ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಿ–ಪಕ್ಷಿಗಳ ಪಾಠಶಾಲೆಯಲ್ಲಿ ಬದುಕಿನ ಕಲಿಕೆ

ಪಿಸುಗುಡುವ ಚಿತ್ರಪಟ * ಪ್ರಕೃತಿ
Last Updated 30 ಏಪ್ರಿಲ್ 2016, 19:36 IST
ಅಕ್ಷರ ಗಾತ್ರ

ಫೋಟೊಗ್ರಫಿಯಲ್ಲಿ ಅಪ್ಪನೇ ನನ್ನ ಗುರು. ಅವರು ವನ್ಯಜೀವಿ ಛಾಯಾಗ್ರಾಹಕರು. ನಾನು ಚಿಕ್ಕವಳಿದ್ದಾಗ ಅವರ ಜೊತೆ ಕಾಡಿಗೆ ಹೋಗುತ್ತಿದ್ದೆ. ಹೈಸ್ಕೂಲಿನ ಹಂತದಲ್ಲಿ ನನಗೆ ಫೋಟೊಗ್ರಫಿ ಮಾಡಬೇಕು ಎನಿಸಿತು. ನನ್ನ ಆಸೆಯನ್ನು ಅಪ್ಪನಲ್ಲಿ ಹೇಳಿಕೊಂಡೆ.

ಅವರು ಬೆನ್ನುತಟ್ಟಿದರು. ಹೀಗೆ ನನ್ನ ವನ್ಯಜೀವಿ ಛಾಯಾಗ್ರಹಣ ಆರಂಭವಾಯಿತು. ಮನೆಯಲ್ಲಿ ಅಮ್ಮ, ಅಕ್ಕನೂ ನನ್ನ ಬೆಂಬಲಿಸಿದರು. 

ಅದು 2009ನೇ ಇಸವಿ. ಒಂದು ಪಕ್ಷಿ ಬಾಯಿಯಲ್ಲಿ ಆಹಾರವನ್ನು ಇಟ್ಟುಕೊಂಡ ಚಿತ್ರವನ್ನು ಕ್ಲಿಕ್ಕಿಸಿದೆ. ಅದು, ಛಾಯಾಗ್ರಹಣದ ಗಂಭೀರ ವಿದ್ಯಾರ್ಥಿಯಾಗಿ ನಾನು ತೆಗೆದ ಮೊದಲ ಚಿತ್ರ. ನಂತರ ಹುಲಿಯ ಚಿತ್ರವೊಂದನ್ನು ತೆಗೆದೆ. ಅದು ನನಗೆ ಹೆಚ್ಚು ಖುಷಿ ಕೊಟ್ಟ ಚಿತ್ರ.

ನನ್ನ ಈವರೆಗಿನ ವನ್ಯಜೀವಿ ಛಾಯಾಗ್ರಹಣದಲ್ಲಿ ಹಲವು ನೆನಪುಗಳು ಅಚ್ಚಳಿಯದೇ ಕಾಡುತ್ತಿವೆ. ಮಹಾರಾಷ್ಟ್ರದ ತಡೋಬಾ ಹುಲಿ ರಕ್ಷಿತಾರಣ್ಯದಲ್ಲಿ ಒಂದು ಶಿಬಿರ ಇತ್ತು. ಸಮೀಪದ ಸರೋವರದ ಬಳಿ ಹುಲಿಗಾಗಿ ಕಾಯುತ್ತಿದ್ದೆವು. ಸ್ವಲ್ಪ ಸಮಯದ ನಂತರ ಜೀಪಿನಲ್ಲಿ ಬೇರೊಂದು ಕಡೆಗೆ ತೆರಳಿದೆವು.

ಅಷ್ಟರಲ್ಲಿ ಹುಲಿ ಕಾಣಿಸಿಕೊಂಡಿತು. ಅದು ನಮ್ಮ ಜೀಪ್ ಸಮೀಪದಲ್ಲಿಯೇ ಹಾದುಹೋಯಿತು. ಹುಲಿ ನಾಲ್ಕೈದು ಅಡಿಗಳಷ್ಟು ಸಮೀಪದಲ್ಲಿತ್ತು. ಕ್ಯಾಮೆರಾ ಸಜ್ಜಾಗಿಟ್ಟುಕೊಂಡಿದ್ದರೂ, ಹುಲಿಯನ್ನು ಫೋಕಸ್ ಮಾಡುವುದನ್ನು ಬಿಟ್ಟು ಸುಮ್ಮನೆ ನೋಡುತ್ತ ನಿಂತೆ. ನಮ್ಮನ್ನು ನೋಡುತ್ತ ಹುಲಿ ಸುಮ್ಮನೆ ಮುಂದೆಹೋಯಿತು. ಹುಲಿಯೊಂದಿಗಿನ ಮುಖಾಮುಖಿ ನನ್ನ ನೆನಪುಗಳ ಬುತ್ತಿಯ ಅವಿಸ್ಮರಣೀಯ ಘಟನೆಗಳಲ್ಲೊಂದು.

ನಾನು ಚಿಕ್ಕಂದಿನಿಂದಲೂ ಕಾಡಿಗೆ ಹೋಗುತ್ತಿದ್ದೇನೆ. ಬಂಡೀಪುರ, ಕಬಿನಿ, ನಾಗರಹೊಳೆ, ಮಹಾರಾಷ್ಟ್ರದ ತಡೋಬಾ, ಮುದ್ದುಮಲೈ– ಹೀಗೆ ವಿವಿಧ ಅಭಯಾರಣ್ಯಗಳಲ್ಲಿ ಚಿತ್ರಗಳಿಗಾಗಿ ಹುಡುಕಾಟ ನಡೆಸಿದ್ದೇನೆ. ಮೊದಲ ಸಲ ಛಾಯಾಗ್ರಹಣಕ್ಕೆಂದು ಹೋದಾಗ ಅಪ್ಪ ಏನನ್ನೂ ಹೇಳಿಕೊಡಲಿಲ್ಲ. ‘ನೀನು ಚಿತ್ರಗಳನ್ನು ತೆಗೆ, ಆಮೇಲೆ ನೋಡೋಣ’ ಎಂದರು. ನಂತರದ ಪ್ರತಿ ಶಿಬಿರದಲ್ಲಿ ಲೈಟ್, ಶಾಟ್‌ಗಳ ಬಗ್ಗೆ ಸೂಕ್ಷ್ಮಗಳನ್ನು ಹೇಳಿಕೊಟ್ಟರು. ಈಗಲೂ ಪಾಠ, ತಪ್ಪುಗಳ ತಿದ್ದುವಿಕೆ ಮುಂದುವರಿದಿದೆ.

ನನ್ನ ದೃಷ್ಟಿಯಲ್ಲಿ ಛಾಯಾಗ್ರಹಣ ಎನ್ನುವುದು, ನಾವು ಹೇಳಬೇಕು ಎಂದುಕೊಂಡ ವಿಚಾರಗಳನ್ನು ಚಿತ್ರಗಳ ಮೂಲಕ ಕಥೆಯ ರೂಪದಲ್ಲಿ ಹೇಳುವುದು. ಉದಾ: ಪಕ್ಷಿಗಳ ಛಾಯಾಗ್ರಹಣದಲ್ಲಿ ಅವುಗಳ ಬದುಕು – ಜೀವನ ಕ್ರಮವನ್ನು ಚಿತ್ರಗಳಲ್ಲಿ ಹೇಳಬೇಕು.

ಬೇರೆ ಯಾರಿಗಾದರೂ ನಾವು ಚಿತ್ರಗಳನ್ನು ತೋರಿಸುವಾಗ ಚಿತ್ರಗಳ ಸಂದರ್ಭ ಮತ್ತು ಅದರ ಆಶಯ ಸಹ ಅವರಿಗೆ ಅರ್ಥವಾಗುವಂತೆ ಇರಬೇಕು. ಇರುವುದನ್ನು ಇರುವಂತೆಯೇ ತೋರಿಸುವುದು ನನ್ನ ಪೋಟೊಗ್ರಫಿ. ವನ್ಯಜೀವಿ ಸಂರಕ್ಷಣೆ ಬಗ್ಗೆ ಜಾಗೃತಿ ಉಂಟು ಮಾಡುವುದು ಕೂಡ ನನ್ನ ಆಶಯವಾಗಿದೆ.

ಹುಲಿಗಳ ಬೆನ್ನುಹತ್ತಿ ತೆಗೆದಿರುವ ಛಾಯಾಚಿತ್ರಗಳು ನನಗೆ ಖುಷಿ ನೀಡಿವೆ. ಒಮ್ಮೆ– ಹುಲಿಯೊಂದು ಕೊಳದ ಒಂದು ಬದಿಯಲ್ಲಿ ನೀರು ಕುಡಿಯುತ್ತಿತ್ತು. ಅದೇ ಸಮಯದಲ್ಲಿ ಕೊಳದ ಮತ್ತೊಂದು ಬದಿಯಲ್ಲಿ ಹಂದಿಯೊಂದು ನೀರು ಕುಡಿಯಲು ಬಂದಿತು.

ಎದುರಿನ ಹಂದಿಯ ಮೇಲೆ ಹುಲಿ ದೃಷ್ಟಿ ಬೀರಿತು. ಮತ್ತೊಂದು ಚಿತ್ರದಲ್ಲಿ ಹುಲಿಗೆ ಮುಳ್ಳು ಚುಚ್ಚಿದೆ. ಕುಂಟುತ್ತಿರುವ ಹುಲಿಯ ನೋವು ಆ ಮುಖದಲ್ಲಿ ಕಾಣುತ್ತಿದೆ. ಹುಲಿಗಳು ತಮ್ಮ ತಂಗಿಯರು ಇಲ್ಲವೇ ಕುಟುಂಬದ ಬಳಗ ಒಂದು ಕಡೆ ಸೇರಿದರೆ ಪರಸ್ಪರ ಕೆನ್ನೆಗಳನ್ನು ತಾಕಿಸಿಕೊಳ್ಳುತ್ತವೆ.

ಹೀಗೆ ವೈವಿಧ್ಯಮಯ ಚಿತ್ರಗಳನ್ನು ಸೆರೆ ಹಿಡಿದೆ. ಅಂದಹಾಗೆ, ಹುಲಿಗಳ ಛಾಯಾಗ್ರಹಣಕ್ಕೆ  ಬೇಸಿಗೆ ಕಾಲ ಉತ್ತಮ. ಹೆಚ್ಚು ತಾಪಮಾನ ಇರುವುದರಿಂದ ಹುಲಿಗಳು ನೀರು ಹುಡುಕಿ ಹೊರಬರುತ್ತವೆ. ಆಗ ಒಳ್ಳೆಯ ಚಿತ್ರಗಳು ದೊರೆಯುವ ಸಾಧ್ಯತೆ ಹೆಚ್ಚು.

ಬಳ್ಳಾರಿ ಜಿಲ್ಲೆಯ ದರೋಜಿ ಕರಡಿಧಾಮಕ್ಕೆ ತೆರಳಿದಾಗಿನ ಅನುಭವವೊಂದನ್ನು ಇಲ್ಲಿ ಹೇಳಬೇಕು. ತಾಯಿ ಮತ್ತು ಮರಿ ಕರಡಿ ಒಂದು ಕಡೆ ಇದ್ದವು. ಮತ್ತೊಂದು ಕರಡಿ ಅಲ್ಲಿಗೆ ಬಂದ ತಕ್ಷಣ ತಾಯಿ ಕರಡಿ ಉಗ್ರರೂಪ ತಾಳಿ ಅದನ್ನು ಅಟ್ಟಿಸಿಕೊಂಡು ಹೋಯಿತು. ಮರಿಗಳು ಇದ್ದಾಗ ಪ್ರಾಣಿಗಳು ಸುರಕ್ಷತೆಗೆ ಒತ್ತು ನೀಡುತ್ತವೆ. ವನ್ಯಜೀವಿ ಛಾಯಾಗ್ರಹಣದ ಮೂಲಕ ಪ್ರಾಣಿ, ಪಕ್ಷಿಗಳ ಜೀವನ ಕ್ರಮದ ಅಧ್ಯಯನದ ಲಾಭ ನನ್ನದಾಗುತ್ತಿದೆ.

ಒಳ್ಳೆಯ ಚಿತ್ರಗಳು ಬೇಕು ಎಂದರೆ ಶ್ರಮ ಅಗತ್ಯ. ನಾನು ವನ್ಯಜೀವಿ ಛಾಯಾಗ್ರಹಣದಲ್ಲಿ ಮುಂದುವರಿದಂತೆ ಪ್ರಾಣಿ–ಪಕ್ಷಿ ಪ್ರಪಂಚದ ರೀತಿ ನೀತಿಗಳನ್ನು ಕೊಂಚ ಗ್ರಹಿಸಿದೆ. ಸುತ್ತಮುತ್ತ ಹದ್ದಿನ ಚಲನವಲನ ಇದ್ದರೆ ಪಕ್ಷಿಗಳು ಗೂಡಿಗೆ ಹೋಗುವುದಿಲ್ಲ. ಯಾವುದೇ ತೊಂದರೆ ಇಲ್ಲ ಎನ್ನುವುದನ್ನು ಅರಿತ ಮೇಲೆಯೇ ಮರಿಗಳಿಗೆ ಆಹಾರ ಕೊಡಲು ಹೋಗುತ್ತವೆ.

ವನ್ಯಜೀವಿ ಛಾಯಾಗ್ರಹಣದಲ್ಲಿ ಅಗತ್ಯವಿರುವುದು ತಾಳ್ಮೆ. ಕೆಲವು ವೇಳೆ ಕೈಗಳು ಜೋಮು ಹಿಡಿಯುತ್ತವೆ. ದೈಹಿಕ – ಮಾನಸಿಕ ಒತ್ತಡವನ್ನು ಸಹಿಸಿಕೊಳ್ಳಬೇಕು. ಚಿತ್ರಕ್ಕಾಗಿ ನಾವು ಸಿದ್ಧವಾಗಿದ್ದಾಗ ಪ್ರಾಣಿಗಳು ಬರುತ್ತವೆ ಎಂದು ನಿಖರವಾಗಿ ಹೇಳಲು ಸಾಧ್ಯವಿಲ್ಲ.

ಆರೇಳು ಕಿಲೋ ತೂಕದ ಸಲಕರಣೆಗಳನ್ನು ಹೊತ್ತು ಸಾಗಬೇಕು. ವನ್ಯಜೀವಿ ಛಾಯಾಗ್ರಹಣದ ಈ ಸಣ್ಣ ಸಣ್ಣ ಸವಾಲುಗಳು ನನ್ನಲ್ಲಿ ಸಾಹಸ ಮನೋಭಾವ ಬೆಳೆಸಿವೆ.

ಛಾಯಾಗ್ರಹಣದ ಜೊತೆಗೆ ನನ್ನ ಎಂಜಿನಿಯರಿಂಗ್ ಕಲಿಕೆಯೂ ನಡೆದಿದೆ. ನಮ್ಮ ಕಾಲೇಜಿನಲ್ಲಿ ಸಮಾನ ಮನಸ್ಕರ ಗೆಳೆಯರು ಕೂಡಿ ಛಾಯಾಗ್ರಹಕರ ಗುಂಪು ಮಾಡಿಕೊಂಡಿದ್ದೇವೆ. ಒಟ್ಟಾಗಿ ಛಾಯಾಗ್ರಹಣಕ್ಕೆ ತೆರಳುತ್ತೇವೆ.

ನಾನು ‘ನಿಕಾನ್ ಡಿ 700’ ಕ್ಯಾಮೆರಾ ಮತ್ತು 150*600 ಲೆನ್ಸ್ ಬಳಸುತ್ತೇನೆ. ಆರಂಭದಲ್ಲಿ ಡಿಜಿಟಲ್ ಕ್ಯಾಮೆರಾಗಳನ್ನು ಬಳಸಿರಲಿಲ್ಲ. ಪಕ್ಷಿಗಳ ಚಿತ್ರಗಳನ್ನು ತೆಗೆಯಲು ಉತ್ತಮ ಲೆನ್ಸ್‌ ಅಗತ್ಯವಿದೆ. ಈ ಲೆನ್ಸ್‌ ಒಳ್ಳೆಯ ಫಲಿತಾಂಶ ನೀಡುತ್ತಿದೆ.

ನನಗೆ ಹದಿನೇಳು ವರುಷವಿದ್ದಾಗ ಲಂಡನ್ನಿನ ರಾಯಲ್ ಫೋಟೊಗ್ರಫಿ ಅಸೋಸಿಯೇಷನ್‌ನ ಅಸೋಸಿಯೇಟ್ ಶಿಫ್ (ಎಆರ್‌ಪಿಎಸ್‌) ಸಿಕ್ಕಿತ್ತು. ಇದು ಜಾಗತಿಕವಾಗಿ ಯುವ ಛಾಯಾಗ್ರಹಕರಿಗೆ ದೊರೆಯುವ ಮನ್ನಣೆ.

ಒಟ್ಟು ಹದಿನೈದು ಚಿತ್ರಗಳನ್ನು  ಕಳುಹಿಸಿದ್ದೆ. ಅವುಗಳನ್ನು ಮೌಲ್ಯಮಾಪನ ಮಾಡಿ ನನಗೆ ಈ ಮನ್ನಣೆ ನೀಡಿದರು. ಈ ಮನ್ನಣೆ ನನಗೆ ಆರಂಭಿಕ ಮೆಟ್ಟಿಲಾಯಿತು.

ಅರಬ್‌ ದೇಶದಲ್ಲಿ ನಡೆದ ಛಾಯಾಚಿತ್ರ ಸ್ಪರ್ಧೆಯಲ್ಲಿ ನನ್ನ ಎರಡು ಚಿತ್ರಗಳು ಆಯ್ಕೆಯಾಗಿದ್ದವು. ನನ್ನ ಛಾಯಾಚಿತ್ರಗಳ ಮೂಲಕ ವನ್ಯಜೀವಿ ಸಂರಕ್ಷಣೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಅತ್ಯಂತ ಮುಖ್ಯವಾದುದು ಎಂದುಕೊಂಡಿದ್ದೇನೆ.

*
ಪ್ರಕೃತಿ, ಹಿರಿಯ ವನ್ಯಜೀವಿ ಛಾಯಾಗ್ರಹಕ ಪ್ರವೀಣ್ ಕುಮಾರ್ ಅವರ ಪುತ್ರಿ. ಪ್ರಸ್ತುತ ಎಂಜಿನಿಯರಿಂಗ್ ವಿದ್ಯಾರ್ಥಿನಿ ಆಗಿರುವ ಅವರಿಗೆ ವನ್ಯಜೀವಿ ಛಾಯಾಗ್ರಹಣ ಆಪ್ತ ಹವ್ಯಾಸ. ಬಿಡುವಿದ್ದಾಗ ಕ್ಯಾಮೆರಾ ತೋಳಿಗೇರಿಸಿ ಪ್ರಾಣಿ–ಪಕ್ಷಿಗಳ ಜಗತ್ತು ಹುಡುಕಿಕೊಂಡು ಹೋಗುತ್ತಾರೆ. ಲಂಡನ್‌ನ ರಾಯಲ್ ಫೋಟೊಗ್ರಫಿ ಸಂಸ್ಥೆಯಿಂದ ‘ಎಆರ್‌ಪಿಎಸ್‌’ ಮನ್ನಣೆ ಪಡೆದ ಸಾಧನೆ ಅವರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT