ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರದಲ್ಲಿ ಲೀನವಾದ ಪ್ರಜ್ಞೆ

Last Updated 22 ಆಗಸ್ಟ್ 2014, 19:51 IST
ಅಕ್ಷರ ಗಾತ್ರ

ಬೆಂಗಳೂರು: ಮತ್ತೆ ಮಳೆ ಹುಯ್ಯುತಿದೆ, ಎಲ್ಲ ನೆನಪಾಗುತಿದೆ. ಮಳೆಯ ತಂಪು ಮತ್ತು ಕಾವು ಎರಡನ್ನೂ ಸಹೃದಯರಿಗೆ ಕೊಟ್ಟವರು ಯು.ಆರ್‌. ಅನಂತ­ಮೂರ್ತಿ. ಅವರ ನಿಧನದ ಸಂದರ್ಭ­ದಲ್ಲೂ ಬೆಂಗಳೂರು ಮಳೆಯಲ್ಲಿ ತೋಯುತ್ತಿತ್ತು, ಸಾಂಸ್ಕೃತಿಕ ಅಧ್ಯಾಯ­ವೊಂದನ್ನು ನೆನಪಿಸುವಂತೆ.

ಮಾತಿನ ಮೂಲಕ ನೆನಪಿನಲ್ಲಿ ಉಳಿದವರಿ­ದ್ದಾರೆ. ಕೃತಿಗಳ ಮೂಲಕ ಚಿರಸ್ಥಾಯಿ ಆದ­ವರೂ ಇದ್ದಾರೆ. ಮಾತು ಮತ್ತು ಕೃತಿ ಎರಡರ ಮೂಲ­ಕವೂ ಸಹೃದಯರನ್ನು ತಲುಪಿದವರು ಅನಂತಮೂರ್ತಿ. ಯಾರ ಕೈಯ­ನ್ನಾದರೂ ಕುಲುಕಿ­ದಾಗ ಮೈಮನದಲ್ಲಿ ವಿದ್ಯುತ್‌ ಸಂಚಾರದ ಅನುಭವ ಆಗುತ್ತಿತ್ತೋ ಅವರು ಅನಂತಮೂರ್ತಿ. ಕೈಯ ಬಿಸುಪು, ಪ್ರೀತಿಯನ್ನು

ಸಾಹಿತಿ ಅನಂತಮೂರ್ತಿ ವಿಧಿವಶ

ಬೆಂಗಳೂರು: ಅನಾರೋಗ್ಯದಿಂದ ಬಳಲುತ್ತಿದ್ದ ಹಿರಿಯ ಸಾಹಿತಿ ಪ್ರೊ.ಯು.ಆರ್.­ಅನಂತ­ಮೂರ್ತಿ (81) ಅವರು ಶುಕ್ರ­ವಾರ ಸಂಜೆ 6.33 ಕ್ಕೆ  ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನ­ರಾದರು.

‘ಅನಂತಮೂರ್ತಿಯವರು ಮೂತ್ರಪಿಂಡ ಸಮಸ್ಯೆ, ಅಧಿಕ ರಕ್ತದೊತ್ತಡ, ಹೃದಯ ಸಂಬಂಧಿ ಕಾಯಿಲೆ ಹಾಗೂ ಸೋಂಕಿನಿಂದ ಬಳಲುತ್ತಿದ್ದರು’ ಎಂದು ಮಣಿಪಾಲ್‌ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಸುದರ್ಶನ್ ಬಲ್ಲಾಳ್ ಅವರು ಸುದ್ದಿಗಾರರಿಗೆ ತಿಳಿಸಿದರು.

‘ಎರಡು ದಿನಗಳಿಂದ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹೀಗಾಗಿ ತೀವ್ರ ನಿಗಾ ಘಟಕ­ದಲ್ಲಿ ಇರಿಸಿ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಗುರು­ವಾರ ರಾತ್ರಿಯಿಂದ ಅನಂತಮೂರ್ತಿ ಅವ­ರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿತ್ತು. ಮಾತನಾಡಲು ಅವರಿಗೆ ಕಷ್ಟವಾಗುತ್ತಿತ್ತು. ಆದರೆ, ಸನ್ನೆ ಮೂಲಕ ವಿವರಿಸುತ್ತಿದ್ದರು’ ಎಂದು ಹೇಳಿದರು.

ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿದ್ದ ಅನಂತಮೂರ್ತಿ ಅವರು ಪ್ರತಿದಿನ ಡಯಾಲಿ­ಸಿಸ್ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಮೂತ್ರಪಿಂಡ ಸಮಸ್ಯೆಯಿಂದಾಗಿ ಆ.12 ರಂದು ಮಣಿ­ಪಾಲ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾ­ಗಿದ್ದರು. ನಾಲ್ಕು ದಿನಗಳ ಹಿಂದೆ ಅವರ ಆರೋಗ್ಯದಲ್ಲಿ ಏರುಪೇರಾ­ಗಿದ್ದರಿಂದ, ತೀವ್ರ ನಿಗಾ ಘಟಕಕ್ಕೆ ವರ್ಗಾವಣೆ ಮಾಡಲಾಗಿತ್ತು. ‘ಎಂಟು ವೈದ್ಯರು, 10 ಪ್ಯಾರಾಮೆಡಿಕಲ್ ಸಿಬ್ಬಂದಿ, ಐಸಿಯು ಸಿಬ್ಬಂದಿ, ಡಯಾಲಿಸಿಸ್ ತಜ್ಞರು ಮತ್ತು ನೆಫ್ರೋಲಾಜಿ ತಜ್ಞರ ತಂಡ ಚಿಕಿತ್ಸೆಯ ಉಸ್ತುವಾರಿ ನೋಡಿಕೊಳ್ಳುತ್ತಿತ್ತು.

ಇಂದು ಸರ್ಕಾರಿ ರಜೆ

ಬೆಂಗಳೂರು: ಹಿರಿಯ ಸಾಹಿತಿ ಡಾ.ಯು.ಆರ್‌. ಅನಂತಮೂರ್ತಿ ಅವರ ನಿಧ­ನದ  ಕಾರಣ ನೆಗೋಷಿಯೇಬಲ್‌ ಇನ್‌ಸ್ಟ್ರುಮೆಂಟ್‌ ಕಾಯ್ದೆ ಅಡಿ  ಶನಿವಾರ (ಅ.23) ಸರ್ಕಾರಿ ರಜೆ ಘೋಷಿಸಲಾಗಿದೆ. ಇದು ಎಲ್ಲ ಸರ್ಕಾರಿ ಕಚೇರಿಗಳು, ಬ್ಯಾಂಕ್‌­ಗಳು, ಶಿಕ್ಷಣ ಸಂಸ್ಥೆಗಳಿಗೆ ಅನ್ವಯಿಸುತ್ತದೆ.

ಶೋಕಾಚರಣೆ: ರಾಜ್ಯದಲ್ಲಿ ಮೂರು ದಿನ (ಆ. 25ರ ವರೆಗೆ) ಶೋಕಾಚರಣೆಗೆ ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ  ಮೈಸೂರಿನಲ್ಲಿ  ಶುಕ್ರವಾರ ತಿಳಿಸಿದರು.

ಮುಂದೂಡಿಕೆ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಶನಿವಾರ ವಿಧಾನಸೌಧದಲ್ಲಿ ಹಮ್ಮಿಕೊಂಡಿದ್ದ  ಶ್ರೀಕೃಷ್ಣ ಜಯಂತಿ ಕಾರ್ಯಕ್ರಮವನ್ನು ಶೋಕಾಚರಣೆ ನಿಮಿತ್ತ ಮುಂದೂಡಲಾಗಿದೆ ಎಂದು ಸರ್ಕಾರಿ ಪ್ರಕಟಣೆ ತಿಳಿಸಿದೆ.

ಸೂಸು­ವುದರ ಜೊತೆಗೆ ಪಾತಾಳಗರಡಿಯಂತೆ ಮನಸ್ಸಿನ ಆಳವನ್ನು ಕಲಕುವಂತಹ ಕಣ್ಣುಗಳು, ಎದೆಯ ಪ್ರೀತಿಯನ್ನು ಹಂಚಿಕೊಳ್ಳುವಂತೆ ಬೆನ್ನಮೇಲೆ ಕೈಯಾ­ಡಿಸುವ ರಸಿಕ ಬೆರಳುಗಳ ಅನಂತ­ಮೂರ್ತಿ ಅವರನ್ನು ಒಮ್ಮೆಯಾದರೂ ಭೇಟಿ ಮಾಡಿ­ದ­­ವರು ಈ ಬಿಸುಪಿನ ಸೆಳೆತಕ್ಕೆ ಒಳಗಾಗದೇ ಇರಲಾರರು. ಅವರನ್ನು ನೆನಪಿಸಿಕೊಳ್ಳುವ ಈ ಹೊತ್ತು ಕಣ್ಣೀರಿನ ಬಿಸುಪಿನ ಜೊತೆಗೆ ಅವರ ಕೈ ಕುಲುಕುಗಳ ಆರ್ದ್ರತೆಯೂ ಜೊತೆ­ಯಾಗುತ್ತದೆ.

ಕನ್ನಡದ ಜನ ಅತ್ಯಂತ ಹೆಚ್ಚು ಪ್ರೀತಿಸಿದ ವ್ಯಕ್ತಿ ಅಥವಾ ಹೆಚ್ಚು ಅಸಹನೆಯಿಂದ ಕಂಡ ವ್ಯಕ್ತಿ ಯಾರು ಎಂದರೆ ಉತ್ತರಗಳು ಬೇರೆ ಬೇರೆ ಇರಬಹುದು. ಆದರೆ, ಕನ್ನಡ ಜನರ ಪ್ರೀತಿ ಮತ್ತು ಅಸಹನೆ– ಎರಡನ್ನೂ ಏಕಪ್ರಕಾರವಾಗಿ ಅನುಭವಿಸಿದ ಏಕೈಕ ಕನ್ನಡ ಲೇಖಕ ಯು.ಆರ್‌. ಅನಂತಮೂರ್ತಿ.

ಉಡುಪಿ ರಾಜಗೋಪಾಲಾಚಾರ್ಯ ಅನಂತ­­ಮೂರ್ತಿ ಅವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಮೇಳಿಗೆ ಗ್ರಾಮ­ದವರು. ರಾಜಗೋಪಾಲಾಚಾರ್ಯ ಮತ್ತು ಸತ್ಯಭಾಮ ಅವರ ತಂದೆ–ತಾಯಿ. ದೂರ್ವಾಸ­ಪುರದ ಸಂಸ್ಕೃತ ಪಾಠಶಾಲೆ­ಯಲ್ಲಿ ಪ್ರಾಥಮಿಕ ವಿದ್ಯಾಭಾಸ ಪೂರೈಸಿದ ಅನಂತಮೂರ್ತಿ ಅವರ ನಂತರದ ಶಿಕ್ಷಣ ತೀರ್ಥಹಳ್ಳಿ, ಮೈಸೂರಿನಲ್ಲಿ ಮುಂದುವರೆ­ಯಿತು. ಮೈಸೂರು ವಿಶ್ವವಿದ್ಯಾಲ­ಯದಲ್ಲಿ ಇಂಗ್ಲಿಷ್ ಸಾಹಿತ್ಯದಲ್ಲಿ ಎಂ.ಎ ಪದವಿ ಪಡೆದ ಅವರು, ಬರ್ಮಿಂಗ್‌ಹ್ಯಾಮ್‌ ವಿಶ್ವ­ವಿದ್ಯಾಲಯ­ದಿಂದ ಪಿಎಚ್‌.ಡಿ ಪದವಿ ಪಡೆದರು.

ಅನಂತಮೂರ್ತಿ ಅವರು ಕಾರ್ಯ­ನಿರ್ವಹಿಸಿದ ಕ್ಷೇತ್ರಗಳು ಒಂದೆರಡಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ  ಉಪನ್ಯಾಸಕರಾಗಿ – ಪ್ರಾಧ್ಯಾಪಕರಾಗಿ ‘ಕರ್ನಾಟಕದ ಮೇಷ್ಟ್ರು ಪರಂಪರೆ’­ಯನ್ನು ಶ್ರೀಮಂತಗೊ­ಳಿಸಿದರು.ದೇಶ­ವಿದೇಶ­ಗಳ ಹಲವು ವಿಶ್ವವಿದ್ಯಾಲ­ಯ­ಗಳಲ್ಲಿ ಸಂದರ್ಶಕ ಪ್ರಾಧ್ಯಾಪಕ­ರಾಗಿ­ದ್ದರು. ನ್ಯಾಷನಲ್ ಬುಕ್ ಟ್ರಸ್ಟ್ ಆಫ್ ಇಂಡಿಯಾ ಹಾಗೂ ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದರು. ಕೇರಳದ ಮಹಾತ್ಮಾ­ಗಾಂಧಿ ವಿಶ್ವವಿದ್ಯಾಲಯದ ಕುಲಪತಿ­ಗಳಾಗಿದ್ದರು.


1955ರಲ್ಲಿ ‘ಎಂದೆಂದೂ ಮುಗಿ­ಯದ ಕತೆ’ ಕಥಾಸಂಕಲನದ ಮೂಲಕ ಸಾಹಿತ್ಯಲೋಕದ ಗಮನಸೆಳೆದ ಅವರು ಕನ್ನಡ ಕಥಾಲೋಕಕ್ಕೆ ‘ಸೂರ್ಯನ ಕುದುರೆ’, ‘ಘಟಶ್ರಾದ್ಧ’, ‘ಮೌನಿ’, ‘ಪ್ರಕೃತಿ’, ‘ನವಿಲುಗಳು’, ‘ಜರತ್ಕಾರು’­ವಿನಂತಹ ಅತ್ಯುತ್ತಮ ಕಥನಗಳನ್ನು ಕೊಟ್ಟವರು. ವೈಚಾರಿಕವಾಗಿ ಶಾಂತ­ವೇರಿ ಗೋಪಾಲ ಗೌಡ ಮತ್ತು ಲೋಹಿಯಾ ಅವರಿಂದ ಅನಂತ­ಮೂರ್ತಿ ಪ್ರಭಾವಿತರಾಗಿದ್ದರು. ಈ ಪ್ರಭಾವವನ್ನು ಅವರ ಬರಹಗಳಲ್ಲೂ ಕಾಣಬಹುದು. ‘ಅವಸ್ಥೆ’ ಕಾದಂಬರಿ­ಯಂತೂ ಗೋಪಾಲಗೌಡರ ಬದುಕಿಗೆ ಋಣಿಯಾದುದು.

‘ಸಂಸ್ಕಾರ’ ಖ್ಯಾತಿ: ಅತ್ಯುತ್ತಮ ಕಥೆಗಳನ್ನು ಬರೆದ ಅನಂತಮೂರ್ತಿ ಅವರಿಗೆ ಅಪಾರ ಖ್ಯಾತಿ ತಂದು­ಕೊಟ್ಟಿದ್ದು ‘ಸಂಸ್ಕಾರ’ ಕಾದಂಬರಿ. ಪಟ್ಟಾಭಿರಾಮ ರೆಡ್ಡಿ ಅವರ ನಿರ್ದೇಶನ­ದಲ್ಲಿ ಚಲನಚಿತ್ರವಾಗಿ ರೂಪು ತಳೆದ ಈ ಕೃತಿ ಹಲವು ಸಾಂಸ್ಕೃತಿಕ ವಾಗ್ವಾದಕ್ಕೂ ಕಾರಣವಾಯಿತು. ಕನ್ನಡ ಚಲನಚಿತ್ರರಂಗಕ್ಕೆ ಮೊಟ್ಟ­ಮೊದಲ ಸ್ವರ್ಣಕಮಲ ಪುರಸ್ಕಾರ ತಂದು­ಕೊಟ್ಟ ಅಗ್ಗಳಿಕೆ ‘ಸಂಸ್ಕಾರ’ ಚಿತ್ರದ್ದು. ಅನಂತಮೂರ್ತಿ ಅವರ ‘ಘಟಶ್ರಾದ್ಧ’ ಕಥೆ, ಗಿರೀಶ ಕಾಸರವಳ್ಳಿ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ಸ್ವರ್ಣಕಮಲ ಪುರಸ್ಕಾರ ಪಡೆಯಿತು. ಒಬ್ಬನೇ ಲೇಖಕನ ಕಥನಗಳನ್ನಾಧರಿಸಿದ ಎರಡು ಸಿನಿಮಾಗಳು ಸ್ವರ್ಣಕಮಲ ರಾಷ್ಟ್ರೀಯ ಪಡೆದ ದಾಖಲೆ ಅನಂತ­ಮೂರ್ತಿ ಅವರ ಮೂಲಕ ಕನ್ನಡ ಸಿನಿಮಾದ್ದಾಯಿತು.

ಉಲ್ಲಂಘನೆಯ ಮಾರ್ಗ: ಕೃತಿಗಳ ಮೂಲಕ ತಾನು ಬೆಳೆದುಬಂದ ಪರಿಸರ­ವನ್ನು ಒರೆಗೆ ಹಚ್ಚಿದ ಅನಂತಮೂರ್ತಿ ಅವರು, ತಮ್ಮ ಬದುಕಿನುದ್ದಕ್ಕೂ ಅನುಸರಿಸಿದ್ದು ಉಲ್ಲಂಘನೆಯ ಮಾರ್ಗ­ವನ್ನು. ತನ್ನ ವಿದ್ಯಾರ್ಥಿನಿ ಎಸ್ತರ್‌ ಅವರನ್ನು ಅವರು ಮದುವೆಯಾದುದು ಆ ಕಾಲಕ್ಕೆ ಕ್ರಾಂತಿಕಾರಕ ನಡೆಯಾಗಿತ್ತು. ಆದರೆ, ಅನಂತಮೂರ್ತಿ ಅವರ ಪಾಲಿಗೆ ಇದು ತಾವು ನಂಬಿದ ಸಹಜ ಬದುಕಿನ ಮಾರ್ಗವಷ್ಟೇ ಆಗಿತ್ತು.

ಸಾಹಿತ್ಯ ಕೃತಿಗಳ ಮೂಲಕ, ಸಿನಿಮಾ­ಗಳ ಮೂಲಕ ಅಂತರ­ರಾಷ್ಟ್ರೀಯ ಖ್ಯಾತಿ ಪಡೆದ ಅನಂತ­ಮೂರ್ತಿ ಅವರು ತಮ್ಮದೇ ನೆಲದಲ್ಲಿ ‘ಯು.ಆರ್‌. ಅನಂತ­ಮೂರ್ತಿ ಎಂದರೆ ಯಾರು?’ ಎನ್ನುವ ಪ್ರಶ್ನೆಯನ್ನೂ ಎದುರಿಸ­ಬೇಕಾಯಿತು.
ಈ ಪ್ರಶ್ನೆಯನ್ನು ಕನ್ನಡದ ರಾಜಕಾ­ರಣಿ­ಗಳು, ಪತ್ರಕರ್ತರು, ಫೇಸ್‌ಬುಕ್‌ ಹುಡುಗರು ಪದೇಪದೇ ಕೇಳಿದರು. ಅದೇ ಕಾಲಕ್ಕೆ ಅನಂತಮೂರ್ತಿ ಅವರು ಪ್ರತಿಷ್ಠಿತ ‘ಮ್ಯಾನ್ ಬುಕರ್’ ಪ್ರಶಸ್ತಿಗೆ ನಾಮಕರಣಗೊಂಡು ಲಂಡನ್‌ನಲ್ಲಿ ಕನ್ನಡವನ್ನು ಪ್ರತಿನಿಧಿಸಿದ್ದರು.



ಡಯಾಲಿ­ಸಿಸ್‌ಗೆ ಒಳಗಾಗಿಯೇ ವಿದೇಶದ ನೆಲ­ದಲ್ಲಿ ಬೂಕರ್‌ ವೇದಿಕೆಯಲ್ಲಿ ಕಾಣಿಸಿ­ಕೊಂಡಿದ್ದರು. ಇದೆಲ್ಲ ಸಂಕಟ ಯಾಕಾಗಿ ಎನ್ನುವ ಪ್ರಶ್ನೆಗೆ ಅವರು ಹೇಳಿದ್ದು– ‘ಮೊದಲ ಸಲ ಮಾತೃಭಾಷೆಯಲ್ಲಿ ಬರಿಯೋನನ್ನು ಕರೆದಿದ್ದಾರೆ. ನಾನು ಕನ್ನಡದ ಮೂಲಕ ಭಾರತವನ್ನು ಪ್ರತಿ­ನಿಧಿ­ಸುತ್ತಿದ್ದೇನೆ ಅನ್ನಿಸಿದ್ದರಿಂದ ಅಲ್ಲಿಗೆ ಹೋದೆ’ ಎಂದಿದ್ದರು.

ರಾಜಕೀಯ ಪ್ರಜ್ಞೆಯ ಲೇಖಕ: ಅವರ ಈ ಮಾತು, ‘ಅನಂತಮೂರ್ತಿ ಎಂದರೆ ಯಾರು?’ ಎನ್ನುವ ಪ್ರಶ್ನೆಗೆ ಉತ್ತರ­ದಂತಿತ್ತು. ‘ಪಂಪ, ಕುಮಾರ­ವ್ಯಾಸ, ಬಸವ ಮತ್ತು ಅಲ್ಲಮರು ನನ್ನ ಹೀರೋ­ಗಳು’ ಎಂದಿದ್ದ ಅನಂತಮೂರ್ತಿ, ಈ ಪರಂಪರೆಯ ಭಾಗವಾಗಿ ತಮ್ಮನ್ನು ಗುರ್ತಿಸಿಕೊಳ್ಳಲು ಇಷ್ಟಪಡುತ್ತಿದ್ದರು. ಅವರ ಬದುಕು ಕನ್ನಡದ ವಿವೇಕ ಮತ್ತು ವಿಮರ್ಶೆಯ ವ್ಯಕ್ತರೂಪದಂತಿತ್ತು. ಅವರು ಕನ್ನಡದ ಅತ್ಯಂತ ಪ್ರಖರ ರಾಜಕೀಯ ಪ್ರಜ್ಞೆಯ ಲೇಖಕ­ರಾಗಿದ್ದರು.
ಇತ್ತೀಚಿನ ದಿನಗಳಲ್ಲಿ ಅನಂತ­ಮೂರ್ತಿ ಅವರ ಜೀವನಪ್ರೀತಿ ಅವರನ್ನು ಬಲ್ಲವರ ಪಾಲಿಗೆ ಅಚ್ಚರಿಯಂತೆ ಕಾಣಿಸು­ತ್ತಿತ್ತು. ತೀವ್ರ ಅನಾರೋಗ್ಯದ ದಣಿವಿನ ನಡುವೆಯೂ ಸಾಹಿತ್ಯಿಕ ಕಾರ್ಯಕ್ರಮ­ಗಳಲ್ಲಿ ಅವರು ಭಾಗವಹಿಸುತ್ತಿದ್ದರು, ಚರ್ಚೆಗಳಲ್ಲಿ ಭಾಗಿಯಾಗುತ್ತಿದ್ದರು. ಈ ಸಾಹಿತ್ಯ ಸಖ್ಯ ಅವರ ಅನಾರೋಗ್ಯಕ್ಕೆ ಶಮನಕದಂತೆ ಭಾಸವಾಗುತ್ತಿತ್ತು.

ಚಿಂತನೆಯ ಕಾವು ಮತ್ತು ನೈತಿಕ ಸಿಟ್ಟನ್ನು ಅವರು ಕೊನೆಯವರೆಗೂ ಉಳಿಸಿಕೊಂಡಿದ್ದರು. ಅವರು ಸೃಷ್ಟಿಸಿದ, ಕನ್ನಡ ಸಾಹಿತ್ಯಲೋಕದ ಎರಡು ಅತ್ಯುತ್ತಮ ಪಾತ್ರಗಳಾದ ಪ್ರಾಣೇಶಾ­ಚಾರ್ಯ ಮತ್ತು ನಾರಾಣಪ್ಪರ  ಗುಣ­ಗಳಾದ ಉಗ್ರನಿಷ್ಠೆ ಮತ್ತು ಕಡು ಜೀವನ­ಪ್ರೀತಿಯನ್ನು ಸ್ವತಃ  ಅವರಲ್ಲೂ ಕಾಣಬಹುದಾಗಿತ್ತು. ಸಾಂಸ್ಕೃತಿಕ ಚಿಂತಕ: ಲೇಖಕರಾಗಿದ್ದುದು ಅನಂತಮೂರ್ತಿ ಅವರ ಒಂದು ಮುಖ­ವಷ್ಟೇ. ಅದಕ್ಕಿಂತಲೂ ಮುಖ್ಯವಾಗಿ ಅವರು ಸಾಮಾಜಿಕ – ಸಾಂಸ್ಕೃತಿಕ ಚಿಂತಕ­­ರಾಗಿದ್ದರು. ಕರ್ನಾಟಕ ಮಾತ್ರವಲ್ಲ, ಭಾರತ ಕಂಡ ಅತ್ಯುತ್ತಮ ಚಿಂತಕರಲ್ಲಿ ಅವರು ಒಬ್ಬರಾಗಿದ್ದರು.

ತನ್ನನ್ನು ರೂಪಿಸಿದ ಸಮಾಜ ಮತ್ತು ವ್ಯವಸ್ಥೆಯ ಬಗ್ಗೆ ಗೌರವ ಇರಿಸಿಕೊಂಡೇ ಟೀಕಿಸಬಲ್ಲ ನೈತಿಕತೆ ಅವರದಾಗಿತ್ತು. ಜನಪ್ರಿಯ ನಿಲುವುಗಳಿಗೆ ವ್ಯತಿರಿಕ್ತವಾದ ಅವರ ಚಿಂತನೆಗಳು ಆತ್ಮವಿಮರ್ಶೆ ಹಿಂದಾಗಿ, ಆತ್ಮಪ್ರತ್ಯಯ ಮುನ್ನೆಲೆಗೆ ಬಂದಿರುವ ಕಾಲದಲ್ಲಿ ಸಹಜವಾಗಿಯೇ ಹಲವರ ವಿರೋಧಕ್ಕೆ ಕಾರಣವಾಯಿತು. ಸುಮಾರು ಆರು ದಶಕಗಳ ಕಾಲ ಹಲವು ಸಾಂಸ್ಕೃತಿಕ–ವೈಚಾರಿಕ ವಾಗ್ವಾದ­ಗಳಿಗೆ ಗ್ರಾಸ ಒದಗಿಸಿದ್ದ ಅನಂತಮೂರ್ತಿ ಅವರು ಸ್ವತಃ ತಾವೇ ಟೀಕೆಗಳಿಗೆ ಒಳಗಾಗಿದ್ದರು. ಸರ್ಕಾರ­ದಿಂದ ಮನೆ ಪಡೆದರು ಎಂದು ಅವರ ಗೆಳೆಯರೇ ಮುನಿಸಿಕೊಂಡರು.

ಅವರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ, ‘ಪ್ರಶಸ್ತಿಯನ್ನು ಹೊಡೆದು­ಕೊಂಡರು, ಪ್ರಶಸ್ತಿ ಅವರ ಮಟ್ಟಕ್ಕೆ ಇಳಿಯಿತು’ ಎಂದು ಟೀಕಿಸಿದರು. ಇದೆಲ್ಲಕ್ಕೂ ಮಿಗಿಲಾಗಿ ದೈಹಿಕವಾಗಿ ಅನಂತಮೂರ್ತಿ ಅವರು ತೀರಾ ದಣಿದ ದಿನಗಳಲ್ಲಿ ಅವರನ್ನು ಹಣಿಯುವ ವ್ಯಾಪಕ ಪ್ರಯತ್ನಗಳು ನಡೆದವು. ಕಳೆದ ಲೋಕಸಭಾ ಚುನಾವಣೆ ಸಂದರ್ಭ­ದಲ್ಲಿ, ‘ನರೇಂದ್ರ ಮೋದಿ ಪ್ರಧಾನಿ ಆಗುವ ದೇಶದಲ್ಲಿ ನಾನು ಬದುಕು­ವು­ದಕ್ಕೆ ಇಚ್ಛಿಸುವುದಿಲ್ಲ’ ಎನ್ನುವ ಅರ್ಥದ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿ­ಯಾಯಿತು. ಮೋದಿ ಅವರು ಪ್ರಧಾನಿ­ಯಾದ ನಂತರ, ‘ನೀವು ಪಾಕಿಸ್ತಾನಕ್ಕೆ ಹೋಗಿ’ ಎಂದು ಕೆಲವರು ವಿಮಾನದ ಟಿಕೆಟ್‌­ಗಳನ್ನೂ ಕಳುಹಿ­ಸಿದರು. ದೇವರ ಮೂರ್ತಿ­ಯ ಮೇಲೆ ಅನಂತಮೂರ್ತಿ ಮೂತ್ರ ವಿಸರ್ಜಿ­ಸಿದ್ದಾರೆ ಎನ್ನುವುದು, ‘ಬಸವ ಪ್ರಶಸ್ತಿ’ಗೆ ಅವರು ಅರ್ಹರಲ್ಲ ಎನ್ನುವುದು– ಹೀಗೆ ಅನಂತಮೂರ್ತಿ ಅವ­ರನ್ನು ಕಟಕಟೆಯಲ್ಲಿ ನಿಲ್ಲಿಸಲು ಅವರ ಟೀಕಾಕಾರರಿಗೆ ಸಾಕಷ್ಟು ವಿಷಯ­ಗಳು ಕಾಲಕಾಲಕ್ಕೆ ದೊರಕುತ್ತಲೇ ಇದ್ದವು.

ಇದೆಲ್ಲವನ್ನೂ ಸೈರಿಸಿಕೊಂಡು, ಅನಾರೋಗ್ಯವನ್ನೂ ನಿಭಾಯಿಸಿಕೊಂಡು ಅನಂತಮೂರ್ತಿ ಅವರು ‘ಹಿಂದುತ್ವ’ದ ಬಗ್ಗೆ ಪುಸ್ತಕವೊಂದನ್ನು (ಅಪ್ರಕಟಿತ) ಬರೆದರು. ವಿಮರ್ಶಕರಾಗಿ ಅನಂತಮೂರ್ತಿ ಅವರದ್ದು ಗಮನಾರ್ಹ ಸಾಧನೆ. ಕನ್ನಡದಲ್ಲಿ ನವ್ಯ ಸಾಹಿತ್ಯವನ್ನು ಪ್ರವರ್ಧ­ಮಾನಕ್ಕೆ ತಂದ ಪ್ರಮುಖರಲ್ಲಿ ಅವರೂ ಒಬ್ಬರು. ಗೋಪಾಲಕೃಷ್ಣ ಅಡಿಗರ ಕಾವ್ಯದ ಉತ್ಕೃಷ್ಟತೆಯನ್ನು ಎತ್ತಿ­ಹಿಡಿದರು. ಅವರು ಸಂಪಾದಿಸಿದ ‘ರುಜುವಾತು’ ಪತ್ರಿಕೆ ಅನೇಕರಿಗೆ ‘ಪದ್ಯ ಬಗೆಯುವ ಬಗೆ’ಯ ಸೂಕ್ಷ್ಮಗಳನ್ನು ಕಲಿಸಿಕೊಟ್ಟಿತು. ತಮ್ಮ ಕೊನೆಯ ದಿನಗಳಲ್ಲೂ ಕಿರಿಯರ ಬರಹಗಳನ್ನು ಆಸ್ಥೆಯಿಂದ ಓದುತ್ತಿದ್ದ ಅವರು, ಅಪರಿಚಿತ ಯುವ ಬರಹಗಾರರನ್ನೂ ಫೋನ್‌ ಮೂಲಕ ಸಂಪರ್ಕಿಸಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸು­ತ್ತಿದ್ದರು.

‘ಸುರಗಿ’ ಹೂವಿನ ಬಗ್ಗೆ ಅವರಿಗೆ ಇನ್ನಿಲ್ಲದ ಮೋಹ. ಬದುಕಿನ ಕುರಿತ ಮೋಹ ಮತ್ತು ಅವರಿಗಷ್ಟೇ ಸಾಧ್ಯ–ಸಹಜವಾದ ರಸಿಕತೆಗೆ ಈ ಸುರಗಿ ರೂಪಕದಂತಿತ್ತು. ‘ಸುರಗಿ’ ಅವರ ಮನೆಯ ಹೆಸರು, ಆತ್ಮಕಥನದ ಹೆಸರು ಕೂಡ. ಒಣಗಿದ ನಂತರವೂ ಸಾಕಷ್ಟು ಸಮಯದವರೆಗೆ ಪರಿಮಳ ಉಳಿಸುವ ಸುರಗಿಯಂತೆ ಅನಂತಮೂರ್ತಿ ಅವರ ನೆನಪುಗಳು.
ಸುರಗಿಯ ತೋಟದಲ್ಲಿ ಈಗ ಮಳೆಯ ದಿನಗಳು. ರಾಜಕಾರಣ ಅಥವಾ ಸಾಂಸ್ಕೃತಿಕ ಬಿಕ್ಕಟ್ಟಿನ ಸಂದರ್ಭ­ಗಳಲ್ಲಿ–ಈಗ ಕುವೆಂಪು ಇದ್ದಿದ್ದರೆ, ಲಂಕೇಶ್‌ ಇದ್ದಿದ್ದರೆ ಎಂದು ಕೆಲವರು ತಳಮಳಗೊ­ಳ್ಳು­ವು­ದಿದೆ. ಇನ್ನುಮುಂದೆ, ಈ ನಿರ್ವಾತ ಮತ್ತ­ಷ್ಟು ಗಾಢವಾಗಲಿದೆ. ಅನಂತ­ಮೂರ್ತಿ ಅವರ ನಿರ್ಗಮನದ ಮೂಲಕ ಸ್ವಎಚ್ಚರ, ಆತ್ಮನಿರೀಕ್ಷಣೆಯ ಒಂದು ಮಾದರಿಯನ್ನು ಕಳೆದು­ಕೊಂಡಿದ್ದೇವೆ.

ಕಲಾಕ್ಷೇತ್ರದಲ್ಲಿ ಇಂದು ಅಂತ್ಯ ದರ್ಶನ
ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಬೆಳಿಗ್ಗೆ 10 ಗಂಟೆಗೆ ಅನಂತಮೂರ್ತಿ ಅವರ ಪಾರ್ಥಿವ ಶರೀರವನ್ನು ಸಾರ್ವಜನಿಕರ ದರ್ಶನಕ್ಕೆ ಇಡಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ.

ಅನಂತಮೂರ್ತಿ ಅವರ ನಿಧನ ಕನ್ನಡ ಸಾಹಿತ್ಯಕ್ಕೆ ನಷ್ಟ. ಅವರ ಕುಟುಂಬಕ್ಕೆ ನನ್ನ ಸಂತಾಪ. ಅವರ ಆತ್ಮಕ್ಕೆ ಶಾಂತಿ ಸಿಗಲಿ.  - ಪ್ರಧಾನಿ ನರೇಂದ್ರ ಮೋದಿ ಟ್ವೀಟ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT