ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದತ್‌ಗೆ ಜೈಲು, ಮೆಮನ್‌ಗೆ ಗಲ್ಲು

1993ರ ಮುಂಬೈ ಬಾಂಬ್ ಸ್ಫೋಟ: 20 ವರ್ಷಗಳ ನಂತರ ತೀರ್ಪು
Last Updated 21 ಮಾರ್ಚ್ 2013, 20:10 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಇಡೀ ದೇಶವನ್ನೇ ತಲ್ಲಣಗೊಳಿಸಿದ್ದ 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣದ ಪ್ರಮುಖ ಅಪರಾಧಿ ಯಾಕೂಬ್ ಅಬ್ದುಲ್ ರಜಾಕ್ ಮೆಮನ್‌ಗೆ ಟಾಡಾ ವಿಶೇಷ ನ್ಯಾಯಾಲಯ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಗುರುವಾರ ಸುಪ್ರೀಂಕೋರ್ಟ್ ಕಾಯಂಗೊಳಿಸಿದೆ. ಅಲ್ಲದೇ ಅಕ್ರಮ ಶಸ್ತ್ರಾಸ್ತ್ರ ಹೊಂದಿರುವ ಆರೋಪಕ್ಕಾಗಿ ಬಾಲಿವುಡ್ ನಟ ಸಂಜಯ್ ದತ್ ಅವರಿಗೆ ಐದು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಟಾಡಾ ವಿಶೇಷ ನ್ಯಾಯಾಲಯ ಸಂಜಯ್ ದತ್‌ಗೆ ಆರು ವರ್ಷ ಶಿಕ್ಷೆ ವಿಧಿಸಿತ್ತು. ಇದನ್ನು ಸುಪ್ರೀಂ ಕೋರ್ಟ್ ಐದು ವರ್ಷಗಳಿಗೆ ಇಳಿಸಿದೆ. `ಈ ಪ್ರಕರಣ ಗಂಭೀರ ಸ್ವರೂಪದ್ದಾಗಿರುವುದರಿಂದ ಸನ್ನಡತೆ ಮೇ ನಟನ ಬಿಡುಗಡೆ ಸಾಧ್ಯವಿಲ್ಲ' ಎಂದಿದೆ. ಅಲ್ಲದೇ ಎಲ್ಲ ಆರೋಪಿಗಳು ನಾಲ್ಕೂ ವಾರದೊಳಗೆ ನ್ಯಾಯಾಲಯಕ್ಕೆ ಶರಣಾಗಬೇಕು ಎಂದು ತಾಕೀತು ಮಾಡಿದೆ. ಹೀಗಾಗಿ ಈಗಾಗಲೇ ಒಂದೂವರೆ ವರ್ಷ ಜೈಲು ಶಿಕ್ಷೆ ಅನುಭವಿಸಿರುವ ಸಂಜಯ್ ಇನ್ನೂ ಮೂರೂವರೆ ವರ್ಷ ಸೆರೆಮನೆಯಲ್ಲಿ ಕಳೆಯಬೇಕಾಗುತ್ತದೆ.

ಇಡೀ ದೇಶ ಕುತೂಹಲದಿಂದ ಎದುರು ನೋಡುತ್ತಿದ್ದ ಈ ಪ್ರಕರಣದ ವಿಚಾರಣೆ ನಡೆಸಿದ ಪಿ.ಸದಾಶಿವಂ ಮತ್ತು ಬಿ.ಎಸ್. ಚೌಹಾಣ್ ಅವರಿದ್ದ ನ್ಯಾಯಪೀಠ, ಇನ್ನಿತರ ಹತ್ತು ಅಪರಾಧಿಗಳಿಗೆ `ಟಾಡಾ' ವಿಶೇಷ ನ್ಯಾಯಾಲಯ 2006 ರಲ್ಲಿ ವಿಧಿಸಿದ್ದ ಗಲ್ಲು ಶಿಕ್ಷೆಯನ್ನು ಜೀವಾವಧಿಗೆ ಪರಿವರ್ತಿಸಿದೆ. 18 ಅಪರಾಧಿಗಳ ಪೈಕಿ 16 ಜನರ ಜೀವಾವಧಿ ಶಿಕ್ಷೆಯನ್ನು ಎತ್ತಿ ಹಿಡಿದಿದೆ. ಇಬ್ಬರ ಜೀವಾವಧಿ ಶಿಕ್ಷೆಯ ಪ್ರಮಾಣವನ್ನು ಕಡಿಮೆಗೊಳಿಸಿದೆ.

ಕರಾಳ ಘಟನೆ ನಡೆದು 20 ವರ್ಷಗಳ ನಂತರ ಹೊರಬಿದ್ದ ತೀರ್ಪು ತಿಳಿಯಲು ನೂರಾರು ಜನರು ಕಾತರದಿಂದ ಸುಪ್ರೀಂಕೋರ್ಟ್ ಹೊರಗೆ ಸೇರಿದ್ದರು. ಪ್ರಕರಣದಲ್ಲಿ ಈಗಾಗಲೇ ಶಿಕ್ಷೆಯ ಅವಧಿಯನ್ನು ಪೂರ್ಣಗೊಳಿಸಿದವರನ್ನು ಕೋರ್ಟ್ ಬಿಡುಗಡೆ ಮಾಡಿದೆ. 

ಅಕ್ರಮ ಶಸ್ತ್ರಾಸ್ತ್ರ: ಮುಂಬೈ ಸ್ಫೋಟದ ಸಂದರ್ಭದಲ್ಲಿ ಬಳಸಲು ತಂದಿದ್ದ  9ಎಂ.ಎಂ. ಪಿಸ್ತೂಲು ಮತ್ತು ಎಕೆ-56 ಸ್ವಯಂಚಾಲಿತ ಬಂದೂಕುಗಳನ್ನು ಅಕ್ರಮವಾಗಿ ತನ್ನ ಮನೆಯಲ್ಲಿ ಇರಿಸಿಕೊಂಡ ಆರೋಪದ ಮೇಲೆ ಸಂಜಯ್ ದತ್ ಅವರನ್ನು ಬಂಧಿಸಲಾಗಿತ್ತು.

ಪ್ರಕರಣದ ವಿಚಾರಣೆ ನಡೆಸಿದ್ದ ಟಾಡಾ ನ್ಯಾಯಾಲಯ ಶಸ್ತ್ರಾಸ್ತ್ರ ಕಾಯ್ದೆ ಅಡಿ ಅವರಿಗೆ ಆರು ವರ್ಷ ಶಿಕ್ಷೆ ವಿಧಿಸಿತ್ತು. ಸಂಜಯ್ ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.     

ಪ್ರಕರಣದಿಂದ ಖುಲಾಸೆಗೊಂಡಿರುವ ಶರೀಫ್ ಅಬ್ದುಲ್ ಗಫೂರ್ ಪಾರ್ಕರ್, ಮನೋಜ್ ಕುಮಾರ್ ಗುಪ್ತಾ, ಫಾರೂಕ್ ಮೋಟರ್‌ವಾಲಾ ಮತ್ತು ಮಹಮ್ಮದ್ ರಫೀಕ್ ಉಸ್ಮಾನ್ ಶೇಖ್ ವಿರುದ್ಧ ಮೇಲ್ಮನವಿ ಸಲ್ಲಿಸಲು ನ್ಯಾಯಾಲಯ ಸಿಬಿಐಗೆ ಅವಕಾಶ ಕಲ್ಪಿಸಿದೆ.

ವೃತ್ತಿಯಲ್ಲಿ ಲೆಕ್ಕ ಪರಿಶೋಧಕನಾಗಿದ್ದ ಯಾಕೂಬ್ ಅಬ್ದುಲ್ ರಜಾಕ್ ಮೆಮನ್‌ಗೆ ಟಾಡಾ ನ್ಯಾಯಾಲಯ ವಿಧಿಸಿದ್ದ ಮರಣದಂಡನೆಯನ್ನು ಎತ್ತಿ ಹಿಡಿದಿರುವ ನ್ಯಾಯಾಲಯ, `ಸಂಚಿನ ಪ್ರಮುಖ ರೂವಾರಿ ಮೆಮನ್ ಮರಣದಂಡನೆಗೆ ಅರ್ಹ' ಎಂದು ಅಭಿಪ್ರಾಯಪಟ್ಟಿದೆ. ಟಾಡಾ ನ್ಯಾಯಾಲಯದಿಂದ ಗಲ್ಲು ಶಿಕ್ಷೆಗೆ ಒಳಗಾಗಿದ್ದ ಹತ್ತು ಜನರ ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯನ್ನಾಗಿ ಪರಿವರ್ತಿಸಿರುವ ಕ್ರಮವನ್ನು ನ್ಯಾಯಪೀಠ ಸಮರ್ಥಿಸಿಕೊಂಡಿದೆ.

ಸಮಾಜದ ಅತ್ಯಂತ ಕೆಳಸ್ತರದ ನಿರುದ್ಯೋಗಿ ವ್ಯಕ್ತಿಗಳು ಸಂಚಿಗೆ ಬಲಿಯಾಗಿದ್ದಾರೆ. ಪ್ರಮುಖ ಅಪರಾಧಿಗಳ ಗೌಪ್ಯ ಕಾರ್ಯಸೂಚಿಯನ್ನು ಅರಿಯದ ಅವರನ್ನು ದುಷ್ಕೃತ್ಯಕ್ಕೆ ಬಳಸಿಕೊಳ್ಳಲಾಗಿದೆ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟಿದ್ದಾರೆ.
 

`ಆದೇಶಕ್ಕೆ ಬದ್ಧ'
`ನ್ಯಾಯಾಂಗದಲ್ಲಿ ಇನ್ನೂ ನಂಬಿಕೆ ಇದ್ದು, ಈ ತೀರ್ಪನ್ನು ಒಪ್ಪಿಕೊಂಡಿದ್ದೇನೆ' ಎಂದು ಸಂಜಯ್  ಪ್ರತಿಕ್ರಿಯಿಸಿದ್ದಾರೆ.

ಮುಂಬೈನ ಬಾಂದ್ರಾದ ಪಾಲಿಹಿಲ್‌ನಲ್ಲಿರುವ `ಇಂಪೀರಿಯಲ್ ಹೈಟ್ಸ್' ಅಪಾರ್ಟ್‌ಮೆಂಟ್‌ನ ಹತ್ತನೇ ಮಹಡಿಯಿಂದ ಹೊರ ಬರದ ಸಂಜಯ್, ಮಾಧ್ಯಮಗಳಿಗೆ ಎಸ್‌ಎಂಎಸ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ.

`ಪ್ರಸಿದ್ಧ ಕ್ರಿಮಿನಲ್ ವಕೀಲ ಮಾಜಿದ್ ಮೆಮನ್ ಅವರನ್ನು ಸಂಪರ್ಕಿಸಿ ಕಾನೂನು ನೆರವು ಪಡೆಯುವ ಸಾಧ್ಯತೆಗಳನ್ನು ಪರಿಶೀಲಿಸುತ್ತೇನೆ' ಎಂದು ಹೇಳಿದ್ದಾರೆ.  `ನಾನು ಧೈರ್ಯ ಕಳೆದುಕೊಂಡಿಲ್ಲ. ಕುಟುಂಬದವರು ನನಗೆ ಒತ್ತಾಸೆಯಾಗಿ ನಿಂತಿದ್ದಾರೆ' ಎಂದೂ ಅವರು ಹೇಳಿಕೊಂಡಿದ್ದಾರೆ.

ಕೈವಾಡ ಅಲ್ಲಗಳೆದ ಪಾಕ್
ಇಸ್ಲಾಮಾಬಾದ್ (ಪಿಟಿಐ): ಮುಂಬೈ ಮೇಲೆ 1993ರಲ್ಲಿ ನಡೆದ ಬಾಂಬ್ ದಾಳಿಯಲ್ಲಿ ತನ್ನ ಸರ್ಕಾರದ ಕೈವಾಡವಾಗಲೀ ಅಥವಾ ಸರ್ಕಾರದ ಯಾವುದೇ ಸಂಸ್ಥೆಯ ಕೈವಾಡವಾಗಲೀ ಇಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ.

1993ರ ಮುಂಬೈ ಸ್ಫೋಟದಲ್ಲಿ ಪಾಕಿಸ್ತಾನ ಸರ್ಕಾರದ ಸಂಸ್ಥೆಗಳು ಭಾಗಿಯಾಗಿದ್ದವೆಂದು ಭಾರತದ ಸುಪ್ರೀಂಕೋರ್ಟ್ ತೀರ್ಪು ನೀಡಿರುವ ಹಿನ್ನೆಲೆಯಲ್ಲಿ, ವಿದೇಶಾಂಗ ಇಲಾಖೆ ವಕ್ತಾರ ಅಯಿಜಾಜ್ ಅಹಮ್ಮದ್ ಚೌಧರಿ ಹೀಗೆ ಹೇಳಿದ್ದಾರೆ.

ಘಟನೆಯ ಹಿನ್ನೋಟ...
ಮುಂಬೈ (ಪಿಟಿಐ): 1993 ಮಾರ್ಚ್ 12ರಂದು ಮುಂಬೈನಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ 257 ಜನರು ಪ್ರಾಣ ಕಳೆದುಕೊಂಡಿದ್ದರು. 700 ನಾಗರಿಕರು ಗಾಯಗೊಂಡಿದ್ದರು. ಪ್ರಕರಣದ ವಿಚಾರಣೆಗಾಗಿಯೇ ವಿಶೇಷ ಟಾಡಾ ನ್ಯಾಯಾಲಯ ಸ್ಥಾಪಿಸಲಾಗಿತ್ತು. ಸ್ಫೋಟದ ಸಂಚು ರೂಪಿಸಿದ್ದ ಟೈಗರ್ ಮೆಮನ್ ಪರಾರಿಯಾಗಿದ್ದ.

ಸ್ಫೋಟಕ್ಕೆ ಬಳಸಿದ್ದ ಆರ್‌ಡಿಎಕ್ಸ್ ರಾಸಾಯನಿಕ ಮತ್ತು ಶಸ್ತ್ರಾಸ್ತ್ರಗಳನ್ನು 1993ರ ಫೆಬ್ರುವರಿಯಲ್ಲಿ ಪಾಕಿಸ್ತಾನದಿಂದ ದೋಣಿಗಳಲ್ಲಿ ರಾಯಗಡ ಜಿಲ್ಲೆಯ ದಿಘೆ ಮತ್ತು ಶೇಖಾಡಿ ಕರಾವಳಿಗೆ ತರಲಾಗಿತ್ತು ಎಂಬ ಮಾಹಿತಿಯನ್ನು ಪ್ರಕರಣದ ತನಿಖೆ ನಡೆಸಿದ ಸಿಬಿಐ ಬಹಿರಂಗಪಡಿಸಿತ್ತು.

ಟೈಗರ್ ಮೆಮನ್ ಸಹಚರರು ಅಲ್ಲಿಂದ ಶಸ್ತ್ರಾಸ್ತ್ರಗಳನ್ನು ಮುಂಬೈಗೆ ಸಾಗಿಸಿದ್ದರು. ಅವುಗಳಲ್ಲಿ ಕೆಲವು ಶಸ್ತ್ರಾಸ್ತ್ರಗಳನ್ನು ಬಾಲಿವುಡ್ ಚಿತ್ರ ನಿರ್ಮಾಪಕ ಸಮೀರ್ ಹಿಂಗೋರಾನಿ ಮತ್ತು ಹನೀಫ್ ಕಾಡಾವಾಲಾ ಅವರು ನಟ ಸಂಜಯ್ ದತ್‌ರ  ಪಾಲಿ ಹಿಲ್ ನಿವಾಸಕ್ಕೆ ಸಾಗಿಸಿದ್ದರು. ಟಾಡಾ ನ್ಯಾಯಾಲಯ ನೀಡಿದ್ದ ಜೈಲು ಶಿಕ್ಷೆಯನ್ನು ಹಿಂಗೋರಾನಿ ಈಗಾಗಲೇ ಪೂರ್ಣಗೊಳಿಸಿದ್ದಾರೆ. 

ಪಾಕ್‌ನಲ್ಲಿ ತರಬೇತಿ: ಐಎಸ್‌ಐ ಕೈವಾಡ ಸಾಬೀತು: ಮುಂಬೈ ಸ್ಫೋಟ ಪ್ರಕರಣದಲ್ಲಿ ಪಾಕಿಸ್ತಾನ ಮತ್ತು ಅದರ ಬೇಹುಗಾರಿಕೆ ಸಂಸ್ಥೆ ಐಎಸ್‌ಐ ಪಾತ್ರ ಇರುವುದು ದೃಢಪಟ್ಟಿದೆ. ಎಲ್ಲ ಅಪರಾಧಿಗಳಿಗೆ ಪಾಕಿಸ್ತಾನದಲ್ಲಿ ತರಬೇತಿ ನೀಡಲಾಗಿದೆ ಎಂದು ನ್ಯಾಯಮೂರ್ತಿ ಹೇಳಿದರು. ಸ್ಫೋಟಕ್ಕೂ ಮುನ್ನ ಪಾಕಿಸ್ತಾನದಲ್ಲಿ ಎಲ್ಲ ಬಗೆಯ ಪೂರ್ವ ಸಿದ್ಧತೆ, ತರಬೇತಿ ಮತ್ತು ಪ್ರಾತ್ಯಕ್ಷಿಕೆ ನಡೆದಿದೆ. ದಾವೂದ್ ಇಬ್ರಾಹಿಂ, ಟೈಗರ್ ಮೆಮನ್ ಮತ್ತು ಇತರರು ಪಾಕಿಸ್ತಾನ ನೆರವಿನಿಂದ ಸ್ಫೋಟ ನಡೆಸಿರುವುದು ಖಚಿತಪಟ್ಟಿದೆ ಎಂದರು.

ಪಾಕಿಸ್ತಾನದ ಶಿಬಿರಗಳಲ್ಲಿಯೇ ಆರ್‌ಡಿಎಕ್ಸ್ ಮತ್ತು ಸ್ವಯಂಚಾಲಿತ ಬಂದೂಕು ಎಕೆ-56 ಬಳಕೆ ತರಬೇತಿಯನ್ನು ಪಡೆದಿರುವುದಾಗಿ ಬಹುತೇಕ ಅಪರಾಧಿಗಳು ವಿಚಾರಣೆಯ ವೇಳೆ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾರೆ. ಈ ತರಬೇತಿ ಶಿಬಿರಗಳು ಭೂಗತ ಪಾತಕಿ ದಾವೂದ್ ಇಬ್ರಾಹಿಂ ಮತ್ತು ಇತರರ ನೇರ ನಿಗಾದಲ್ಲಿರುವ ವಿಷಯ ನ್ಯಾಯಾಲಯಕ್ಕೆ ಮನವರಿಕೆಯಾಗಿದೆ ಎಂದು ನ್ಯಾಯಮೂರ್ತಿ ಹೇಳಿದರು. ಕೆಲವು ಪೊಲೀಸ್ ಅಧಿಕಾರಿಗಳು ಸ್ಫೋಟ ಮತ್ತು ಶಸ್ತ್ರಾಸ್ತ್ರ ಕಳ್ಳ ಸಾಗಾಟದಲ್ಲಿ ಭಾಗಿಯಾಗಿರುವುದು ಕೂಡ ಗಮನಕ್ಕೆ ಬಂದಿದೆ ಎಂದರು. ಸಂಚುಕೋರರನ್ನು ದುಬೈ ಮೂಲಕ ಪಾಕಿಸ್ತಾನಕ್ಕೆ ಕರೆತಂದು ತರಬೇತಿ ನೀಡಲಾಗಿದೆ. ಐಎಸ್‌ಐ ಆಣತಿಯಂತೆ ಇಸ್ಲಾಮಾಬಾದ್ ವಿಮಾನ ನಿಲ್ದಾಣದಲ್ಲಿ ಯಾವುದೇ ತಪಾಸಣೆ ನಡೆಸದೆ ಪಾತಕಿಗಳನ್ನು ಕಳಿಸಿಕೊಡಲಾಗಿದೆ. ವಲಸೆ ನಿಯಮಾವಳಿಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಲಾಗಿದೆ ಎಂದರು.

ನೇಣಿನ ಕುಣಿಕೆಯಿಂದ ಪಾರಾದವರು: ಅಬ್ದುಲ್ ಗನಿ ಇಸ್ಮಾಯಿಲ್ ತುರ್ಕ್, ಪರ್ವೇಜ್ ನಾಜಿರ್ ಅಹಮ್ಮದ್ ಶೇಖ್, ಮುಷ್ತಾಕ್ ತರಾನಿ, ಅಸ್ಗರ್ ಮುಕದಂ, ಶಾ ನವಾಜ್ ಖುರೇಶಿ, ಶೋಯಬ್ ಘನ್ಸಾರ್, ಫಿರೋಜ್ ಅಮಾನಿ ಮಲ್ಕಿ, ಝಕೀರ್ ಹುಸೇನ್, ಅಬ್ದುಲ್ ಅಖ್ತರ್ ಖಾನ್ ಮತ್ತು ಫರೂಕ್ ಪಾವಲೆ

ಪ್ರಮುಖ ಘಟನಾವಳಿಗಳು
ಮಾರ್ಚ್ 12, 1993: ಮುಂಬೈನಲ್ಲಿ ಸಂಭವಿಸಿದ 13 ಸರಣಿ ಬಾಂಬ್‌ಸ್ಫೋಟಗಳಲ್ಲಿ 257 ಮಂದಿ ಸಾವು. 713 ಮಂದಿಗೆ ಗಾಯ.

ಏಪ್ರಿಲ್ 19: ನಟ ಸಂಜಯ್ ದತ್ ಬಂಧನ (117ನೇ ಆರೋಪಿ)

ನವೆಂಬರ್ 4: ಸಂಜಯ್ ದತ್ ಸೇರಿ 189 ಆರೋಪಿಗಳ ವಿರುದ್ಧ 10,000 ಪುಟಗಳ ಪ್ರಾಥಮಿಕ ಆರೋಪ ಪಟ್ಟಿ ಸಲ್ಲಿಕೆ

ನವೆಂಬರ್ 19: ಪ್ರಕರಣ ಸಿಬಿಐಗೆ ಹಸ್ತಾಂತರ

ಏಪ್ರಿಲ್ 10, 1995: ಟಾಡಾ ಕೋರ್ಟ್‌ನಿಂದ 26 ಆರೋಪಿಗಳ ಖುಲಾಸೆ. ಇತರ ಆರೋಪಿಗಳ ವಿರುದ್ಧ ದೋಷಾರೋಪ. ಸುಪ್ರೀಂಕೋರ್ಟ್‌ನಿಂದ ಪ್ರವಾಸಿ ಏಜೆಂಟ್ ಅಬು ಅಸೀಮ್ ಅಜ್ಮಿ (ಸಮಾಜವಾದಿ ಪಕ್ಷದ ಹಾಲಿ ಸಂಸದ) ಮತ್ತು ಅಮ್ಜದ್ ಮೆಹರ್ ಬೌಕ್ಸ್ ಖುಲಾಸೆ.

ಜೂನ್ 30: ಆರೋಪಿಗಳಾದ ಮೊಹಮ್ಮದ್ ಜಮೀಲ್ ಮತ್ತು ಉಸ್ಮಾನ್ ಝಂಕನನ್ ಮಾಫಿ ಸಾಕ್ಷಿಗಳಾಗಿ ಪರಿವರ್ತನೆ

ಅಕ್ಟೋಬರ್ 14: ದತ್‌ಗೆ ಸುಪ್ರೀಂಕೋರ್ಟ್‌ನಿಂದ ಜಾಮೀನು

ಅಕ್ಟೋಬರ್ 2000: 684 ಸಾಕ್ಷಿಗಳ ಹೇಳಿಕೆ

ಮಾರ್ಚ್ 9-ಜುಲೈ 18, 2001: ಆರೋಪಿಗಳ ಹೇಳಿಕೆ ದಾಖಲು.

ಫೆಬ್ರುವರಿ 20, 2003: ದಾವೂದ್ ತಂಡದ ಸದಸ್ಯ ಇಜಾಜ್ ಪಠಾಣ್ ನ್ಯಾಯಾಲಯಕ್ಕೆ ಹಾಜರು

ಮಾರ್ಚ್ 20, 2003: ಮುಸ್ತಫಾ ದೊಸ್ಸಾ ವಶಕ್ಕೆ, ಪ್ರತ್ಯೇಕ ವಿಚಾರಣೆ

ಸೆಪ್ಟೆಂಬರ್ 2003: ವಿಚಾರಣೆ ಮುಕ್ತಾಯ. ತೀರ್ಪು ಕಾಯ್ದಿರಿಸಿದ ನ್ಯಾಯಾಲಯ

ಜೂನ್ 13, 2006:  ಅಬು ಸಲೇಂನ ಪ್ರತ್ಯೇಕ ವಿಚಾರಣೆ

ಸೆಪ್ಟೆಂಬರ್ 12: ತೀರ್ಪು ಪ್ರಕಟ-ಮೆಮನ್ ಕುಟುಂಬದ ನಾಲ್ವರು ತಪ್ಪಿತಸ್ಥರು, ಮೂವರ ಖುಲಾಸೆ. 12 ಜನರಿಗೆ ಮರಣದಂಡನೆ ಹಾಗೂ 20 ಮಂದಿಗೆ ಜೀವಾವಧಿ ಶಿಕ್ಷೆ

ನವೆಂಬರ್ 1, 2011: ಸುಪ್ರೀಂಕೋರ್ಟ್‌ನಲ್ಲಿ 100 ಆರೋಪಿಗಳ ಮತ್ತು ಸರ್ಕಾರದ ಅರ್ಜಿಯ ವಿಚಾರಣೆ ಆರಂಭ

ಆಗಸ್ಟ್ 29, 2012: ಅರ್ಜಿ ವಿಚಾರಣೆಗೆ ಸಂಬಂಧಿಸಿದ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್

ಮಾರ್ಚ್ 21, 2013: ಟೈಗರ್ ಮೆಮನ್ ಸಹೋದರ ಯಾಕೂಬ್ ಮೆಮನ್‌ಗೆ ಮರಣದಂಡನೆ. 10 ಜನರ ಮರಣದಂಡನೆ ಜೀವಾವಧಿ ಶಿಕ್ಷೆಯಾಗಿ ಪರಿವರ್ತನೆ. 18 ಜನ ತಪ್ಪಿತಸ್ಥರಲ್ಲಿ 16 ಮಂದಿಗೆ ಜೀವಾವಧಿ ಶಿಕ್ಷೆ ಎತ್ತಿ ಹಿಡಿದ ಸುಪ್ರೀಂಕೋರ್ಟ್
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT