ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿ ಮತ್ತೊಂದು ಯಶಸ್ಸು ಅರಸುತ್ತಾ...

Last Updated 7 ಫೆಬ್ರುವರಿ 2016, 19:31 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ಮತ್ತೊಂದು ಐ ಲೀಗ್ ಕ್ಲಬ್‌ ಶುರುವಾಗುತ್ತದೆ ಎನ್ನುವ ವಿಷಯ ಎರಡು ವರ್ಷ ಹಿಂದೆ ಗೊತ್ತಾದಾಗ ‘ಹಿಂದಿನ ಕ್ಲಬ್‌ಗಳಂತೆ ಇದೂ ಒಂದು’ ಎಂದು ಕೆಲ ಫುಟ್‌ಬಾಲ್ ಪಂಡಿತರು ಷರಾ ಬರೆದಿದ್ದರು.

ಏಕೆಂದರೆ,  ಇದಕ್ಕೂ ಮೊದಲು ಐ ಲೀಗ್‌ನಲ್ಲಿ ಆಡಿದ ಉದ್ಯಾನನಗರಿಯ ಕೆಲ ಕ್ಲಬ್‌ಗಳು ಕಳಪೆ ಪ್ರದರ್ಶನ ನೀಡಿ ಟೀಕೆಗೆ ಗುರಿಯಾಗಿದ್ದವು. 1996–97ರಲ್ಲಿ ಐ ಲೀಗ್ (ಆಗ ಈ ಟೂರ್ನಿಯನ್ನು ಇಂಡಿಯನ್‌ ನ್ಯಾಷನಲ್‌ ಫುಟ್‌ಬಾಲ್‌ ಲೀಗ್ ಎಂದು ಕರೆಯಲಾಗುತ್ತಿತ್ತು) ಆಡಿದ್ದ ರಾಜ್ಯದ ಐಟಿಐ ತಂಡ ಲೀಗ್‌ ಹಂತದಿಂದಲೇ ಹೊರಬಿದ್ದಿತ್ತು.

2010ರಲ್ಲಿ ಎಚ್‌ಎಎಲ್‌ ಐ ಲೀಗ್ ಎರಡನೇ ಡಿವಿಷನ್‌ನಲ್ಲಿ ಆಡಿ ನಂತರದ ವರ್ಷದಲ್ಲಿ ಮೊದಲ ಡಿವಿಷನ್‌ಗೆ ಬಡ್ತಿ ಗಳಿಸಿತ್ತು. ಇದರಿಂದ ಐ ಲೀಗ್‌ಗೆ ಆರ್ಹತೆ ಪಡೆದ ದಕ್ಷಿಣ ಭಾರತದ ಎರಡನೇ ತಂಡ ಎನ್ನುವ ಕೀರ್ತಿ ಸಂಪಾದಿಸಿಕೊಂಡಿತ್ತು. ಮೊದಲು ವಿವಾ ಕೇರಳ ಐ ಲೀಗ್ ಆಡಿತ್ತು. ಆದ್ದರಿಂದ ಎಚ್‌ಎಎಲ್‌ ರಾಜ್ಯಕ್ಕೆ ಚೊಚ್ಚಲ  ಟ್ರೋಫಿ ತಂದುಕೊಡಬಹುದು ಎನ್ನುವ ಭರವಸೆಯೂ ಮೂಡಿತ್ತು. ಆದರೆ, ಮೊದಲ ಡಿವಿಷನ್‌ನಲ್ಲಿ ಕಾಡಿದ್ದು ಬರೀ ನಿರಾಸೆ.

ಫುಟ್‌ಬಾಲ್ ಕ್ರೀಡೆಯನ್ನು ಅತೀವವಾಗಿ ಪ್ರೀತಿಸುವ ದೊಡ್ಡ ಅಭಿಮಾನಿಗಳ ದಂಡು ಕರ್ನಾಟಕದಲ್ಲಿದೆ. ಆದ್ದರಿಂದ ಅವರಿಗೆಲ್ಲಾ ಹಿಂದಿನ ಕ್ಲಬ್‌ಗಳ ಪ್ರದರ್ಶನದಿಂದ ಸಹಜವಾಗಿ ನಿರಾಸೆಯಾಗಿತ್ತು. ಆದರೆ 2014ರಲ್ಲಿ ಉದಯಿಸಿದ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ರಾಜ್ಯದಲ್ಲಿ ದೊಡ್ಡ ಭರವಸೆಯಾಗಿ ನಿಂತಿತು. ಬಿಎಫ್‌ಸಿಯನ್ನು ವೃತ್ತಿಪರ ತಂಡವನ್ನಾಗಿ ರೂಪಿಸಲು ಜೆಎಸ್‌ಡಬ್ಲ್ಯು ಸಮೂಹ ಒತ್ತು ಕೊಟ್ಟಿತ್ತು. ಬೇರೆ ಬೇರೆ ಕ್ಲಬ್‌ಗಳಲ್ಲಿದ್ದ ಬಲಿಷ್ಠ ಆಟಗಾರರನ್ನು ತನ್ನತ್ತ ಸೆಳೆದುಕೊಂಡಿತು.

‘ವೃತ್ತಿಪರತೆಗೆ ಒತ್ತು ಕೊಟ್ಟಿದ್ದರಿಂದಲೇ ನಮ್ಮ ತಂಡಕ್ಕೆ ಉತ್ತಮ ಪ್ರದರ್ಶನ ನೀಡಿಲು ಸಾಧ್ಯವಾಗಿದೆ. ಸ್ಥಳೀಯ ಆಟಗಾರರು ಎಂದು ನೋಡಿದ್ದರೆ ಮೊದಲ ವರ್ಷವೇ ಪ್ರಶಸ್ತಿ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ’ ಎಂದು ಬಿಎಫ್‌ಸಿ ಮುಖ್ಯ ಕೋಚ್ ಆ್ಯಷ್ಲೆ ವೆಸ್ಟ್‌ವುಡ್‌ ತಮ್ಮ ತಂಡದ ಯಶಸ್ಸಿನ ಗುಟ್ಟನ್ನು ಬಿಚ್ಚಿಟ್ಟರು.
ಬಿಎಫ್‌ಸಿ ತಂಡದ ಇನ್ನೊಂದು ಶಕ್ತಿಯೆಂದರೆ ನಾಯಕ ಸುನಿಲ್‌ ಚೆಟ್ರಿ.  ಇದರಿಂದ ಕಡಿಮೆ ಅವಧಿಯಲ್ಲಿ ತಂಡ ವೇಗವಾಗಿ ಬೆಳೆಯಲು ಸಾಧ್ಯವಾಯಿತು. ಹಿಂದಿನ ಎರಡೂ ಐ ಲೀಗ್‌ ಟೂರ್ನಿಗಳಲ್ಲಿ ಸ್ಟ್ರೈಕರ್‌ ಚೆಟ್ರಿ ಬಿಎಫ್‌ಸಿ ತಂಡದ ಪರ ಗರಿಷ್ಠ ಗೋಲು ಗಳಿಸಿದ ದಾಖಲೆ ಮಾಡಿದರು. ಮೊದಲ ಆವೃತ್ತಿಯಲ್ಲಿ 15 ಮತ್ತು ಎರಡನೇ ಆವೃತ್ತಿಯಲ್ಲಿ 14 ಗೋಲುಗಳನ್ನು ಬಾರಿಸಿದ್ದರು.

ಗೋಲ್‌ ಕೀಪರ್‌ ಪವನ್‌ ಕುಮಾರ್, ಡಿಫೆಂಡರ್‌ಗಳಾದ ನಂಜನಗೂಡು ಮಂಜು, ವಿಶಾಲ್‌ ಕುಮಾರ್‌, ಜಾನ್‌ ಜಾನ್ಸನ್‌, ರಿನೊ ಆ್ಯಂಟೊ, ಮೀಡ್‌ಫೀಲ್ಡರ್‌ಗಳಾದ ಗುರ್ಜಿಂತ್‌ ಸಿಂಗ್‌, ಮಲೆಗನಾಂಬ ಮೇಟಿ, ನಿರಿಶೋನ್‌ ಮಣಿ, ಸಿ.ಕೆ. ವಿನೀತ್‌, ಸೀನ್‌ ರೂನಿ ಮತ್ತು ರಾಬಿನ್‌ ಸಿಂಗ್ ಅವರಂಥ ಬಲಿಷ್ಠ ಆಟಗಾರರು ಬಿಎಫ್‌ಸಿ ತಂಡಕ್ಕೆ ಶಕ್ತಿ ತುಂಬಿದರು.

ಇದರಿಂದ ಬಿಎಫ್‌ಸಿ ಐ ಲೀಗ್‌ ಆಡಿದ ಮೊದಲ ವರ್ಷವೇ ಪ್ರಶಸ್ತಿ ಜಯಿಸಿತ್ತು. ಹೋದ ವರ್ಷ ರನ್ನರ್ಸ್‌ ಅಪ್‌ ಆಗಿತ್ತು. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ 2015ರಲ್ಲಿ ಐ ಲೀಗ್‌ ಫೈನಲ್ ನಡೆದಿತ್ತು. ಆ ಪಂದ್ಯದಲ್ಲಿ ಬಿಎಫ್‌ಸಿ ಸೋಲು ಕಂಡಿತಾದರೂ ಅಭಿಮಾನಿಗಳ ಆಟದ ಪ್ರೀತಿ ಗೆದ್ದಿತ್ತು. ಸುರಿಯುವ ಜೋರು ಮಳೆಯಲ್ಲೂ ಬೆಂಗಳೂರಿನ ಫುಟ್‌ಬಾಲ್‌ ಪ್ರೇಮಿಗಳು ಪಂದ್ಯ ವೀಕ್ಷಿಸಿದ್ದರು. ಇದು ಬಿಎಫ್‌ಸಿ ಮೇಲಿರುವ ಪ್ರೀತಿಗೆ ಸಾಕ್ಷಿ. ಮೊದಲ ವರ್ಷ ಫೆಡರೇಷನ್‌ ಕಪ್‌ನಲ್ಲೂ ಬಿಎಫ್‌ಸಿ ಪ್ರಶಸ್ತಿ ಜಯಿಸಿ ನೂರಾರು ವರ್ಷಗಳ ಇತಿಹಾಸ ಹೊಂದಿರುವ ಬಲಿಷ್ಠ ಕ್ಲಬ್‌ಗಳಿಗೆ ಎಚ್ಚರಿಕೆ ನೀಡಿತ್ತು.

‘ಐ ಲೀಗ್‌ನ ಶ್ರೇಷ್ಠ ತಂಡಗಳಾದ ಮೋಹನ್‌ ಬಾಗನ್‌, ಸಲಗಾಂವ್ಕರ್‌, ನಾರ್ತ್‌ ಈಸ್ಟ್‌ ಯುನೈಟೆಡ್‌, ಚರ್ಚಿಲ್‌ ಬ್ರದರ್ಸ್‌, ಶಿಲ್ಲಾಂಗ್ ಲಾಜಂಗ್‌ ಈಗ ಬಿಎಫ್‌ಸಿಯನ್ನು ಅತ್ಯಂತ ಬಲಿಷ್ಠ ತಂಡವೆಂದು ಪರಿಗಣಿಸಿವೆ. ಎರಡು ವರ್ಷಗಳಲ್ಲಿ ನಮ್ಮ ತಂಡದ ಆಟಗಾರರು ಎಷ್ಟೊಂದು ಶ್ರಮಪಟ್ಟಿದ್ದಾರೆ ಎನ್ನುವುದಕ್ಕೆ ಈ ಅಂಶವೇ ಸಾಕ್ಷಿ’ ಎಂದು ಬಿಎಫ್‌ಸಿ ತಂಡದ ಸಹಾಯಕ ಕೋಚ್‌ ಪ್ರದ್ಯುಮ್‌ ರೆಡ್ಡಿ ಹೇಳುತ್ತಾರೆ.
*
ತಂಡದ ಸಾಧನೆಗೆ ವೃತ್ತಿಪರತೆ ಕಾರಣ: ಪ್ರದ್ಯುಮ್‌
* ಕ್ಲಬ್‌ ಆರಂಭವಾದ ಎರಡೇ ವರ್ಷಗಳಲ್ಲಿ ಬಲಿಷ್ಠ ತಂಡ ಕಟ್ಟಬಹುದು ಎನ್ನುವ ನಿರೀಕ್ಷೆ ಇತ್ತೆ?

ಮುಂದಿನ ಐದಾರು ವರ್ಷಗಳಲ್ಲಿ ಐ ಲೀಗ್ ಮತ್ತು ಫೆಡರೇಷನ್‌ಕಪ್‌ನಲ್ಲಿ ಪ್ರಶಸ್ತಿ ಗೆಲ್ಲಬೇಕು ಎನ್ನುವ ಗುರಿ ಹೊಂದಿದ್ದೆವು. ಅದಕ್ಕಾಗಿ ಆರಂಭದ ವರ್ಷಗಳಲ್ಲಿ ಬಲಿಷ್ಠ ತಂಡ ಕಟ್ಟಬೇಕು ಎಂಬುದು ಕ್ಲಬ್‌ ಆರಂಭಿಸಿದಾಗ ನಮ್ಮ ಯೋಜನೆಯಾಗಿತ್ತು. ಆದ್ದರಿಂದ ವೃತ್ತಿಪರ ಆಟಗಾರರನ್ನು ಮಾತ್ರ ನಾವು ಆಯ್ಕೆ ಮಾಡಿಕೊಂಡಿದ್ದೆವು.

* ಐಎಸ್‌ಎಲ್‌ನಲ್ಲಿ ಭಾರತದ ಆಟಗಾರರು ಕಡಿಮೆ ಸಂಖ್ಯೆಯಲ್ಲಿದ್ದಾರಲ್ಲ. ಇದಕ್ಕೆ ಏನು ಕಾರಣ?
ನಮ್ಮಲ್ಲಿ ವೃತ್ತಿಪರತೆಯ ಕೊರತೆಯಿದೆ. ನೌಕರಿ ಸಲುವಾಗಿಯಷ್ಟೇ ಕ್ಲಬ್‌ ಮಟ್ಟದ ಟೂರ್ನಿಗಳಲ್ಲಿ ಆಡುತ್ತಾರೆ. ನೌಕರಿ ಸಿಕ್ಕ ಬಳಿಕ ಕ್ರೀಡೆಗೆ ವಿದಾಯ ಹೇಳುತ್ತಾರೆ. ಹೀಗಾದರೆ ಭಾರತದ ಆಟಗಾರರಿಂದ ವೃತ್ತಿಪರತೆಯನ್ನು ನಿರೀಕ್ಷೆ ಮಾಡುವುದಾದರೂ ಹೇಗೆ.

* ಈ ಸಮಸ್ಯೆ ಪರಿಹರಿಸಲು ಸಾಧ್ಯವಿಲ್ಲವೇ?
ಖಂಡಿತವಾಗಿಯೂ ಇದೆ. ಅದಕ್ಕೆ ಎಲ್ಲಾ ರಾಜ್ಯಗಳ ಫುಟ್‌ಬಾಲ್‌ ಸಂಸ್ಥೆಗಳು ಮನಸ್ಸು ಮಾಡಬೇಕಷ್ಟೇ. ಕಾಟಾಚಾರಕ್ಕೆ ಸೂಪರ್‌ ಡಿವಿಷನ್‌, ಎ, ಬಿ ಮತ್ತು ಸಿ ಡಿವಿಷನ್‌ ವಿಭಾಗದ ಟೂರ್ನಿಗಳನ್ನು ನಡೆಸುತ್ತಾರೆ.  ಈ ಟೂರ್ನಿಗಳಲ್ಲಿ 30, 40 ವರ್ಷ ವಯಸ್ಸಾದವರೂ ಆಡುತ್ತಾರೆ. ಕ್ಲಬ್‌ನವರಿಗೆ ವೃತ್ತಿಪರತೆಯನ್ನು ಬೆಳಸುವ ಗಂಭೀರತೆಯಿಲ್ಲ. ವಯಸ್ಸಾದವರು ಮನರಂಜನೆಗಷ್ಟೇ ಆಡುತ್ತಾರೆ.  ಆದ್ದರಿಂದ ಕ್ಲಬ್‌ ಟೂರ್ನಿ ಬದಲು ವಿವಿಧ ವಯೋಮಿತಿಯೊಳಗಿನರ ಟೂರ್ನಿ ನಡೆಸಬೇಕು. ಭಾರತದಲ್ಲಿ ಕ್ರಿಕೆಟ್‌ ವೇಗವಾಗಿ ಬೆಳೆಯಲು ಇದೇ ಅಂಶ ಕಾರಣ. 12, 14, 16 ವರ್ಷದ ಒಳಗಿನವರಿಗೆ ಪ್ರತ್ಯೇಕ ಕ್ರಿಕೆಟ್‌ ಟೂರ್ನಿಗಳಲ್ಲಿ ನಡೆಸಲಾಗುತ್ತದೆ. ಇದರಿಂದ ಈ ಕ್ರೀಡೆಯಲ್ಲಿ ಪ್ರತಿಭಾನ್ವಿತ ಆಟಗಾರರು ಬರುತ್ತಿದ್ದಾರೆ. ನಮ್ಮಲ್ಲೂ ಇದೇ ರೀತಿ ಮಾಡಬಹುದಲ್ಲವೆ.

* ಯುವ ಆಟಗಾರರಲ್ಲಿ ವೃತ್ತಿಪರತೆ ಬೆಳೆಸುವ ಸಲುವಾಗಿ ನಿಮ್ಮ ಕ್ಲಬ್ ವತಿಯಿಂದ ಏನಾದರೂ ಯೋಜನೆಗಳನ್ನು ರೂಪಿಸಿದ್ದೀರಾ?
ನಮ್ಮದು ಕೆಲ ವರ್ಷಗಳ ಹಿಂದಷ್ಟೇ ಆರಂಭವಾಗಿರುವ ಕ್ಲಬ್‌. ಆದ್ದರಿಂದ ಈಗಿನ ತಂಡವನ್ನು ಇನ್ನಷ್ಟು ಬಲಿಷ್ಠಗೊಳಿಸಬೇಕು. ಹತ್ತು ವರ್ಷದ ಒಳಗಿನವರ ಪ್ರತಿಭಾನ್ವಿತ ಆಟಗಾರರನ್ನು ಆಯ್ಕೆ ಮಾಡಿಕೊಂಡು ಅವರಿಗೆ ತರಬೇತಿ ನೀಡುವ ಗುರಿಯಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಯೋಜನೆಗಳನ್ನು ರೂಪಿಸುತ್ತೇವೆ.

* ಈ ಬಾರಿಯ ಐ ಲೀಗ್‌ ಟೂರ್ನಿಯಲ್ಲಿ ಗುರಿ ಏನಿದೆ?
ಆರಂಭದ ಎರಡು ವರ್ಷಗಳಲ್ಲಿ ನಿರೀಕ್ಷೆಗೂ ಮೀರಿ ಸಾಮರ್ಥ್ಯ ತೋರಿದ್ದೇವೆ. ಆದ್ದರಿಂದ ಈ ಬಾರಿ ಪ್ರಶಸ್ತಿ ಗೆಲ್ಲುವ ಗುರಿ ನಮ್ಮದು.

* ಸುನಿಲ್‌ ಚೆಟ್ರಿ ಬಗ್ಗೆ ಹೇಳಿ?
ಚೆಟ್ರಿ ನಮ್ಮ ತಂಡದ ಶಕ್ತಿ. ಎರಡೂ ಆವೃತ್ತಿಗಳಲ್ಲಿ ಅವರ ಸಾಧನೆ ಎನೆಂಬುದಕ್ಕೆ ಗಳಿಸಿದ ಗೋಲುಗಳೇ ಸಾಕ್ಷಿ. ಹೊಸ ಆಟಗಾರರಲ್ಲಿ ಅವರು ಸ್ಫೂರ್ತಿ ತುಂಬಬಲ್ಲರು.

* ಬಿಎಫ್‌ಸಿ ತಂಡದಲ್ಲಿ ಸ್ಥಳೀಯ ಆಟಗಾರರಿಗೆ ಅವಕಾಶ ಕೊಡುತ್ತಿಲ್ಲ ಎನ್ನುವ ದೂರು ಇದೆಯಲ್ಲಾ?
ಬೆಂಗಳೂರು ಮೂಲದ ತಂಡ ಐ ಲೀಗ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ನೀಡಬೇಕೆಂಬುದಷ್ಟೇ ನಮ್ಮ ಗುರಿ.  ಉತ್ತಮ ಸಾಮರ್ಥ್ಯ ಹೊಂದಿರುವ ಮತ್ತು ವೃತ್ತಿಪರತೆ ಮೈಗೂಡಿಸಿಕೊಂಡಿರುವವರಿಗೆ ಮಾತ್ರ ಒತ್ತು ಕೊಡುತ್ತೇವೆ. ಸ್ಥಳೀಯರು, ವಿದೇಶಿಯರು ಎಂದು ನೋಡುವುದಿಲ್ಲ. ಬೆಂಗಳೂರಿನಿಂದ ಮೊದಲಿನ ಹಾಗೆ ಈಗ ಸಮರ್ಥ ಆಟಗಾರರು ಬರುತ್ತಿಲ್ಲ.
*
ಪ್ರದ್ಯುಮ್‌ ರೆಡ್ಡಿ ಬಗ್ಗೆ
ಶಿಲ್ಲಾಂಗ್ ಲಜಾಂಗ್ ಮತ್ತು ಡಿಎಸ್‌ಕೆ ಶಿವಾಜಿಯನ್ಸ್ ತಂಡಗಳಲ್ಲಿ ಆಡಿದ್ದ ಪ್ರದ್ಯುಮ್‌ ರೆಡ್ಡಿ ಅವರು ಬಿಎಫ್‌ಸಿ ಕ್ಲಬ್‌  ಆರಂಭದಿಂದಲೂ ಸಹಾಯಕ ಕೋಚ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಇವರು 2011ರಲ್ಲಿ ಶಿಲ್ಲಾಂಗ್ ತಂಡದ ಪರ ಆಡಿದ್ದರು. ಆಗ ಈ ತಂಡ ಐ ಲೀಗ್ ಟೂರ್ನಿಯಲ್ಲಿ ಎರಡನೇ ಡಿವಿಷನ್‌ನಿಂದ ಮೊದಲ ಡಿವಿಷನ್‌ಗೆ ಬಡ್ತಿ ಪಡೆದಿತ್ತು. ಯೂತ್‌ ಕ್ಲಬ್‌ ಅಭಿವೃದ್ಧಿಗೆ ತಾಂತ್ರಿಕ ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ.
*
ಬಲ ಹೆಚ್ಚಿಸುವತ್ತ
ಕ್ಲಬ್‌ ಆರಂಭವಾದ ಎರಡೇ ವರ್ಷಗಳಲ್ಲಿ ನಿರೀಕ್ಷೆಗಿಂತಲೂ ಎತ್ತರದ ಸಾಧನೆ ಮಾಡಿರುವ ಬಿಎಫ್‌ಸಿ ಮತ್ತಷ್ಟು ಅನುಭವಿಗಳನ್ನು ಈ ಬಾರಿ ತಂಡಕ್ಕೆ ಸೇರಿಸಿಕೊಂಡಿದೆ. ಅಲ್ವಿನ್‌ ಜಾರ್ಜ್‌, ನಿಶು ಕುಮಾರ್‌, ಡೇನಿಯಲ್‌ ಲಾಲಿಲುಂಪಿಯಾ, ಮೈಕಲ್‌ ಕಾಲಿನ್ಸ್ ಮತ್ತು ನಿಖಿಲ್‌ ಬೆರ್ನಾರ್ಡ್‌ ಮತ್ತು ರಾಯಲ್‌ ವಾಹಿಂಗ್ಡೊದಲ್ಲಿದ್ದ ಕಿಮ್‌ ಸಾಂಗ್‌ ಯೊಂಗ್ 2015–16ರ ಐ ಲೀಗ್ ಆವೃತ್ತಿಗೆ ಬಿಎಫ್‌ಸಿ ಸೇರಿದ್ದಾರೆ. ಆದ್ದರಿಂದ ಈ ಬಾರಿಯೂ ಬೆಂಗಳೂರಿನ ತಂಡದ ಮೇಲೆ ಪ್ರಶಸ್ತಿಯ ಭರವಸೆ ಇಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT