ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಎನ್‌ಯು: ಭಿನ್ನಮತ ಹತ್ತಿಕ್ಕುವ ಹುನ್ನಾರ

ಸರ್ಕಾರದ ನೀತಿಗಳನ್ನು ವಿಮರ್ಶೆಗೆ ಒಳಪಡಿಸುವುದು ದೇಶದ್ರೋಹವೇ?
Last Updated 17 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ದೇಶದ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲೊಂದಾದ ದೆಹಲಿಯ ಜವಾಹರಲಾಲ್‌ ನೆಹರೂ ವಿಶ್ವವಿದ್ಯಾಲಯವನ್ನು (ಜೆಎನ್‌ಯು) 1969ರಲ್ಲಿ ವಿಶೇಷ ಅಧಿಸೂಚನೆ ಹೊರಡಿಸಿ  ಸರ್ಕಾರ ಸ್ಥಾಪಿಸಿತು. ಉನ್ನತ ಶಿಕ್ಷಣವನ್ನು ಇನ್ನಷ್ಟು ಬಲಪಡಿಸುವುದು ಅದರ ಮೂಲ ಉದ್ದೇಶವಾಗಿತ್ತು.  ಈ ವಿಶ್ವವಿದ್ಯಾಲಯದಲ್ಲಿ ಇದೀಗ ಒಟ್ಟು 10 ನಿಕಾಯಗಳಿವೆ. ಪ್ರತಿ ನಿಕಾಯದಲ್ಲಿ 10ಕ್ಕೂ ಮಿಕ್ಕು ವಿಭಾಗಗಳಿವೆ. ಇವಲ್ಲದೆ ಸಂಸ್ಕೃತವೂ ಸೇರಿದಂತೆ   ನಾಲ್ಕು  ಸ್ವತಂತ್ರವಾದ ವಿಶೇಷ ಅಧ್ಯಯನ ಕೇಂದ್ರಗಳಿವೆ.

ಇಲ್ಲಿರುವ ಭಾರತೀಯ ಭಾಷೆಗಳ ಕೇಂದ್ರದಲ್ಲಿ ಈಚೆಗೆ ಕನ್ನಡ ಅಧ್ಯಯನ ಪೀಠವೂ ಕಾರ್ಯಾರಂಭ ಮಾಡಿದೆ. 2012ರಲ್ಲಿ ನ್ಯಾಷನಲ್ ಅಸೆಸ್‌ಮೆಂಟ್ ಮತ್ತು ಅಕ್ರಿಡಿಟೇಶನ್ ಕೌನ್ಸಿಲ್‌ ಈ  ವಿಶ್ವವಿದ್ಯಾಲಯಕ್ಕೆ ನಾಲ್ಕರಲ್ಲಿ 3.9 ಅಂಕ ನೀಡಿ, ಇದು ದೇಶದ ಅತ್ಯುತ್ತಮ ವಿಶ್ವವಿದ್ಯಾಲಯಗಳಲ್ಲಿ ಒಂದು ಎಂದು ಹೇಳಿತು. ಈಗ ಜೆಎನ್‌ಯು ಕವಲು ಹಾದಿಯಲ್ಲಿದೆ. ಅದಕ್ಕೀಗ ಎರಡು ಬಗೆಯ ಚರಿತ್ರೆಗಳನ್ನು ಬರೆಯಲಾಗುತ್ತಿದೆ. 2014ರ ಮಹಾಚುನಾವಣೆಗಿಂತ ಮೊದಲಿನ ಚರಿತ್ರೆಯಲ್ಲಿ ಈ ವಿಶ್ವವಿದ್ಯಾಲಯವನ್ನು ಒಂದು ಬೌದ್ಧಿಕ ಕೇಂದ್ರವಾಗಿ ದೇಶಕ್ಕೆ ಪರಿಚಯಿಸಲಾಗುತ್ತಿತ್ತು.

ಇಲ್ಲಿ ಕಲಿತ ವಿದ್ಯಾರ್ಥಿಗಳು ದೇಶದ ಉನ್ನತ ಹುದ್ದೆಗಳನ್ನು ಅಲಂಕರಿಸುತ್ತಿದ್ದರು. ಇಲ್ಲಿನ ಪ್ರಾಧ್ಯಾಪಕರು ಬರೆದ ಸಂಶೋಧನಾ ಲೇಖನಗಳಿಗೆ ಅಂತರರಾಷ್ಟ್ರೀಯ ಮನ್ನಣೆ ದೊರಕುತ್ತಿತ್ತು. ಮಾನವಿಕಗಳಲ್ಲಿ ಮತ್ತು ಜೀವವಿಜ್ಞಾನದಲ್ಲಿ ಇಲ್ಲಿನ ಪ್ರಾಧ್ಯಾಪಕರ ಸಾಧನೆಗಳ ಕುರಿತು ದೇಶ ವಿದೇಶಗಳಲ್ಲಿ ಉನ್ನತ ಮಟ್ಟದ ಚರ್ಚೆಗಳು ನಡೆಯುತ್ತಿದ್ದುವು. ಇಲ್ಲಿ ಕಲಿತ ಮಹನೀಯರನೇಕರು ದೇಶದ ಅಭಿವೃದ್ಧಿಗೆ ಗಮನಾರ್ಹ ಕೊಡುಗೆ ನೀಡಿದ್ದರು. ಅಂಥವರಲ್ಲಿ ರಿಸರ್ವ್ ಬ್ಯಾಂಕಿನ ಸಹ ಗವರ್ನರ್ ಆಗಿರುವ ಹರೂನ್ ರಶೀದ್ ಖಾನ್, ಷಿಕಾಗೊ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿರುವ ಮುಜಾಫರ್ ಆಲಂ, ಇದೀಗ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿರುವ ನಿರ್ಮಲಾ ಸೀತಾರಾಮನ್  ಪ್ರಮುಖರು.

ಅರ್ಥಶಾಸ್ತ್ರದ ಆಧಾರದ ಮೇಲೆ ಆಧುನಿಕ ಭಾರತದ ಇತಿಹಾಸ ಬರೆದ ಪ್ರೊ. ಬಿಪಿನ್ ಚಂದ್ರ, ಸಂಸ್ಕೃತ ಕಾವ್ಯಗಳು, ಶಾಸ್ತ್ರಗಳು, ಹಳೆಯ ಮನೆಗಳು, ನೇಗಿಲಿನ ಮೊನೆ ಇತ್ಯಾದಿ ನವೀನ ಆಕರಗಳನ್ನು ಬಳಸಿ ಪ್ರಾಚೀನ ಭಾರತದ ಇತಿಹಾಸವನ್ನು ಹೊಸದಾಗಿ ಬರೆದ ಪ್ರೊ. ರೋಮಿಲಾ ಥಾಪರ್, ಹಿಂದಿ ಸಾಹಿತ್ಯ ವಿಮರ್ಶೆಗೆ ಚೈತನ್ಯ ತಂದುಕೊಟ್ಟ ಪ್ರೊ. ನಾಮವರ್ ಸಿಂಗ್ ಮೊದಲಾದವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅಸಾಮಾನ್ಯ ಸಾಧನೆ ಮಾಡಿ ತಮ್ಮದೇ ಆದ ಒಂದು ಬೌದ್ಧಿಕ ಪರಂಪರೆಯನ್ನೇ ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರ ವಾದವನ್ನು ಒಪ್ಪುವವರೂ, ಒಪ್ಪದವರೂ ಇವರನ್ನೇ ಕೇಂದ್ರವಾಗಿರಿಸಿಕೊಂಡು ವಾದ ಮಂಡಿಸುತ್ತಾರೆ.

ಎಡಪಕ್ಷಗಳ ಪ್ರಮುಖ ನೇತಾರರಾದ ಸೀತಾರಾಮ ಯೆಚೂರಿ ಮತ್ತು ಪ್ರಕಾಶ್ ಕಾರಟ್, ಚುನಾವಣಾ ವಿಶ್ಲೇಷಕ ಯೋಗೇಂದ್ರ ಯಾದವ್, ಲಿಬಿಯಾದ ಪ್ರಧಾನಿ ಅಲಿ ಜೆದಾನ್, ಪತ್ರಕರ್ತ ಪಿ.ಸಾಯಿನಾಥ್  ಮೊದಲಾದವರು ಜೆಎನ್‌ಯುವಿನ ಹಿರಿಯ ವಿದ್ಯಾರ್ಥಿಗಳು. ಈ ಚಿಂತಕರು ಭಾರತದ ಇತಿಹಾಸವನ್ನಾಗಲೀ ವರ್ತಮಾನವನ್ನಾಗಲೀ ಗ್ರಹಿಸಿದ ಬಗೆಗೆ ಮತ್ತು ಅದನ್ನು ವಿಶ್ಲೇಷಿಸುತ್ತಿದ್ದ ಬಗೆಗೆ ವಿದ್ವತ್ ವಲಯದಲ್ಲಿ ಅಪಾರ ಗೌರವವಿತ್ತು.

ಈಗಲೂ ಈ ವಿಶ್ವವಿದ್ಯಾಲಯದಲ್ಲಿ ಸುದೀಪ್ತಾ ಕವಿರಾಜ್, ಅಮಿತಾಭ್ ಮಟ್ಟೂ, ಎಚ್.ಎಸ್. ಶಿವಪ್ರಕಾಶ್, ರುಸ್ತುಂ ಭರೂಚಾ, ಜಯತಿ ಘೋಷ್, ಜಾನಕಿ ನಾಯರ್, ಸುಧಾ ಪೈ, ಅನ್ವರ್ ಪಾಶಾ ಮೊದಲಾದ ವಿದ್ವಾಂಸರು ಕೆಲಸ ಮಾಡುತ್ತಿದ್ದಾರೆ. ಇಲ್ಲಿ ಕಲಿತ ಸುಮಾರು 350 ಮಂದಿ ಇಂದು ದೇಶದ ವಿವಿಧೆಡೆಗಳಲ್ಲಿ ಐಎಎಸ್ ಅಧಿಕಾರಿಗಳಾಗಿ ಕೆಲಸ ಮಾಡುತ್ತಿದ್ದಾರೆ. ಯಾವ ಹಮ್ಮು ಬಿಮ್ಮು ಇಲ್ಲದೆ, ಯಾವುದೋ ದಾಬಾದೊಳಗೋ, ಮರದ ಕೆಳಗೋ ಕುಳಿತು ದೇಶದ ಬಗ್ಗೆ ವಿದ್ಯಾರ್ಥಿಗಳೊಡನೆ ಆಳವಾದ ಸಂವಾದ ನಡೆಸುವ ವಿದ್ವಾಂಸರು, ಈ ವಿಶ್ವವಿದ್ಯಾಲಯವನ್ನು ಅಗ್ರಗಣ್ಯ ಶಿಕ್ಷಣ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ.

ಚರ್ಚೆ, ವಾಗ್ವಾದ  ಮತ್ತು ಆರೋಗ್ಯಕರ ಭಿನ್ನಮತಗಳ ಮೂಲಕ ಇಲ್ಲಿನ ಜಗತ್ತು ದಿನಾ ತೆರೆದುಕೊಳ್ಳುತ್ತದೆ. ಸದಾ ಉರಿಯುತ್ತಿರುವ ಕಾಶ್ಮೀರ ಸಮಸ್ಯೆ, ಬೆಳೆಯುತ್ತಿರುವ ಆತಂಕವಾದ, ನಿವಾರಿಸಿಕೊಳ್ಳಲಾಗದ ಬಡತನ, ದಲಿತರ ಮಾರಣ ಹೋಮ, ಬೆಳೆಯುತ್ತಿರುವ ಕೋಮುವಾದ ಮೊದಲಾದ ವಿಷಯಗಳ ಮೇಲೆ ಇಲ್ಲಿ ನಿತ್ಯ ಚರ್ಚೆ ನಡೆಯುತ್ತದೆ. ಅದಕ್ಕೆ ಸಂಬಂಧಿಸಿದ ಸಾಕ್ಷ್ಯಚಿತ್ರಗಳ  ಪ್ರದರ್ಶನ, ಪೋಸ್ಟರ್‌ಗಳ ರಚನೆ, ಕವಿತೆಗಳ ಬರಹ ಇಲ್ಲಿನ ನಿತ್ಯ ಚಟುವಟಿಕೆಗಳು. ಇಷ್ಟಿದ್ದರೂ ಈ ಕಾರಣಕ್ಕೆ ಇಲ್ಲಿ ಹುಡುಗರ ನಡುವೆ ಹೊಡೆದಾಟವಾಗಿಲ್ಲ.

ಯಾರೂ ರಾಷ್ಟ್ರದ್ರೋಹಕ್ಕೆ ಗುರಿಯಾಗಿ ಗಲ್ಲು ಕಂಬ ಏರಿಲ್ಲ. ಈ ಕಾರಣಕ್ಕಾಗಿಯೋ ಏನೋ ಜಗತ್ತಿನಾದ್ಯಂತ ವಿದ್ಯಾರ್ಥಿಗಳು ಇಲ್ಲಿಗೆ ಬರಲು ಇಚ್ಛಿಸುತ್ತಾರೆ. ಎಡ ಆಗಲಿ, ಬಲವಾಗಲಿ ಇಲ್ಲಿನ ಮಕ್ಕಳು  ನಾವು ಜೆಎನ್‌ಯುವಿನಲ್ಲಿ ಕಲಿತವರು ಎಂದು ಹೇಳಲು ಸಂಕೋಚ ಪಟ್ಟುಕೊಳ್ಳುವುದಿಲ್ಲ. ಒಂದು ದೇಶದ ಪ್ರಗತಿಯನ್ನು ಅದರ ಬೌದ್ಧಿಕ ಬೆಳವಣಿಗೆಯ ಮೂಲಕ ಗುರುತಿಸುವ ಕ್ರಮವಿದ್ದರೆ, ಅಂಥ ಕಡೆ ಜೆಎನ್‌ಯುವಿಗೆ ಒಂದು ಪ್ರಮುಖ ಸ್ಥಾನವಿದೆ. ಅಂಥ ಸ್ಥಾನ ಪಡೆಯಲು ಬೇಕಾದ ಎಲ್ಲ ಅರ್ಹತೆ ಈ ವಿಶ್ವವಿದ್ಯಾಲಯಕ್ಕಿದೆ. 

ಆದರೆ 2014ರ ಮೇ ಚುನಾವಣೆಯ ನಂತರ ದೇಶದ ಇತಿಹಾಸವನ್ನು ಬರೆಯುವ ಕ್ರಮ ಬದಲಾಗುತ್ತಿರುವಂತೆ ಜೆಎನ್‌ಯುವಿಗೆ ಹೊಸ ಚರಿತ್ರೆಯನ್ನು ಕೆಲವರು ಬರೆಯಲಾರಂಭಿಸಿದರು.  ಗಾಂಧೀಜಿ ಸಾವಿಗೆ ಒಂದು ಬಗೆಯ ಪಶ್ಚಾತ್ತಾಪದಿಂದ ಪರಿತಪಿಸುತ್ತಿದ್ದ  ದೇಶದಲ್ಲಿ ಗಾಂಧಿ ಹಂತಕ ಗೋಡ್ಸೆಗೆ ಮನ್ನಣೆ ದೊರೆಯಲಾರಂಭಿಸಿ ಆತನನ್ನು ಹುತಾತ್ಮನ ಹಂತಕ್ಕೆ ಏರಿಸಿ, ಆತನಿಗೊಂದು ಗುಡಿ ಕಟ್ಟುವುದನ್ನು ದೇಶ ಕಂಡಿತು. ಮಾನವನ ಘನತೆಗಿಂತ ಪಶುಗಳ ಘನತೆ ಹೆಚ್ಚಾಯಿತು. ಸರ್ಕಾರವನ್ನು ದೇಶದೊಂದಿಗೆ ಸಮೀಕರಿಸುವ ಪರಿಕ್ರಮದಲ್ಲಿ ಸರ್ಕಾರದ ನೀತಿ ನಿಯಮಗಳನ್ನು ವಿಮರ್ಶಿಸಿದರೆ ಅದು ದೇಶದ್ರೋಹವೆಂಬಂತೆ ಕಾಣತೊಡಗಿತು. ದೇಶದ ಆರ್ಥಿಕ ನೀತಿಯನ್ನು ಪ್ರಶ್ನಿಸಿ ಅದರಿಂದ ದೇಶದ ಬಡವರಿಗಾಗುವ ತೊಂದರೆಗಳನ್ನು ವಿಶ್ಲೇಷಿಸಿದರೆ ಅಂಥವರನ್ನು ರಾಷ್ಟ್ರದ್ರೋಹಿಗಳೆಂದು ಬಣ್ಣಿಸಲಾಯಿತು.

ಹತ್ತಾರು ಜನ ಸುದೀರ್ಘವಾಗಿ ಚರ್ಚಿಸಿ, ದೇಶದ ಎಲ್ಲ ಜನರ ಒಳಿತು ಮತ್ತು ಅಭಿವೃದ್ಧಿಗಾಗಿ ನಿರ್ಮಿಸಿದ ಸಂವಿಧಾನವು ಯಾವುದೋ ಒಂದು ಸಣ್ಣ ಗುಂಪು ತನ್ನ ಸ್ವಾರ್ಥಕ್ಕಾಗಿ ನಿರ್ಮಿಸಿಕೊಂಡ ಶಾಸ್ತ್ರಗಳೆದುರು ತಲೆ ತಗ್ಗಿಸಿ ನಿಲ್ಲುವಂತಾಯಿತು. ಇಂಥ ಪರಿಸ್ಥಿತಿಯಲ್ಲಿ  ಜೆಎನ್‌ಯು ಖಳನಾಯಕರನ್ನು ಸೃಷ್ಟಿಸುವ ಕೇಂದ್ರವಾಗಿ ಅಧಿಕಾರದಲ್ಲಿರುವವರಿಗೆ ಮತ್ತು ಅವರನ್ನು ಅಂಧವಾಗಿ ಅನುಸರಿಸುವವರಿಗೆ ಕಾಣತೊಡಗಿತು. ಈ ಹೊಸ ಚರಿತ್ರೆಯ ಪ್ರಕಾರ ಅದು ದೇಶದ್ರೋಹಿಗಳ ಸಂತೆ. ಈ ಮಾತನ್ನು ಅಲ್ಲಿ ಯಾವ ಘಟನೆಯೂ ನಡೆಯುವ ಮುನ್ನವೇ ಆಗಾಗ ಹೇಳಲಾಗುತ್ತಿತ್ತು. ಬುದ್ಧಿಜೀವಿಗಳನ್ನು ದ್ವೇಷಿಸುವ ಜನಗಳ ನಡುವೆ ಸಂಶೋಧನೆಗಳಿಗೆ ಮಹತ್ವ ಸಿಗದಿರುವುದು ಅಸಹಜವೇನಲ್ಲ.

ಕಳೆದ ಕೆಲವು ದಿನಗಳಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆದ ಅನಪೇಕ್ಷಿತ ಘಟನೆಗಳನ್ನು ಆಧರಿಸಿ ಸರ್ಕಾರವು ಯಾವುದೇ ಭಿನ್ನಮತವನ್ನು ಹತ್ತಿಕ್ಕುವ ತನ್ನ ಪ್ರಜಾಪ್ರಭುತ್ವ ವಿರೋಧಿ ಕಾರ್ಯಸೂಚಿಯನ್ನು ನಾಚಿಕೆಯಿಲ್ಲದೆ ಜಗತ್ತಿನ ಮುಂದೆ ತೆರೆದಿಟ್ಟಿತು. ತನ್ನ ಗುಪ್ತಚರ ಇಲಾಖೆಯು ಗುರುತಿಸಲಾಗದ ಸತ್ಯವನ್ನು ಹಫೀದ್ ಸಯೀದ್ ಅವರ ನಕಲಿ ಟ್ವಿಟರ್‌ನಲ್ಲಿ ಕಂಡ ಗೃಹಮಂತ್ರಿಗಳು ಅದನ್ನು ತಕ್ಷಣ ಜಗಜ್ಜಾಹೀರುಗೊಳಿಸಿದರು. ಅಫ್ಜಲ್ ಗುರುವನ್ನು ಹುತಾತ್ಮ ಎಂದು ಬಣ್ಣಿಸಿ, ಅವನನ್ನು ನೇಣಿಗೇರಿಸಿದ ಕ್ರಮವನ್ನು ಬಲವಾಗಿ ವಿರೋಧಿಸಿದ ಜಮ್ಮು ಕಾಶ್ಮೀರದ ಪಿಡಿಪಿಯೊಡನೆ ಕಾಶ್ಮೀರದಲ್ಲಿ ಅಧಿಕಾರ ಹಿಡಿಯಲು ಹಿಂದೆ ಮುಂದೆ ನೋಡದೆ ಕೈಜೋಡಿಸಿದ ಕೇಂದ್ರ ಸರ್ಕಾರಕ್ಕೆ ಹುಡುಗನೊಬ್ಬನ ಘೋಷಣೆಯು ಭಯಾನಕವಾಗಿ ಕಂಡಿತು.

ಅದು ನೂರಾರು  ಪೊಲೀಸರನ್ನು ವಿಶ್ವವಿದ್ಯಾಲಯದೊಳಗೆ ಕ್ಷಣಮಾತ್ರದಲ್ಲಿ ನುಗ್ಗಿಸಿತು. ಘೋಷಣೆ ಒಂದು ನೆಪ ಮಾತ್ರ. ವಿಶ್ವವಿದ್ಯಾಲಯದ ಸ್ವಾಯತ್ತೆಯನ್ನು ಕಸಿದುಕೊಂಡು ಅದನ್ನು ನಾಶ ಮಾಡುವುದು ಅದಕ್ಕೆ ಅಗತ್ಯ ಆಗಬೇಕಾಗಿದ್ದ ಕೆಲಸ. ಜಗತ್ತಿನ ಎಲ್ಲ ಫ್ಯಾಸಿಸ್ಟ್ ಶಕ್ತಿಗಳೂ ಹೀಗೆಯೇ ಮಾಡಿವೆ. 

ಆದದ್ದಿಷ್ಟು: ಫೆಬ್ರುವರಿ 9ರಂದು ಡಿಎಸ್‌ಯು (ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಯೂನಿಯನ್) ಎಂಬ ಸಣ್ಣ ಗುಂಪೊಂದು ಅಫ್ಜಲ್ ಗುರುವಿನ ಸ್ಮರಣಾರ್ಥ ಕಾರ್ಯಕ್ರಮ ನಡೆಸಲು ಅಪ್ಪಣೆ ಕೋರಿ ವಿಶ್ವವಿದ್ಯಾಲಯಕ್ಕೆ ಪತ್ರ ಬರೆದಿತ್ತು. ವಿಶ್ವವಿದ್ಯಾಲಯ ಅದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈ ವಿದ್ಯಾರ್ಥಿ ಸಂಘಟನೆಗೆ ಕ್ಯಾಂಪಸ್‌ನಲ್ಲಿ ಅಂಥ ಮನ್ನಣೆಯೇನೂ ಇಲ್ಲ. ಅದು ವಿದ್ಯಾರ್ಥಿ ಸಂಘದ ಚುನಾವಣೆಯಲ್ಲಿಯೂ ಸ್ಫರ್ಧಿಸಿರಲಿಲ್ಲ. ಹುಡುಗರು ಅದನ್ನು ‘ದಸ್ ನಂಬರ್ ಕಾ ಯೂನಿಯನ್’ (ಡಿಎಸ್‌ಯು) ಎಂದು ತಮಾಷೆ ಮಾಡುತ್ತಿರುತ್ತಾರೆ.

ವಿಶ್ವವಿದ್ಯಾಲಯದ ಒಪ್ಪಿಗೆ ಇಲ್ಲದಿದ್ದರೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ರಾತ್ರಿ ಹೊತ್ತು ನಡೆಸಲು ಈ ಸಂಘಟನೆ ನಿರ್ಧರಿಸಿದ್ದನ್ನು ತಿಳಿದ ಅಖಿಲ ಭಾರತೀಯ ವಿದ್ಯಾರ್ಥಿ  ಪರಿಷತ್ತಿನ ಸದಸ್ಯರು ಈ ವಿಷಯವನ್ನು ಪ್ರಜಾಸತ್ತಾತ್ಮಕವಾಗಿ ಸಂಬಂಧಿಸಿದವರ ಗಮನಕ್ಕೆ ತರುವ ಮುನ್ನವೇ ಅವರೊಡನೆ ಸಂಘರ್ಷಕ್ಕೆ ಮುಂದಾದರು ಮತ್ತು ಅದನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರು. ಒಳಗಿನ ಜನರಿಗೆ ಏನಾಯಿತು ಎಂದು ತಿಳಿಯುವ ಮುನ್ನವೇ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಸ್ಥಳೀಯರನ್ನು ಸಂಘಟಿಸಿ, ಪೊಲೀಸರನ್ನು ಸಂಪರ್ಕಿಸಿ, ವಿಶ್ವವಿದ್ಯಾಲಯವನ್ನು ದೇಶದ್ರೋಹಿಗಳ ಆವಾಸಸ್ಥಾನ ಎಂದು ಬಣ್ಣಿಸಿದರು.

ಈ ನಡುವೆ ಸತ್ಯ ಶೋಧನೆಗೆ ವಿಶ್ವವಿದ್ಯಾಲಯದ ಕುಲಪತಿಗಳು ರಚಿಸಿದ ಸಮಿತಿಗೆ ಯಾವ ಮನ್ನಣೆಯೂ ದೊರೆಯದಾಯಿತು. ಸ್ವತಃ ಕೇಂದ್ರ ಸರ್ಕಾರದ ಗೃಹ ಮಂತ್ರಿಗಳೇ ದೇಶದ್ರೋಹದ ಮಾತಾಡಿದ್ದಲ್ಲಿಗೆ, ಬರೆದ ನಾಟಕದ ಒಂದು ಅಂಕ ಮುಗಿದಿತ್ತು. ವಿದ್ಯಾರ್ಥಿ ನಾಯಕ ಕನ್ಹಯ್ಯಾ  ಕುಮಾರ್ ಮೊದಲ ಗುರಿಯಾದ್ದರಿಂದ ಅವರ ಮೇಲೆ ಅಲ್ಲಸಲ್ಲದ ಆರೋಪ ಹೊರಿಸಲಾಯಿತು. ಅವರನ್ನು ನ್ಯಾಯಾಲಯದಲ್ಲಿ ಹಾಜರುಪಡಿಸುವ ಸಂದರ್ಭದಲ್ಲಿ ಬಿಜೆಪಿ ಮುಖಂಡರು ನಡೆದುಕೊಂಡ ರೀತಿ ಅವರಿಗೆ ನ್ಯಾಯಾಲಯದ ಮೇಲಾಗಲೀ ಸಂವಿಧಾನದ ಮೇಲಾಗಲೀ ಇರುವ ಗೌರವವನ್ನು ಪ್ರಕಟಪಡಿಸಿತು.

ಸ್ವಲ್ಪ  ಜಾಗ್ರತೆಯಿಂದ ಮುಂದಾಲೋಚಿಸಿ, ದೇಶದ ವಿರುದ್ಧ ಘೋಷಣೆ ಕೂಗಿದವರ ಮೇಲೆ ಕ್ರಮ ಕೈಗೊಂಡಿದ್ದರೆ ಏನೂ ಆಗುತ್ತಿರಲಿಲ್ಲ. ರೋಹಿತ ವೇಮುಲ ಪ್ರಕರಣ ಮತ್ತು ಜೆಎನ್‌ಯು ಪ್ರಕರಣದಲ್ಲಿ ಕೇಂದ್ರ ಸರ್ಕಾರವು ನಡೆದುಕೊಂಡ ರೀತಿ ಅದು ಹೇಗೆ ತನ್ನ ಅಪಕ್ವ ಮತ್ತು  ಅಪಾಯಕಾರಿ ನಿಲುವುಗಳಿಂದ ಶಿಕ್ಷಣ ಸಂಸ್ಥೆಗಳನ್ನು ನಾಶ ಮಾಡಬಲ್ಲುದು ಎಂಬುದನ್ನು ಜಗತ್ತಿಗೇ ಸಾರಿ ಹೇಳಿತು.

ಈಗ ಈ ಘಟನೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಗಮನ ಸೆಳೆದುಕೊಂಡಿದೆ. ಕೊಲಂಬಿಯಾ, ಆಕ್ಸ್‌ಫರ್ಡ್, ಯೇಲ್, ಹಾರ್ವರ್ಡ್, ಕೇಂಬ್ರಿಜ್‌ ಮೊದಲಾದ ಪ್ರಮುಖ ವಿಶ್ವವಿದ್ಯಾಲಯಗಳ 450 ಪ್ರಮುಖ ಚಿಂತಕರು ಜೆಎನ್‌ಯುವಿನಲ್ಲಾದ ಘಟನೆ ಪ್ರತಿಭಟಿಸಿ ಪತ್ರ ಬರೆದಿದ್ದಾರೆ. ಲಂಡನ್‌ನಲ್ಲಿರುವ ಸ್ಕೂಲ್ ಆಫ್ ಓರಿಯಂಟಲ್ ಮತ್ತು ಆಫ್ರಿಕನ್ ಸ್ಟಡೀಸ್‌ನ ಅನೇಕ ವಿದ್ವಾಂಸರು ವಿಶ್ವವಿದ್ಯಾಲಯವೊಂದರ ಸ್ವಾಯತ್ತೆಯ ಮೇಲೆ ನಡೆದ ಹಲ್ಲೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ದಕ್ಷಿಣ ಏಷ್ಯಾ ವಿಶ್ವವಿದ್ಯಾಲಯಗಳ ಒಕ್ಕೂಟ ಕಟು ಶಬ್ದಗಳಲ್ಲಿ ಘಟನೆಯನ್ನು ವಿರೋಧಿಸಿದೆ. ಭಾರತದಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಸಂದೇಶವು ಪ್ರಧಾನ ಮಂತ್ರಿ ಮೋದಿಯವರ ವರ್ಚಸ್ಸಿಗೆ ಧಕ್ಕೆ ತಂದಿದೆ. ಇಂಥ ಘಟನೆಗಳು ಅವರು ಬಯಸುವ ವಿದೇಶಿ ಬಂಡವಾಳ ಹೂಡಿಕೆಯ ಮೇಲೆ ನಿರ್ಣಾಯಕ ಪರಿಣಾಮ ಬೀರಲಿವೆ. ಅವರ ವಿಶ್ವನಾಯಕನಾಗುವ ಕನಸು ಮತ್ತೆ ದೂರ ದೂರ ಸಾಗುತ್ತಿದೆ. 

ದಿನದಿಂದ ದಿನಕ್ಕೆ ಅಪಮೌಲ್ಯಗೊಳ್ಳುತ್ತಿರುವ ರೂಪಾಯಿ, ಬಂಡವಾಳ ಹೂಡಿಕೆಯಲ್ಲಿ ಹಿಂಜರಿಕೆ, ರೈತರ ಸಾವು ಇತ್ಯಾದಿ ಪ್ರಮುಖ ಸಮಸ್ಯೆಗಳನ್ನು ತಾತ್ಕಾಲಿಕವಾಗಿ ಮರೆಯಲು ಇಂಥ ಘಟನೆಗಳು ಸಹಕರಿಸುತ್ತವೆ. ಪ್ರಜಾಪ್ರಭುತ್ವದಲ್ಲಿ ಭಿನ್ನಮತವನ್ನು ಮತ್ತು ಯೋಚಿಸುವ ಹಕ್ಕನ್ನು ಹತ್ತಿಕ್ಕುವುದಕ್ಕಿಂತ ದೊಡ್ಡದಾದ ರಾಷ್ಟ್ರ ದ್ರೋಹ ಬೇರಿಲ್ಲ. ಮಕ್ಕಳು ಕೂಗಿದ ಘೋಷಣೆ ಯಾವ ಹಿಂಸೆಗೆ ಹಾದಿ ಮಾಡಿಕೊಟ್ಟಿತೋ ಪೊಲೀಸರೇ ಹೇಳಬೇಕು. ಇಂದಿರಾ ಗಾಂಧಿಅವರು ಹೀಗೆ ಮಾಡಿದಾಗ ಅದನ್ನು ತೀವ್ರವಾಗಿ ಪ್ರತಿಭಟಿಸಿದವರೇ ಈಗ ಹೀಗೆ ಮಾಡುತ್ತಿರುವುದು ಇತಿಹಾಸದ ಕ್ರೂರ ವ್ಯಂಗ್ಯವಲ್ಲದೆ ಮತ್ತೇನಲ್ಲ.

(ಲೇಖಕ ಜೆಎನ್‌ಯು ‘ಭಾರತೀಯ ಭಾಷೆಗಳ ಕೇಂದ್ರ’ದಲ್ಲಿ ಕನ್ನಡ ಪ್ರೊಫೆಸರ್)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT