ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಂಚಣಿ ವಿಮಾ ಯೋಜನೆ ಹಿರಿಯರಿಗೆಲ್ಲಾ ವರದಾನ

Last Updated 14 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಹಿರಿಯ ನಾಗರಿಕರಿಗೆ ಉಳಿತಾಯವು ಸುರಕ್ಷತೆಯಿಂದ ಹಾಗೂ ಆಕರ್ಷಕ, ಉತ್ತಮ, ಖಚಿತ ಗಳಿಕೆಯನ್ನು ನೀಡುವ ಉದ್ದೇಶದಿಂದ ಸ್ವಾತಂತ್ರ್ಯೋತ್ಸವದ ಸವಿನೆನಪಿಗಾಗಿ 2014ರ ಆಗಸ್ಟ್‌ 15ರಿಂದ ಕೇಂದ್ರ ಸರ್ಕಾರವು ಭಾರತೀಯ ಜೀವ ವಿಮಾ ನಿಗಮದ (ಎಲ್.ಐ.ಸಿ) ಸಹಯೋಗದಲ್ಲಿ ಹಿರಿಯ ನಾಗರಿಕರಿಗೆ ‘ವರಿಷ್ಠ ಬಿಮಾ ಪೆನ್ಷನ್ ಸ್ಕೀಂ (ಹಿರಿಯರ ವಿಮಾ ಪಿಂಚಣಿ ಯೋಜನೆ) ಜಾರಿಗೆ ತಂದಿದೆ.

ಈ ಯೋಜನೆಯನ್ನು ಈ ಹಿಂದೆ ಎನ್‌ಡಿಎ ಸರ್ಕಾರದ ಆಡಳಿತಾವಧಿಯಲ್ಲಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರೂ ಘೋಷಿಸಿದ್ದರು. ಒಂದು ವರ್ಷದ ಮಟ್ಟಿಗಷ್ಟೇ ಈ ಯೋಜನೆ ಜಾರಿಯಲ್ಲಿತ್ತು.

ಈಗಲೂ ಸಹ ಈ ಹಿರಿಯ ವಿಮಾ ಪಿಂಚಣಿ ಯೋಜನೆಯು 2015ರ ಆಗಸ್ಟ್‌ 14ರವರೆಗೆ ಮಾತ್ರವೇ ಹೂಡಿಕೆಗೆ ಲಭ್ಯವಿದೆ. ಕೇಂದ್ರ ಸರ್ಕಾರದ ಸ್ವಾಮ್ಯಕ್ಕೊಳಪಟ್ಟ ಭಾರತೀಯ ಜೀವ ವಿಮಾ ನಿಗಮ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ.

ಈ ಯೋಜನೆಯಿಂದ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳೂ ನಿಗದಿತ ಪಿಂಚಣಿ ಮೊತ್ತ ಅವರ ಬ್ಯಾಂಕ್‌ ಖಾತೆಗೇ ನೇರವಾಗಿ ಜಮಾ ಆಗುತ್ತದೆ. ಮಧ್ಯದಲ್ಲಿ ದೊಡ್ಡ ಮೊತ್ತ ಬೇಕಿಸಿದರೆ ಹೂಡಿಕೆಯ ಶೇ 75ರಷ್ಟನ್ನು ಸಾಲವಾಗಿ ಪಡೆದುಕೊಳ್ಳಬಹುದು.

60 ವರ್ಷ ದಾಟಿದವರೆಲ್ಲರೂ ಈ ಯೋಜನೆಯ ಪ್ರಯೋಜನ ಪಡೆಯಬಹುದು. ಈ ಯೋಜನೆಯಲ್ಲಿ ಹಣ ತೊಡಗಿಸಿದವರು ತಮ್ಮ ಜೀವನ ನಿರ್ವ ಹಣೆಗೂ, ಆರೋಗ್ಯ ರಕ್ಷಣೆ ವೆಚ್ಚಕ್ಕಾಗಿಯೂ ಪ್ರತಿ ತಿಂಗಳೂ  ಹಣವನ್ನು ಪಡೆಯಲು ಬಯಸಿದರೆ ಈ ವಿಮಾ ಯೋಜನೆಯಲ್ಲಿ ಹೂಡಿದ ಹಣಕ್ಕೆ ಶೇ 9ರಂತೆ ಪಿಂಚಣಿ ಮೊತ್ತವನ್ನು ಪಡೆದುಕೊಳ್ಳ ಬಹುದು. ಒಂದೊಮ್ಮೆ ವರ್ಷಕ್ಕೆ ಒಂದೇ ಬಾರಿ ಯಂತೆ ಹಣ ಪಡೆಯಲು ಬಯಸಿದರೆ ಪಿಂಚಣಿಯ ಪ್ರಮಾಣವು ಶೇ 9.38ರಷ್ಟು ಲಭ್ಯವಾಗುತ್ತದೆ.

ವಿಮಾದಾರರು ತಾವು ಹೂಡಿದ ಹಣಕ್ಕೆ ತಕ್ಕಂತೆ ಪಿಂಚಣಿ ಹಣವನ್ನು ಪ್ರತಿ ತಿಂಗಳು, ಅಥವಾ ಮೂರು ತಿಂಗಳಿಗೊಮ್ಮೆ, ಆರು ತಿಂಗಳಿಗೊಮ್ಮೆ ಅಥವಾ ವರ್ಷಕ್ಕೊಮ್ಮೆ ಪಡೆದುಕೊಳ್ಳಬಹುದು.

ಕನಿಷ್ಠ ಹೂಡಿಕೆ
ಹಿರಿಯ ನಾಗರಿಕ ಪಿಂಚಣಿ ಪ್ರಯೋಜನದ ಈ ವಿಮಾ ಯೋಜನೆಯಲ್ಲಿ ಕನಿಷ್ಠ ಎಂದರೆ ರೂ. 68,725 ತೊಡಗಿಸಬೇಕಿದೆ. ಅಂದರೆ, ಪಿಂಚಣಿಯ ಯೋಜನೆ ಖರೀದಿ ಮೊತ್ತ  ರೂ. 66,665ರಷ್ಟೆ ಇದ್ದರೂ ಅದಕ್ಕೆ ಶೇ 3.09ರಷ್ಟು ಸೇವಾ ತೆರಿಗೆ ಸೇರುವುದರಿಂದ ಒಟ್ಟು ಹೂಡಿಕೆ ರೂ. 68,725ರಷ್ಟಾಗುತ್ತದೆ.

ಗರಿಷ್ಠ ಹೂಡಿಕೆ
ಹಿರಿಯ ನಾಗರಿಕರು ಈ ಯೋಜನೆಯಲ್ಲಿ ಗರಿಷ್ಠ ರೂ. 6,87,265ರವರೆಗೂ ಹೂಡಿಕೆ ಮಾಡಬಹುದು. ಯೋಜನೆಯ ವಾಸ್ತವ ಖರೀದಿ ಮೊತ್ತ ರೂ. 6,66,665 ಆಗಿದೆ. ಇದಕ್ಕೆ ಶೇ 3.09 ಸೇವಾ ತೆರಿಗೆ ಪಾವತಿಸಬೇಕಿರುವುದರಿಂದ ಒಟ್ಟಾರೆಯಾಗಿ ಗರಿಷ್ಠ ರೂ. 6,87,265 ಮೊತ್ತ ಪಾವತಿಸಬೇಕಿದೆ.

ಪ್ರತಿ ತಿಂಗಳೂ ಪಡೆಯುವುದಾದರೆ ಅತೀ ಕಡಿಮೆ ಪಿಂಚಣಿ ಮೊತ್ತವೆಂದರೆ ರೂ. 500, ಗರಿಷ್ಠ ರೂ. 5000.
3 ತಿಂಗಳಿಗೊಮ್ಮೆ ಪಿಂಚಣಿ ಹಣ ಪಡೆದುಕೊಳ್ಳಲು ಇಚ್ಛಿಸುವವರಿಗೆ ಕಡಿಮೆ ಎಂದರೆ ರೂ. 1500 ಪಿಂಚಣಿ ದೊರೆಯುತ್ತದೆ. ಗರಿಷ್ಠ ರೂ. 15,000 ಪಡೆಯಬಹುದಾಗಿದೆ.

ಅರ್ಧ ವರ್ಷಕ್ಕೊಮ್ಮೆ ಪಿಂಚಣಿಯನ್ನು ಪಡೆಯಲು ಸಿದ್ಧವಿರುವವಿಗೆ ಕಡಿಮೆಯೆಂದರೂ ರೂ. 3000 ಪಿಂಚಣಿ ಸಿಗುತ್ತದೆ. ಗರಿಷ್ಠ ರೂ. 30,000ದವರೆಗೂ ಪಡೆಯಬಹುದಾಗಿದೆ.-

ವರ್ಷಕ್ಕೊಮ್ಮೆ ಪಿಂಚಣಿ ಪಡೆಯುವಂತಿದ್ದರೆ ಕನಿಷ್ಠ ರೂ. 6000, ಗರಿಷ್ಠ ರೂ. 60,000 ಲಭ್ಯವಿರುತ್ತದೆ.
ಹಿರಿಯರು ತೊಡಗಿಸಿದ ಹಣಕ್ಕೆ ಯಾವ ಪ್ರಮಾಣದಲ್ಲಿ ಪಿಂಚಣಿ ಗಳಿಕೆಯಾಗುತ್ತದೆ? ಅದರ ಲೆಕ್ಕಚಾರ ಹೇಗೆ?
ಪ್ರತಿ ತಿಂಗಳೂ ಪಿಂಚಣಿ ಪಡೆಯುವುದಾದರೆ ಶೇ 9ರಂತೆಯೂ, ಮೂರು ತಿಂಗಳಿಗೊಮ್ಮೆಗಾದರೆ ಶೇ 9.07ರಂತೆಯೂ, ಆರು ತಿಂಗಳಿಗೊಮ್ಮೆ ಪಡೆದರೆ ಶೇ 9.17ರಷ್ಟು, ವರ್ಷಕ್ಕೊಮ್ಮೆ ಪಡೆಯುವಂತಿದ್ದರೆ ಶೇ 9.38ರಷ್ಟು ಪ್ರಮಾಣದಲ್ಲಿ ಗಳಿಕೆಯಾಗುತ್ತಾ ಹೋಗುತ್ತದೆ.

ಉದಾಹರಣೆಗೆ ರೂ. 1 ಲಕ್ಷ ಹೂಡಿಕೆ ಮಾಡುವುದಾದರೆ (ಸೇವಾ ಶುಲ್ಕ ಸೇರಿ ರೂ. 1,03,090) ವಾರ್ಷಿಕವಾಗಿ ರೂ. 9,381ರಷ್ಟು ಪಿಂಚಣಿ ಪಡೆಯಬಹುದು. ಅರ್ಧ ವರ್ಷಕ್ಕೆ ರೂ. 4585, ತ್ರೈಮಾಸಿಕವಾಗಿ ರೂ. 2262, ತಿಂಗಳಿಗಾದರೆ ರೂ. 750 ಪಿಂಚಣಿ ದೊರೆಯಲಿದೆ.

ಗ್ರಾಹಕರು ಆಯ್ಕೆ ಮಾಡಿಕೊಂಡು ಯೋಜನೆಯ ವಿಧಾನದಲ್ಲಿಯೇ, ನಿಗದಿತ ದಿನಾಂಕದಂದು ಅವರ ಬ್ಯಾಂಕ್‌ ಖಾತೆಗೆ ಪಿಂಚಣಿ ಹಣ ಜಮಾ ಆಗುತ್ತದೆ.

ಈ ಯೋಜನೆಯಲ್ಲಿ ಹಣ ತೊಡಗಿಸಿದ ವ್ಯಕ್ತಿ ಮೃತರಾದರೆ, ಅವರ ವಾರಸುದಾರರಿಗೆ ವಿಮಾದಾರರು ತೊಡಗಿಸಿದ ಹಣವಷ್ಟೇ (ಸೇವಾ ತೆರಿಗೆ ಹೊರತುಪಡಿಸಿ) ಮರುಪಾವತಿಯಾಗುತ್ತದೆ.

ಹಣ ತೊಡಗಿಸಿದ ನಂತರದ ದಿನಗಳಲ್ಲಿ ಮಧ್ಯೆ ಯಾವುದಾದರೂ ತುರ್ತು ಸಂದರ್ಭದಲ್ಲಿ ಹಣಕಾಸಿನ ಅಡಚಣೆಯಾಗಿ ದೊಡ್ಡ ಮೊತ್ತ ಬೇಕಿದೆ ಎನಿಸಿದಲ್ಲಿ ಮೂರು ವರ್ಷಗಳ ನಂತರವಾದರೆ ತೊಡಗಿಸಿದ ಹಣದ ಶೇ 75ರಷ್ಟನ್ನು ಸಾಲವಾಗಿ ಪಡೆಯಬಹುದು. ಗ್ರಾಹಕರಿಗೆ ಸಂದಾಯವಾಗುವ ಪಿಂಚಣಿ ಹಣದಲ್ಲಿಯೇ ಸಾಲವಾಗಿ ಪಡೆದ ಹಣಕ್ಕೆ ಬಡ್ಡಿಯನ್ನು ಕಡಿತಗೊಳಿಸಿ ಉಳಿಕೆ ಹಣವನ್ನು ಪಾವತಿಸಲಾಗುತ್ತದೆ.

15 ವರ್ಷಗಳ ನಂತರವಾದರೆ ಪಿಂಚಣಿ ಯೋಜನೆಯಲ್ಲಿ ತೊಡಗಿಸಿದ ಅಷ್ಟೂ ಹಣವನ್ನು ವಾಪಸ್‌ ಪಡೆದುಕೊಂಡು ಯೋಜನೆಯಿಂದ ಹೊರ ಬರಬಹುದಾಗಿದೆ.

ಈ ಯೋಜನೆಯು ಕೇಂದ್ರ ಸರಕಾರದಿಂದ ಪ್ರಾಯೋಜಿತವಾಗಿದೆ ಹಾಗೂ ಸಬ್ಸಿಡಿ ದರದಲ್ಲಿ ಬಡ್ಡಿ ನೀಡುವ ಕಾರಣ ಎಲ್.ಐ.ಸಿಯ ಪ್ರತಿನಿಧಿಗಳಿಗೆ ಇದರಿಂದ ಲಾಭವೇನೂ ಇಲ್ಲ. ಅವರು ಈ ಯೋಜನೆಯಲ್ಲಿ ತೊಡಗಿಸುವವರಿಗೆ ಸೇವೆ ಎಂದು ತಿಳಿದು ನೆರವಾಗುವರು. ಹಾಗಾಗಿ ಹಣ ತೊಡಗಿಸುವವರು ತಮಗೆ ಪರಿಚಯವಿರುವ ಎಲ್.ಐ.ಸಿ ಪ್ರತಿನಿಧಿಗಳನ್ನು ಸಂಪರ್ಕಸಿ ಈ ಯೋಜನೆಯಲ್ಲಿ ಹಣ ತೊಡಗಿಸಬಹುದು. ತಮ್ಮ  ಉಳಿತಾಯದ ಹಣವನ್ನು ಸುಭದ್ರವಾಗಿರಿಸುವುದರ ಜತೆಗೇ ನಿಗಿದಿತ ಮೊತ್ತವನ್ನು ಪಿಂಚಣಿಯಾಗಿ ಯಾವುದೇ ಅಡೆ ತಡೆ ಇಲ್ಲದೇ ಪಡೆದುಕೊಳ್ಳುತ್ತಾ ನೆಮ್ಮದಿಯ ಜೀವನ ಸಾಗಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT