ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪೊಂದೇ ಸಾಕು

Last Updated 9 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಅದೇ ತಾನೆ ಆಕೆಯ ಪದವಿ ಮುಗಿದಿತ್ತು. ಸುಖ ಸಂಸಾರದ ಕನಸು ಹೊತ್ತು ಮದುವೆಯಾದವಳಿಗೆ, ಎಲ್ಲರಂತಿರುವ ಸುಖ ತನ್ನದಾಗಿಲ್ಲ ಎಂದು ತಿಳಿಯುವ ವೇಳೆಗೆ ನಾಲ್ಕೈದು ವರ್ಷ ಗತಿಸಿತ್ತು. ಹಾಗೂ ಹೀಗೂ ನಂತರದ ವರ್ಷಗಳಲ್ಲಿ ಸಂಸಾರ ಶುರುವಾಗಿ ಎಲ್ಲವೂ ಸರಿಯಾಗಿದೆ ಎನ್ನುವಾಗ ಗಂಡನಿಗೆ ಅಪಘಾತವಾಗಿ ಸ್ಥಳದಲ್ಲಿಯೇ ಮರಣಹೊಂದಿದ. 

ಆಗ ಮಗನಿಗೆ ಬರೀ ನಾಲ್ಕು ವರ್ಷ. ಕೊನೆಗೊಂಡ ದಾಂಪತ್ಯಕ್ಕೆ ಒಂಬತ್ತು ವರ್ಷ. ನಂತರ ತನ್ನ ತವರು ಮನೆಯ ಪಕ್ಕದಲ್ಲಿಯೇ ವಾಸಿಸುವ ಆಕೆಗೆ ಸಮೀಪದ ಬಂಧುಗಳ ಪದವಿ ಓದುತ್ತಿರುವ ಮಗನ ತಂದೆ ಎರಡನೇ ವಿವಾಹದ ಪ್ರಯತ್ನದಲ್ಲಿರುವುದನ್ನು ಕಂಡು ವಿಚಾರಿಸಿದಾಗ,  ಆಸ್ತಿ, ದುಡ್ಡು ಕೊಡಬೇಕು. ಅಲ್ಲದೆ ಆಕೆಯ ಮೊದಲಿನ ಮಗನನ್ನು ಯಾವ ಕಾರಣಕ್ಕೂ ಇಲ್ಲಿಗೆ ಕರೆತರುವಂತಿಲ್ಲ. ಎಂಬ ಕಂಡೀಷನ್‌ಗೆ  ಹೆದರಿ ಮದುವೆಯ ಯೋಚನೆಯನ್ನೇ ಮನೆಯವರು ಕೈಬಿಟ್ಟರು. ಇದು ವಿಧವೆಯೊಬ್ಬಳ ಒಂದು ಸ್ಯಾಂಪಲ್ ಮಾತ್ರ.

ಸಾಂಗತ್ಯ, ಸಾಮಿಪ್ಯ ಎನ್ನುವುದು ಕೇವಲ ಗಂಡಿಗಷ್ಟೇ ಅಲ್ಲ. ಹೆಣ್ಣಿಗೂ ಬೇಕು. ಸ್ತ್ರೀಯರಿಗೆ ಪುನರ್ವಿವಾಹ ಎಂಬ ಸಂಗತಿಯು ಇಂದಿನ ಸಮಾಜಕ್ಕೆ ಹೊಸತಾದುದೇನಲ್ಲ ಹಾಗೂ ವಿಚಿತ್ರವೆಂದೂ ಅನಿಸುವುದಿಲ್ಲ. ಆದರೆ   ಅದಕ್ಕೆ ಮೊದಲ ವಿವಾಹದಷ್ಟು ಮಾನ್ಯತೆ ಕೊಡದಿದ್ದರೂ ಮೃತನಾದ ಪತಿಯ ಸ್ಮೃತಿಯಲ್ಲಿಯೇ ಮುಂದಿನ ಪೂರ್ಣಜೀವನವನ್ನು ಸವೆಸಬೇಕು ಎಂದೇನಿಲ್ಲವಲ್ಲ ಎಂಬ ಮಾನ್ಯತೆಯಂತೂ ಸಿಕ್ಕಿದೆ. ಸ್ತ್ರೀಯ ಪುನರ್ ವಿವಾಹ ನಿಷಿದ್ಧವೆಂದು ಒಪ್ಪಿಕೊಂಡಿಲ್ಲವೆಂಬುದು ಗಮನೀಯ. ಅದು ಪುರುಷನಿಗೆ ಇರುವ ಪುನರ್ ವಿವಾಹದಂತೆಯೇ ಶಾಸ್ತ್ರಸಿದ್ಧವೂ, ನ್ಯಾಯವೂ ಮತ್ತು ಪವಿತ್ರವೂ ಆದುದಾಗಿದೆ ಎಂಬುದು ಒಪ್ಪಿತ. ವಿಧವಾ ವಿವಾಹ ತಪ್ಪಲ್ಲವಾದರೂ, ಅದು ಸರಿಯಾದ ಸಮಯದಲ್ಲಾದರೆ ಒಳ್ಳೆಯದು. ಇಲ್ಲವಾದರೆ ಅದು ತುಂಬಾ ತೊಂದರೆಗಳಿಗೆ ಎಡೆ ಮಾಡಿಕೊಡುತ್ತದೆ.

ಆದರೆ ಪುರುಷನು ವಿಧುರನಾದಾಗ ಅವನಿಗೆ ನಲ್ವತ್ತು ಅಥವಾ ಹೆಚ್ಚು ವರ್ಷಗಳಾಗಿದ್ದರೂ ಸರಿಯೇ ಪುನರ್ ವಿವಾಹದ ಬಗ್ಗೆ ವಿಚಾರ ಮಾಡುತ್ತಾನೆ. ಕಾರಣ ಸಣ್ಣ ಮಕ್ಕಳಿದ್ದರೆ ಅವುಗಳ ಪಾಲನೆ, ಪೋಷಣೆ ಅತವಾ ಮಕ್ಕಳು ದೊಡ್ಡವಾಗಿದ್ದರೆ ಅವರ ಕಾಳಜಿ, ಅವರಿಗೆ ಅಡುಗೆ ಮಾಡಿ ಬಡಿಸುವ ವ್ಯವಸ್ಥೆ, ವೃದ್ಧಾಪ್ಯದಲ್ಲಿ ಉದ್ಭವವಾಗುವ ರೋಗರುಜಿನಗಳ ಕಾರಣ ಆರೈಕೆ ಮಾಡುವುದಕ್ಕೆ ಹೀಗೆ ವಿವಿಧ ಕಾರಣ ಗಳಿಗಾಗಿ ಮನೆಯವರು, ಸಂಬಂಧಿಗಳು ಒತ್ತಡ ಹೇರುತ್ತಾರೆ. ಆದರೆ ಇದೇ ಮಾತು ಪ್ರೌಢ ವಿಧವೆಯರ ವಿಷಯದಲ್ಲಿ ಬಹು ಗಂಭೀರವಾಗುತ್ತದೆ. ಮಕ್ಕಳಿರುವ ವಿಧವೆಯನ್ನು ವಿವಾಹವಾಗುವುದಕ್ಕೆ ಪುರುಷರೇ ಉತ್ಸುಕರಾಗಿರುವುದಿಲ್ಲ.

(ಕೆಲವೊಮ್ಮೆ ಇದಕ್ಕೆ ಅಪವಾದವೆಂಬಂತೆ ಮದುವೆಯಾಗಿ ತಂದೆ ಸ್ಥಾನ ನೀಡಿದ ಒಂದೆರಡು ಉದಾಹರಣೆ ಸಿಗಬಹುದು. ಆದರೆ ಬಹಳಷ್ಟು ಪ್ರಕರಣಗಳಲ್ಲಿ ಹೀಗಾಗುವುದಿಲ್ಲ. ಅದು ಅವರ ಅದೃಷ್ಟ) ಸವತಿಯ ಮಕ್ಕಳು ಎಂದು ಹೇಳಿಕೊಳ್ಳುವಲ್ಲಿ ಸ್ತ್ರೀಗೆ ನೈತಿಕ ದೃಷ್ಟಿ ಮತ್ತು ತ್ಯಾಗ ಇದ್ದರೆ, ಪುರುಷನಿಗೆ ಅದು ಸಾಧ್ಯವಾಗುವುದು ತುಂಬ ಕಡಿಮೆ. ನಮ್ಮ ಸಮಾಜದಲ್ಲಿ ಮಾತೃತ್ವಕ್ಕೆ ಬಹಳ ಮಹತ್ವವಿದೆ. ಮಕ್ಕಳ ಮುಂದೆ ಇತರ ಸುಖಗಳಿಗೆಲ್ಲಾ ಗೌಣ  ಎಂಬುದು ಸಮಾಜದ ಮನೋಭೂಮಿಕೆ ಯಾಗಿದೆ. ಇಂದು ಪುನರ್ ವಿವಾಹ ಮಾಡಿಕೊಳ್ಳುವ ಪುರುಷನ ಸಾಮಾಜಿಕ ಪ್ರತಿಷ್ಠೆಯನ್ನು ಕಡಿಮೆಯೆಂದು ಭಾವಿಸುತ್ತಿಲ್ಲ.

ಆದರೆ ಅದೇ ರೀತಿಯಲ್ಲಿ ಪುನರ್ ವಿವಾಹಿತ ಸ್ತ್ರೀಯನ್ನೂ ಪರಿಭಾವಿಸುವುದು ಅಗತ್ಯ. ವ್ಯಕ್ತಿ, ಮಕ್ಕಳು ಮತ್ತು ಸಮಾಜ ಈ ಎಲ್ಲಾ ದೃಷ್ಟಿಕೋನಗಳಿಂದ ಪುನರ್ ವಿವಾಹದ ವಿಚಾರವು ನಿರ್ಧರಿತವಾಗಬೇಕು.  ಹಾಗಾದಾಗ ಮಾತ್ರ ಬದಲಾವಣೆ ಸಾಧ್ಯವಾದೀತು. ಇದಕ್ಕಿಂತಲೂ ತುಂಬ ಸೂಕ್ಷ್ಮವಾದದ್ದೇನೆಂದರೆ ಪ್ರೌಢ ಹೆಣ್ಣುಮಗಳು ತನ್ನ ಗಂಡನ ಸ್ಥಾನದಲ್ಲಿ ಮತ್ತೊಬ್ಬನನ್ನು ಕಲ್ಪಿಸಿಕೊಳ್ಳುವುದು ಕಷ್ಟ. ಇನ್ನು ಸೆಕೆಂಡ್ ಇನ್ನಿಂಗ್ಸ್‌ ಪ್ರಾರಂಭಿಸುವದಂತೂ ದೂರದ ಮಾತು. ಆಕೆ ತನ್ನ ಭಾವನೆಗಳನ್ನು ಹತ್ತಿಕ್ಕಿಕೊಳ್ಳತ್ತಲೇ ಅವನ ನೆನಪಿನ ಅಪ್ಯಾಯತೆಯಿಂದಲೇ ತನ್ನ ಬದುಕಿನ ಸಿಕ್ಕುಗಳನ್ನು ಬಿಡಿಸಿಕೊಳ್ಳುತ್ತಾ  ನೆನಪೊಂದೇ ಸಾಕು ಎಂದು ಜೀವಿಸುತ್ತಿದ್ದಾಳೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT