ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಳುನಾಡಿನ ಇತಿಹಾಸಕ್ಕೆ ಕಿರು ಬಿಂಬಗಳು

Last Updated 13 ಜೂನ್ 2015, 19:30 IST
ಅಕ್ಷರ ಗಾತ್ರ

ಧರ್ಮಪ್ರಚಾರದ  ಸಲುವಾಗಿ ಜರ್ಮನಿಯ ಬಾಸೆಲ್‌ ಮಿಶನ್‌ನ ಮಿಶನರಿಗಳು 1834ನೇ ಇಸವಿಯಲ್ಲಿ ಕರ್ನಾಟಕದ ಕರಾವಳಿಗೆ ಸಮುದ್ರಮಾರ್ಗವಾಗಿ ಬಂದಿಳಿದರು. ಮಂಗಳೂರಿಗೆ ಬಂದ ಮೊದಲ ತಂಡದಲ್ಲಿ ಇದ್ದವರು ಜೆ.ಸಿ.ಲೆಹ್ನರ್‌, ಸಿ.ಎಲ್‌. ಗ್ರೈನರ್‌ ಮತ್ತು ಸಾಮುವೆಲ್‌ ಹೆಬಿಕ್‌. ಅವರ ಬಳಿಕ ಇನ್ನಷ್ಟು ಮಿಶನರಿಗಳು ಮಂಗಳೂರಿಗೆ ಬಂದಿಳಿದರು. ಇಲ್ಲಿನ ಭಾಷೆ, ಸಂಸ್ಕೃತಿಗಳೆಲ್ಲ ವಿಭಿನ್ನವಾಗಿದ್ದುದು, ಅವರನ್ನು ಸ್ಥಳೀಯ ಭಾಷೆಗಳನ್ನು ಕಲಿಯಲು ಪ್ರೇರೇಪಿಸಿದವು.

ಜನಸಾಮಾನ್ಯರ ಜತೆಗೆ ಬೆರೆತು ತುಳು, ಕನ್ನಡ ಭಾಷೆಗಳನ್ನು ಚೆನ್ನಾಗಿ ಕಲಿತ ಈ ಮಿಶನರಿಗಳು, ಕರಾವಳಿಯ ಉದ್ದಗಲಕ್ಕೂ ಪ್ರವಾಸ ಮಾಡುತ್ತಾ, ತಾವು ಕಂಡುಂಡ ವಿಷಯಗಳನ್ನು ದಾಖಲಿಸುತ್ತಾ ಹೋದರು. ಇದೇನೂ ವ್ಯವಸ್ಥಿತ ದಾಖಲೆ ಆಗಿರಲಿಲ್ಲ. ಕೆಲವು ಟಿಪ್ಪಣಿಗಳು, ಕೆಲವು ಅಭಿಪ್ರಾಯಗಳು, ಕೆಲವು ಅನುವಾದಗಳು, ಕಂಡದ್ದು, ಅನುಭವಿಸಿದ್ದು, ಚರ್ಚೆಗೆ ಒಳಗಾಗಿದ್ದು– ಹೀಗೆ ಎಲ್ಲವೂ ಈ ದಾಖಲೆಗಳಲ್ಲಿ ಇವೆ.

ಅದೃಷ್ಟದ ವಿಷಯವೆಂದರೆ ಇಂತಹ ಕೈಬರಹದ ಪತ್ರಗಳು, ದಾಖಲೆಗಳು, ಕಿರುಪುಸ್ತಕಗಳು ಮಂಗಳೂರಿನ ಬಾಸೆಲ್‌ ಮಿಶನ್‌ ಸಂಸ್ಥೆಯ ಕರ್ನಾಟಕ ಥಿಯೊಲಾಜಿಕಲ್‌ ಕಾಲೇಜ್‌ ಗ್ರಂಥಾಲಯದಲ್ಲಿ ಅಡಕವಾಗಿರುವುದು. ಕನ್ನಡ ಲಿಪಿಯಲ್ಲಿ, ತುಳು ಭಾಷೆಯಲ್ಲಿರುವ ಈ ದಾಖಲೆಗಳನ್ನು ಹೆಕ್ಕಿ ತೆಗೆದು, ಅವುಗಳಲ್ಲಿ ನಮೂದಿಸಲಾದ ವಿಷಯಗಳನ್ನು ತಮ್ಮ ಕ್ಷೇತ್ರ ಕಾರ್ಯಗಳ ಫಲಿತಾಂಶದ ಜತೆಗೆ ಹೋಲಿಸಿ ‘ಬಾಸೆಲ್‌ ಮಿಶನರಿಗಳ ತುಳು ಟಿಪ್ಪಣಿಗಳು’ ಎಂಬ ಈ ಪುಸ್ತಕದಲ್ಲಿ ಸಂಕಲಿಸಿದವರು ಡಾ. ಎಂ.ಎಸ್‌. ದುರ್ಗಾಪ್ರವೀಣ್ ಮತ್ತು ಬೆನೆಟ್‌ ಜಿ. ಅಮ್ಮನ್ನ.

2008ರಲ್ಲಿ ಕ್ಷೇತ್ರಕಾರ್ಯದ ವೇಳೆ ದೊರಕಿದ ರೈಟ್‌ ರೆವೆ. ಎಸ್‌.ಆರ್. ಪುರ್ಟಾಡೊ (1912-1995) ಅವರ ಸಂಗ್ರಹದ ಎಂಟು ಕಿರುಪುಸ್ತಕಗಳಲ್ಲಿ ಮೊದಲ ಆರು ಕಿರುಪುಸ್ತಕಗಳ ಟಿಪ್ಪಣಿಗಳನ್ನು ಇಲ್ಲಿ ತುಳುವಿನಲ್ಲಿ ಕೊಡಲಾಗಿದೆ. ಟಿಪ್ಪಣಿಗಳ ಕೊನೆಯಲ್ಲಿ ತಾವು ಕಂಡುಕೊಂಡ ಇತರ ವಿವರಗಳನ್ನು ಲೇಖಕರು ನಮೂದಿಸಿದ್ದಾರೆ.

ಅಧ್ಯಯನದ ದೃಷ್ಟಿಯಿಂದ ಪುಸ್ತಕವನ್ನು ನಾಲ್ಕು ಭಾಗಗಳನ್ನಾಗಿ ಮಾಡಿದ್ದು, ಮೊದಲ ವಿಭಾಗದಲ್ಲಿ ಶಕುನ, ಮೂಲಿಗೆ, ಅಳಿಯ ಸಂತಾನದ ಹಿನ್ನೆಲೆ, ಜೈನರು ರಾತ್ರಿ ಏಕೆ ಊಟ ಮಾಡುವುದಿಲ್ಲವೆಂಬ ವಿಷಯ, ಮದುವೆ, ಸತ್ತವರಿಗೆ ಬೊಜ್ಜ ಮಾಡುವುದು, ಸತ್ತವರಿಗೆ ಮದುವೆ ಮಾಡುವುದು, ಮಾರಿ ಓಡಿಸುವುದು, ನರಮನುಷ್ಯರಿಗೆ ಭೂತ ಹಿಡಿಯುವುದು, ಚೌತಿಯ ಕ್ರಮ, ನೂಲುಹುಣ್ಣಿಮೆಯ ಕ್ರಮ- ಹೀಗೆ ತುಳುನಾಡಿನ ಬದುಕಿನ ವಿಭಿನ್ನ ವಿವರಗಳೆಲ್ಲ ಬಂದಿವೆ.

ಎರಡನೇ ವಿಭಾಗದಲ್ಲಿ ಬಪ್ಪನಾಡು, ಉಂಡಾರ್‌, ಅತ್ತೂರು, ಮೂಡಬಿದ್ರೆ, ಪುತ್ತೆ ಮುಂತಾದ ಸ್ಥಳಗಳಲ್ಲಿರುವ ದೇವಸ್ಥಾನಗಳ ಸ್ಥಳಪುರಾಣಗಳಿವೆ. ಮೂರನೇ ಭಾಗದಲ್ಲಿ ಶಾಪ, ಆಣೆ, ಮಾಟ, ಮಂತ್ರಗಳಿಗೆ ಸಂಬಂಧಿಸಿದ ಟಿಪ್ಪಣಿಗಳಿದ್ದು, ನಾಲ್ಕನೇ ವಿಭಾಗದಲ್ಲಿ 9 ಕಥೆಗಳಿವೆ. ಧರ್ಮಪ್ರಚಾರದಲ್ಲಿ ಬಳಸಲಾಗುತ್ತಿದ್ದ ಈ ಕಥೆಗಳಲ್ಲಿ ನೀತಿಭೋದನೆಯೂ ಇದ್ದು, ಜನಸಾಮಾನ್ಯರಲ್ಲಿ ಇದ್ದ ಮದ್ಯಪಾನ, ಜೂಜಾಟದದಂತಹ ಕೆಡುಕುಗಳನ್ನು ದೂರೀಕರಿಸಲು ಈ ಕಥೆಗಳನ್ನು ಬಳಸಿರುವುದನ್ನು ಗುರುತಿಸಲಾಗಿದೆ.

ಅಂದಿನ ತುಳುನಾಡಿನ ಬದುಕು, ಭಾಷೆ, ನಂಬಿಕೆಗಳು, ರೀತಿ ರಿವಾಜು, ‘ಭೂತ’ಗಳ ಭಾಷಾ ನುಡಿಕಟ್ಟು, ಸಾಂಸ್ಕೃತಿಕ ಸೊಗಡು- ಮುಂತಾಗಿ ಅಪರೂಪದ ವಿವರಗಳೆಲ್ಲವನ್ನೂ ಇಲ್ಲಿ ನೀಡಲಾಗಿದೆ. ಅಗತ್ಯ ಬಿದ್ದ ಕಡೆ ವಿವರಣೆಗಳು,  ಸಂಪಾದಕರ ಟಿಪ್ಪಣಿಗಳು, ಭಿನ್ನಮತಗಳು, ಇನ್ನಷ್ಟು ಅಧ್ಯಯನಕ್ಕೆ ಬೇಕಾದ ಆಕರಗಳನ್ನೂ ನಮೂದಿಸಲಾಗಿದೆ. ಈ ವರ್ಷ ಬಾಸೆಲ್‌ ಮಿಶನ್‌ನ 200ನೇ ವರ್ಷಾಚರಣೆಯೂ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಕರಾವಳಿಯ ಇತಿಹಾಸಕ್ಕೆ ಈ ಕೃತಿ ಅತ್ಯಂತ ಮೌಲಿಕ ಕೊಡುಗೆ ಎನ್ನಲಡ್ಡಿಯಿಲ್ಲ.

ಕ್ಷೇತ್ರಕಾರ್ಯದ ಮೂಲಕ ಲಭ್ಯವಾದ ಜಾನಪದ ಕಥೆಗಳನ್ನು, ಪತ್ರಾಗಾರ ಸಂಗ್ರಹದಲ್ಲಿ ಸಿಕ್ಕಿದ ಹಸ್ತಪ್ರತಿಗಳ ಜತೆಗೆ ತುಲನೆ ಮಾಡುವುದು; ಹಸ್ತಪ್ರತಿಗಳಲ್ಲಿ ಲಭ್ಯವಾದ ವಿವರಗಳನ್ನು ಕ್ಷೇತ್ರಕಾರ್ಯದ ವೇಳೆ ಜನರ ಜತೆ ಹಂಚಿಕೊಂಡು ಇನ್ನಷ್ಟು ಖಚಿತ ಪಡಿಸಿಕೊಳ್ಳುವುದರ ಮೂಲಕ ದುರ್ಗಾಪ್ರವೀಣ್‌ ಮತ್ತು ಅಮ್ಮನ್ನ ಅವರು ಸಾಕಷ್ಟು ಶ್ರಮ ವಹಿಸಿ ಈ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ.

ಸಂಶೋಧಕರಿಗೆ ಇರಬೇಕಾದ ಚಿಕಿತ್ಸಕ ನೋಟ, ಸಹನೆ ಮತ್ತು ಶ್ರದ್ಧೆ ಎಲ್ಲವೂ ಮೇಳೈಸಿರುವುದು ಈ ಕೃತಿಯ ಮಹತ್ವವನ್ನು ಇನ್ನಷ್ಟು ಹೆಚ್ಚಿಸಿದೆ. ತುಳುನಾಡಿನ ಇತಿಹಾಸವನ್ನು ಸಮಚಿತ್ತದಿಂದ ಅಧ್ಯಯನ ನಡೆಸುವವರಿಗೆ ಈ ಕೃತಿ ಖಂಡಿತಾ ಸೂಕ್ತ ಮಾರ್ಗದರ್ಶನ ನೀಡುತ್ತದೆ. ತುಳುನಾಡು ಇವತ್ತು ಜಾತಿ- ಧರ್ಮ ಸಂಘರ್ಷಗಳ ಹೊಸ ಪ್ರಭಾವಳಿಯಲ್ಲಿ ಸಿಕ್ಕು ನರಳುತ್ತಿದೆ. ಪರಸ್ಪರ ವಿಭಿನ್ನ ಸಂಸ್ಕೃತಿಗಳ ನಡುವಣ ಕೊಡುಕೊಳ್ಳುವಿಕೆಯ ವಾತಾವರಣ ಕ್ಷೀಣಿಸುತ್ತಿದೆ.

ಕಾಲ ಸರಿದಂತೆ ಇಲ್ಲಿನ ಸ್ಥಳಪುರಾಣಗಳೂ ಜನರ ಸ್ಮೃತಿಪಟಲದಿಂದ ಮರೆಯಾಗುತ್ತಿದ್ದು, ಕೆಲವು ಸ್ಥಳಪುರಾಣಗಳಲ್ಲಿ ಹೊಸ ವಿವರಗಳು ಸೇರ್ಪಡೆಯಾಗುತ್ತಿವೆ. ಈ ರೀತಿಯ ಸಾಂಸ್ಕೃತಿಕ ಪಲ್ಲಟಗಳನ್ನು ಈ ಕೃತಿಯಲ್ಲಿ ಸೂಕ್ಷ್ಮವಾಗಿ ಗುರುತಿಸಲಾಗಿದೆ. ಉದಾಹರಣೆಗೆ ‘ಬಪ್ಪನಾಡ್‌ ದೇವಸ್ಥಾನದ ಮೂಲ ಚರಿತ್ರೆ’ ಮತ್ತು ಬಪ್ಪನಾಡ್‌ ಉಳ್ಳಾಳ್ದಿಯ ಮತ್ತು ಹಿತ್ತಲಿನ ದೈವಗಳ ಮೂಲ ಚರಿತ್ರೆ’ ಎಂಬ ಎರಡು ಸ್ಥಳನಾಮಗಳನ್ನು ಗಮನಿಸಬಹುದು.

ಬಪ್ಪಬ್ಯಾರಿ ಎನ್ನುವ ಸಾವುಕಾರ ವ್ಯಾಪಾರಿ ತೆಂಕಣದ ರಾಜ್ಯದಿಂದ ಹಡಗಿನಲ್ಲಿ ಬಂದದ್ದು, ಆತನಿಗೆ ಕನಸಿನಲ್ಲಿ ಜಲದುರ್ಗೆ (ಉಳ್ಳಾಳ್ದಿ) ಕಾಣಿಸಿಕೊಂಡದ್ದು, ಸಮುದ್ರದಲ್ಲಿ ಲಿಂಗ ಕಾಣಿಸಿದ್ದು, ದೋಣಿಯಲ್ಲಿ ಹೋಗುವಾಗ ನೀರಿನಲ್ಲಿ ರಕ್ತ ಕಾಣಿಸಿದ್ದು, ಊರವರೆಲ್ಲ ಈ ‘ಕಾರ್ನಿಕ’ವನ್ನು ನಂಬದಿದ್ದಾಗ ಎಲ್ಲರಿಗೂ ಈ ರಕ್ತ ಕಂಡುಬಂದದ್ದು, ತನ್ನ ವ್ಯಾಪಾರದಲ್ಲಿ ಚೆನ್ನಾಗಿ ಲಾಭ ಬಂದರೆ ಅದರಲ್ಲಿ ಕಾಲುಭಾಗ ವಿನಿಯೋಗಿಸಿ ದೇವಸ್ಥಾನ ಕಟ್ಟಿಸುವುದಾಗಿ ಹೇಳಿ, ಅದರಂತೆ ಬಪ್ಪಬ್ಯಾರಿ ನಡೆದುಕೊಂಡದ್ದು, ಮರಳಿ ತನ್ನ ದೇಶಕ್ಕೆ ಹೋಗುವಾಗ ದೇವಸ್ಥಾನವನ್ನು ಊರವರಿಗೆ ಬಿಟ್ಟು ಹೋದದ್ದು- ಮುಂತಾದ ವಿವರಗಳು ಕುತೂಹಲಕರವಾಗಿವೆ.

ಇಲ್ಲಿಯ ಟಿಪ್ಪಣಿಗಳಲ್ಲಿ ಕಾಣಿಸುವ ಭಾಷಾ ನುಡಿಕಟ್ಟುಗಳೂ ತುಳು ಭಾಷೆಯ ಶ್ರೀಮಂತಿಕೆಯನ್ನು ಎತ್ತಿ ತೋರುತ್ತವೆ. ಜಾನಪದ ಕ್ಷೇತ್ರಕಾರ್ಯ ಮಾತ್ರವಲ್ಲ, ಭಾಷಾಶಾಸ್ತ್ರದ ಅಧ್ಯಯನ ಮಾಡುವವರಿಗೂ ಈ ಕೃತಿ ಉತ್ತಮ ಆಕರವಾಗಬಲ್ಲದು.

ಅಡಿಟಿಪ್ಪಣಿಗಳಲ್ಲಿ ಸ್ಥಳಪುರಾಣಗಳಿಗೆ ಸಂಬಂಧಿಸಿ, ಈ ಹಿಂದಿನ ಇತಿಹಾಸಜ್ಞರು ಬರೆದಿರುವ ಕೃತಿಗಳ ಉಲ್ಲೇಖದ ಮೂಲಕ ಸಮಗ್ರ ಚಿತ್ರಣವನ್ನು ಮುಂದಿಡುವ ಕ್ರಮ ಸ್ವಾಗತಾರ್ಹವಾದ್ದು. ಕಳೆದ ಒಂದು ದಶಕದಿಂದ ಭಾಷೆಯ ಬೆಳವಣಿಗೆ ಮತ್ತು ತುಳು ಸಂಸ್ಕೃತಿಯ ಉಳಿವಿಗೆ ಮಹತ್ವದ ಕೊಡುಗೆ ನೀಡಿರುವ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಈ ಕೃತಿಯನ್ನು ಪ್ರಕಟಿಸುವ ಮೂಲಕ ಸ್ತುತ್ಯ ಕಾರ್ಯವನ್ನೇ ಮಾಡಿದೆ.
*
ಬಾಸೆಲ್‌ ಮಿಶನರಿಗಳ ತುಳು ಟಿಪ್ಪಣಿಗಳು
ಸಂಪಾದನೆ ಮತ್ತು ಪೂರಕ ಟಿಪ್ಪಣಿಗಳು: ಡಾ.ಎಂ.ಎಸ್.ದುರ್ಗಾಪ್ರವೀಣ್‌ ಮತ್ತು ಬೆನೆಟ್‌ ಜಿ. ಅಮ್ಮನ್ನ
ಪ್ರ: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಮಂಗಳೂರು
ಪು: 254, ರೂ. 160

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT