ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಹೂಪಯೋಗಿ ಕಳೆ ಕೊಯ್ಯುವ ಯಂತ್ರ

ಯಂತ್ರಲೋಕ
Last Updated 1 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಈ ಯಂತ್ರವನ್ನು ತಯಾರಿಸಿದ್ದು ಹೊಲ ಗದ್ದೆ ತೋಟಗಳಲ್ಲಿನ ಕಳೆ ಕೀಳಲು. ಆದರೆ ಇದೀಗ ಈ ಯಂತ್ರ ಪ್ರಯೋಗಶೀಲ ರೈತರ ಕೈಸೇರಿ ಹತ್ತಾರು ಕೆಲಸಗಳಿಗೆ ಬಳಕೆಯಾಗುತ್ತಿದೆ. ಮೂಲ ಯಂತ್ರಕ್ಕೆ ವಿವಿಧ ರೀತಿಯ ಹೆಚ್ಚುವರಿ ಸಲಕರಣೆ ಜೋಡಿಸಿ ನೂತನ ರೂಪು ಪಡೆದುಕೊಂಡಿರುವ ಈ ಕಳೆ ಯಂತ್ರ, ಗದ್ದೆಯಿಂದ ಮನೆಯೊಳಗೂ ತನ್ನ ಸ್ಥಾನ ಗಿಟ್ಟಿಸಿಕೊಂಡಿದೆ. ಹಲವಾರು ಜನರು ಮಾಡುವ ಕೆಲಸವನ್ನು ಒಂದೇ ಯಂತ್ರ ಮಾಡುತ್ತಿದೆ.

ವಿವಿಧ ಸಾಮರ್ಥ್ಯದ ಎರಡು ಮತ್ತು ನಾಲ್ಕು ಸ್ಟ್ರೋಕ್‌ ಯಂತ್ರಗಳನ್ನು ಹಲವು ಕಂಪೆನಿಗಳು ಮಾರುಕಟ್ಟೆಗೆ ಬಿಟ್ಟಿವೆ. ಎರಡು ಸ್ಟ್ರೋಕ್‌ ಯಂತ್ರಗಳು ಹೆಚ್ಚಿನ ಪ್ರಯೋಜನಕಾರಿಯಾಗಿದೆ. ಇದು ಹಗುರವಾಗಿರುವ ಅಲ್ಯುಮಿನಿಯಂನಿಂದ ಮಾಡಲಾಗಿದೆ. ಇದಕ್ಕೆ 600 ರಿಂದ 900 ಮಿಲಿ ಲೀಟರ್‌ ಎಣ್ಣೆ ಅಗತ್ಯವಿದೆ. ಈ ಯಂತ್ರ ಕೇವಲ 7 ರಿಂದ 8 ಕಿಲೋ ಭಾರ ಇರುವ ಕಾರಣ, ರೈತರು ಸಲೀಸಾಗಿ ಹೆಗಲಿಗೆ ನೇತು ಹಾಕಿಕೊಂಡು ಶ್ರಮವಿಲ್ಲದೇ ಕೆಲಸ ಮಾಡಬಹುದಾಗಿದೆ. ಈ ಯಂತ್ರವನ್ನು ಸಮರ್ಪಕವಾಗಿ ನಿರ್ವಹಿಸಿದರೆ  800 ಗಂಟೆಯವರೆಗೆ ರಿಪೇರಿ ಖರ್ಚು ಬರುವುದಿಲ್ಲ ಎನ್ನುತ್ತಾರೆ ರೈತರು.

ಇದರಲ್ಲಿ ನೈಲಾನ್‌ ಹಗ್ಗವನ್ನು ಜೋಡಿಸಲಾಗಿದೆ. ಸುಮಾರು ಆರು ಇಂಚು ಹಗ್ಗ ಯಂತ್ರದ ಹೊರಗಡೆ ಇದ್ದು, ಇದರ ಮೂಲಕ ಅತಿ ಚಿಕ್ಕ ಗಾತ್ರದ ಹುಲ್ಲುಗಳನ್ನೂ ಕತ್ತರಿಸಬಹುದಾಗಿದೆ. ಹುಲ್ಲಿನ ನಡುವೆ ಚಿಕ್ಕಪುಟ್ಟ ಕಲ್ಲುಗಳಿದ್ದರೂ ಅದನ್ನು ತುಂಡರಿಸುವ ಶಕ್ತಿ ಇದಕ್ಕಿದೆ. ದೊಡ್ಡ ಕಲ್ಲುಗಳಿದ್ದರೂ ಅದನ್ನು ತುಂಡರಿಸಬಹುದು, ಆದರೆ ಹಗ್ಗ ಬೇಗ ಸವೆದು ಹೋಗುತ್ತದೆ. ಇದು ಸವೆದರೆ  ಹೆದರಬೇಕಾದ ಅಗತ್ಯವಿಲ್ಲ.

ಏಕೆಂದರೆ ಆ ಯಂತ್ರದ ತುದಿಯನ್ನು ಒಮ್ಮೆ ನೆಲಕ್ಕೆ ಕುಟ್ಟಿದರೆ ಒಳಗಡೆ ಇರಿಸಲಾದ ಹಗ್ಗ ಹೊರಕ್ಕೆ ಬರುತ್ತದೆ. ಒಂದು ಮೀಟರ್‌ ಹಗ್ಗಕ್ಕೆ 10ರಿಂದ 12 ರೂಪಾಯಿ ಖರ್ಚು ತಗಲುವುದು. ಈ ಯಂತ್ರವನ್ನು ಹೆಗಲಿಗೇರಿಸಿಕೊಂಡು ಅದರ ಸಹಾಯದಿಂದ ಹಳ್ಳಗಳಲ್ಲಿ ಇರುವ, ಸಂದಿ ಮೂಲೆಗಳಲ್ಲಿ ಇರುವ ಕಳೆಗಳನ್ನೂ ಕತ್ತರಿಸಬಹುದು. ಬೆನ್ನಿಗೆ ಕಟ್ಟಿಕೊಂಡು ತಗ್ಗು ದಿಣ್ಣೆಗಳಲ್ಲಿರುವ ಕಳೆ ಕತ್ತರಿಸಬಹುದು.

ವಿವಿಧ ಪ್ರಯೋಜನ
ಈ ಯಂತ್ರಕ್ಕೆ ಮೂರು ಹಲ್ಲಿನ ಚಿಕ್ಕ ಉಪಕರಣ ಸೇರಿಸಿಕೊಂಡರೆ ಪಾರ್ಥೇನಿಯಂ, ಯುಪಟೋಪಿಯಂ ಕಳೆಗಳನ್ನು ಚೆನ್ನಾಗಿ ಕೀಳಬಹುದು. ಮಾರುಕಟ್ಟೆಯಲ್ಲಿ ಲಭ್ಯವಿರುವ ಸುದರ್ಶನ ಚಕ್ರ ಕೂರಿಸಿಕೊಂಡರೆ ಚಿಕ್ಕಮರಗಳನ್ನೂ ಕತ್ತರಿಸಬಹುದು, ಮೇವಿನ ಬೆಳೆಗಳನ್ನೂ ಚೆನ್ನಾಗಿ ಸವರಬಹುದು.

ಮುನ್ನೆಚ್ಚರಿಕೆ
ಈ ಯಂತ್ರ ಉಪಯೋಗಿಸುವಾಗ ಸ್ವಲ್ಪ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಿಟ್ಟರೆ, ಬಳಕೆ ಬಲು ಸುಲಭ. ಯಂತ್ರ ಚಾಲನೆಯಲ್ಲಿದ್ದಾಗ ಕಳೆ, ಚಿಕ್ಕ ಕಲ್ಲು, ಕಸ ಕಡ್ಡಿಗಳು ಹತ್ತಿಪ್ಪತ್ತು ಅಡಿ ದೂರ ಸಿಡಿಯುತ್ತದೆ. ಆದ್ದರಿಂದ ಎದುರುಗಡೆ ಯಾರೂ ಇರಕೂಡದು. ಇದು ಚಾಲಕನಿಗೆ ಸಿಡಿಯದ ರೀತಿಯಲ್ಲಿ ಯಂತ್ರದಲ್ಲಿಯೇ ವ್ಯವಸ್ಥೆ ಮಾಡಲಾಗಿದೆ. ಇದರ ಹೊರತಾಗಿಯೂ ತಲೆಗೆ ಹೆಲ್ಮೆಟ್‌, ಮುಖ, ಕಣ್ಣು, ಕಿವಿ ರಕ್ಷಣೆಗೆ ರಕ್ಷಣಾ ಕವಚಗಳು ಲಭ್ಯವಿವೆ. ಕೆಲವು ಕಂಪೆನಿಗಳು ತಮ್ಮ ಯಂತ್ರದ ಜೊತೆಯಲ್ಲಿಯೇ ಈ ಕವಚಗಳನ್ನು ನೀಡುತ್ತವೆ. ಇದಾವುದೂ ಬಳಸದಿದ್ದರೂ ಕಣ್ಣಿನ ರಕ್ಷಣೆಗೆ ಕನ್ನಡಕ ಹಾಗೂ ಯಂತ್ರದ ಶಬ್ದ ಕೇಳಿಸದೇ ಇರಲು ಕಿವಿಪ್ಯಾಡ್‌ ಬಳಸುವುದು ಸೂಕ್ತ ಎನ್ನುತ್ತಾರೆ ಕೃಷಿ ತಜ್ಞರು.

ರೇಷ್ಮೆ ಕೃಷಿಯಲ್ಲೂ ಇದು ಹೇಳಿ ಮಾಡಿಸಿದ ಯಂತ್ರ. ರೇಷ್ಮೆ ಕೃಷಿಗೆ ಅಗತ್ಯವಿರುವ ಹಿಪ್ಪುನೇರಳೆ ಗಿಡ ಹೆಚ್ಚು ಇಳುವರಿ ನೀಡಲು ವರ್ಷಕ್ಕೊಮ್ಮೆ ನೆಲಮಟ್ಟದಲ್ಲಿ ಕತ್ತರಿಸಬೇಕು. ಇದು ಬಹಳ ಕಸರತ್ತಿನ ಕೆಲಸ ಮಾತ್ರವಲ್ಲದೇ ಹೆಚ್ಚು ಸಮಯ ಬೇಡುವ ಕೆಲಸ. ಆದರೆ ಈ ಕಳೆ ಯಂತ್ರಕ್ಕೆ ವಿಶೇಷ ಯಂತ್ರ ಜೋಡಿಸಿ ಸುಲಭದಲ್ಲಿ ಕಳೆ ಕೀಳುವಲ್ಲಿ ಹಲವು ರೈತರು ಯಶಸ್ವಿಯಾಗಿದ್ದಾರೆ.

ಉತ್ತಮ ಇಳುವರಿ ನೀಡಲು ಟೀ ತೋಟದಲ್ಲಿ 4–5 ವರ್ಷಕ್ಕೊಮ್ಮೆ ಗಿಡಗಳನ್ನು ಅರ್ಧಮಟ್ಟಕ್ಕೆ ಕತ್ತರಿಸಬೇಕು. ಟೀ ಗಿಡಗಳ ಕಾಂಡ ಗಟ್ಟಿ ಮತ್ತು ಜಿಗುಟು ಆಗಿರುತ್ತದೆ. ಸಾವಿರಾರು ಎಕರೆ ಜಮೀನಿನಲ್ಲಿರುವ ಲಕ್ಷಾಂತರ ಗಿಡಗಳನ್ನು ಕತ್ತರಿಸಲು ನೂರಾರು ಆಳು ಬೇಕಾಗುತ್ತದೆ. ಇದಕ್ಕೂ ಈ ಯಂತ್ರವೇ ಮದ್ದು. ಯಂತ್ರಕ್ಕೆ ಸುದರ್ಶನ ಚಕ್ರ ಜೋಡಿಸಿ ಕೆಲಸ ಸುಲಭ ಮಾಡಿಕೊಳ್ಳಬಹುದು. ಕಾರ್ಬೈಡ್ ಮೊನೆ ಹೊಂದಿರುವ ಕಾರಣ ಇದು ಗಿಡಗಳನ್ನು ಅರ್ಧಕ್ಕೆ ಕತ್ತರಿಸಬಲ್ಲದು.

ರೈತರ ಪ್ರಯೋಗಗಳು
ಈ ಯಂತ್ರಕ್ಕೆ ರಬ್ಬರ್ ರೋಲ್ ಜೋಡಿಸಿ ಕಣದಲ್ಲಿ ಹರಡಿದ ಭತ್ತ, ಅಡಿಕೆ, ಕಾಫಿಗಳನ್ನು ಒಟ್ಟುಗೂಡಿಸುತ್ತಿದ್ದಾರೆ ಮಲೆನಾಡಿನ ರೈತರು. ಇನ್ನೂ ಕೆಲವರು ಇದೇ ರೋಲ್‌ನಿಂದ ಕೊಟ್ಟಿಗೆ ನೆಲ ಸ್ವಚ್ಛಗೊಳಿಸುತ್ತಿದ್ದಾರೆ. ಯಂತ್ರದ ತುದಿಯಲ್ಲಿ ತಂತಿ ಬ್ರಷ್ ಬಳಸಿ, ಸೆಗಣಿ ಒಣಗಿ ಗಟ್ಟಿಯಾದ ಹಟ್ಟಿ ನೆಲವನ್ನು ತಿಕ್ಕಿ ತೊಳೆಯಲು, ಸಿಮೆಂಟ್ ತಾರಸಿ ಮೇಲೆ ಕಟ್ಟಿರುವ ಪಾಚಿ ತೆಗೆಯಲೂ ಇದನ್ನು ಬಳಸಲಾಗುತ್ತಿದೆ. ಬಟ್ಟೆ ಸುತ್ತಿ ಸಿಮೆಂಟ್ ಹಾಕಿ ನೆಲಕ್ಕೆ ವ್ಯಾಕ್ಸ್ ಪಾಲಿಷ್ ಮಾಡುತ್ತಿದ್ದಾರೆ. ಅಷ್ಟೇ ಏಕೆ, ಕೆಲವು ರೈತರು ಸಾಣೆಕಲ್ಲು ಜೋಡಿಸಿ, ಸಲಕರಣೆ ಹರಿತಗೊಳಿಸಲೂ ಇದನ್ನೇ ಉಪಯೋಗಿಸುತ್ತಿದ್ದಾರೆ.

ಯಂತ್ರಕ್ಕೆ ಪುಟ್ಟ ಕೇಜ್ ವೀಲ್ ಜೋಡಿಸಿ ಸಾಲು ನಾಟಿ ಭತ್ತದ ಗದ್ದೆಗಳಲ್ಲಿ ಓಡಿಸಿದಾಗ ಸಸಿಗಳು ಮರಿಯೊಡಲು ಸಹಕಾರಿಯಾಗಿದೆ. ಶ್ರೀ ಭತ್ತದ ಕೃಷಿ ಮಾಡುವವರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ.

ಪ್ಯಾಡಿ ರೀಪರ್‌
ಈ ಯಂತ್ರದ ಕೊನೆಯಲ್ಲಿ ಇರುವ ದಂಡಕ್ಕೆ ಸುದರ್ಶನ ಚಕ್ರ ಮತ್ತು ಬಕೆಟ್‌ನಂಥ ವಸ್ತು ಜೋಡಣೆ ಮಾಡಿ ‘ಪ್ಯಾಡಿ ರೀಪರ್‌’ ಮಾಡಿಕೊಂಡಿದ್ದಾರೆ ಪ್ರಯೋಗಶೀಲ ರೈತರು. ಇದರಲ್ಲಿರುವ ಚಕ್ರ ಭತ್ತದ ಪೈರನ್ನು ಕಟಾವು ಮಾಡಿದರೆ ಬಕೆಟ್, ಪೈರು ಕೆಡವಿ ಹಾಕಲು ನೆರವಾಗುತ್ತಿದೆ. ಇದರಿಂದ  ಒಂದು ದಿನದಲ್ಲಿ ಒಂದು ಎಕರೆ ಫಸಲು ಕಟಾವು ಸಾಧ್ಯ ಎನ್ನುತ್ತಾರೆ ಅವರು. ಅಂದರೆ ಸುಮಾರು 15 ಆಳುಗಳು ಮಾಡುವ ಕೆಲಸ ಈ ಯಂತ್ರ ಮಾಡುತ್ತಿದೆ. ಇದೇ ರೀತಿ ರಾಗಿ, ಗೋಧಿ, ಜೋಳ, ಸೋಯಾಬಿನ್ ಮುಂತಾದ ಬೆಳೆಗಳಿಗೂ ಬಳಸಲಾಗುತ್ತಿದೆ. ಕೆಲವು ರೈತರು ಬಾಡಿಗೆಗೆಂದು ಈ ಯಂತ್ರ ನೀಡಿ ಅದರಲ್ಲೂ ಸಂಪಾದನೆ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT