ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದ್ಯಗಳ ರಾಗಸುಧೆ, ಉತ್ತರ ದಕ್ಷಿಣ ಸಂಗಮ!

ಪುತಿನ–ಗೋಕಾಕರ ಕವಿತೆಗಳ ಓದು
Last Updated 17 ಜನವರಿ 2015, 19:30 IST
ಅಕ್ಷರ ಗಾತ್ರ

ಧಾರವಾಡ:  ‘ಇಲ್ಲೆ ಇರು ಅಲ್ಲಿ ಹೋಗಿ
ಮಲ್ಲಿಗೆಯನು ತರುವೆನು,
ನೇಹಕೊಂದು ನಲುಮೆಗೊಂದು
ಗುರುತನಿರಿಸಿ ಬರುವೆನು...’
– ಪ್ರತಿಭಾನ್ವಿತ ಅಂಧ ಗಾಯಕಿ ಶಕ್ತಿ ಪಾಟೀಲರ ಸಿರಿಕಂಠದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ವಿ.ಕೃ. ಗೋಕಾಕರ ನೆನಪು ಅಲೆ ಅಲೆಯಾಗಿ ಹೊಮ್ಮಿತ್ತು.

ಧಾರವಾಡ ಸಾಹಿತ್ಯ ಸಂಭ್ರಮದ 2ನೇ ದಿನವಾದ ಶನಿವಾರ ‘ವಿ.ಕೃ. ಗೋಕಾಕ ಮತ್ತು ಪು.ತಿ.ನ ಕವಿತೆಗಳ ಓದು’ ಗೋಷ್ಠಿಯಲ್ಲಿ ಇಬ್ಬರು ಮಹತ್ವದ ಕವಿಗಳ ಪದ್ಯಗಳು ವಾಚನವಾಗಿ, ರಾಗವಾಗಿ, ಸುಶ್ರಾವ್ಯ ಹಾಡುಗಳಾಗಿ ಕೇಳುಗರ ಹೃದಯದಾಳಕ್ಕೆ ಇಳಿದು ಭದ್ರವಾದವು.

16 ಕವಿಗಳ ಕಂಠದಿಂದ ಭಾವವಾಗಿ, ರಾಗವಾಗಿ, ಸರಾಗವಾಗಿ, ಸುಶ್ರಾವ್ಯವಾಗಿ, ವಿಭಿನ್ನ ನಿರೂಪಣಾ ಶೈಲಿಯಾಗಿ ಹೊರಹೊಮ್ಮಿದ ಈ ಇಬ್ಬರು ಮಹನೀಯರ ಕವಿತೆಗಳು ಸಾಹಿತ್ಯಸಕ್ತರ ಮನ ತಣಿಸಿದವು. ನಾಡಿನ ಉದಯೋನ್ಮುಖ, ಅನುಭವಿ ಕವಿ, ಲೇಖಕರು ತಮ್ಮ ನೆಚ್ಚಿನ ಪುತಿನ ಮತ್ತು ವಿ.ಕೃ. ಗೋಕಾಕರ ಕವಿತೆಗಳಿಗೆ ಧ್ವನಿಯಾದರು. ಆ ಮೂಲಕ ಉತ್ತರದ ವಿ.ಕೃ, ಗೋಕಾಕರು ಮತ್ತು ದಕ್ಷಿಣದ ಪುತಿನ ಅವರ ಸಾಹಿತ್ಯ ಸಂಗಮಕ್ಕೆ ಕಾರಣರಾದರು.

ಹಾಡಿನ ಗುಂಗು ಹಚ್ಚಿದವರು
ಎಲ್ಲರೂ ಕವಿತೆಯನ್ನು ವಾಚಿಸುವ ಸಂದರ್ಭದಲ್ಲಿ ಮೊದಲು ರಾಗದ ಗುಂಗು ಹಚ್ಚಿದವರು ವೈ.ಕೆ. ಮುದ್ದುಕೃಷ್ಣ.
‘ವಿ.ಕೃ. ಗೋಕಾಕರ ಕವಿತೆಗೆ ನಾನು ಮತ್ತು ಲಕ್ಷಣರಾವ್ ಧಾಟಿ ಹಾಕಿದ್ದೇವೆ. ಅದನ್ನೇ ಕೇಳಿಸುತ್ತೇವೆ’ ಎಂದ ಅವರು, ‘ಹರಿಯ ಹೃದಯದಿ ಹರನ ಕಂಡೆನು..’ ಎಂದು ಹಾಡಿದರು. ಅವರ ಗಾಯನದ ಅಂತ್ಯಕ್ಕೆ ‘ಒನ್ಸ್‌ ಮೋರ್..’ ಕೂಗು ಕೇಳಿ ಬಂದಿತ್ತು.
ನಂತರ ಪುತಿನ ಅವರ ‘ನಿಲ್ಲಿಸದಿರು ವನಮಾಲಿ’ ಕವಿತೆಯನ್ನು ಶಿವರಂಜಿನಿ ರಾಗದಲ್ಲಿ ಹಾಡಿದ ಜ್ಯೋತಿ ಗುರುಪ್ರಸಾದ್ ಮತ್ತೊಂದು ಮುತ್ತು ಪೋಣಿಸಿದರು.  ಅವರ ನಂತರ ವಿ.ಕೃ. ಗೋಕಾಕರ ‘ಭಾವಗೀತ’ ಹಾಡಿದ ಶಕ್ತಿ ಪಾಟೀಲ ಸುಶ್ರಾವ್ಯ ಕಂಠದ ಮೂಲಕ ಮನಗೆದ್ದರು.

85ರಲ್ಲೂ ಉತ್ಸಾಹದ ಚಿಲುಮೆ
ಶುಕ್ರವಾರ ಸಾಹಿತ್ಯ ಸಂಭ್ರಮ ಆರಂಭವಾದ ಕ್ಷಣದಿಂದಲೂ ದಣಿವರಿಯದೇ ಸಾಹಿತ್ಯ ಸುಧೆಯನ್ನು ಸವಿಯುತ್ತಿರುವ 85 ವರ್ಷದ ಹಿರಿಯ, ಚೆಂಬಳಕಿನ ಕವಿ ಚೆನ್ನವೀರ ಕಣವಿಯವರು ಕವಿಗೋಷ್ಠಿಯ ಮೊದಲ ಕವನ ಓದಿದರು.
ಗೋಕಾಕರ ‘ಇಂದಿಲ್ಲ ನಾಳೆ’ ಸಂಗ್ರಹದ ‘ನಮ್ಮ ನಾಡು’ ಕವಿತೆಯನ್ನು ಭಾವಪೂರ್ಣವಾಗಿ ವಾಚಿಸುವ ಮೂಲಕ ಸಭಿಕರಿಂದ ಚಪ್ಪಾಳೆಯ ಗೌರವ ಸ್ವೀಕರಿಸಿದರು.

ಗಮನ ಸೆಳೆದ ವಿಶಿಷ್ಟ ಶೈಲಿಯ ಮೋಡಿ
‘ರಂಗವಲ್ಲಿ’ ಕವನ ವಾಚಿಸಿದ ವಿದ್ಯಾ ಶರ್ಮಾ, ಪು.ತಿ.ನ ಅವರ ಸತ್ಯ ಹರಿಶ್ಚಂದ್ರ ವಾಚಿಸಿದ ಪ್ರಜ್ಞಾ ಮತ್ತಿಹಳ್ಳಿ , ಮತ್ತು ಪುತಿನ ಅವರ ‘ಅಂತರ್ಯಾಮಿಯ  ಒಂದು ಸೋಗು’ ಕವನ ವೀಣಾ ಬನ್ನಂಜೆ ಅವರು ಕವನಗಳನ್ನು ವಿಶಿಷ್ಟ ಹಾವಭಾವ, ಧ್ವನಿಯ ಏರಿಳಿತಗಳ ಶೈಲಿಯ ಮೂಲಕ ‘ಭಾಳ ಛಲೋ ಹೇಳಿದ್ರು..’, ‘ಚಂದ್ ಓದಿದ್ರು ನೋಡ್ರಿ..’ ಎಂದು ಸಭಿಕರ ಶಹಭಾಸಗಿರಿ ಪಡೆದರು.

ಬಿ.ಟಿ. ಲಲಿತಾ ನಾಯಕ (ತ್ಯಾಗದ ಒಲುಮೆ ಹಾಗೂ ನೆರಳು–ಪು.ತಿ.ನ), ಚನ್ನಪ್ಪ ಅಂಗಡಿ (ಪ್ರತಿಜ್ಞೆ –ವಿ.ಕೃ. ಗೋಕಾಕ),  ಬಸವರಾಜ ಸಬರದ (50ರ ಅರಿವು –ವಿ.ಕೃ. ಗೋಕಾಕ), ಅರವಿಂದ ಕುಲಕರ್ಣಿ (ಪಯಣ –ವಿ.ಕೃ.ಗೋಕಾಕ), ಹರ್ಷ ಗೋಕಾಕ (ಬಾಳಿನ ಗುಟ್ಟೇನು ಬಲ್ಲೆಯ ತಂಗಿ –ವಿ.ಕೃ.ಗೋಕಾಕ), ನರಸಿಂಹ ಪರಾಂಜಪೆ (ಹಾಡು ಯಾರದು –ಪು.ತಿ.ನ), ಅನಿಲ ಗೋಕಾಕ (ಇಂದು ರಜೆ –ವಿ.ಕೃ. ಗೋಕಾಕ), ತಮಿಳ್ ಸೆಲ್ವಿ (ತೀನಂಶ್ರಿ ಅವರನ್ನು ನೆನೆದು –ಪು.ತಿ.ನ), ಕಾತ್ಯಾಯಿನಿ ಕುಂಜುಬೆಟ್ಟು (ಕಣಿವೆಯ ಮುದುಕ –ಪು.ತಿ.ನ), ಕೊನೆಯಲ್ಲಿ ಗೋಷ್ಠಿಯ ನಿರ್ದೇಶಕಿ ವಿಜಯಶ್ರೀ ಸಬರದ  ಅವರು ಪುತಿನ ಅವರ ಹೆಣ್ಣೊಬ್ಬಳ ಕನಸು ಪದ್ಯ ಓದಿ ಕಾರ್ಯಕ್ರಮ ಮುಗಿಸಿದರು.

ಮಧ್ಯಾಹ್ನ 12.40ಕ್ಕೆ ಆರಂಭವಾದ ಗೋಷ್ಠಿಯು 1.40ಕ್ಕೆ ಮುಕ್ತಾಯವಾಗಬೇಕಿತ್ತು. ಆದರೆ, ಮುಗಿದಿದ್ದು  2.15ಕ್ಕೆ. ಸುಮಾರು ಅರ್ಧ ಗಂಟೆ ತಡವಾದರೂ ಹಸಿದ ಹೊಟ್ಟೆಯಲ್ಲಿಯೇ ಎಲ್ಲ ಸಭಿಕರು ಕವನ ಆಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT