ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾದೂ ಲೋಕದ ರಕ್ಷಾ

Last Updated 19 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಜಾದೂಗಾರಿಕೆ ಒಂದು ಕಲೆ. ಹೆಚ್ಚಾಗಿ ಪುರುಷರದ್ದೇ ಈ ಕ್ಷೇತ್ರದಲ್ಲಿ ಪ್ರಾಬಲ್ಯ. ಆದರೆ ಮಹಿಳೆಯರೂ ಈಗೀಗ ಮುಂಚೂಣಿಗೆ ಬರುತ್ತಿದ್ದಾರೆ. ಇಂಥವರಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಉಜಿರೆ ಮೂಲದ ರಕ್ಷಾ ಕೂಡ ಒಬ್ಬರು. ಕರ್ನಾಟಕದ ಕೆಲವೇ ಮಂದಿ ಹವ್ಯಾಸಿ ಮಹಿಳಾ ಜಾದೂಗಾರರಲ್ಲಿ ರಕ್ಷಾ ಈಗೀಗ ಸದ್ದು ಮಾಡುತ್ತಿದ್ದಾರೆ.

ಜಾದೂ ಕ್ಷೇತ್ರವೆನ್ನುವುದು ಸ್ವಲ್ಪ ಚಾಕಚಕ್ಯತೆ ಮತ್ತು ವೀಕ್ಷಕರನ್ನು ಹಿಡಿತದಲ್ಲಿಟ್ಟುಕ್ಕೊಳ್ಳುವ ಕಲೆ. ಇದಕ್ಕೆ ಪರಿಶ್ರಮದ ಜೊತೆಗೆ ಪ್ರಾವೀಣ್ಯವೂ ಬೇಕು. ಜೊತೆಗೆ ಗುಟ್ಟು ರಟ್ಟಾಗದಂತೆ ನೋಡುಗರನ್ನು ಮೋಡಿ ಮಾಡುವ ಕೈಚಳಕವೂ ಇದರಲ್ಲಿ ಸೇರಿದೆ. ಮಹಿಳೆಯರು ಇದರಲ್ಲಿ ತೊಡಗಿಸಿಕೊಳ್ಳುವುದು ಅಪರೂಪವೇ.

ಆದರೆ ಇದಕ್ಕೆ ಅಪವಾದವೆಂಬಂತೆ ರಕ್ಷಾ ನಾಯಕ್, ಶಾಲಾ ದಿನದಿಂದಲೂ ಜಾದೂ ಕಲೆಯ ಬಗ್ಗೆ ವಿಶೇಷ ಒಲವು ಬೆಳೆಸಿಕೊಂಡಿದ್ದಾರೆ. ಬಾಲ್ಯದಲ್ಲಿ ಒಮ್ಮೆ ಕಲ್ಲಿಕೋಟೆಯಲ್ಲಿ ನೋಡಿದ ಜಾದೂ ಪ್ರದರ್ಶನ ಇವರ ಜಾದೂ ಕಲಿಕೆಗೆ ಸ್ಫೂರ್ತಿ ನೀಡಿದೆ. ಮಾಯಾಲೋಕದ ವಿಸ್ಮಯ ಕಲೆಯ ಬಗ್ಗೆ ಒಲವು ಬೆಳೆಸಿಕೊಂಡ ರಕ್ಷಾ, ಮತ್ತೆ ತಿರುಗಿ ನೋಡಲಿಲ್ಲ. ಹೆತ್ತವರ ಅದಮ್ಯ ಪ್ರೋತ್ಸಾಹ ಇವರ ಜಾದೂ ಕಲಿಕೆಗೆ ನೀರೆರೆದು ಪೋಷಿಸಿತು. 11ನೇ ವಯಸ್ಸಿನಲ್ಲಿ ತಮ್ಮ ಮೊದಲ ಜಾದೂ ಪ್ರದರ್ಶನ ನೀಡಿದ ಇವರು, ಕಾಲೇಜು ದಿನಗಳಲ್ಲಿ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮವಿರಲಿ, ಇವರ ಜಾದೂ ಪ್ರದರ್ಶನ ಪ್ರಧಾನವಾಗಿರುತ್ತಿತ್ತು. ತನ್ನ ಮಾತುಗಾರಿಕೆ ಮತ್ತು ಕೈಚಳಕದಿಂದ ನೋಡುಗರನ್ನು ಮೋಡಿ ಮಾಡುವ ರಕ್ಷಾ, ಖ್ಯಾತ ಜಾದೂಗಾರರಾದ ಕುದ್ರೋಳಿ ಗಣೇಶ್, ಬಿ.ಹೆಚ್ ರಾಜು, ಉದಯ್ ಜಾದುಗಾರ್ ಮತ್ತು ಜೂನಿಯರ್ ಶಂಕರ್ ಅವರಲ್ಲಿ ತರಬೇತಿ ಪಡೆದಿದ್ದಾರೆ.

ಜಾದೂ ಪ್ರದರ್ಶನವನ್ನು ಕೇವಲ ಮನರಂಜನೆಗೆ ಮಾತ್ರ ಸೀಮಿತಗೊಳಿಸದೆ, ಆ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ಕಸದಿಂದ ರಸ, ಕಿವಿಯಲ್ಲಿ ನೀರು ಬರಿಸುವುದು ಮುಂತಾದ ಐಟಮ್‌ಗಳಲ್ಲಿ ನಿರುಪಯುಕ್ತ ವಸ್ತುಗಳಿಂದ ಕಲೆಯ ಸೃಷ್ಟಿ, ನೀರಿನ ಸದುಪಯೋಗದ ಮೂಲಕ ಜನಜಾಗೃತಿ ಮೂಡಿಸಿ ಸೈ ಎನ್ನಿಸಿಕೊಂಡಿದ್ದಾರೆ. ತಮ್ಮ ಕಾರ್ಯಕ್ರಮಗಳಲ್ಲಿ ವಿದ್ಯಾರ್ಥಿಗಳನ್ನು ಬಳಸಿಕೊಂಡು ಅವರಿಗೂ ಜಾದೂ ಕಲೆಯ ಬಗ್ಗೆ ಒಲವು ಮೂಡಿಸುವುದು ಇವರ ವಿಶೇಷ.

ಊರಿನಲ್ಲಿ ನಡೆಯುವ ಧಾರ್ಮಿಕ ಮತ್ತು ಸಾಂಸ್ಕೃತಿಕ ಸಭೆಗಳಲ್ಲಿ, ಉತ್ಸವಗಳಲ್ಲಿ ಈವರೆಗೆ ಸುಮಾರು ನೂರು ಪ್ರದರ್ಶನ ನೀಡಿದ ಹೆಗ್ಗಳಿಕೆ ರಕ್ಷಾ ಅವರದು. ಮೊದಮೊದಲು ಹವ್ಯಾಸಕ್ಕೆ ಆರಂಭಿಸಿದ ಜಾದೂ, ಈಗ ಇವರಿಗೆ ಕಲೆಯಾಗಿ ಸಿದ್ಧಿಸಿದೆ, 2-3 ಗಂಟೆಗಳ ಕಾಲ ನಿರಂತರವಾಗಿ ಜಾದೂ ಪ್ರದರ್ಶನ ನೀಡುವ ಇವರು, ತಮ್ಮ ಆಸಕ್ತಿಯ ಕ್ಷೇತ್ರಗಳಾದ ಕ್ರಾಫ್ಟ್ ತಯಾರಿ, ಗೃಹಾಲಂಕಾರ ಜೊತೆಗೆ ಜಾದೂಕಲೆಗೂ ಸ್ಥಾನ ನೀಡಿದ್ದಾರೆ.

ಬಹುತೇಕರು ತಮಗೆ ತಿಳಿದಿರುವ ಕಲೆಯನ್ನು ಇತರರಿಗೆ ತಿಳಿಸಿಕೊಡಲು ಹಿಂದೇಟು ಹಾಕುತ್ತಾರೆ, ಅದರಲ್ಲೂ ಜಾದೂ ಕಲೆ ಎನ್ನುವುದು ಒಂದು ವಿಶಿಷ್ಟವಾದ ಪ್ರಕಾರವಾಗಿದ್ದು, ಇಲ್ಲಿ ಜಾದೂಗಾರನ ಕೈಚಳಕ, ಮೋಡಿ ಮಾಡುವ ಮಾತುಗಾರಿಕೆ ಮತ್ತು ಅಭಿನಯ ಮುಖ್ಯವಾಗಿರುತ್ತದೆ. ಆದರೆ ರಕ್ಷಾ, ತನ್ನಂತೆ ಜಾದೂಕಲೆಯಲ್ಲಿ ಆಸಕ್ತಿ ಹೊಂದಿರುವ ಮತ್ತು ಜಾದೂ ಕಲಿಯಲು ಬಯಸುವ ಆಕಾಂಕ್ಷಿಗಳಿಗೆ, ಮಕ್ಕಳಿಗೆ ಜಾದೂಕಲೆಯ ಬಗ್ಗೆ ತಿಳಿಸಿಕೊಡುತ್ತಾರೆ. ಜೊತೆಗೆ ಜಾದೂ ಸಾಮಗ್ರಿಗಳ ಬಗ್ಗೆ, ಜಾದೂ ಕಲಿಯುವ ಪುಸ್ತಕಗಳ ಬಗ್ಗೆ ಮಾಹಿತಿ ನೀಡುತ್ತಾರೆ. ಆ ಮೂಲಕ ತನ್ನಂತೆ ಇತರರೂ ಈ ಕಲೆಯ ಬಗ್ಗೆ ತಿಳಿಯುವಂತಾಗಲಿ ಎನ್ನುವುದು ಅವರ ಅಭಿಲಾಷೆ.

ಖ್ಯಾತ ಜಾದೂಗಾರ್ ಸರ್ಕಾರ್ ಅವರಲ್ಲಿ ಜಾದೂ ಕಲಿಯಬೇಕೆನ್ನುವುದು ಇವರ ಆಸೆ, ಹಾಗೆಯೇ ಬಾಲ್ಯದಲ್ಲಿ ಜಾದೂ ಕಲಿಯಬೇಕೆನ್ನುವ ಹಂಬಲಕ್ಕೆ ಕೈಜೋಡಿಸಿದ ಅಪ್ಪ ಉಜಿರೆ ರತ್ನಾಕರ ಪ್ರಭು ಮತ್ತು ಅಮ್ಮ ರೇಖಾ ಪ್ರಭು, ತಮ್ಮ ಕಾರ್ತಿಕ್ ಪ್ರಭು ಇವರ ಸಹಕಾರದಿಂದಲೇ ಇಷ್ಟೆಲ್ಲ ಕಲಿಯಲು ಸಾಧ್ಯವಾಯಿತು ಎನ್ನುವ ರಕ್ಷಾ, ತನ್ನ ಇಚ್ಛೆಗೆ ತಕ್ಕಂತೆ ಜಾದೂ ಹೇಳಿಕೊಟ್ಟ ಗುರುಗಳನ್ನೂ ನೆನಪಿಸಿಕೊಳ್ಳುತ್ತಾರೆ. 

ಈಗ ಮದುವೆಯಾಗಿ ಬೆಂಗಳೂರಿನಲ್ಲಿ ವಾಸವಾಗಿರುವ ಇವರು, ಎರಡು ಮಕ್ಕಳ ತಾಯಿಯಾದರೂ ಕೂಡಾ ಕಲೆಯನ್ನು ನಿಲ್ಲಿಸಿಲ್ಲ, ಇದಕ್ಕೆ ಕಾರಣ ತನ್ನ ಪತಿ ಪ್ರಶಾಂತ್ ನಾಯಕ್ ಎನ್ನುವ ರಕ್ಷಾ ನಾಯಕ್, ‘ಮದುವೆಯ ಬಳಿಕ ತನ್ನ ಜಾದೂ ಎಲ್ಲಿ ಮಾಯವಾಗುತ್ತದೆಯೋ ಎಂದುಕೊಂಡಿದ್ದೆ, ಅದರೆ ಪ್ರಶಾಂತ್ ಕೂಡಾ ಜಾದೂ ಕಲೆಯ ಬಗ್ಗೆ ಆಸಕ್ತಿ ಹೊಂದಿದ್ದು, ಅವರ ಸೂಕ್ತ ಮಾರ್ಗದರ್ಶನ ಮತ್ತು ಪ್ರೋತ್ಸಾಹವೇ ಮತ್ತೆ ಜಾದೂ ಮಾಡಿದೆ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT