ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿಮ್ಲಾಪುರ ಕಾಡಿಗೆ ಮರುಹುಟ್ಟು

Last Updated 30 ಮೇ 2016, 19:30 IST
ಅಕ್ಷರ ಗಾತ್ರ

ಪರಿಸರ ಹೋರಾಟವನ್ನು ‘ಸೋಲುವ ಯುದ್ಧ’ (Loosing Battle) ಎಂದೇ ಅನೇಕರು ವ್ಯಾಖ್ಯಾನಿಸುತ್ತಾರೆ. ಆದರೆ ಪ್ರಾಮಾಣಿಕ ಕಾಳಜಿಯಿಂದ ನಡೆಸುವ ಹೋರಾಟ, ಸಂಗ್ರಹಿಸುವ ವೈಜ್ಞಾನಿಕ ಪುರಾವೆಗಳು ಜಯ ತಂದುಕೊಡಬಲ್ಲವು. ತುಮಕೂರು ಜಿಲ್ಲೆಯ ತಿಮ್ಲಾಪುರ ಅರಣ್ಯಕ್ಕೆ ಅಭಯಾರಣ್ಯದ ಮಾನ್ಯತೆ ದೊರಕಿದ್ದು ರಾಜ್ಯದ ಪರಿಸರ ಹೋರಾಟ ಪರಂಪರೆಯಲ್ಲಿ ಮಹತ್ವದ ಮೈಲುಗಲ್ಲು ಎನಿಸಿದೆ.

‘ನಂಗೆ ತುಂಬಾ ಖುಷಿ ಆಗ್ತಿದೆ. ಸರ್ಕಾರ ಕೊನೆಗೂ ತಿಮ್ಲಾಪುರ ಕಾಡಿಗೆ ಅಭಯಾರಣ್ಯದ ಮಾನ್ಯತೆ ಕೊಟ್ಟಿದೆ. ತುಮಕೂರು ಜಿಲ್ಲೆಯ ಅಷ್ಟೇಕೆ ರಾಜ್ಯದ ಎಲ್ಲ ಪರಿಸರ ಹೋರಾಟಗಾರರಿಗೆ ಇದು ಹೆಮ್ಮೆಯ ಸಂಗತಿ. ನಮ್ಮ 20 ವರ್ಷದ ಶ್ರಮ ಸಾರ್ಥಕವಾಯಿತು...’ ಅನೇಕ ವರ್ಷಗಳಿಂದ ಪರಿಸರ ಅಧ್ಯಯನ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿರುವ ತುಮಕೂರಿನ ಗೌರವ ವನಪಾಲಕ ಟಿ.ವಿ.ಎನ್.ಮೂರ್ತಿ ಒಂದೇ ಉಸುರಿಗೆ ಹೇಳುತ್ತಿದ್ದರು.

‘ಪರಿಸರ ಹೋರಾಟಗಳು ಎಂದರೆ ಸೋಲುವ ಯುದ್ಧಗಳು’ ಎಂಬ ಸೋತ ಮನಸ್ಥಿತಿಯಲ್ಲಿ ಅಖಾಡಕ್ಕಿಳಿದು ಸರ್ಕಾರ, ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಅರಣ್ಯದಂಚಿನ ನಿವಾಸಿಗಳ ವಿರೋಧ ಎದುರಿಸಲು ಸಾಧ್ಯವಾಗದೇ ಹೋರಾಟದ ಹಾದಿಯಿಂದ ಹಿಮ್ಮೆಟ್ಟಿದ್ದವರ ಕಥೆಗಳನ್ನು ಕೇಳಿ ಸುಸ್ತಾಗಿದ್ದ ನನಗೂ ಈ ಮಾತು ಚೇತೋಹಾರಿ ಎನಿಸಿತು.

‘ಅಂಥದ್ದೇನಾಯ್ತು ಸರ್‌. ಸಮಾಧಾನವಾಗಿ ಹೇಳಿ’ ಎಂದು ಮಾತಿನ ಮಂಟಪಕ್ಕೆ ಅಡಿಪಾಯ ಹಾಕಿದೆ. ಅವರ ಜೊತೆಯಲ್ಲಿದ್ದ ವಿಜ್ಞಾನ ಶಿಕ್ಷಕ ಬಿ.ವಿ.ಗುಂಡಪ್ಪನವರು ತಮ್ಮ ಎಂದಿನ ಮೇಷ್ಟ್ರ ಠೀವಿಯಿಂದಲೇ ಕ್ಲಾಸ್‌ ಆರಂಭಿಸಿದರು. ಅವರೆದುರು ಕಿವಿಯಗಲಿಸಿ ನಿಂತ ನನಗೆ ಮತ್ತೆ ಕೇಳಲು ಪ್ರಶ್ನೆಗಳೇ ಉಳಿದಿರಲಿಲ್ಲ. ಅವರು ಹೇಳಿದ್ದನ್ನು ಯಥಾವತ್ತು ದಾಖಲಿಸಿದ್ದೇನೆ ಅಷ್ಟೇ.

***
ತುಮಕೂರು ಜಿಲ್ಲೆಯ ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕುಗಳಲ್ಲಿ ಹರಡಿಕೊಂಡಿದೆ ತಿಮ್ಲಾಪುರ ಅರಣ್ಯ. ಇದು ದಕ್ಷಿಣ ಕರ್ನಾಟಕದ ಪ್ರಮುಖ ಒಣ ಎಲೆ ಉದುರುವ ಕಾಡು. ಅರಣ್ಯ ಇಲಾಖೆ ಬಹು ಹಿಂದೆಯೇ ‘ಸಂರಕ್ಷಿತ ಅರಣ್ಯ’ ಎಂದು ಘೋಷಿಸಿ, ಅದರ ರಕ್ಷಣೆಗೆ ವ್ಯವಸ್ಥೆ ಮಾಡಿದ್ದರು. ಇದೇ ಕಾರಣದಿಂದ ಕಾಡಿನೊಳಗೆ ದಾರಿಗಳಾಗಲಿ, ವಿದ್ಯುತ್ ತಂತಿ ಮಾರ್ಗವಾಗಲಿ ಹಾದು ಹೋಗಲಿಲ್ಲ. ಆದರೆ ಸ್ಥಳೀಯರು ಮಾತ್ರ ಕಾಡಿನ ಗರ್ಭಕ್ಕೆ (ಕೋರ್‌ಜೋನ್‌) ಕುರಿ, ಮೇಕೆ, ದನ ಮೇಯಿಸಲು ಹೋಗುತ್ತಿದ್ದರು.

ವಾಪಸ್ ಬರುವಾಗ ಉರುವಲು ಎಂದು ಕಟ್ಟಿಗೆ ಕಡಿದು ತರುತ್ತಿದ್ದರು. ಕೆಲವರು ಜೀಪ್– ಎಸ್‌ಯುವಿಗಳಲ್ಲಿ ಕಾಡಿಗೆ ನುಗ್ಗಿ ಮಾಂಸದ ಅಡುಗೆ ತಯಾರಿಸಿ ಅಲ್ಲಿಯೇ ತಿಂದು, ಬೆಂಕಿ ಹಾಕಿ ಕುಣಿಯುತ್ತಿದ್ದರು. ಇಂಥವರ ದಾಂದಲೆಯಿಂದ ಪರಿಸರ ಹಾಳಾಗುತ್ತಿತ್ತು. ನಿಧಾನವಾಗಿ ಅರಣ್ಯ ಇಲಾಖೆ ರಕ್ಷಣೆಯನ್ನು ಮತ್ತಷ್ಟು ಬಿಗಿ ಮಾಡಿತು. ಸುತ್ತಲ ಗ್ರಾಮಸ್ಥರಿಗೆ ಮೇಯಿಸಲು ಹೋಗದಂತೆ ನಿರ್ಬಂಧ ಹೇರಿತು. ಅನುಮತಿ ಇಲ್ಲದೆ ಪ್ರವೇಶ ನಿಷೇಧದ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡಿತು. ಇದೆಲ್ಲದರ ಪರಿಣಾಮ ಕಾಡು ಚೇತರಿಸಿಕೊಂಡಿತು.

ನಿಸರ್ಗ ಶಿಬಿರ
ತಿಮ್ಲಾಪುರ ಅಪರೂಪದ ಕಾಡು ಎಂಬುದು ನಮಗೆ ಗೊತ್ತಿತ್ತು. ಇದೇ ಕಾರಣಕ್ಕೆ ‘ವನ್ಯಜೀವಿ ಜಾಗೃತಿ ನಿಸರ್ಗ ಸಂಸ್ಥೆ’ಯ ವತಿಯಿಂದ 1996ರಿಂದ ಅಲ್ಲಿನ ಮಕ್ಕಳಿಗಾಗಿ ನಿಸರ್ಗ ಶಿಬಿರಗಳನ್ನು ಆಯೋಜಿಸುತ್ತಿದ್ದೇವೆ. ಈ ಸಂದರ್ಭ ಮಕ್ಕಳ ನೆರವಿನಿಂದ ಕಾಡಿನಲ್ಲಿರುವ ಸಸ್ಯ– ಪ್ರಾಣಿ– ಪಕ್ಷಿ– ಚಿಟ್ಟೆ– ಕಪ್ಪೆಗಳ ಅಧ್ಯಯನ ಮಾಡಿ ಪಟ್ಟಿ ಸಿದ್ಧಪಡಿಸಿ ಅರಣ್ಯ ಇಲಾಖೆಗೆ ಕೊಟ್ಟೆವು.

ಕಾಡಿನ ಜೀವ ವೈವಿಧ್ಯ ಮತ್ತು ಪ್ರಾಮುಖ್ಯದ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಮನದಟ್ಟು ಮಾಡಿಕೊಟ್ಟೆವು. ಅವರು ಜನಪ್ರತಿನಿಧಿಗಳು ಹಿರಿಯ ಅಧಿಕಾರಿಗಳು ಮತ್ತು ಸರ್ಕಾರದ ಗಮನ ಸೆಳೆಯುವ ಭರವಸೆ ನೀಡಿದರು. ಆಗ ಮಧುಗಿರಿ ವಲಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ದೇವರಾಜು ಇದ್ದರು (ಈಗ ಅವರ ತುಮಕೂರು ಎಸಿಎಫ್). ಕಾಡು ಉಳಿಸುವ ಕಾಳಜಿ ಇದ್ದ ಅಧಿಕಾರಿ ಅವರು.

ನಾವು ತಿಮ್ಲಾಪುರ ಕಾಡಿಗೆ ಭೇಟಿ ಕೊಟ್ಟಾಗ ಕರಡಿ ದರ್ಶನ ಸಾಮಾನ್ಯ ವಿದ್ಯಮಾನ ಎನಿಸಿತ್ತು. ಕಾಡಿನ ಅಂಚಿನಲ್ಲಿಯೂ ನಮಗೆ ಕರಡಿಯ ಲದ್ದಿ ಕಾಣಿಸುತ್ತಿತ್ತು. ತಿಮ್ಲಾಪುರದಲ್ಲಿರುವ ಅರಣ್ಯ ಇಲಾಖೆ ವಿಶ್ರಾಂತಿ ಧಾಮಕ್ಕೆ ಹೋಗುವ ದಾರಿಯಲ್ಲಿಯೂ ಕರಡಿಗಳು ಎದುರಾಗುತ್ತಿದ್ದವು. ದಿನ ಕಳೆದಂತೆ ತಿಮ್ಲಾಪುರ ಸುತ್ತಮುತ್ತಲ ಹಳ್ಳಿಗಳಲ್ಲಿ, ಸಿದ್ದರಬೆಟ್ಟದ ಆಸುಪಾಸಿನಲ್ಲಿ ಕರಡಿ ‘ಕಾಟ’ ಹೆಚ್ಚಾಯಿತು. ತೋಟಗಳಿಗೆ ಹೋಗಿ ಮಾವು– ಹಲಸು– ಸಪೋಟ ತಿನ್ನುವುದು ಸಾಮಾನ್ಯ ಸಂಗತಿ ಎನಿಸಿತು.

ಫಸಲು ಉಳಿಸಿಕೊಳ್ಳುವ ಆಸೆಯಿಂದ ರೈತರು ಮರಗಳಿಗೆ ‘ಗೇರ್‌ ವೈರ್’ನ ಉರುಳು ಹಾಕುವುದು ಕಲಿತರು. ಅನೇಕ ಕರಡಿಗಳು ಉರುಳಿಗೆ ಸಿಕ್ಕಿ ನರಳಿದವು. ಅರಣ್ಯ ಇಲಾಖೆ ಸಿಬ್ಬಂದಿ ಕೆಲ ಕರಡಿಗಳಿಗೆ ಅರವಳಿಕೆ ಚುಚ್ಚುಮದ್ದು ಹೊಡೆದು, ಕಾಪಾಡಲು ಯತ್ನಿಸಿದರು. ದಿನದಿಂದ ದಿನಕ್ಕೆ ‘ಕರಡಿ ಕಾಟ’ ಅನ್ನೋದು ಈ ಪ್ರದೇಶದಲ್ಲಿ ದೊಡ್ಡ ಸಮಸ್ಯೆಯಂತೆ ಭಾಸವಾಗುತ್ತಿತ್ತು. ಇದನ್ನು ಗಮನಿಸಿ, ಚನ್ನರಾಯನದುರ್ಗ ಹೋಬಳಿಯ ತೋವಿನಕೆರೆ ಸುತ್ತಮುತ್ತ ಕರಡಿಗಳ ಸಂಖ್ಯೆ ಹೆಚ್ಚಾಗಿದೆ.

ಇದನ್ನು ಗಮನಿಸಿ ಸರ್ಕಾರ ತಿಮ್ಲಾಪುರ ಕಾಡಿಗೆ ‘ಕರಡಿಧಾಮ’ದ ಮಾನ್ಯತೆ ನೀಡಬೇಕು. ಕರಡಿಗಳ ರಕ್ಷಣೆಗೆ ಕ್ರಮ ವಹಿಸಬೇಕು ಎಂದು ಪ್ರಸ್ತಾವ ಸಲ್ಲಿಸಿದೆವು. ನಮ್ಮ ಪ್ರಸ್ತಾವಕ್ಕೆ ಅರಣ್ಯ ಇಲಾಖೆಯ ಸ್ಥಳೀಯ ಅಧಿಕಾರಿಗಳು ಒತ್ತು ನೀಡಿದರು. ಕೊರಟಗೆರೆ ಶಾಸಕ ಸುಧಾಕರಲಾಲ್‌ ಮತ್ತು ಮಧುಗಿರಿ ಶಾಸಕ ಕೆ.ಎನ್.ರಾಜಣ್ಣ ಕರಡಿ ಕಾಟದ ವಿಚಾರವನ್ನು ಸರ್ಕಾರದ ಮಟ್ಟದಲ್ಲಿ ಪ್ರಸ್ತಾಪಿಸಿದರು.

ಅರಣ್ಯ ಇಲಾಖೆ ಸಲ್ಲಿಸಿದ ವರದಿಯ ವಸ್ತುಸ್ಥಿತಿ ಅಧ್ಯಯನಕ್ಕೆಂದು ಕಳೆದ ವರ್ಷ ಸ್ವತಃ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿನಯ್‌ಲೂತ್ರ, ವನ್ಯಜೀವಿ ವಿಭಾಗದ ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರಲಾಲ್‌, ಅರಣ್ಯ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮದನ್‌ಗೋಪಾಲ್ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳು ತಿಮ್ಲಾಪುರಕ್ಕೆ ಭೇಟಿ ನೀಡಿದರು.

ಆದರೆ ತಿಮ್ಲಾಪುರಕ್ಕೆ ‘ಕರಡಿಧಾಮ’ದ ಮಾನ್ಯತೆ ಸಿಗಲಿಲ್ಲ. ನಾವು ಪರಿಸರ ಹೋರಾಟಗಾರರು ಜೀವ ವೈವಿಧ್ಯದ ಬಗ್ಗೆ ಮತ್ತಷ್ಟು ಪುರಾವೆಗಳನ್ನು ಸಂಗ್ರಹಿಸಿ ನೀಡಿದೆವು. ಇದೇ ಹೊತ್ತಿಗೆ ಮಧುಗಿರಿ ಪಟ್ಟಣದಲ್ಲಿಯೇ ಕರಡಿಗಳು ಕಾಣಿಸಿಕೊಂಡವು. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಮತ್ತೆ ಸರ್ಕಾರದ ಗಮನ ಸೆಳೆದರು. ಸರ್ಕಾರ ಕೊನೆಗೂ ತಿಮ್ಲಾಪುರವನ್ನು ‘ಅಭಯಾರಣ್ಯ’ (Sanctuary) ಎಂದು ಘೋಷಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಿತು.

ಕರಡಿಧಾಮದ ನಿರೀಕ್ಷೆಯಲ್ಲಿದ್ದ ನಮಗೆ ಅಭಯಾರಣ್ಯದ ಘೋಷಣೆ ಕೇಳಿ ಬಲು ಸಂತೋಷವಾಯಿತು. ತಿಮ್ಲಾಪುರದಲ್ಲಿ ಕರಡಿಗಳು ಮಾತ್ರವೇ ಇಲ್ಲ. ಚುಕ್ಕೆಜಿಂಕೆ, ಕತ್ತೆಕಿರುಬ, ಚಿರತೆ, ತೋಳ, ನರಿ, ಕಡವೆ, ಕಾಡುಕುರಿಯಂಥ ಅನೇಕ ಅಪರೂಪದ ಪ್ರಾಣಿಗಳೂ ಇವೆ. ಕಾಡುಹಂದಿ– ಮೊಲಗಳ ಸಂಖ್ಯೆಯೂ ಸಾಕಷ್ಟು ಇದೆ. ಚುಕ್ಕೆ ಜಿಂಕೆ. ಕಾಡಿನ ಅಂಚಿನಲ್ಲಿ ಕೃಷ್ಣಮೃಗಗಳೂ ಇವೆ.

ಅಭಯಾರಣ್ಯದ ಮಾನ್ಯತೆ ಸಿಕ್ಕಿದ್ದು ಈ ಎಲ್ಲ ಪ್ರಾಣಿಗಳ ರಕ್ಷಣೆಗೆ ಅನುಕೂಲ ಕಲ್ಪಿಸಿದಂತೆ ಆಗಿದೆ. ಆದರೆ ಸದ್ಯಕ್ಕೆ ಮಧುಗಿರಿ ಮತ್ತು ಕೊರಟಗೆರೆ ತಾಲ್ಲೂಕಿನ ಮಟ್ಟಿಗೆ ಕರಡಿ ಮತ್ತು ಚಿರತೆಗಳನ್ನು ಕಾಡಿನಿಂದ ಹೊರೆಗೆ ಹೋಗದಂತೆ, ಹೊರಗಿನ ಜನರಿಗೆ ತೊಂದರೆಯಾಗದಂತೆ ನಿರ್ವಹಿಸುವುದು ದೊಡ್ಡಸವಾಲು.

ತಿಮ್ಲಾಪುರ ಕಾಡಿನ ಅಂಚಿನಲ್ಲಿ ವಾಸವಿರುವ ಕೆಲ ಹಿರೀಕರು, ಈ ಮೊದಲು ಕಾಡಿನಲ್ಲಿ ತೇಗ, ಬೀಟೆ, ಮತ್ತಿ, ಧೂಪದ ಮರಗಳೂ ಇದ್ದವು. ಸೂರ್ಯನ ಬಿಸಿಲು ನೇರವಾಗಿ ಭೂಮಿಗೆ ಬೀಳದಷ್ಟು ದಟ್ಟವಾಗಿತ್ತು ಕಾಡಿನ ಹಸಿರು ಎಂದೆಲ್ಲಾ ನೆನಪಿಸಿಕೊಳ್ಳುತ್ತಾರೆ. ಆದರೆ ಇಂದು ಕಾಡಿನ ಗುಣಮಟ್ಟ ಹಾಳಾಗಿದೆ. ಮುಂದಿನ ದಿನಗಳಲ್ಲಿ ಕಾಡಿನ ರಕ್ಷಣೆಗೆ ಹೆಚ್ಚು ಕಾಳಜಿ ವಹಿಸಬೇಕು. ಪ್ಲಾಂಟೇಶನ್ ಮಾಡಿದರೂ ಸರಿ, ನೇರಳೆ, ಹಲಸು, ಬೇಲದಂಥ ಮರಗಳನ್ನು ಬೆಳೆಸಬೇಕು.

ಇವು ಕರಡಿ ಸೇರಿದಂತೆ ಅನೇಕ ಕಾಡುಪ್ರಾಣಿಗಳ ಹೊಟ್ಟೆ ತುಂಬಿಸುತ್ತವೆ. ರುಚಿ ಮತ್ತು ಪೌಷ್ಟಿಕಾಂಶದ ಕಾರಣದಿಂದಲೂ ಈ ಹಣ್ಣುಗಳನ್ನು ಪ್ರಾಣಿಗಳು ಇಷ್ಟಪಡುತ್ತವೆ. ದರೋಜಿ ಕರಡಿ ಧಾಮದಲ್ಲಿ ಕರಡಿಗಳಿಗೆ ಬೇರೆಡೆಯಿಂದ ಹಣ್ಣು ತಂದು ಇರಿಸುವ, ಬೆಲ್ಲ– ಜೇನುತುಪ್ಪ ಕಲ್ಲುಬಂಡೆಗೆ ಸವರುವ ಪದ್ಧತಿ ಇದೆ. ಸುತ್ತಮುತ್ತಲ ಕರಡಿಗಳನ್ನು ಇತ್ತ ಆಕರ್ಷಿಸಿ, ಅವುಗಳ ಆಹಾರ ಸೇವನೆಗೆ ಅವಕಾಶ ಮಾಡಿಕೊಟ್ಟರೆ ಕರಡಿಗಳು ಹಳ್ಳಿ ತಿರುಗುವುದು ನಿಯಂತ್ರಣಕ್ಕೆ ಬರುತ್ತದೆ.

ತಿಮ್ಲಾಪುರ ಕಾಡಿನ ವಿಸ್ತೀರ್ಣ ಸುಮಾರು 8000 ಎಕರೆ (ಸುಮಾರು 50 ಚದರ ಕಿ.ಮೀ). ಇಷ್ಟು ದೊಡ್ಡ ಕಾಡನ್ನು ಕಾಯುವುದು ಸುಲಭದ ಮಾತಲ್ಲ. ಅಭಯಾರಣ್ಯದ ಅಂಚಿನಲ್ಲಿರುವ ಕಮ್ಮನಕೋಟೆ, ಹೊಸಹಳ್ಳಿ, ತಾಯಗೊಂಡನಹಳ್ಳಿ, ಬೆಲವತ್ತ, ಬೊಮ್ಮೆತಿಮ್ಮನಹಳ್ಳಿ, ಕವಣದಾಳ, ಚಿಕ್ಕತಿಮ್ಮನಹಳ್ಳಿ, ಕುರಂಕೋಟೆ, ತಿಮ್ಮನಪಾಳ್ಯ, ಬಿಸದಿಕರಿಯರಪಾಳ್ಯ ಗ್ರಾಮದ ಹಳಬರಲ್ಲಿ ಕಾಡುಪ್ರಾಣಿಗಳೊಂದಿಗೆ ಹೊಂದಾಣಿಕೆಯ ಬದುಕಿನ ರೀತಿ ಗೊತ್ತಿದೆ.

ಆದರೆ ಹೊಸ ತಲೆಮಾರಿನ ಯುವಕರಲ್ಲಿ ಈ ಜಾಗೃತಿ ಇಲ್ಲ. ಅವರಲ್ಲಿ ಅಭಯಾರಣ್ಯದ ಮಹತ್ವ, ಕಾಡು ಪ್ರಾಣಿಗಳೊಂದಿಗೆ ಹೊಂದಿಕೊಂಡು ಹೋಗುವ ವಿಚಾರದ ಬಗ್ಗೆ ಜಾಗೃತಿ ಮೂಡಿಸಲು ಅರಣ್ಯ ಇಲಾಖೆಯೇ ಗಮನ ನೀಡಬೇಕು. ಅಂದ ಹಾಗೆ ಮತ್ತೊಂದು ಮಾತು, ತಿಮ್ಲಾಪುರದಲ್ಲಿ 12ಕ್ಕೂ ಹೆಚ್ಚು ವಿಧದ ಕಪ್ಪೆಗಳು, ನೂರಾರು ವಿಧದ ಚಿಟ್ಟೆಗಳು ಇವೆ. ಕೀಟ ಜಗತ್ತು ಇನ್ನೂ ತೆರೆದುಕೊಳ್ಳಬೇಕಿದೆ.

***
ಗುಂಡಪ್ಪ ಮೇಷ್ಟ್ರು ಮಾತು ನಿಲ್ಲಿಸಿದ ನಂತರ ಅನೇಕ ವಿಚಾರಗಳು ತಲೆಯಲ್ಲಿ ಹೊಯ್ದಾಡುತ್ತಿದ್ದವು. ತುಮಕೂರು ಜಿಲ್ಲೆಯಲ್ಲಿ ಹುಲಿಗಳು ಓಡಾಡುತ್ತಿದ್ದವು ಎಂಬ ಉಲ್ಲೇಖ ಬ್ರಿಟಿಷ್ ದಾಖಲೆಗಳಲ್ಲಿದೆ. ಅಂಥ ಕಾಲ ಮತ್ತೆ ಬಂದೀತೆ? ಒಂದು ಕಾಲಕ್ಕೆ ದಟ್ಟ ಕಾಡು ಇದ್ದ ಹುಲಿಯೂರದೇವರಾಯದುರ್ಗ, ಮದಲಿಂಗನಕಣಿವೆ, ಬುಕ್ಕಾಪಟ್ಟಣ ಚೇತರಿಸಿಕೊಂಡೀತೆ? ಆನೆ, ಚಿರತೆ, ಕರಡಿ, ಕಾಡುಹಂದಿಗಳೊಂದಿಗೆ ನಡೆಯುತ್ತಿರುವ ಮಾನವ ಸಂಘರ್ಷ ತಹಬದಿಗೆ ಬಂದೀತೆ? ಎಲ್ಲ ಪ್ರಶ್ನೆಗಳಿಗೂ ಸಕಾರಾತ್ಮಕ ಉತ್ತರ ಸಿಗುವ ನಿರೀಕ್ಷೆಯನ್ನಂತೂ ತಿಮ್ಲಾಪುರ ಅಭಯಾರಣ್ಯದ ಘೋಷಣೆ ಹುಟ್ಟು ಹಾಕಿದೆ.

***
ಹೋರಾಟದ ಸ್ವರೂಪ ಮುಖ್ಯ
ನಮ್ಮಲ್ಲಿ ಅನೇಕರಿಗೆ ಹೋರಾಟ ಅಂದ್ರೆ ಬೀದಿಗೆ ಇಳಿದು ಘೋಷಣೆ ಕೂಗೋದು, ಸರ್ಕಾರಿ ಬಸ್‌ಗೆ ಕಲ್ಲು ಹೊಡೆಯೋದು ಎಂಬ ಭ್ರಮೆ ಇದೆ. ಎಲ್ಲ ಸಂದರ್ಭದಲ್ಲಿಯೂ ಇದರಿಂದ ಇಚ್ಛಿತ ಫಲ ಸಿಕ್ಕುವುದಿಲ್ಲ. ಪರಿಸರ ಹೋರಾಟಗಳಲ್ಲಿ ಸರ್ಕಾರ– ನ್ಯಾಯಾಲಯಗಳು ವೈಜ್ಞಾನಿಕ ಪುರಾವೆಗಳನ್ನು ಕೇಳುತ್ತವೆ. ಕಾಡಿನಂಚಿನ ಜನರ ಹಿತ ಗಮನಿಸುತ್ತವೆ.

ಸ್ಥಳೀಯ ಜನಪ್ರತಿನಿಧಿಗಳು, ಶಾಸಕರು, ಅಧಿಕಾರಿಗಳಲ್ಲಿ ಕೆಲವರಾದರೂ ಯೋಗ್ಯರಿರುತ್ತಾರೆ. ಅಂಥವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುನ್ನುಗ್ಗಬೇಕು. ನಮ್ಮ ಶ್ರಮ ತಕ್ಷಣಕ್ಕೆ ಫಲ ಕೊಡದಿರಬಹುದು. ಆದರೆ ಸತತ ಯತ್ನ, ಬದ್ಧತೆಯಿಂದ ಸಂಗ್ರಹಿಸುವ ಪುರಾವೆಗಳನ್ನು ನಿರಾಕರಿಸಲು ಸರ್ಕಾರಕ್ಕೂ ಸಾಧ್ಯವಾಗುವುದಿಲ್ಲ. ನಮ್ಮ ಕೋರಿಕೆ  ಮನ್ನಿಸಿದ ಸರ್ಕಾರಕ್ಕೆ ನಾನಂತೂ ಕೃತಜ್ಞತೆ ಸಲ್ಲಿಸುತ್ತೇನೆ.
-ಟಿ.ವಿ.ಎನ್. ಮೂರ್ತಿ, ಗೌರವ ವನಪಾಲಕ, ತುಮಕೂರು

***
ಕರಡಿಗಳ ಸಂರಕ್ಷಣಾ ತಾಣವಾಗಲಿ
ತುಮಕೂರು ಜಿಲ್ಲೆಯಲ್ಲಿ ಕರಡಿಗಳು ಹಳ್ಳಿಗಳತ್ತ ಬರುವುದು ಮತ್ತು ಜನರು ಅದನ್ನು ತಡೆಯಲು ಯತ್ನಿಸುವಾಗ ಸಂಘರ್ಷ ಉಂಟಾಗುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇಲ್ಲಿ ಹಿಡಿದ ಪ್ರಾಣಿಗಳನ್ನು ಬನ್ನೇರುಘಟ್ಟಕ್ಕೆ ತಗೊಂಡು ಹೋಗಿ, ಕಾಪಾಡಲು ಯತ್ನಿಸುತ್ತಾರೆ. ಆದರೆ ಅಲ್ಲಿ ಪ್ರಾಣಿಗಳ ಸಾಂದ್ರತೆ ಹೆಚ್ಚಾಗಿದೆ. ಅನುದಾನದ ಕೊರತೆಯೂ ಇದೆ. ತಿಮ್ಲಾಪುರ ಕಾಡಿನಲ್ಲಿ ಸೂಕ್ತ ಜಾಗ (ನೀರು, ಕಲ್ಲು ಬಂಡೆ, ಗುಹೆಗಳು) ಗುರುತಿಸಿ, ಸಮರ್ಪಕ ಫೆನ್ಸಿಂಗ್‌ (ಬೇಲಿ) ಮಾಡಿ, ಕರಡಿಗಳ ರಿಹ್ಯಾಬಿಲಿಟೇಷನ್ ಸೆಂಟರ್ (ಪುನರ್ವಸತಿ ತಾಣ) ಮಾಡಬಹುದು.
-ಬಿ.ವಿ.ಗುಂಡಪ್ಪ, ಅಧ್ಯಕ್ಷರು, ವನ್ಯಜೀವಿ ನಿಸರ್ಗ ಜಾಗೃತಿ ಸಂರಕ್ಷಣಾ ಸಂಸ್ಥೆ

ತಿಮ್ಲಾಪುರ ಅರಣ್ಯದ ಪಾರಿಸಾರಿಕ ಮಹತ್ವ
ತಿಮ್ಲಾಪುರ ಅರಣ್ಯವು ಸಮುದ್ರ ಮಟ್ಟದಿಂದ 910 ಮೀಟರ್ ಎತ್ತರದಲ್ಲಿದೆ. ವಾರ್ಷಿಕ ಮಳೆಯ ಪ್ರಮಾಣ ಸರಾಸರಿ 60ರಿಂದ 80 ಸೆಂ.ಮೀ. ಉಷ್ಣಾಂಶ 15ರಿಂದ 40 ಡಿಗ್ರಿ ಸೆಲ್ಷಿಯಸ್. ಅರಣ್ಯದ ವ್ಯಾಪ್ತಿಯಲ್ಲಿ ನವಿಲಾಳಿ ಗುಟ್ಟೆ, ಕವಳಿ ಬೆಟ್ಟ, ಕಾರೇಮರದ ಗುಟ್ಟೆ, ಈಚಲು ಬೆಟ್ಟ, ಮೆಣಸಿನ ಗುಟ್ಟೆ ಎಂಬ ಬೆಟ್ಟಗಳಿವೆ. ಎಲ್ಲ ಬೆಟ್ಟಗಳಿಗೂ ಮರ ಹಾಗೂ ಪಕ್ಷಿಗಳ ಹೆಸರನ್ನೇ ನಾಮಕರಣ ಮಾಡಿರುವುದು ವಿಶೇಷ.

ಅರಣ್ಯದಲ್ಲಿ ತಿಮ್ಮರಾಯನಬಂಡೆ ಹಳ್ಳ, ಮತ್ತಿಮರದಹಳ್ಳ, ಹೊಂಗೆಮರದ ಹಳ್ಳ ಎಂಬ ತೊರೆಗಳು ಹರಿಯುತ್ತವೆ. ತೊರೆಗಳಿಗೆ ಅಲ್ಲಲ್ಲಿ ಕಟ್ಟೆಗಳನ್ನು ನಿರ್ಮಿಸಲಾಗಿದೆ. ಕೆಂಗನಬಾವಿ ಕಟ್ಟೆ, ಬಂಗ್ಲಿಮುಂದಿನ ಕಟ್ಟೆ, ರಾಮಯ್ಯನಕಟ್ಟೆ, ಪುಟ್ಟಮ್ಮನಕಟ್ಟೆ, ಕೊಂಗರುಬಾವಿಕಟ್ಟೆ ತುಸು ದೊಡ್ಡದಾಗಿವೆ. ಕಾಡಿನ ಜೀವಿಗಳ ದಾಹ ಇಂಗಿಸುವಲ್ಲಿ ಈ ತೊರೆ ಮತ್ತು ಕಟ್ಟೆಗಳ ಪಾತ್ರ ಮಹತ್ವದ್ದು. ಈ ಕಾಡಿನಲ್ಲಿ ಬಿದ್ದ ನೀರು ತೊರೆಯಾಗಿ ಹರಿದರೆ ಶಿರಾ– ಹಿರಿಯೂರು ತಾಲ್ಲೂಕಿನ ಕೆರೆಗಳಿಗೆ ಜೀವ.

ಹಸಿರ ಸಿರಿ
ಧೂಪದ ಮರ, ಅಳಲೆ ಮರ, ಕಾಡುಗೇರು, ಕಾಡು ಈರುಳ್ಳಿ, ಬೆಟ್ಟ ಅಮಟೆ, ಬೆಟ್ಟದನೆಲ್ಲಿ, ಕಾಡುಬಿಕ್ಕೆ, ಕಕ್ಕೆಮರ, ದಿಂಡಿಗ, ಗಂಧ, ಕಮರ, ತೇಗ, ಮತ್ತಿ, ತೂಪ್ರ, ಮಧುನಾಶಿನಿ, ಕಲ್ಲರಳಿ, ಕಲ್ಲತ್ತಿ, ಜಾವಧಾರಿ, ನವಿಲಾಡಿ, ಕಾರೆ, ಮಾಕಳಿಬೇರು ಸೇರಿದಂತೆ ಹಲವು ಅಪರೂಪದ ಸಸಿ– ಮರಗಳು ತಿಮ್ಲಾಪುರ ಕಾಡಿನಲ್ಲಿ ಕಂಡು ಬರುತ್ತವೆ. ಕರಡಿ ಅತಿಯಾಗಿ ಇಷ್ಟಪಡುವ ನೇರಳೆ, ಹಲಸು, ಬೇಲ, ಕವಳೆ, ಮರಡಿ, ಕಾರೆ, ಸೀತಾಫಲ, ಎಲಚಿ ಮರಗಳೂ ಕಾಡಿನಲ್ಲಿ ಹೇರಳವಾಗಿ ಕಂಡು ಬರುತ್ತವೆ.

ಪಕ್ಷಿ ಜಗತ್ತು
ನವಿಲು, ನೀಲಕಂಠ, ಮರಕುಟಿಗ, ಗುಲಾಬಿ ತಲೆಯ ಗಿಳಿ, ಹಸಿರುಪಾರಿವಾಳ, ಕಂಚುಗಾರ, ಸರ್ಪೆಂಟ್ ಈಗಲ್, ಹನಿ ಬಜಾರ್ಡ್, ಪುರುಡಿಹಕ್ಕಿಗಳನ್ನು ತಿಮ್ಲಾಪುರ ಕಾಡಿನಲ್ಲಿ ಗುರುತಿಸಲಾಗಿದೆ.

ಜೀವ ಜಗತ್ತು
ಚುಕ್ಕೆಜಿಂಕೆ, ಕತ್ತೆಕಿರುಬು, ಚಿರತೆ, ತೋಳ, ನರಿ, ಕಡವೆ, ಕಾಡುಕುರಿ, ಕಾಡುಹಂದಿ, ಮೊಲ, ಉಡ, ಆಮೆ ಮತ್ತು ಅನೇಕ ಜಾತಿಯ ಹಾವುಗಳು ತಿಮ್ಲಾಪುರದ ಗುಡ್ಡಗಳಲ್ಲಿ ಆಶ್ರಯ ಪಡೆದಿವೆ.

ಚಿಟ್ಟೆಗಳು
ಕಾಮನ್‌ ಬಾಂಡೆಡ್‌ ಪೀಕಾಕ್, ಕ್ರಿಂಸನ್ ಟಿಪ್, ಕ್ರಿಮ್ಸನ್ ರೋಸ್.

ತಿಮ್ಲಾಪುರ ಕಾಡಿನಲ್ಲಿ ಅರಣ್ಯ ಇಲಾಖೆ ಮತ್ತು ಪರಿಸರಾಸಕ್ತರು ಗುರುತಿಸಿರುವ ಜೀವ ವೈವಿಧ್ಯ
* ಸಸ್ಯಗಳು 165
* ಪಕ್ಷಿಗಳು 160
* ಸಸ್ತನಿಗಳು 24
* ಸರಿಸೃಪಗಳು 28
* ಕಪ್ಪೆಗಳು 12
* ಚಿಟ್ಟೆಗಳು 54

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT