ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಮಿನಿ ‘ಪ್ರಕಾಶ’

ಸಿದ್ದೇಶ್‌ ಎಂ.ಎಸ್‌
Last Updated 27 ಮಾರ್ಚ್ 2015, 19:30 IST
ಅಕ್ಷರ ಗಾತ್ರ

‘ತೃತೀಯ ಲಿಂಗಿಯಾಗಿ ಹುಟ್ಟಬೇಕು ಎಂದು ಯಾರೂ ಕನಸು ಕಾಣುವುದಿಲ್ಲ.  ಸಮಾಜ ನಮ್ಮನ್ನು ಒಪ್ಪಿಕೊಳ್ಳಲಿ ಬಿಡಲಿ  ಮೊದಲು  ತಂದೆ–ತಾಯಿ ನಮ್ಮನ್ನು ಒಪ್ಪಿಕೊಳ್ಳಬೇಕು. ಉತ್ತಮ ಶಿಕ್ಷಣ ನೀಡಿದರೆ ಬದುಕಿನ ದಾರಿ ಕಂಡುಕೊಳ್ಳುತ್ತೇವೆ’ – ಇದು ಭಾರತದ  ಮೊದಲ ತೃತೀಯ ಲಿಂಗಿ ವಾರ್ತಾ ವಾಚಕಿಯಾದ ಪದ್ಮಿನಿ ಪ್ರಕಾಶ್‌ ಅವರ ವಿನಮ್ರ ನುಡಿ.

30 ವರ್ಷದ ಪದ್ಮಿನಿ ತಮಿಳುನಾಡಿನ ಕೊಯಮತ್ತೂರು ಮೂಲದ ‘ಲೋಟಸ್‌ ಟಿ.ವಿ.’ ಸುದ್ದಿ ವಾಹಿನಿಯಲ್ಲಿ ಆಗಸ್ಟ್ 15ರಿಂದ ವಾರ್ತಾ ವಾಚಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಒಂದು ಅಂದಾಜಿನ ಪ್ರಕಾರ ಭಾರತದಲ್ಲಿ 20 ಲಕ್ಷಕ್ಕೂ ಹೆಚ್ಚು ತೃತೀಯ ಲಿಂಗಿಗಳಿದ್ದು, ಬಹುತೇಕರು ಸಾರ್ವಜನಿಕ ಸ್ಥಳಗಳಲ್ಲಿ ಹಾಡುತ್ತ, ಭಿಕ್ಷೆ ಬೇಡುತ್ತ ಅಥವಾ ವೇಶ್ಯಾವಾಟಿಕೆಯಲ್ಲಿ ತೊಡಗಿ ಬದುಕು ನಡೆಸುತ್ತಿದ್ದಾರೆ.  ತೃತೀಯ ಲಿಂಗಿಗಳಲ್ಲೂ ಸಾಕಷ್ಟು ಮಂದಿ ಪ್ರತಿಭಾವಂತರಿದ್ದಾರೆ. ಅವರಿಗೂ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಅವಕಾಶ ಸಿಗಬೇಕು ಎಂದು ಪದ್ಮಿನಿ ಒತ್ತಾಯಿಸುತ್ತಾರೆ.

ಸುಮಾರು 13 ವರ್ಷದವರಾಗಿದ್ದಾಗ  ಪದ್ಮಿನಿಗೆ ಮನೆಯಿಂದ ಹೊರಹಾಕಲಾಯಿತು. ಪದ್ಮಿನಿ, ಆತ್ಮಹತ್ಯೆಗೆ ಪ್ರಯತ್ನಿಸಿದ್ದರಂತೆ. ಪಿಯುಸಿ ಶಿಕ್ಷಣ ಪಡೆದಿರುವ ಪದ್ಮಿನಿ, ಮನೆಯಿಂದ ಹೊರಹಾಕಿದಾಗ ದೂರ ಶಿಕ್ಷಣದ ಮೂಲಕ ವಾಣಿಜ್ಯ ಪದವಿ ಪಡೆಯಲು ಯತ್ನಿಸಿ, ಆರ್ಥಿಕ ತೊಂದರೆಯಿಂದ ಶಿಕ್ಷಣ ಮೊಟಕುಗೊಳಿಸಿದರು. ‘ಸದ್ಯ ನನ್ನ ತಂದೆ–ತಾಯಿಯ ಬಗ್ಗೆ ಹೆಚ್ಚಿಗೆ ಮಾತನಾಡಲು ಬಯಸುವುದಿಲ್ಲ’ ಎನ್ನುವ ಅವರು ಕೆಲಸ ಮತ್ತು ನೃತ್ಯದ ಬಗ್ಗೆ ಮಾತ್ರ ಸಾಕಷ್ಟು ಅನುಭವ ಹಂಚಿಕೊಳ್ಳುತ್ತಾರೆ. ಹಲವು ಸೌಂದರ್ಯ ಸ್ಪರ್ಧೆಗಳಲ್ಲಿ ಪ್ರಶಸ್ತಿಗಳೂ ಲಭಿಸಿವೆ. ಅಲ್ಲದೇ ಕೆಲವು ತಮಿಳು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಭರತನಾಟ್ಯ ಶಿಕ್ಷಕಿಯಾಗಿ 5 ಶಾಲೆಗಳಲ್ಲಿ ಮಕ್ಕಳಿಗೆ ತರಬೇತಿ ನೀಡುತ್ತಿದ್ದಾರೆ. ಬದುಕನ್ನು ಅರಸಿ ತೃತೀಯ ಲಿಂಗಿಗಳು ಮುಂಬೈಗೆ ಹೋಗುತ್ತಿದ್ದರು. ಈಗ ಬೆಂಗಳೂರಿಗೆ ಹೋಗುತ್ತಿದ್ದಾರೆ.

ಇದು ತೃತೀಯ ಲಿಂಗಿಗಳನ್ನು ಸಮಾಜ ನೋಡುವ ರೀತಿ ಬದಲಾಗುತ್ತಿರುವುದಕ್ಕೆ ಸಾಕ್ಷಿ ಒದಗಿಸುತ್ತದೆ ಎನ್ನುತ್ತಾರೆ ಪದ್ಮಿನಿ.
ದೂರದರ್ಶನದ ವಾರ್ತಾ ವಾಚಕಿಯಾದ ಶೋಭನಾ ರವಿ ಮತ್ತು ಆಕಾಶವಾಣಿಯ ಸರೋಜ್‌ ನಾರಾಯಣಸ್ವಾಮಿ ತಾನು ವಾರ್ತಾ ವಾಚಕಿಯಾಗಲು ಪ್ರೇರಣೆ ಎನ್ನುವ ಪದ್ಮಿನಿ ‘ವಾರ್ತಾ ವಾಚನ ಗೌರವ ಮತ್ತು ಜವಾಬ್ದಾರಿಯುತವಾದ ಕೆಲಸ. ಗಗನಯಾನಿಯಾದ ಕಲ್ಪನಾ ಚಾವ್ಲಾ ಅವರನ್ನು ಈಗಲೂ ಜನರು ನೆನಪಿಸಿಕೊಳ್ಳುತ್ತಾರೆ. 100 ವರ್ಷವಾದ ಮೇಲೂ ಜನರು ನನ್ನನ್ನು ನೆನಪಿಸಿಕೊಳ್ಳುತ್ತಾರೆ. ಭರತನಾಟ್ಯ ಕಲಾವಿದೆಯಾದರೆ ಹೆಚ್ಚು ಮಂದಿ ನನ್ನನ್ನು ನೆನಪಿಸಿಕೊಳ್ಳಲಾರರು’ ಎನ್ನುವುದು ಅಕ್ಕಸಾಲಿಗ ಕೆಲಸ ಮಾಡುವ ಪ್ರಕಾಶ್‌ ಅವರೊಂದಿಗೆ ಸಹ ಜೀವನ ನಡೆಸುತ್ತಿರುವ ಪದ್ಮಿನಿ ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT