ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕಿನ ಸಂಕೀರ್ಣತೆಯ ಆಪ್ತ ಶೋಧ

Last Updated 6 ಫೆಬ್ರುವರಿ 2016, 19:30 IST
ಅಕ್ಷರ ಗಾತ್ರ

ಕುಲಕರ್ಣಿಯವರ ಆಯ್ದ ಕಥೆಗಳು
ಲೇ: ಮಾಧವ ಕುಲಕರ್ಣಿ
ಪ್ರ: ಜಾಗೃತಿ ಪ್ರಿಂಟರ್ಸ್,
ಬೆಂಗಳೂರು-560091

ಮಾಧವ ಕುಲಕರ್ಣಿ ಅವರು ಕಥೆ ಮತ್ತು ವಿಮರ್ಶೆ ಎರಡೂ ಕ್ಷೇತ್ರಗಳಲ್ಲಿ ನಾಲ್ಕು ದಶಕಗಳಿಗಿಂತಲೂ ಹೆಚ್ಚಿಗೆ ತೊಡಗಿಕೊಂಡವರು. ಎರಡೂ ಮಾಧ್ಯಮಗಳಲ್ಲಿ ಸಾಕಷ್ಟು ಸಾಧನೆ ಮಾಡಿದವರು. ಲೇಖಕರೇ ತಮ್ಮ ಎಂಬತ್ತಕ್ಕೂ ಹೆಚ್ಚಿನ ಕಥೆಗಳಿಂದ ಆಯ್ದ ಇಪ್ಪತ್ಮೂರು ಕಥೆಗಳ ಸಂಕಲನ ಇಲ್ಲಿದೆ.

ಅವರದು ಸಮೃದ್ಧ ಕತೆಗಾರಿಕೆ. ತಂತ್ರಪ್ರಧಾನವಾದ, ಸೊರಗಿದ ನವ್ಯ ಕಥನಮಾರ್ಗದಿಂದ ದೂರವುಳಿದು ಬದುಕಿನ ನಿಬಿಡ ವಿವರಗಳಿಂದ ಕಥೆಗಳನ್ನು ರಚಿಸುತ್ತಾರೆ. ಅವರದು ನೇರ ನಿರೂಪಣೆಯ ವಿಧಾನ; ತೇಜಸ್ವಿಯವರು ವೀಕ್ಷಕನಾಗಿ ನಿರ್ಲಿಪ್ತವಾಗಿ ನಿರೂಪಿಸುವ ವಿಧಾನಕ್ಕೆ ಹತ್ತಿರವಾದ ರೀತಿ.

ಕುಲಕರ್ಣಿಯವರಿಗೆ ಶ್ರೀಮಂತ ಜೀವನಾನುಭವಗಳಿವೆ. ರೋಚಕವಾಗಿ ಕಥೆ ಹೇಳುವಾಗಲೂ ಅವರ ಲಕ್ಷ್ಯ ಕೇವಲ ಘಟನೆಗಳ ನೇಯ್ಗೆಯತ್ತ ಇರದೆ ಒಂದು ಬದುಕಿನ ವಿಧಾನವನ್ನು ರೂಪಿಸಿಕೊಡುವದರಲ್ಲಿ ಇದೆ. ಅವರ ಕಥೆಗಳ ಪ್ರದೇಶ ಮುಖ್ಯವಾಗಿ ಗದಗ ಮತ್ತು ಮೈಸೂರು ಆದರೂ ಬದುಕಿನ ಅನೇಕ ಮಗ್ಗಲುಗಳನ್ನು ವ್ಯಾಪಿಸುವದರಿಂದ ಅವರ ಕಥಾಪ್ರಪಂಚ ಬಹು ದೊಡ್ಡದು. ವಾಸ್ತವ ಪ್ರಪಂಚದ ಅನಾವರಣದ ಮೂಲಕ ಬದುಕಿನ ವಿಪರ್ಯಾಸಗಳನ್ನು, ವ್ಯವಸ್ಥೆಗಳ ಗೋಜಲುಗಳನ್ನು ತೋರಿಸುತ್ತಾರೆ; ಸರಳತೆ, ಪ್ರಾಮಾಣಿಕತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಕಂಡರಿಸುತ್ತಾರೆ. ವಾಸ್ತವದ ಸತ್ಯಗಳ ಶೋಧನೆಯ ಜೊತೆಗೇ ಬದುಕಿನ ಅನೂಹ್ಯವಾದ ಶಕ್ತಿಯ ಹುಡುಕಾಟವನ್ನೂ ಅವರ ಕಥೆಗಳು ಮಾಡುತ್ತವೆ. ಅವರಲ್ಲಿ ಈ ಎರಡೂ ಮಾದರಿಗಳ ಕಥೆಗಳನ್ನು ನಾವು ಕಾಣುತ್ತೇವೆ.

ಈ ಸಂಕಲನದ ಕೊನೆಗೆ ಇರುವ ಸುದೀರ್ಘ ಹಾಗೂ ಸುಪುಷ್ಠವಾಗಿರುವ ‘ಪವಿತ್ರ’ ಕಥೆಯ ಕ್ರಿಯಾಕ್ಷೇತ್ರ ಮೈಸೂರಿನ ಒಂಟಿಕೊಪ್ಪಲು ಪ್ರದೇಶವೇ ಆದರೂ ಅದು ಅಮೇರಿಕಾ, ಮೆಕ್ಸಿಕೊವರೆಗೂ ಚಾಚಿಕೊಳ್ಳುತ್ತದೆ. ಅತಿಯಾದ ಪಾಶ್ಚಾತ್ಯ ಜೀವನಶೈಲಿ ಮತ್ತು ಅಲ್ಲಿಯ ಪ್ರಲೋಭನೆಗಳಿಗೆ ಒಳಗಾಗುವ ಮೂವರು ಮಹಿಳೆಯರ ಬದುಕಿನ ದಾರುಣ ಚಿತ್ರಣದೊಂದಿಗೆ ಭಾರತದಲ್ಲೇ ತನ್ನ ಹೆಂಡತಿಯೊಂದಿಗೆ ಮೈಸೂರಿನಲ್ಲಿ ನೆಮ್ಮದಿಯಿಂದ ನಿವೃತ್ತ ಜೀವನ ಸಾಗಿಸುತ್ತಿರುವ ಪ್ರೊಫೆಸರ್ ಡಿ.ಕೆ. ಅವರ ಬದುಕನ್ನು ಮುಖಾಮುಖಿಗೊಳಿಸುವ ಮೂಲಕ ನಿಜವಾದ ಸುಖ, ಸಂತೋಷ ಯಾವುದು ಮತ್ತು ಎಲ್ಲಿದೆ ಎಂಬುದರ ಹುಡುಕಾಟವನ್ನು ಕಥೆ ಮಾಡುತ್ತದೆ. ಮೈಸೂರಿನ ಒಂಟಿಕೊಪ್ಪಲಿನಲ್ಲಿ ಬಹುಕಾಲ ವಾಸವಾಗಿದ್ದ ಡಿ.ಕೆ. ತನ್ನ ವೃತ್ತಿಧರ್ಮಕ್ಕೆ ವಿರುದ್ಧವಾಗಿ ಟ್ಯೂಶನ್ ಮಾಡಿ ಹಣ ಗಳಿಸಿರುವ  ವ್ಯಕ್ತಿಯೇ ಆದರೂ ಅಮೇರಿಕಾ ನಿವಾಸಿಗಳಾಗಿರುವ ವನಮಾಲಾ, ಆಕೆಯ ಮಗಳು ಅರುಂಧತಿ, ತಂಗಿ ಮಾಲತಿಯರ ಹಾಗೆ ಅತ್ಯಾಸೆ ಮತ್ತು ಧೂರ್ತ ವಲಯಕ್ಕೆ ಒಳಗಾಗಿ ಜೀವನವನ್ನು ನರಕ ಮಾಡಿಕೊಂಡವರಲ್ಲ. ‘ಇವತ್ತು ಭಾರತೀಯತೆ ಎಂಬುದು ತೀರ ಪರಿಶುದ್ಧವಲ್ಲವಾದರೂ ಪಾಶ್ಚಾತ್ಯ ಬದುಕಿನ ಎದುರಿಗೆ ಅದು ಪವಿತ್ರವೇ’ ಎಂದು ಕಥೆ ಸೂಚಿಸುತ್ತಿರುವಂತಿದೆ. ಲೇಖಕ ಹೀಗೆ ಕಥೆಯನ್ನು ಸಂಕೀರ್ಣಗೊಳಿಸುತ್ತಾರೆ. ಆದರೆ ಇಲ್ಲಿನ ಪಾತ್ರಗಳು ಕಪ್ಪು ಬಿಳುಪು ಆಗುವದಿಲ್ಲ. ಒಂದು ವಿಸ್ತಾರವಾದ ಬದುಕಿನ ಚಿತ್ರ ಕಥೆಯಲ್ಲಿ ಸಿಗುತ್ತದೆ. ಎಲ್ಲವನ್ನೂ ಒಳಗೊಳ್ಳುತ್ತ, ಸುಸಂಘಟಿಸುತ್ತ ಕುತೂಹಲದಿಂದ ರೋಚಕವಾಗಿ ಕಥೆ ಹೇಳುವ ಗುಣವೂ ಇಲ್ಲಿದೆ. ಹಾಗೆಯೇ ಕಥೆ ಜೀವನಮೌಲ್ಯಗಳ ಹುಡುಕಾಟವನ್ನು ಮಾಡುತ್ತ ಒಂದು ದರ್ಶನವನ್ನು ಕೊಡುತ್ತದೆ. ಮಾಧವ ಕುಲಕರ್ಣಿಯವರ ತೀರ ಈಚಿನ ಕಥೆಗಳಲ್ಲೊಂದಾದ ‘ಪವಿತ್ರ’ ಅವರ ಕಥೆಗಾರಿಕೆ ಹೆಚ್ಚು ಪ್ರಬುದ್ಧವಾಗುತ್ತಿರುವುದಕ್ಕೆ ನಿದರ್ಶನವಾಗಿದೆ.

ಕುಲಕರ್ಣಿಯವರ ಆರಂಭದ ಕಥೆ ‘ವಜ್ರ’ ಪತ್ತೇದಾರಿಕೆ ತಂತ್ರದ ಮೂಲಕ ಮುಗ್ಧರು, ಅಮಾಯಕರು ಪೊಲೀಸ್ ವ್ಯವಸ್ಥೆಯ ಗೋಜಲುಗಳಿಗೆ ಸಿಕ್ಕು ಪರಿತಾಪ ಪಡುವುದನ್ನು ಚಿತ್ರಿಸುತ್ತಲೇ, ವಜ್ರ ಯಾರಿಗೂ ಸಿಗದಿರುವುದನ್ನು ರೂಪಕವನ್ನಾಗಿಸುತ್ತದೆ. ‘ಒಂದು ಅಪಹರಣ ಪ್ರಸಂಗ’ ಕಥೆಯಲ್ಲಿ ಅಪಹರಣದಲ್ಲಿ ಮಂತ್ರಿ, ಪತ್ರಕರ್ತ, ಪೊಲೀಸ್ ಅಧಿಕಾರಿ ಮೂವರೂ ಶಾಮೀಲಾಗುವ ಚಿತ್ರ ಇವತ್ತಿನ ರಾಜಕೀಯ, ಪತ್ರಿಕಾಮಾಧ್ಯಮ ಮತ್ತು ಪೊಲೀಸ್ ವ್ಯವಸ್ಥೆಯ ಮೇಲೆ ಕ್ಷ-ಕಿರಣ ಬೀರುತ್ತದೆ. ಅನೇಕ ನೆಲೆಗಳಲ್ಲಿ ಏಕಕಾಲಕ್ಕೆ ಗಾಢವಾಗುತ್ತ ನಮ್ಮನ್ನು ಆಲೋಚನೆಗೆ ತೊಡಗಿಸುವ ಸಶಕ್ತ ಕಥೆ ‘ಉದ್ಯಾನವನ’.

ಕಥೆಯಲ್ಲಿ ಬರುವ ಪ್ರತಿಮೆ, ಪ್ರತೀಕಗಳು ನವ್ಯ ಕಥೆಗಳಲ್ಲಿಯಂತೆ ಸಂಕೇತನಿಷ್ಠವಾಗಿ ಬಳಕೆಯಾಗದೆ, ಪೂರ್ತಿ ವಿವರಗಳಾಗಿ ಒಂದು ನೈಜ ಪ್ರಪಂಚವನ್ನು ಸೃಷ್ಟಿಸುತ್ತ ಅರ್ಥದ ಹಲವು ಪದರಗಳು ಸಹಜವಾಗಿ ಅದರ ಒಡಲೊಳಗೆ ಹುಟ್ಟಿಕೊಳ್ಳುತ್ತವೆ. ‘ಪಾತಾಳಗರಡಿ’ ಕಥೆಯಲ್ಲಿ ಬಾವಿ ಬಚ್ಚಿಟ್ಟುಕೊಂಡಿದ್ದ ಸಾಮಾನುಗಳನ್ನು ಪಾತಾಳಗರಡಿಯ ಮೂಲಕ ನಬಿ ಎನ್ನುವ ವ್ಯಕ್ತಿ ಹುಡುಕಿಕೊಡುವಂತೆಯೇ, ಕಥೆಗಾರ(ನದಿ ಸಂಸ್ಕೃತಿ ಇರುವಂತೆ) ಬಾವಿಗೂ ಒಂದು ಸಂಸ್ಕೃತಿ ಇರುವುದನ್ನು ಗುರುತಿಸುತ್ತ ಬದುಕಿನ ವಿವಿಧ ಮಗ್ಗಲುಗಳ ಹುಡುಕಾಟಕ್ಕೆ ತೊಡಗುವ ಕ್ರಿಯೆ ಅರ್ಥಪೂರ್ಣವಾಗಿದೆ.

ವಾಸ್ತವ ಬದುಕಿನ ಸತ್ಯಗಳ ಶೋಧನೆಯನ್ನು ಮಾಧವ ಕುಲಕರ್ಣಿ ಅವರ ಕಥೆಗಳು ಮಾಡುತ್ತಿರುವಂತೆಯೇ, ಅಲೌಕಿಕತೆಯ ಕಡೆಗೆ ತುಡಿವ ವ್ಯಕ್ತಿಗಳ ಅನೂಹ್ಯ ಶಕ್ತಿಯನ್ನು ಶೋಧಿಸುವ ಕಥೆಗಳೂ ಇವೆ. ಈ ನಿಟ್ಟಿನಲ್ಲಿ ಅವರ ‘ಸಂತ’, ‘ಹಂಗು ತೊರೆದವರು’, ‘ಪ್ರವೇಶ’ ಹಾಗೂ ‘ಪ್ರತ್ಯಕ್ಷ’ ಕಥೆಗಳನ್ನು ಉದಾಹರಿಸಬಹುದು. ಈ ವಿಧದ ಕಥೆಗಳು ವಾಸ್ತವ ಮತ್ತು ಭ್ರಮೆಗಳ ಸಂಯೋಗದಲ್ಲಿ ನಿರ್ಮಾಣವಾಗುತ್ತವೆ. ಈ ಬಗೆಯ ಕಥೆಗಳಲ್ಲೇ ಕೊಂಚ ಭಿನ್ನವಾಗಿರುವ ‘ಪ್ರತ್ಯಕ್ಷ’ ಕಥೆಯಲ್ಲಿ– ಮ್ಯಾದಾರ ವೃತ್ತಿಯಿಂದ ಬಳಿಗಾರ ವೃತ್ತಿಗೆ ಬರುತ್ತ ಕಾಶಪ್ಪ ನಿಧಾನವಾಗಿ ಅಧ್ಯಾತ್ಮ ಪಥಕ್ಕೆ ಬರುತ್ತಾನೆ. ಆತನ ಬಳಿ ಬಳೆ ಇಡಿಸಿಕೊಂಡು ನಾಣ್ಯಗಳನ್ನು ಸುರುವಿ ಹೋದ ಕಪ್ಪು ಹೆಣ್ಣುಮಗಳು ಕನಸಿನಲ್ಲಿ ಬರುವುದಷ್ಟೇ ಅಲ್ಲದೆ ವಾಸ್ತವದಲ್ಲೂ ಅವನ ಮನೆಯ ದೇವರ ಮನೆಯಲ್ಲಿ ಬಂದು ಕೂಡುತ್ತಾಳೆ. ವ್ಯಸನಾಧೀನ, ಆದರೆ ಸುಶ್ರಾವ್ಯವಾಗಿ ಹಾಡುವ ಶಿವಪ್ಪನ ಹಾಡನ್ನು ಕೇಳಿ ತಲೆದೂಗುತ್ತಾಳೆ. ದ್ಯಾಮವ್ವನ ಭಕ್ತನಾದ ಕಾಶಪ್ಪನಿಗೆ ದೇವತೆ ಪ್ರತ್ಯಕ್ಷಳಾಗುತ್ತಾಳೆ ಎಂದು ಕಥೆ ಸೂಚಿಸುತ್ತದೆ. ಹಾಗೆಯೇ ಧ್ಯಾನಸ್ಥ ಕಲೆಗಾರನ ಕಲೆಗೂ ಆಕೆಯ ಮೆಚ್ಚುಗೆ ಇದೆ. ಲೇಖಕರು ಸಂತರ ಹಾಡುಗಳನ್ನು ಅರ್ಥಪೂರ್ಣವಾಗಿ, ಸಾಂದರ್ಭಿಕವಾಗಿ ಬಳಸಿಕೊಂಡು ಒಂದು ಅನುಭಾವ ಲೋಕವನ್ನು ಸೃಷ್ಟಿಮಾಡುತ್ತಾರೆ. ಇದೊಂದು ಮಾಂತ್ರಿಕ  ಜಗತ್ತು ಎಂದು ತಿಳಿಯಬಹುದು. ಆದರೆ ವಾಸ್ತವದ ಪಾತಳಿಯಲ್ಲೇ ಓದುತ್ತ ಹೊರಟ ಓದುಗ ಮಾತ್ರ ಗಲಿಬಿಲಿಗೊಳ್ಳುತ್ತಾನೆ.

ಈ ಸಂಕಲನದ ಕಥಾಜಗತ್ತಿನಲ್ಲಿ ಅನೇಕ ಬಗೆಯ ಜನರು-ಗೂಂಡಾಗಳು, ರೌಡಿಗಳು, ಭ್ರಷ್ಟರು, ಸಂತರು, ಅಮಾಯಕರು, ಮುಗ್ಧರು, ಪ್ರಾಮಾಣಿಕರು ಇದ್ದಾರೆ. ಹಾಗೆಯೇ ಎಲ್ಲ ವರ್ಗಗಳ ಪಾತ್ರಗಳು ಇವೆ. ಕಥೆಗಾರರ ಜೀವನಾನುಭವಗಳ ವಿಸ್ತಾರ ಮತ್ತು ವೈವಿಧ್ಯ ಬೆರಗು ಹುಟ್ಟಿಸುವಂತಿದೆ.
ಕೀರ್ತಿನಾಥ ಕುರ್ತಕೋಟಿ ಅವರು ಗುರುತಿಸಿದಂತೆ ಕುಲಕರ್ಣಿಯವರ ಕಥೆಗಳು ನಮ್ಮನ್ನು ಆಳವಾದ ಚಿಂತನೆಗೆ ಈಡುಮಾಡುತ್ತವೆ. ಆದರೂ, ಅವರ ಕಥೆಗಳು ಬಹಳಷ್ಟು ಚರ್ಚೆಗೆ  ಒಳಗಾಗಿಲ್ಲ ಎಂದೇ ಹೇಳಬೇಕು. ನಮ್ಮ ಕಥಾಲೋಕಕ್ಕೆ ಅವರು ನೀಡಿದ ಕೊಡುಗೆಯನ್ನು ನಿರ್ಲಕ್ಷಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT