ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಬಂಡವಾಳ ವಿಮೋಚನೆಯ ಮಾರ್ಗವೇ?

Last Updated 9 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

‘ದಲಿತ ಬಂಡವಾಳ’ ಇಂದಿನ ಜನಪ್ರಿಯ ಪರಿಕಲ್ಪನೆಗಳಲ್ಲೊಂದು. ಆದರೆ, ಈ ಪರಿಕಲ್ಪನೆ ದಲಿತರ ಏಳಿಗೆಗೆ ನಿಜಕ್ಕೂ ಪೂರಕವಾಗಿದೆಯೇ ಅಥವಾ ದಲಿತರನ್ನು ದಿಕ್ಕುತಪ್ಪಿಸಿ ಅವರನ್ನು ಕತ್ತಲಲ್ಲಿಯೇ ಇರಿಸುತ್ತಿದೆಯೇ? ಅಂಬೇಡ್ಕರ್‌ ಅವರ 125ನೇ ಜಯಂತಿ ಸಂದರ್ಭದಲ್ಲಿ, ‘ದಲಿತ ಬಂಡವಾಳ’ದ ಪರಿಕಲ್ಪನೆ ಹುಟ್ಟುಹಾಕಿರುವ ಹಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಪ್ರಯತ್ನದ ಈ ಬರಹ, ದಲಿತರ ಹಿತಾಸಕ್ತಿಗೆ ಯಾವುದು ಪೂರಕ – ಯಾವುದು ಮಾರಕ ಎನ್ನುವ ಸಾಧ್ಯತೆಗಳನ್ನು ಸೂಚ್ಯವಾಗಿ ಕಾಣಿಸುವಂತಿದೆ.

‘ಕೈಗಾರೀಕರಣ ಮತ್ತು ವಾಣಿಜ್ಯೋದ್ಯಮ ಕುರಿತು ಡಾ. ಅಂಬೇಡ್ಕರ್ ಚಿಂತನೆ ಹಾಗೂ ಸಿದ್ಧಾಂತಗಳು’ ಎಂಬ ವಿಷಯದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಬುಡಕಟ್ಟಿಗೆ ಸೇರಿದ ವಾಣಿಜ್ಯೋದ್ಯಮಿಗಳ ರಾಷ್ಟ್ರೀಯ ಸಮಾವೇಶ ಇತ್ತೀಚೆಗೆ ನಡೆಯಿತು. ಅದು ಹಲವು ಸವಾಲುಗಳನ್ನು ಮುಂದಿಟ್ಟಿದೆ. ‘ಉದ್ಯೋಗ ಕೊಡುವವರಾಗಿ’ ಎಂಬ ‘ಡಿಐಸಿಸಿಐ’ (ದಲಿತ್ ಇಂಡಿಯನ್‌ ಚೇಂಬರ್‌ ಆಫ್‌ ಕಾಮರ್ಸ್‌ ಅಂಡ್‌ ಇಂಡಸ್ಟ್ರಿ) ಕರೆಗೆ ಅನುಗುಣವಾಗಿ ‘ದಲಿತ ಬಂಡವಾಳ’ ತತ್ವವನ್ನು ಒಪ್ಪಿಕೊಳ್ಳಬೇಕೋ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಪಾದಿಸಿದ ವಿಮೋಚನಾ ಹೋರಾಟದ ಮಾರ್ಗಗಳನ್ನೇ ಅನುಸರಿಸಬೇಕೋ ಎಂಬ ಜಿಜ್ಞಾಸೆಯನ್ನು ಸಮಾವೇಶದ ಸಂದೇಶ ಹುಟ್ಟುಹಾಕಿದೆ.

‘ದಲಿತ ಬಂಡವಾಳಶಾಹಿ’ ಎನ್ನುವುದು ದಲಿತರ ದೊಡ್ಡ ಸಮುದಾಯಕ್ಕೆ ನಿಜಕ್ಕೂ ನ್ಯಾಯ ಒದಗಿಸುತ್ತದೋ ಅಥವಾ ಅಧಿಕಾರ, ಸ್ವಹಿತಾಸಕ್ತಿ ಉಳ್ಳ ಕೆಲವೇ ಹಣವಂತರ ಕಾರ್ಯಸೂಚಿ ಮಾತ್ರವೋ ಎನ್ನುವುದು ಪ್ರಶ್ನೆ. ಈ ಪ್ರಬಂಧವು ಬಂಡವಾಳದಾರರಾಗಿ ದಲಿತರ ಪಾಲ್ಗೊಳ್ಳುವಿಕೆ ಹಾಗೂ ವಿಶಾಲ ದೃಷ್ಟಿಯಲ್ಲಿ ದಲಿತರ ಕಲ್ಯಾಣದ ಸಾಧ್ಯತೆಗಳನ್ನು ಹೇಳಲು ಯತ್ನಿಸುತ್ತದೆ.

ಕಳೆದ ಕೆಲವು ವರ್ಷಗಳಿಂದ ದಲಿತರು ಬಂಡವಾಳ ಹೂಡಿ ಉದ್ಯಮಗಳನ್ನು ಆರಂಭಿಸುವಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಭಾರತದಲ್ಲಿ ಬಂಡವಾಳದಾರರ ಸಂಖ್ಯೆ ಹೆಚ್ಚಾಗತೊಡಗಿದಾಗ ಆರ್ಥಿಕ ಸ್ಥಿತ್ಯಂತರವೊಂದು ಆಯಿತು. ಅದರ ಭಾಗವಾಗಿ ಸರ್ಕಾರಿ ಹಾಗೂ ಖಾಸಗಿ ವಲಯಗಳಲ್ಲಿ ದಲಿತರಿಗೂ ಬಂಡವಾಳದಾರರಾಗುವ ಅವಕಾಶ ಸೃಷ್ಟಿಯಾಯಿತು. ಅದಕ್ಕೆ ಮೊದಲಿನ ಇತಿಹಾಸ ನೋಡಿದರೆ ದಲಿತರು ಬಂಡವಾಳ ಹೂಡುವುದೂ ನಿಷಿದ್ಧ ಎಂಬ ವಾತಾವರಣ ಇದ್ದುದು ಸ್ಪಷ್ಟವಾಗುತ್ತದೆ. ಶಿಕ್ಷಣ ಕ್ಷೇತ್ರ, ಮಾಧ್ಯಮ ಹಾಗೂ ವಿವಿಧ ಜ್ಞಾನ ಕೇಂದ್ರಿತ ವಲಯಗಳಲ್ಲಿ ದಲಿತ ಉದ್ಯಮಿಗಳ ಸಂಖ್ಯೆ ಈಚೆಗೆ ಹೆಚ್ಚುತ್ತಿರುವುದು ಚರ್ಚೆಗೆ ಒಳಪಟ್ಟಿದೆ. ಆದರೆ, ದಲಿತ ಮಿಲಿಯನೇರುಗಳು ಈಗಿನ ದಲಿತರ ಸ್ಥಿತಿಗತಿಗಳನ್ನು ನಿಜಕ್ಕೂ ಬಿಂಬಿಸುತ್ತಿದ್ದಾರೆಯೇ? ಹಾಗಿದ್ದರೆ, ಅದು ಎಷ್ಟರ ಮಟ್ಟಿಗೆ ದಲಿತರು ಹಾಗೂ ಇತರ ಮೂಲಸೌಕರ್ಯ ವಂಚಿತರ ಬದುಕನ್ನು ಸುಧಾರಿಸಿದೆ ಎನ್ನುವ ಪ್ರಶ್ನೆ ಏಳುತ್ತದೆ.

ದಲಿತ ಬಂಡವಾಳಶಾಹಿ ಹಾಗೂ ಕೆಲವು ಪ್ರಶ್ನೆಗಳು
ದಲಿತರೇ ಬಂಡವಾಳದಾರರಾಗುವುದರಿಂದ ಆ ಸಮುದಾಯದವರ ಆರ್ಥಿಕ ಸ್ಥಿತಿ ಸುಧಾರಿಸುವುದೇ ಅಲ್ಲದೆ ಉದ್ಯೋಗಕ್ಕಾಗಿ ಮೇಲುಜಾತಿಯವರನ್ನು ಅವಲಂಬಿಸುವುದು ತಪ್ಪುತ್ತದೆ ಎನ್ನುವುದು ‘ದಲಿತ ಬಂಡವಾಳಶಾಹಿ’ ಪ್ರತಿಪಾದಕರ ವಾದ. 

ಮೇಲುಜಾತಿಯವರಲ್ಲಿ ಸಂಬಳಕ್ಕೆ ಕೆಲಸ ಮಾಡುತ್ತಾ ಇರುವವರನ್ನು ಬಡತನದ ಸಂಕೋಲೆಗಳಿಂದ ಬಿಡಿಸಿ, ಬಂಡವಾಳದಾರರಾಗಲು ‘ದಲಿತ ಬಂಡವಾಳಶಾಹಿ’ ಕಾರಣವಾಗುವುದಲ್ಲದೆ, ದಲಿತರಿಗೇ ಉದ್ಯೋಗಾವಕಾಶ ನೀಡುವ ಚೈತನ್ಯವನ್ನು ನೀಡುತ್ತದೆ ಎನ್ನುವುದು ಈ ವಾದದ ವಿವರಣೆ. ಇದನ್ನು ಸಾಕಾರಗೊಳಿಸಲು ‘ಡಿಐಸಿಸಿಐ’ ಸೇರಿದಂತೆ ಹಲವು ಸಂಸ್ಥೆಗಳು ವ್ಯವಸ್ಥಿತ ಪ್ರಯತ್ನಗಳನ್ನು ನಡೆಸುತ್ತಿವೆ. ಕೆಲವೇ ಕೆಲವರಿಂದ ರೂಪುಗೊಂಡಿರುವ ‘ದಲಿತ ಬಂಡವಾಳಶಾಹಿ’ ಪರಿಕಲ್ಪನೆಯ ಕುರಿತು ಕೆಲವು ಪ್ರಶ್ನೆಗಳಿಗೆ ಉತ್ತರ ಬೇಡುತ್ತಿದೆ.

ಮೊದಲನೆಯದಾಗಿ, ದಲಿತ ಬಂಡವಾಳಶಾಹಿಗಳ ‘ವರ್ಗ ಪ್ರಜ್ಞೆ’ಯು ಯಾವ ರೀತಿಯಲ್ಲಿ ಮೇಲ್ವರ್ಗದ ಬಂಡವಾಳಶಾಹಿಗಳ ‘ಜಾತಿ ಪ್ರಜ್ಞೆ’ಯನ್ನು ನಿವಾರಿಸುತ್ತದೆ? ಬಂಡವಾಳ ಹೊಂದಿಸುವುದರಲ್ಲಿ ದಲಿತನೊಬ್ಬ ಯಶಸ್ವಿಯಾದರೂ ಭಾರತೀಯ ಸಮಾಜದಲ್ಲಿ ಅವನ ಜಾತಿ ಸ್ಥಿತಿ ಏನೂ ಬದಲಾಗುವುದಿಲ್ಲ. ಅವನನ್ನು ‘ದಲಿತ’ ಎಂದೇ ಸಮಾಜ ಕರೆಯುತ್ತದೆ.

ಒಂದು ವ್ಯತ್ಯಾಸ ಏನೆಂದರೆ, ‘ದಲಿತ ಮಿಲಿಯನೇರ್‌’ ಎಂದು ಕರೆಯಬಹುದಷ್ಟೆ. ಎರಡನೆಯದಾಗಿ, ದಲಿತರು ಆಸ್ತಿಪಾಸ್ತಿ ಹೊಂದುವುದರಿಂದ ಅವರ ಸಾರ್ವಜನಿಕ ಬದುಕು ಸುಧಾರಿಸುವುದೇ? ಮೂರನೆಯದಾಗಿ, ದಲಿತ ಬಂಡವಾಳಶಾಹಿಗಳಿಂದ ಇಡೀ ದಲಿತ ಸಮುದಾಯದ ಸುಧಾರಣೆ ಸಾಧ್ಯವೋ ಅಥವಾ ಕೆಲವೇ ಜನರಿಗೆ ಅದರಿಂದ ಲಾಭ­ವಾಗುವುದೋ? ದಲಿತ ಸಮುದಾಯಗಳ ಒಳಗೇ ಲಿಂಗ ತಾರತಮ್ಯವನ್ನು ನಿವಾರಿಸುವಲ್ಲಿ ದಲಿತ ಬಂಡವಾಳ ಶಾಹಿ ತತ್ವದ ಪಾತ್ರವೇನು? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು, ಭಾರತೀಯ ಸಮಾಜದಲ್ಲಿ ಬಂಡವಾಳ ಹಾಗೂ ಉದ್ಯೋಗಗಳಿಗೂ ಜಾತಿ ವ್ಯವಸ್ಥೆಗೂ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳಬೇಕಾಗುತ್ತದೆ.

ಜಾತಿ ಮತ್ತು ಶ್ರಮ
ಶ್ರಮವನ್ನು ಅಥವಾ ಉದ್ಯೋಗವನ್ನು ಹೊರತುಪಡಿಸಿ ಬಂಡವಾಳ ಆರ್ಥಿಕತೆಯ ಕುರಿತು ಯೋಚಿಸಲು ಸಾಧ್ಯವೇ ಇಲ್ಲ. ಆಧುನಿಕ ಅರ್ಥವ್ಯವಸ್ಥೆಯಲ್ಲಿನ ಉದ್ಯೋಗಗಳು ನಿರ್ದಿಷ್ಟ ಕೌಶಲಗಳು ಹಾಗೂ ಸಾಮರ್ಥ್ಯವನ್ನು ಬೇಡುತ್ತವೆ. ಅದರಲ್ಲೂ ಭಾರತದಲ್ಲಿ ‘ವೈಟ್‌ ಕಾಲರ್‌ ಕೆಲಸ’ಗಳಲ್ಲಿ ಮೇಲ್ಜಾತಿಯವರೇ ಹೆಚ್ಚಿದ್ದಾರೆ; ಅಷ್ಟು ಮಾತ್ರವಲ್ಲ ಈ ಉದ್ಯೋಗಗಳ ನಿಯಂತ್ರಣವೂ ಅವರ ಕೈಯಲ್ಲೇ ಇದೆ.

ಆರ್ಥಿಕ ಸಂರಚನೆಯೊಳಗೆ ಸಾಮಾಜಿಕ ಅನನ್ಯತೆಗಳು ಹೇಗೆ ಮಿಳಿತವಾಗಿರುತ್ತದೆಂದರೆ, ಅವಕಾಶಗಳು ಹಾಗೂ ಲಾಭಗಳು ಕೆಳವರ್ಗದವರಿಗೆ ದಕ್ಕುವ ಪ್ರಮಾಣ ಸಹಜವಾಗಿಯೇ ಕಡಿಮೆ. ಸಾಮಾಜಿಕ ಸ್ತರದಲ್ಲಿ ಕೆಳ ಹಂತದಲ್ಲಿರುವ ದಲಿತರಿಗೆ ಸಿಗುವ ಅವಕಾಶಗಳು ಇಲ್ಲ ಎನ್ನುವಷ್ಟು ಕಡಿಮೆಯಾಗಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತದೆ. ಏಕೆಂದರೆ ಈ ಹಿಂದೆ ಹೆಚ್ಚಿನ ಉತ್ಪಾದನಾ ಸಾಮರ್ಥ್ಯ ಹಾಗೂ ಕೌಶಲಗಳನ್ನು ಬಯಸುವ, ಅವಕಾಶ  ಸೃಷ್ಟಿಸುವ ಪ್ರಮುಖ ವಲಯಗಳು ಹಾಗೂ ಸಂಸ್ಥೆಗಳು ಸಹಜವಾಗಿಯೇ ಮೊದಲಿನಿಂದಲೂ ದಲಿತರನ್ನು ದೂರ ಇಡುತ್ತಲೇ ಬಂದಿವೆ. ಪರಿಣಾಮವಾಗಿ ವರ್ತಮಾನದ ಅರ್ಥ ವ್ಯವಸ್ಥೆಯಲ್ಲಿ ದಲಿತರ ಸ್ಥಿತಿ ಆಸ್ತಿ ಮತ್ತು ಉತ್ಪಾದನಾ ವಿಧಾನಗಳ ಹಂಚಿಕೆಯಲ್ಲಿರುವ ತೀವ್ರ ಅಸಮಾನತೆಯನ್ನು ಪ್ರತಿಬಿಂಬಿಸುತ್ತಿದೆ.

‘ಅನ್ಹಿಲೇಷನ್ ಆಫ್ ಕ್ಯಾಸ್’ನಲ್ಲಿ (ಜಾತಿ ವಿನಾಶ) ಬಾಬಾಸಾಹೇಬರು ಹೇಳುವಂತೆ ‘ಮನುಷ್ಯನ ಅಧಿಕಾರವು ಈ ಮೂರು ಅಂಶಗಳನ್ನು ಅವಲಂಬಿಸಿರುತ್ತದೆ: 1. ಭೌತಿಕ ಅನುವಂಶೀಯತೆ, 2.  ಸಾಮಾಜಿಕವಾಗಿ ಆರ್ಜಿಸಿಕೊಂಡ ಜ್ಞಾನ. ಅಥವಾ ತಂದೆ ತಾಯಿಯರ ಲಾಲನೆ, ಶಿಕ್ಷಣ, ವೈಜ್ಞಾನಿಕ ಅರಿವುಗಳ ಮೂಲಕ ವ್ಯಕ್ತಿಗಳಿಸಿರುವ ನಾಗರಿಕ ಜ್ಞಾನ ಮತ್ತು ಕೊನೆಯದಾಗಿ 3. ಸ್ವಪ್ರಯತ್ನ’.

ಇಲ್ಲಿ ‘ಸ್ವಪ್ರಯತ್ನ’ ಎಂಬುದು ಮೂರನೇ ಅಂಶವೆಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಮಾರುಕಟ್ಟೆಯಲ್ಲಿ ಸ್ಪರ್ಧಿಸಲು ಮೊದಲೆರಡು ಅಂಶಗಳು ಹೆಚ್ಚು ಮುಖ್ಯವಾಗುತ್ತವೆ. ‘ಬೇಡಿಕೆ ಹಾಗೂ ಪೂರೈಕೆ’ ಎಂಬ ಅರ್ಥಶಾಸ್ತ್ರದ ಮೂಲ ತತ್ವವನ್ನೇ ಭಾರತೀಯ ಉದ್ಯೋಗ ಮಾರುಕಟ್ಟೆಯಲ್ಲಿ ಮುರಿಯಲಾಗುತ್ತಿದೆ. ಮನುಷ್ಯ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಂಡು ಅವಕಾಶಗಳ ಕದ ಕಟ್ಟಲು ಬೇಕಾದ ಶೈಕ್ಷಣಿಕ ವ್ಯವಸ್ಥೆಯನ್ನು ಮಾಹಿತಿ ಕಲೆಹಾಕುವ ಪ್ರಕ್ರಿಯೆ ಅವಲಂಬಿಸಿರುತ್ತದೆ.

ಭಾರತೀಯ ಸಾಮಾಜಿಕ ಅನುಭವದಲ್ಲಿ ಜಾತಿ ವ್ಯವಸ್ಥೆಯಿಂದ ಈ ಪ್ರಕ್ರಿಯೆಯೂ ಊನವಾಗಿದೆ. ಭಾರತೀಯ ಸಾಮಾಜಿಕ ಸ್ತರಗಳ ವ್ಯವಸ್ಥೆಯು ಜಾತಿ ಆಧಾರಿತವಾದುದು. ಕಾರ್ಮಿಕ ಮಾರುಕಟ್ಟೆಯ ಕಾರ್ಯವೈಖರಿಯ ಮೇಲೆ ಜಾತೀಯತೆ, ಜನಾಂಗೀಯತೆ, ಲಿಂಗ ಮೊದಲಾದ ಅಂಶಗಳು ಪ್ರಭಾವ ಬೀರುತ್ತವೆ. ಶಿಕ್ಷಣ, ಉದ್ಯೋಗ ಅಥವಾ ವರ್ತನೆಯ ಮಾದರಿಗಳನ್ನು ದಕ್ಕಿಸಿಕೊಳ್ಳುವಲ್ಲಿ ಈ ಪ್ರಭಾವದ ಪಾತ್ರ ಬಹುಮುಖ್ಯ. ಇದು ಮಾರುಕಟ್ಟೆ ಫಲಿತದಲ್ಲಿ ಅಸಮಾನತೆಯನ್ನು ಉಂಟುಮಾಡುತ್ತದೆ. ಮಾರುಕಟ್ಟೆಯು ವ್ಯಕ್ತಿಯ ಗುರುತನ್ನು ಗೌಣ ಮಾಡಿಬಿಡುತ್ತದೆ ಎನ್ನುವುದು ಭ್ರಮೆ ಎಂದು ರುಜುವಾತಾಗಿದ್ದು ಜಾತಿಯೇ ಭಾರತೀಯ ಮಾರುಕಟ್ಟೆಯಲ್ಲಿ ನಿರ್ಣಾಯ ಅಂಶವಾಗಿರುವುದು ಸ್ಪಷ್ಟ.

ಉತ್ಪಾದನಾ ಸರಪಳಿಯಲ್ಲಿ ದಲಿತರು ಭಿನ್ನ ಸ್ಥಾನದಲ್ಲಿ ನಿಲ್ಲುತ್ತಾರೆ. ಕಡಿಮೆ ಉತ್ಪಾದನೆ, ಅಸ್ತಿತ್ವದ ಹೋರಾಟ ಇತ್ಯಾದಿಯಿಂದ ಅವರು ಈ ಸರಪಳಿಯಲ್ಲಿ ಇರುವುದು ಕೊನೆಯ ಸ್ಥಾನದಲ್ಲಿ. ಇದರ ಫಲಿತಾಂಶವೆಂಬಂತೆ, ‘ಸಮಾಜದ ಗತಿಶೀಲತೆಯೇ ಉದ್ದಿಮೆದಾರತ್ವ’ ಎಂಬ ಕನಸು ಭಾರತದಲ್ಲಿ ನನಸಾಗಲಿಲ್ಲ. ಬಂಡವಾಳದಾರ ದಲಿತರಿಗೆ ದಲಿತೇತರರಿಂದಲೂ ವ್ಯಾಪಾರದಲ್ಲಿ ಹೂಡಿಕೆಯ ಅವಕಾಶಗಳು ದೊರೆಯುತ್ತವೆಯೋ ಅಥವಾ ತಮ್ಮದೇ ಸಂಪರ್ಕಜಾಲವನ್ನು ಅವಲಂಬಿಸಿ, ಕಡಿಮೆ ಮೌಲ್ಯಾಧಾರಿತ ಉತ್ಪಾದನಾ ವ್ಯವಸ್ಥೆಯನ್ನೇ ನೆಚ್ಚಿಕೊಳ್ಳುವರೋ ಎನ್ನುವುದು ಇನ್ನೊಂದು ಪ್ರಶ್ನೆ. ಜ್ಞಾನಕೇಂದ್ರಿತ ಉತ್ಪಾದನಾ ವ್ಯವಸ್ಥೆಯಲ್ಲಿ ಮೇಲುಜಾತಿಯವರ ಪಾರಮ್ಯವಿದೆ. ಆ ಉತ್ಪಾದನಾ ಸಂರಚನೆಯಲ್ಲಿ ದಲಿತರು ವೇತನ ಕಾರ್ಮಿಕರಾಗಿಯಷ್ಟೇ ಕೆಲಸ ಮಾಡುತ್ತಿರುವುದು.

ಇವತ್ತು ಬಹುತೇಕ ದಲಿತರು ಹೊಟ್ಟೆಪಾಡಿಗೆ ಸಾಕಾಗುವಷ್ಟು ವೇತನವನ್ನು ಮಾತ್ರ ಪಡೆಯುತ್ತ, ಕಾರ್ಮಿಕ ಮಾರುಕಟ್ಟೆಯಲ್ಲಿನ ಅನಧಿಕೃತ ಹೊಂದಾಣಿಕೆಗಳಿಗೆ ತಕ್ಕುದಾದ ಕೆಲಸಗಳನ್ನು ಮಾಡುತ್ತಿದ್ದಾರೆ. ಹಳ್ಳಿ, ನಗರ ಎರಡೂ ಕಡೆ ಇದೇ ಪರಿಸ್ಥಿತಿ ಇದೆ. ಕೌಶಲ ತಾರತಮ್ಯದಿಂದಾಗಿ ಪರಿಶಿಷ್ಟ ಜಾತಿ ಮತ್ತು ಬುಡಕಟ್ಟುಗಳ ನೌಕರರು ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕಡಿಮೆ ಕೌಶಲ ಬೇಡುವ ಕೆಲಸಗಳಲ್ಲಿಯೇ ತೊಡಗಿದರೆ, ಉತ್ಪಾದನಾ ಕ್ಷೇತ್ರದ ಕುಶಲ ಕಾರ್ಯಗಳನ್ನು ಮೇಲುಜಾತಿಯವರು ಮಾಡುತ್ತಾರೆ.

ಅಸ್ತಿತ್ವಕ್ಕಾಗಿ ಮೇಲುಜಾತಿಯವರನ್ನು ದಲಿತರು ಅವಲಂಬಿಸಿರುವುದು ಗ್ರಾಮೀಣ ಪ್ರದೇಶಗಳಲ್ಲಿ ಎದ್ದುಕಾಣುತ್ತದೆ; ನಗರಗಳಲ್ಲಿಯೂ ಕಾಣದೇ ಇರುವಂಥ ಸ್ಥಿತಿಯೇನೂ ಇಲ್ಲ. ಕಾರ್ಮಿಕ ಮಾರುಕಟ್ಟೆಯ ತರತಮ ನೀತಿಯಿಂದ ಬೇಸತ್ತು ಹಾಗೂ ಅಗತ್ಯ ಕೌಶಲಗಳನ್ನು ದಕ್ಕಿಸಿಕೊಂಡು ವೈಟ್‌ಕಾಲರ್ ಉದ್ಯೋಗಗಳನ್ನು ಗಿಟ್ಟಿಸಿಕೊಳ್ಳಲಾಗದ ಕಾರಣಕ್ಕೆ ದಲಿತರು ಸ್ವಉದ್ಯೋಗವನ್ನು ಬಡತನ ನೀಗಿಸಿಗೊಳ್ಳುವ ಮಾರ್ಗವೆಂದು ಪರಿಗಣಿಸಿದ್ದಾರೆ.

ವೇತನ ಕೊಡುವ ಉದ್ಯೋಗಕ್ಕೆ ಇದು ಪರ್ಯಾಯ ಎಂದು ಭಾವಿಸಿದ್ದಾರೆ. ಇದರಿಂದಾಗಿ ಪಾನ್ ಬೀಡಾ ಅಂಗಡಿ, ಟೀ ಅಂಗಡಿ ಮೊದಲಾದವುಗಳನ್ನು ಇಡಲು ಅವರು ಪ್ರಾರಂಭಿಸಿದರು. ಭದ್ರತಾ ದೃಷ್ಟಿಯಿಂದ ಇದು ಸುರಕ್ಷಿತವಲ್ಲದಿದ್ದರೂ ಪೆಟ್ಟಿಗೆ ಅಂಗಡಿಗಳನ್ನು ಇಡತೊಡಗಿದರು. ದಲಿತರು ಭಾಗಿಗಳಾಗಿರುವ ಉದ್ದಿಮೆಗಳ ವಿಂಗಡಣಾ ಮಾದರಿಯು ಕೂಡ ಬದಲಾವಣೆಯನ್ನು ಸೂಚಿಸುವುದಿಲ್ಲ.

ಜಾತಿ–ಲಿಂಗ ತರತಮದ ನಡುವೆ ಎಲ್ಲೋ ಬೆರಳೆಣಿಕೆಯಷ್ಟು ದಲಿತರು ಮಾತ್ರ ಇದಕ್ಕೆ ಅಪವಾದವೆನ್ನಬೇಕು. ಸಮಾಜವು ಹೀನ ಎಂದು ಪರಿಗಣಿಸುವ ಚರ್ಮೋದ್ಯಮದಂಥ ಕೆಲಸಗಳನ್ನು ಈಗಲೂ ದಲಿತರೇ ಮಾಡುವುದು. ಇಂತಹ ಕೆಲಸಗಳ ಪ್ರಮಾಣ ತಗ್ಗಿದ್ದರೂ ಬೇರೆ ಬೇರೆ ಬಗೆಗಳಲ್ಲಿ ಅವು ಉಳಿದುಕೊಂಡಿವೆ.

ಕಾರ್ಮಿಕರ ಶ್ರಮದಿಂದ ಆಗುವ ಅದರಲ್ಲೂ ವಿಶೇಷವಾಗಿ ದಲಿತ ಕಾರ್ಮಿಕರಿಂದ ಆಗುವ ಹೆಚ್ಚುವರಿ ಉತ್ಪನ್ನ ಒದಗಿಬರುತ್ತಿರುವುದು ಮುಖ್ಯವಾಗಿ ಮೇಲುಜಾತಿಯ ಮಾಲೀಕರಿಗೆ. ಇದೇ ರೀತಿ, ಕಾರ್ಮಿಕರ ನೆರವಿನಿಂದಲೇ ಬಂಡವಾಳಶಾಹಿಗಳಾಗುತ್ತಿರುವ ಕೆಲವೇ ಕೆಲವು ದಲಿತರು ಧನವಂತರಾಗುತ್ತಿರುವರೇ ವಿನಾ ತಮ್ಮದೇ ಸಮುದಾಯವರನ್ನು ಅದೇ ಜಾತಿ/ವರ್ಗದ ಸ್ಥಿತಿಯಲ್ಲೇ ಉಳಿಸುತ್ತಿದ್ದಾರೆ.

ಮಾರುಕಟ್ಟೆ ಹಾಗೂ ದಲಿತರು
ಮಾರುಕಟ್ಟೆಯು ತಂತಾನೇ ಪ್ರತಿಯೊಬ್ಬರಿಗೂ ಒಂದು ಅನನ್ಯತೆಯನ್ನು ದಕ್ಕಿಸಿಕೊಡುತ್ತದೆ. ಕೆಲವು ವ್ಯಕ್ತಿಗಳು ಹಾಗೂ ಸಮುದಾಯಗಳು ಜಾತಿ ಧರ್ಮ, ಲಿಂಗ ಹಾಗೂ ಲೈಂಗಿಕ ಮನೋಧರ್ಮದಿಂದಾಗಿ ನಿರ್ದಿಷ್ಟ ಪಾತ್ರಗಳನ್ನು ಮಾತ್ರ ನಿರ್ವಹಿಸುತ್ತಿರುತ್ತಾರೆ. ಉತ್ಪಾದನೆಯ ವಿಷಯದಲ್ಲಿ ಹೆಚ್ಚು ಸಕ್ರಿಯರಾಗುವ ಅವಕಾಶದಿಂದಲೇ ಅವರು ವಂಚಿತರಾಗುತ್ತಿರುತ್ತಾರೆ. ಇದು ಕೂಡ ಮಾರುಕಟ್ಟೆ ಕುರಿತ ಸಾಹಿತ್ಯ ಸಮೃದ್ಧಿಯಾಗುತ್ತಿರುವುದರ ಪರಿಣಾಮ. ಆರ್ಥಿಕತೆಯ ನವ–ಶಾಸ್ತ್ರೀಯ ಚಿಂತನೆಯು ಜಾತಿ ವ್ಯವಸ್ಥೆಯನ್ನು ಸ್ಪರ್ಧೆಯನ್ನು ಉತ್ತೇಜಿಸದ ಆಧುನಿಕ ಪೂರ್ವ ಸಾಮಾಜಿಕ ಅನನ್ಯತೆ ಎಂದು ಭಾವಿಸಿದೆ. ಪರಿಣಾಮವಾಗಿ ಸ್ಪರ್ಧಾತ್ಮಕ ಮಾರುಕಟ್ಟೆ ಆರ್ಥಿಕತೆ ಈ ಅನನ್ಯತೆಯ ಜಡತ್ವವನ್ನು ಕ್ರಮೇಣ ನೀಗುತ್ತಾ  ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ ಎಂದು ಹೇಳುತ್ತದೆ.

ಮಾರುಕಟ್ಟೆಯು ಮೂಲತಃ ಪ್ರತಿಯೊಬ್ಬ ವ್ಯಕ್ತಿಯೂ ವಿವೇಚನಾಶೀಲ ಎಂದೇ ಭಾವಿಸಿರುತ್ತದೆ. ಯಾವುದೇ ಪೂರ್ವಗ್ರಹವಿಲ್ಲದೆ, ಪರಸ್ಪರ ವ್ಯವಹರಿಸುವಾಗ ಹಾಗೂ ಮಾತನಾಡುವಾಗ ಉನ್ನತ ಸ್ತರದಲ್ಲಿ ಸಮತೋಲನ ಏರ್ಪಡುತ್ತದೆನ್ನುವುದು ಇದರರ್ಥ. ಈ ತರ್ಕವನ್ನು ಭಾರತದ ಮಟ್ಟಿಗೆ ಅನ್ವಯಿಸಿದರೆ, ಪ್ರತಿ ವ್ಯಕ್ತಿಗೂ ಸಾಮಾಜಿಕ ಅನನ್ಯತೆ ಇರುತ್ತದೆ. ಅದರಲ್ಲಿ ಜಾತಿ ಮೊದಲಿಗೆ ಕಾಣುತ್ತದೆ. ಆಮೇಲೆ ಉಳಿದೆಲ್ಲವೂ ‘ಜಾತಿ ಪ್ರಜ್ಞೆ’ಯನ್ನು ಆಧರಿಸಿಯೇ ಗಣನೆಗೆ ಬರುತ್ತವೆ. ವ್ಯವಹಾರದಲ್ಲಿಯೂ ಇದು ಹೊರತಾಗಿಲ್ಲ. ಆದ್ದರಿಂದ ವಿವೇಚನಾಶೀಲತೆಯ ಮೂಲ ತತ್ವವನ್ನೇ ಇಲ್ಲಿ ಗಾಳಿಗೆ ತೂರಿದಂತಾಗುತ್ತದೆ.

ಬಂಡವಾಳ, ಜಾತೀಯತೆ ಹಾಗೂ ಸಂಪತ್ತಿನ ಶೇಖರಣೆ
ಬಂಡವಾಳವು ವ್ಯಕ್ತಿಗಳನ್ನು ಅವರ ಅನನ್ಯತೆಗೆ ಅನುಗುಣವಾಗಿ ತಾರತಮ್ಯ ಮಾಡುವುದಿಲ್ಲ. ಆದರೆ, ತಲೆಮಾರುಗಳಿಂದ ಕಾರ್ಮಿಕ ವರ್ಗವನ್ನು ಉತ್ಪಾದನೆಯ ಹೆಸರಿನಲ್ಲಿ ಶೋಷಣೆಗೆ ಒಳಪಡಿಸಿದ ಬಹುಪಾಲು ಮೇಲುಜಾತಿಯ ಬಂಡವಾಳಶಾಹಿಗಳು ಸಮಾಜದಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಭಾರತದಲ್ಲಿಯೂ ಇದೇ ಸ್ಥಿತಿ ಇದೆ. ವರ್ಣ ವ್ಯವಸ್ಥೆಯು ‘ಬನಿಯಾ’ ಎನ್ನಲಾದ ವೈಶ್ಯರ ಪ್ರಮುಖ ವೃತ್ತಿ ವ್ಯಾಪಾರ ಎಂದು ನಿರ್ಧರಿಸಿದೆ. ಇದರಿಂದಾಗಿಯೇ ಈ ಸಮುದಾಯದವರಲ್ಲಿ ಸಂಪತ್ತಿನ ಶೇಖರಣೆ ಆಗಿದೆ. ದಲಿತರು ಸಂಪತ್ತು ಶೇಖರಣೆ ಪ್ರಕ್ರಿಯೆಯಿಂದ ಸಾಕಷ್ಟು ದೂರವೇ ಉಳಿದಿದ್ದು, ದೀರ್ಘ ಕಾಲದಿಂದ ಮೇಲುಜಾತಿಯವರದ್ದೇ ಇದರಲ್ಲಿ ಪಾರುಪತ್ಯ.

ಅವಕಾಶಗಳನ್ನು ಸೃಷ್ಟಿಸುವ ಸಂರಚನೆಗಳಿಗೆ ದಲಿತರಿಗೆ ಪ್ರವೇಶ ದಕ್ಕಿದ್ದು ಸಂವಿಧಾನದಲ್ಲಿ ಅಸ್ಪೃಶ್ಯತೆ ನಿವಾರಣೆ ಘೋಷಣೆ ಹೊರಬಿದ್ದ ನಂತರ. ಇದರಿಂದ ರಾಜಕೀಯ ಹಾಗೂ ಸಾಮಾಜಿಕವಾಗಿ ಕೆಲವು ವಲಯಗಳಿಗಷ್ಟೇ ದಲಿತರ ಪ್ರವೇಶ ಸಾಧ್ಯವಾಯಿತು. ಅಧಿಕಾರ ವಲಯಕ್ಕೆ ಪ್ರವೇಶ ಸಾಧ್ಯವಾದ ಮೇಲೆ ಸಂಪತ್ತಿನ ಶೇಖರಣೆಯ ಅವಕಾಶವೂ ದಕ್ಕೀತೆಂದೇ ಅನೇಕರು ಆಶಾವಾದಿಗಳಾಗಿದ್ದರು.

ಬಾಬಾಸಾಹೇಬರ ಕಾಲದಲ್ಲಿಯಂತೂ ಅದು ಸಾಧ್ಯವಾಗಲೇ ಇಲ್ಲ. ರಾಜಕೀಯ ಅಧಿಕಾರ ಸಿಕ್ಕಿದರೆ ದಲಿತರ ಎಲ್ಲಾ ಸಾಮಾಜಿಕ ಸಮಸ್ಯೆಗಳೂ ಬಗೆಹರಿಯುತ್ತವೆ ಎಂದು ಅವರು ನಂಬಿದ್ದರು. ಬಾಬಾಸಾಹೇಬರ ಅಗಲಿಕೆಯ ನಂತರ ದಲಿತರು ತಮ್ಮ ರಾಜಕೀಯ ಅಧಿಕಾರವನ್ನು ಸಮರ್ಥವಾಗಿ ಬಳಸಿಕೊಳ್ಳುವುದರಲ್ಲಿ ವಿಫಲರಾದರು. ಹಲವು ಗುಂಪುಗಳಾಗಿ ಒಡೆದುಹೋದರು. ಇದರಿಂದ ರಾಷ್ಟ್ರಮಟ್ಟದಲ್ಲಿ ಅವರ ರಾಜಕೀಯ ಪ್ರಾಮುಖ್ಯ ಕುಂದಿಹೋಯಿತು. ಬೇರೆ ರಾಜಕೀಯ ಪಕ್ಷಗಳು ಕ್ಷುಲ್ಲಕ ರಾಜಕೀಯ ಲಾಭಕ್ಕಾಗಿ ದಲಿತರನ್ನು ಬಳಸಿಕೊಳ್ಳುವ ಅವಕಾಶವನ್ನು ಇದು ಕಲ್ಪಿಸಿಕೊಟ್ಟಿತು.

ದಲಿತರಿಗೆ ಬಂಡವಾಳ ದಕ್ಕುವುದು ಕೂಡ ಹಲವು ಸ್ತರಗಳ ಪ್ರಕ್ರಿಯೆ ಆಗಿದೆ. ಸರ್ಕಾರದ ವಿವಿಧ ಸಾಮಾಜಿಕ ಯೋಜನೆಗಳನ್ನೇ ದಲಿತರು ಅವಲಂಬಿಸಿದ್ದು, ಇದಕ್ಕಾಗಿ ಮೊದಲಿಗೆ ಬ್ಯಾಂಕ್‌ನಲ್ಲಿ ಖಾತೆ ತೆರೆಯಬೇಕು. ಇದನ್ನೇ ಬಂಡವಾಳ ಪಡೆಯುವಲ್ಲಿ ದಲಿತರ ಸಂಖ್ಯೆ ಏರಿದೆ ಎಂದು ಬಿಂಬಿಸಲಾಗುತ್ತಿದೆ.

ದಲಿತರು ಹಣಕಾಸು ಸಹಾಯ ನೀಡುವ ಸಂಸ್ಥೆಗಳಿಗೆ ಎಡತಾಕಿದಾಗ ಇನ್ನೊಂದು ಸೂಕ್ಷ್ಮ ಎದುರಾಗುತ್ತದೆ. ತಾವೇ ಸ್ವಂತ ವ್ಯಾಪಾರ ಪ್ರಾರಂಭಿಸಲೆಂದು ಹಣಕಾಸಿನ ನೆರವು ಪಡೆಯಲು ಬಯಸಿದರೆ, ಹಣಕಾಸು ಸಂಸ್ಥೆಗಳಲ್ಲಿನ ಮೇಲುಜಾತಿಯವರು ‘ಅದು ನಿಮ್ಮ ಯೋಗ್ಯತೆಗೆ ಮೀರಿದ್ದು’ ಎನ್ನುವಂತೆ ಮಾತನಾಡುತ್ತಾರೆ. ದಲಿತರು ಸಾಲ ಪಡೆಯುವ ಪ್ರಕ್ರಿಯೆಯನ್ನೇ ಕ್ಲಿಷ್ಟಗೊಳಿಸಿ ಕಿರಿಕಿರಿ ಉಂಟುಮಾಡುವ ಮಟ್ಟಕ್ಕೂ ಕೆಲವರು ಹೋಗುತ್ತಾರೆ. ಇಂಥ ವರ್ತನೆ ಬಂಡವಾಳದಾರರಾಗಲು ಬಯಸುವ ದಲಿತರ ಆತ್ಮವಿಶ್ವಾಸವನ್ನೇ ಕೊಲ್ಲುತ್ತದೆ. ಮೇಲುಜಾತಿಯವರಿಗೆ ಸುಸಜ್ಜಿತವಾದ ವಹಿವಾಟಿನ ಜಾಲವಿದ್ದು, ಇಂಥ ಸಮಸ್ಯೆಗಳು ಎದುರಾಗುವುದಿಲ್ಲ.

ಎಷ್ಟೋ ಹಣಕಾಸು ಸಂಸ್ಥೆಗಳು ಎಲ್ಮ್‌ಸ್ಲಿ ಹಾಗೂ ಸೆಡೊ ಪ್ರತಿಪಾದಿಸಿರುವ ‘ವಿದ್ವತ್ಪೂರ್ಣ ಅಸಹಾಯಕತೆಯನ್ನು’ ಹರಡುವಲ್ಲಿ ತಂತಮ್ಮ ಕಾಣಿಕೆ ಸಲ್ಲಿಸುತ್ತಲೇ ಇವೆ. ಇದರಿಂದಾಗಿ ವ್ಯಕ್ತಿಯ ಕಲಿಕಾ ಸಾಮರ್ಥ್ಯ ಕ್ಷೀಣಿಸುತ್ತದೆ. ಇದರ ಫಲವಾಗಿಯೇ ದಲಿತರು ಸಮುದಾಯ ಮಟ್ಟದಲ್ಲಿ ಹಾಗೂ ವ್ಯಕ್ತಿಗತ ನೆಲೆಯಲ್ಲಿ ಹಿಂದುಳಿದೇ ಇದ್ದಾರೆ. ಇದರಿಂದಾಗಿ ಬಂಡವಾಳ ಹೊಂದುವುದು ಅಡೆತಡೆಗಳ ಕಿರುದಾರಿಯಾಗಿದೆ. ವ್ಯವಸ್ಥೆಯ ಭಾಗವಾಗುವ ಅವರ ಬಯಕೆ ಹೀಗೆ ಹಲವು ಹಂತಗಳಲ್ಲಿನ ಸಂಕೀರ್ಣ ಜಾತೀಯತೆಯಿಂದ ಈಡೇರುವುದೇ ಇಲ್ಲ.

ಇದೊಂದು ಪರಿಹಾರವೇ?
‘ದಲಿತ ಬಂಡವಾಳಶಾಹಿ’ ಎನ್ನುವ ಸಮರ್ಥನೆ ದಲಿತ ಉದ್ಯೋಗದಾತರನ್ನು ದೃಷ್ಟಿಯಲ್ಲಿ ಇಟ್ಟುಕೊಂಡಿರುವುದೇ ವಿನಾ ದಲಿತ ಉದ್ಯೋಗಿಗಳನ್ನಲ್ಲ. ದಲಿತರಿಗೆ ಅವಕಾಶ ಸೃಷ್ಟಿಯಾಗಿ, ಅವರು ಅಭಿವೃದ್ಧಿ ಹೊಂದಲು ಅಗತ್ಯ ಅವಕಾಶಗಳನ್ನ ಇದು ಸೃಷ್ಟಿಸುತ್ತದೆ ಎಂಬ ಕಲ್ಪನೆಯನ್ನು ಇದು ಆಧರಿಸಿದೆ.

ಮಾರುಕಟ್ಟೆ ಹಾಗೂ ಮಾರುಕಟ್ಟೆಯೇತರ ವ್ಯವಸ್ಥೆಯಲ್ಲಿ ಸಮಾನ ಅವಕಾಶದ ಕುರಿತ ಸಮಗ್ರ ಸಾಮಾಜಿಕ ಪ್ರಶ್ನೆಯನ್ನು ಬಂಡವಾಳಶಾಹಿ ಸಹಜವಾಗಿಯೇ ಶಿಥಿಲಗೊಳಿಸುತ್ತದೆ. ವಿವಿಧ ಸಮುದಾಯಗಳ ನಡುವೆ ವ್ಯವಸ್ಥಿತವಾಗಿ ಕೆಲವು ನಿಯಮಾವಳಿಗಳನ್ನು ಹೇರಿ, ಭೌತದ್ರವ್ಯಗಳ ಆಸ್ತಿ ಕ್ರೋಡೀಕರಣದ ವಿಷಯದಲ್ಲಿಯೂ ಮೇಲು–ಕೀಳು ಎನ್ನುವುದನ್ನು ಮೂಡಿಸುತ್ತದೆ. ವ್ಯಕ್ತಿಗತ ಗಳಿಕೆ ಇಲ್ಲಿ ಮುಖ್ಯವಾಗುವುದೇ ವಿನಾ ಸಮಗ್ರ ಸಾಮಾಜಿಕ ಲಾಭವಲ್ಲ.

ಗೋಪಾಲ್‌ ಗುರು ಹೇಳಿರುವುದು ಇದನ್ನೇ: ‘‘ಬಂಡವಾಳಶಾಹಿ ಒಂದು ಮಾದರಿ ಸಾಮಾಜಿಕ ವ್ಯವಸ್ಥೆ ಎಂಬ ವಾದವನ್ನು ಗಂಭೀರವಾಗಿ ಅವಲೋಕಿಸಬೇಕು. ಇದು ಸತತವಾಗಿ ಜನರನ್ನು ದಿಕ್ಕುತಪ್ಪಿಸುತ್ತದೆ. ಏಕೆಂದರೆ ಅಸಂಗತ ಈ ವಾದ ದಲಿತ ಮಿಲಿಯನೇರುಗಳೆಂಬ ಹೊಸ ಸತ್ಯವನ್ನು ಮುಂದಿಡುವಾಗ ಇನ್ನೂ ದಲಿತರ ಶೋಚನೀಯ ಸ್ಥಿತಿಯಿನ್ನೂ ಮುಂದುವರಿಯುತ್ತಿದೆ ಮತ್ತು ಅದು ಹೆಚ್ಚು ತೀವ್ರವಾಗುತ್ತಿದೆ ಎಂಬ ಮೂಲ ಸತ್ಯವನ್ನು ಮರೆಮಾಚುತ್ತದೆ’’.

ದಲಿತ ಬಂಡವಾಳಶಾಹಿ ವ್ಯವಸ್ಥೆಯನ್ನು ಬೆಂಬಲಿಸುವುದು ಸಮಗ್ರ ದಲಿತ ಸಮುದಾಯದ ಹಿತದೃಷ್ಟಿಯಿಂದ ದೊಡ್ಡ ಗಂಡಾಂತರವನ್ನು ಸ್ವಾಗತಿಸಿದಂತೆ. ಬಂಡವಾಳ ವ್ಯವಸ್ಥೆ ಮಾದರಿಯಾಗಿ ಇರಬೇಕಾದರೆ ಸಾಮಾಜಿಕ ಪ್ರಜಾಪ್ರಭುತ್ವ ಗಟ್ಟಿಯಾಗಿರಬೇಕು. ಸಾಮಾಜಿಕ ಪ್ರಜಾಪ್ರಭುತ್ವದ ಗೈರುಹಾಜರಿಯಲ್ಲಿ ‘ದಲಿತ ಬಂಡವಾಳಶಾಹಿ’ಯನ್ನು ಕಲ್ಪಿಸಿಕೊಳ್ಳುವುದೇ ಶ್ರೇಷ್ಠ ನಾಯಕರ ಸಾಮಾಜಿಕ ಹೋರಾಟದ ಮೂಲತತ್ವಗಳಿಂದ ವಿಮುಖರಾಗುವುದು ಎಂದರ್ಥ.

ಸೌಜನ್ಯ: roundtableindia.co.in
ಆರ್ಥಿಕತೆ ಮತ್ತು ಅನನ್ಯತೆಗಳ ನಡುವಣ ಸಂಬಂಧ, ಸಾಂಸ್ಥಿಕ ವ್ಯವಸ್ಥೆಗಳು ಸಾಮಾಜಿಕ ನಿಷೇಧಗಳ ಕುರಿತ ಸಂಶೋಧನೆಗಳಲ್ಲಿ ತೊಡಗಿಕೊಂಡಿರುವ ವಿಶಾಲ್ ಠಾಕ್ರೆ ‘ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸ್‌’ನ ಸ್ನಾತಕೋತ್ತರ ಪದವೀಧರ. ಸದ್ಯ ‘ಬರ್ಲಿನ್ ಸ್ಕೂಲ್ ಆಫ್ ಎಕನಾಮಿಕ್ಸ್‌’ನಲ್ಲಿ ಉನ್ನತ ಅಧ್ಯಯನ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT