ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೊಂದವರಿಗೆ ಸಾಂತ್ವನದ ನಂತರ ಸೌಲಭ್ಯ ನೀಡಿ

‘ಕಾವಲು ಸಮಿತಿ’ ಸಭೆಯಲ್ಲಿ ಸಾಂತ್ವನ ಕೇಂದ್ರಗಳಿಗೆ ಸಿಇಒ ಸಲಹೆ
Last Updated 30 ಜನವರಿ 2015, 6:16 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಕೌಟುಂಬಿಕ ದೌರ್ಜನ್ಯಕ್ಕೆ ತುತ್ತಾದವರು, ವೇಶ್ಯಾವಾಟಿಕೆಯಿಂದ ನೊಂದವರು, ಬುದ್ದಿಮಾಂದ್ಯರು, ನಿರ್ಗತಿಕರನ್ನು ಗುರುತಿಸಿ ಪ್ರತ್ಯೇಕ ಕೌನ್ಸೆಲಿಂಗ್ ನಡೆಸಿ, ಅವರ ಮನಸ್ಥಿತಿಯನ್ನು ಅರಿತುಕೊಂಡು, ಅಗತ್ಯವಾದ ಚಿಕಿತ್ಸೆ ಕೊಡಿಸಬೇಕು’ ಎಂದು ಜಿಲ್ಲಾ ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಎನ್.ಮಂಜುಶ್ರೀ ಜಿಲ್ಲೆಯ ಎಲ್ಲ ಸಾಂತ್ವನ ಮಹಿಳಾ ಕೇಂದ್ರಗಳಿಗೆ ಸೂಚಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ವತಿಯಿಂದ ಗುರುವಾರ ಇಲ್ಲಿನ ಬಾಲಭವನದಲ್ಲಿ ಏರ್ಪಡಿ­ಸಲಾಗಿದ್ದ ‘ವರದಕ್ಷಿಣೆ ಕಾಯಿದೆ ನಿಷೇಧ ಜಾರಿ ಸಲಹಾ ಸಮಿತಿ ಹಾಗೂ ಮಹಿಳೆಯರ ಮತ್ತು ಮಕ್ಕಳ ಮಾರಾಟ ಮತ್ತು ಸಾಗಣೆ ತಡೆಗಟ್ಟುವ ಕಾವಲು ಸಮಿತಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಉತ್ತಮ ಕೌನ್ಸೆಲಿಂಗ್ ಮಾಡಿ: ‘ಮಾನಸಿಕವಾಗಿ ನೊಂದವರನ್ನು ನಾಲ್ಕು ಗೋಡೆಗಳ ನಡುವೆ ಇಟ್ಟರೆ, ಅವರ ನೋವಿಗೆ ಪರಿಹಾರ ದೊರೆಯುವುದಿಲ್ಲ. ನೊಂದ ಮಹಿಳೆಯರಿಗೆ ಕೌನ್ಸೆಲಿಂಗ್ ಮಾಡಿ ಧೈರ್ಯ ತುಂಬಿ, ಸ್ವಾವಲಂಬಿಗಳಾಗಿಸಬೇಕು. ಅವರು ಗುಣವಾದ ಕೂಡಲೇ, ಜೀವನಕ್ಕೆ ಬೇಕಾದ ಉದ್ಯೋಗ, ತರಬೇತಿ ಎಲ್ಲವನ್ನೂ ನಾವು ವ್ಯವಸ್ಥೆ ಮಾಡುತ್ತೇವೆ ಎಂದು ಮಂಜುಶ್ರೀ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಪರಮೇಶ್ವರಪ್ಪ ‘ಸಾಂತ್ವನ ಕೇಂದ್ರಕ್ಕೆ ಬರುವವರಿಗೆ ಸಮಸ್ಯೆಗಳನ್ನು ಹೇಳಿಕೊಳ್ಳುವ ವಾತಾವರಣ ಕಲ್ಪಿಸಿ. ಯಾವುದೇ ಹೊತ್ತಿನಲ್ಲಿ ಮಹಿಳೆ­ಯರು ನಿಮ್ಮಲ್ಲಿಗೆ ಬರಲಿ, ಆಗ ನಮ್ಮನ್ನು ಸಂಪರ್ಕಿಸಿ’ ಎಂದು ಸೂಚಿಸಿದರು.

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳಾ ತುರ್ತು ಚಿಕಿತ್ಸಾ ಘಟಕವಿದೆ. ಒಂದೇ ಸೂರಿನಡಿ ವೈದ್ಯರು, ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯವರು, ಕಾನೂನು ಸಲಹೆಗಾರರು, ಸಮಾಜ ಸೇವಕರು ಲಭ್ಯವಿರುತ್ತಾರೆ. ಆಶ್ರಯ ಬೇಡಿ ಬರುವವರಿಗೆ ಈ ಸೌಲಭ್ಯಗಳು ಸಿಗುವಂತೆ ಮಾಡಬೇಕು’ ಎಂದರು.

ಇದಕ್ಕೂ ಮುನ್ನ, ಹಿರಿಯೂರು ತಾಲ್ಲೂಕಿನ ಪಾಲವ್ವನಹಳ್ಳಿಯ ಹೇಮಲತಾ ಅವರ ಪತಿ ಮನೆಯವರು ನೀಡಿದ ಕಿರುಕುಳದ ಪ್ರಕರಣವನ್ನು ಸಭೆಯಲ್ಲಿ ಸಾಂತ್ವನ ಕೇಂದ್ರದವರು ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ­ಗಳು ‘ಎರಡೂ ಕುಟುಂಬದವರನ್ನು ಕರೆಸಿ ಕೌನ್ಸೆಲಿಂಗ್ ಮಾಡಿ, ಅವರಿಬ್ಬರನ್ನೂ ಒಂದಾಗಿಸಿ. ಸಾಧ್ಯವಾಗದಿದ್ದರೆ ಕಾನೂನು ಮೊರೆ ಹೋಗಿ, ಆ ಮಹಿಳೆಗೆ ರಕ್ಷಣೆ ಕೊಡಿಸಿ’ ಎಂದು ಸೂಚಿಸಿದರು.

ಎಸ್‌ಎಚ್‌ಜಿ ಪ್ರಗತಿ ಪರಿಶೀಲನೆ: ಜಿಲ್ಲಾ ಸ್ತ್ರೀಶಕ್ತಿ ಸಮನ್ವಯ ಸಮಿತಿ ಪ್ರಗತಿ ಪರಿಶೀಲಿಸಿದ ಜಿಲ್ಲಾ ಪಂಚಾಯ್ತಿ ಸಿಇಒ ಮಂಜುಶ್ರಿ ಅವರು ‘ ನಾಮಕಾವಾಸ್ಥೆ ಸ್ತ್ರೀಶಕ್ತಿ ಸಂಘದ ಮಳಿಗೆಗಳಿವೆ. ಒಬ್ಬರ ಹೆಸರಿನಲ್ಲಿ ಮಳಿಗೆಯಿದ್ದರೆ, ಮತ್ತೊಬ್ಬರು ವ್ಯಾಪಾರ ಮಾಡುತ್ತಾರೆ ಎಂದು ಸಾಕಷ್ಟು ದೂರುಗಳಿವೆ. ಉದ್ಯೋಗ ಮಾಡುವ ಮಹಿಳೆಯರ ಹೆಸರಿನಲ್ಲೇಕೆ ಮಳಿಗೆ ಇರಬಾರದು? ಎಂದು ಪ್ರಶ್ನಿಸಿದರು.

‘ವರ್ಷಾನುಗಟ್ಟಲೆ ಮಳಿಗೆ ಬಾಡಿಗೆ ಕೊಡದವರನ್ನು ಖಾಲಿ ಮಾಡಿಸಿ ಮರು ಹರಾಜು ಹಾಕುವುದು ಸರಿಯಾದ ಕ್ರಮ. ಇದನ್ನು ಎಲ್ಲರೂ ಅನುಸರಿಸಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರಿಗೆ ಸಿಇಒ ಸೂಚಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಾಂತರಾಜ್, ಜಿಲ್ಲಾ ಪಂಚಾಯ್ತಿ ಸದಸ್ಯೆ ಕೊಲ್ಲಿಲಕ್ಷ್ಮಿ, ನಬಾರ್ಡ್ ಎಜಿಎಂ ಮಾಲಿನಿ ಎಸ್.ಸುವರ್ಣ, ಸಮಗ್ರ ಶಿಶು ಅಭಿವೃದ್ದಿ ಯೋಜನಾಧಿಕಾರಿ ಸಿದ್ದೇಶಪ್ಪ, ಚಳ್ಳಕೆರೆ ಸಿಡಿಪಿಒ ಗಿರಿಜಮ್ಮ, ಸಮಾಜ ಕಲ್ಯಾಣಾಧಿಕಾರಿ ಮಂಜುಳಾ, ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗ ಮಹಿಳಾ ಸಾಂತ್ವನ ಕೇಂದ್ರದ ಮಂಜುಳಮ್ಮ ಇತರರು ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT