ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಕ್ ಪ್ಯಾಂಥರ್ಸ್ ಜಯಭೇರಿ

ಪ್ರೊ ಕಬಡ್ಡಿ: ಟೈಟನ್ಸ್‌ಗೆ ಸತತ ಎರಡನೇ ಸೋಲು
Last Updated 29 ಜೂನ್ 2016, 19:30 IST
ಅಕ್ಷರ ಗಾತ್ರ

ಜೈಪುರ: ಚಿರತೆಯಷ್ಟೇ ಚುರುಕಿನಿಂದ ದಾಳಿ ನಡೆಸಿದ ರಾಜೇಶ್ ನರ್ವಾಲ್ ಅವರಿಂದಾಗಿ   ಆತಿಥೇಯ ಜೈಪುರ ಪಿಂಕ್ ಪ್ಯಾಂಥರ್ಸ್ ತನ್ನ ತವರಿನ ಅಂಗಳದಲ್ಲಿ ಜಯಭೇರಿ ಬಾರಿಸಿತು.

ಬುಧವಾರ ಸಂಜೆ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ  ನಡೆದ ಪ್ರೊ ಕಬಡ್ಡಿ ಲೀಗ್‌ ಟೂರ್ನಿಯ ನಾಲ್ಕನೇ ಋತುವಿನ ಪಂದ್ಯದ ಕೊನೆಯ ಒಂಬತ್ತು ನಿಮಿಷಗಳಲ್ಲಿ ರಾಜೇಶ್ ನರ್ವಾಲ್ ಆಡಿದ ಆಲ್‌ರೌಂಡ್ ಆಟದಿಂದಾಗಿ ಪ್ಯಾಂಥರ್ಸ್ 28–24ರಿಂದ ತೆಲುಗು ಟೈಟನ್ಸ್ ತಂಡದ ವಿರುದ್ಧ ಗೆದ್ದಿತು. ರಾಜೇಶ್ ಕಲೆಹಾಕಿದ  ಎಂಟು  ಪಾಯಿಂಟ್‌ಗಳಿಂದಾಗಿ ‘ಗುಲಾಬಿ ನಗರಿ’ಯ ಕಬಡ್ಡಿ ಪ್ರೇಮಿಗಳಲ್ಲಿ ಸಂಭ್ರಮ ಗರಿಗೆದರಿತು. 

ಪಂದ್ಯದ ಬಹುತೇಕ ಭಾಗ (31 ನಿಮಿಷಗಳು) ಎರಡು ತಂಡಗಳು ಸಮಬಲದ ಹೋರಾಟ ನಡೆಸಿದ್ದವು.  16–16 ಅಂಕಗಳವರೆಗೂ ಎರಡೂ ತಂಡಗಳ ಛಲದ ಹೋರಾಟ  ನಡೆದಿತ್ತು.  ಆದರೆ, ಈ ಹಂತದಲ್ಲಿ ದಾಳಿಗಿಳಿದ ರಾಜೇಶ್ ಟೈಟನ್ಸ್‌ ತಂಡಕ್ಕೆ ಆಘಾತ ನೀಡಿದರು. ತಮ್ಮ ಮೂರು  ರೈಡ್‌ಗಳಲ್ಲಿ ಎರಡು ಅಂಕಗಳನ್ನು ಕಬಳಿಸಿದರು. ಅಲ್ಲದೇ ಒಂದು ಟ್ಯಾಕಲ್ ಪಾಯಿಂಟ್ ಕೂಡ ಗಳಿಸುವ ಮೂಲಕ ತಂಡಕ್ಕೆ ಮಹತ್ವದ  ಮುನ್ನಡೆ ಸಿಗುವಂತೆ ಮಾಡಿದರು.

ಈ ಹಂತದಲ್ಲಿ ಟೈಟನ್ಸ್  ಆಲ್‌ಔಟ್ ಆಗಲು ರಾಜೇಶ್ ಕಾರಣರಾದರು. ಇದರಿಂದಾಗಿ ಆತಿಥೇಯ ತಂಡವು 24–18 ರ ಮುನ್ನಡೆ ಪಡೆಯಿತು. ನಂತರದ ಅವಧಿಯಲ್ಲಿ ರಾಹುಲ್ ಬಳ ಗವು ಹಿಡಿತ ಸಡಿಲಿಸಲಿಲ್ಲ.  ತಾಳ್ಮೆಯಿಂದ ಯೋಜನಾಬದ್ಧವಾಗಿ ಆಡಿದ ಜೈಪುರ ಗೆಲುವನ್ನು ತನ್ನ ಕಡೆ ವಾಲಿಸಿಕೊಂಡಿತು. ನಾಯಕ ಜಸ್ವೀರ್ ಸಿಂಗ್ ಮೂರು, ರಕ್ಷಣೆಯಲ್ಲಿ ಮಿಂಚಿದ ಬದಲೀ ಆಟಗಾರ ಮಹಿಪಾಲ್ ನರ್ವಾಲ್ ಸೂಪರ್ ಟ್ಯಾಕಲ್ ಮೂಲಕ ತಂಡಕ್ಕೆ ಎರಡು ಅಂಕಗಳ ಕಾಣಿಕೆ ನೀಡಿದರು.

ಟೈಟನ್ಸ್‌ ತಂಡವು ಈ ಟೂರ್ನಿಯಲ್ಲಿ ಸತತ ಎರಡನೇ ಸೋಲು ಅನುಭವಿಸಿತು. ಸುಕೇಶ್ ಹೆಗಡೆ ವೈಫಲ್ಯ ಅನುಭವಿಸಿದ್ದು ತಂಡದ ಹಿನ್ನಡೆಗೆ ಕಾರಣವಾಯಿತು.  ಕೊನೆಯ ಹಂತದಲ್ಲಿ ರಕ್ಷಣಾ ಆಟಗಾರ ರಲ್ಲಿ ಹೊಂದಾಣಿಕೆಯ ಕೊರತೆಯೂ ಟೈಟನ್ಸ್ ಸೋಲಿಗೆ ಕಾರಣವಾಯಿತು.

ಆದರೆ, ವಿನೋದಕುಮಾರ್ ಉತ್ತಮ ಆಟವಾಡಿದರು. ಮೊದಲ ರ್ಧದ ವಿರಾಮಕ್ಕೂ ಮುನ್ನ ವಿನೋದ ಕುಮಾರ್ ಅವರ ಚುರುಕಿನ ದಾಳಿಯಿಂದಾಗಿ ಟೈಟನ್ಸ್ ತಂಡವು ಆತಿಥೇಯರಿಗೆ ಸಮಬಲದ ಪೈಪೋಟಿ ನೀಡಿತ್ತು. ಒಟ್ಟು ನಾಲ್ಕು ಅಂಕಗಳನ್ನು ಗಳಿಸಿದ ವಿನೋದಕುಮಾರ್ ಗಳಿಸಿದ್ದರು. ಇದರಿಂದಾಗಿ 12–12ರಿಂದ ಎರಡೂ ತಂಡಗಳು ಸಮಬಲ ಸಾಧಿಸಿದವು.

ನಂತರದ ಅವಧಿಯಲ್ಲಿ ವಿನೋದ ಕುಮಾರ್ ಕೂಡ ಒಂದೂ ಪಾಯಿಂಟ್ ಗಳಿಸಲಿಲ್ಲ.   ನಿಲೇಶ್ ಸಾಳುಂಕೆ ಮೂರು ಪಾಯಿಂಟ್ ಗಳಿಸಿದರು. ಆಲ್‌ರೌಂಡ್ ಆಟವಾಡಿದ ಸಂದೀಪ್ ನರ್ವಾಲ್ ಆರು ಅಂಕ ಗಳಿಸಿದರೂ ತಂಡವನ್ನು ಗೆಲುವಿನ ದಡಕ್ಕೆ ಮುಟ್ಟಿಸಲು ಸಾಧ್ಯವಾಗಲಿಲ್ಲ.

ಮುಂಬೈನಲ್ಲಿ ನಡೆದಿದ್ದ ಟೂರ್ನಿಯ ಮೊದಲ ಚರಣದಲ್ಲಿ  ಜಸ್ವೀರ್ ಸಿಂಗ್ ನಾಯಕತ್ವದ   ಪ್ಯಾಂಥರ್ಸ್  ತಂಡವು ಯು ಮುಂಬಾ ಎದುರು ಸೋತಿತ್ತು. ಇದೀಗ ಮೊದಲ ಜಯದ ರಂಗಿನಲ್ಲಿ ಮುಳುಗೆದ್ದಿತು.

ಪ್ರದೀಪ್ ಮಿಂಚು: ಪಟ್ನಾಗೆ ಜಯ
ರೋಚಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಟ್ನಾ ಪೈರೇಟ್ಸ್‌ ಛಲದ ಆಟಕ್ಕೆ ಗೆಲುವು ಒಲಿಯಿತು. ಆದರೆ, ರನ್ನರ್ಸ್ ಅಪ್ ಯು ಮುಂಬಾ ತಂಡದ ದಿಟ್ಟ ಆಟಕ್ಕೆ ಅದೃಷ್ಟ ಜೊತೆಗೂಡಲಿಲ್ಲ.

ಬುಧವಾರ ರಾತ್ರಿ ನಡೆದ ಪಂದ್ಯದಲ್ಲಿ 18 ಅಂಕಗಳನ್ನು ಗಳಿಸಿ ಮಿಂಚಿದ ಪ್ರದೀಪ್ ನರ್ವಾಲ್ ಅವರ ನೆರವಿನಿಂದ ಪೈರೇಟ್ಸ್‌ ತಂಡವು 36–34 ರಿಂದ ಯು ಮುಂಬಾ ತಂಡದ ಎದುರು ಜಯಿಸಿತು. ಮುಂಬಾ ತಂಡದಲ್ಲಿರುವ ಕುಂದಾಪುರದ ರಿಶಾಂಕ್ ದೇವಾಡಿಗ ಅವರ ಛಲದ ಆಟ (11 ಪಾಯಿಂಟ್ಸ್) ಗೆಲುವಿಗೆ ಸಾಕಾಗಲಿಲ್ಲ.

ಮೊದಲರ್ಧ ಬಹುತೇಕ ಅವಧಿಯಲ್ಲಿ ಸಮಬಲದ ಹೋರಾಟ ನಡೆಯಿತು. ಆದರೆ, ವಿರಾಮಕ್ಕೆ ಪಟ್ನಾ ತಂಡ 16–14ರಿಂದ ಮುನ್ನಡೆ ಸಾಧಿಸಿತ್ತು. 
 
ಇಂದಿನ ಪಂದ್ಯಗಳು
ಪುರುಷರ ವಿಭಾಗ
ಜೈಪುರ್ ಪಿಂಕ್ ಪ್ಯಾಂಥರ್ಸ್ ವಿರುದ್ಧ  ಬೆಂಗಳೂರು ಬುಲ್ಸ್
(ರಾತ್ರಿ 8)
ಮಹಿಳೆಯರು
ಸ್ಟಾರ್ಮ್ ಕ್ವೀನ್ಸ್ ವಿರುದ್ಧ ಐಸ್ ದಿವಾಸ್ (ರಾತ್ರಿ 9)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT