ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಬೆಟನ್ನರ ಫುಟ್‌ಬಾಲ್‌ ಪ್ರೀತಿ

Last Updated 1 ಮೇ 2016, 19:44 IST
ಅಕ್ಷರ ಗಾತ್ರ

ಬಿರು ಬಿಸಿಲು. ಸುತ್ತ ಕಾಡು ಇದ್ದರೂ ನೆತ್ತಿಯ ಮೇಲೆ ಹೊಳೆಯುತ್ತಿದ್ದ ಸೂರ್ಯನ ಧಗೆ ಹೇಳತೀರದು. ಅಲ್ಲಿದ್ದವರು ಇದರ ಪರಿವೆಯೇ ಇಲ್ಲದವರಂತೆ ಆಟದಲ್ಲಿ ತಲ್ಲೀನರಾಗಿದ್ದರು. ಅಂಗಣದಲ್ಲಿ ಉಭಯ ತಂಡಗಳು ಪ್ರಾಣ ಪಣಕ್ಕಿಟ್ಟವರಂತೆ ಸೆಣಸುತ್ತಿದ್ದರೆ ಬದಿಯಲ್ಲಿ ಕುಳಿತವರು, ಪೆವಿಲಿಯನ್‌ ಮೇಲಿದ್ದವರು ಸೋಲು–ಗೆಲುವಿನ ಲೆಕ್ಕಾಚಾರದಲ್ಲಿ ಮುಳುಗಿದ್ದರು.

ಟಿಬೆಟನರು ಪ್ರತಿ ವರ್ಷ ಹಮ್ಮಿಕೊಳ್ಳುವ ಫುಟ್‌ಬಾಲ್ ಟೂರ್ನಿಯಲ್ಲಿ ಇಂಥ ನೋಟ ಸಾಮಾನ್ಯ. ಈ ವರ್ಷ ಈ ಅಪರೂಪದ ಕ್ಷಣಗಳಿಗೆ ಸಾಕ್ಷಿಯಾದದ್ದು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಟಿಬೆಟನ್‌ ಸೆಟ್ಲ್‌ಮೆಂಟ್‌. ನಿರಾಶ್ರಿತ ಟಿಬೆಟನರು ವಾಸಿಸುವ ದೇಶದ ವಿವಿಧ ಪ್ರದೇಶಗಳ ಮುಂಡಗೋಡ ಕೂಡಾ ಒಂದು.  ಇಲ್ಲಿನ ಸಂಸ್ಥೆಗಳಿಗೆ ಸೋಮವಾರ ರಜಾ ದಿನ.

ಏಪ್ರಿಲ್‌ 2ರಿಂದ 14ರ ವರೆಗೆ ನಡೆದ ಟೂರ್ನಿಯ ಎಲ್ಲ ಪಂದ್ಯಗಳಿಗೂ ಪ್ರೇಕ್ಷಕರು ಸಾಕಷ್ಟು ಇದ್ದರು. ಅವುಗಳ ನಡುವಿನ ಎರಡು ಸೋಮವಾರಗಳಲ್ಲಂತೂ ಫುಟ್‌ಬಾಲ್‌ ಪ್ರಿಯರು ಕಿಕ್ಕಿರಿದು ತುಂಬಿದ್ದರು. ಧಾರ್ಮಿಕ ಶಿಕ್ಷಣ ಪಡೆಯುತ್ತಿರುವವರು ಕೂಡ ಆಟಕ್ಕೆ ಮನಸೋತು ಕೇಕೆ ಹಾಕಿದ್ದರು. ಮುಂಡಗೋಡದಲ್ಲಿ ಐದು ವರ್ಷಗಳ ನಂತರ ಟೂರ್ನಿ ನಡೆದದ್ದು ಅವರ ಉತ್ಸಾಹ ಹೆಚ್ಚಲು ಕಾರಣವಾಗಿತ್ತು.

ಟಿಬೆಟನರ ವಾರ್ಷಿಕ ಫುಟ್‌ಬಾಲ್‌ ಉತ್ಸವಕ್ಕೆ ಮೂರೂವರೆ ದಶಕದ ಇತಿಹಾಸವಿದೆ. ಧರ್ಮಗುರು ದಲೈಲಾಮಾ ಅವರ ತಾಯಿ ಸ್ಮರಣಾರ್ಥ 1981ರಲ್ಲಿ ಶುರು ಮಾಡಿದ ಟೂರ್ನಿ ಆರಂಭದಲ್ಲಿ ಧರ್ಮಶಾಲಾದ ಟಿಬೆಟನ್ ಚಿಲ್ಡ್ರನ್ಸ್‌ ವಿಲೇಜ್‌ನಲ್ಲಿ ನಡೆಯುತ್ತಿತ್ತು. ಮೊದಲ ಎರಡು ದಶಕದಲ್ಲಿ ಸರ್ಕಾರೇತರ ಸಂಸ್ಥೆಗಳು ಮತ್ತು ವೈಯಕ್ತಿಕ ದೇಣಿಗೆಯೇ ಇದಕ್ಕೆ ಆಶ್ರಯವಾಗಿತ್ತು. ನಂತರ ಟೂರ್ನಿಗೂ ಟಿಬೆಟನರ ಫುಟ್‌ಬಾಲ್‌ಗೂ ಮಹತ್ವದ ತಿರುವು ಲಭಿಸಿತು.

2002ರಲ್ಲಿ ಟಿಬೆಟನ್‌ ರಾಷ್ಟ್ರೀಯ ಕ್ರೀಡಾ ಸಂಸ್ಥೆ ಸ್ಥಾಪನೆಯಾಗುವ ಮೂಲಕ ಫುಟ್‌ಬಾಲ್‌ ಟೂರ್ನಿಗೆ ಹೊಸ ಆಯಾಮ ಲಭಿಸಿತು. ಟೂರ್ನಿಯ ಆಯೋಜನೆ ನೆಪದಲ್ಲಿ ಟಿಬೆಟನ್‌ ಸೆಟ್ಲ್‌ಮೆಂಟ್‌ಗಳಲ್ಲಿ ಮೈದಾನಗಳು, ಪೆವಿಲಿಯನ್ ಇತ್ಯಾದಿ ನಿರ್ಮಾಣವಾಗತೊಡಗಿದವು. ಮುಂಡಗೋಡ ಸೆಟ್ಲ್‌ಮೆಂಟ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಸುಂದರ ಪೆವಿಲಿಯನ್‌ ನಿರ್ಮಾಣವಾಗುವುದಕ್ಕೂ ಈ ಟೂರ್ನಿಯೇ ಕಾರಣ.


‘ಸಂಸ್ಥೆ ಆರಂಭಗೊಂಡ ಮೊದಲ ನಾಲ್ಕು ವರ್ಷ ಟೂರ್ನಿ ಧರ್ಮಶಾಲಾದಲ್ಲೇ ನಡೆಯುತ್ತಿತ್ತು. ನಂತರ ಬೇರೆ ಬೇರೆ ಕಡೆಗೆ ವಿಸ್ತರಿಸಲಾಯಿತು. ಧರ್ಮಶಾಲಾ ಹೊರತಾಗಿ ಅತಿಹೆಚ್ಚು ಬಾರಿ ಟೂರ್ನಿ ಆಯೋಜಿಸಿದ ಕೀರ್ತಿ ಮುಂಡಗೋಡಕ್ಕೆ ಸಲ್ಲುತ್ತದೆ. ಇಲ್ಲಿ 2008 ಮತ್ತು 2011ರಲ್ಲೂ ಪಂದ್ಯಗಳು ನಡೆದಿದ್ದವು.

‘ಟೂರ್ನಿಯ ಯಶಸ್ಸು ಮತ್ತು ನಮ್ಮವರಿಗೆ ಫುಟ್‌ಬಾಲ್‌ನಲ್ಲಿರುವ ಆಸಕ್ತಿ ಕಂಡು 2003ರ ನಂತರ ಪ್ರವೇಶಕ್ಕೆ ಟಿಕೆಟ್‌ ಇರಿಸಲಾಗುತ್ತಿದೆ. ₹100 ಕೊಟ್ಟು ಮೂರು ಪಂದ್ಯಗಳನ್ನು ವೀಕ್ಷಿಸಲು ನಮ್ಮವರು  ಹಿಂದೆ ಮುಂದೆ ನೋಡುವುದಿಲ್ಲ’ ಎನ್ನುತ್ತಾರೆ ಟಿಬೆಟನ್‌ ರಾಷ್ಟ್ರೀಯ ಕ್ರೀಡಾ ಸಂಸ್ಥೆಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಕೆಲ್ಸಂಗ್‌ ದೊಂಡುಲ್ಪ್‌.

‘ಟಿಬೆಟನರಿಗೆ ಫುಟ್‌ಬಾಲ್‌ ಎಂದರೆ ಜೀವ. ಬ್ಯಾಸ್ಕೆಟ್‌ಬಾಲ್ ಕೂಡ ಆಡುವವರು ಇದ್ದಾರೆ. ಆದರೆ ಹೆಚ್ಚಿನವರು ಕಾಲ್ಚಳಕದ ಆಟಕ್ಕೆ ಮಾರುಹೋಗಿದ್ದಾರೆ. ನಮ್ಮವರ ದೇಹ ಸಹಜವಾಗಿ ಈ ಆಟಕ್ಕೆ ಒಗ್ಗುವಂತಿದೆ ಎಂದೇ ನನ್ನ ಭಾವನೆ. ಕ್ರಿಕೆಟ್‌ ಜಗತ್ತು ಇಷ್ಟೆಲ್ಲ ಬೆಳೆದಿದ್ದರೂ ಟಿಬೆಟನರು ಆ ಆಟದ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ. ಆದ್ದರಿಂದ ನಮ್ಮವರು ಮನಸ್ಸನ್ನು ಕೂಡ ಫುಟ್‌ಬಾಲ್‌ಗೆ ಮಾರಿದ್ದಾರೆ ಎಂದೆನಿಸುತ್ತದೆ’ ಎಂದು ದೊಂಡುಲ್ಪ್ ಹೇಳಿದರು.

‘ಫುಟ್‌ಬಾಲ್‌ ವೀಕ್ಷಿಸಲು ಟೆಬೆಟನರು ತೋರಿಸುವ ಆಸಕ್ತಿ ಮತ್ತು ಆಟದಲ್ಲಿ ಅವರು ಸಂಪಾದಿಸಿರುವ ಪ್ರೌಢಿಮೆ ಮೆಚ್ಚುವಂಥಾದ್ದು. ಅರ್ಪಣಾಭಾವದಿಂದ ಆಡುವ ಪಂದ್ಯಗಳನ್ನು ನಡೆಸಿಕೊಡುವುದು ಸಂತಸದ ವಿಷಯ’ ಎಂಬುದು ಟೂರ್ನಿಯ ಕಮಿಷನರ್ ಆಗಿದ್ದ ಕರ್ನಾಟಕದ ಇರ್ಷಾದ್‌ ಅಹಮ್ಮದ್ ಮಕ್ಕೂಬಾಯಿ ಅವರ ಅಭಿಪ್ರಾಯ.
*
ಅರ್ಧ ಕೋಟಿ ವೆಚ್ಚದ ಪೆವಿಲಿಯನ್‌
ಮುಂಡಗೋಡದಲ್ಲಿ ಟಿಬೆಟನ್ ಫುಟ್‌ಬಾಲ್ ಟೂರ್ನಿ ನಡೆದಾಗಲೆಲ್ಲ ಆತಿಥ್ಯ ವಹಿಸುವುದು ಅಲ್ಲಿನ ದುಗುಲಿಂಗ್ ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್‌ (ಡಿ.ವೈ.ಎಸ್.ಎ). ಕಳೆದ ಎರಡು ಬಾರಿ ಏಳನೇ ನಂಬರ್‌ ಕ್ಯಾಂಪ್‌ನಲ್ಲಿ ಪಂದ್ಯಗಳನ್ನು ನಡೆಸಲಾಗಿತ್ತು. ಈ ಬಾರಿ ಮೂರನೇ ನಂಬರ್‌ ಕ್ಯಾಂಪ್‌ನಲ್ಲಿ ಶಾಶ್ವತ ಪೆವಿಲಿಯನ್‌ ಮತ್ತು ಮೈದಾನ ನಿರ್ಮಿಸಲಾಗಿದೆ.

‘ಸುಮಾರು ₹ 70 ಲಕ್ಷ ವೆಚ್ಚದಲ್ಲಿ ಪೆವಿಲಿಯನ್‌ ನಿರ್ಮಿಸಲಾಗಿದೆ. ಇಲ್ಲಿನ ಎಲ್ಲ ಒಂಬತ್ತು ಕ್ಯಾಂಪ್‌ಗಳಿಗೂ ಈಗ ಇದುವೇ ಮುಖ್ಯ ಮೈದಾನ. ಬೆಳಿಗ್ಗೆ ಮತ್ತು ಸಂಜೆ ಇಲ್ಲಿ ನಿತ್ಯವೂ ಅಭ್ಯಾಸ ನಡೆಯುತ್ತದೆ. ಫುಟ್‌ಬಾಲ್‌ ಬೆಳವಣಿಗೆಗೆ ಇದು ಮಹತ್ವದ ಕೊಡುಗೆಯಾಗಲಿದೆ. ಸಾರ್ವಜನಿಕರ ಸಹಕಾರದಿಂದ ಮೈದಾನವನ್ನು ಅಭಿವೃದ್ಧಿ ಮಾಡಿ ಸ್ಟೇಡಿಯಂ ನಿರ್ಮಿಸಬೇಕು. ಮುಂದಿನ ಟೂರ್ನಿಯ ವೇಳೆ ಈ ಕನಸು ಸಾಕಾರವಾಗುವ ನಿರೀಕ್ಷೆ ಇದೆ’ ಎನ್ನುತ್ತಾರೆ ಡಿ.ವೈ.ಎಸ್.ಎ ಅಧ್ಯಕ್ಷ ಪಸ್ಸಂಗ್‌ ತ್ಸೆರಿಂಗ್‌.

‘ಟಿಬೆಟನರಿಗೆ ದೇಶದ ಯಾವುದೇ ತಂಡದಲ್ಲಿ ಆಡಲು ಅವಕಾಶವಿಲ್ಲ. ಆದರೆ ಮುಂಡಗೋಡ ಸೆಟ್ಲ್‌ಮೆಂಟ್‌ನವರು ಇಲ್ಲಿನ ಸ್ಥಳೀಯ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಮುಂಡಗೋಡ ‘ಎ’ ಮತ್ತು ‘ಬಿ’ ತಂಡಗಳಲ್ಲಿ ನಮ್ಮವರು ಸಾಕಷ್ಟು ಆಟಗಾರರು ಇದ್ದಾರೆ. ರಾಜ್ಯ ಮಟ್ಟದ ಟೂರ್ನಿಗಳಲ್ಲಿ ಆಡಿ ಪ್ರಶಸ್ತಿ ಗೆಲ್ಲುತ್ತಿದ್ದಾರೆ’ ಎಂದು ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT