ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೀವ್ನಾ ಅಂದಮ್ಯಾಕೆ ಕಷ್ಟ-–ಸುಖ ಇರೋದೇ

ಬದುಕು ಬನಿ
Last Updated 21 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ನೀವು  ಪೇಪರ್‌ನ್ಯಾಗ ಬರೀಬೇಕು, ನಿಮ್‌ ಜೀವನದ್‌ ಬಗ್‌‌ ಏನಾರಾ ಹೇಳಿ ಅಂತೀರಾ? ಸೊಪ್ಪು ತರಕಾರಿ ಮಾರಿ ಜೀವ್ನಾ ನಡಸೋ ನನ್ ಬಗ್ಗೆ ಏನ್‌ ಹೇಳಲವ್ವಾ. ನಂದು ಒಂಥರಾ ನೋವಿನ ಕಥೆ, ಹಂಗಂತ ನಾನೇನು ನೋವನ್ನೇ ಜೀವ್ನಾ ಅಂದುಕೊಂಡಿಲ್ಲ. ನೀವು ಕೇಳಿರಾ ಅಂತ ಹೇಳ್ತೀನಿ.

ದೇವನಹಳ್ಳಿಯ ಬೂದಿಗೆರೆಯ ಬಡ ರೈತ ಕುಟುಂಬದಾಗೆ ಹುಟ್ಟಿದವಳು ನಾನು. ಹೆಸ್ರು ರಾಮಲಕ್ಷಮ್ಮ. ಮೊದ್ಲಿನಿಂದ್ಲೂ ಕಷ್ಟದಾಗೇ ಬೆಳ್ದೋಳು. ನಮ್ಮ ಅಪ್ಪನೂ, ಅವ್ವನೂ ಕೃಷಿ ಕೆಲಸ ಮಾಡ್ಕಂಡ್‌ ಜೀವನ ಸಾಗಿಸ್ತಾ ಇದ್ರು. ಇಬ್ರೂ ಅಕ್ಕದೀರು ನಂಗೆ. ಅಪ್ಪ ಇಲ್ಲೇ ಸಮೀಪದ ಒಂದು ಹಳ್ಳಿ ಹುಡುಗನ ಜೊತಿ ಮದ್ವಿ ಮಾಡಿಸಿದ್ರು.

ನಾನು ಎಲ್ಲಾ ಹೆಣ್ಮಕ್ಕಳಂಗೆ ಮದ್ವಿ, ಸಂಸಾರದ ಬಗ್ಗೆ ಬಾಳ ಕನಸು ಕಂಡಿದ್ದೆ. ಆದರೆ ವಿಧಿ ಆಟವೇ ಬ್ಯಾರೆ ಇತ್ತು. ಎರಡು ಗಂಡ್‌ ಮಕ್ಕಳನ್ನ ಕೈಗೆ ನೀಡಿದ ಗಂಡ ಬ್ಯಾರೇ ಯಾವುದೋ ಹೆಂಗಸು ಇಷ್ಟ ಆದ್ಲು ಅಂತ ಅವಳ್‌ ತಾವ ಹೋದ.

ಅವನೇನೋ ನನ್ನ ನಡು ನೀರಲ್ಲಿ ಕೈ ಬಿಟ್‌ ಹೋದ. ಹಂಗಂತ ಜೀವ ತೆಗೆದುಕೊಳ್ಳಕಾಗತ್ತಾ? ಅಲ್ದೇ ನಂಗ್‌ ಎರಡು ಮಕ್ಕಳು ಹುಟ್ಟದ್ವಲ್ಲಾ. ಅವಕ್ಕಾಗಿ ನಾನು ಬದುಕಬೇಕಿತ್ತು. ತರಕಾರಿ ವ್ಯಾಪಾರ ಶುರು ಮಾಡ್ದೆ. ಹಲಸೂರಿನ ಜೋಗುಪಾಳ್ಯ ಸುತ್ತಮುತ್ತ ಗಾಡಿ ಓಡ್ಸಿ ತರಕಾರಿ ಸೊಪ್ಪು ಅಂತಾ ಗಂಟ್ಲು ಹರಿಯೋ ಹಾಂಗ್‌ ಕೂಗಿ ದಿನಕ್ಕೆ ರೂ 200ರಿಂದ 250 ದುಡೀತೀನಿ.

ಮುಂಜಾನಿ 2.30ಕ್ಕೇ ಎದ್ದು ಊರಲ್ಲಿ ಸಿಗೋ ಕೆಲವು ತರಕಾರಿ ಕಟ್ಟಿಕೊಂಡು 4.30ಕ್ಕೆ ಬಸ್‌ ಹಿಡ್ದು ಕೆ.ಆರ್‌.ಪುರ ಮಾರ್ಕೆಟ್‌ಗೆ ಹೋಗಿ ತರಕಾರಿ ತಂದು ಮಾರಾಟ ಮಾಡ್ತೀನಿ.

15 ವರ್ಷದಿಂದ ಇದೇ ಜಾಗದಾಗೆ ಇರೋದ್ರಿಂದ ಇಲ್ಲಿ ಜನ ಬಾಳ ಪ್ರೀತಿ ಮಾಡ್ತಾರೆ. ಸೊಪ್ಪು ತರಕಾರಿ ಕೊಳ್ಳು ಜೊತಿಗೆ ಬೆಳಗಿನ್‌ ತಿಂಡಿನೋ ಮಧ್ಯಾಹ್ನಕ್ಕೆ ಊಟನೋ ಕೊಡ್ತಾರೆ. ಈ ಕೆಲಸದಾಗೆ ಖುಷಿ ಐತಿ. ಈ ವ್ಯಾಪಾರದಿಂದ ಬಾಳ ಲಾಭ ಏನೂ ಆಗದಿದ್ರೂ ಮನಸ್ಸಿಗೆ ಖುಷಿ ಐತಿ. ಜನ ವಿಶ್ವಾಸ ಇಟ್ಟು ಸೊಪ್ಪು, ತರಕಾರಿ ತಂಗಡು ನನ್ನ ಹೊಟ್ಟಿ ಬಟ್ಟಿಗೆ ಆಗೋವಷ್ಟ್ ವ್ಯಾಪಾರ ಮಾಡ್ತಾರೆ. ಇದೇ ನನ್‌ ಜೀವನಕ್ಕೆ ಆಧಾರ.

ನನ್ನ ಇಬ್ಬರು ಮಕ್ಕಳನ್ನೂವೆ ಓದ್ಸಿ ವಿದ್ಯಾವಂತರಾಗಿ ಮಾಡಬೇಕು ಅಂತ ಕನಸು ಕಂಡೆ. ಆದ್ರೆ ವಿಧಿ ಬ್ಯಾರೆನೇ ಆಗಿತ್ತು. ದೊಡ್ಡ ಮಗ ಇದ್ದಕ್ಕಿದ್ ಹಾಗೇ ಸತ್‌ ಹೋಗಿಬಿಟ್ಟ. ಅಣ್ಣ ಸತ್ತ ಅಂತಾನೇ ತಲೆ ಕೆಡಿಸಿಕೊಂಡ ಚಿಕ್ಕ ಮಗಾ ಎಸ್ಸೆಸ್ಸೆಲ್ಸಿಗೇ ಓದು ನಿಲ್ಲಿಸ್ದಾ. ನಾನೆಂಗೂ ಓದ್ಲಿಲ್ಲ, ಮಕ್ಕಳಾದ್ರೂ ಓದ್ಲಿ ಅಂದುಕೊಂಡಿದ್ದೆ. ಅದೂ ನೆರವೇರಿಲ್ಲ.

ಈಗ ಮಗ ಕಾರ್‌ ಓಡಿಸ್ಕೊಂಡು ನನ್‌ ಬದುಕಿಗೆ ಆಸರೆಯಾಗ್ತಿದಾನೆ.  ಜೀವ್ನಾ ಅಂದಮ್ಯಾಕೆ ಕಷ್ಟ, ಸುಖ ಇರೋದೇ. ಆದ್ರೆ ಕಷ್ಟನಾ ನುಂಗ್‌ಕೊಂಡು ನೋವನ್ನೇ ನಲಿವು ಅಂದುಕೊಂಡು ಜೀವ್ನಾ ಮಾಡ್ತಾ ಇದೀನಿ. ಮುಂದೆ ಸ್ವಂತ ಅಂಗಡಿ ಮಾಡೋ ಆಸಿ ಐತೆ. ಆದ್ರೆ ಬಂಡವಾಳ ಇಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT