ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈತಿಕ ದಿವಾಳಿತನ

Last Updated 9 ನವೆಂಬರ್ 2014, 19:30 IST
ಅಕ್ಷರ ಗಾತ್ರ

ತೀರ್ಥಹಳ್ಳಿಯ ನಂದಿತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ  ರಾಜ­ಕೀಯ ಪಕ್ಷಗಳು ಪರಸ್ಪರ ದೂಷಣೆಗೆ ಬಳಸುತ್ತಿರುವ ಭಾಷೆ ಸಭ್ಯ­ತೆಯ ಎಲ್ಲೆ ಮೀರಿದೆ. ದೌರ್ಜನ್ಯಕ್ಕೊಳಗಾದ ಹೆಣ್ಣುಮಕ್ಕಳ ಪರ ಇದ್ದೇ­ವೆಂದು ಬಿಂಬಿಸಿಕೊಳ್ಳುತ್ತಾ ಈ ರಾಜಕೀಯ ಪಕ್ಷಗಳ ಮುಖಂಡರು ಬಳ­ಸುತ್ತಿ­ರುವ ಭಾಷೆ ನಿಜಕ್ಕೂ ಹೆಣ್ಣುಮಕ್ಕಳ ವಿರೋಧಿಯಾಗಿದೆ ಎಂಬುದು ವಿಪ­ರ್ಯಾಸ. ಈ ರಾಜಕೀಯ ನೇತಾ­­ರರು ಸುರಿಸುತ್ತಿರುವುದು ಮೊಸಳೆ ಕಣ್ಣೀರು ಎಂಬುದು ಅವರ ಹೇಳಿಕೆ­ಗಳಿಂ­ದಲೇ ಸುವ್ಯಕ್ತ. ಬಿಜೆಪಿಯ ಈಶ್ವರಪ್ಪ, ಕಾಂಗ್ರೆಸ್‌ನ ವಿ. ಎಸ್. ಉಗ್ರಪ್ಪ ಹಾಗೂ ಐವನ್ ಡಿಸೋಜಾ ಅವರ ಅಭಿರುಚಿಹೀನ ಮಾತುಗಳು ಅವರು ಪ್ರತಿ­­ನಿಧಿಸುವ ಸ್ಥಾನಗಳಿಗೆ ತಕ್ಕದ್ದಲ್ಲ.

ಅವರ ಮಾತುಗಳಲ್ಲಿ ವ್ಯಕ್ತವಾಗಿರು­ವುದು ಕೀಳು ಅಭಿರುಚಿ. ರಾಜಕೀಯ ಪಕ್ಷಗಳ ಬೌದ್ಧಿಕ ಹಾಗೂ ನೈತಿಕ ದಿವಾ­ಳಿ­ತನಕ್ಕೆ ಈ ಮಾತುಗಳು ಸಾಕ್ಷಿಯಾಗಿದ್ದು ತೀವ್ರವಾಗಿ ಖಂಡ­ನಾರ್ಹ­. ಪತ್ನಿ ಹಾಗೂ ಮಗಳ ಮೇಲೆ ಅತ್ಯಾಚಾರ ಮಾಡಿದರೆ ಹೇಗಿರುತ್ತದೆ ಎಂಬಂಥ ಸವಾಲುಗಳನ್ನು ಹಾಕುತ್ತಾ ಅಥವಾ ಮಹಿಳೆಯ ವೈವಾಹಿಕ ಸ್ಥಾನ­ಮಾನ ಕುರಿತು ಸಾರ್ವಜನಿಕವಾಗಿ ಪ್ರಶ್ನಿಸುತ್ತಾ ಈ ನೇತಾರರು ಆಡಿರುವ ನುಡಿ­ಗಳು ಅವರ ಅಂತರಂಗದ ಕೊಳಕುತನಗಳನ್ನು ಬಹಿರಂಗವಾಗಿ ಪ್ರದರ್ಶಿ­ಸಿವೆ. ಇಂತಹ ಮನದಾಳದ ಕೊಳಕುತನಗಳು ಹಾಗೂ ಧೋರಣೆಗಳೇ ಹೆಣ್ಣು­­ಮಕ್ಕಳ ಮೇಲೆ ಹಿಂಸಾಚಾರ ಹೆಚ್ಚಳಕ್ಕೆ ಮೂಲ ಕಾರಣ­­ವಾಗಿವೆ ಎಂಬುದನ್ನು ಈ ನೇತಾರರಿಗೆ ತಿಳಿ­ಹೇಳುವವರು ಯಾರು?

ಹೆಣ್ಣಿನ ಮೇಲೆ ಒಡೆತನ ಸಾಧಿಸುವ ಅಥವಾ ಹೆಣ್ಣನ್ನು ಭೋಗವಸ್ತುವಾಗಿ ಕಾಣು­ವಂತಹ ದೃಷ್ಟಿಯ ಮಾತು ಗಳಿವು. ಪಿತೃ­ಪ್ರಧಾನ ಸಂಸ್ಕೃತಿಯಲ್ಲಿ ಬೇರೂ­ರಿರುವ ಈ ಬಗೆಯ ಮೌಲ್ಯಗಳು ಹೆಣ್ಣಿಗೆ ನಿರ್ಬಂಧ­ಗಳನ್ನು ಹೇರು­ವಂತಹವಾಗಿವೆ. ಗಂಡು, ಹೆಣ್ಣಿಗೆ ಸಮಾನತೆಯ ಹಕ್ಕು ಹಾಗೂ ಅವಕಾಶ­ಗಳನ್ನು ನೀಡಿರುವ ಸಂವಿಧಾನದ ಆಶಯಗಳಿಗೆ ವಿರುದ್ಧ­­ವಾಗಿರುವ ಇಂತಹ ಸಂಸ್ಕೃತಿ, ಮೌಲ್ಯಗಳ ವಿರುದ್ಧ ಸೆಣಸ­ಬೇಕಾ­ದುದು ಜನಪ್ರತಿನಿಧಿಗಳ ಆದ್ಯ ಕರ್ತವ್ಯ. ಆದರೆ ಇಂತಹ ದೊಂದು ಸೂಕ್ಷ್ಮತೆ ಪ್ರದ­ರ್ಶಿಸದ ನೇತಾರರು ಜನ­ಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಹಿತ­ವನ್ನು ಹೇಗೆ ತಾನೆ ಕಾಯ­ಬಲ್ಲರು? ಮೊದಲು ಈ ಸಂಕುಚಿತ ಮನಸ್ಸು ಹಾಗೂ ಕೀಳು ಅಭಿರುಚಿಯ ನಾಲಿ­ಗೆ­ಗಳನ್ನು ಹೊಂದಿದ ರಾಜಕಾರಣಿಗಳಿಗೆ ಲಿಂಗ ಸಂವೇದನಾಶೀಲತೆಯ ತರಬೇತಿ ಅತ್ಯಗತ್ಯ.

ಪ್ರಚಾರ ಗಿಟ್ಟಿಸಲು ಅಥವಾ ರಾಜಕೀಯ ಲಾಭ ಪಡೆಯಲು ಕೀಳು ಮಟ್ಟದ ಮಾತುಗಳು ನೆರವಾಗುವುದಿಲ್ಲ ಎಂಬುದನ್ನು ಈ ರಾಜಕಾರಣಿ­ಗಳಿಗೆ ಮನದಟ್ಟು ಮಾಡಿಸುವುದು ಜನರ ಕರ್ತವ್ಯ. ಜನಪರವಾದ ಆಡಳಿತ­ವನ್ನು ಸಾಧ್ಯವಾಗಿಸಲು ರಚನಾತ್ಮಕವಾದ ಟೀಕೆ, ವಿಮರ್ಶೆಗಳು ಬೇಕು. ಟೀಕೆ­ಗಳಿಗೆ ಪ್ರತಿ ಟೀಕೆಗಳನ್ನು ಮಾಡುವ ಭರದಲ್ಲಿ ನಿಯಂತ್ರಣ ಮೀರಿದ ಅಭಿ­ರುಚಿ­­ಹೀನ ಭಾಷಾ ಬಳಕೆ ಎಂದಿಗೂ ಸಲ್ಲದು. ನಂತರ ಸಮಜಾಯಿಷಿ ನೀಡುವ ಅಥವಾ ಕ್ಷಮಾಪಣೆ ಯಾಚಿಸುವ ಮೂಲಕ ಇಂತಹ ಮಾತುಗಳು ಬೀರಬ­ಹು­­ದಾದ ಸಾರ್ವಜನಿಕ ಪರಿಣಾಮವನ್ನು ಅಳಿಸಿಹಾಕಲಾಗದು.

ಇವು ಹೆಣ್ಣು ಮಕ್ಕಳ ಮೇಲಿನ ಹಿಂಸಾಚಾರಗಳ ವಿಷಯವನ್ನು ನಿರ್ವ­ಹಿಸಲು ಅಗತ್ಯವಾದ ಗಂಭೀರತೆಯನ್ನು ಕುಗ್ಗಿಸುತ್ತದೆ ಎಂಬುದನ್ನು ಈ ಜನ­ಪ್ರತಿ­ನಿಧಿಗಳು ಮೊದಲು ಅರಿತುಕೊಳ್ಳಲಿ. ಎಲುಬಿಲ್ಲದ ನಾಲಿಗೆ ಹರಿ­ಯ­ಬಿಡು­­ವವರ ವಿರುದ್ಧ ಕಾನೂನು ಕ್ರಮ ಜರುಗಿಸುವ ಬಗೆಗೂ ಪರಿಶೀಲ­ನೆ­ಯಾ­ಗಬೇಕು. ಕೆರಳಿಸುವಂತಹ ಅಥವಾ ವೈಯಕ್ತಿಕ ಅವಹೇಳನ ಮಾಡುವ ಮಾತುಗಳಿಗೆ ಅವಕಾಶ ಇರಕೂಡದು ಎಂಬಂಥ ನೀತಿಸಂಹಿತೆ ಪಾಲಿಸು­ವು­ದನ್ನು ತಮ್ಮ ಪಕ್ಷಗಳ ನೇತಾರರಿಗೆ ರಾಜಕೀಯ ಪಕ್ಷಗಳು ಕಡ್ಡಾಯ ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT