ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಬೆನ್ನೇರಿ ಹೊರಟ ಚಾಂಪಿಯನ್ನರು

Last Updated 21 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

‘ಸಾಮರ್ಥ್ಯ ವೃದ್ಧಿಯಾಗುವುದು ವಿಜಯಗಳಿಂದ ಅಲ್ಲ. ಆದರೆ, ಗೆಲುವಿಗಾಗಿ ಪಟ್ಟ ಪರಿಶ್ರಮ, ಹೋರಾಟದಿಂದ. ಶ್ರದ್ಧೆ, ಪರಿಶ್ರಮದ ಮೇಲೆ ಅಪಾರ ವಿಶ್ವಾಸವಿಟ್ಟವರು ಶರಣಾಗಲು ಒಪ್ಪುವುದಿಲ್ಲ. ಅದೇ ನಿಜವಾದ ಸಾಮರ್ಥ್ಯ’– ದೇಹದಾರ್ಢ್ಯಪಟು ಮತ್ತು ಹಾಲಿವುಡ್ ನಟ  ಅರ್ನಾಲ್ಡ್ ಶ್ವಾರ್ನೇಜರ್ ಹೇಳಿರುವ ಈ ಮಾತು ಈಗ ಕರ್ನಾಟಕ ರಣಜಿ ತಂಡಕ್ಕೆ ಅನ್ವಯಿಸುತ್ತದೆ.

ಪ್ರಸಕ್ತ ರಣಜಿ ಋತುವಿನ ಕಳೆದ ಎರಡೂ ಪಂದ್ಯಗಳಲ್ಲಿ ಆರ್. ವಿನಯಕುಮಾರ್ ಬಳಗವು ಗೆಲುವು ಸಾಧಿಸಿರುವ ರೀತಿ ನೋಡಿದರೆ, ಇಷ್ಟು ವರ್ಷಗಳ ಪರಿಶ್ರಮ ಮತ್ತು ಶ್ರದ್ಧೆಯ ಮೇಲೆ ಅಪಾರ ವಿಶ್ವಾಸವಿಟ್ಟಂತೆ ಕಾಣುತ್ತದೆ. ಕಳೆದ ವರ್ಷದ ರಣಜಿ ಟ್ರೋಫಿ, ನಂತರ ಇರಾನಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿಗಳನ್ನು ಒಂದೇ ವರ್ಷದ ಅವಧಿಯಲ್ಲಿ ಗೆದ್ದಿರುವ ತಂಡ ನಿರುಮ್ಮಳವಾಗಿಲ್ಲ.

ಇಷ್ಟೆಲ್ಲ ಗೆದ್ದ ಮೇಲೆ ಮತ್ತಿನ್ನೇನು ಬೇಕು ಎಂಬ ಅಲ್ಪತೃಪ್ತಿ ಕಾಡಿಲ್ಲ. ಮತ್ತಷ್ಟು, ಗೆಲುವಿನ ಹಸಿವು ಹೆಚ್ಚುತ್ತಲೇ ಇದೆ. ಸತತ ಗೆಲುವುಗಳ ನಿರ್ವಹಣೆ ಸುಲಭದ್ದಲ್ಲ. ಸೋಲಿನಿಂದ ಮೇಲೆ ಬರುವ ಪ್ರಯತ್ನಕ್ಕಿಂತ, ಯಶಸ್ಸನ್ನು  ಸಮಚಿತ್ತದಿಂದ ಸ್ವೀಕರಿಸಿ, ಮುಂದೆಯೂ ಜಯ ಗಳಿಸುವುದರತ್ತಲೇ ಚಿತ್ತ ನೆಡುವುದು ಸವಾಲಿನ ಕೆಲಸ. ಕರ್ನಾಟಕದ ಬಳಗ ಇದನ್ನು ಸಮರ್ಥವಾಗಿ ನಿಭಾಯಿಸುತ್ತಿದೆ. ಚಾಂಪಿಯನ್ ತಂಡಕ್ಕೆ ತಕ್ಕ ಆಟವಾಡುತ್ತಿದೆ.

‘ಬರೀ ರಣಜಿ ಟ್ರೋಫಿ ಗೆಲ್ಲುವುದಷ್ಟೇ ನಮಗೆ ಗುರಿಯಲ್ಲ. ಯಾವುದೇ ಪಂದ್ಯ, ಟೂರ್ನಿಯಾದರೂ ನಿರಂತರವಾಗಿ ಜಯಿಸುವುದೇ ನಮ್ಮ ಗುರಿ. ಡ್ರೆಸ್ಸಿಂಗ್ ರೂಮಿನಲ್ಲಿ ಸಕಾರಾತ್ಮಕ ಮತ್ತು ಸ್ನೇಹದ ವಾತಾವರಣವಿದೆ. ಇದರಿಂದ ಎಲ್ಲರಿಗೂ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗುತ್ತಿದೆ’ ಎಂದು ತಂಡದ ಆರಂಭಿಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಹೇಳುತ್ತಾರೆ.

ತಮಿಳುನಾಡು ವಿರುದ್ಧದ ಮೊದಲ ಇನಿಂಗ್ಸ್‌ನಲ್ಲಿ ಅಲ್ಪಮೊತ್ತ ಗಳಿಸಿದ್ದ ಕರ್ನಾಟಕ ನಂತರ ಪುಟಿದೆದ್ದ ರೀತಿಗೆ ತಮಿಳುನಾಡು ಸೋತು ಶರಣಾಗಿತ್ತು. ಕೋಲ್ಕತ್ತದ ಈಡನ್‌ ಗಾರ್ಡನ್‌ನಲ್ಲಿ 72 ವರ್ಷಗಳ ನಂತರದ ಜಯಸಾಧನೆಗೆ ಇಂತಹದ್ದೇ ಒಂದು ಹಿನ್ನೆಲೆಯಿದೆ.
ಇಲ್ಲಿಯ  ವಿಕೆಟ್‌ ಮಧ್ಯಮವೇಗಿಗಳ ದಾಳಿಗೆ ಹೇಳಿ ಮಾಡಿಸಿದಂತಿತ್ತು. ಟಾಸ್‌ ಗೆದ್ದು ಬೌಲಿಂಗ್ ಮಾಡಿದವರಿಗೇ  ವಿಜಯಲಕ್ಷ್ಮೀ ಒಲಿಯುತ್ತಾಳೆ ಎಂಬ ಮಾತೂ ಕೇಳಿಬಂದಿತ್ತು.  ಆದರೆ, ಟಾಸ್ ಸೋತ ಕರ್ನಾಟಕ ಪಂದ್ಯವನ್ನು ಗೆದ್ದು ಬೀಗಿತು.

ಮೊದಲ ಇನಿಂಗ್ಸ್‌ನಲ್ಲಿ ಊಟದ ವಿರಾಮಕ್ಕೂ ಮುನ್ನವೇ ಅಶೋಕ ದಿಂಡಾ ದಾಳಿಗೆ ನಲುಗಿದ್ದ ವಿನಯ್ ಬಳಗ ಆರು ಪ್ರಮುಖ ವಿಕೆಟ್‌ಗಳನ್ನು ಕಳೆದು ಕೊಂಡಿತ್ತು. ಇನ್ನೇನು ಪಂದ್ಯ ತಮ್ಮ ಕೈವಶವಾಯಿತು ಎಂದು ಖುಷಿಯಿಂದ ಸಿಹಿಯೂಟ ಮಾಡಿದ್ದರು ಬಂಗಾಳದ ಆಟಗಾರರು. ಆದರೆ, ಶ್ರೇಯಸ್ ಗೋಪಾಲ್ ಮತ್ತು ಎಸ್. ಅರವಿಂದ್ ಕೊನೆಯ ವಿಕೆಟ್ ಪಾಲುದಾರಿಕೆಯಲ್ಲಿ ತೋರಿದ ದಾಖಲೆಯ ಆಟ ಆತಿಥೇಯರ ಪಾಲಿಗೆ ಕಹಿಯಾಯಿತು!

ಪಂದ್ಯದ ಯಾವುದೇ ಹಂತದಲ್ಲಿಯೂ ತಾಳ್ಮೆ ಕಳೆದುಕೊಂಡು ಕೈಚೆಲ್ಲುವ ಪ್ರವೃತ್ತಿಯನ್ನು ಕರ್ನಾಟಕದ ಬೌಲರ್‌ಗಳು, ಫೀಲ್ಡರ್‌ಗಳು ತೋರಲಿಲ್ಲ. ಫಾಲೋಆನ್ ಪಡೆದ ಬಂಗಾಳ ಎರಡನೇ ಇನಿಂಗ್ಸ್‌ನಲ್ಲಿ ಪಂದ್ಯವನ್ನು ಡ್ರಾ ಮಾಡಿಕೊಂಡು ಒಂದು ಅಂಕವನ್ನಾದರೂ ದಕ್ಕಿಸಿಕೊಳ್ಳುವತ್ತ ಗುರಿ ನೆಟ್ಟಿತ್ತು. ನಾಯಕ ವಿನಯಕುಮಾರ್ ಅದಕ್ಕೆ ಆಸ್ಪದವನ್ನೇ ನೀಡಲಿಲ್ಲ. ಏಳು ಓವರುಗಳ ಒಂದೇ ಸ್ಪೆಲ್‌ನಲ್ಲಿ ಐದು ವಿಕೆಟ್ (ಪಂದ್ಯದ ಒಟ್ಟು 9 ವಿಕೆಟ್ ಗಳಿಸಿದರು) ಕಿತ್ತು ಗೆಲುವಿನ ಗರಿಯನ್ನು ತಮ್ಮ ಕಿರೀಟಕ್ಕೆ ಸಿಕ್ಕಿಸಿಕೊಂಡರು.

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಎಂಟು ಪಂದ್ಯಗಳನ್ನಾಡಿರುವ ಹೊಸ ಹುಡುಗ ಶ್ರೇಯಸ್ ಗೋಪಾಲ್ ಮತ್ತು 87 ಪ್ರಥಮ ದರ್ಜೆ ಪಂದ್ಯಗಳು, 31 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳನ್ನಾಡಿರುವ ವಿನಯಕುಮಾರ್ ಇಬ್ಬರ ಉತ್ಸಾಹವೂ ಒಂದೇ ಪ್ರಮಾಣದಲ್ಲಿರುವುದು. ಅಲ್ಲದೇ ತಂಡದಲ್ಲಿರುವ ಹೊಸ ಪ್ರತಿಭೆಗಳು ಮತ್ತು ಅನುಭವಿ ಆಟಗಾರರ ನಡುವಿನ ಆರೋಗ್ಯಕರ ಪೈಪೋಟಿಯನ್ನು ಇದು ತೋರಿಸುತ್ತದೆ.

ತಂಡದಲ್ಲಿ ಜಾಗ ಉಳಿಸಿಕೊಳ್ಳಲು, ರಾಷ್ಟ್ರೀಯ ತಂಡದ ಆಯ್ಕೆದಾರರ ಗಮನ ಸೆಳೆಯಲು ಇಬ್ಬರಿಗೂ ಈ ಪ್ರದರ್ಶನ ಅನಿವಾರ್ಯವಾಗಿದೆ. ಇದು ತಂಡಕ್ಕೆ ಲಾಭಕರ. ಈ ಅಂಶವನ್ನು ಬಳಸಿಕೊಂಡೇ ಬ್ಯಾಟಿಂಗ್ ತರಬೇತುದಾರ ಜೆ. ಅರುಣ್‌ ಕುಮಾರ್ ಮತ್ತು ಬೌಲಿಂಗ್ ಕೋಚ್ ಮನ್ಸೂರ್ ಅಲಿ ಖಾನ್ ಹುಡುಗರನ್ನು ಹುರಿದುಂಬಿಸುತ್ತಿದ್ದಾರೆ.

‘ತಂಡದಲ್ಲಿ ಹಿರಿಯ ಮತ್ತು ಕಿರಿಯ ಎಂಬ ತಾರತಮ್ಯವೇ ಇಲ್ಲ. ಪರಸ್ಪರ ಎಲ್ಲರ ಸಾಧನೆಗಳನ್ನು ಎಂಜಾಯ್ ಮಾಡುತ್ತಿವೆ. ತಂಡ ಗೆಲ್ಲಬೇಕು. ಎಲ್ಲರೂ ಚೆನ್ನಾಗಿ ಆಡಬೇಕು ಎಂಬುದೇ ಮೂಲ ಗುರಿ’ ಎಂದು ಶ್ರೇಯಸ್ ಗೋಪಾಲ್ ಹೇಳುತ್ತಾರೆ.
ಸ್ಟುವರ್ಟ್‌ ಬಿನ್ನಿ ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು, ಇದೀಗ ಆಸ್ಟ್ರೇಲಿಯಾ ಪ್ರವಾಸಕ್ಕೆ ಕೆ.ಎಲ್. ರಾಹುಲ್ ತೆರಳಿದ್ದಾರೆ. ವಿನಯ್, ಮಿಥುನ್, ರಾಬಿನ್ ಉತ್ತಪ್ಪ, ಮನೀಶ್ ಪಾಂಡೆ ಕೂಡ ಆಯ್ಕೆದಾರರ ಗಮನ ಸೆಳೆಯುತ್ತಿದ್ದಾರೆ. ಇದು ಕಿರಿಯ ಆಟಗಾರರಿಗೆ ಆಕರ್ಷಣೆಯಾಗಿದೆ.

‘ತಂಡದಲ್ಲಿರುವ ಎಲ್ಲರೂ ರಾಷ್ಟ್ರೀಯ ತಂಡದ ಅವಕಾಶದ ಆಕಾಂಕ್ಷಿಗಳು. ಆದು ನಮ್ಮ ಸಾಮರ್ಥ್ಯ ಪ್ರದರ್ಶನಕ್ಕೆ ಉತ್ತೇಜನ ನೀಡುತ್ತಿದೆ. ಯಾರೇ ಚೆನ್ನಾಗಿ ಆಡಿದರೂ ಉಳಿದವರು ಶ್ಲಾಘಿಸುತ್ತಾರೆ. ಪರಸ್ಪರ ಆರೋಗ್ಯಕರ ಪೈಪೋಟಿ ತಂಡದಲ್ಲಿದೆ. ಕಷ್ಟದ ಸಮಯದಲ್ಲಿ ಪುಟಿದೇಳುವ ಮನೋಭಾವ, ಸುಲಭವಾಗಿ ಕೈಚೆಲ್ಲದ ಗಟ್ಟಿ ಛಲದಿಂದ ನಮಗೆ ಗೆಲುವು ಸಾಧ್ಯವಾಗುತ್ತಿದೆ’ ಎಂದು ತಂಡದ ಉಪನಾಯಕ ಸಿ.ಎಂ. ಗೌತಮ್ ಹೆಮ್ಮೆಯಿಂದ ಹೇಳುತ್ತಾರೆ.ಸದ್ಯದ ತಂಡದ ‘ಬೆಂಚ್‌ ಶಕ್ತಿ’ ಕೂಡ ಉತ್ತಮವಾಗಿದೆ.

ಕೋಲ್ಕತ್ತದಲ್ಲಿ 11ರ ಪಟ್ಟಿಯಲ್ಲಿರದ ಎಚ್‌.ಎಸ್. ಶರತ್, ಉದಿತ್ ಪಟೇಲ್, ಆರ್. ಸಮರ್ಥ್, ಅಬ್ರಾರ್ ಖಾಜಿ,  ಶಿಶಿರ್ ಭವಾನೆ ತಮ್ಮ ಅವಕಾಶಕ್ಕಾಗಿ ತುದಿಗಾಲಿನಲ್ಲಿ ನಿಂತು ಕಾಯುತ್ತಿದ್ದಾರೆ.  ಈಗಾಗಲೇ ಎರಡು ಪಂದ್ಯಗಳಿಂದ ‘ಎ’ ಗುಂಪಿನಲ್ಲಿ 12 ಅಂಕಗಳನ್ನು ಗಳಿಸಿಕೊಂಡಿದೆ. ಇನ್ನೊಂದು ಪಂದ್ಯ ಗೆದ್ದರೂ ಕ್ವಾರ್ಟರ್‌ಫೈನಲ್ ಹಾದಿ ಬಹುತೇಕ ಸುಗಮ. ಇದರಿಂದ ಲೀಗ್‌ನ ಕೊನೆಯ ಹಂತದ ಕೆಲವು ಪಂದ್ಯಗಳಲ್ಲಿ ಬೆಂಚ್‌ ಕಾಯಿಸಿದವರಿಗೆ ಅವಕಾಶ ಸಿಗುವ ನಿರೀಕ್ಷೆ ಇದೆ.

‘ನಮ್ಮ ತಂಡದಲ್ಲಿ 11 ಆಟಗಾರರೂ ಬ್ಯಾಟಿಂಗ್ ಮಾಡುವ ಸಾಮರ್ಥ್ಯ ಹೊಂದಿರುವುದು ಪ್ಲಸ್‌ಪಾಯಿಂಟ್. ಋತುವಿನ ಮೊದಲ ಎರಡೂ ಪಂದ್ಯ ಗೆದ್ದಿರುವುದು ಉತ್ತಮ ಆರಂಭ ಸಿಕ್ಕಂತಾಗಿದೆ.  ಮುಂದಿನ ಕಠಿಣ ಸವಾಲುಗಳಿಗೂ ದಿಟ್ಟ ಉತ್ತರ ನೀಡುತ್ತೇವೆ ’ ಎಂದು ನಾಯಕ ಆರ್. ವಿನಯಕುಮಾರ್ ವಿಶ್ವಾಸ ವ್ಯಕ್ತಪಡಿಸುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT