ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಮಪ್ಪಯ್ಯನವರ ‘ಸೊಬಗಿನ ಬಳ್ಳಿ’

Last Updated 23 ಮೇ 2015, 19:30 IST
ಅಕ್ಷರ ಗಾತ್ರ

ಮುಳಿಯ ತಿಮ್ಮಪ್ಪಯ್ಯನವರ ‘ಸೊಬಗಿನ ಬಳ್ಳಿ’ ಎನ್ನುವ ಕಾವ್ಯ ಕೃತಿಯು ಮೊದಲಿಗೆ ಪ್ರಕಟವಾದುದು 1917ರಲ್ಲಿ, ಮೈಸೂರಿನ ‘ಕಾದಂಬರೀ ಸಂಗ್ರಹ’ ಎಂಬ ಮಾಸಪತ್ರಿಕೆಯಲ್ಲಿ. ಪ್ರಸ್ತುತ ಆವೃತ್ತಿಯು ಪುಸ್ತಕ ರೂಪದಲ್ಲಿ ಮೊದಲ ಬಾರಿಗೆ 1931ರಲ್ಲಿ ಪ್ರಕಟಗೊಂಡಿದೆ. ಮಾಸಪತ್ರಿಕೆಯಲ್ಲಿ ಏಳು ಅಧ್ಯಾಯಗಳಿದ್ದು, ಪುಸ್ತಕವಾಗಿ ಪ್ರಕಟವಾದಾಗ ಎಂಟು ಅಧ್ಯಾಯಗಳಾದವು ಎನ್ನುವುದಷ್ಟೆ ವ್ಯತ್ಯಾಸ. ಅಷ್ಟಮ ಡೆಮಿ ಆಕಾರದ 90 ಪುಟಗಳ ಈ ಪುಸ್ತಕದ ಅಂದಿನ ಬೆಲೆ ಎಂಟಾಣೆ. ಮಂಗಳೂರಿನ ಸೈಂಟ್ ಎಲೋಸಿಯಸ್ ಕಾಲೇಜಿನ ಕರ್ಣಾಟಕ ಸಂಘ ಪ್ರಕಟಿಸಿದ ಈ ಕೃತಿಯನ್ನು ಮಂಗಳೂರಿನ ಕೆನರಾ ಛಾಪಖಾನೆಯವರು ಅಚ್ಚುಹಾಕಿರುತ್ತಾರೆ.

1988ರ ಮಾರ್ಚ್‌ 3ರಂದು ದಕ್ಷಿಣ ಕನ್ನಡದ ವಿಟ್ಲದ ಸಮೀಪದ ಮುಳಿಯದಲ್ಲಿ ಹುಟ್ಟಿದ ತಿಮ್ಮಪ್ಪಯ್ಯನವರು ತಮ್ಮ 62ನೇ ಪ್ರಾಯದಲ್ಲಿ ಹೃದ್ರೋಗದಿಂದ (ಜ. 16, 1950) ಮದರಾಸಿನಲ್ಲಿ ತೀರಿಕೊಂಡರು. 1906–1910ರವರೆಗೆ ಕೇರಳದ ತಿರುವನಂತಪುರದಲ್ಲಿ ಸಂಸ್ಕೃತದಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದ ಮುಳಿಯರು, ಅದೇ ಆಸುಪಾಸಿನ ಕಾಲದಲ್ಲಿ ಮೈಸೂರಿನಲ್ಲಿ ಸಂಗೀತಾಧ್ಯಯನ  ಮಾಡಿ ಮಂಗಳೂರಿನಲ್ಲಿ ವಿದ್ವಾನ್ ಪದವೀಧರರಾದರು. 1911ರಿಂದ 1918ರವರೆಗೆ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಅಧ್ಯಾಪಕರಾಗಿದ್ದ ಅವರು, 1914–1948ರವರೆಗೆ ಮಂಗಳೂರಿನ ಸೈಂಟ್ ಎಲೋಸಿಯಸ್ ಕಾಲೇಜ್‌ನಲ್ಲಿ ಕನ್ನಡ ಪಂಡಿತರಾಗಿದ್ದು ನಿವೃತ್ತಿ ಹೊಂದಿದರು.

1914ರಿಂದ 1919ರವರೆಗೆ ಅಯ್ಯನವರು ‘ಕನ್ನಡ ಕೋಗಿಲೆ’ ಎನ್ನುವ ಮಾಸಪತ್ರಿಕೆಯನ್ನು ನಡೆಸಿದರು. 1931ರಲ್ಲಿ ಕಾರವಾರದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿದ್ದ ಅವರು, 1941ರಲ್ಲಿ ಲಕ್ಷ್ಮೇಶ್ವರದಲ್ಲಿ ನಡೆದ ಕನ್ನಡದ ಮಹಾಕವಿ ಪಂಪನ ಸಹಸ್ರ ಸಾಂವತ್ಸರಿಕೋತ್ಸವದ ಪ್ರತಿಷ್ಠಿತ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದರು. ಪಂಪ ಮಹಾಕವಿಯನ್ನು ಕುರಿತು ಅಧಿಕಾರವಾಣಿಯಿಂದ ನುಡಿಯಬಲ್ಲ ಕೆಲವೇ ವಿದ್ವಾಂಸರಲ್ಲಿ ಮುಳಿಯ ತಿಮ್ಮಪ್ಪಯ್ಯ ಅವರು ಅಗ್ರಗಣ್ಯರಾಗಿದ್ದರು. ‘ನಾಡೋಜ ಪಂಪ’ (1938) ಎನ್ನುವ ಅವರ ಕೃತಿ ಇದಕ್ಕೆ ಸಾಕ್ಷಿ. ಮುಳಿಯ ತಿಮ್ಮಪ್ಪಯ್ಯ ಅವರು ಪ್ರಾಚೀನ ಸಾಂಪ್ರದಾಯಿಕ ವಿದ್ವತ್ತು ಹಾಗೂ ಆಧುನಿಕ ಮಾರ್ಗದ ಚಿಕಿತ್ಸಕ ಮನೋಧರ್ಮಗಳೆರಡನ್ನೂ ಅಳವಡಿಸಿಕೊಂಡಿದ್ದ ಕನ್ನಡದ ಕೆಲವೇ ವಿದ್ವಾಂಸರಲ್ಲಿ ಒಬ್ಬರು.

ಮುಳಿಯರು ಎಷ್ಟು ಸಾತ್ವಿಕ ವ್ಯಕ್ತಿಗಳಾಗಿದ್ದರು ಎನ್ನುವುದಕ್ಕೆ ಅವರನ್ನು ಕುರಿತು ದಂತಕತೆಗಳು ಹುಟ್ಟಿಕೊಂಡು ಬಿಟ್ಟಿವೆ. ಅವರನ್ನು ಅವರ ಸ್ನೇಹಿತರೆಲ್ಲರೂ ಮುಳಿಯ ತಿಮ್ಮಪ್ಪಯ್ಯ ಎನ್ನುವುದಕ್ಕೆ ಬದಲು ತಿಮ್ಮಪ್ಪಯ್ಯ ಮುಳಿಯ (ತಿಮ್ಮಪ್ಪಯ್ಯ ಕೋಪಿಸಿಕೊಳ್ಳುವುದಿಲ್ಲ) ಎಂದೇ ಕರೆಯುತ್ತಿದ್ದರಂತೆ. ಕೊಡಲಿ (ನೀಡಲಿ) ಎನ್ನುವ ಅರ್ಥದಲ್ಲಿ ಆ ಶಬ್ದವು ಕುಠಾರಪ್ರಾಯವಾದ್ದರಿಂದ ಕೊಡಲಿ ಎನ್ನುವ ಶಬ್ದವನ್ನೇ ಮುಳಿಯರು ಪ್ರಯೋಗಿಸುತ್ತಿರಲಿಲ್ಲವಂತೆ. ಹಾಗೆಯೇ ಅವರಿಗೆ ವಿಪರೀತ ಕೋಪ ಬಂದಾಗ ದುರ್ಬುದ್ಧಿ ಎನ್ನುವ ಶಬ್ದವನ್ನು ಪ್ರಯೋಗಿಸುತ್ತಿದ್ದರಂತೆ. ಅದೇ ಅವರು ಪ್ರಯೋಗಿಸುತ್ತಿದ್ದ ಅತ್ಯಂತ ಕೆಟ್ಟ ಬೈಗುಳದ ಮಾತು.

ಮುಳಿಯರ ಕನ್ನಡ ಸಾಹಿತ್ಯ ಸೇವೆ ಅಪಾರವಾದದ್ದು. ಅವರು ಒಟ್ಟು 22 ಕೃತಿಗಳನ್ನು ರಚಿಸಿರುತ್ತಾರೆ. ಅವುಗಳಲ್ಲಿ ‘ಸೂರ್ಯಕಾಂತಿ ಕಲ್ಯಾಣ’ ಎನ್ನುವ ಯಕ್ಷಗಾನ ಕೃತಿಯು ಇನ್ನೂ ಪ್ರಕಟವಾಗಿಲ್ಲ. ಇನ್ನು ಅವರ ‘ಕಾವ್ಯ ಸಮಯ’, ‘ಸಂಸ್ಕೃತಿ’ ಹಾಗೂ ‘ರಾವುತ ರಂಗಪ್ಪ’ (1941, ಗೀತನಾಟಕ)– ಇವು ಮೂರೂ ಕೃತಿಗಳು ಅಪೂರ್ಣವಾಗಿ ಉಳಿದಿವೆ.

ಪೂರ್ಣವಾಗಿರುವ 18 ಪ್ರಕಟಿತ ಕೃತಿಗಳು ಹೀಗಿವೆ: ‘ಚಂದ್ರಾವಳಿ ವಿಲಾಸ’ (1913), ‘ನಡತೆಯ ನಾಡು’ (1917), ‘ಸೊಬಗಿನ ಬಳ್ಳಿ’ (1917), ‘ಬಡ ಹುಡುಗಿ’, ‘ಪ್ರೇಮಪಾಶ’, ‘ಹಗಲಿರುಳು’ (1918), ‘ಪಶ್ಚಾತ್ತಾಪ’ ( 1934), ‘ಆದಿಪುರಾಣ ಸಂಗ್ರಹ’ (1938), ‘ನವನೀತ ರಾಮಾಯಣ’ (1938), ‘ನಾಡೋಜ ಪಂಪ’ (1938), ‘ಕವಿರಾಜಮಾರ್ಗ ವಿವೇಕ’ - ಎರಡು ಭಾಗಗಳು, ‘ಸಮಸ್ತ ಭಾರತ ಸಾರ’ (1941), ‘ತ್ರಿಪುರದಾಹ’ (1941), ‘ಶಿವರಾಮ ಚಾರಿತ್ರ’ (1943), ‘ಪಾರ್ತಿಸುಬ್ಬ’ (1945), ‘ವೀರ ಬಂಕೆಯ’ (1948), ‘ಕನ್ನಡ ಸಾಹಿತ್ಯ ಮತ್ತು ಇತರ ಉಪನ್ಯಾಸಗಳು’ (1950) ಹಾಗೂ ‘ಕನ್ನಡ ನಾಡೂ ದೇಸಿ ಸಾಹಿತ್ಯವೂ’ (1954).  ಇವುಗಳಲ್ಲಿ ಮೊದಲ ಮೂರು ಕೃತಿಗಳಾದ ‘ಚಂದ್ರಾವಳಿ ವಿಲಾಸ’, ‘ನಡತೆಯ ನಾಡು’ ಹಾಗೂ ‘ಸೊಬಗಿನ ಬಳ್ಳಿ’ ಇವುಗಳು ಅಚ್ಚಗನ್ನಡದ ಕೃತಿಗಳು ಎನ್ನಿಸಿಕೊಂಡಿವೆ. ಮುಳಿಯರ ಜೊತೆಗೆ ದಕ್ಷಿಣ ಕನ್ನಡದ ಸೇಡಿಯಾಪು ಕೃಷ್ಣಭಟ್ಟ, ಕಡೆಂಗೋಡ್ಲು ಶಂಕರಭಟ್ಟ, ಪಂಜೆ ಮಂಗೇಶರಾಯರು ಹಾಗೂ ಮಂಜೇಶ್ವರದ ಗೋವಿಂದ ಪೈ– ಇವರೆಲ್ಲರೂ ಸಂಸ್ಕೃತದಲ್ಲಿ ಆಳವಾದ ಪಾಂಡಿತ್ಯ ಹೊಂದಿದ್ದವರು. ಆದರೂ ಇವರೆಲ್ಲರ ಗಮನ ಅಚ್ಚಗನ್ನಡದ ಮೇಲಿದೆ ಎನ್ನುವುದು ಗಮನಾರ್ಹ. ಇದು ದಕ್ಷಿಣ ಕನ್ನಡದ ಲೇಖಕರ ವೂಶಿಷ್ಟ್ಯವೂ ಹೌದು.

ಪ್ರಸ್ತುತ ಕೃತಿಗೆ ಸೈಂಟ್ ಎಲೋಸಿಯಸ್ ಕಾಲೇಜಿನ ಕರ್ಣಾಟಕ ಸಂಘದ ಅಂದಿನ ಕಾರ್ಯದರ್ಶಿಗಳಾಗಿದ್ದ ಯು. ದೇಜು ಅವರು ಮುನ್ನುಡಿಯನ್ನು ಬರೆದಿರುತ್ತಾರೆ. ಕರ್ಣಾಟಕ ಸಂಘದ ಅಧ್ಯಕ್ಷರಾಗಿದ್ದ ಗ್ರಂಥಕರ್ತರಾದ ಮುಳಿಯರು ತಮ್ಮ ಮುಮ್ಮಾತಿನಲ್ಲಿ ಈ ಗ್ರಂಥವನ್ನು ಕುರಿತು ಹೀಗೆ ಹೇಳಿರುತ್ತಾರೆ: ‘‘ಕಬ್ಬದ ಕಥಾವಸ್ತುವೆಂದರೆ ಆಂಡಯ್ಯನದರ ಮುಂದಿನ ಭಾಗವು; ಎಂದರೆ ಭಾಗವತದೊಳಗಣ ಶಂಬರಾಸುರ ವಧೆಯೆ. ಸಂದರ್ಭಾನುಸಾರ ಕಥೆಯಲ್ಲಿ ಸ್ವಲ್ಪ ವ್ಯತ್ಯಾಸವನ್ನು ಮಾಡಬೇಕಾಯಿತು. ಈ ನನ್ನ ಪ್ರಯತ್ನವನ್ನು ನೋಡಿ ಕನ್ನಡಿಗರು ಸಂಸ್ಕೃತ ವಿರೋಧಿ ಇವನು ಎಂದು ಭಾವಿಸಬಾರದು.

ಸಂಸ್ಕೃತಾಭಿಮಾನವು ಎಲ್ಲರಂತೆ ನನ್ನಲ್ಲಿಯೂ ಇದೆ. ನಮ್ಮ ದೇಶದಲ್ಲಿ ಮಾತ್ರವಲ್ಲ; ಇಡಿ ಪ್ರಪಂಚದಲ್ಲಿಯೂ ನಮ್ಮ ಸಂಸ್ಕೃತವು ಎಡೆವಡೆದಿದೆಯೆಂಬುದು ಅಭಿಮಾನಾಸ್ಪದವು. ಅದರಿಂದೊದಗಿದ ಸಂಸ್ಕೃತಿ ಮಾಸಿಹೋಗುವುದೂ ಅಲ್ಲ; ಮರೆಯತಕ್ಕುದೂ ಅಲ್ಲ; ಅಷ್ಟೆ ಅಲ್ಲ; ಕನ್ನಡ ಸಾಹಿತ್ಯದಿಂದ ಸಂಸ್ಕೃತವನ್ನು ನೂಕಿ ಬಿಡಬೇಕೆಂಬ ಭಾವನೆಯೂ ನನ್ನದಲ್ಲ: ಹಾಗೆಲ್ಲ ಭಾವಿಸುವುದು ಅಸಾಧ್ಯವಷ್ಟೆ ಅಲ್ಲ; ಅದೊಂದು ಪಾಪವೆಂದೆ ನನ್ನೆಣಿಕೆ.

ಅದರಿಂದಲೆ ಈ ಮುನ್ನುಡಿಯನ್ನು  ಕರ್ಣಾಟಕದಲ್ಲೆ ಬರೆದಿರುವುದು. ಆದರೆ ಎಲ್ಲೆಲ್ಲಿಯೂ ಸಂಸ್ಕೃತವನ್ನು ತುರುಕಿಸಬೇಕು; ಸಂಸ್ಕೃತವನ್ನುಳಿದರೆ ಕನ್ನಡದ ಅಸ್ತಿತ್ವವೇ ಇಲ್ಲದಂತೆ; ಎಂದು ಹೇಳುವವರ ಸಂಸ್ಕೃತಾತಿಕ್ರಮವು ಮಾತ್ರ ಯೋಗ್ಯವಲ್ಲವೆಂಬುದನ್ನು ತಿಳಿಸಲಿಕ್ಕಾಗಿ, ಈಗಿನ ಕಾಲದಲ್ಲಿಯೂ ಇರುವ ಕನ್ನಡದ ಸ್ವಾತಂತ್ರ್ಯವನ್ನು ತೋರಿಸಲಿಕ್ಕಾಗಿ ಮಾತ್ರವೆ ಇದನ್ನು ಬರೆದಿರುವುದು. ಇದರಲ್ಲಿಯೂ ಒಂದೆರಡು ಸಂಸ್ಕೃತದ ನಾಮಪದಗಳನ್ನು ಹಾಗೆಯೆ ಇರಿಸಿದೆ. ಈ ಅಚ್ಚಗನ್ನಡವು ಈಗಿನ ಹೊಸಗನ್ನಡ ಸಾಹಿತ್ಯಕ್ಕೂ ಸಹಾಯವಾಗಬಹುದೆಂದು ನಂಬುತ್ತೇನೆ’’.

ಹಳಗನ್ನಡದಲ್ಲಿ ಆಂಡಯ್ಯ (ಕ್ರಿ.ಶ. 1225) ಕವಿ ಸಂಸ್ಕೃತ ಶಬ್ದಗಳನ್ನೇ ಬಳಸದೆ ಅಚ್ಚಗನ್ನಡದಲ್ಲಿ ಕಾವ್ಯ ಬರೆದ ಉದಾಹರಣೆ ಇದೆ. ಅಚ್ಚಗನ್ನಡ ಶಬ್ದ ಇಲ್ಲದಿದ್ದಾಗ ಸಂಸ್ಕೃತ ಶಬ್ದಕ್ಕೆ ತದ್ಭವ ಸೃಷ್ಟಿಸಿಕೊಂಡು ಆಂಡಯ್ಯ ಪ್ರಯೋಗಿಸಿದ್ದಾನೆ. ಮುಳಿಯ ತಿಮ್ಮಪ್ಪಯ್ಯನವರು ಆಂಡಯ್ಯನ ಮಾರ್ಗವನ್ನು ಹಿಡಿದಿರುವುದರಿಂದ ಅವರನ್ನು ‘ಅಭಿನವ ಆಂಡಯ್ಯ’ ಎಂದು ಭಾವಿಸಲಿಕ್ಕೆ ಅಡ್ಡಿಯಿಲ್ಲ. ಕನ್ನಡದ ಕಾವ್ಯದ ಮೇಲಣ ಸಂಸ್ಕೃತದ ಬಲವಾದ ಹಿಡಿತಕ್ಕೆ ಅಚ್ಚಗನ್ನಡದಲ್ಲಿ ಕಾವ್ಯ ಬರೆಯುವುದರ ಮೂಲಕ ಆಂಡಯ್ಯ ಹಾಗೂ ಮುಳಿಯ ತಿಮ್ಮಪ್ಪಯ್ಯ ಅವರುಗಳು ಸಾಂಕೇತಿಕವಾಗಿ ಪ್ರತಿಭಟನೆಯನ್ನು ಒಡ್ಡಿರುವ ಸಾತ್ವಿಕ ಕ್ರಮ ಇದು ಎಂದು ರೂಪಕಾತ್ಮಕವಾಗಿ ಇದನ್ನು ಪರಿಭಾವಿಸಬಹುದು.

ಮುನ್ನುಡಿಯಲ್ಲಿ ಅಯ್ಯನವರು ಕಾಲೇಜಿನಲ್ಲಿ ಕನ್ನಡದ ಏಳಿಗೆಗೆ ಸಹಕಾರವನ್ನು ನೀಡುತ್ತಿದ್ದ ಕಾಲೇಜಿನ ಪ್ರಿನ್ಸಿಪಾಲರಾಗಿದ್ದ ರೆ. ಫಾದರ್ ಎ. ಅಂಬ್ರೋಸಿ ಎಸ್.ಜೆ. ಅವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ. ತಮ್ಮ ಈ ಕಾವ್ಯದ ಹಸ್ತಪ್ರತಿಯ ಸ್ಖಾಲಿತ್ಯಗಳನ್ನು ತಿದ್ದಿ ಸರಿಪಡಿಸಿ ಸಲಹೆಗಳನ್ನು ನೀಡಿದ್ದ ತಮ್ಮ ಸಹೋದ್ಯೋಗಿ, ಕನ್ನಡದ ಮತ್ತೊಬ್ಬ ದಿಗ್ಗಜ ವಿದ್ವಾನ್ ಸೇಡಿಯಾಪು ಕೃಷ್ಣಭಟ್ಟ ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಿರುತ್ತಾರೆ.

1930ರ ದಶಕ ಕನ್ನಡ ಕಾವ್ಯಲೋಕದಲ್ಲಿ ನವೋದಯವು ಬೀಜಾಂಕುರಗೊಂಡು ವಿಕಾಸವಾಗುತ್ತಿದ್ದ ಕಾಲಘಟ್ಟ. ಆಗ ಕನ್ನಡ ಕಾವ್ಯದಲ್ಲಿ ವಸ್ತು, ರೀತಿ, ತಂತ್ರ, ಛಂದಸ್ಸು ಮುಂತಾದ ಅಂಶಗಳಲ್ಲಿ ಪ್ರಯೋಗಗಳು ನಡೆಯುತ್ತಿದ್ದವು. ಈ ಕಾವ್ಯವೂ ಅದಕ್ಕೆ ಹೊರತಲ್ಲ. ಭಾಷಾಪ್ರಯೋಗದ ದೃಷ್ಟಿಯಿಂದ ಅಚ್ಚಗನ್ನಡದ ಬಳಕೆ ಈ ‘ಸೊಬಗಿನ ಬಳ್ಳಿ’ಯಲ್ಲಿದೆ.

ತೊಂಬತ್ತೆಂಟು ವರ್ಷಗಳ ಹಿಂದೆ ಪ್ರಕಟವಾದ ‘ಸೊಬಗಿನ ಬಳ್ಳಿ’ಯಲ್ಲಿ ಎಂಟು ಮುಗುಳುಗಳಿವೆ (ಮುಗುಳು=ಮೊಗ್ಗು). ಎಂಟೂ ಮುಗುಳುಗಳಿಂದ ಸೇರಿ ಒಟ್ಟು 331 ಪದ್ಯಘಟಕಗಳು ಇಲ್ಲಿವೆ. ಈ ಮುಗುಳುಗಳಲ್ಲಿ ಕವಿ ವಿವಿಧರೀತಿಯ ಛಂದೋಪ್ರಯೋಗಗಳನ್ನು ಮಾಡಿರುವುದು ವಿಶೇಷ. ದ್ವಿತೀಯಾಕ್ಷರ ಪ್ರಾಸವನ್ನು ಇರಿಸಿಯೇ ಈ ಪ್ರಯೋಗಗಳು ನಡೆದಿವೆ. ಮೊದಲನೆಯ ಮುಗುಳು ಚೌಪದಿಯ ಚೌಕಟ್ಟಿನಲ್ಲಿದ್ದರೆ, ಎರಡನೆಯ ಮುಗುಳು ಶರ ಷಟ್ಪದಿಯಲ್ಲಿದೆ. ಮೂರನೆಯ ಮುಗುಳು ಕುಸುಮ ಚೌಪದಿಯಲ್ಲೂ ನಾಲ್ಕನೆಯ ಮುಗುಳು ಲಲಿತರಗಳೆಯಲ್ಲಿಯೂ ಇದೆ. ಐದನೆಯ ಮುಗುಳು ಸಾಂಗತ್ಯದಲ್ಲಿದ್ದರೆ, ಆರನೆಯದು ಮಂದಾನಿಲ ರಗಳೆಯಲ್ಲಿದೆ.

ಏಳು ಮತ್ತು ಎಂಟನೆಯ ಮುಗುಳುಗಳು ಕುಸುಮ ಚೌಪದಿಯಲ್ಲಿವೆ. ಹೀಗೆ ಇಲ್ಲಿ ಮುಳಿಯರು ಮಾತ್ರಾ ಹಾಗೂ ದೇಸೀಲಯದ ಛಂದಸ್ಸುಗಳನ್ನು ಸೂಕ್ತವಾಗಿ ಬಳಸಿದ್ದಾರೆ. ಇದು ಅಚ್ಚಗನ್ನಡದ ಕಾವ್ಯವಾಗಿರುವುದರಿಂದ ಸಂಸ್ಕೃತದ ಅಕ್ಷರ ಛಂದಸ್ಸನ್ನು ಬಳಸದೆ ಇರುವುದು ಔಚಿತ್ಯಪೂರ್ಣವಾಗಿಯೇ ಇದೆ. ಈ ಸಂದರ್ಭದಲ್ಲಿ, ಸುಮಾರು ಅದೇ ಕಾಲಘಟ್ಟದಲ್ಲಿ ನಾಟಕಕಾರ ಸಂಸರು ಬರೆದ ‘ಸಂಸಪದಂ’ ಎನ್ನುವ ಕಾವ್ಯಮೀಮಾಂಸಾ ಕೃತಿಯಲ್ಲಿ ಸಂಸರು ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಯಾವುದನ್ನೂ ಬಿಡದೆ ಅದುವರೆಗೆ ಬಂದಂತಹ ಎಲ್ಲ ರೀತಿಯ ಕನ್ನಡ ಛಂದೋರೂಪಗಳನ್ನು ಬಳಸಿಕೊಂಡು ಬರೆದಿರುವ ಆಶ್ಚರ್ಯದ ಸಂಗತಿ ನೆನಪಿಗೆ ಬರುತ್ತದೆ.

ಇದನ್ನೇ ಕನ್ನಡದ ಶಕ್ತಿ, ಸಾಮರ್ಥ್ಯ, ಸಾಧ್ಯತೆಗಳೆನ್ನುವುದು. ಕನ್ನಡದಂತಹ ಒಂದು ಹಿರಿದಾದ ಭಾಷಾ ಸಾಹಿತ್ಯ ಸಂಸ್ಕೃತಿಗಳ ಪರಂಪರೆಯ ಅಸಾಧ್ಯ ಸಾಧ್ಯತೆಗಳು, ತಾಳಿಕೆ ಬಾಳಿಕೆಗಳು, ತಾಕತ್ತುಗಳು ಇಂತಹ ಕವಿಗಳ ಕಾವ್ಯರಚನಾ ಸ್ವರೂಪದ ಸಂದರ್ಭದಲ್ಲಿ ಎದ್ದು ತೋರುತ್ತದೆ. ಹಿರಿಯ ಕವಿಗಳು ತೋರಿದ ದಾರಿಯನ್ನು ಮುಂದೆಯೂ ಕನ್ನಡ ನಾಡವರು ಬಿಡುವುದಿಲ್ಲ ಎನ್ನುವ ಆಶಯದೊಂದಿಗೆ ಕಾವ್ಯ ಮುಗಿಯುತ್ತದೆ.
ಆ ಪದ್ಯ ಇಂತಿದೆ:
ಅಂದು ಪರಸಲ್ ನಲ್ಮೆ |                                                                                                     
ಯೊಂದಿರ್ಪರಂಡಯ್ಯ |                                                                                            
ನಂದೆಸಗಿದಚ್ಚಗನ್ನಡದಾರಿಯೊಳ್ ||                                                                                                   
ಇಂದುವರೆಗಂ ನಡೆದು |                                                                                                       
ಬಂದಿಹರ್ ಪೋಪರಿಂ |                                                                                                                      
ಮುಂದೆ ಕನ್ನಡ ನಾಡವರ್ ಬಿಡುವರೇ ||

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT