ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಧವ್ಯಕ್ಕೆ ಹೊಸ ಹೊಳಪು

Last Updated 14 ಡಿಸೆಂಬರ್ 2014, 19:30 IST
ಅಕ್ಷರ ಗಾತ್ರ

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಕಳೆದ ವಾರ ನೀಡಿದ ಒಂದು ದಿನದ ಭೇಟಿ ಮಹತ್ವದ್ದು. 1990ರ ದಶಕದ ಆರಂಭ­ದಲ್ಲಿ ಸೋವಿಯೆತ್ ಒಕ್ಕೂಟದ ಪತನದ ನಂತರ ಜಗತ್ತಿನಲ್ಲಾದ ಬದಲಾ­ವ­ಣೆ­ಗಳ ಹಿನ್ನೆಲೆಯಲ್ಲಿ ಭಾರತ–ರಷ್ಯಾ ಸಂಬಂಧದ ಸ್ವರೂಪ ಬದಲಾಗಿದೆ. ಹೀಗಿದ್ದೂ ಪಾರಂಪರಿಕ ಮಿತ್ರ ರಾಷ್ಟ್ರವಾಗಿರುವ ರಷ್ಯಾ ಜೊತೆಗಿನ ಭಾರ­ತದ ಸಂಬಂಧ ನಿಕಟವಾಗಿ ಮುಂದುವರಿಯಲಿದೆ ಎಂಬುದು ಪುಟಿನ್ ಭೇಟಿ­ಯಿಂದ ವ್ಯಕ್ತವಾಗಿದೆ.

ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ರಷ್ಯಾ ಜೊತೆಗಿನ ಭಾರತದ ಬಾಂಧವ್ಯ ಮುಖ್ಯವಾಗಿದ್ದು ಅದು ಮುಂದುವರಿಯಲಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಆಶ್ವಾಸನೆ ನೀಡಿದ್ದಾರೆ. ಹೆಲಿ­ಕಾ­ಪ್ಟರ್ ಹಾಗೂ ವಿಮಾನ ಖರೀದಿಗಳಿಗೆ ಸಂಬಂಧಿಸಿದಂತೆ ಇತರ ರಾಷ್ಟ್ರಗಳ ಜೊತೆಗೂ ಭಾರತ ವ್ಯವಹಾರ ಹೊಂದಿರುವುದು ರಷ್ಯಾಗೆ ಸಮಾಧಾನ ತರುವ ಸಂಗತಿಯಾಗಿಲ್ಲ ಎಂಬುದು ಗೊತ್ತಿರುವ ಸಂಗತಿ. ಫ್ರಾನ್ಸ್, ಅಮೆರಿಕ ಹಾಗೂ ಇಸ್ರೇಲ್‌ಗಳಿಂದ ಯುದ್ಧ ವಿಮಾನ ಹಾಗೂ ಕ್ಷಿಪಣಿಗಳನ್ನು ಖರೀದಿ­ಸುವ ಭಾರತದ ನಿರ್ಧಾರದ ಬಗ್ಗೆ  ಕಳೆದ ವರ್ಷ ರಷ್ಯಾ ಅಸಮಾಧಾನ ವ್ಯಕ್ತ­ಪಡಿಸಿತ್ತು. ಇಂತಹದೊಂದು ಸನ್ನಿವೇಶದಲ್ಲಿ ಭಾರತಕ್ಕೆ ಪುಟಿನ್ ಭೇಟಿ ವೇಳೆ, ಉಭಯ ರಾಷ್ಟ್ರಗಳು ಹಲವು ಶತಕೋಟಿಗಳ ಮೌಲ್ಯದ 20 ಒಪ್ಪಂದಗಳಿಗೆ ಸಹಿ ಹಾಕಿರುವುದು ಸ್ವಾಗತಾರ್ಹ ವಿದ್ಯಮಾನ.

ತೈಲ, ರಕ್ಷಣೆ, ಇಂಧನ ಹಾಗೂ ಮೂಲಸೌಕರ್ಯ ವೃದ್ಧಿ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಈ ಒಪ್ಪಂದ­ಗಳು ಏರ್ಪಟ್ಟಿವೆ. 12 ಅಣು ಸ್ಥಾವರಗಳನ್ನು ನಿರ್ಮಿಸಲೂ ಭಾರತಕ್ಕೆ ರಷ್ಯಾ ನೆರವಾಗಲಿದೆ. ಭಾರತದ ಬಾಧ್ಯತಾ ಕಾನೂನುಗಳ ಬಗ್ಗೆ ಇತರ ಅಣು ಸರಬರಾಜುದಾರ ರಾಷ್ಟ್ರಗಳಿಗಿರುವ ಆತಂಕವನ್ನು ರಷ್ಯಾ ಹೊಂದಿಲ್ಲ ಎಂಬುದು ಇಲ್ಲಿ ಮುಖ್ಯ. ಮಾಸ್ಕೊದಿಂದ ವಜ್ರಗಳ ನೇರ ಮಾರಾಟ, ಭಾರತದ ವಜ್ರ ಕಟ್ಟಿಂಗ್ ಉದ್ಯಮಕ್ಕೆ ನೆರವಾಗಲಿದೆ.

ಸೋವಿಯೆತ್ ಒಕ್ಕೂಟದ ಕಾಲದಲ್ಲಿ ನವದೆಹಲಿ– ಮಾಸ್ಕೊ ಬಾಂಧವ್ಯ ಉತ್ತುಂಗದಲ್ಲಿತ್ತು. ನಂತರ ಪರಿಸ್ಥಿತಿಗಳು ಬದಲಾಗಿವೆ. ಎರಡೂ ದೇಶಗಳು ಬೇರೆ ಬೇರೆ ರೀತಿಗಳಲ್ಲಿ ಪ್ರಗತಿಯ ದಿಕ್ಕುಗಳನ್ನು ಅರಸಿವೆ. ಆದರೆ ಪರಸ್ಪರರ ಅಗತ್ಯಗಳನ್ನು ಉತ್ತಮ ಬಾಂಧವ್ಯದಿಂದ ಪೂರೈಸಿಕೊಳ್ಳುವುದು ಸಾಧ್ಯ ಎಂಬ ಬಗ್ಗೆ ಅರಿವು ಮೂಡುತ್ತಿದೆ.

ಉಕ್ರೇನ್‌ನಲ್ಲಿನ ಬೆಳವಣಿಗೆಗಳಿಂದಾಗಿ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಂದ ದಿಗ್ಬಂಧನಕ್ಕೆ ಒಳಗಾಗಿರುವ ರಷ್ಯಾ, ಪೂರ್ವ ರಾಷ್ಟ್ರಗಳೊಂದಿಗೆ ಬಾಂಧವ್ಯ ಸುಧಾರಣೆಗೆ ತೀವ್ರವಾಗಿ ಯತ್ನಿ­ಸು­ತ್ತಿದೆ.ಇದೇ ಸಂದರ್ಭದಲ್ಲಿ ಅಮೆರಿಕದ ಜೊತೆ ಭಾರತದ ಬಾಂಧ­ವ್ಯವೂ ನಿಕಟವಾಗುತ್ತಿದೆ. ಮುಂದಿನ ಜನವರಿ 26ರಂದು ಭಾರತದ ಗಣ­ರಾಜ್ಯೋತ್ಸವ ಸಮಾರಂಭದಲ್ಲಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಪರಸ್ಪರ ವಿರೋಧ ಕಟ್ಟಿ­ಕೊಂಡಿರುವಂತಹ ಭಾರತದ ಈ ಎರಡು ಮಿತ್ರ ರಾಷ್ಟ್ರಗಳೊಡನೆ ಬಾಂಧವ್ಯ­ವನ್ನು ಸಮತೋಲನದಲ್ಲಿ ನಿರ್ವಹಿಸುವುದು ಇಲ್ಲಿ ಮುಖ್ಯವಾದದ್ದು. ಇಷ್ಟು ವರ್ಷಗಳ ಕಾಲ ಭಾರತ ಇದನ್ನು ಯಶಸ್ವಿಯಾಗಿಯೇ ನಿಭಾಯಿಸಿ­ಕೊಂಡು­ಬಂದಿದೆ. ಭಾರತದ ಅಭಿವೃದ್ಧಿಯಲ್ಲಿ ವಾಷಿಂಗ್ಟನ್ ಹಾಗೂ ಮಾಸ್ಕೊದ ಪಾತ್ರಗಳನ್ನು ಮರೆಯಲಾಗದು. ಇದನ್ನು ಹಾಗೆಯೇ ಮುಂದುವರಿಸಿ­ಕೊಂಡು ಹೋಗುವ ಸವಾಲು ಭಾರತದ್ದು. ಇದಕ್ಕೆ ಪೂರಕವಾಗಿದೆ ಮೋದಿ­ಯವರ ಮಾತು: ‘ಕಾಲ ಬದಲಾಗಿದೆ. ಆದರೆ ನಮ್ಮ ಸ್ನೇಹವಲ್ಲ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT