ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿಯೆಂಬ ಸೂತಕ

ಪ್ರಬಂಧ
Last Updated 28 ಜುಲೈ 2016, 13:58 IST
ಅಕ್ಷರ ಗಾತ್ರ

ಲಂಕೇಶರ ‘ಮುಟ್ಟಿಸಿಕೊಂಡವನು’ ಕಥೆಯಲ್ಲಿ ಬಸಲಿಂಗು ಎಂಬ ಮೇಲ್ವರ್ಗದ ಬಡ ರೈತನೊಬ್ಬ ದೃಷ್ಟಿ ಮಂಜಾಗುತ್ತಿರುವ ತನ್ನ ಕಣ್ಣನ್ನು ಕಾಪಾಡಿಕೊಳ್ಳಲು ಸುಶಿಕ್ಷಿತ ದಲಿತ ವೈದ್ಯರಾದ ಡಾ. ತಿಮ್ಮಪ್ಪನವರ ಹತ್ತಿರ ಹೋಗುತ್ತಾನೆ. ಅವರು ಅವನಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯನ್ನೂ ಮಾಡಿ, ಎರಡು ವಾರ ತಲೆಗೆ ನೀರು ಸೋಕಿಸದಂತೆ ಪಥ್ಯ ಹೇಳಿ ಕಳಿಸಿಕೊಡುತ್ತಾರೆ. ತಿಮ್ಮಪ್ಪನವರು ಹೊಲೆಯರೆಂಬ ವಿಷಯ ಅವನಿಗೆ ತಿಳಿಯದು.

ಆದರೆ ಅವನು ಮನೆ ತಲುಪುವುದಕ್ಕಿಂತ ಮೊದಲೇ ಅವನ ಹೆಂಡತಿ ಸಿದ್ಲಿಂಗಿಗೆ ಅದು ಹೇಗೋ ಗೊತ್ತಾಗಿಬಿಟ್ಟಿರುತ್ತದೆ. ತನಗೇ ಗೊತ್ತಿಲ್ಲದ ವಿಷಯ ಆಕೆಗೆ ಹೇಗೆ ತಿಳಿಯಿತೆಂದು ಬಸಲಿಂಗು ಬೆರಗಾಗುತ್ತಾನೆ. ಅವನ ಬೆರಗನ್ನು ಬದಿಗೊತ್ತಿ, ತಿಮ್ಮಪ್ಪನವರ ಸಲಹೆಯನ್ನು ಮೂಲೆಗೊತ್ತಿ, ಸಿದ್ಲಿಂಗಿಯು ತನ್ನ ಗಂಡನ ಸೂತಕವನ್ನು ಪರಿಹರಿಸಲು ಬಿಸಿನೀರಿನಿಂದ ಅವನಿಗೆ ತಲೆಸ್ನಾನವನ್ನು ಮಾಡಿಸಿಯೇ ಬಿಡುತ್ತಾಳೆ.

ಅಲ್ಲಿಂದ ಅವನ ದುರಂತಗಾಥೆ ಶುರುವಾಗುತ್ತದೆ. ಇಂದಿನ ನಮ್ಮ ಭಾರತದ ಸ್ಥಿತಿ ಬಸಲಿಂಗುವಿನ ಸ್ಥಿತಿಗಿಂತ ಬೇರೆಯಾಗಿಲ್ಲ ಎನಿಸುತ್ತಿದೆ. ಅದು ತನ್ನ ಸ್ವಾಸ್ಥ್ಯ, ಘನತೆಗಳನ್ನು ಬಲಿ ಕೊಟ್ಟು, ಎಷ್ಟೋ ಮಹಾನುಭಾವರು ಹೇಳಿದ ಕಿವಿಮಾತುಗಳನ್ನು ಮೂಲೆಗೊತ್ತಿ, ಜಾತಿಯ ವಿಷವರ್ತುಲದಲ್ಲಿ ಸಿಲುಕಿ ನರಳುತ್ತಿದೆ.

ಝಳ ಸೋಕದಷ್ಟು ದೂರದಲ್ಲಿ ನಿಂತು ನೋಡುವಾಗ ಸಣ್ಣದೆಂಬಂತೆ ಕಾಣುವ ಈ ಜಾತಿಯ ಪ್ರಶ್ನೆ, ನಿಜವಾಗಿಯೂ ಅದು ಕಾಣುವಷ್ಟು ಸಣ್ಣದಂತೂ ಖಂಡಿತ ಅಲ್ಲ. ನಮ್ಮ ಆಹಾರ, ಆಚಾರ, ಉಡುಪು, ಭಾಷೆ... ಎಲ್ಲವುಗಳ ಮೇಲೂ ಇದರ ನಿಚ್ಚಳವಾದ ಪ್ರಭಾವವಿದೆ ಇಂದು.

ಆದರೆ ಜಾತಿ ವಿಚಾರದಲ್ಲಿ ಯಾವನಿಗೂ ಆಯ್ಕೆಯ ಸ್ವಾತಂತ್ರ್ಯವಿಲ್ಲ ಎಂಬುದನ್ನು ನಾವು ಮರೆತೇಬಿಟ್ಟಿದ್ದೇವೆ. ನಮ್ಮ ಹುಟ್ಟಿಗೆ ಮೊದಲೇ ನಮ್ಮ ಜಾತಿ, ಧರ್ಮಗಳು ನಿರ್ಧಾರವಾಗಿರುತ್ತವೆಯಾದ್ದರಿಂದ ಮೇಲಿನ ಜಾತಿ ಎಂಬ ಅಹಮಿಕೆಗೂ ಕೆಳಜಾತಿ ಎಂಬ ಕೀಳರಿಮೆಗೂ ಅರ್ಥವೇ ಇಲ್ಲ. ಆದರೆ ಈ ಸಮಾಜ ನಮ್ಮೊಳಗೆ ಈ ಮೇಲರಿಮೆ ಮತ್ತು ಕೀಳರಿಮೆಯ ವಿಷಗಳನ್ನು ತುಂಬಾ ಪ್ರಜ್ಞಾಪೂರ್ವಕವಾಗಿ ತುಂಬುತ್ತಾ ಸಾಗುತ್ತಿದೆ.

ನನ್ನ ದಲಿತ ಮಿತ್ರರೊಬ್ಬರ ಮಗಳು ಶಾಲೆಯಿಂದ ಬಂದು ಕಾಲರ್ ಎಗರಿಸುತ್ತ– ‘‘ಪಪ್ಪ, ಆಲ್ ನಾನ್ ಬ್ರಾಹ್ಮಿನ್ಸ್ ಆರ್ ಶೂದ್ರಾಸ್ ಅಂತೆ. ಸೋ ನವ್ ವಿ ಆರ್ ಶೂದ್ರಾಸ್’’ ಎಂದಳಂತೆ. ಜಾತಿ ಮೂಲದ ಐಡೆಂಟಿಟಿ ಕ್ರೈಸಿಸ್ ಹೇಗೆಲ್ಲ ಕೆಲಸ ಮಾಡುತ್ತಿರುತ್ತೆ ಅನ್ನುವುದಕ್ಕೆ ತಳಸಮುದಾಯಗಳ ಇಂಥ ವರ್ತನೆಗಳು ಸರಿಯಾದ ಮಾಹಿತಿ ಒದಗಿಸುತ್ತವೆ.

ನಟರಾಜ್ ಹುಳಿಯಾರರ ‘ಬಸಲಿಂಗಪ್ಪ ಮತ್ತು ಡೇವಿಡ್ ಸಾಹೇಬರು’ ಕಥೆಯಲ್ಲಿ ದಲಿತ ಪಾತ್ರವೊಂದು ತನ್ನ ಮಗಳ ಸಮಾಧಾನಕ್ಕಾಗಿಯಾದರೂ ಒಂದು ಮೇಲ್ವರ್ಗದ ಸುಳ್ಳು ಪ್ರಮಾಣಪತ್ರ ಕೊಡಿ ಎಂದು ಅಧಿಕಾರಿಯೊಬ್ಬನಲ್ಲಿ ಕೇಳಿಕೊಳ್ಳುವ ಸನ್ನಿವೇಶವಿದೆ.

ದುರಂತವೆಂದರೆ ಈ ಬೆಳವಣಿಗೆಯು ನಾಳಿನ ನಾಗರಿಕರಾಗಿರುವ ಇಂದಿನ ಮಕ್ಕಳವರೆಗೂ ತನ್ನ ಕರಾಳ ಹಸ್ತಗಳನ್ನು ಚಾಚಿಯಾಗಿದೆ. ಹಿರೀಕರು ಅನುಭವಿಸಿದ ದುಃಸ್ವಪ್ನ ಅವರ ತಲೆಮಾರಿಗೇ ಮುಗಿಯದೆ ಬೆಂಬಿಡದ ವಂಶವಾಹಿಯಂತೆ ಅವರ ಮುಂದಿನ ತಲೆಮಾರಿನ ಮಕ್ಕಳಿಗೂ ಹರಿದುಬಂದಿದೆ.

ಈ ಆಕ್ಟೋಪಸ್‌ನ ಕಬಂಧ ಬಾಹುಗಳಿಂದ ಬಿಡಿಸಿಕೊಳ್ಳದೆ, ಭಾರತ ಸಾಧಿಸುವ ಯಾವುದೇ ಆರ್ಥಿಕ, ರಾಜಕೀಯ ಔನ್ನತ್ಯಗಳು ‘ತೇರು ಸಿಂಗಾರ, ಗಾಲಿ ಅದ್ದಾರ’ ಎಂಬಂತೆ ಅರ್ಥಹೀನ.

‘ಸಮಾಜದಲ್ಲಿ ಮುಖ್ಯವಾಗಿ ಮಾಲೀಕರು ಮತ್ತು ಕಾರ್ಮಿಕರು ಎಂಬ ಎರಡು ವರ್ಗಗಳಿವೆ’ ಎಂದು ಹೇಳಿದ ಕಾರ್ಲ್ ಮಾರ್ಕ್ಸ್‌, ಸಮಾಜವನ್ನು ಶೋಷಣೆಯ ನೆಲೆಯಿಂದ, ಆರ್ಥಿಕತೆಯ ನೆಲೆಯಿಂದ ವಿಭಾಗಿಸಿದ. ಆದರೆ ಭಾರತದ ಸ್ಥಿತಿ ಹೀಗೆ ಇಷ್ಟು ಸರಳವಾಗಿ ವರ್ಗಗಳಿಗೆ ಸೀಮಿತವಾಗಿಲ್ಲ.

ಇಲ್ಲಿ ಧರ್ಮಾಧಾರಿತ ವಿಂಗಡಣೆ ಇದೆ, ಪ್ರಾದೇಶಿಕ ಅಸಮಾನತೆಯಾಧಾರಿತ ವಿಂಗಡಣೆ ಇದೆ, ಆರ್ಥಿಕತೆಯನ್ನಾಧರಿಸಿದ ವಿಂಗಡಣೆಯೂ ಇದೆ. ಇವೆಲ್ಲಕ್ಕೂ ಕಳಸವಿಟ್ಟಂತೆ ಸಮಾಜದ ಉಂಗುಷ್ಟದಿಂದ ಹಿಡಿದು ಹಣೆಯವರೆಗೆ ಹರಡಿಕೊಂಡಿರುವ ತೊನ್ನಿನಂತೆ ಜಾತಿವ್ಯವಸ್ಥೆ ಇದೆ.

ಇದಂತೂ ಭಾರತೀಯ ಸಮಾಜವನ್ನು ತುಂಡು ತುಂಡಾಗಿ ಕತ್ತರಿಸಿ ಚೆಲ್ಲಿದೆ. ಇಲ್ಲಿ ಬಾಡಿಗೆ ಮನೆ ಹಿಡಿಯುವುದರಿಂದ ಹಿಡಿದು, ಮದುವೆಯಾಗಲು, ನೌಕರಿ ಪಡೆಯಲು, ಬಡ್ತಿ ಹೊಂದಲು, ಕಡೆಗೆ ಮೋಕ್ಷವೆಂಬ ಮಹಾಭ್ರಮೆಯನ್ನು ಸಾಕ್ಷಾತ್ಕಾರ ಮಾಡಿಕೊಳ್ಳಲೂ ಕೂಡ ಜಾತಿ ನಿರ್ಧಾರಕ ಪಾತ್ರ ನಿರ್ವಹಿಸುತ್ತಿದೆ.

ಬ್ರಾಹ್ಮಣರು, ಲಿಂಗಾಯತರು, ಹಿಂದುಳಿದವರು, ದಲಿತರು... ಹೀಗೆ ಒಂದು ಸರಳರೇಖೆಯಂತೆ ಕಾಣುವ ಈ ಶ್ರೇಣೀಕೃತ ವ್ಯವಸ್ಥೆ ಕೂಡ ಮೇಲ್ನೋಟಕ್ಕೆ ಕಾಣುವಷ್ಟು ರೇಖಾತ್ಮಕವಾಗಿಲ್ಲ ಎನ್ನುವುದೂ ಮತ್ತೊಂದು ಗಮನಾರ್ಹ ಅಂಶವಾಗಿದೆ.

ಬ್ರಾಹ್ಮಣರಾಗಿದ್ದೂ ಸ್ಮಾರ್ತರು ಅನುಭವಿಸುವ ನೋವು, ಲಿಂಗಾಯತರಾಗಿದ್ದೂ ಹಡಪದ ಮುಂತಾದ ಅದರ ಕೆಲ ಉಪಜಾತಿಗಳು ಅನುಭವಿಸುವ ನೋವು, ಇತರೆ ಹಿಂದುಳಿದವರ ಮುಂದೆ ಪರಿಶಿಷ್ಟ ಪಂಗಡದವರು, ಅವರ ಮುಂದೆ ಪರಿಶಿಷ್ಟ ಜಾತಿಗಳವರು, ಅವರಲ್ಲೂ ಇರುವ ಎಡಗೈ ಬಲಗೈ ತಾರತಮ್ಯಗಳು, ಇದರ ಹೊರತಾಗಿ ಎಲ್ಲ ಜಾತಿಗಳಲ್ಲಿ ಆತ್ಯಂತಿಕ ಶೋಷಿತರಾಗಿ ಉಳಿದಿರುವ ಮಹಿಳೆಯರು... ಹೀಗೆ ಇದೊಂದು ಸಂಕೀರ್ಣ ಜಾಲರೂಪದ ವ್ಯವಸ್ಥೆಯಾಗಿ ರೂಪುಗೊಂಡಿದೆ.

ಈ ಜಾತಿಯ ಗಟ್ಟಿ ಜೇಡರಬಲೆಯಲ್ಲಿ ಕಡೆಗೂ ಸಿಲುಕಿ ಒದ್ದಾಡುವವರು ಸೊಳ್ಳೆ, ನೊಣಗಳಂಥ ಸಣ್ಣಪುಟ್ಟ ಜಾತಿಗಳ ಬಡಜನರೇ. ಹಣಬಲ, ಅಧಿಕಾರ ಬಲ ಪಡೆದುಕೊಂಡ ಸಣ್ಣಪುಟ್ಟ ಜಾತಿಗಳು ಅವು ಪ್ರಭೇದದಿಂದ ಸೊಳ್ಳೆ, ನೊಣಗಳೇ ಆಗಿದ್ದರೂ ಬಲದಿಂದ ಅಮೆಜಾನ್ ಕಾಡಿನ ಬೃಹದ್ ಗಾತ್ರ ಪಡೆದಿರುವುದರಿಂದ ಈ ಬಲೆಯನ್ನು ಅನಾಯಾಸವಾಗಿ ಹರಿದುಕೊಂಡು ಹೋಗುತ್ತವೆ. ಪ್ರಭೇದದಿಂದಲೇ ದೊಡ್ಡ ಪ್ರಾಣಿಗಳಾಗಿ ಹುಟ್ಟಿರುವ ಆನೆ, ಹುಲಿ, ಸಿಂಹಗಳಿಗಂತೂ ಈ ಬಲೆ ಅನ್ವಯವೇ ಆಗುವುದಿಲ್ಲ.

ದುಡ್ಡು ನಿಮ್ಮಲ್ಲಿದ್ದರೆ ನೀವು ಯಾವ ಜಾತಿಯವರಾಗಿದ್ದರೂ ಶ್ರೇಷ್ಠರು ಎಂಬ ಭಾವ ಕೂಡ ಸಾಮಾಜಿಕ ಸಮೀಕರಣವನ್ನು ನಿಧಾನವಾಗಿ ಬದಲಾಯಿಸುತ್ತಿದೆ. ಮುಖ ನೋಡಿ ಮೊಳ ಹಾಕುವ, ಕುಂಡಿ ನೋಡಿ ಮಣೆ ಹಾಕುವ ಜನ ಅವತ್ತಿಗೂ ಇದ್ದರು, ಇವತ್ತಿಗೂ ಇದ್ದಾರೆ, ಯಾವತ್ತಿಗೂ ಇರುತ್ತಾರೆ.

ಏಕೆಂದರೆ ಇಂದು ಸ್ವತಃ ದುಡ್ಡೇ ಒಂದು ದೊಡ್ಡ ಜಾತಿಯಾಗಿದೆ. ಸಂಸ್ಕೃತ ಶ್ಲೋಕವೊಂದರ ತಾತ್ಪರ್ಯ ಹೀಗಿದೆ: ‘‘ದುಡ್ಡು ನಿನ್ನಲ್ಲಿದ್ದರೆ ನೀನು ದಡ್ಡನಾಗಿದ್ದರೂ ಪಂಡಿತ, ಒರಟನಾಗಿದ್ದರೂ ಸುಸಂಸ್ಕೃತ, ಕುಲಜನಾಗಿದ್ದರೂ ಕುಲೀನ. ಏಕೆಂದರೆ ಎಲ್ಲ ಗುಣಗಳೂ ಹಣವನ್ನೇ ಆಶ್ರಯಿಸಿವೆ, ಸರ್ವೇಗುಣಾನಾಂ ಕಾಂಚಾಣಂ ಆಶ್ರಯಂತಿ’’. ಹಾಗಾಗಿ ಬಡವರಾಗಿರುವ ತಳಸಮುದಾಯಗಳ ನೋವು ಅನುಭವಿಸಿದವರಿಗಷ್ಟೇ ಗೊತ್ತು.

ಮೇಲ್ಜಾತಿಯವರಾಗಿದ್ದೂ ಬಡವರಾಗಿರುವವರ ಪಾಡು ಇದಕ್ಕಿಂತ ಘೋರವಾದುದೆಂಬುದರಲ್ಲಿ ಎರಡು ಮಾತಿಲ್ಲ. ವಸುಧೇಂದ್ರರ ‘ನಮ್ಮ ವಾಜೀನ್ನೂ ಆಟಕ್ಕೆ ಸೇರಿಸಿಕೊಳ್ರೊ’ ಕಥೆಯಲ್ಲಿ ದೈಹಿಕ ನ್ಯೂನತೆಯ ಹಿನ್ನೆಲೆಯಲ್ಲಿ ಈ ಸಮಸ್ಯೆಯ ಸೂಕ್ಷ್ಮ ಪ್ರಸ್ತಾಪವಿರುವುದನ್ನು ನೋಡಬಹುದಾಗಿದೆ. ಇವೆಲ್ಲದರ ಹೊರತಾಗಿ ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವಂತೆ ಮೇಲ್ಜಾತಿಗಳ ಶೋಷಣೆಯನ್ನು ಕೆಳಜಾತಿಗಳ ಒಗ್ಗೂಡುವಿಕೆಯಿಂದ ಮೆಟ್ಟಬಹುದೆಂಬ ಒಂದು ವಾದವೂ ಪ್ರಬಲವಾಗಿಯೇ ರೂಪುಗೊಂಡಿದೆ.

ನಾವು ಚಿಕ್ಕವರಾಗಿದ್ದಾಗ ಶ್ರಾವಣ ಮಾಸ ಬಂತೆಂದರೆ ಸಾಹುಕಾರರ ಮನೆಯಲ್ಲಿ ತಿಂಗಳಿಡೀ ಜೋಕಾಲಿ ಕಟ್ಟಿರುತ್ತಿದ್ದರು. ಗೌರಮ್ಮಕ್ಕ ನಮ್ಮನ್ನು ತನ್ನ ತೊಡೆ ಮೇಲೇ ಕೂರಿಸಿಕೊಂಡು ಜಂತಿಗೆ ತನ್ನ ಕಾಲು ತಟ್ಟುವಂತೆ ಜೋರಾಗಿ ಜೀಕಿ ತೂಗುತ್ತಿದ್ದಳು. ಭಯ ಮತ್ತು ವಿಚಿತ್ರ ಆನಂದಗಳಲ್ಲಿ ನಾವು ಪುಳಕದ ಪರಮಾನಂದ ಅನುಭವಿಸುತ್ತಿದ್ದೆವು. ಆಕೆ ನಮ್ಮ ಅಭಿಮಾನ ದೇವತೆಯೇ ಆಗಿದ್ದಳು. ಅದೆಲ್ಲ ಆದ ಮೇಲೆ ಚಹಾ ಬರುತ್ತಿತ್ತು.

ಕುಡಿದ ಕಪ್ಪನ್ನು ಅಮ್ಮ ಯಾವುದೇ ಭಿಡೆಯಿಲ್ಲದೆ ತೊಳೆದುಬಿಡುತ್ತಿದ್ದಳು. ಸಮಸ್ಯೆ ಬರುತ್ತಿದ್ದುದು ನನಗೇ. ‘‘ಇರ್ಲಿ ಬುಡಕ್ಕ. ಸಣ್ಣವ್ರು ಅವ್ರದೇನು. ಅಲ್ಲೇ ಇಡಾಕೇಳು. ಕೆಲಸದಾಕಿ ತೊಳಿತಾಳ’’ ಅಂತಿದ್ದಳು ಗೌರಮ್ಮಕ್ಕ. ಅದಕ್ಕೆ ಅಮ್ಮ ‘‘ಐ ಗುಣಬುಡವ್ವ ನೀನು. ಅಂಗೆಂಗಾತಾದ? ಅವ್ರು ಸಣ್ಣವರಾದ್ರೆ ನಾನು ಸಣ್ಣಾಕಿ ಆಗ್ತೀನೇನು?’’ ಅಂದು ನನ್ನ ಗ್ಲಾಸನ್ನು ತಾನು ತೊಳೆಯುತ್ತಿದ್ದಳು. ನಾನು ಮುಂದೆ ಚಹಾ ಕುಡಿಯುವುದನ್ನೇ ಬಿಟ್ಟುಬಿಟ್ಟೆ.

ಅದರ ಹಿಂದೆ ಈ ಕಹಿಯೂ ಕೆಲಸ ಮಾಡಿರಬಹುದೆ ಅಂತ ಆಗಾಗ ಯೋಚನೆ ಮೂಡುತ್ತದೆ. ಇದನ್ನು ಹೇಳುತ್ತಿರುವಾಗಲೇ ಅಮ್ಮನ ಮತ್ತೊಂದು ಮುಖ ನೆನಪಾಗುತ್ತದೆ. ನಮ್ಮದೇ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈಗ ನಮ್ಮ ನೆರೆಹೊರೆಯವರು. ಅವರ ಅಮ್ಮ ಮತ್ತು ನಮ್ಮಮ್ಮ ಫ್ರೆಂಡ್ಸ್. ಆದರೂ ದಲಿತರಾದ ಕಾರಣಕ್ಕೆ ಅವರು ನಮ್ಮ ಮನೆ ಒಳಗೆ ಬಂದೂ ಅಂತರ ಕಾಪಾಡಿಕೊಳ್ಳುತ್ತಿದ್ದರು. ಅಮ್ಮನೂ ಅದನ್ನು ಒಪ್ಪಿಕೊಂಡಂತಿದ್ದಳು.

ತಾನು ಸಾಹುಕಾರರ ಮನೆಯಲ್ಲಿ ಕುಡಿದ ಚಾ ಕಪ್ಪನ್ನು ತೊಳೆದಿಡುವ ಅಮ್ಮ, ತನ್ನ ಮನೆಯಲ್ಲಿ ಇತರರು ಹಾಗೆಯೇ ತೊಳೆದಿಡಬೇಕೆಂದು ಬಯಸುತ್ತಿದ್ದಂತಿತ್ತು. ಬದಲಾವಣೆ ತನ್ನಿಂದಲೇ ಆರಂಭವಾಗಬೇಕಲ್ಲವೆ ಎಂದವಳಿಗೆ ತಿಳಿಹೇಳಿದೆವು. ಆದರೆ ಅಮ್ಮನ ಫ್ರೆಂಡ್ ಒಪ್ಪಲಿಲ್ಲ; ಅಮ್ಮ ಗೌರಮ್ಮಕ್ಕನ ಮನೆಯಲ್ಲಿ ಒಪ್ಪದಂತೆ. ಕಡೆಗೆ ಈಗ ನಮ್ಮ ಮನೆಯಲ್ಲಿ ಪರಿಸ್ಥಿತಿ ಬದಲಾಗಿದೆ.

ಆದ್ದರಿಂದ ನನಗನಿಸುವುದು ಈ ಸ್ಥರೀಕೃತ ವ್ಯವಸ್ಥೆಯಲ್ಲಿ ಮೇಲಿರುವವರ (ಅಥವಾ ಹಾಗೆಂಬ ಭ್ರಮೆಯಲ್ಲಿರುವವರ) ಮನಃಸ್ಥಿತಿಯೇ ಮುಖ್ಯವಾಗಿ ಬದಲಾಗಬೇಕಿರುವುದು ಅಂತ. ಮತ್ತೊಬ್ಬರನ್ನು ನಾವು ಕೀಳೆಂದು ಭಾವಿಸಿದರೆ, ನಮ್ಮನ್ನು ಕೀಳೆಂದು ಭಾವಿಸುವ ಇನ್ನೊಬ್ಬರು ಇದ್ದೇ ಇರುತ್ತಾರೆ.

ಆದ್ದರಿಂದ ಇನ್ನೊಬ್ಬರಿಂದ ನಮಗಾಗುವ ಅವಮಾನವನ್ನೇ ನಾವು ಮತ್ತೊಬ್ಬರಿಗೆ ಮಾಡುವುದು ನಮಗೆ ತಪ್ಪಾಗಿ ಕಾಣದಿದ್ದರೆ, ಪಾಪಪ್ರಜ್ಞೆಯಾಗಿ ಕಾಡದಿದ್ದರೆ, ನಮಗಾಗುವ ಅವಮಾನದ ಬಗ್ಗೆ ಮಾತನಾಡುವ ನೈತಿಕ ಹಕ್ಕೂ ನಮಗಿಲ್ಲವಾಗುತ್ತದೆ.

ಮುಖ್ಯವಾಗಿ ಅತ್ತ ತೀರಾ ಮೇಲ್ವರ್ಗವೂ ಅಲ್ಲದ; ಇತ್ತ ತೀರಾ ಅಸ್ಪೃಶ್ಯವೂ ಅಲ್ಲದ ಮಧ್ಯಮ ಸ್ಥರದ ಬಹುಸಂಖ್ಯಾತ ಸಮುದಾಯಗಳು ಇದನ್ನು ಅರಿತು ಆಚರಿಸಬೇಕಾಗಿದೆ. ಅಂತೆಯೇ ತನಗಿಂತ ಮೇಲು ಯಾರೂ ಇಲ್ಲ ಎಂಬುವವನೂ ಬೇರೆ ಬೇರೆ ಕಾರಣಕ್ಕೆ ಇತರರಿಗೆ ಕೀಳಾಗಿರುವ ಸಾಧ್ಯತೆಗಳೂ ಇಲ್ಲದಿಲ್ಲ.

‘ಸಂಸ್ಕಾರ’ ಕಾದಂಬರಿಯಲ್ಲಿ ಹಸಿವಿನ ಆರ್ಭಟ ತಾಳಲಾಗದ ಬ್ರಾಹ್ಮಣನೊಬ್ಬ ತನ್ನೆಲ್ಲ ಮಡಿ-ಮಹತ್ತುಗಳನ್ನು ಮರೆತು ಮಂಜಯ್ಯ ಸಾಹುಕಾರರ ಮನೆಯೊಳಗೆ ಗುಟ್ಟಾಗಿ ಉಪ್ಪಿಟ್ಟು ತಿನ್ನುವ ಸನ್ನಿವೇಶವನ್ನಿಲ್ಲಿ ನೆನಪಿಸಿಕೊಳ್ಳಬಹುದು.

ಜಾಗತೀಕರಣದ ಪ್ರಭಾವದಿಂದಾಗಿ ಜಾತಿಗಳು ನಾಶವಾಗುವವೆಂದು ನಿರೀಕ್ಷಿಸಲಾಗಿತ್ತು. ಹಣವು ಮುಖ್ಯ ಸಾಮಾಜಿಕ ಮಾನದಂಡವಾಗಿ ಸಮಾಜದಲ್ಲಿ ಉಳ್ಳವರು ಮತ್ತು ಬಡವರು ಎಂಬ ವರ್ಗಗಳಷ್ಟೇ ಉಳಿದು ಕೊನೆಗೆ ವರ್ಗಸಮರದ ಫಲವಾಗಿ ಸಮಾಜವಾದ ಬರುತ್ತದೆಂದು ತರ್ಕಿಸಲಾಗಿತ್ತು.ಆದರೆ ದುರಂತ ನೋಡಿ– ದುಡ್ಡು ಜಾಸ್ತಿಯಾದಂತೆಲ್ಲ, ವಿದ್ಯೆ ಜಾಸ್ತಿಯಾದಂತೆಲ್ಲ ಜಾತಿಯ ಹಿಡಿತ ದಿನದಿನಕ್ಕಿಷ್ಟು ಬಲಗೊಳ್ಳುತ್ತಾ ಸಾಗಿದೆ.

ಭಾರತದ ಪ್ರಮುಖ ಜಾತಿಸಿದ್ಧಾಂತಿ ಕಂಚ ಐಲಯ್ಯನಂಥವರು ‘‘ಕೊನೆಗೂ ಚಿರಸ್ಥಾಯಿಯಾಗಿ ಉಳಿಯೋದು ಜಾತಿಗಳೇ. ಹಾಗಾಗಿ ಜಾತಿವ್ಯವಸ್ಥೆಯನ್ನು ಜಾಗೃತಗೊಳಿಸಿ, ಬಲಪಡಿಸಬೇಕು’’ ಎಂದರು. ಆದರೆ ಇದರಲ್ಲಿರುವ ಸಮಸ್ಯೆಯೆಂದರೆ ಜಾತಿಯ ಕಿಡಿಯನ್ನು ಪುಟಗೊಳಿಸಿ ಬೆಂಕಿಯಾಗಿಸುವುದು ಎಷ್ಟು ಸುಲಭವೋ, ಆ ಬೆಂಕಿ ನಮ್ಮನ್ನು ಸುಡದಂತೆ ಕಾಪಾಡಿಕೊಳ್ಳುವುದು ಅಷ್ಟೇ ಕಷ್ಟ.

ರಾಯಚೂರಿನಲ್ಲಿ ಮಹಾಮಳೆ ಬಂದು ನದೀತೀರದ ಹಳ್ಳಿಗಳು ಅಪಾರ ಪ್ರಮಾಣದ ಹಾನಿ ಅನುಭವಿಸಿದಾಗ ಒಂದು ಜಾತಿಯ ಸಂಘಟನೆಯು ತನ್ನ ಸಮುದಾಯದ ಸಂತ್ರಸ್ತರಿಗೆ ಹಾಸಿಗೆ, ಬಟ್ಟೆ, ಆಹಾರಗಳನ್ನು ಹಂಚಿತು. ಹೀಗೆ ಪ್ರತಿ ಜಾತಿಯೂ ತನ್ನೊಳಗಿನ ಶಕ್ತಿಯನ್ನು ಒಗ್ಗೂಡಿಸಿ, ತನ್ನದೇ ಸಮುದಾಯದ ನಿರ್ಗತಿಕರಿಗೆ ನೆರವಾಗಲು ಅದನ್ನು ಬಳಸಿದರೆ ಒಳಿತಾಗಬಹುದು.

ಆದರೆ ಈ ಶಕ್ತಿಯು ಮತ್ತೊಂದು ಸಮುದಾಯದ ಮೇಲೆ ತನ್ನ ಬಲಪ್ರದರ್ಶನ ಮಾಡಲು ಬಳಕೆಯಾದರೆ ಆ ಕಿಚ್ಚನ್ನು ತಡೆಯಲಾದೀತೆ? ಹಾಗಾಗದಂತೆ ತಡೆಯುವ, ಎಚ್ಚರಿಸುವ ವಿವೇಕವು ಪ್ರತಿ ಸಮುದಾಯದ ಅಂತಃಶಕ್ತಿಯಾಗಿ ಬೆಳೆದಾಗ ಐಲಯ್ಯನವರ ಸಿದ್ಧಾಂತ ಫಲ ಕೊಡಬಹುದು.

ಅದರಾಚೆಗೆ ಯೋಚಿಸಬಲ್ಲ ಎಷ್ಟೋ ಆರೋಗ್ಯಕರ ಮನಸ್ಸುಗಳು ಈ ಗೋಡೆಯನ್ನು ಕೆಡಹುವ ಪ್ರಯತ್ನದ ಭಾಗವಾಗಿ, ‘ಜಾತಿಯಲ್ಲ ಪ್ರೀತಿ ಶಾಶ್ವತ’ ಎನ್ನುತ್ತ ಅಂತರ್ಜಾತೀಯ ಮದುವೆಗಳ ಮೂಲಕ ಉತ್ತರ ಹುಡುಕಲೆತ್ನಿಸುತ್ತಿರುವ ವಿದ್ಯಮಾನಗಳು ನಡೆಯುತ್ತಲೇ ಇವೆ.

ಆದರೆ ಈ ಜಾತಿಯೆಂಬ ಸರ್ಪದ ಕಾರ್ಕೋಟಕ ವಿಷ ಮಾತ್ರ ಮುದುಕರು ಮಕ್ಕಳೆನ್ನದೆ ಎಲ್ಲರನ್ನೂ ಆಪೋಶನ ತೆಗೆದುಕೊಳ್ಳುತ್ತಿದೆ. ಹೀಗೆ ಹೇಳುವಾಗ ಒಂದು ಪ್ರಸಂಗ ನೆನಪಾಗುತ್ತಿದೆ. ಮಿತ್ರರೊಬ್ಬರು ಕುಶಾಲಿಯ ದನಿಯಲ್ಲಿ ತಮ್ಮ ಆರು ವರ್ಷದ ಮಗನನ್ನು ಉದ್ದೇಶಿಸಿ,

‘‘ನಾವು ಮಾತ್ರ ಈ ನಮ್ಮ ಮಗನಿಗೆ ಅಮೇರಿಕದ ಹುಡುಗೀನ್ನೆ ತಂದು ಮದಿವಿ ಮಾಡ್ತೀವಿ’’ ಎಂದರು. ಮಾತು ಕೇಳಿಸಿಕೊಂಡ ಹುಡುಗ ಆಟವಾಡುವುದನ್ನು ನಿಲ್ಲಿಸಿ ಬಂದು ಅಪ್ಪನನ್ನು ಕೇಳಿದ: ‘‘ಅಪ್ಪ, ಅಮೇರಿಕದಾಗೂ ನಮ್ ಕ್ಯಾಸ್ಟಿನೋರು ಐದಾರ?’’. ಅದಕ್ಕೆ ಮಿತ್ರರು ‘‘ನೋಡೋ ಮಾರಾಯ. ನಾನೇ ಜಾತಿ ನೋಡ್ಲಿಲ್ಲ.

ಇಂಟರ್‌ಕ್ಯಾಸ್ಟ್ ಮದುವೆ ಆದೆ. ಈ ಹುಡುಗ್ರಿಗೆ ಇದೆಲ್ಲ ಎಲ್ಲಿಂದ ತಲೇಗೆ ಬರ್ತಿದ್ದೀತು?’’ ಎಂದು ನಿಟ್ಟುಸಿರು ಬಿಟ್ಟರು, ಒಂಬೈನೂರು ವರ್ಷಗಳ ಹಿಂದೆ ಅಂತರ್ಜಾತೀಯ ವಿವಾಹ ಮಾಡಿಸಿದ ಬಸವಣ್ಣನ ಫೋಟೋವನ್ನು ದಿಟ್ಟಿಸುತ್ತ.

ಇವತ್ತು ನಾವು ತಲುಪಿರುವ ದುರಂತ ಸ್ಥಿತಿ ನೋಡಿ. ಜಾತಿ, ಧರ್ಮ, ಪ್ರದೇಶ– ಕಡೆಗೆ ಲಿಂಗಭೇದವನ್ನೂ ಮೀರಿ ನಿಂತ ವಚನಕಾರರನ್ನು ಇವತ್ತು ಜಾತಿಗೊಬ್ಬರಂತೆ ಹಂಚಿಬಿಟ್ಟಿದ್ದೇವೆ. ‘ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?’ ಎಂದ ವಚನಕಾರರನ್ನೂ ‘ಕುಲಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎಂದು ಪ್ರಶ್ನಿಸಿದ ಕನಕರನ್ನೂ ಜಾತಿಪಾಶದಲ್ಲಿ ಬಂಧಿಸಿದ್ದೇವೆ.

ಎಷ್ಟೋ ಸಲ ಹೆಸರು, ಬಣ್ಣ, ಗುಣಸ್ವಭಾವಗಳು ಕೂಡ ಜಾತಿಸೂಚಕವಾಗಿರುವುದನ್ನು ಕಾಣಬಹುದು. ಒಮ್ಮೆ ಹೀಗೇ ಆಯಿತು. ನನಗೆ ಪ್ರೈಮರಿ ಶಾಲೆಯಲ್ಲಿ ಪೀಟಿ ಮೇಷ್ಟರಾಗಿದ್ದ ಕುಲಕರ್ಣಿ ಗುರುಗಳ ಮನೆಯಲ್ಲಿ ನಾನು ಬಾಡಿಗೆಗಿದ್ದೆ. ಗುರುಗಳು ಪಕ್ಕದೂರಿನ ಪ್ರೈಮರಿ ಶಾಲೆಯಲ್ಲಿ ಹೆಡ್‌ ಮೇಷ್ಟರಾಗಿದ್ದರು. ನಾನು ಅದೇ ತಾಲ್ಲೂಕಿನ ಮತ್ತೊಂದು ಊರಿಗೆ ಹೈಸ್ಕೂಲ್ ಮಾಸ್ತರನಾಗಿದ್ದೆ. ದಿನಾ ಸಂಜೆ ಬಾವಿಕಟ್ಟೆ ಮೇಲೆ ನಮ್ಮ ಹರಟೆ.

ಅವರಿಗದು ಧೂಮಲೀಲಾ ವಿನೋದದ ಸಮಯ. ವಿದ್ಯಾರ್ಥಿಯಾಗಿದ್ದಾಗ ಬರಿ ಚಿದಾನಂದ ಆಗಿದ್ದ ನಾನು ಈಗ ಚಿದಾನಂದ ಸಾಲಿ ಆಗಿದ್ದೆ. ಅವರ ಮನೆಗೆ ಬರುತ್ತಿದ್ದ ಪತ್ರಿಕೆಯಲ್ಲಿ ಆಗೀಗ ನನ್ನ ಬರಹಗಳು ಬರುತ್ತಿದ್ದವು. ಒಂದು ಶ್ರಾವಣ ಸೋಮವಾರದ ದಿನ ನಾನು ಶಾಲೆಗೆ ರೆಡಿಯಾಗುತ್ತಿರುವಾಗ ಮಡಿಪಂಚೆಯಲ್ಲಿ ಬಂದು ನನ್ನ ರೂಮಿನ ಬಾಗಿಲು ತಟ್ಟಿದ ಗುರುಗಳು, ‘‘ಚಿದಾನಂದ್, ಇವತ್ತು ನಮ್ಮನ್ಯಾಗ ಪೂಜೆ ಮಾಡೀನಿ.

ಐಗೋಳು ನಿಮ್ಮನ್ನ ಬಿಟ್ಟು ಊಟ ಹೆಂಗ ಮಾಡದಪ, ಬಾ’’ ಅಂದರು. ನನಗೋ ಧರ್ಮಸಂಕಟ. ನಾನು ‘‘ಸುಮ್ಮನೆ ಕರೆದಿದ್ದರೆ ಸಮಸ್ಯೆಯಿರುತ್ತಿರಲಿಲ್ಲ ಸರ್. ಏನ್ ಹೇಳ್ಲಿ? ನಾನು ಐಗೋಳ ಅಲ್ಲ!’’ ಅಂದೆ. ಈಗ ಅವರಿಗೆ ಧರ್ಮಸಂಕಟಕ್ಕಿಟ್ಟುಕೊಂಡಿತು. ‘‘ಜೊತೆಯಾಗಿ ಊಟ ಮಾಡಾಕ ಜಾತಿ ಯಾಕ ಬೇಕೊ? ನೀನು ನನ್ನ ಶಿಷ್ಯೋತ್ತಮ ಅದಿ. ಬಾ’’ ಎಂದರು. ಕಷ್ಟಪಟ್ಟು ಊಟ ಮಾಡಿದೆ. ಅವರೂ ಅಷ್ಟೇ ಕಷ್ಟಪಟ್ಟು, ತಟ್ಟೆ ಎತ್ತಿ ಬಚ್ಚಲುಮನೆ ಹತ್ತಿರ ಇಡಲು ಹೇಳಿದರು.

ಮತ್ತೊಮ್ಮೆ ಇಂಥದೇ ಪೇಚಿನ ಪ್ರಸಂಗಕ್ಕೆ ಸಿಕ್ಕಿಕೊಂಡೆ. ಬಿಜಾಪುರಕ್ಕೆ ನವರಸಪುರ ಉತ್ಸವದ ಕವಿಗೋಷ್ಠಿಗೆ ಹೋಗಿದ್ದಾಗ ಹಿರಿಯ ಅಧಿಕಾರಿ ಮಿತ್ರರೊಬ್ಬರ ಮನೆಗೆ ಹೋದೆ. ಮಧ್ಯಾಹ್ನ ಊಟದ ಹೊತ್ತದು. ಕಾಲು ಕೈ ತೊಳೆದ ಮೇಲೆ ಇಬ್ಬರೂ ತಟ್ಟೆಯ ಮುಂದೆ ಆಸೀನರಾದೆವು. ಅವರು ಪಟ್ಟಾಗಿ ವಿಭೂತಿ ಧರಿಸಿಕೊಂಡು, ಬಟ್ಟಲಲ್ಲಿಟ್ಟ ವಿಭೂತಿಯನ್ನು ನನ್ನೆಡೆಗೂ ಸರಿಸಿದರು. ನಾನು ಕಕ್ಕಾಬಿಕ್ಕಿಯಾಗಿ ದಿಕ್ಕಾಮುಕ್ಕಾ ನೋಡಿದೆ.

ನನ್ನ ಪುಣ್ಯಕ್ಕೆ ಅವರೇ ಸಹಾಯಕ್ಕೆ ಬಂದರು. ‘‘ನೀವು ಲೇಖಕರು ಜಾತಿ–ಗೀತಿ ಪಾಲಸೋದನ್ನು ಬಿಟ್ಟಿರ್ತೀರಿ ಬಿಡ್ರಿ, ನಮಗೆಲ್ಲ ಗೊತ್ತಾಗುತ್ತ!’’ ಅಂದು ವಿಭೂತಿ ಬಟ್ಟಲನ್ನು ಹಿಂದೆಗೆದುಕೊಂಡರು. ಸದ್ಯ ಒಂದು ಮುಜುಗರದಿಂದ ಇಬ್ಬರೂ ಪಾರಾದೆವು. ಈ ಎರಡೂ ಪ್ರಕರಣಗಳಲ್ಲಿ ಅವರ ಮತ್ತು ನನ್ನ ಇಷ್ಟು ಕಾಲದ ಸಂಬಂಧದ ಹಿಂದೆ ಯಾವುದು, ಎಷ್ಟು ಮಹತ್ವ ಪಡೆದಿತ್ತು ಎಂಬ ಆಲೋಚನೆ ಮಾತ್ರ ಇಂದಿಗೂ ಗುಂಗಿಹುಳುವಿನಂತೆ ಮನಸ್ಸನ್ನು ಕೊರೆಯುತ್ತಿದೆ.

ಅದು ಬಿಡಿ. ಇತ್ತೀಚೆಗೆ ಪಟ್ಟಣಗಳಲ್ಲಿ ಜಾತಿ ಕೇಳುವ ಹೊಸಹೊಸ ವಿಧಾನಗಳು ಹುಟ್ಟಿಕೊಂಡಿರುವುದನ್ನು ನೀವು ಗಮನಿಸಿರಬಹುದು. ಮೊದಲಿಗೆ ಅವರು ನಿಮ್ಮ ಹೆಸರು ಕೇಳುತ್ತಾರೆ. ನಂತರ ಸರ್‌ನೇಮು. ಯಾರಾದರೂ ಸರ್‌ನೇಮ್ ಬದಲಿಗೆ ಇನಿಷಿಯಲ್ಲುಗಳನ್ನು ನೇತುಹಾಕಿಕೊಂಡಿದ್ದರೆ ಅವುಗಳ ಅರ್ಥ ಕೇಳುತ್ತಾರೆ. ಇಷ್ಟು ಹೊತ್ತಿಗೆ ಅವರಿಗೆ ಸಣ್ಣಗೆ ವಾಸನೆ ಹೊಡೆದಿರುತ್ತದೆ.

ಅಲ್ಲಿಗೂ ಯಾವುದೇ ಹಿಂಟು ಸಿಗಲಿಲ್ಲವೆಂದರೆ ‘‘ಅಂದ್ರೆ ಸರ್ ನೀವು ವೆಜಿಟೇರಿಯನ್ನಾ?’’ ಎಂಬ ಪ್ರಶ್ನೆ ತೂರಿ ಬರುತ್ತದೆ. ಅದು ಅವರ ಬತ್ತಳಿಕೆಯಲ್ಲಿರುವ ಬೀಜಾಸ್ತ್ರ. ಇದೊಂದು ವಿಷಯ ಬಗೆಹರಿದರೆ ಅವರ ಅರ್ಧ ಅನುಮಾನ ಬಗೆಹರಿದಂತೆ.

ಆದರೆ ಇಂಥ ಹುಚ್ಚುಕೋಡಿಗಳಿಗೆ ಮೂಲ ಬೆದಕುವಲ್ಲಿ ಇರುವ ಉತ್ಸಾಹ, ಮನಸು ಬೆಸೆಯುವುದರಲ್ಲಿ ಇರುವುದಿಲ್ಲ. ಎದುರಿನವನ ಮನಸು ಒಡೆದುಹೋದರೂ ಚಿಂತಿಲ್ಲ, ಅವರಿಗೆ ಜಾತಿ ಯಾವುದೆಂದು ತಿಳಿಯಬೇಕು.

ಹಾಗಾಗಿ ತಮ್ಮ ಬತ್ತಳಿಕೆಯಿಂದ ಮುಂದಿನ ಬಾಣ ತೆಗೆಯುತ್ತಾರೆ. ‘‘ನಾನ್ ವೆಜಿಟೇರಿಯನ್ನಾ? ನಂಬೋಕೇ ಆಗ್ತಿಲ್ಲ ಸರ್. ನಿಮ್ಮ ಭಾಷೆ, ನಿಮ್ಮ ಕಲ್ಚರ್ ನೋಡಿ ಬ್ರಾಹ್ಮಣರೋ ಲಿಂಗಾಯತರೋ ಅಂದ್ಕೊಂಡಿದ್ದೆ’’. ಅಲ್ಲಿಗೆ ಎದುರಿಗಿದ್ದವನು ತನ್ನ ಜಾತಿಯನ್ನು ಒಡೆದು ಹೇಳಲೇಬೇಕು; ಇವನ ಆತ್ಮಕ್ಕೆ ಶಾಂತಿ ಸಿಗಬೇಕು.

ಜಾತಿ ಕೇಳುವ ಹುಮ್ಮಸ್ಸು ಮೇಲ್ವರ್ಗದವರಿಗೇ ಜಾಸ್ತಿ ಎನ್ನುವುದು ಕೂಡ ಸೂಕ್ಷ್ಮವಾಗಿ ಗಮನಿಸತಕ್ಕ ವಿಷಯವೇ. ಕೇಳುವವನು ಮೇಲ್ಜಾತಿಯವನಾಗಿದ್ದು (ಅದೂ ಒಂದು ವ್ಯವಸ್ಥಿತವಾಗಿ ಸ್ಥಾಪಿಸಲಾದ ಭ್ರಮೆಯೇ. ಯಾವ ಜಾತಿಯೂ ತನ್ನಷ್ಟಕ್ಕೇ ಮೇಲಲ್ಲ, ಹಾಗೇ ಕೀಳೂ ಅಲ್ಲ) ಕೇಳುವವನು ಕೆಳಜಾತಿಯವನಾಗಿದ್ದರೆ, ಇದೊಂಥರ ಬೆಕ್ಕಿಗೆ ಚೆಲ್ಲಾಟ; ಇಲಿಗೆ ಪ್ರಾಣಸಂಕಟವೆಂಬಂಥ ಸ್ಥಿತಿಯಾಗಿರುತ್ತದೆ.

ಕೆಲಕೆಲವು ಧರ್ಮ, ಜಾತಿಗಳವರಿಗೆ ಈ ತಲೆಬಿಸಿಯೇ ಇಲ್ಲ. ಅವರ ಹೆಸರೇ ಅವರ ಎಲ್ಲ ಪ್ರವರವನ್ನೂ ಹೇಳಿಬಿಡುತ್ತದೆ. ಮೇಲೆ ಢಾಳಾಗಿ ಕಾಣಿಸದ ಹೆಸರುಗಳವರಿಗೇ ಈ ಸಮಸ್ಯೆ. ಇತ್ತೀಚಿನ ಹುಡುಗರು ತುಂಬಾ ಹುಷಾರಿ. ತಿಮ್ಮಪ್ಪ ಇದ್ದವನು ತಿಮ್ಮಾರೆಡ್ಡಿಯಾಗಿದ್ದಾನೆ, ತಾಯಪ್ಪ ಇದ್ದವನು ತಾಯರಾಜ್ ಆಗಿದ್ದಾನೆ, ಯಲ್ಲಪ್ಪ ಯಲ್ಲಾಲಿಂಗನಾಗಿ, ರಾಮಣ್ಣ ರಾಮಕುಮಾರ್ ಆಗಿ, ಹನುಮಂತಿ ಅನಿತಾ ಆಗಿ ಬದಲಾಗಿದ್ದಾರೆ.

ಇನ್ನೂ ಕೆಲವರು ತಮ್ಮ ಹೆಸರುಗಳನ್ನು ಇನಿಷಿಯಲ್ಲುಗಳಾಗಿಸಿ ಊರಿನ ಹೆಸರನ್ನೋ ಮತ್ತೊಂದನ್ನೋ ಸರ್‌ನೇಮಾಗಿಸಿಕೊಂಡು ತಲೆಮರೆಸಿಕೊಂಡಿದ್ದಾರೆ. ಅದೂ ಒಂದು ಬಗೆಯ ಅಸ್ಮಿತೆಯ ರಾಜಕಾರಣವಿರಬಹುದು.

ಗೆಳೆಯ ಮಹಾಂತೇಶ್ ನವಲಕಲ್‌ರ ಒಂದು ಕಥೆಯಲ್ಲಿ ಅಮರ್‍್ಯಾ ಎಂಬ ದಲಿತ ಪಾತ್ರವೊಂದು ಅಮರದಾಸ್ ಆಗಿ ತನ್ನ ಬಾಲ್ಯದ ಧಣಿಯೆದುರು ಬಂದಾಗ, ತಾನು ಪೂರ್ವಾಶ್ರಮದ ಅಮರ್‍್ಯಾ ಎಂಬುದನ್ನು ಪ್ರಜ್ಞಾಪೂರ್ವಕವಾಗಿ ಮರೆಯಲೆತ್ನಿಸುತ್ತದೆ.

ಹೊಸ ಚಹರೆಗಳು ತುಂಬುವ ಆತ್ಮವಿಶ್ವಾಸದ ಮುಂದೆ ಹಳೆಯ ನೆನಪುಗಳು ಬಿಚ್ಚಿಡುವ ಹಳಹಳಿಕೆ ಮತ್ತು ಕೀಳರಿಮೆಗಳು ತುಂಬಾ ಪೇಲವವೆನ್ನಿಸುವುದು ಸಹಜವೇ. ಹಿಂದಿ ನಟರಾದ ದಿಲೀಪ್‌ಕುಮಾರ್, ಮಧುಬಾಲ ಮುಂತಾದವರು ಕೂಡ ಹೀಗೆ ಬದಲಿಸಿಕೊಂಡ ಹೆಸರಿನ ಊರುಗೋಲಿನ ಸಹಾಯ ಪಡೆದವರೇ ಎನ್ನುವುದನ್ನು ನಾವಿಲ್ಲಿ ನೆನೆಯಬಹುದು.

ಹೆಸರಿನಲ್ಲಿರುವ ಜಾತಿಸೂಚಕ ಪದಗಳನ್ನು ಕಿತ್ತೆಸೆದು ಎಲ್ಲರೊಳಗೊಂದಾದ ಮೇಲ್ಜಾತಿಯ ಎಷ್ಟೋ ಮಹನೀಯರೂ ಇದ್ದಾರೆ. ಅಂಥವರಲ್ಲಿ ತಕ್ಷಣಕ್ಕೆ ನನಗೆ ನೆನಪಾಗುವುದು ಪಂ. ತಾರಾನಾಥರು, ಲಂಕೇಶರು ಮತ್ತು ಶಾಂತರಸರು.

ಎಲ್ಲ ಜಾತಿ, ಜನಾಂಗಗಳ ಪ್ರತಿಭೆಗಳನ್ನು ತಮ್ಮ ಗುಣಗ್ರಾಹಿತ್ವದಿಂದ ಗುರುತಿಸಿ, ಪ್ರೋತ್ಸಾಹಿಸಿದವರು ಇವರೆಲ್ಲ. ಹಾಗೆಯೇ ಹೆಸರಿನಲ್ಲಿ ತಮ್ಮ ಜಾತಿಯನ್ನು ಅಳುಕಿಲ್ಲದೆ ಪ್ರದರ್ಶಿಸುವ ಮೂಲಕ ತಮ್ಮ ಸಮುದಾಯಗಳಲ್ಲಿನ ಕೀಳರಿಮೆಯನ್ನು ಕಿತ್ತೆಸೆದು ಆತ್ಮಸ್ಥೈರ್ಯ ತುಂಬಿದ ಗಟ್ಟಿಗರೂ ಇದ್ದಾರೆ. ಅಂಥವರಲ್ಲಿ ನನಗೆ ಮೊದಲು ನೆನಪಾಗುವವರು ಬಸ್ಸಪ್ಪ ಮಾದರ್, ಗಂಗಾರಾಂ ಚಾಂಡಾಳ ಮತ್ತು ಸುಬ್ಬು ಹೊಲೆಯಾರ್.

ಒಂದು ಕಾಲಕ್ಕೆ ಜಾತಿಯೆಂಬುದು ವೃತ್ತಿಸೂಚಕವಾಗಿತ್ತು. ಆಗ ಕುಲಕಸುಬುಗಳಿದ್ದವು. ಆ ಕಸುಬಿನಿಂದಲೇ ಜಾತಿಯನ್ನು ಗುರುತಿಸಲಾಗುತ್ತಿತ್ತು. ಆದರೆ ಈಗ ಕುಲಕಸುಬುಗಳಿಲ್ಲ. ಎಲ್ಲ ವೃತ್ತಿಗಳನ್ನು ಎಲ್ಲರೂ ಮಾಡುತ್ತಿದ್ದಾರೆ. ಹಾಗಾಗಿ ಈಗ ವೃತ್ತಿಯಿಂದ ಜಾತಿಯನ್ನು, ಜಾತಿಯಿಂದ ವೃತ್ತಿಯನ್ನು ನೋಡಲು ಸಾಧ್ಯವಿಲ್ಲ. ಬದಲಿಗೆ ಕೆಲವು ಮನೋಧರ್ಮಗಳು ಕೆಲಕೆಲವು ಸಮುದಾಯಗಳಿಗೆ ಸಾಮಾನ್ಯವಾಗಿ ಇರುವುದನ್ನು ನಾವು ಕಾಣುತ್ತೇವೆ.

ಅಂದರೆ ಕೆಲವು ಜಗಳಗಂಟ ಸಮುದಾಯಗಳು, ಕೆಲವು ಶಾಂತಿಪ್ರಿಯ ಸಮುದಾಯಗಳು, ಕೆಲವು ಸಂಪತ್ತುಪ್ರಿಯ ಸಮುದಾಯಗಳು, ಇನ್ನೂ ಕೆಲವು ಸಾಹಸಪ್ರಿಯ ಸಮುದಾಯಗಳು ಮತ್ತೂ ಕೆಲವು ಭೋಜನಪ್ರಿಯ ಸಮುದಾಯಗಳು ಇತ್ಯಾದಿ ಇತ್ಯಾದಿ.

‘ವೃದ್ಧೋಪಿ ವಾಪಣಪತಿ ನಜಹಾತಿ ಲಾಭಂ’ ಅಂದರು ಹಿರಿಯರು. ವ್ಯಾಪಾರಿ ಯಾವ ಜಾತಿಯವನೇ ಇರಲಿ, ಅವನು ಎಷ್ಟೇ ಗಳಿಸಿ ಮುದುಕನಾದರೂ ಲಾಭದ ಆಸೆ ಹೋಗುವುದಿಲ್ಲ ಅಂತ ಇದರರ್ಥ.

ಪಂಕ್ತಿಬೇಧ ಪಾಲಿಸುವ ಮಠಗಳು, ಜಾತಿಬೇಧ ಮಾಡುವ ಶಿಕ್ಷಕರು, ಮತೀಯ ತಾರತಮ್ಯ ಬೋಧಿಸುವ ಧರ್ಮಗುರುಗಳು ಸಮಾಜದ ನರನಾಡಿಗಳೊಳಗೆ ನಿಧಾನವಾಗಿ ಈ ಜಾತಿಯ ವಿಷವನ್ನು ಇಂಜೆಕ್ಟ್ ಮಾಡುತ್ತ ಅದರ ಅಧಃಪತನಕ್ಕೆ ಕಾರಣರಾಗುತ್ತಾರೆ.

ತುಮಕೂರಿನ ಸಿದ್ಧಗಂಗಾ ಮಠ, ಗದುಗಿನ ವೀರೇಶ್ವರ ಪುಣ್ಯಾಶ್ರಮಗಳಂಥ ಕೆಲವು ಸಂಸ್ಥೆಗಳು ತಮ್ಮ ಮಿತಿಯಲ್ಲಿ ಜಾತಿ ಅಸಮಾನತೆಯನ್ನು ನಿವಾರಿಸಲು ಸಾಕಷ್ಟು ಕೆಲಸ ಮಾಡಿವೆ. ಮಕ್ಕಳ ಮೇಲೆ ಪ್ರಭಾವ ಬೀರಬಲ್ಲ ವರ್ಗವಾದ ಶಿಕ್ಷಕರಂತೂ ಈ ವಿಷಯದಲ್ಲಿ ಇನ್ನೂ ಜಾಗರೂಕರಾಗಿರಬೇಕು. ಏಕೆಂದರೆ ಸ್ವಸ್ಥ ಸಮಾಜದ ನಿರ್ಮಾಣ ಕಾರ್ಯದಲ್ಲಿ ಶಿಕ್ಷಕ ಸಮುದಾಯದ ಪಾತ್ರ ತುಂಬಾ ಮಹತ್ವದ್ದಾಗಿದೆ.

ಪಠ್ಯದ ಪಾಠಗಳಿಗಿಂತ ಮುಖ್ಯವಾಗಿ ಆರೋಗ್ಯಕರ ಜೀವನಪಾಠಗಳನ್ನವರು ಮಕ್ಕಳಿಗೆ ಕಲಿಸಿಕೊಡುವಂತಾದರೆ ಖಂಡಿತವಾಗಿಯೂ ಈ ಜಾತಿಕೊಳೆಯ ಪ್ರಮಾಣ ಒಂದಷ್ಟಾದರೂ ಕಡಿಮೆಯಾಗುತ್ತದೆ. ಈ ಕಾರ್ಯದಲ್ಲಿ ಮಹತ್ವದ ಪಾತ್ರ ವಹಿಸಬಲ್ಲ ಮತ್ತೊಂದು ವರ್ಗವೆಂದರೆ ಮಹಿಳೆಯರದು. ನನ್ನ ಅನುಭವದ ಮಿತಿಯಲ್ಲಿ ಹೇಳುವುದಾದರೆ ಜಾತಿಯ ವಿಷಯದಲ್ಲಿ ಗಂಡಸರಿಗಿಂತ ಹೆಂಗಸರೇ ಹೆಚ್ಚು ಕರ್ಮಠರಂತೆ ವರ್ತಿಸುವುದು.

ಇವರು ಪ್ರಾಂಜಲರಾದರೆ ಬದಲಾವಣೆಯ ವೇಗ ದುಪ್ಪಟ್ಟಾಗುವುದರಲ್ಲಿ ಸಂದೇಹವೇ ಇಲ್ಲ. ಈ ಮಾತುಗಳನ್ನು ಹೇಳಲು ಕಾರಣವಾದ ನನ್ನ ಮೂವರು ಕಲೀಗ್‌ಗಳ ಬಗ್ಗೆ ಇಲ್ಲಿ ಹೇಳಬೇಕು. ಒಬ್ಬಾಕೆ ತಾನು ತಂದ ಬುತ್ತಿಯಲ್ಲಿ ನಮಗೂ ಇಷ್ಟು ಬಡಿಸುತ್ತಿದ್ದಳು. ಸಹಭೋಜನ ಎಂದುಕೊಂಡೆವು.

ನಾವು ಕೊಟ್ಟಾಗ ನಯವಾಗಿ ಸಬೂಬು ಹೇಳಿ ಸರಿಯುತ್ತಿದ್ದಳು. ಆಗಲೇ ಗೊತ್ತಾಗಿದ್ದು ಆಕೆಯ ಜಾತಿ ಮೇಲರಿಮೆಯ ಒಳಮರ್ಮ. ಆಮೇಲೆ ನಾವೆಲ್ಲ ಸೇರಿ ಆಕೆಯನ್ನೇ ಅಸ್ಪೃಶ್ಯಳನ್ನಾಗಿಸಿದಾಗಲೇ ಆ ಮಹಾತಾಯಿಗೆ ಅದರ ನೋವೇನೆಂದು ಗೊತ್ತಾದದ್ದು. ಮತ್ತೊಬ್ಬಾಕೆಗೆ ಯಾರೋ ದೇವರ ಪ್ರಸಾದ ಕೊಡಹೋದರು. ಆಕೆ ತಾನು ಅನ್ಯಧರ್ಮದ ದೇವರ ಪ್ರಸಾದ ತಿನ್ನುವುದಿಲ್ಲವೆಂದು ಖಡಾಖಂಡಿತ ಹೇಳಿದಳು.

‘‘ದೇವರ ಕಥೆ ಬಿಟ್ಟಾಕಿ ಮೇಡಂ, ಅದು ಹೊಟ್ಟೆಗೆ ಆಹಾರ. ಇಲ್ಲಿ ಬೇರೇನೂ ಸಿಗಲ್ಲ’’ ಅಂದೆವು. ಆಕೆ ‘‘ಉಪವಾಸ ಇರ್ತೀನಿ’’ ಅಂದಳು! ಇನ್ನೊಬ್ಬಾಕೆಗೆ ತಮ್ಮ ಜಾತಿ ಮಕ್ಕಳನ್ನೇ ಗುಂಪು ಕಟ್ಟಿಕೊಳ್ಳುವ ಅಭ್ಯಾಸ! ಮಕ್ಕಳು ಇಂಥವರ ಪ್ರೀತಿಯ ಕೈತುತ್ತಿನ ಮೂಲಕ ಎಂಥ ವಿಷವುಣ್ಣುತ್ತಿದ್ದಾರೆಂದು ಬೇರೆಯಾಗಿ ಹೇಳಬೇಕಿಲ್ಲ.

ತಮ್ಮ ವೈಯುಕ್ತಿಕ ನಂಬಿಕೆ-ನಿಲುವುಗಳನ್ನು ಕೆಲಸದ ಸ್ಥಳಗಳಲ್ಲೂ ಪಾಲಿಸುವ ನೌಕರರು ತಾವು ಸಾರ್ವಜನಿಕ ಸೇವೆಯಲ್ಲಿರುವುದೇ ಹೊರತು ತಮ್ಮ ಕೌಟುಂಬಿಕ ಪರಿಸರದಲ್ಲಲ್ಲ. ಅಲ್ಲಿ ಕೆಲಸಗಾರರೆಲ್ಲ ಒಂದು ಜಾತಿ; ಕೆಲಸವೇ ಅವರ ಧರ್ಮ ಎಂಬುದನ್ನು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು. 

ಇತ್ತೀಚೆಗಂತೂ ಪ್ರತಿ ಜಾತಿಗೂ ಒಬ್ಬ ಜಗದ್ಗುರು! ಜಾತಿಸಮಾವೇಶಗಳು ರಾಜಕೀಯ ಶಕ್ತಿಪ್ರದರ್ಶನದ ವೇದಿಕೆಗಳಾಗಿ ಬದಲಾಗತೊಡಗಿವೆ. ಜಾತ್ಯಾಧಾರಿತ ಪ್ರಾತಿನಿಧ್ಯದ ಮಾತು ಬಲ ಪಡೆದುಕೊಳ್ಳುತ್ತಿದೆ. ಪ್ರತಿಯೊಬ್ಬರಿಗೂ ತಮ್ಮ ಅಸ್ತಿತ್ವ ಮತ್ತು ಅಸ್ಮಿತೆಯ ಪ್ರಜ್ಞೆ ಜಾಗೃತವಾಗಿರುವುದು ಒಳ್ಳೆಯ ಬೆಳವಣಿಗೆಯೇ ಸರಿ.

ಆದರೆ ಯಾವ ಜಾತಿಗೂ ಒಂದು ಯುಕ್ತ ವಿಮರ್ಶೆಯನ್ನು ಪ್ರಾಂಜಲವಾಗಿ ಸ್ವೀಕರಿಸುವ, ಮುಕ್ತಭಾವದಿಂದ ಎದುರುಗೊಳ್ಳುವ ಮನಃಸ್ಥಿತಿ ಇಲ್ಲದಂತಾಗಿರುವುದು ಮಾತ್ರ ಖೇದದ ಸಂಗತಿಯಾಗಿದೆ. ವಿವಾದಕ್ಕೆ ಕಾರಣವಾದ ಬಿಡಿ ಬರಹಗಳು, ಚಿತ್ರಗಳು, ಹೇಳಿಕೆಗಳು, ಅಖಂಡ ಕೃತಿಗಳು ಎಲ್ಲವನ್ನೂ ಒಮ್ಮೆ ನೆನಪಿಸಿಕೊಳ್ಳಿ.

ಅರ್ಥಪೂರ್ಣವಾದ ಸಾರ್ವಜನಿಕ ಚರ್ಚೆ ಮತ್ತು ಸಾಂಸ್ಕೃತಿಕ ವಾಗ್ವಾದಗಳನ್ನು ಹುಟ್ಟುಹಾಕಬೇಕಾದ ಸಂಗತಿಗಳು ವಿವಾದಗಳನ್ನು ಹುಟ್ಟುಹಾಕುವ ಮೂಲಕ ಸಾಮಾಜಿಕ ಶಾಂತಿ ಕದಡುವಂಥ ವಾತಾವರಣ ನಿರ್ಮಾಣವಾಗಿದೆ.

ಜಾತಿ-ಮತಗಳ ಹಂಗಿರದ ಲೇಖಕ, ಚಿತ್ರಕಾರ, ನಟ, ನಿರ್ದೇಶಕರಿಗೂ ಅವರವರದೇ ಸಮುದಾಯಗಳ ಗುಟ್ಟಾದ/ಬಹಿರಂಗವಾದ ಅಭಿಮಾನಿ ವೃಂದಗಳು ಹುಟ್ಟಿಕೊಂಡಿರುವುದು, ಅವರ ಮಾತುಗಳನ್ನು ಇತರರು ಸಂಕುಚಿತ ದೃಷ್ಟಿಕೋನದಲ್ಲಿ ಗ್ರಹಿಸುವ ಅಪಾಯಕ್ಕೆಡೆ ಮಾಡಿಕೊಟ್ಟಿದೆ.

ಇಂಥ ವಿದ್ಯಮಾನಗಳ ಹಿಂದೆ ಕುತ್ಸಿತ ಬುದ್ಧಿಯ ಪುರೋಹಿತಶಾಹಿ ಮತ್ತು ತತ್ವಹೀನ ರಾಜಕಾರಣಗಳ ಪಾತ್ರವಿದೆ. ಇನ್ನೂ ಹೊಸ ಬೆಳವಣಿಗೆಯೆಂದರೆ ಈಗೀಗ ನಗರಗಳಲ್ಲಿ ಜಾತಿವಾರು ಲೇಔಟ್‌ಗಳು ತಲೆಯೆತ್ತುತ್ತಿವೆ. ರಿಯಲ್ ಎಸ್ಟೇಟ್ ಲೋಕ ಕೂಡ ಜಾತಿಯನ್ನು ಎನ್‌ಕ್ಯಾಷ್ ಮಾಡಿಕೊಳ್ಳಲು ಸಜ್ಜಾಗುತ್ತಿದೆ.

ನನ್ನ ಹಿರಿಯರೊಬ್ಬರು ಮಾತಾಡ್ತಾ ‘‘ಕುಲಸ್ಥರನ್ನ ಹಗುರ ನೋಡ್ಬೇಡ ತಮ್ಮ. ಸತ್ರೆ ಬದುಕಿದ್ರೆ, ಒಳ್ಳೇದಕ್ಕೆ ಕೆಟ್ಟದಕ್ಕೆ ಅವರೇ ಆಗೋದು, ಗೊತ್ತಿರಲಿ’’ ಅಂದ್ರು. ನಮ್ಮಿಷ್ಟದಂತೆ ಬದುಕೋಕಂತೂ ಇಲ್ಲ. ನೆಮ್ಮದಿಯಾಗಿ ಸಾಯೋಕೂ ಇಲ್ಲವಲ್ಲ ಅನ್ನಿಸಿತು.

ಜಾತ್ಯತೀತತೆಯನ್ನು ಒಂದು ವ್ರತದಂತೆ ಉಸಿರಾಡಿದ ಕನ್ನಡದ ಕೆಲವು ಶ್ರೇಷ್ಠ ಮನಸ್ಸುಗಳು ಇಲ್ಲವಾದಾಗ ಅವರ ಸಂಸ್ಕಾರವನ್ನು ಅವರವರ ಜಾತಿಪದ್ಧತಿಗಳಿಗೆ ಅನುಗುಣವಾಗಿ ಮಾಡಿದ್ದು ನೆನಪಾಯಿತು. ಇರಲಿ, ಸತ್ತ ಮೇಲಿನ ಮಾತೇನಿದ್ದರೂ ಅದು ಹೊತ್ತವರ ಹೆಗಲಿಗೆ.

ಅದರ ದೋಷ ಸತ್ತವರಿಗಿಲ್ಲ. ಅವರು ಬದುಕಿರುವವರೆಗಂತೂ ತಮ್ಮ ಮಾತು ತಲೆಯೆತ್ತಿಯೇ ಇರುವಂತೆ ನೋಡಿಕೊಂಡರು. ಹಾಗಾಗಿ ಅವರು ಸತ್ತರೂ ಅವರ ವಿಚಾರಗಳ ಮೂಲಕ ನಮ್ಮೊಳಗೆ ಇನ್ನೂ ಬದುಕಿದ್ದಾರೆ. ಏಳನೇ ಶತಮಾನದಲ್ಲೇ ‘ಮನುಷ್ಯ ಜಾತಿ ತಾನೊಂದೇ ವಲಂ’ ಎಂದ ಪಂಪನಿಗೆ ಕಿವಿಗೊಡುತ್ತ ಬದುಕಿರುವವರೆಗಾದರೂ ಎಚ್ಚರವಾಗಿರುವ ಪಾಠವನ್ನು ಆ ಹಿರಿಯರಿಂದ ಕಲಿಯಬೇಕಾಗಿದೆ.

ಮತ್ತೆ ಲಂಕೇಶರ ಕಥೆಗೆ ಮರಳೋಣ. ಅಲ್ಲಿ ಬಸಲಿಂಗು ತನ್ನ ಹೆಂಡತಿಯ ಮಾತು ಕೇಳಿ, ಡಾಕ್ಟರರ ಮಾತು ಮೀರಿ, ಅವರಿಂದ ಮುಟ್ಟಿಸಿಕೊಂಡ ಸೂತಕವನ್ನು ಕಳೆದುಕೊಳ್ಳಲು ತಲೆ ಸ್ನಾನವನ್ನೇನೋ ಮಾಡುತ್ತಾನೆ. ಪರಿಣಾಮವಾಗಿ ಅವನ ಕಣ್ಣಿನ ಸಮಸ್ಯೆ ಮತ್ತಷ್ಟು ಉಲ್ಬಣಗೊಂಡು ದೃಷ್ಟಿ ಮಂದವಾಗುತ್ತದೆ.

ತನ್ನ ಉಡಾಫೆ, ಸುಳ್ಳು, ಜಾತಿ, ಮಠದ ಗುರು– ಎಲ್ಲವನ್ನು ತೊರೆದು ತನ್ನ ಮೊದಲಿನ ಮುಗ್ಧತೆಯೊಂದಿಗೆ ಪುನಃ ಡಾ. ತಿಮ್ಮಪ್ಪನವರ ಹತ್ತಿರ ಹೋಗುತ್ತಾನೆ. ಅವರು ಅವನ ಪರಿಸ್ಥಿತಿಗೆ ಕಂಬನಿ ಮಿಡಿದು ‘‘ಮತ್ತೊಮ್ಮೆ ತಲೆಗೆ ನೀರು ಸೋಕಿಸಕೂಡದು’’ ಎಂದು ಮುಂಜಾಗ್ರತೆ ಹೇಳುತ್ತ ಶಸ್ತ್ರಚಿಕಿತ್ಸೆಗೆ ಸಿದ್ಧತೆ ಮಾಡಿಕೊಳ್ಳುತ್ತಾರೆ.

ಜಾತಿಗ್ರಸ್ತ ಭಾರತೀಯ ಸಮಾಜ ಕೂಡ ಬಸಲಿಂಗುವಿನಂತೆ ತಡವಾಗಿಯಾದರೂ ಪರವಾಗಿಲ್ಲ, ತನ್ನ ಹುಸಿ ಅಹಮಿಕೆಯನ್ನು ಕಳಚಿಟ್ಟು, ಮೂಲದ ಮುಗ್ಧತೆಯಲ್ಲಿ, ತನ್ನ ನಿಧಿ ತುಂಬಿದ ಕತ್ತಲ ಮೂಲೆಗಳನ್ನು ಅಪ್ಪಿಕೊಳ್ಳಲು ಮುಂದಾಗಬೇಕಿದೆ. ಆಗಷ್ಟೇ ಬುದ್ಧಿವಂತ ಪ್ರಾಣಿ ಎನಿಸಿಕೊಂಡ ಮನುಷ್ಯ, ನಿಜವಾದ ಅರ್ಥದಲ್ಲಿ ಮನುಷ್ಯ ಆಗುತ್ತಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT