ನು ಸರ್ಕಾರವೇ ನಿರ್ಧರಿಸಬೇಕಾಗಿದೆ.

ಗ್ರಾಮಗಳು ನಮ್ಮ ದೇಶದ ಬುನಾದಿ ಆಗಬೇಕೇ ವಿನಾ ಉದ್ದಿಮೆದಾರರ ಸಾಮ್ರಾಜ್ಯಗಳಲ್ಲ. ಮಹಾತ್ಮ ಗಾಂಧಿ, ಜಯಪ್ರಕಾಶ ನಾರಾಯಣ್, ರಾಮಮನೋಹರ ಲೋಹಿಯಾ ಅವರಂತಹ ದೇಶದ ಹಿರಿಯರು ಕಂಡ ಕನಸಿನಂತೆ, ರಾಜೀವ್ ಗಾಂಧಿ ಸ್ಫುಟವಾಗಿ ವಾದಿಸಿದಂತೆ, ಗ್ರಾಮಪಂಚಾಯಿತಿಗಳನ್ನು ಅಥವಾ ಗ್ರಾಮಸ್ವರಾಜ್ಯವನ್ನು ಸ್ಥಾಪಿಸುವುದು ಮೊದಲ ಹೆಜ್ಜೆಯಾಗಬೇಕು.

ಪಂಚಾಯತ್ ರಾಜ್ ಮೊದಲಿಗೆ ಅಸ್ತಿತ್ವ ಕಂಡುಕೊಂಡಿದ್ದೇ ಕರ್ನಾಟಕದಲ್ಲಿ.  ಪ್ರಜಾಪ್ರಭುತ್ವ ಎಂಬುದು ತಲೆ ಎಣಿಕೆಗೆ ಸೀಮಿತವಾಗಿತ್ತು. ‘ಜನರಿಂದ ಸರ್ಕಾರ’ ಎನ್ನುವುದಕ್ಕಿಂತ ಹಲವು ಅಧಿಕಾರ ಗುಂಪುಗಳನ್ನೊಳಗೊಂಡ ‘ಪಕ್ಷದಿಂದ’ ಸರ್ಕಾರ ಎಂದಾಗಿ ಹೋಗಿತ್ತು. ಆದರೆ ಅಬ್ದುಲ್‌ ನಜೀರ್ ಸಾಬ್, ರಾಮಕೃಷ್ಣ ಹೆಗಡೆ, ಎಂ.ವೈ.ಘೋರ್ಪಡೆ, ಎಲ್‌.ಸಿ. ಜೈನ್‌ ಅವರಂತಹವರು, ಕೈಗಾರಿಕೀಕರಣದ ಆರ್ಥಿಕ ವ್ಯವಸ್ಥೆಯ ಫಲವಾದ ಸಮಾಜಕ್ಕಿಂತ ಸಂಪೂರ್ಣವಾಗಿ ವಿಭಿನ್ನವಾಗಿರುವ ಸಾಮಾಜಿಕ ವ್ಯವಸ್ಥೆಯನ್ನಾಧರಿಸಿದ ಪರ್ಯಾಯ ಆಡಳಿತ ವ್ಯವಸ್ಥೆಯೊಂದನ್ನು ರೂಪಿಸಲು ವಿರೋಧಗಳ ನಡುವೆಯೂ ಅಪಾರವಾಗಿ ಶ್ರಮಿಸಿದರು.

ಜೆ.ಪಿ. ಈ ವಿಷಯದ ಕುರಿತಾದ ಗಾಂಧಿಯವರ ಆಲೋಚನೆಗಳನ್ನು ಹೀಗೆ ವರ್ಣಿಸುತ್ತಾರೆ- ‘ಇದು ಸಹಜ ವಾತಾವರಣದಲ್ಲಿ ಜಬಾಬ್ದಾರಿಯುತ ಸಮುದಾಯದ ಜವಾಬ್ದಾರಿಯುತ ಸದಸ್ಯನನ್ನಾಗಿ ಮನುಷ್ಯನನ್ನು ಕಾಣುವಂತಹ ದೃಷ್ಟಿಕೋನ’.  ಇದಕ್ಕಾಗಿ ಹೊಸ ರಾಜಕೀಯ ಮತ್ತು ಆರ್ಥಿಕ ಸಂಸ್ಥೆಗಳನ್ನು ಆವಿಷ್ಕಾರಗೊಳಿಸುವ ಅಗತ್ಯವಿದೆ. ಜೊತೆಗೆ ಪಂಚಾಯತ್ ರಾಜ್‌ನ ಪ್ರತಿಪಾದಕರು ರಾಜಕೀಯ ಮತ್ತು ಆರ್ಥಿಕ ವಿಕೇಂದ್ರೀಕರಣದ ಸವಕಲು ಪದಗಳನ್ನು ಮೀರಿ ನೋಡಬೇಕು. ಆಗ ಸಂಸದೀಯ ಪ್ರಜಾಪ್ರಭುತ್ವದ ಜೊತೆಗೆ ಸ್ಥಳೀಯ ಸ್ವಯಂಸರ್ಕಾರಗಳು ದೊಡ್ಡ ಪ್ರಮಾಣದಲ್ಲಿ ಜನರ ಕನಸಿನ ಪ್ರಜಾಪ್ರಭುತ್ವವನ್ನು  ನನಸಾಗಿಸುತ್ತವೆ ಎಂಬಂಥ ಆಶಯವನ್ನು ಜೆ.ಪಿ. ವ್ಯಕ್ತಪಡಿಸಿದ್ದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಎ.ಜಿ.ಕೊಡ್ಗಿ ನೇತೃತ್ವದ ಮೂರನೇ ಹಣಕಾಸು ಆಯೋಗವು ವಿಕೇಂದ್ರೀಕೃತ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಟ್ಟು ಅತ್ಯುತ್ತಮವೆನ್ನಬಹುದಾದ ಹಣಕಾಸು ವರದಿಯನ್ನು ನೀಡಿತ್ತು. ಅದನ್ನು ಅಂದಿನ ಸರ್ಕಾರ ಕೊಟ್ಟಂತೆ ಮಾಡಿ ಏನನ್ನೂ ಕೊಡದೇ ಅದನ್ನು ಮೂಲೆಗುಂಪು ಮಾಡಿತು. ಇಂದು ಅದೇ ಚೌಕಟ್ಟಿನಡಿಯಲ್ಲಿ ರಮೇಶಕುಮಾರ್ ನೇತೃತ್ವದ ಸಮಿತಿಯು ವರದಿ ಸಿದ್ಧಪಡಿಸಿದೆ. ಆದರೆ ಸರ್ಕಾರ ಈಗ ಅಂಗೀಕರಿಸಿರುವ ಪಂಚಾಯತ್‌ ರಾಜ್‌ ತಿದ್ದುಪಡಿ ಮಸೂದೆಯಲ್ಲಿ ಸಮಿತಿಯ ಶಿಫಾರಸುಗಳು ಪೂರ್ಣಪ್ರಮಾಣದಲ್ಲಿ ಅಳವಡಿಕೆಯಾಗಿಲ್ಲ.

ತಳಮಟ್ಟದಿಂದ ಬದಲಾವಣೆ ತರುವಂತಹ ಶಿಫಾರಸು ಗಳನ್ನು ಅಳವಡಿಸಿಕೊಂಡಿದ್ದರೆ ಅವು ಸ್ಥಳೀಯ ಸರ್ಕಾರ ಗಳನ್ನು ಉತ್ತುಂಗಕ್ಕೆ ಒಯ್ಯುತ್ತಿದ್ದವು ಮತ್ತು ದೇಶಕ್ಕೇ ಮಾದರಿ ಮಾನದಂಡವಾಗುತ್ತಿತ್ತು. ಸರ್ಕಾರದ ಹೆಚ್ಚಿನ ಸ್ತರಗಳಲ್ಲಿ ಬೇರೂರಿರುವ ಭ್ರಷ್ಟಾಚಾರ, ಪ್ರಾಯೋಜಕತ್ವದ ಸಂಸ್ಕೃತಿ ಮತ್ತು ಭೇದಭಾವಗಳ ದುರಾಡಳಿತದ ಮೇಲೂ  ಇದು ತೀವ್ರ ಪರಿಣಾಮ ಬೀರುತ್ತಿತ್ತು. ಎಲ್ಲರ ಒಳಗೊಳ್ಳುವಿಕೆಯಲ್ಲಿ ಅಭಿವೃದ್ಧಿ ಯೋಜನೆಗಳನ್ನು ತಯಾರಿ ಸುವ ವಿಧಾನವನ್ನು ಸಮಿತಿ ಮುಂದಿಟ್ಟಿದೆ. ಇದು  ವಿಧಾನದಲ್ಲಿ ಪ್ರಜಾಪ್ರಭುತ್ವದ ಮೂಲಸ್ವರೂಪ ಹೊಂದಿದೆ. ಆದಕಾರಣ ಗ್ರಾಮ ಸ್ವರಾಜ್ಯದ ನೈಜ ಸಾರದ ಘನತೆ ಮತ್ತು ಗೌರವ ಎತ್ತಿಹಿಡಿಯಲು ಭದ್ರಬುನಾದಿ ಆಗಬಲ್ಲದು.

ಕರ್ನಾಟಕದಲ್ಲಿ ಮುಂಬರುವ ಪಂಚಾಯಿತಿ ಚುನಾವಣೆಯಲ್ಲಿ ತನ್ನ ಮೌಲ್ಯವನ್ನು ಸಾಬೀತುಪಡಿಸಲು ಕಾಂಗ್ರೆಸ್ ಸರ್ಕಾರಕ್ಕೆ  ಅಪರೂಪದ ಅವಕಾಶ ಸಿಕ್ಕಿದೆ.  ಈ ಸಂಬಂಧದ ಸವಾಲುಗಳನ್ನು ಎದುರಿಸುವುದು ಪಂಚಾಯತ್ ರಾಜ್ ಸಚಿವರಿಗೆ ಸೇರಿದ್ದು.  ಇಚ್ಛಾಶಕ್ತಿ ತೋರಿದರೆ ದೇಶದ ಪಂಚಾಯತ್‌ರಾಜ್‌ ವ್ಯವಸ್ಥೆಯಲ್ಲಿ ಕರ್ನಾಟಕವನ್ನು ಮುಂಚೂಣಿಯಲ್ಲಿಡಬಹುದು ಮತ್ತು ಈ ಸರ್ಕಾರವು ಸ್ವಾತಂತ್ರ್ಯಾನಂತರದ 66 ವರ್ಷಗಳಲ್ಲಿ ಮೊದಲ ಬಾರಿಗೆ ಗಾಂಧಿಯವರ ಭಾರತೀಯ ಹಳ್ಳಿಗಳ ಕನಸನ್ನು ನಿಜ ಮಾಡಿದ ರಾಜ್ಯವಾಗಿ ಇತಿಹಾಸದ ಪುಟಗಳಲ್ಲಿ ಮಹತ್ತರ ದಾಖಲೆಯಾಗಿ ನಿಲ್ಲಬಲ್ಲದು.

ಈ ಮೊದಲಿದ್ದ ಕಾಯಿದೆ, ಜನರನ್ನು ಅಸಮರ್ಥರನ್ನಾಗಿ ಮಾಡಿ ರಾಜ್ಯ ನಿಯಂತ್ರಿತ ವಿತರಣಾ ವ್ಯವಸ್ಥೆಗೆ ತಲೆಬಾಗುವಂತೆ ಮಾಡಿದೆ. ಕಳೆದ 20 ವರ್ಷಗಳಿಂದ ಸ್ವಾರ್ಥಿ ಸಚಿವರು ಮತ್ತು ಅಧಿಕಾರಶಾಹಿಗಳು ನೂರಾರು ಸರ್ಕಾರಿ ಆದೇಶಗಳಿಂದ ಕಾಯಿದೆಯನ್ನು ಕುಲಗೆಡಿಸಿದ್ದ ರಿಂದ ಇದಕ್ಕೆ ಪರಿಹಾರಗಳನ್ನು ಸೂಚಿಸಲು ರಮೇಶ ಕುಮಾರ್ ಸಮಿತಿಯನ್ನು ರಚಿಸಲಾಗಿತ್ತು. ಏಕೆಂದರೆ ಯೋಜನೆಗಳನ್ನು ಕೇಂದ್ರೀಕೃತಗೊಳಿಸಲಾಗಿದೆ, ಅಧಿಕಾರ ಶಾಹಿಯು ಶಕ್ತಿಯುತವಾಗಿದೆ. ಸ್ಥಳೀಯ ಸರ್ಕಾರಗಳ ಎಲ್ಲಾ ಹಕ್ಕು, ಅಧಿಕಾರ, ಪಂಚಾಯಿತಿ– ಗ್ರಾಮಸಭೆಯ ಸ್ವಾಯತ್ತತೆ ಯನ್ನು ವ್ಯವಸ್ಥಿತವಾಗಿ ಹಿಂಪಡೆಯಲಾಗಿದೆ.

ಒಂದು ವರ್ಷವಿಡೀ ಎಚ್ಚರಿಕೆಯಿಂದ ಪರಿಶೀಲಿಸಿ, ರಾಜ್ಯದಾದ್ಯಂತ ಎಲ್ಲಾ ಭಾಗಿದಾರರೊಡನೆ ಸಮಾಲೋಚಿಸಿ, ಆಳವಾದ, ವಿವರಣಾತ್ಮಕವಾದ ಚರ್ಚೆಗಳನ್ನು ಇದಕ್ಕೆ ಸಂಬಂಧಿಸಿದಂತೆ ನಡೆಸಲಾಗಿತ್ತು. ಸ್ಥಳೀಯ ಸರ್ಕಾರಗಳು ಮತ್ತು ಪ್ರಮುಖವಾಗಿ, ಜನರು ಅವರ ಗ್ರಾಮಸಭೆಗಳ ಮೂಲಕ ಅವರದ್ದೇ ಅಭಿವೃದ್ಧಿಗೆ ಯಜಮಾನರು ಎಂಬುದನ್ನು ಖಾತ್ರಿಪಡಿಸಿಕೊಳ್ಳಲು ಸಮಿತಿಯು ಪಂಚಾಯತ್‌ರಾಜ್ ಕಾಯಿದೆ– 1993ಕ್ಕೆ 88 ತಿದ್ದುಪಡಿಗಳನ್ನು ಶಿಫಾರಸು ಮಾಡಿತ್ತು.
ಈ ಶಿಫಾರಸುಗಳ ಪ್ರಮುಖ ಅಂಶಗಳು:


* ಅಭಿವೃದ್ಧಿಯು ಸ್ಥಳೀಯ ಸರ್ಕಾರಗಳ ಕಾರ್ಯಕ್ರಮಗಳಲ್ಲ, ಅಭಿವೃದ್ಧಿಯೇ ಅವುಗಳ ಜವಾಬ್ದಾರಿ.
* ವೈಜ್ಞಾನಿಕ ಮತ್ತು ವಾಸ್ತವದ ನೆಲೆಯಲ್ಲಿ  ಯೋಜನೆಗಳ ಅನುಷ್ಠಾನ
* ಗ್ರಾಮಮಟ್ಟದಲ್ಲೇ ಯೋಜನೆಗಳ ಅನುಷ್ಠಾನ, ನಿರ್ವಹಣೆಗೆ ಆದ್ಯತೆ
* ಪಂಚಾಯತ್‌ರಾಜ್ ವ್ಯವಸ್ಥೆಯ ತ್ರಿಸ್ತರ ಸರ್ಕಾರಗಳೂ ನೇರವಾಗಿ ಗ್ರಾಮಸಭೆಗೇ ಬದ್ಧ ಮತ್ತು ಉತ್ತರದಾಯಿ
* ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ವಿಶೇಷ ಗ್ರಾಮಸಭೆ
* ಕೇವಲ ಬಹುಮತವೇ ನಿರ್ಣಯವಾಗಿರದೆ ಸಾಮಾಜಿಕ ನ್ಯಾಯಕ್ಕೆ ಬದ್ಧತೆ
* ಜನರದ್ದೇ ನಿರ್ಧಾರ, ಜನರದ್ದೇ ಅಧಿಕಾರ
* ಪೂರ್ಣಕಾಲಿಕ ಕಾರ್ಯಕಾರಿ ಮುಖ್ಯಸ್ಥರಾಗಿ ಪಂಚಾಯಿತಿ ಅಧ್ಯಕ್ಷರು
* ಅಭ್ಯರ್ಥಿಗಳ ಚುನಾವಣಾ ವೆಚ್ಚವನ್ನು ಸರ್ಕಾರವೇ ಭರಿಸುವುದು
* ಕಡ್ಡಾಯ ಸಾಮರ್ಥ್ಯಾಭಿವೃದ್ಧಿ
* ಪ್ರತೀ ಯೋಜನೆಯ ಮೌಲ್ಯಮಾಪನ
* ವಿವಿಧ ಹಂತದ, ಸ್ತರಗಳ ನಡುವಿನ ಬಿಕ್ಕಟ್ಟು ನಿರ್ವಹಣೆಗೆ ವ್ಯವಸ್ಥೆ
* ಸುಲಲಿತ ಆಡಳಿತ ಸೇವೆ ಮತ್ತು ನಿರ್ವಹಣೆಗೆ ವಿವಿಧ ಕಾರ್ಯರಚನೆಗಳ ಸ್ಥಾಪನೆ

ಸುಮಾರು ಏಳು ತಿಂಗಳ ಹಿಂದೆಯೇ ಈ ವರದಿಯನ್ನು ಮತ್ತು ತಿದ್ದುಪಡಿಗೆ ಸಂಬಂಧಿಸಿದ ಶಿಫಾರಸುಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಯಿತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಭರವಸೆ ನೀಡಿದ್ದರೂ ಇದನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಲಿಲ್ಲ್ಲ. ಈ ಬಗ್ಗೆ ವಿರೋಧ ಪಕ್ಷದವರು ಮತ್ತು ಕಾಂಗ್ರೆಸ್‌ನ ಹಲವು ಸಚಿವರು ಪ್ರಶ್ನಿಸಿದಾಗ ನಂತರದ ಅಧಿವೇಶನದಲ್ಲಿ ಮಂಡಿಸುವುದಾಗಿ ಸರ್ಕಾರ ಹೇಳಿತು. ಬದಲಿಗೆ, ಸಮಯವನ್ನು ಖರೀದಿಸಲು ಮಾಡಿದ ಹುನ್ನಾರ ಇದು  ಎಂದು ಈಗ ಅನ್ನಿಸುತ್ತಿದೆ. ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಇದನ್ನು ಮಂಡಿಸಲಾಯಿತು. ಈ ಸಮಿತಿಯ ಶಿಫಾರಸುಗಳನ್ನು ಪರಿಶೀಲಿಸಲು ಸಚಿವ ಸಂಪುಟದ ಉಪ-ಸಮಿತಿಯನ್ನು ರಚಿಸಲಾಯಿತು. ಇಂದಿನವರೆಗೆ ಈ ಸಮಿತಿಯು ಅದರ ಕಾರ್ಯವನ್ನು ಪೂರೈಸಿದೆಯೋ ಇಲ್ಲವೋ ಎಂಬುದು ತಿಳಿದಿಲ್ಲ.

ಕೋರ್ ಸಮಿತಿಯ ಸದಸ್ಯರೊಂದಿಗೆ ನಡೆದ ಒಂದು ಸಭೆಯಲ್ಲಿ ಎಚ್.ಕೆ.ಪಾಟೀಲರು, ಅವರು ಅಧ್ಯಕ್ಷರಾಗಿರುವ ಉಪ-ಸಮಿತಿಯು ಅದರ ಕಾರ್ಯಗಳನ್ನು ಮಾರ್ಚ್ 20ರ ಒಳಗೆ ಪೂರ್ಣಗೊಳಿಸುತ್ತದೆ ಮತ್ತು ತಿದ್ದುಪಡಿ ಮಸೂದೆ ಯನ್ನು ಬಜೆಟ್ ಅಧಿವೇಶನದಲ್ಲಿ ಮಂಡಿಸಲಾಗುವುದು ಎಂದು ಮಾತು ಕೊಟ್ಟಿದ್ದರು. ಆದರೆ ಅಧಿವೇಶನದ ಕಟ್ಟಕಡೆಯ ದಿನದಂದು ಮಂತ್ರಿಗಳೇ ಸ್ವತಃ ಸೇರಿಸಿದ ‘ಕಡ್ಡಾಯ ಮತದಾನ’ದೊಂದಿಗೆ ರಮೇಶಕುಮಾರ್‌ ಸಮಿತಿಯ 88 ಶಿಫಾರಸುಗಳಲ್ಲಿ  ಕೇವಲ ಮೂರು ಮಾತ್ರ 2015ರ ತಿದ್ದುಪಡಿ ಮಸೂದೆಯಲ್ಲಿ ಸೇರಿದ್ದವು.

ಯಾವಾಗ ಎರಡೂ ಸದನಗಳಲ್ಲಿ ಪುನಃ ಪ್ರಶ್ನೆಗಳು ಎದ್ದವೋ, ಆಗ ಸರ್ಕಾರವು ಪಂಚಾಯಿತಿ ಚುನಾವಣೆ ಸಮೀಪಿಸಿರುವುದರಿಂದ ಇದನ್ನು ಮುಂದೂಡಲು ಸಾಧ್ಯವಿಲ್ಲ. ಆದಕಾರಣ, ಚುನಾವಣೆಗೆ ಸಂಬಂಧಿಸಿದ ತಿದ್ದುಪಡಿಗಳನ್ನು ಮಾತ್ರ ಮಂಡಿಸಲಾಗಿದೆ ಎಂದು  ವಿವರಣೆ ನೀಡಿತು. ಅವುಗಳೆಂದರೆ: ಅಧ್ಯಕ್ಷರಿಗೆ ಮತ್ತು ಉಪಾಧ್ಯಕ್ಷರಿಗೆ ಸಂಪೂರ್ಣ ಐದು ವರ್ಷಗಳ ಅವಧಿಯ ಅಧಿಕಾರ; ಎಲ್ಲಾ ಸ್ತರಗಳಿಗೂ ಮೀಸಲಾತಿ; ಸರದಿಯ ಸ್ಥಾನಗಳು ಹತ್ತು ವರ್ಷಗಳಿಗೊಮ್ಮೆ; ಮಹಿಳೆಯರಿಗೆ ಶೇ 50 ಮೀಸಲಾತಿಯ ಖಾತರಿ.

ಈ ವಾದ ಪ್ರಾಮಾಣಿಕವಾಗಿದ್ದಲ್ಲಿ, ಏಕಸದಸ್ಯ ಮತಕ್ಷೇತ್ರ, ಎಲ್ಲಾ ಪಂಚಾಯಿತಿ ಚುನಾವಣೆಗಳಿಗೆ ರಾಜ್ಯದಿಂದ ಅನುದಾನ, ಚುನಾವಣಾ ಸಮಯದಲ್ಲಿ ಸಂಪೂರ್ಣ ಮದ್ಯಮಾರಾಟ ನಿಷೇಧ, ಏಳು ಕೆಲಸದ ದಿನಗಳಲ್ಲಿ ಚುನಾವಣಾ ಪ್ರಕ್ರಿಯೆ ಸಂಪೂರ್ಣಗೊಳಿಸುವುದು ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ ಗಡಿನಿರ್ಧಾರ ಅಧಿಕಾರ, ಮೀಸಲಾತಿ ಮತ್ತು ಸದಸ್ಯರನ್ನು ಅನೂರ್ಜಿತಗೊಳಿಸುವ ಜವಾಬ್ದಾರಿಯುತ ಅಧಿಕಾರ– ಚುನಾವಣೆಗೆ ಸಂಬಂಧಿಸಿದ ಇಂತಹ ಇತರ ಶಿಫಾರಸುಗಳನ್ನೂ ಮಸೂದೆಯಲ್ಲಿ ಸೇರಿಸಬಹುದಿತ್ತು.

ವಿರೋಧ ಪಕ್ಷಗಳ ಮತ್ತು ಆಡಳಿತ ಪಕ್ಷದ ಹಲವು ಸದಸ್ಯರು ರಮೇಶಕುಮಾರ್ ಸಮಿತಿಯ ಶಿಫಾರಸುಗಳ ಕುರಿತು ಸಂಪೂರ್ಣವಾಗಿ ಚರ್ಚಿಸಲು ವಿಶೇಷ ಅಧಿವೇಶನ ಕ್ಕಾಗಿ ಆಗ್ರಹಿಸಿದರು. ಆದರೆ, ಉಳಿದ ಶಿಫಾರಸುಗಳನ್ನು ಮುಂಬರುವ ದಿನಗಳಲ್ಲಿ ಅಳವಡಿಸಿಕೊಳ್ಳುವುದಾಗಿ  ಸಚಿವರು ಹೇಳಿಕೆ ನೀಡಿದರು. ಬಿ.ಬಿ.ಎಂ.ಪಿ. ವಿಭಜನೆಗೆ  ವಿಶೇಷ ಅಧಿವೇಶನ ಕರೆದ ಸರ್ಕಾರ, ಪಂಚಾಯತ್‌ರಾಜ್‌ ಬಲಪಡಿಸುವ ಕುರಿತು ಚರ್ಚಿಸಲು ಅದೇ ಮಾನದಂಡ ಅನುಸರಿಸದಿರುವುದು ಆಶ್ಚರ್ಯಕರ.
ರಾಜಕಾರಣಿಗಳು ತಮ್ಮ ಸ್ವಂತಕ್ಕೆ ಪ್ರಯೋಜನ ವಾಗುವುದಿದ್ದರೆ ಮಾತ್ರ ಕೆಲವನ್ನು ಬದಲಾಯಿಸುತ್ತಾರೆ ಮತ್ತು ತತ್ವಗಳನ್ನೂ ಅತಿಕ್ರಮಿಸುತ್ತಾರೆ ಎಂಬ ಸತ್ಯವನ್ನು ನಾವು ಗಣನೆಗೆ ತೆಗೆದುಕೊಳ್ಳಲೇಬೇಕು.

(ಲೇಖಕಿ ಸಾಮಾಜಿಕ, ರಾಜಕೀಯ ಕಾರ್ಯಕರ್ತೆ ಮತ್ತು ರಮೇಶಕುಮಾರ್‌ ಸಮಿತಿ ಸದಸ್ಯೆ)

editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT