ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೇಸ್‌ಬುಕ್‌ ಚಟಕ್ಕೆ ತಿಲಾಂಜಲಿ ಇಟ್ಟ ಆ ಕ್ಷಣ...

ಅಕ್ಷರ ಗಾತ್ರ

ಸಮಸ್ಯೆ ಶುರುವಾಗಿದ್ದೇ 2009ರಲ್ಲಿ. ಆ ದಿನ ನಾನು ಪೆರುವಿನ ಅಮೆಜಾನ್‌ ಕಾಡಿನಲ್ಲಿ ದೋಣಿಯಲ್ಲಿ ವಿಹರಿಸುತ್ತಿದ್ದೆ. ಬಿಯರ್‌ ಹೀರುತ್ತಾ ವಿಶ್ರಾಂತಿ ಮೂಡಿನಲ್ಲಿದ್ದ ನನ್ನ ಛಾಯಾಚಿತ್ರವನ್ನು ಗೆಳತಿ ಫಿಯೊರೆಲಾ ಮೊಬೈಲ್‌ನಲ್ಲಿ ಸೆರೆಹಿಡಿದಳು. ಅಷ್ಟಕ್ಕೆ ಆಕೆ ಸುಮ್ಮನಾಗಲಿಲ್ಲ. ‘ಈ ಚಿತ್ರ ಖಂಡಿತ ಫೇಸ್‌ಬುಕ್‌ ಖಾತೆಯ ಪ್ರೊಫೈಲ್‌ ಫೋಟೊವಾಗಲಿದೆ’ ಎಂದು ನಗು ಬೀರಿದಳು. ಆಕೆಯ ಊಹೆಯಂತೆ ಅದು ನಿಜವಾಯಿತು.

ಅಷ್ಟರಲ್ಲಿ ನನ್ನ ಫೇಸ್‌ಬುಕ್‌ ಹುಚ್ಚು ಅತಿಯಾಗಿತ್ತು. ಫೇಸ್‌ಬುಕ್‌ ವ್ಯಸನವು ನೈಜ ಪ್ರಕ್ರಿಯೆ ಎನ್ನುವುದಕ್ಕಿಂತ ಮೊದಲೇ ಯೋಚಿಸಿ ಮಾಡುವಂಥ ಅಪರಾಧ ಎನ್ನಬಹುದೇನೊ? ಪದೇ ಪದೇ ಸಂದೇಶಗಳನ್ನು ಸಿದ್ಧಪಡಿಸಿಟ್ಟುಕೊಂಡಿರುತ್ತಿದ್ದ ನಾನು ಅವುಗಳನ್ನು ಫೇಸ್‌ಬುಕ್‌ ಖಾತೆಯಲ್ಲಿ ಹಾಕಲು ಉತ್ತಮ ಸಮಯಕ್ಕಾಗಿ ಕಾದಿರುತ್ತಿದ್ದೆ. ದೇಶದ ಕೆಲ ಭಾಗದ ಜನರು ಮಧ್ಯಾಹ್ನ ಊಟ ಮುಗಿಸಿಕೊಂಡು ಕಚೇರಿಗೆ ಮರಳುವ ಸಮಯ ಹಾಗೂ ಮತ್ತೊಂದು ಭಾಗದ ಜನರ ವಿರಾಮದ ಸಮಯ ಆರಂಭವಾಗುವುದನ್ನು ಗಮನದಲ್ಲಿಟ್ಟುಕೊಂಡು ಬರಹಗಳನ್ನು ಪೋಸ್ಟ್‌ ಮಾಡುತ್ತಿದ್ದೆ. ಆ ಸಮಯದಲ್ಲಿ ಹೆಚ್ಚಿನವರು ಫೇಸ್‌ಬುಕ್‌ನಲ್ಲಿ ಮಗ್ನರಾಗಿರುತ್ತಾರೆ ಎಂಬುದು ನನ್ನ ಭಾವನೆ.

ಇದೇ ಕಾರಣಕ್ಕಾಗಿ ಸ್ನೇಹಿತರ ವಲಯದಲ್ಲಿ ನಾನು ‘ಫೇಸ್‌ಬುಕ್‌ನಲ್ಲಿ ಸಕ್ರಿಯವಾಗಿರುವ ವ್ಯಕ್ತಿ’ ಎನಿಸಿಕೊಂಡಿದ್ದೆ. ‘ಈತ ಒಂದು ದಿನ ಖಂಡಿತ ಫೇಸ್‌ಬುಕ್‌ನಿಂದ ಬೇಸತ್ತು ದೂರವಾಗುತ್ತಾನೆ’ ಎಂದು  ಭಾವಿಸುವಷ್ಟು ಸಾಮಾಜಿಕ ಜಾಲತಾಣದಲ್ಲಿ ಮುಳುಗಿ ಹೋಗಿದ್ದೆ. ಎಷ್ಟೇ ಪ್ರಯತ್ನಿಸಿದರೂ ಫೇಸ್‌ಬುಕ್‌ ಬಳಕೆಯ ಚಟದಿಂದ ದೂರ ಇರಲು ಸಾಧ್ಯವೇ ಆಗಲಿಲ್ಲ. 2007ರ ಜೂನ್‌ 11ರಂದು ಮೊದಲ ಬಾರಿ ಸ್ನೇಹಿತನೊಬ್ಬ ‘ಫ್ರೆಂಡ್‌ ರಿಕ್ವೆಸ್ಟ್‌’ ಕಳುಹಿಸಿದ್ದ.

ಫೇಸ್‌ಬುಕ್‌ನಲ್ಲಿ ಖಾತೆ ಹೊಂದಿದ್ದರಿಂದ ಉಪಯೋಗವೂ ಆಗಿದೆ. ಹಿಂದಿನ ಸ್ನೇಹಿತರು ಹಾಗೂ ಮಾಜಿ ಸಹೋದ್ಯೋಗಿಗಳೊಂದಿಗೆ ಮತ್ತೆ ಸಂಪರ್ಕ ಕಲ್ಪಿಸಲು ಸಾಧ್ಯವಾಯಿತು. ಪ್ರಮುಖ ಲೀಗ್‌ನ ಖ್ಯಾತ ಬ್ಯಾಸ್ಕೆಟ್‌ಬಾಲ್‌ ಆಟಗಾರನೊಬ್ಬ ಫೇಸ್‌ಬುಕ್‌ನಲ್ಲಿ ಸ್ನೇಹ ಬಯಸಿ ಮನವಿ ಕಳುಹಿಸಿದ್ದ. ನಗರದ ಕೌನ್ಸಿಲ್‌ ಸದಸ್ಯರೊಂದಿಗೆ ಫೇಸ್‌ಬುಕ್‌ನಲ್ಲಿ ಸಂಭಾಷಣೆ ನಡೆಸುತ್ತಿದ್ದೆ. ಗೇಬ್ರಿಯಲ್ ಗಾರ್ಸಿಯಾ ಮಾರ್ಕ್ವೆಜ್‌, ಮೈಕಲ್‌ ಜಾಕ್ಸನ್‌ ನಿಧನರಾದ ಮಾಹಿತಿ ಗೊತ್ತಾಗಿದ್ದೇ ಸಾಮಾಜಿಕ ಜಾಲತಾಣದಿಂದ. ಇದರಿಂದಾಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಸಾಧ್ಯವಾಯಿತು. ಲಾಸ್‌ ಏಂಜಲಿಸ್‌ನಲ್ಲಿ ಯಾವಾಗ ಮಳೆಯಾಗುತ್ತೆ, ಬ್ರೂಕ್ಲಿನ್‌ನಲ್ಲಿ ಯಾವಾಗ ಸೂರ್ಯಾಸ್ತಮವಾಗುತ್ತೆ ಎಂಬ ವಿಷಯ ಗೊತ್ತಾಗುತ್ತಾ ಹೋಯಿತು.

ಅಷ್ಟೇ ಅಲ್ಲ; ನನ್ನದೇ ಆದ ಸ್ನೇಹಿತರ ಒಂದು ದೊಡ್ಡ ಗುಂಪು ಇದೆ. ಕಾಡಿನಲ್ಲಿ ಮರ ಬಿದ್ದ ವಿಷಯದ ಬಗ್ಗೆಯೂ ಅವರು ಪ್ರತಿಕ್ರಿಯಿಸುತ್ತಾರೆ. ನಂತರ ಆ ಪ್ರತಿಕ್ರಿಯೆಗೆ ಹಲವರು ತಮ್ಮ ಅಭಿಮತವನ್ನೂ (ಲೈಕ್ಸ್‌) ವ್ಯಕ್ತಪಡಿಸುತ್ತಾರೆ. ನನ್ನ ಖಾತೆಯಲ್ಲಿರುವ 2,308 ಸ್ನೇಹಿತರಿಗೆ ಜುಲೈನಲ್ಲಿ 150 ಬಾರಿ ಸಂದೇಶವನ್ನು ಪೋಸ್ಟ್‌ ಮಾಡಿದ್ದೆ. ಆ ನನ್ನ ಬರಹಗಳಿಗೆ ಒಟ್ಟು 1,110 ಅಭಿಮತಗಳು (ಲೈಕ್ಸ್‌) ವ್ಯಕ್ತವಾಗಿದ್ದವು. ಕೆಲವೊಮ್ಮೆ ಅವುಗಳಿಗೆ ಪ್ರತಿಕ್ರಿಯಿಸುತ್ತಿದ್ದೆ. ಕೆಲವೊಮ್ಮೆ ನನ್ನ ಬರಹಕ್ಕೆ ನಾನೇ ಅಭಿಮತ ಸೂಚಿಸುತ್ತಿದ್ದೆ. ಈ ತಿಂಗಳಲ್ಲಿ ಎರಡು ದಿನ ಮಾತ್ರ ನಾನು ಯಾವುದೇ ಬರಹವನ್ನು ಪೋಸ್ಟ್‌ ಮಾಡಲಿಲ್ಲ. ಆದರೆ, ಕೆಲವರು ಪೋಸ್ಟ್‌ ಮಾಡಿದ ವಿಡಿಯೊಗಳನ್ನು ಹಂಚಿಕೊಳ್ಳುವುದರಲ್ಲಿಯೇ ಸಮಯ ಕಳೆದು ಹೋಯಿತು.

ನನ್ನ ಖಾತೆಯ ವಾಲ್‌ಪೇಜ್‌ನಲ್ಲಿ ಹುಟ್ಟು ಹಬ್ಬಕ್ಕೆ ಶುಭಾಶಯ ಕೋರಿ ಬರುವ ಬರಹಗಳಿಗೆ ಅಭಿಮತ (ಲೈಕ್ಸ್‌) ವ್ಯಕ್ತಪಡಿಸಬೇಕು ಎನ್ನುವ ತುಡಿತ ಇರುತಿತ್ತು. ಒಮ್ಮೆ ಫೇಸ್‌ಬುಕ್‌ ಖಾತೆಗೆ ಲಾಗಿನ್‌ ಆಗಿ ಬ್ರೌಸ್‌ ಮಾಡಿದರೆ ಒಂದರ ಹಿಂದೆ ಒಂದರಂತೆ ಸಾಕಷ್ಟು ವಿಷಯಗಳು. ಜೊತೆಗೆ ವಾಲ್‌ಪೇಜ್‌ನಲ್ಲಿ ಕೆಲ ವಿಷಯಗಳ ಬಗ್ಗೆ ಕೊಂಚ ವಿವರವನ್ನು ಪೋಸ್ಟ್‌ ಮಾಡಿ ಕೊನೆಯಲ್ಲಿ ‘ಕಂಟಿನ್ಯೂ ರೀಡಿಂಗ್‌ ದ ಮೇಯ್ನ್ ಸ್ಟೋರಿ...’ ಎಂಬ ಟಿಪ್ಪಣಿ ಬೇರೆ.

ಆದರೆ, ಕ್ರಮೇಣ ಫೇಸ್‌ಬುಕ್‌ ಚಟದಿಂದ ಹೊರಬರಬೇಕು ಅನಿಸಿತು. ಒಂದು ದಿನ ನನ್ನ ಹಾಗೂ ಫೇಸ್‌ಬುಕ್‌ ನಡುವಿನ ಸಂಬಂಧ ಕಳಚಿಬಿತ್ತು. ಆಗಸ್ಟ್‌ ಎರಡನೆಯ ವಾರದ ವೇಳೆಗೆ ನನ್ನ ಖಾತೆಯನ್ನು ನಿಷ್ಕ್ರಿಯಗೊಳಿಸಿದೆ. ಈ ಪ್ರಕ್ರಿಯೆಯನ್ನು ಯಾವಾಗ ಬೇಕಾದರೂ ಮಾಡಬಹುದು. ಆದರೆ, ಒಮ್ಮೆಲೇ ಶಾಶ್ವತವಾಗಿ ನಿಷ್ಕ್ರಿಯಗೊಳಿಸಲು ಆಗದ ರೀತಿಯ ವ್ಯವಸ್ಥೆ ಇದೆ. ಏಕೆಂದರೆ ಗ್ರಾಹಕರು ತಮ್ಮ ಮನಸ್ಸು ಬದಲಾಯಿಸಿ ಮತ್ತೆ ಫೇಸ್‌ಬುಕ್‌ನಲ್ಲಿ ಮುಂದುವರಿಯಬಹುದು ಎಂಬ ಆಶಯದೊಂದಿಗೆ 14 ದಿನ ಕಾಲಾವಕಾಶ ನೀಡಲಾಗಿರುತ್ತದೆ. ಆಗಲೂ ಮನಪರಿವರ್ತನೆಯಾಗದಿದ್ದರೆ ನಿಮ್ಮ ಖಾತೆ ನಿಷ್ಕ್ರಿಯಗೊಳ್ಳುತ್ತದೆ.

ನಿಷ್ಕ್ರಿಯಗೊಳಿಸಿದ ವಿಷಯ ಗೊತ್ತಿಲ್ಲದ ಸ್ನೇಹಿತರು ನನ್ನ ಖಾತೆಯನ್ನು ಸಂರ್ಪಕಿಸಲು ತುಂಬಾ ಪ್ರಯತ್ನಪಟ್ಟಿದ್ದರು. ವೆಬ್‌ ಪುಟದಲ್ಲಿ ‘ಟೆಕ್ನಿಕಲ್‌ ಎರರ್‌’ (ತಾಂತ್ರಿಕ ದೋಷ) ಎಂಬ ಸಂದೇಶ ಬಂದಿದ್ದನ್ನು ಕಂಡು ಕೆಲವರು ಅಚ್ಚರಿಗೆ ಒಳಗಾದರೆ, ಇನ್ನು ಕೆಲವರು ಆಘಾತಗೊಂಡರು. ‘ನೀವು ಚೆನ್ನಾಗಿದ್ದೀರಾ?’ ಎಂದು ವಿಚಾರಿಸುವವರು ಒಂದೆಡೆಯಾದರೆ, ‘ಫೇಸ್‌ಬುಕ್‌ ಖಾತೆ ಪ್ರವೇಶಿಸದಂತೆ ನಮ್ಮನ್ನು ಬ್ಲಾಕ್‌ ಮಾಡಿದ್ದೀರಾ?’ ಎಂಬ ಆತಂಕದಿಂದ ಕೇಳುವವರು ಮತ್ತೊಂದೆಡೆ. ಆದರೆ, ಅವರೆಲ್ಲರ ಸ್ವಾರ್ಥಪರ ಉನ್ಮಾದ ಫೇಸ್‌ಬುಕ್‌ನಿಂದ ದೂರ ಇರಬೇಕೆಂಬ ನನ್ನ ಇಂದ್ರಿಯ ನಿಗ್ರಹವನ್ನು ಮತ್ತಷ್ಟು ಹೆಚ್ಚಿಸುತ್ತಾ ಹೋಯಿತು. 

ಸಾಮಾಜಿಕ ಜಾಲತಾಣದ ಯುಗದಲ್ಲಿ ನನ್ನ ವರ್ತನೆ ಕೆಲವರಿಗೆ ಸಮಾಜ ವಿರೋಧಿ ಕೆಲಸದಂತೆ ಭಾಸವಾಯಿತು. ಆದರೆ, ಫೇಸ್‌ಬುಕ್‌ ಚಟದಿಂದ ಕಳಚಿಕೊಂಡ ನಿರಾಳಭಾವ ನನ್ನದು. ಫೇಸ್‌ಬುಕ್‌ನಿಂದ ದೂರ ಇರಬೇಕೆಂಬ ಛಲ ಸುಮ್ಮನೇ ಬಂದಿದ್ದಲ್ಲ. ಅದರ ಹಿಂದೆ ದೊಡ್ಡ ಪ್ರಲೋಭನೆ ಇದೆ. ಏಕಾಂತದ ಸಮಯದಲ್ಲಿ ನಾನು ಖ್ಯಾತ ಹಾಸ್ಯ ಕಲಾವಿದರ ಉಚಿತ  ಹಾಸ್ಯ ಕಾರ್ಯಕ್ರಮ (ಕಾಮಿಡಿ ಶೋ )ವೀಕ್ಷಿಸಲು ತೆರಳುತ್ತಿದ್ದೆ. ಹಳ್ಳಿಗೆ ತೆರಳಿ ಮದುವೆ ಸಮಾರಂಭಗಳಲ್ಲಿ ಪಾಲ್ಗೊಂಡೆ.

ಫೇಸ್‌ಬುಕ್‌ ತ್ಯಜಿಸಿದ ಬಳಿಕ ನನ್ನ ಮನದಲ್ಲಿ ಹಲವು ಯೋಚನೆಗಳು ಹಾಗೇ ಉಳಿದುಕೊಂಡಿದ್ದವು. ಫೇಸ್‌ಬುಕ್‌ ಖಾತೆಯಲ್ಲಿ ಹಾಕಲು ಎಷ್ಟೊಂದು ಛಾಯಾಚಿತ್ರಗಳನ್ನು ತೆಗೆದಿದ್ದೆ ಅಲ್ಲವೇ ಅನಿಸುತಿತ್ತು. ಆದರೆ, ನನ್ನ ಹಿತಕ್ಕಿಂತ ಫೇಸ್‌ಬುಕ್‌ ಸ್ಥಾಪಕ ಮಾರ್ಕ್‌ ಜುಕರ್‌ಬರ್ಗ್‌ ಹಿತವೇ ಅದರಲ್ಲಿ ಹೆಚ್ಚು ಅಡಗಿದ್ದಂತೆ ಈಗ ಭಾಸವಾಗುತ್ತಿದೆ. ಈಗ ಮತ್ತೊಂದು ಚಟಕ್ಕೆ ನಾನು ಅಂಟಿಕೊಂಡಿದ್ದೇನೆ. ಅದು ಸ್ಮಾರ್ಟ್‌ಫೋನ್‌. ಪದೇ ಪದೇ ಸಂದೇಶವನ್ನು ರವಾನಿಸುತ್ತಿರುತ್ತೇನೆ. ಇಷ್ಟಾಗಿಯೂ ನಾನು ಇಲ್ಲಿ ನಿಜ ಹೇಳಬೇಕು.

ಫೇಸ್‌ಬುಕ್‌ನಿಂದ ದೂರವಾದ ಮೇಲೆ ಸಮಾನ ಮನಸ್ಕರ ಒಡನಾಟದಿಂದ ದೂರವಿದ್ದಂತೆ ಭಾಸವಾಗುತ್ತಿದೆ. ‘ನಿನಗೇನಾಯಿತು?’ ಎಂದು ಸ್ನೇಹಿತರು ಕೇಳುತ್ತಿರುತ್ತಾರೆ. ಸಂಬಂಧ ಮುರಿಯಲು ಏನೋ ಸಮಸ್ಯೆ ಇರಬೇಕು ಎಂಬುದು ಅವರ ಮನಸ್ಥಿತಿ.
ಈಗ ನನ್ನ ವ್ಯವಹಾರ ಸ್ಮಾರ್ಟ್‌ಫೋನ್‌ನಲ್ಲಿ.

ನಾನು ಪಾಲ್ಗೊಂಡ ಮದುವೆ ಸಮಾರಂಭದ ಛಾಯಾಚಿತ್ರವನ್ನು ಪೋಸ್ಟ್‌ ಮಾಡಿ, ಯಾರಾದರೂ ಲೈಕ್‌ ಮಾಡುತ್ತಾರಾ ಎಂಬ ಆಶಯದೊಂದಿಗೆ ಕಾಯುವ ಬದಲು ಈಗ ಮೊಬೈಲ್‌ನಿಂದ ಒಂದು ಸಂದೇಶ ಕಳುಹಿಸಿಬಿಡುತ್ತೇನೆ. ಸ್ನೇಹಿತ ಅಬ್ದುಲ್‌ಗೆ ಹಾಗೇ ಮಾಡಿದೆ. ‘ತುಂಬಾ ಇಷ್ಟವಾಯಿತು’ ಎಂದು ಆತ ಪ್ರತಿಕ್ರಿಯಿಸಿದ. ಆ ಸಂದೇಶ ನನ್ನನ್ನು ಖುಷಿಯ ಸಾಗರದಲ್ಲಿ ಮುಳುಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT