ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಾಶ್ರಿತರಿಗೆ ನೆಲೆಗಾಗಿ ಜರ್ಮನಿಯ ಪ್ರಯಾಸ

ಅಕ್ಷರ ಗಾತ್ರ

ಈ ವರ್ಷ ಜರ್ಮನಿಯ ಕೃಪೆಗಾಗಿ ಕಾದಿರುವ ಮತ್ತು ಅಲ್ಲಿ ಆಶ್ರಯಕ್ಕಾಗಿ ಅರ್ಜಿ ಹಾಕಲಿರುವ ಸುಮಾರು ಎರಡು ಲಕ್ಷ ಜನರಲ್ಲಿ ಡಮಾಸ್ಕಸ್‌ನ ಉದ್ಯಮಿ ೩೮ ವರ್ಷದ ಅಹ್ಮದ್ ಮಹಾಯ್ನಿ ಕೂಡ ಸೇರಿದ್ದಾರೆ. ಮಹಾಯ್ನಿ ಕ್ರಿಯಾಶೀಲ ವ್ಯಕ್ತಿ. ತಮ್ಮ ಕುಟುಂಬದ ಭವಿಷ್ಯವನ್ನು ಇಲ್ಲಿಯೇ ಕಟ್ಟಿಕೊಳ್ಳಲು ಅವರು ನಿರ್ಧರಿಸಿದಂತೆ ತೋರುತ್ತದೆ.

ಬರ್ಲಿನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಕೂಡಲೇ ಈತನನ್ನು ನಿರಾಶ್ರಿತ ಶಿಬಿರಕ್ಕೆ ತಂದು ಬಿಡಲಾಗಿದೆ. ಅಲ್ಲಿನ ಕೆಲಸಗಳಲ್ಲಿ ನೆರವಾಗುತ್ತಿರುವ ಮಹಾಯ್ನಿ, ತಾನು ಜರ್ಮನಿಯಲ್ಲಿ ಆಶ್ರಯ ಅರಸಿ ಬಂದವನು ಎಂದು ಪೊಲೀಸರಿಗೆ ಹೇಳುತ್ತಿದ್ದಾರೆ. ಸಾಕ್ಕಷ್ಟು ಚೆನ್ನಾಗಿಯೇ ಇಂಗ್ಲಿಷ್ ಮಾತನಾಡಬಲ್ಲ ಮಹಾಯ್ನಿಗೆ ಜರ್ಮನಿಯಲ್ಲಿ ಬದುಕು ಕಂಡುಕೊಳ್ಳಬೇಕಿದ್ದರೆ ಭಾಷೆ ಅತ್ಯಂತ ಮುಖ್ಯ ಎಂಬುದು ಅರಿವಾಗಿದೆ. ಹಾಗಾಗಿಯೇ ಆತ ವಾರಕ್ಕೆ ಹತ್ತು ತಾಸಿನ ಜರ್ಮನ್ ಭಾಷಾ ತರಗತಿಗೆ ಸೇರಿಕೊಂಡಿದ್ದಾರೆ.

ಮಹಾಯ್ನಿಯಂತಹ ನಿರಾಶ್ರಿತರು ಜರ್ಮನಿಯ ಹೊಸ ನೆಲೆಗೆ ಹೊಂದಿಕೊಳ್ಳಲು ಶ್ರಮಿಸುತ್ತಿರುವಾಗಲೇ ದೊಡ್ಡ ಸಂಖ್ಯೆಯಲ್ಲಿ ಹೊಸ ಅತಿಥಿಗಳು ಬರುತ್ತಿರುವ ಬಗ್ಗೆ ಜರ್ಮನರು ಅತೃಪ್ತಿ ಹೊಂದಿದ್ದಾರೆ. ವಿಶ್ವ ಸಂಸ್ಥೆ ಹೇಳುವಂತೆ, ಮೂರೂವರೆ ವರ್ಷಗಳ ಸಿರಿಯಾ ಯುದ್ಧದಿಂದಾಗಿ ಜಗತ್ತಿನ ಅತ್ಯಂತ ತೀವ್ರವಾದ ನಿರಾಶ್ರಿತ ಬಿಕ್ಕಟ್ಟು ಎದುರಾಗಿದೆ. ನೆರವಾಗುವ ವಿಶೇಷ ಕರ್ತವ್ಯ ತಮ್ಮದು ಎಂಬುದನ್ನು ಜರ್ಮನಿಯ ನಾಜಿ ಹಿನ್ನೆಲೆ ನಿರಂತರವಾಗಿ ನೆನಪಿಸುತ್ತಿದ್ದರೂ ನಿರಾಶ್ರಿತರನ್ನು ಸ್ವಾಗತಿಸುವ ಮನಸ್ಥಿತಿ ಜರ್ಮನಿಯಲ್ಲಿ ಕುಗ್ಗುತ್ತಿದೆ.

ಬಹುತೇಕ ಈ ಒಲ್ಲದಿರುವಿಕೆಯ ಕಾರಣ ಇಷ್ಟೊಂದು ಪ್ರಮಾಣದಲ್ಲಿ ಬರುವ ನಿರಾಶ್ರಿತರಿಗೆ ಎಲ್ಲಿ ಆಶ್ರಯ ಒದಗಿಸುವುದು ಎಂಬ ಪ್ರಶ್ನೆಯಾಗಿದೆ. ಹ್ಯಾಂಬರ್ಗ್, ಮ್ಯೂನಿಚ್, ಬರ್ಲಿನ್‌ಗಳಂತಹ ನಗರಗಳಲ್ಲಿ ವಿವಿಧ ರೀತಿಯ ಟೆಂಟ್‌ಗಳು, ಶಿಪ್ಪಿಂಗ್ ಕಂಟೈನರ್‌ಗಳನ್ನು (ಹಡಗುಗಳಲ್ಲಿ ಸರಕು ಸಾಗಿಸುವ ಬೃಹತ್ ಪೆಟ್ಟಿಗೆ) ಪರಿವರ್ತಿಸಿ ಆಶ್ರಯ ಒದಗಿಸಲಾಗಿದೆ. ದೊಡ್ಡ ಹಡಗುಗಳನ್ನು ನಿರಾಶ್ರಿತ ಶಿಬಿರಗಳಾಗಿಸುವ ಬಗ್ಗೆಯೂ ಚಿಂತನೆ ನಡೆದಿದೆ. ೧೯೯೦ರ ದಶಕದಲ್ಲಿ ಬಾಲ್ಕನ್ ಯುದ್ಧದ ನಿರಾಶ್ರಿತರು ಆಗಷ್ಟೇ ಏಕೀಕೃತಗೊಂಡಿದ್ದ ಜರ್ಮನಿಗೆ ವಲಸೆ ಬಂದಾಗ ನೆಲೆ ಕಲ್ಪಿಸಲು ಇಂತಹ ಕ್ರಮವನ್ನು ಕೈಗೊಳ್ಳಲಾಗಿತ್ತು.

ಸಮಸ್ಯೆ ಎಷ್ಟು ತೀವ್ರವಾಗಿದೆ ಎಂದರೆ ಚಾನ್ಸಲರ್ ಏಂಜೆಲಾ ಮರ್ಕೆಲ್ ಅವರು ಜರ್ಮನಿಯ ಎಲ್ಲ ೧೬ ರಾಜ್ಯಗಳ ರಾಜ್ಯಪಾಲರ ಸಭೆಯನ್ನು ಮುಂದಿನ ವಾರಗಳಲ್ಲಿ ಕರೆದಿದ್ದಾರೆ. ವೈಸ್ ಚಾನ್ಸಲರ್, ಸೋಷಿಯಲ್ ಡೆಮಾಕ್ರಟಿಕ್ ಪಕ್ಷದ ಸೈಮರ್ ಗೇಬ್ರಿಯಲ್ ನಿರಾಶ್ರಿತ ಸಮುದಾಯದ ನೆರವಿಗೆ ೧೨೦ ಕೋಟಿ ಡಾಲರ್ (ಸುಮಾರು ಏಳೂವರೆ ಸಾವಿರ ಕೋಟಿ ರೂಪಾಯಿ) ಹೆಚ್ಚುವರಿ ನೆರವು ಬಿಡುಗಡೆ ಮಾಡುವಂತೆ ಕೋರಿದ್ದಾರೆ.

ಈ ಪ್ರಮಾಣದಲ್ಲಿ ನಿರಾಶ್ರಿತರು ದೇಶದೊಳಕ್ಕೆ ಹರಿದು ಬರುತ್ತಾರೆ ಎಂಬುದನ್ನು ಅಂದಾಜು ಮಾಡಿರಲೇ ಇಲ್ಲ ಎಂದು ಆಡಳಿತ ಯಂತ್ರ ಹೇಳಿದೆ. ಇತ್ತೀಚಿನ ವರ್ಷಗಳಲ್ಲಿ ನಾಶಪಡಿಸಲಾದ ಹಲವು ಹಳೆಯ ಕಟ್ಟಡಗಳು ಇದ್ದಿದ್ದರೆ ಈಗ ಉಪಯುಕ್ತವಾಗುತ್ತಿತ್ತು ಎನ್ನುತ್ತಾರೆ ಅಧಿಕಾರಿಗಳು. ಜರ್ಮನಿಯ ಜನರು ಸಿಟ್ಟಾಗಿದ್ದಾರೆ. ವಿದೇಶಿ ನಿರಾಶ್ರಿತರ ಮೇಲೆ ತಮಗೆ ಸಿಟ್ಟೇನೂ ಇಲ್ಲ ಎಂದು ಅವರು ಹೇಳುತ್ತಾರೆ.
ಆದರೆ ತಮ್ಮ ಮಕ್ಕಳ ಭವಿಷ್ಯ, ಅತ್ಯಂತ ಜತನದಿಂದ ಕಾದುಕೊಂಡು ಬಂದಿರುವ ಶಾಂತಿ ಮತ್ತು ಸುವ್ಯವಸ್ಥೆ ಹದಗೆಡುವ ಆತಂಕ ಅವರನ್ನು ಕಾಡುತ್ತಿದೆ.

ಹಾಗಾಗಿಯೇ ಅವರು ಅಧಿಕಾರಿಗಳನ್ನು ಟೀಕಿಸುತ್ತಿದ್ದಾರೆ ಮತ್ತು ನಿರಾಶ್ರಿತ ಶಿಬಿರ ನಿರ್ಮಿಸಲು ಯೋಜಿಸಲಾಗಿರುವ ಪ್ರದೇಶಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಸಣ್ಣದಾಗಿ ಆರಂಭವಾಗಿರುವ ಪ್ರತಿಭಟನೆ ಬೆಳೆಯುತ್ತಲೇ ಇದೆ. ಆಗಾಗ ನಿರಾಶ್ರಿತರೂ ಪ್ರತಿಭಟನೆ ನಡೆಸುತ್ತಿದ್ದಾರೆ. ಸಿರಿಯಾದಿಂದ ವಲಸೆ ಬರುತ್ತಿರುವ ಜನರನ್ನು ಅತ್ಯಂತ ತ್ವರಿತವಾಗಿ ಶಿಬಿರಗಳಿಗೆ ಸೇರಿಸುತ್ತಿದ್ದಾರೆ ಎಂಬುದು ಇದಕ್ಕೆ ಒಂದು ಕಾರಣ.

ಸುಮಾರು ೩೦ ನಿರಾಶ್ರಿತರು ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಕಳೆದ ವಾರ ಪೊಲೀಸರು ಕೊನೆಗೊಳಿಸಿದರು. ಬರ್ಲಿನ್‌ನ ಕ್ಯುಯೆಜ್‌ಬರ್ಗ್ ಜಿಲ್ಲೆಯ ಶಾಲೆಯೊಂದರಲ್ಲಿ ಹತ್ತಾರು ಆಫ್ರಿಕನ್ನರು ನೆಲೆಯಾಗಿದ್ದಾರೆ. ಕಳೆದ ತಿಂಗಳು ಹ್ಯಾಂಬರ್ಗ್ ಹೊರವಲಯದ ಸ್ವಾಗತ ಕೇಂದ್ರವೊಂದ ರಲ್ಲಿ ಮುಖ್ಯವಾಗಿ ಸಿರಿಯಾ ಮತ್ತು ಇರಾಕ್‌ನ ನಿರಾಶ್ರಿತ ಯುವಕರು, ಪತ್ರಕರ್ತರ ಗುಂಪಿಗೆ ಮುತ್ತಿಗೆ ಹಾಕಿದರು.

ಕಿಕ್ಕಿರಿದು ತುಂಬಿರುವ ಟೆಂಟ್‌ಗಳಿಗೆ ಅನುಮತಿ ಇಲ್ಲದೆ ಪ್ರವೇಶ ನಿರಾಕರಿಸಲಾದ ಪತ್ರಕರ್ತರಿಗೆ, ಟೆಂಟ್‌ಗಳು ಮತ್ತು ಕಂಟೈನರ್‌ಗಳಲ್ಲಿ ಕಳೆಯುವ ಚಳಿಯ ರಾತ್ರಿಗಳ ಬಗ್ಗೆ ತಿಳಿಸುವುದು ಈ ಯುವಕರ ಉದ್ದೇಶವಾಗಿತ್ತು. ಸಿರಿಯಾ ನಿರಾಶ್ರಿತರ ಅರ್ಜಿಗಳ ವಿಲೇವಾರಿಗೆ ಈಗ ಸರಾಸರಿ ಏಳು ತಿಂಗಳ ಸಮಯ ಬೇಕಾಗುತ್ತಿದೆ. ಇನ್ನಷ್ಟು ತ್ವರಿತವಾಗಿ ಅರ್ಜಿಗಳ ವಿಲೇವಾರಿ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

ಮಹಾಯ್ನಿಗೆ ಪತ್ನಿ, ೯ ಮತ್ತು ೬ವರ್ಷದ ಹೆಣ್ಣು ಮಕ್ಕಳು ಹಾಗೂ ನಾಲ್ಕು ವರ್ಷದ ಮಗನ ಅಗಲಿಕೆಯನ್ನು ಸಹಿಸಲಾಗುತ್ತಿಲ್ಲ. ಸಿರಿಯಾ ಯುದ್ಧ ದಿಂದಾಗಿ ಮೂರು ವರ್ಷಗಳಿಂದ ಜೋರ್ಡಾನ್‌ನಲ್ಲಿ ದೇಶಭ್ರಷ್ಟರಾಗಿ ಜೀವಿಸುತ್ತಿದ್ದ ಕುಟುಂಬವನ್ನು ಆಗಸ್ಟ್‌ನಲ್ಲಿ ತೊರೆದು ಬಂದ ನಂತರ ಅವರನ್ನು ಮಹಾಯ್ನಿ ಕಂಡಿಲ್ಲ. ನಿರಾಶ್ರಿತರು ಶಿಬಿರಕ್ಕೆ ಸೇರಿ ಒಂಬತ್ತು ತಿಂಗಳವರೆಗೆ ಕೆಲಸ ಹುಡುಕಿಕೊಳ್ಳುವುದಕ್ಕೆ ಅವಕಾಶ ಇಲ್ಲ. ಈಗ ಈ ಅವಧಿಯನ್ನು ಸರ್ಕಾರ ಮೂರು ತಿಂಗಳಿಗೆ ಇಳಿಸಿದೆ.

ಆಶ್ರಯಕ್ಕಾಗಿ ಸಲ್ಲಿಸಲಾಗಿರುವ ೧.೬ ಲಕ್ಷಕ್ಕೂ ಹೆಚ್ಚು ಅರ್ಜಿಗಳು ಬಾಕಿ ಇದ್ದು, ಅದು ವರ್ಷದ ಕೊನೆಗೆ ಎರಡು ಲಕ್ಷವನ್ನೂ ಮೀರಬಹುದು. ಜಿಹಾದಿ ಉಗ್ರರ ವಿರುದ್ಧ ಜರ್ಮನಿ ವಾಯು ದಾಳಿ ನಡೆಸುತ್ತಿಲ್ಲ. ಆದರೆ ನಿರಾಶ್ರಿತರ ಬಿಕ್ಕಟ್ಟು ಪರಿಹಾರಕ್ಕೆ ಬಹಳ ದೊಡ್ಡ ಪಾತ್ರ ವಹಿಸುತ್ತಿದೆ. ಬಿಕ್ಕಟ್ಟು ಪ್ರದೇಶದಲ್ಲಿ ನಿರಾಶ್ರಿತರ ನೆರವಿಗಾಗಿ ಜರ್ಮನಿ ಖರ್ಚು ಮಾಡಿರುವ ಮೊತ್ತವೇ ೩೪ ಕೋಟಿ ಯೂರೊ (ಸುಮಾರು ೨6೦೦ ಕೋಟಿ ರೂಪಾಯಿ). ಜರ್ಮನಿಯೊಳಗೆ ನಿರಾಶ್ರಿತರಿಗಾಗಿ ವೆಚ್ಚ ಮಾಡುತ್ತಿರುವ ಹಣ ಇನ್ನೂ ಹೆಚ್ಚು ಎಂದು ಅಧಿಕಾರಿಗಳು ಹೇಳುತ್ತಾರೆ.

ಜರ್ಮನಿಯ ೧೬ ರಾಜ್ಯಗಳಲ್ಲಿ ಪ್ರತಿಯೊಂದು ರಾಜ್ಯಕ್ಕೂ ನಿಗದಿತ ಪ್ರಮಾಣದಲ್ಲಿ ನಿರಾಶ್ರಿತರನ್ನು ಹಂಚಲಾಗುತ್ತಿದೆ. ಹೆಚ್ಚು ಜನಸಂಖ್ಯೆ ಹೊಂದಿರುವ ಪಶ್ಚಿಮದ ರಾಜ್ಯಗಳು ಹಿಂದಿನ ಪೂರ್ವ ಜರ್ಮನಿಯ ಪ್ರದೇಶಗಳಿಗಿಂತ ಹೆಚ್ಚಿನ ಸಂಖ್ಯೆಯ ನಿರಾಶ್ರಿತರಿಗೆ ಆಶ್ರಯ ಒದಗಿಸುತ್ತಿವೆ. ಐರೋಪ್ಯ ಒಕ್ಕೂಟದ ೨೮ ರಾಷ್ಟ್ರಗಳು ಕೂಡ ನಿರಾಶ್ರಿತರ ಹೆಚ್ಚಿನ ಹೊಣೆಯನ್ನು ಹಂಚಿಕೊಳ್ಳಬೇಕು ಎಂಬ ಕೂಗು ಪೂರ್ವ ಜರ್ಮನಿಯ ರಾಜ್ಯಗಳಲ್ಲಿ ಬಲವಾಗುತ್ತಿದೆ.

ಡಿನ್ಸರ್ ಸೆಹೆರ್ (೪೮) ಮೂರು ವರ್ಷದವಳಿದ್ದಾಗ ಟರ್ಕಿಯಿಂದ ಜರ್ಮನಿಗೆ ಬಂದವಳು. ೧೯೬೦ ಮತ್ತು ೭೦ರ ದಶಕದಲ್ಲಿ ನೇಮಕಗೊಂಡ ಸಾವಿರಾರು ಅತಿಥಿ ಕಾರ್ಮಿಕರ ಸಮುದಾಯಕ್ಕೆ ಈಕೆ ಸೇರಿದ್ದಾರೆ. ಇವರನ್ನು ಬಹಳ ದೀರ್ಘ ಕಾಲ ತಾತ್ಕಾಲಿಕ ನಿವಾಸಿಗಳೆಂದೇ ಪರಿಗಣಿಸಲಾಗಿತ್ತು. ಈಗ ನಿರಾಶ್ರಿತ ಶಿಬಿರವೊಂದರ ವ್ಯವಸ್ಥಾಪಕಿಯಾಗಿರುವ ಅವರು, ತನ್ನ ಹಾದಿಯನ್ನು ಅನುಸರಿಸುವಂತೆ ನಿರಾಶ್ರಿತರಿಗೆ ಸಲಹೆ ನೀಡುತ್ತಾರೆ.

ಹೊಸ ವ್ಯವಸ್ಥೆಯೊಂದಿಗೆ ಸಂಪೂರ್ಣ ಮಿಳಿತಗೊಳ್ಳುವ ಬದಲು ಸಮನ್ವಯಗೊಳಿಸಿಕೊಳ್ಳಬೇಕು ಎಂದು ಆಕೆ ಹೇಳುತ್ತಾರೆ. ತಾಯ್ನಾಡು ಮತ್ತು ಕುಟುಂಬದ ಅಗಲು ವಿಕೆ, ಕಷ್ಟಕರವಾದ ಪ್ರಯಾಣ, ಸಮುದ್ರಯಾನ ಮತ್ತು ಮಾನವ ಕಳ್ಳಸಾಗಣೆದಾರರು ಮುಂತಾದವುಗಳಿಂದಾಗಿ ವಲಸಿಗರು ಘಾಸಿಗೊಂಡಿರುತ್ತಾರೆ. ಸೆಹೆರ್ ಇರುವ ನಿರಾಶ್ರಿತ ಕೇಂದ್ರಕ್ಕೆ ಬಂದವರು ನಿಧಾನವಾಗಿ ಹೊಂದಿಕೊಳ್ಳಲಾರಂಭಿಸುತ್ತಾರೆ. ಇತ್ತೀಚೆಗೆ ಒಂದು ದಿನ, ಸ್ಥಳೀಯ ಜರ್ಮನ್ನರು ಉಡುಗೊರೆಗಳು, ಹಳೆಯ ಬಟ್ಟೆಗಳು, ಆಟಿಕೆಗಳು ಮತ್ತು ಪೀಠೋಪಕರಣಗಳೊಂದಿಗೆ ಶಿಬಿರಕ್ಕೆ ಬಂದರು.

ಬೇರೆ ಬೇರೆ ದೇಶಗಳ ಮಕ್ಕಳು ಜತೆಯಾಗಿ ಆಡಿದರು. ಆಫ್ಘಾನಿಸ್ತಾನ, ಇರಾನ್, ಸಿರಿಯಾ ಮತ್ತು ಪಶ್ಚಿಮ ಆಫ್ರಿಕಾದ ಜನರು ತಮಗೆ ನೀಡಲಾಗಿರುವ ವಸತಿ ಬಗ್ಗೆ ಸಂತೃಪ್ತಿ ವ್ಯಕ್ತಪಡಿಸಿದರು. ಅಲ್ಲಿ ಒಂದು ಕುಟುಂಬಕ್ಕೆ ಒಂದೊಂದು ಕೊಠಡಿಯನ್ನು ನೀಡಲಾಗಿದೆ. ಶೌಚಾಲಯ ಮತ್ತು ಅಡುಗೆ ಮನೆಗಳನ್ನು ಹಂಚಿಕೊಂಡು ಬಳಸಬೇಕಾಗಿದೆ. ಮಹಾಯ್ನಿಯ ಹಾಗೆಯೇ ಇತರರೂ ಜರ್ಮನಿ ಕಲಿಯಬೇಕಾದ ಅಗತ್ಯಕ್ಕೆ ಒತ್ತು ನೀಡುತ್ತಾರೆ.

ಬಾಣಸಿಗನಾಗಿರುವ ೨೩ ವರ್ಷದ ಮೊಹಮ್ಮದ್ ಸಲಾಹೊ ತಾಯ್ನಾಡು ಸಿರಿಯಾದ ಜೈಲಿನಲ್ಲಿ ಅನುಭವಿಸಿದ ಚಿತ್ರಹಿಂಸೆ ಮತ್ತು ಅದರಿಂದಾದ ಗಾಯದ ಕಲೆಗಳನ್ನು ತೋರಿಸುತ್ತಾರೆ. ಇಷ್ಟೆಲ್ಲ ಆದರೂ ಬದುಕಿ ಬಂದಿದ್ದೇನೆ ಎಂಬುದನ್ನು ಇಲ್ಲಿನ ಜನರಿಗೆ ಹೇಳಲು ಅವರು ಬಯಸುತ್ತಾರೆ. ಸಿರಿಯಾದಲ್ಲಿ ಎಂಜಿನಿಯರಿಂಗ್ ಕಲಿತಿರುವ ಸಿಯಾಮೆಂದ್ ಹಸನ್ ಹೊಸ ಬದುಕು ಕಟ್ಟಿಕೊಳ್ಳಲು ಭಾಷೆ ಕಲಿಯಲು ಬಯಸಿದ್ದಾರೆ.

ನಿರಾಶ್ರಿತರಿಗೆ ನೆಲೆ ಒದಗಿಸುವ ಪ್ರಯತ್ನದಲ್ಲಿ ಕೆಲವು ಜರ್ಮನರು ತಮ್ಮ ಅನುಭವಗಳನ್ನೇ ನೆನಪಿಸಿಕೊಳ್ಳುತ್ತಾರೆ. ಇತ್ತೀಚಿನ ಒಂದು ದಿನ ಬರ್ಲಿನ್ ಸಮೀಪ ಬಸ್ ನಿಲ್ದಾಣದತ್ತ ಮಹಾಯ್ನಿ ನಡೆದು ಹೋಗುತ್ತಿದ್ದಾಗ, ನಿರಾಶ್ರಿತರ ಬಗ್ಗೆ ಏನನಿಸುತ್ತಿದೆ ಎಂದು ಜರ್ಮನ್ ವ್ಯಕ್ತಿಯೊಬ್ಬರನ್ನು ಪತ್ರಕರ್ತರು ಕೇಳಿದ್ದು ಆತನ ಕಿವಿಗೆ ಬಿದ್ದಿದೆ. ಯುದ್ಧದಿಂದ ತಪ್ಪಿಸಿಕೊಂಡು ಬರುವ ಜನರಿಗೆ ನಾವು ಶೇಕಡ ನೂರರಷ್ಟು ನೆರವು ನೀಡಬೇಕು ಎಂದು ೫೩ರ ಸ್ಟೆಪ್ಪನ್ ಹೇಳಿದ್ದಾರೆ.

ಪೂರ್ವ ಜರ್ಮನಿಯ ಜನರು ಅಭಿವೃದ್ಧಿಯ ಪ್ರಯೋಜನಗಳನ್ನು ಲಪಟಾಯಿಸುವುದು ಬೇರೆ ವಿಷಯ. ಆದರೆ ತಾನು ಹಿಂದಿನ ಪೂರ್ವ ಜರ್ಮನಿಯವನು ಎಂದು ಅವರು ಹೆಮ್ಮೆಯಿಂದ ಹೇಳುತ್ತಾರೆ. ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಸಿಕ್ಕಿಬಿದ್ದು ಮೂರೂವರೆ ವರ್ಷ ಸೆರೆವಾಸ ಅನುಭವಿಸಿದ ನೆನಪು ಅವರಲ್ಲಿ ಇನ್ನೂ ಮಾಸಿಲ್ಲ. ನಿರಂಕುಶಾಧಿಪತ್ಯ ಹೇಗೆ ಕೆಲಸ ಮಾಡುತ್ತಿದೆ ಎಂಬುದು ನಮಗೆ ಗೊತ್ತಿದೆ ಎಂದು ಹೇಳುವ ಸ್ಟೆಪ್ಪನ್, ಸಿರಿಯಾದಿಂದ ತಪ್ಪಿಸಿಕೊಂಡು ಬರುವವರಿಗೆ ನೆರವು ನೀಡಲು ಸಿದ್ಧ ಎನ್ನುತ್ತಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT