ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಸುಗುಡುವ ಗುಮ್ಮಟ ಗೋಡೆಗಳ ಊರಿನಲ್ಲಿ...

Last Updated 20 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಜಗತ್ತಿನ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಎಣಿಕೆಯಾಗುವ ಜಾಗದಲ್ಲಿ ನಿಂತಿದ್ದೇವೆ ಅಂತ ಆ ದಿನ ನಂಬಿಕೆ ಆಗಿರಲಿಲ್ಲ. ಇವತ್ತಿಗೂ ಅಲ್ಲಿಗೆ ಹೋಗಿ ಬಂದಿದ್ದೇವೆ ಎಂಬುದು ಒಂದು ಕನಸೇ ಅನಿಸುತ್ತದೆ. ಮೂರು ಧರ್ಮಗಳು ಬೇರೆ ಕಾಲಮಾನಗಳಲ್ಲಿ ಹುಟ್ಟಿ, ಬೆಳೆದು ಹೆಮ್ಮರವಾಗಿರುವ ಜಾಗ, ಇಸ್ರೇಲ್ ದೇಶದ ಪ್ರಮುಖ ನಗರಗಳಲ್ಲೊಂದಾದ ಜೆರುಸಲೇಮ್! ಅದು ಯಾರಿಗೆ ಅತೀ ಹೆಚ್ಚು ಪವಿತ್ರವಾದದ್ದು, ಯಾರು ಅಲ್ಲಿ ಪ್ರಾರ್ಥಿಸಬೇಕು ಅನ್ನುವ ಪ್ರಶ್ನೆಗೆ ಉತ್ತರವಾದದ್ದು ಬೀದಿಗಳಲ್ಲಿ ಚೆಲ್ಲಿದ ಜನರ ರಕ್ತ.

ಜೆರುಸಲೇಮ್ ತನ್ನ ಮಡಿಲಲ್ಲಿ ಅದೆಷ್ಟೋ ರಹಸ್ಯಗಳನ್ನು ಬಚ್ಚಿಟ್ಟುಕೊಂಡಿದೆ. ಅಲ್ಲಿನ ಪ್ರತಿಯೊಂದು ಬೀದಿಯೂ ತನ್ನದೇ ಆದ ಘೋರ ಇತಿಹಾಸ ಬಚ್ಚಿಟ್ಟುಕೊಂಡಿದೆ.ಸುಮ್ಮನೆ ಸೋಕಿದರೆ ಸಾಕು – ಎಳೆಎಳೆಯಾಗಿ ಹೊರಬೀಳುವುದು ಕೇವಲ ನೋವು. ಜನರ ಮಾಸದ ಗಾಯಗಳ ನೋವು.ಎಂತಹುದೇ ಕರಾಳ ಹಿನ್ನಲೆ ಇರಲಿ, ಈ ಊರು ನಿಜಕ್ಕೂ ಸುಂದರ. ಬೆಟ್ಟಗಳ ಏರಿಳಿತಗಳಿಂದ ಕೂಡಿದ ಚೆಂದದ ನಗರ. ಎತ್ತ ನೋಡಿದರೂ ಮನೆ–ಕಟ್ಟಡಗಳು ಬಹುತೇಕ ಒಂದೇ ಬಣ್ಣದಲ್ಲಿ ಕಾಣಿಸುತ್ತವೆ. ನೈಸರ್ಗಿಕವಾಗಿ ಸಿಗುವ ಸುಣ್ಣದಂತಹ ಬಣ್ಣದ ಕಲ್ಲುಗಳೇ ಇಟ್ಟಿಗೆಗಳು. ಆಲೀವ್ ಮರಗಳ ಹಸಿರು ಮತ್ತು ಮನೆಗಳ ಬಿಳಿ ಬಣ್ಣ ನೋಡುವ ಆನಂದವೇ ಬೇರೆ ಇತ್ತು. 

ಇಡೀ ನಗರ ಹಳೆಯ ಮತ್ತು ಹೊಸ ಜೆರುಸಲೇಮ್ ಎಂದು ವಿಭಾಗಗೊಂಡಿದೆ. ಪೂರ್ವ ದಿಕ್ಕಿನಲ್ಲಿರುವುದು ಸಣ್ಣ ಬೀದಿಗಳಿಂದ ಕೂಡಿದ, ಚಾರಿತ್ರಿಕವಾಗಿ ಅಪೂರ್ವವಾದ ಹಳೆಯ ನಗರ. ಪಶ್ಚಿಮದಲ್ಲಿರುವುದು ಗಗನದತ್ತ ಸಾಗಿರುವ ಕಟ್ಟಡಗಳ ಹೊಸ ನಗರ. ಕ್ರೈಸ್ತ, ಯಹೂದಿ ಹಾಗೂ ಇಸ್ಲಾಮ್ ಧರ್ಮಗಳಿಗೆ ಸಂಬಂಧಪಟ್ಟ ಐತಿಹಾಸಿಕ ನೆಲೆಗಳು ಸಿಗುವುದು ಹಳೆ ಜೆರುಸಲೇಮ್ ನಗರದಲ್ಲಿ.

ಸಹಜವಾಗಿಯೇ ಇದೊಂದು ಧಾರ್ಮಿಕ ಯಾತ್ರಾಸ್ಥಳ. ‘ತನಖ್’ (ಹಳೆ ಒಡಂಬಡಿಕೆ) ಹೀಬ್ರೂ ಬೈಬಲ್‌ನಲ್ಲಿ ಉಲ್ಲೇಖಗೊಂಡಂತೆ, ಕಿಂಗ್ ಸೊಲೊಮನ್ ಯಹೂದಿಗಳಿಗೆ ಮೊದಲ ಮಂದಿರವನ್ನು ಕಟ್ಟಿಸಿದ್ದು ಜೆರುಸಲೇಮ್‌ನಲ್ಲಿ. ಏಸುಕ್ರಿಸ್ತ ತನ್ನ ಕೊನೆಯ ದಿನಗಳನ್ನು ಕಳೆದಿದ್ದು ಇಲ್ಲಿಯೇ. ‘ಲಾಸ್ಟ್ ಸಪ್ಪರ್’ ನಡೆದಿದ್ದು, ಏಸುವನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದು, ನಂತರ ಶಿಲುಬೆಗೇರಿಸಿದ್ದು, ಹೂತಿದ್ದು ಹಾಗೂ ಜಗತ್ತಿನ ಒಳಿತಿಗಾಗಿ ‘ಪುನರುಜ್ಜೀವನ’ ಹೊಂದಿದ್ದು ಈ ಜಾಗದಲ್ಲಿ. ಘಟನೆಗಳ ನೆನಪಿಗೆ ಈಗ ಬೀದಿಗೊಂದಂತೆ ದೊಡ್ಡ ದೊಡ್ಡ ಚರ್ಚುಗಳು ಎದ್ದು ನಿಂತಿವೆ.

ಇಸ್ಲಾಮ್ ಧರ್ಮದಲ್ಲಿ ಮೆಕ್ಕಾ ಮದೀನ ನಂತರ ಜೆರುಸಲೇಮ್ ಅತ್ಯಂತ ಪವಿತ್ರ ನಗರ. ಪ್ರವಾದಿ ಮಹಮ್ಮದರು ಇಸ್ರಾ ರಾತ್ರಿಯಲ್ಲಿ ಸ್ವರ್ಗಕ್ಕೆ ಪ್ರಯಾಣ ಮಾಡಿದ್ದು ಎಂಬುದು ಕುರಾನಿನಲ್ಲಿದೆ.  ಒಂದು ಕಾಲದಲ್ಲಿ ಒಂದು ಬೆಟ್ಟದ ತುಂಬಾ ಆಲೀವ್ ಗಿಡ–ಮರಗಳು ಹರಡಿಕೊಂಡಿದ್ದವಂತೆ. ಅದಕ್ಕೆ ಆ ಬೆಟ್ಟಕ್ಕೆ ‘ಮೌಂಟ್ ಆಫ್ ಆಲೀವ್ಸ್’ ಅಂತ  ಹೆಸರು. ಬೆಟ್ಟದ ಅಂಚಿನಲ್ಲಿ ನಿಂತರೆ ಮುಂದೆ ಕಾಣಿಸುವುದು ಒಂದು ವಿಹಂಗಮ ನೋಟ. ಆಚೆಗಿನ ಬೆಟ್ಟದಲ್ಲಿ ಪುಟ್ಟ ಪುಟ್ಟ ದುಂಡನೆಯ ಗೋಪುರಗಳು. ಅಲ್ಲಲ್ಲಿ ಮನೆಗಳು.

ಅವುಗಳ ಮೇಲೆ ಜನ ತಾವು ಇಸ್ರೇಲಿಗಳೊ ಅಥವಾ ಪ್ಯಾಲೆಸ್ತೀನಿಗಳೊ ಎಂದು ಸಾರುವುದಕ್ಕೆ ಹಾರಾಡಲು ನೆಟ್ಟ ಬಾವುಟಗಳು. ‘ಮೌಂಟ್ ಆಫ್ ಆಲೀವ್ಸ್’ ಯಹೂದಿಗಳ ಸಾವಿರಾರು ಸಮಾಧಿಗಳೊಂದಿಗೆ ಕಣಿವೆಗೆ ಇಳಿಯುತ್ತದೆ. ಅದು ‘ವ್ಯಾಲಿ ಆಫ್ ಕಿದ್ರೊನ್’ ಅಥವಾ ‘ವ್ಯಾಲಿ ಆಫ್ ಡೆಡ್’. ಮಧ್ಯದಲ್ಲಿ ಆಧುನಿಕತ ಸಾರುವ ಟಾರ್ ರಸ್ತೆ. ಪುನಃ ಒಂದಿಷ್ಟು ಸಮಾಧಿಗಳು. ನಂತರ ಒಂದು ದೊಡ್ಡ ಗೋಡೆಯೊಂದಿಗೆ ಮತ್ತೊಂದು ಬೆಟ್ಟ ಶುರು.

ಈ ಬೆಟ್ಟಕ್ಕೆ ಆಂಗ್ಲ ಭಾಷೆಯಲ್ಲಿ ‘ಟೆಂಪಲ್ ಆಪ್ ಮೌಂಟ್’, ಹಿಬ್ರೂ ಭಾಷೆಯಲ್ಲಿ ‘ಹರ್ ಹಬಿಯತ್’ ಮತ್ತು ಅರಬ್ಬಿಯಲ್ಲಿ ‘ಅಲ್ ಹರಮ್ ಅಲ್ ಶರೀಫ್’ ಎಂಬ ಹೆಸರಿದೆ.ಜೆರುಸಲೇಮ್ ಎಂದಾಕ್ಷಣ ನೆನಪಿನ ಪಟದಲ್ಲಿ ಬಂಗಾರದ ಗುಮ್ಮಟ ಬರುತ್ತದೆ ಅಲ್ಲವೇಾ! ಅದೇ ‘ಡೂಮ್ ಆಫ್ ರಾಕ್’. ಅದಿರುವುದು ಇದೇ ಬೆಟ್ಟದ ಮೇಲೆ.

ಭದ್ರತೆಯ ದೃಷ್ಟಿಯಿಂದ ಕೇವಲ ಸೋಮವಾರದಂದು ಮಾತ್ರ ಪ್ರವಾಸಿಗರು ಒಳ ಹೋಗಬಹುದಿತ್ತು. ಅದೂ ಮುಂಜಾನೆ ಸಮಯದಲ್ಲಿ ಅಷ್ಟೆ. ಆದರೆ ನಾವು ಹೋಗಿದ್ದ ದಿನ ಶುಕ್ರವಾರವಾಗಿತ್ತು. ‘ನಮಾಜಿಗೆ ಮಧ್ಯಾಹ್ನದ ಹೊತ್ತಿಗೆ ಲಕ್ಷಕ್ಕೂ ಮೀರಿ ಜನ ಬರುತ್ತಾರೆ, ಒಳಗೆ ಹೋಗೋಕೆ ಆಗಲ್ಲ’ ಅಂತ  ನಮ್ಮ ಗೈಡ್ ಮರಿಯಾ ತನ್ನ ಅಸಹಾಯಕತೆ ವ್ಯಕ್ತಪಡಿಸಿದಳು. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬ ಪೇಚಾಟ ನಮ್ಮದಿತ್ತು. ಅದನ್ನು ನೋಡಲಾರದೆ ಮರಿಯಾ, ಒಬ್ಬ ಲೋಕಲ್ ಗೈಡ್ ಪತ್ತೆ ಮಾಡಿಯೇ ಬಿಟ್ಟಳು.

ಅವನ ಹೆಸರು ಅಲಿ. ಹೀಬ್ರೂ, ಅರಬ್ಬಿ, ಇಂಗ್ಲೀಷ್ ಮತ್ತು ರಷ್ಯನ್ ಭಾಷೆಯನ್ನು ಅರೆದು ಕುಡಿದ ಯುವಕ. ಒಳಗೆ ಕರೆದುಕೊಂಡು, ಎಲ್ಲವನ್ನೂ ತೋರಿಸಿ, ಪುನಃ ಸುರಕ್ಷಿತವಾಗಿ ಹೊರಕರೆದುಕೊಂಡು ಬರುವುದಕ್ಕೆ ಅವನು ನೂರು ಡಾಲರ್ ಕೇಳಿದ. ಡಾಲರ್ ಎಂದಾಕ್ಷಣ ರೂಪಾಯಿಯಲ್ಲಿ ಎಷ್ಟಾಗಬಹುದು ಅಂತ ಲೆಕ್ಕ ಹಾಕುವ ಬುದ್ಧಿ ಆ ಸಮಯಕ್ಕೆ ಬರಲಿಲ್ಲ. ಇಲ್ಲಿಯತನಕ ಬಂದೂ ಒಳಗೆ ಹೋಗಲಿಲ್ಲ ಅಂತ ಕೊರಗಬಾರದೆಂದು ಖುಷಿಯಿಂದ ಒಪ್ಪಿದೆವು.

ಬೆಟ್ಟದ ಮೇಲೆ ದೊಡ್ಡ ಆವರಣದೊಳಗೆ ಇರುವುದು ಪ್ರಮುಖವಾಗಿ ಮೂರು ಕಟ್ಟಡಗಳು. ಅಲ್ ಮಸ್ಜಿದ್ ಅಲ್ ಅಕ್ಸಾ, ಡೂಮ್ ಆಫ್ ರಾಕ್, ರಾಕ್ ಆಫ್ ಚೈನ್ಸ್ ಮತ್ತು ಮಸೀದಿಯ ನಾಲ್ಕು ಗೋಪುರಗಳು. ಅಲ್ಲಲ್ಲಿ ಕಾಣಿಸುವ ಸ್ತಂಭಗಳು ರೋಮನ್ ವಾಸ್ತುಶಿಲ್ಪದಲ್ಲಿವೆ.

‘ಡೂಮ್ ಆಫ್ ರಾಕ್’ ಅಸಲಿಗೆ ಒಂದು ಬಂಡೆಯ ಮೇಲೆ ಕಟ್ಟಲಾದ ಸ್ಮಾರಕ. ಅದರ ಒಳಗೊಂದು ಸಣ್ಣ ಗುಹೆ ಇದೆ. ಇಸ್ಲಾಮ್ ಧರ್ಮದ ಪ್ರಕಾರ, ಪ್ರವಾದಿ ಮಹಮ್ಮದ್ ಇಸ್ರಾ, ರಾತ್ರಿ ಪ್ರವಾಸದ ನಂತರ ಭೂಮಿಯ ಮೇಲೆ ಇಳಿದಿದ್ದು ಈ ಬಂಡೆಯ ಮೇಲಂತೆ. ನಂತರ ಮೊದಲ ಬಾರಿ ನಮಾಜು ಮಾಡಿದ್ದು ಈ ಗುಹೆಯೊಳಗೆ. ಯಹೂದಿ ಧರ್ಮದಲ್ಲಿ, ಪ್ರವಾದಿ ಅಬ್ರಹಮ್ ತನ್ನ ಮಗ ಐಸಾಕ್‌ನ ಬಲಿ ಕೊಡಲು ಸಜ್ಜಾಗಿದ್ದು ಇದೇ ಬಂಡೆಯ ಮೇಲೆ ಎಂಬ ಕಥೆ ಇದೆ. ಹೀಗಾಗಿ ಬಂಡೆಯ ಸುತ್ತಮುತ್ತಲಿನ ಪ್ರದೇಶ ಎರಡೂ ಧರ್ಮಗಳಿಗೆ ಪವಿತ್ರ. ಇದಿಷ್ಟು ಟೂರ್‌ಗೆ ಹೋಗುವ ಮುನ್ನ ಕೇಳಿದ್ದು ಮತ್ತು ಓದಿದ್ದು.     
  
ಕಿಕ್ಕಿರಿದ ಬೀದಿಗಳಲ್ಲಿ ಅಲಿ ನಡೆಯತೊಡಗಿದ. ಮೊದಲಿಗೆ ಸಿಕ್ಕಿದ್ದು ಸಾಲು ಸಾಲು ಅಂಗಡಿಗಳು. ಟೂರಿಸ್ಟ್‌ಗಳನ್ನು ಆಕರ್ಷಿಸುವಂತೆ ಜಗಮಗಿಸುವ ಲೈಟ್‌ಗಳು. ಬಹುತೇಕ ಬಿಳಿ ಹಾಗೂ ನೀಲಿ ಬಣ್ಣದ ಪಿಂಗಾಣಿ ಸಾಮಾನುಗಳು, ‘ಐ ಲವ್ ಜೆರುಸಲೇಮ್’ ಎಂದು ಕೆತ್ತಿರುವ – ಫ್ರಿಜ್ಜ್‌ಗೆ ಅಂಟಿಸುವ ಮ್ಯಾಗ್ನೇಟ್‌ಗಳು, ವ್ಯಾನಿಟಿ ಬ್ಯಾಗ್‌ಗಳು, ಕಾಶ್ಮೀರಿ ಶಾಲುಗಳು, ಇತ್ಯಾದಿ. ಒಟ್ಟಿನಲ್ಲಿ ಶಾಪಿಂಗ್ ಪ್ರಿಯರಿಗೆ ಹೇಳಿ ಮಾಡಿಸಿದಂತಹ ಬೀದಿ. ಅಂಗಡಿಗಳ ಮುಂದೆ ಅಲ್ಲಿನ ಯುವಕರು ಮೊಬೈಲ್‌ನಲ್ಲಿ ತೂರಿಕೊಂಡಿದ್ದರು.

ವಯಸ್ಸಾದವರು ಕೈಯಲ್ಲಿ ಕಪ್ಪು ಚಹಾದ (ಹಾಲು ರಹಿತ ಚಹಾ) ಕಪ್ ಹಿಡಿದು ಗಿರಾಕಿಗಳನ್ನು ಅಂಗಡಿಗೆ ಸ್ವಾಗತಿಸುತ್ತಿದ್ದರು. ಹಂಪಿಯಲ್ಲಿ ನಾವು ವಿದೇಶಿಗರನ್ನು ನೋಡಿ ಹಲ್ಲುಕಿರಿಯುವ ರೀತಿಯಲ್ಲಿ, ನಮ್ಮನ್ನು ಅಲ್ಲಿನ ಜನ, ಮಕ್ಕಳೂ ಸಹ ವಿಚಿತ್ರ ರೀತಿಯಲ್ಲಿ ನೋಡುತ್ತಿದ್ದರು. ಬಟ್ಟೆಯ ಶೈಲಿ–ಚಹರೆಯಿಂದ ‘ನಾವು ಭಾರತೀಯರು’ ಎಂದು ಹೇಳದೆಯೆ ಗೊತ್ತಾಗುತ್ತಿತ್ತು. ಅದಕ್ಕೆ ಕೆಲ ಅಂಗಡಿಯವರು ಅವರ ವ್ಯಾಪಾರಕ್ಕೊ ಅಥವಾ ತಮಾಷೆಗೋ ‘ಐ ಲವ್ ಇಂಡಿಯಾ, ಅಮಿತಾಬ್ ಬಚ್ಚನ್, ಶಾರುಕ್ ಖಾನ್’ ಎನ್ನುತ್ತ ನಮ್ಮನ್ನು ಅಂಗಡಿಯೊಳಗೆ ಸೆಳೆಯಲು ಹಲವಾರು  ಟ್ರಿಕ್ಸ್ ಮಾಡುತ್ತಿದ್ದರು.

ಅಂಗಡಿಗಳನ್ನು ದಾಟಿ ಮುಂದಕ್ಕೆ ಸಿಕ್ಕಿದ್ದು ವಾಸದ ಮನೆಗಳು. ಕೆಳಗಿನ ಅಂತಸ್ತಿನಲ್ಲಿ ದೊಡ್ಡ ಕಬ್ಬಿಣದ ಬಾಗಿಲು. ಮೇಲಕ್ಕೆ ಮನೆ. ಬಾಲ್ಕನಿಗಳಲ್ಲಿ ಹೂದಾನಿ. ಅವುಗಳಿಂದ ಹೊರಬಂದ ಬಣ್ಣಬಣ್ಣದ ಹೂವಿನ ಬಳ್ಳಿಗಳು. ಸದಾ ಮುಚ್ಚಿದ ಕಿಟಕಿಗಳು. ಹಾರಾಡುವ ಒಣಗಿದ ಬಟ್ಟೆಗಳು. ಇವುಗಳನ್ನು ದಾಟಿದಾಗ, ನಮ್ಮ ಪ್ರಯಾಣ ನಿಂತಿದ್ದು ದೊಡ್ಡದೊಂದು ಆವರಣದೊಳಗೆ. ಅಲ್ಲಿ ಕಾಲಿಟ್ಟಂತೆ ಮೊದಲಿಗೆ ಕಾಣಿಸಿದ್ದೇ, ಸ್ವಲ್ಪ ಎತ್ತರ ವೇದಿಕೆಯ ಮೇಲಿನ ‘ಡೂಮ್ ಆಫ್ ರಾಕ್’.

ಪಂಚಕೋನಾಕೃತಿಯ ವಿನ್ಯಾಸದಲ್ಲಿ ಭವ್ಯವಾಗಿ ಕಾಣುವ ಇದು ಮೂಲತಃ ಮಸೀದಿ ಅಲ್ಲ. ಕೇವಲ ಒಂದು ಐತಿಹಾಸಿಕ ಸ್ಮಾರಕ. ನೀಲಿ–ಬಿಳಿಯ ಚಿತ್ತಾರ ಕಟ್ಟಡವನ್ನು ಇನ್ನಷ್ಟು ಸುಂದರಗೊಳಿಸಿದೆ. ಗೋಡೆಗಳ ಮೇಲಿನ ತುದಿಯಲ್ಲಿ ಕುರಾನಿನ ಶ್ಲೋಕಗಳಿವೆ. ಅವುಗಳ ಮೇಲೆ ಹೊಳೆಯುವ ಬಂಗಾರ ಲೇಪಿತ ಗುಮ್ಮಟ. ಸ್ಮಾರಕದ ಒಳಹೊಕ್ಕಂತೆ ಮೈಮನಸ್ಸಲ್ಲಿ ತಣ್ಣನೆಯ ಅನುಭವ. ಛಾವಣಿಯಲ್ಲಿ ಹಸಿರು ಮತ್ತು ಬಂಗಾರ ಬಣ್ಣದ ನಕ್ಷೆಗಳು. ದೊಡ್ಡ ದೊಡ್ಡ ಕಮಾನುಗಳು.

ಗುಮ್ಮಟದ ದುರಸ್ತಿ ಕೆಲಸ ನಡೆದಿತ್ತು. ಹಾಗಾಗಿ, ಒಳಗಿನಿಂದ ಅದು ಹೇಗೆ ಕಾಣಿಸಬಹುದೆಂಬ ಆಸೆ ಆಸೆಯಾಗಿಯೇ ಉಳಿಯಿತು. ನೆಲದ ಮೇಲೆ ರತ್ನಗಂಬಳಿ ಹಾಸಲಾಗಿತ್ತು. ಜನ ಅಲ್ಲಲ್ಲಿ ಕುಳಿತು ನಮಾಜು ಮಾಡುತ್ತಿದ್ದರು. ಕೆಲವರು ಕುರಾನ್ ಪಠಿಸುತ್ತಿದ್ದರು. ಕೆಲವರು ದೇವರಲ್ಲಿ ಬೇಡಿಕೊಳ್ಳುತ್ತ ಭಾವುಕರಾಗಿ ಅಳುತ್ತಿದ್ದರು. ಆ ಗುಮ್ಮಟದೊಳಗೆ ಕಿರಿದಾದ ಗುಹೆಯಿತ್ತು. ಪ್ರವಾದಿ ಮಹಮ್ಮದ್ ನಮಾಜು ಮಾಡಿದ್ದು ಇದೇ ಗುಹೆ ಎಂದು ಅಲಿ ಹೇಳಿದ. ಹೆಣ್ಣು–ಗಂಡು ಎಂಬ ಯಾವುದೇ ಭೇದವಿಲ್ಲದೆ ಎಲ್ಲರಿಗೂ ಅಲ್ಲಿ ಪಾರ್ಥಿಸುವ ಮುಕ್ತ ಅವಕಾಶವಿತ್ತು.

ಪ್ರಾಂಗಣದ ತುಂಬ ಅನೇಕ ಕುಟುಂಬಗಳು. ಮಕ್ಕಳು ಆಟದಲ್ಲಿ ಚದುರಿದ್ದವು. ಯುವತಿಯರು ಸೆಲ್ಫಿ ಕ್ಲಿಕ್ಕಿಸುವುದರಲ್ಲಿ ಮಗ್ನರಾಗಿದ್ದರೆ, ವಯಸ್ಸಾದ ಮಹಿಳೆಯರು ನೆರಳಡಿ ಕುಳಿತು ಹರಟುತ್ತಿದ್ದರು. ಎಲ್ಲರೂ ಪಿಕ್‌ನಿಕ್ ಬಂದಿದ್ದಾರೆ ಅಂತನ್ನಿಸುತ್ತಿತ್ತು.

ಅದೇ ಅಂಗಳದ ದಕ್ಷಿಣ ಭಾಗದಲ್ಲಿ ಸಿಗುವುದು ‘ಅಲ್ ಮಸ್ಜಿದ್ ಅಲ್ ಅಕ್ಸಾ’. ಮೆಕ್ಕಾ ಇರುವ ದಿಕ್ಕಿಗೆ ಮುಖಮಾಡಿ ನಿಂತಿರುವ ಮಸ್ಜಿದ್ ಅನ್ನು ಉಮಯದ್ ಖಲೀಫ್ ಎಂಬ ರಾಜ ಕಟ್ಟಿಸಿದ್ದಾನೆಂಬ ಮಾತಿದೆ. ನಿರ್ಮಾಣಗೊಂಡ ನಿಖರವಾದ ಕಾಲದ ಕುರಿತು ಗೊಂದಲವಿದೆ. ಬ್ಯಾಬಿಲೋನಿಯನ್ಸ್ ಹಾಗೂ ರೋಮನ್ನರಿಂದ ಅನೇಕ ಸಲ ಈ ಕಟ್ಟಡಗಳು ನಾಶಗೊಂಡಿವೆ.

ನೆಲ ಉರುಳಿದಂತೆ ಆಯಾ ಕಾಲಕ್ಕೆ ಬರುವ ದೊರೆಗಳು ಸರಿಪಡಿಸಿದ್ದಾರೆ. ಸಲಾಹುದ್ದಿನ್ ಅಯ್ಯುಬಿ ಎಂಬ ರಾಜ ಮಾಡಿದ ಜೀರ್ಣೋದ್ಧಾರಕ್ಕಾಗಿ, ಸ್ಥಳೀಯ ಜನ ಅವನನ್ನು ಕೊಂಡಾಡುತ್ತಾರೆ. ಮಸೀದಿ ಒಳಗೆ ಕಟ್ಟಿಗೆಯಿಂದ ತಯಾರಿಸಿದ ವೇದಿಕೆ ನೋಡಲು ಎರಡು ಕಣ್ಣು ಸಾಲದಿತ್ತು. ಅದರ ಫೋಟೋ ಕ್ಲಿಕ್ಕಿಸುವ ಅಂತ ಕ್ಯಾಮೆರಾ ತೆಗೆದರೆ, ಗ್ರಹಚಾರಕ್ಕೆ ಅಷ್ಟೊತ್ತಿಗೆ ಬೆಳಿಗ್ಗೆಯಿಂದ ದಣಿದಿದ್ದ ಬ್ಯಾಟರಿ ತಣ್ಣಗೆ ಕಣ್ಣು ಮುಚ್ಚಿ ಕುಳಿತಿತ್ತು. ಹೀಗಾಗಿ ಮುಖ ಸಪ್ಪೆ ಮಾಡಿಕೊಂಡು ಬರುವಂತಾಯಿತು. 

ಒಟ್ಟಾರೆ ಹತ್ತು ದಿನದ ಪ್ರವಾಸದಲ್ಲಿ ಇಸ್ರೇಲ್‌ನಲ್ಲಿ ಕಳೆದಿದ್ದು ನಾಲ್ಕು ದಿನ. ಠಿಕಾಣಿ ಹೂಡಿದ್ದು ಬೆತ್ಲಹೆಮ್ ನಗರದಲ್ಲಿ. ಬೆತ್ಲಹೆಮ್‌ಯಿಂದ ಜೆರುಸಲೇಮ್‌ಗೆ ಬರಲು ಸಣ್ಣದೊಂದು ಚೆಕ್‌ಪೋಸ್ಟ್ ದಾಟಿ ಬರಬೇಕಿತ್ತು. ಕಾರಣ ಬೆತ್ಲಹೆಮ್ ಪ್ಯಾಲೆಸ್ತೀನ್‌ಗೆ ಸೇರಿದರೆ, ಜೆರುಸಲೇಮ್ ಇಸ್ರೇಲ್‌ಗೆ ಸೇರಿದೆ. ತಮ್ಮ ಪ್ರದೇಶವನ್ನು ಇಸ್ರೇಲ್‌ನ ಅತಿಕ್ರಮಣದಿಂದ ಉಳಿಸಿಕೊಳ್ಳಲು ಪ್ಯಾಲೆಸ್ತೀನ್ ಜನ ಮಾಡಿದ ಉಪಾಯ ನಿಜಕ್ಕೂ ದಂಗುಪಡಿಸುವಂತದ್ದು. ಈ ಎರಡೂ ಊರುಗಳ ಮಧ್ಯೆ ಇರುವುದು ದೊಡ್ಡ, ಒಂದು ಬಹು ದೊಡ್ಡ ಗೋಡೆ.

ಒಂದು ಬೆಳೆಯುತ್ತಿರುವ ಮತ್ತು ಇನ್ನೊಂದು ಕಳೆದುಹೋಗುವ ಅಂಚಿನಲ್ಲಿರುವ ದೇಶಗಳ ನಡುವಿನ ಗಡಿರೇಖೆ. ಇವುಗಳ ನಡುವೆ ಗಡಿರೇಖೆ ಎಳೆದ ಮಾನವ ನಿರ್ಮಿತ ದ್ವೇಷದ ಗೋಡೆ. ಹತ್ತಿ ಇಳಿಯುವ ಸಾಹಸಕ್ಕೆ ಕೊಂಚವೂ ಅವಕಾಶ ಇಲ್ಲದ ಗೋಡೆ. ತಮ್ಮನ್ನು, ತಮ್ಮ ಪ್ರದೇಶವನ್ನು ರಕ್ಷಿಸಿಕೊಳ್ಳುವ ಪ್ಯಾಲೆಸ್ತೀನ್‌ರ ಪರಿ ನಿಜಕ್ಕೂ ಸೋಜಿಗ ಅನಿಸಿತ್ತು.

ಮೊದಮೊದಲಿಗೆ ಯಾವುದು ಇಸ್ರೇಲ್ ಯಾವುದು ಪ್ಯಾಲೆಸ್ತೀನ್ ಪ್ರದೇಶ? ಯಾಕಿದು ಗೋಡೆ? ಒಂದೂ ಅರ್ಥವಾಗಲಿಲ್ಲ. ಆದರೆ ಕ್ರಮೇಣ ನಗರದೊಳಗೆ ಸಿಕ್ಕ ಗೋಡೆಯ ಮೇಲೆ ಕಾಣಿಸಿದ ಪ್ಯಾಲೆಸ್ತೀನ್ ಸ್ವಾತಂತ್ರ್ಯದ ಸ್ಲೋಗನ್ ಮತ್ತು ಸ್ಪ್ರೇ ಪೇಟಿಂಗ್‌ನಲ್ಲಿ ಬರೆದ ಪುಟ್ಟಪುಟ್ಟ ಪದ್ಯಗಳನ್ನು ಓದಿದ ನಂತರ, ಇವರು ತಮ್ಮ ಜಾಗಕ್ಕಾಗಿ ನಡೆಸುತ್ತಿರುವ ಹೋರಾಟ ಇನ್ನೂ ನಿಂತಿಲ್ಲ, ಮುಂದೆ ನಿಲ್ಲುವ ಲಕ್ಷಣಗಳೂ ಇಲ್ಲ ಎಂಬುದು ದೃಢವಾಯಿತು. ಸಂಖ್ಯೆಯಲ್ಲಿ ಕಡಿಮೆಯಿದ್ದರು, ಪ್ಯಾಲೆಸ್ತೀನ್ ಜನರ ಆತ್ಮವಿಶ್ವಾಸ ಬೃಹದಾಕಾರದಲ್ಲಿದೆ. ಅದು ಆ ಗೋಡೆಯನ್ನೂ ಮೀರಿ ಬೆಳೆದಿದೆ. 
***
ಟೂರ್ ಮುಗಿಸಿ ನಮ್ಮ ದೇಶಕ್ಕೆ ಹಿಂದಿರುಗಿದರೂ, ಇನ್ನೂ ಆ ವಿದೇಶದ ಜಾಗಗಳಲ್ಲೆ ಇದ್ದೇವೆಂಬ ಭಾವನೆ ಮಾತ್ರ ಇಂದಿಗೂ ಕಡಿಮೆಯಾಗಿಲ್ಲ. ಹೊಟ್ಟೆಗೆ ಹಿತವೆನಿಸುವ ಊಟ, ಕಣ್ಣಿಗೆ ಮುದ ನೀಡುವ ಪ್ರಕೃತಿ, ಮನಸ್ಸು ಉಲ್ಲಾಸಗೊಳ್ಳುವಂತಹ ಅಲ್ಲಿನ ಅದ್ಭುತ ಸ್ಥಳಗಳು ಇಂದಿಗೂ ಮನಸ್ಸನ್ನು ಕಾಡಿಸುತ್ತಲೇ ಇವೆ.

ಇದಕ್ಕಿಂತಲೂ ಹೆಚ್ಚಾಗಿ ತಲೆಯಲ್ಲಿ ಹುಳಬಿಟ್ಟಂತೆ ಗಡಿಭಾಗದಲ್ಲಿ ಸೆಟೆದುನಿಂತಿದ್ದ ಆ ಗೋಡೆ ಮಾತ್ರ ಮನುಷ್ಯನ ಹಟಮಾರಿತನದ ವಿಚಿತ್ರದ ಸಂಕೇತಗಳಂತೆ ಭಾಸವಾಗುತ್ತವೆ. ಇಡೀ ಭೂಮಿಯೇ ಮನುಕುಲಕ್ಕೆ ಸೇರಿರುವಾಗ, ನಿನ್ನದಿಷ್ಟು ಜಾಗ–ನನ್ನದಿಷ್ಟು ಜಾಗ ಎಂದು ಬಡಿದಾಡಿಕೊಳ್ಳುವ ಅಗತ್ಯವಿದೆಯೇ? ಹಂಚಿಕೊಂಡು ಬಾಳು ಎಂಬ ನೀತಿ ಮಾಯವಾಗಿ ಕಿತ್ತುಕೊಂಡು ಬಾಳುತ್ತೇನೆ ಎನ್ನುವ ಭಾವಕ್ಕೆ ಆ ದೈತ್ಯಾಕಾರದ ಗೋಡೆಗಳು ಮೌನ ಸಾಕ್ಷಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT