ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿತಿನ್ ಮಿಂಚು: ವಾರಿಯರ್ಸ್‌ಗೆ ಜಯ

ಪ್ರೊ ಕಬಡ್ಡಿ ಲೀಗ್‌: ಪುಣೇರಿ ಪಲ್ಟನ್‌ ತಂಡಕ್ಕೆ ಕಾಡಿದ ನಿರಾಸೆ
Last Updated 7 ಫೆಬ್ರುವರಿ 2016, 19:46 IST
ಅಕ್ಷರ ಗಾತ್ರ

ಕೋಲ್ಕತ್ತ:  ಸೇನೆಯ ಆಟಗಾರ ನಿತಿನ್‌ ತೋಮರ್‌ ಅವರ ಸ್ಫೂರ್ತಿಯುತ ರೈಡಿಂಗ್‌ ನೆರವಿನಿಂದ ಬೆಂಗಾಲ್ ವಾರಿ ಯರ್ಸ್‌ ತಂಡ ತವರಿನಲ್ಲೂ ಗೆಲುವಿನ ಯಾತ್ರೆಯನ್ನು ಮುಂದುವರಿಸಿತು.

ಕುತೂಹಲಕರವಾಗಿದ್ದ ಪ್ರೊ ಕಬಡ್ಡಿ ಲೀಗ್‌ನ ಈ ಪಂದ್ಯದಲ್ಲಿ ಆತಿಥೇಯ ತಂಡ 33–28 ರಲ್ಲಿ ಐದು ಪಾಯಿಂಟ್‌ಗಳಿಂದ ಪುಣೇರಿ ಪಲ್ಟನ್‌ ತಂಡವನ್ನು ಸೋಲಿಸಿ ಸತತ ಮೂರನೇ ಗೆಲುವನ್ನು ದಾಖಲಿಸಿತು.

ನೇತಾಜಿ ಸುಭಾಷಚಂದ್ರ ಬೋಸ್‌ ಒಳಾಂಗಣ ಕ್ರೀಡಾಂಗಣದಲ್ಲಿ ಭಾನು ವಾರ ನಡೆದ ಈ ಪಂದ್ಯದಲ್ಲಿ ಕೊನೆಯ ಮೂರು ನಿಮಿಷಗಳಿದ್ದಾಗ ಸ್ಕೋರ್‌ 25–25ರಲ್ಲಿ ಸಮನಾಗಿತ್ತು. ಈ ಹಂತದಲ್ಲಿ ತೋಮರ್ ‘ಸೂಪರ್‌ರೇಡ್‌’ನಲ್ಲಿ ಗಳಿ ಸಿದ ಮೂರು ಪಾಯಿಂಟ್‌ಗಳು ವಾರಿ ಯರ್ಸ್‌ ಯಶಸ್ಸಿನಲ್ಲಿ ನಿರ್ಣಾಯಕ ಪಾತ್ರ ವಹಿಸಿತು. ಕೆಲಕ್ಷಣಗಳಲ್ಲೇ ಪುಣೇರಿ ಪಲ್ಟನ್‌ ಎರಡನೇ ಬಾರಿ ಆಲೌಟ್‌ ಆಗಿ ವಾರಿ ಯರ್ಸ್‌ಗೆ 33–27ರಲ್ಲಿ ಮುನ್ನಡೆಯೂ ದೊರಕಿತು. ಲೀಗ್‌ನಲ್ಲಿ ಬಂಗಾಳದ ಮೊದಲ ಪಂದ್ಯದಲ್ಲೂ ಮಿಂಚಿದ್ದ ತೋಮರ್‌ ಈ ಪಂದ್ಯದಲ್ಲಿ 11 ರೈಡಿಂಗ್‌ ಪಾಯಿಂಟ್‌ ತಂದುಕೊಟ್ಟರು. ಮಹೇಶ್‌ ಗೌಡ ನಾಲ್ಕು ರೈಡಿಂಗ್‌ ಪಾಯಿಂಟ್‌ ಗಳಿಸಿಕೊಟ್ಟರು.

ಕೊರಿಯ ಮೂಲದ ರೈಡರ್‌ ಜಂಗ್‌ ಕುನ್ ಲೀ ಅಂಥ ಯಶಸ್ಸು ಕಾಣಲಿಲ್ಲ. ಈ ಸಂದರ್ಭದಲ್ಲಿ ತೋಮರ್‌ ಆಪತ್‌ ಬಾಂಧವನಾದರು. ಇನ್ನೊಂದು ಕಡೆ ಬೆಂಗಳೂರು ಬುಲ್ಸ್‌ ಮಾಜಿ ಆಟಗಾರ ಹಾಗೂ ಪಲ್ಟನ್‌ ನಾಯಕ ಮಂಜಿತ್‌ ಚಿಲಾರ ಅವರ ಆಲ್‌ರೌಂಡ್‌ ಆಟ ವ್ಯರ್ಥವಾಯಿತು.

ವಿರಾಮದ ವೇಳೆಗೆ ಪುಣೆ ತಂಡ 11–10ರಲ್ಲಿ ಒಂದು ಪಾಯಿಂಟ್‌ನ  ಮುನ್ನಡೆ ಪಡೆದಿತ್ತು. ಆದರೆ ಉತ್ತರಾ ರ್ಧದ ಎರಡನೇ ನಿಮಿಷದಲ್ಲೇ ಬೆಂಗಾಲ್‌ ವಾರಿಯರ್ಸ್‌, ತಂಡ ಮೊದಲ ಬಾರಿ ಪುಣೇರಿ ಪಲ್ಟನ್‌ ತಂಡ ವನ್ನು ಆಲ್ಔಟ್‌ ಮಾಡಿತು. ಗಿರೀಶ್‌ ಎರ್ನಾಕ್‌ ಅವರ ರಕ್ಷಣೆ ಆಟವೂ ಇದಕ್ಕೆ ನೆರವಾಯಿತು. ಈ ಹಂತದಲ್ಲಿ 15–12ರಲ್ಲಿ ಮುನ್ನಡೆದ ವಾರಿಯರ್ಸ್‌ ನಂತರ ಅದನ್ನು 19–13ಕ್ಕೆ ಉಬ್ಬಿಸಿತು.

ಆದರೆ ಮೊದಲ ಭಾಗದಲ್ಲಿ ಆರು ಟ್ಯಾಕಲ್‌ ಪಾಯಿಂಟ್‌ಗಳ ಮೂಲಕ ರಕ್ಷಣೆಯಲ್ಲಿ ಗಮನ ಸೆಳೆದ ಮಂಜಿತ್‌ ಚಿಲಾರ, ಅಮೋಘ ರೈಡಿಂಗ್‌ ಮೂಲಕ ನಾಲ್ಕು ಪಾಯಿಂಟ್‌  (1 ಬೋನಸ್‌ ಸೇರಿ) ತಂದುಕೊಟ್ಟು ವಾರಿಯರ್ಸ್‌ ಪಾಳಯದಲ್ಲಿ ಕಳವಳ ಮೂಡಿಸಿದರು. ನಿತಿನ್ ತೋಮರ್‌ ಕೂಡ ಇವರಲ್ಲಿ ಸೇರಿದ್ದರು.

ಕೆಲಹೊತ್ತಿನಲ್ಲೇ ಆತಿ ಥೇಯರು ಮೊದಲ ಬಾರಿ ಆಲೌಟ್‌ ಆದರು. ಸ್ಕೋರ್‌ ನಂತರ 24–24, 25–25ರಲ್ಲಿ ಎರಡು ಬಾರಿ ಸಮನಾಯಿತು. ಆದರೆ ನಿತಿನ್‌ ತೋಮರ್‌ ಅವರ ಅಮೋಘ ರೈಡಿಂಗ್‌ ಪಂದ್ಯದ ಗತಿಯನ್ನೇ ಬದಲಾಯಿಸಿತು. ಬಂಗಾಳಿ ಚಿತ್ರರಂಗದ ಹಿನ್ನಲೆ ಗಾಯಕಿ ಮೊನಾಲಿ ಠಾಕೂರ್‌ ರಾಷ್ಟ್ರಗೀತೆ ಹಾಡುವ ಮೂಲಕ ಕೋಲ್ಕತ್ತ ಲೆಗ್‌ ಪಂದ್ಯಗಳಿಗೆ ಚಾಲನೆ ನೀಡಿದರು.

ಪ್ಯಾಂಥರ್ಸ್‌ಗೆ ಗೆಲುವು:  ಇನ್ನೊಂದು ಪಂದ್ಯದಲ್ಲಿ ಜೈಪುರ್‌ ಪಿಂಕ್‌ ಪ್ಯಾಂಥರ್‌ ತಂಡ 39–34 ಪಾಯಿಂಟ್‌ಗಳಿಂದ ಡೆಲ್ಲಿ ದಬಾಂಗ್‌ ತಂಡವನ್ನು ಸೋಲಿಸಿತು.

ವಿರಾಮದ ವೇಳೆ 15–13ರಲ್ಲಿ ಮುನ್ನಡೆಯಲ್ಲಿದ್ದ ದಬಾಂಗ್‌ ತಂಡ ಉತ್ತರಾರ್ಧದ ಕೊನೆಯ 12 ನಿಮಿಷಗಳಲ್ಲಿ ಎರಡು ಬಾರಿ ಆಲೌಟ್‌ ಆಗಿದ್ದು ಜೈಪುರ ಹಿಡಿತ ಪಡೆಯಲು ನೆರವಾಯಿತು. ಸೋನು ನರ್ವಾಲ್‌ ಉತ್ತಮ ರೈಡಿಂಗ್‌ ಮೂಲಕ ಗಮನ ಸೆಳೆದರು.

ಇದು ದೆಹಲಿಗೆ ಸತತ ಐದನೇ ಸೋಲು. ಜೈಪುರ ಆಡಿದ ನಾಲ್ಕರಲ್ಲಿ ಎರಡು ಗೆದ್ದು ಎರಡು ಸೋತಿದೆ.

ಇಂದಿನ ಪಂದ್ಯಗಳು
ಪಟ್ನಾ ಪೈರೇಟ್ಸ್‌– ತೆಲುಗು ಟೈಟಾನ್ಸ್‌
ಆರಂಭ: ರಾತ್ರಿ 8
ಬಂಗಾಳ ವಾರಿಯರ್ಸ್‌ – ದೆಹಲಿ
ಆರಂಭ: 9 ಗಂಟೆ).
ನೇರಪ್ರಸಾರ: ಸ್ಟಾರ್‌ಸ್ಪೋರ್ಟ್ಸ್‌

ಮುಖ್ಯಾಂಶಗಳು
* ಮಂಜಿತ್‌ ಚಿಲಾರ್‌ ಆಲ್‌ರೌಂಡ್‌ ಆಟ ವ್ಯರ್ಥ
* ಪದೇ ಪದೇ ಬದಲಾದ ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT