ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡಿಮೆಯ ದೀವಟಿಗೆ

Last Updated 20 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮುಂಡಿಗೇಸರ, ಶಿವಮೊಗ್ಗ ಜಿಲ್ಲೆಯ ಸಾಗರಕ್ಕೆ ಎಂಟು ಕಿ.ಮೀ ದೂರದ ಹಳ್ಳಿ. ಮಲೆನಾಡಿನ ಇತರೆ ಹಳ್ಳಿಗಳಂತೆ ಕಂಡರೂ ಈ ಊರಿನ ವಿಶೇಷ ಇಲ್ಲಿನ ಕ್ರಿಯಾಶೀಲ ಮಹಿಳೆಯರು. ಹದಿನಾರು ಹವ್ಯಕ ಬ್ರಾಹ್ಮಣರ, ಆರು ಲಿಂಗಾಯಿತರ ಮನೆಗಳಿರುವ ಊರಿದು. ಪರಸ್ಪರ ಸಾಮರಸ್ಯದ ಜೊತೆಗೆ ಕೃಷಿಯೊಂದಿಗೆ ಕೃಷಿಯೇತರ ಕಾಯಕದಲ್ಲೂ ತೊಡಗಿರುವ ಈ ಮಹಿಳೆಯರು ಮಲೆನಾಡಿಗೆ ಅಪರೂಪದವರು ಎಂದರೆ ಅತಿಶಯೋಕ್ತಿ ಇಲ್ಲ.

ಹೀಗೆ 12 ವರ್ಷಗಳ ಹಿಂದೆ ಸರಕಾರದ ಯೋಜನೆಯ ಸಲುವಾಗಿ ಸ್ಫೂರ್ತಿ ಮಹಿಳಾ ಸಂಘವನ್ನು ಕಟ್ಟಿಕೊಂಡ ಹೆಂಗಳೆಯರು ಇದನ್ನು ನಾಮಕಾವಸ್ತೆ ಸಂಘವಾಗಿಸದೇ ತಮ್ಮ ಬದುಕಿಗೂ ಸ್ಫೂರ್ತಿದಾಯಕವಾಗಬೇಕೆಂದು ಬಯಸಿದರು. ಹಾಗಾಗಿ ಸ್ವಪ್ರೇರಿತರಾಗಿ ಒಂದಿಲ್ಲೊಂದು ಉಪಕಸಬುಗಳಲ್ಲಿ ನಿರತರು.

ಮುಂಡಿಗೇಸರದ ಪ್ರತಿಯೊಬ್ಬರ ಹೆಂಗಸರೂ ಕೃಷಿ ಕೆಲಸಗಳಲ್ಲದೇ ಒಂದಿಲ್ಲೊಂದು ಉಪ ಕಸಬು ಮಾಡುತ್ತಿದ್ದಾರೆ. ಪರಸ್ಪರ ಸಹಕಾರ, ಸಾಂಗತ್ಯದ ಕಾರಣದಿಂದಾಗಿ ಈ ಊರಿನ ಮಹಿಳೆಯರು ಗ್ರಾಮೀಣ ಭಾರತದ ಎಲ್ಲಾ ಮಹಿಳೆಯರಿಗೂ ಮಾದರಿ ಎನ್ನಿಸುತ್ತಾರೆ. ಸಂಘ ಪ್ರಾರಂಭಿಸಿದ ಮೇಲೆ ಏನು ಮಾಡುವುದು ಎನ್ನುವಾಗ ಥಟ್ಟನೆ ಹೊಳೆದದ್ದು ಸಾಗರದಲ್ಲಿ ಕಾರ್ಯಕಟ್ಟಳೆಗಳಿಗೆ ಊಟದಲ್ಲಿ ಅಗತ್ಯ ಎನ್ನಿಸಿದ ಹೋಳಿಗೆ ಮಾಡಿದರೆ ಹೇಗೆ ಎಂಬ ಯೋಚನೆ. ಅನುಕೂಲಕ್ಕೆ ಮತ್ತು ಹೊಂದಾಣಿಕೆಗೆ ತಕ್ಕಂತೆ ಅವರಲ್ಲಿಯೇ ಎರಡು ಮೂರು ಗುಂಪು ಮಾಡಿಕೊಂಡರು. ನೋಡು ನೋಡುತ್ತಿದ್ದಂತೆ ಮನೆಯಲ್ಲಿಯೇ ಹೋಳಿಗೆ ಉದ್ಯಮ ಪ್ರಾರಂಭವಾಯಿತು.

ಮೊದಮೊದಲಿಗೆ ಹಿಡಿದಿದ್ದು ಸಣ್ಣ ಪುಟ್ಟ ಆರ್ಡರ್. ರುಚಿಯಲ್ಲಿ, ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳದ ಕಾರಣ ಬೇಡಿಕೆ ಹುಡುಕಿಕೊಂಡು ಬರಲಾರಂಭಿಸಿತು. ಈಗ ಇಡೀ ಊರಿನ ಮಹಿಳೆಯರು ತಮ್ಮೆಲ್ಲ ಕೆಲಸಗಳ ನಡುವೆಯೇ ಪ್ರತಿ ವರ್ಷ ಒಂದು ಲಕ್ಷಕ್ಕೆ ಹತ್ತಿರದಷ್ಟು ಹೋಳಿಗೆ ಮಾಡುತ್ತಾರೆ. ಐದರಿಂದ ಆರು ಮಹಿಳೆಯರಿರುವ ತಂಡ ಹೋಳಿಗೆ ಮಾಡುತ್ತದೆ. ಮಲೆನಾಡಿನ ಪಾರಂಪರಿಕ ಪದ್ಧತಿಯಲ್ಲಿಯೇ. ಒಂದು ಅಥವಾ ಎರಡು ಕಾವಲಿ ಇಟ್ಟು ಸೌದೆ ಒಲೆಯಲ್ಲಿಯೇ ಮಾಡಲಾಗುತ್ತದೆ.

ಒಂದೊಂದು ಕಾವಲಿಯಲ್ಲಿ ಏಕಕಾಲಕ್ಕೆ ನಾಲ್ಕು ಹೋಳಿಗೆಯನ್ನು ಬೇಯಿಸಬಹುದು. ಕೆಲವು ಸಂದರ್ಭದಲ್ಲಿ ಮಹಿಳೆಯರೊಂದಿಗೆ ಮನೆಯ ಗಂಡಸರೂ ಕೈ ಜೋಡಿಸುತ್ತಾರೆ. ಇವರ ಕನಿಷ್ಠ ಆರ್ಡರ್ ನೂರು. ಸಾವಿರ ಬೇಕೆಂದರೂ ಸಕಾಲದಲ್ಲಿಯೇ ಮಾಡಿಕೊಡುತ್ತಾರೆ. ಮುಂಡಿಗೇಸರದ ಹೋಳಿಗೆ ಎಂದರೆ ಸಾಗರ ಸೀಮೆ ಬಿಡಿ, ಸಾಗರವನ್ನೂ ದಾಟಿ ದೇಶ - ವಿದೇಶಗಳಿಗೂ ಹೋಗಿ ಮುಟ್ಟಿದೆ. ಬೆಂಗಳೂರು, ಮುಂಬೈ, ದೆಹಲಿ, ಸಿಂಗಪುರ, ಅಮೆರಿಕ, ಇಂಗ್ಲೆಂಡ್ ಹೀಗೆ ಎಲ್ಲೆಲ್ಲಿ ನಂಟಿದೆಯೋ ಅಲ್ಲೆಲ್ಲಾ ಹೋಳಿಗೆ ಹೋಗಿದೆ.

ಇವರು ಪೇಟೆಯ ಅಂಗಡಿ ಮುಂಗಟ್ಟುಗಳಿಗೇ ಆಗಲೀ, ಸ್ವೀಟ್ಸ್ ಸ್ಟಾಲ್‌ಗಳಿಗೇ ಆಗಲೀ ಸರಬರಾಜು ಮಾಡುವ ಪದ್ಧತಿ ಇಟ್ಟುಕೊಂಡಿಲ್ಲ. ಏನೇ ಆದರೂ ಮನೆಯಲ್ಲಿಯೇ ವ್ಯಾಪಾರ. ಒಂದು ಹೋಳಿಗೆಗೆ ಎಂಟು ರೂಪಾಯಿ. ‘ಕ್ಯಾಶ್ ಎಂಡ್ ಕ್ಯಾರಿ’ ವ್ಯವಹಾರ. ಹಾಗಾಗಿ ವ್ಯಾವಹಾರಿಕ ಸಮಸ್ಯೆ ಬಂದಿಲ್ಲ. ಪ್ರತಿ ಪೂರೈಕೆಯ ಬಳಿಕ ಪರಸ್ಪರ ಲಾಭಾಂಶ ಹಂಚಿಕೆಯಾಗಿ ಬಿಡುತ್ತದೆ. ಹಾಗಾಗಿ ಯಾವ ತಕರಾರೂ ಇಲ್ಲ.

ಹೋಳಿಗೆ ಮಾತ್ರವಲ್ಲದೇ ಹಲಸಿನ ಕಾಯಿಯ ಕಾಲದಲ್ಲಿ ಊರಿನ ಪ್ರತಿ ಮನೆಯಲ್ಲಿಯೂ ಹಪ್ಪಳ - ಚಿಪ್ಸ್ ಮಾಡುವ ಸಂಭ್ರಮ ಇರುತ್ತದೆ. ಮನೆ ಬಳಕೆಗೆ ಮಾಡಿಕೊಂಡ ಬಳಿಕ ಪ್ರತಿ ಮನೆಯಲ್ಲಿಯೂ ಐದಾರು ಸಾವಿರ ಹಲಸಿನಕಾಯಿಯ ಹಪ್ಪಳ ಮಾರಾಟಕ್ಕೆ ಸಿದ್ಧವಾಗುತ್ತದೆ. ಸುಮಾ ರಾಜು ಎನ್ನುವವರು ಒಬ್ಬರೇ ಪ್ರತಿ ವರ್ಷ ಮೂವತ್ತು ಸಾವಿರ ಹಪ್ಪಳ ಮಾಡುತ್ತಾರೆ.  ಇವರದ್ದು ಗೋವಾ ಸ್ಪೆಷಲ್ ಹಪ್ಪಳ. ವಿಶೇಷ ರುಚಿ, ಖಾರಕ್ಕಾಗಿ ಕಾಳು ಮೆಣಸು ಬಳಕೆಯಾಗುತ್ತದೆ. ಮಾಡಿದ್ದೆಲ್ಲವೂ ಗೋವಾಕ್ಕೆ ಹೋಗುತ್ತದೆ.

ಸುಧಾಮೂರ್ತಿ, ಪ್ರತಿವರ್ಷ ಐದಾರು ಕ್ವಿಂಟಾಲ್ ಹಲಸಿನ ಚಿಪ್ಸ್ ಮಾಡುತ್ತಾರೆ. ₨ 150ರ ದರದಲ್ಲಿ ಮಾರಾಟವಾಗುತ್ತದೆ. ಇದಲ್ಲದೇ ಟೈಲರಿಂಗ್ ಕೆಲಸ ಮಾಡುತ್ತಾರೆ. ಇವರ ಬಟ್ಟೆಯ ಬ್ಯಾಗಿಗೆ ಒಳ್ಳೆಯ ಬೇಡಿಕೆ ಇದೆ. ಸಮಯ ಹಾಗೂ ಜಾಗದ ಸದ್ಬಳಕೆ ಮಾಡುವುದನ್ನು ಮುಂಡಿಗೇಸರದ ಮಹಿಳೆಯರನ್ನು ನೋಡಿ ಕಲಿಯಬೇಕು ಎನ್ನುವವರಿದ್ದಾರೆ. ಮನೆಯ ಹಿತ್ತಲಿನಲ್ಲಿ, ಅಂಗಳದಲ್ಲಿ ನರ್ಸರಿ ಗಿಡಗಳನ್ನು ಮಾಡುವವರಿದ್ದಾರೆ. ಇದರಿಂದ ಪೂರಕ ಆದಾಯವೂ ಇದೆ. ನೋಡಿಕೊಳ್ಳುವುದು ಸುಲಭ. ಗಿಡಗಳನ್ನು ಅಚ್ಚುಕಟ್ಟಾಗಿ ಬೆಳೆಸಬಹುದು. ಗ್ರಾಹಕರನ್ನು ಆಕರ್ಷಿಸುವುದೇ ಆಗಲೀ, ಅವರನ್ನು ಅಟೆಂಡ್ ಮಾಡುವುದೇ ಆಗಲಿ ಸುಲಭ. ನರ್ಸರಿ ಮಾಡುವುದು ಇವರಿಗೆ ಖುಷಿ ಕೊಡುವ ವಿಚಾರ.

ಊರಿನಲ್ಲಿ ನಾಲ್ಕೈದು ಮಹಿಳೆಯರು ಸಣ್ಣ ಎರೆಗೊಬ್ಬರ ಘಟಕವನ್ನು ಹೊಂದಿದ್ದಾರೆ. ಮನೆಗಾಗುವಷ್ಟು ಬಳಸಿಕೊಂಡು ಮಿಕ್ಕಿದ್ದನ್ನು ಮಾರುತ್ತಾರೆ. ಈ ಕಾಸು ಕೈ ಖರ್ಚಿಗೆ ಆಗುತ್ತದೆ ಎಂದು ಮಮತಾ ಹಾಗೂ ಜಯಂತಿ ಹೇಳುತ್ತಾರೆ. ಸ್ಫೂರ್ತಿ ಮಹಿಳಾ ಸಂಘದ ಅಧ್ಯಕ್ಷೆ ಅನಿತಾ, ಪತಿ ಲಕ್ಷ್ಮೀಕಾಂತರೊಂದಿಗೆ ಸೇರಿಕೊಂಡು ಸ್ವಂತದ್ದು ಅಡಿಕೆ ದೊನ್ನೆ ತಯಾರಿಸುವ ಘಟಕವನ್ನು ಹೊಂದಿದ್ದಾರೆ. ಊರಿನ ಮಾತ್ರವಲ್ಲ, ಸುತ್ತ-ಮುತ್ತಲ ಭಾಗದ ಉತ್ತಮ ಗುಣಮಟ್ಟದ ಅಡಿಕೆ ಹಾಳೆಯನ್ನು ಸಂಗ್ರಹಿಸಿಕೊಂಡು ವಿವಿಧ ಆಕಾರದ ದೊನ್ನೆ, ಪ್ಲೇಟುಗಳನ್ನು ಮಾಡಿ ಮಾರಾಟ ಮಾಡುತ್ತಾರೆ.

ಕೆಲಸಕ್ಕೆ ಜನರು ಇದ್ದರೂ ದಂಪತಿ ತಾವೇ ನಿಭಾಯಿಸುತ್ತಾರೆ. ‘ನಮ್ಮ ಮೇಲುಸ್ತುವಾರಿಯಲ್ಲಿ ಕೆಲಸ ನಡೆಯುವುದರಿಂದ ದೊನ್ನೆಗಳು ಉತ್ತಮ ಗುಣಮಟ್ಟದ್ದಾಗಿರುತ್ತದೆ. ಬೇಡಿಕೆಯೂ ಚೆನ್ನಾಗಿಯೇ ಇದೆ. ಲಾಭವೂ ತೃಪ್ತಿಕರವಾಗಿದೆ’ ಎನ್ನುತ್ತಾರೆ ಅವರು.
ಮುಂಡಿಗೇಸರದ ಯಶೋಧಮ್ಮನವರು ಅರವತ್ತರ ಪ್ರಾಯದವರು. ಹಳೆಯ ತಲೆಮಾರಿನವರು. ಆದರೆ ಅವರ ಉತ್ಸಾಹ ಎಳೆಯರನ್ನೂ ನಾಚಿಸುತ್ತದೆ. ಅತ್ತೆಗೆ ತಕ್ಕ ಸೊಸೆ ವೇದಾವತಿ.

ಇಬ್ಬರದ್ದು ಹೇಳಿ ಮಾಡಿಸಿದ ಜೋಡಿ. ಹಪ್ಪಳ, ಚಿಪ್ಸ್, ಹೋಳಿಗೆ ಮಾಡುವುದು ಅಲ್ಲದೇ, ಹತ್ತಿಯಿಂದ ಹೂ ಬತ್ತಿ, ತೆಂಗಿನ ಗರಿಯಿಂದ ಪೊರಕೆ, ಅಡಿಕೆ ಹೊಂಬಾಳೆಯಿಂದ ದೊನ್ನೆ, ಅರಿಶಿಣ ಪುಡಿಯಿಂದ ಕುಂಕುಮ ಹೀಗೆ ಹತ್ತಾರು ಕೆಲಸ ಕಾರ್ಯಗಳು ಇವರ ಕೈ ತುಂಬಿರುತ್ತವೆ. ಅತ್ತೆಯ ಕೆಲಸಕ್ಕೆ ಸೊಸೆಯ ಸಾಥ್. ಸೊಸೆಯ ಕೆಲಸದಲ್ಲಿ ಅತ್ತೆಯದೂ ಜೊತೆ ಕೈ. ಇದಲ್ಲದೇ ಹತ್ತಿಯ ಬತ್ತಿಯಲ್ಲಿ ವಿವಿಧ ವರ್ಣದ, ವಿವಿಧ ರೀತಿಯ ಆಲಂಕಾರಿಕ ಪುಷ್ಪಗಳನ್ನು ಮಾಡುವವರಿದ್ದಾರೆ. ದಪ್ಪ ಪ್ಲಾಸ್ಟಿಕ್ ಹಾಳೆಯಲ್ಲಿ ವಿವಿಧ ರೀತಿಯ ರಂಗೋಲಿಗಳನ್ನು ಬಿಡಿಸಿ ಎಲ್ಲೆಂದರಲ್ಲಿ ಅವಶ್ಯಕತೆಗೆ ತಕ್ಕಂತೆ ತಕ್ಷಣ ಜೋಡಿಸಿಕೊಡುವಂತಹ ರಂಗೋಲಿ ರಚನೆಕಾರರು ಇದ್ದಾರೆ.

ಎಲ್ಲರಲ್ಲೂ ಪರಸ್ಪರ ಸಾಮರಸ್ಯ. ಒಗ್ಗಟ್ಟಿನಲ್ಲಿ ಬಲವಿದೆ ಎನ್ನುವ ತತ್ವವನ್ನು ಈ ಊರಿನ ಮಹಿಳೆಯರು ಅರಿತುಕೊಂಡಿದ್ದಾರೆ. ಪ್ರತಿ ಮನೆಯಲ್ಲೂ ದುಡಿಮೆಯ ಉತ್ಸಾಹ ಇದೆ. ಹೆಂಗಸರ ಎಲ್ಲಾ ಕೆಲಸಗಳಿಗೆ ಗಂಡಸರ ತಕರಾರು ಇಲ್ಲದ ಸಹಕಾರವಿದೆ. ಸಮಯ ವ್ಯರ್ಥ ಮಾಡದೇ ತಮ್ಮಿಂದಾಗುವ ದುಡಿಮೆ ಮಾಡುತ್ತಾ ಕ್ರಿಯಾಶೀಲರಾಗಿರುವ ತಮ್ಮ ಮನೆಯ, ಊರಿನ ಮಹಿಳೆಯರ ಬಗ್ಗೆ ಗಂಡಸರಿಗೆ ಹೆಮ್ಮೆಯಿದೆ.

ಹಾಗಂತ ಹೆಂಗಸರು ಗೃಹ ಕೃತ್ಯಗಳನ್ನೇ ಆಗಲೀ, ಕೃಷಿ ಚಟುವಟಿಕೆಗಳನ್ನಾಗಲೀ ನಿರ್ಲಕ್ಷಿಸಿಲ್ಲ.  ಅವನ್ನೆಲ್ಲಾ ಅಚ್ಚುಕಟ್ಟಾಗಿ ಮಾಡಿಕೊಳ್ಳುತ್ತಲೇ ಸಂಸಾರಕ್ಕೆ ನೆರವಾಗುವ ಉಪಕಸಬುಗಳನ್ನು ಮಾಡುತ್ತಿರುವುದರಿಂದ ಮುಂಡಿಗೇಸರದ ಬಹುತೇಕ ಎಲ್ಲಾ ಕುಟುಂಬಗಳ ಸಂಸಾರ ರಥ ಆರ್ಥಿಕ ಸಂಕಷ್ಟಗಳಿರದ ಭರವಸೆಯ ಹಳಿಯ ಮೇಲೆ ಸುಲಲಿತವಾಗಿ ಸಾಗುತ್ತಿದೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT