ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವರಸ ಕೃಷ್ಣ ನೃತ್ಸೋಲ್ಲಾಸ

ನಾದ ನೃತ್ಯ
Last Updated 24 ಜನವರಿ 2016, 19:30 IST
ಅಕ್ಷರ ಗಾತ್ರ

ಶ್ರೀಕೃಷ್ಣ ಮತ್ತು ನವರಸ ಇವೆರಡನ್ನೂ ಬೆರೆಸಿ ನೋಡಿದಾಗ ರೋಮಾ೦ಚನ ಕಥಾ ವಸ್ತುಗಳು ದೊರೆಯುತ್ತವೆ. ಕೃಷ್ಣನ ಲೀಲೆಗಳನ್ನು ನವರಸಗಳೊ೦ದಿಗೆ ಸಮೀಕರಿಸಿದರೆ ಅದರಿಂದ ಒ೦ದು ವಿಶಿಷ್ಟ ಮತ್ತು ಮಧುರವಾದ ಭಾವಗುಚ್ಛ ದೊರಕುತ್ತದೆ.

ಇತ್ತೀಚೆಗೆ ರವೀ೦ದ್ರ ಕಲಾಕ್ಷೇತ್ರದಲ್ಲಿ ‘ಜತೀನ್ ಅಕಾಡೆಮಿ ಆಫ್ ಡಾನ್ಸ್’ ಸ೦ಸ್ಥೆಯ ನಿರ್ದೇಶಕಿ ಅರ್ಚನಾ ಪುಣ್ಯೇಶ್ ‘ಕೃಷ್ಣ ಚರಿತಾಮೃತ’ ನೃತ್ಯ ರೂಪಕವನ್ನು ಪ್ರಸ್ತುತ ಪಡಿಸಿದರು. ಶೃ೦ಗಾರ, ಕರುಣ, ವೀರ, ಅದ್ಭುತ, ಹಾಸ್ಯ, ಭಯಾನಕ, ರೌದ್ರ, ಬೀಭತ್ಸ ಮತ್ತು ಶಾ೦ತ ಈ ನವರಸಗಳನ್ನು ಶ್ರೀಕೃಷ್ಣನ ಬದುಕಿಗೆ ತಕ್ಕ೦ತೆ ಪೋಣಿಸಲಾಗಿದೆ. ಇದು ಒ೦ದು ವಿನೂತನ ಪ್ರಯತ್ನವಾಗಿದ್ದು, ರಸಿಕರಿಗೆ ರಸದೌತಣ ದೊರಕಿಸಿತ್ತು.

‘ನವರಸ ರಸ ರ೦ಜನ ನಿರ೦ಜನ ಜಯ ಜಯ ಯದು ನ೦ದನ  ಆನ೦ದನ’ವೆ೦ಬ ಪಲ್ಲವಿಯೊ೦ದಿಗೆ ಆರ೦ಭವಾಗುತ್ತದೆ ನೃತ್ಯ ರೂಪಕ. ಕೃಷ್ಣನ ಜನನ–ಭಯಾನಕವಾದ ಆ ವಾತಾವರಣವನ್ನು ನೃತ್ಯದಲ್ಲಿ ಪ್ರತಿಬಿ೦ಬಿಸಲಾಯಿತು. ಇದು ‘ಭಯಾನಕ ರಸ’ವನ್ನು ಅನಾವರಣಗೊಳಿಸಿತು.

ಕೃಷ್ಣನ ತು೦ಟಾಟದ ಭಾಗದಲ್ಲಿ ಬೆಣ್ಣೆ ಕದ್ದು, ತನ್ನ ಸ್ನೇಹಿತರ ಜೊತೆ ಮಾಡಿದ ಗೇಲಿ, ವಿನೋದ ಇತ್ಯಾದಿಗಳನ್ನು ‘ಹಾಸ್ಯರಸ’ದಲ್ಲಿ ನಿರೂಪಿಸಲಾಯಿತು. ವಿವಾಹದ ಪ್ರಸ್ತುತಿ, ರುಕ್ಮಿಣಿಯ ಶೃ೦ಗಾರ ಮತ್ತು ಧಾರ್ಮಿಕ ಶೃ೦ಗಾರವನ್ನು ಹೇಳುವ ಮೂಲಕ ಶೃ೦ಗಾರ ರಸವನ್ನು, ಜಾ೦ಬವ೦ತನ ಜೊತೆ ಹೋರಾಡಿ ರಾಮನಾಗಿ ಕಾಣಿಸಿಕೊಂಡು ಶಮಂತಕ ಮಣಿಯನ್ನು ಪಡೆದುಕೊಳ್ಳುವ ಪ್ರಸಂಗದ ಮೂಲಕ ‘ವೀರರಸ’ವನ್ನು ಪ್ರಸ್ತುತಪಡಿಸಿದರು.

ಕೌರವರು ದ್ರೌಪದಿಯ ವಸ್ತ್ರಾಪಹರಣಕ್ಕೆ ಪ್ರಯತ್ನಿಸಿದಾಗ ಶ್ರೀಕೃಷ್ಣ ದ್ರೌಪದಿಯ ಮಾನರಕ್ಷಣೆ ಮಾಡಿದ ಪ್ರಸಂಗದ ಮೂಲಕ  ‘ಕಾರುಣ್ಯ ರಸ’ವನ್ನು, ಅರ್ಜುನನಿಗೆ ಕೃಷ್ಣ ಗೀತೋಪದೇಶ ನೀಡುವ ಮೂಲಕ ‘ಅದ್ಭುತ ರಸ’ವನ್ನು ಅಭಿವ್ಯಕ್ತಿಸಿದರು. ಸುದರ್ಶನ ಚಕ್ರ ಹಿಡಿಯುವ ಸನ್ನಿವೇಶದ ಮೂಲಕ ‘ರೌದ್ರರಸ’ವನ್ನು, ತನ್ನ ವ೦ಶದವರೆಲ್ಲ ಪಾನಮತ್ತರಾಗಿ ಸೆಣಸಾಡಿಕೊ೦ಡು ಸಾಯುವ ಚಿತ್ರಣವನ್ನು ‘ಭೀಭತ್ಸ ರಸ’ದ ಮೂಲಕ ಪ್ರದರ್ಶಿಸಿದರು.

ಕೊನೆಯದು ‘ಶಾ೦ತರಸ’. ಕೃಷ್ಣನ ಕಾಲಿಗೆ ಬೇಡನು ಹೊಡೆದ ಬಾಣದಿ೦ದ ಪೆಟ್ಟಾಗಿ ರಕ್ತಚಿಮ್ಮುತ್ತಿದ್ದರೂ ಮುನಿಯದೆ, ಶಾ೦ತ ಚಿತ್ತದಿ೦ದ ನಸುನಕ್ಕು ಸುಮ್ಮನಾಗುತ್ತಾನೆ. ಈ ‘ಶಾ೦ತರಸ’ ನೃತ್ಯರೂಪಕ ಸಮಾಪ್ತಿ. ಇಲ್ಲಿ ಕೃಷ್ಣ ಮತ್ತು ರಾಧೆಯಾಗಿ ಅರ್ಚನಾ ಪುಣ್ಯೇಶ್ ಮತ್ತು ಸೋಮಶೇಖರ್ ನೃತ್ಯ ಮನಸೂರೆಗೊ೦ಡಿತು.

ಸೋಮಶೇಖರ್ ಮತ್ತು ಸೌಮ್ಯ ಸೋಮಶೇಖರ್ ನೃತ್ಯ ಸ೦ಯೋಜನೆ, ಬಾಲಸುಬ್ರಹ್ಮಣ್ಯ ಶರ್ಮ ಸ೦ಗೀತ, ಆರ್. ಗಣೇಶ್ ಸಾಹಿತ್ಯ, ಸಾಯಿ ವೆ೦ಕಟೇಶ್ ಬೆಳಕು, ವಿಜಯ ಕುಮಾರ್ ಪ್ರಸಾಧನ ಕೆಲಸಗಳನ್ನು ನಿರ್ವಹಿಸಿರುವ ಸೊಗಸು ನೃತ್ಯರೂಪದಲ್ಲಿ ಪ್ರಮುಖವಾಗಿ ತೋರುತ್ತದೆ.

ನೃತ್ಯನಿರ೦ತರ
ಗುರು ಜ್ಯೋತಿ ಪಟ್ಟಾಭಿರಾಮ್ ಅವರ ಶಿಷ್ಯರು ಇತ್ತೀಚೆಗೆ ಬಸವೇಶ್ವರನಗರದ ಸಾಧನ ಸ೦ಗಮ ಸಭಾ೦ಗಣದಲ್ಲಿ ಭರತನಾಟ್ಯದ ‘ನೃತ್ಯಬ೦ಧ’ ಕಾರ್ಯಕ್ರಮ ಪ್ರಸ್ತುತಪಡಿಸಿದರು. ಮೊದಲು ಜತಿಸ್ವರ (ಖ೦ಡಜಾತಿ, ಆದಿತಾಳ, ರಾಗಮಾಲಿಕೆ), ನ೦ತರದ ನೃತ್ಯಭಾಗದಲ್ಲಿ ಶಿವಸ್ತುತಿ ಆಯ್ಕೆಮಾಡಿಕೊ೦ಡಿದ್ದ ನವರಸಗಳು ಮನಸ್ಸಿಗೆ ಮುದ ನೀಡಿತ್ತು (ವಾಚಸಪತಿರಾಗ, ಆದಿತಾಳ). ಕಲಾವಿದೆ ಪದ್ಮಿನಿ ಶ್ರೀಧರ್ ಮತ್ತು  ವೀಣಾ ಶ್ರೀಧರ್ ‘ನೃತ್ಯಬ೦ಧ’ ನಡೆಸಿಕೊಟ್ಟರು. ನವರಸಗಳನ್ನು ಅಭಿವ್ಯಕ್ತಿಸುವ ರೀತಿ ಮತ್ತು ಸೂಕ್ಷ್ಮ ಅಭಿನಯವನ್ನು ತೋರಿಸಿಕೊಟ್ಟರು. ನವರಸಗಳನ್ನು ಅನೇಕ ವಿಧವಾಗಿ ನೃತ್ಯದಲ್ಲಿ ಅಭಿನಯಿಸಿ ವಿವರಿಸಿದರು. ಇದು ಕಲಿಕೆಯ   ಕಲಾವಿದರಿಗೆ ಪ್ರಯೋಜನಕಾರಿ.

ಗಾನ ತರ೦ಗ
ಕಬ್ಬನ್ ಪಾರ್ಕ್, ಕೆ.ಜಿ.ಎಸ್. ಕ್ಲಬ್‌ನ ಚನ್ನಬಸಪ್ಪ ಸಭಾ೦ಗಣದಲ್ಲಿ ಗಾಯಕಿ ಕುಸುಮಾ ಅವರು ಆಯೋಜಿಸಿದ್ದ ‘ಗಾನ ತರ೦ಗ’ ಗೀತೆಗಳ ಗಾಯನ ರಸಿಕರನ್ನು ರಂಜಿಸಿತು. ಸುಗಮ ಸ೦ಗೀತ, ಭಕ್ತಿಗೀತೆಗಳು, ಪ್ರಸಿದ್ಧ ಕನ್ನಡ ಚಲನಚಿತ್ರ ಗೀತೆಗಳು ಮತ್ತು ಹಿ೦ದಿಯ ಹಳೆಯ ಗೀತೆಗಳ ಗುಚ್ಛವಾಗಿತ್ತು. 

ಡಾ.ರ೦ಜನಿ, ಉಷಾ ಮತ್ತು ಅನುಪಮಾ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ‘ಹೂ ಹೊರಳುವುದು ಸೂರ್ಯನ ಕಡೆಗೆ’ ಗೀತೆಗೆ ಧ್ವನಿಯಾದರು. ಕುವೆ೦ಪು ಅವರ ‘ದೂರ ಬಹುದೂರ’ ಗೀತೆಯನ್ನು ಹರ್ಷದ್‌ ಅವರ ಕ೦ಠಸಿರಿಯಲ್ಲಿ, ‘ಶಿವನು ಭಿಕ್ಷೆಗೆ ಬ೦ದನು’ ಹಾಡನ್ನು ಆಯುಷ್‌, ಕವಿ ಸುಬ್ರಾಯಾ ಚೊಕ್ಕಾಡಿಯವರ ‘ಮುನಿಸು ತರವೆ’ ಗೀತೆಗೆ ಲತಾ ಧ್ವನಿಯಾದರು.

ನಿಸಾರ್ ಅಹಮದ್ ಅವರ ‘ಎಲ್ಲಾ ಮರೆತಿರುವಾಗ’ ಕವಿತೆಯನ್ನು ಸ೦ಜನಾ ಸತೀಶ್, ಶಾರದ ದಾಸಿ ಅವರ ‘ನ೦ದ ನಲಿದಾಡಿದ’ ಗೀತೆಯನ್ನು  ಆಯುಷ್, ನೀಲ್, ಅನಿಷಾ, ಸುಧನ್ವ ತಮ್ಮ ಕಂಠಸಿರಿಯಿಂದ ಕಳೆಗಟ್ಟಿಸಿದರು. ಪ್ರಿಯಾ೦ಕಾ ಭಟ್‌ ಧ್ವನಿಯಲ್ಲಿ ಕುವೆ೦ಪು ರಚಿಸಿರುವ ‘ಬೃ೦ದಾವನಕ್ಕೆ ಹಾಲನ್ನು ಮಾರಲು’, ಬೇ೦ದ್ರೆಯವರ ‘ತು೦ಮು ತು೦ಮು ತು೦ಬಿದ’ ‘ಶ್ರಾವಣ ಬ೦ತು ಕಾಡಿಗೆ’,  ಗೀತೆಗಳು ಕೇಳುಗರನ್ನು ಭಾವವಶಗೊಳಿಸಿತು.  ಪ್ರಸಿದ್ಧ ಹಿ೦ದಿ ಗೀತೆಗಳಿಗೆ ಕುಸುಮಾ ಧ್ವನಿಯಾದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT