ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಅಧ್ಯಕ್ಷತೆಗೆ ಹೆಚ್ಚಿದ ಪೈಪೋಟಿ

Last Updated 28 ಮೇ 2014, 19:38 IST
ಅಕ್ಷರ ಗಾತ್ರ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್‌ ಸಿಂಗ್‌ ಉತ್ತರಾಧಿಕಾರಿ ನೇಮಕ ಕುರಿತು ಬಿಜೆಪಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಾಯಕರ ನಡುವೆ ಚರ್ಚೆ ಆರಂಭವಾಗಿರುವ ನಡುವೆಯೇ ಪಕ್ಷದ ಅತ್ಯುನ್ನತ ಹುದ್ದೆಗೆ ತೀವ್ರ ಪೈಪೋಟಿ ಏರ್ಪಟ್ಟಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್‌ ಭಾಗವತ್‌ ಮತ್ತು ಪ್ರಮುಖ ನಾಯಕ ಸುರೇಶ್‌ ಸೋನಿ ಅವರನ್ನು ಬುಧವಾರ ರಾಜನಾಥ್‌ ಸಿಂಗ್‌ ಭೇಟಿ ಮಾಡಿ ‘ಬಿಜೆಪಿ ಮುಂದಿನ ಅಧ್ಯಕ್ಷರು ಯಾರು?’ ಎಂಬ ವಿಷಯ ಕುರಿತು ಚರ್ಚಿಸಿದರು.

ಬಿಜೆಪಿ ಪ್ರಧಾನ ಕಾರ್ಯದರ್ಶಿ­ಗಳಾದ ಜೆ.ಪಿ ನಡ್ಡಾ, ಮೋದಿ ಅವರ ನಿಷ್ಠಾವಂತ ಅಮಿತ್‌ ಷಾ ಹಾಗೂ ಓಂ ಮಾಥೂರ್‌ ಅವರ ಹೆಸರು ಪಕ್ಷದ ಪ್ರಮುಖ ಹುದ್ದೆಗೆ ಕೇಳಿಬರುತ್ತಿವೆ.

ಒಬ್ಬ ವ್ಯಕ್ತಿ, ಒಂದು ಹುದ್ದೆ ನಿಯಮ ಪಾಲನೆ: ನರೇಂದ್ರ ಮೋದಿ ಸಂಪುಟದಲ್ಲಿ ರಾಜನಾಥ್‌ ಗೃಹ ಸಚಿವರಾಗಿ ನೇಮಕಗೊಂಡಿರುವ ಹಿನ್ನೆಲೆಯಲ್ಲಿ ಹೊಸ ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಮಹಾರಾಷ್ಟ್ರ, ಹರಿಯಾಣ ಸೇರಿದಂತೆ ಹಲವು ರಾಜ್ಯಗಳ ವಿಧಾನಸಭೆಗೆ ಚುನಾವಣೆ ನಡೆಯಲಿರುವ ಹಿನ್ನೆಲೆ­ಯಲ್ಲಿ ರಾಜನಾಥ್‌ಸಿಂಗ್‌ ಕೆಲಕಾಲ ಪಕ್ಷದ ಅಧ್ಯಕ್ಷರಾಗಿ ಮುಂದು­ವ­ರಿ­ಯಬಹುದು ಎಂಬ ಪರಿಸ್ಥಿತಿ ಇತ್ತು. ಆದರೆ, ಕೇಂದ್ರ ಸಂಪುಟ ಸೇರಿದ ಹಿನ್ನೆಲೆಯಲ್ಲಿ ಶೀಘ್ರವೇ ಅವರ ಉತ್ತರಾಧಿಕಾರಿ ನೇಮಕ ಆಗಬೇಕಿದೆ. ಬಿಜೆಪಿ ಒಬ್ಬ ವ್ಯಕ್ತಿ, ಒಂದು ಹುದ್ದೆ ನಿಯಮ ಪಾಲಿಸುತ್ತಿದೆ.

ಹಿಮಾಚಲ ಪ್ರದೇಶದವರಾದ ನಡ್ಡಾ, ಹಿಂದೆ ನರೇಂದ್ರ ಮೋದಿ ಅವರ ಜತೆಗೂಡಿ ಪಕ್ಷದೊಳಗೆ ಕೆಲಸ ಮಾಡಿದ್ದಾರೆ. ಮೋದಿ, ಹಿಮಾಚಲ ಪ್ರದೇಶದ ಉಸ್ತುವಾರಿ ಕಾರ್ಯದರ್ಶಿ ಆಗಿದ್ದವರು. ಗುಜರಾತಿನವರಾದ ಅಮಿತ್ ಷಾ ಉತ್ತರ ಪ್ರದೇಶದಲ್ಲಿ ಬಿಜೆಪಿಯ ಅನಿರೀಕ್ಷಿತ ಗೆಲುವಿನ ರೂವಾರಿ. ಮಾಥೂರ್‌, ರಾಜಸ್ತಾನ ಬಿಜೆಪಿಯ ಮಾಜಿ ಮುಖ್ಯಸ್ಥ­ರಾಗಿದ್ದವರು.

ನಡ್ಡಾಗೆ ಹಲವರ ಒಲವು: ನಡ್ಡಾ ಅವರ ನೇಮಕಕ್ಕೆ ಅನೇಕರು ಒಲುವು ತೋರಿದ್ದಾರೆ. ಮೋದಿ ತಮ್ಮ ರಾಜ್ಯದವರೇ ಆಗಿರುವ ಅಮಿತ್‌ ಷಾ ಅವರ ನೇಮಕಕ್ಕೆ ಒಲವು ತೋರ­ಬಹುದು ಎಂದೂ ನಿರೀಕ್ಷಿಸಲಾಗಿದೆ. ಅಮಿತ್‌ ಷಾ ಮತ್ತು ನಡ್ಡಾ ಅವರ ತಿಕ್ಕಾಟದಲ್ಲಿ ಮಾಥೂರ್‌ ಸರ್ವಸಮ್ಮತ ಅಭ್ಯರ್ಥಿಯಾಗಿ ಹೊರ ಹೊರಹೊಮ್ಮ­ಬಹುದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಮೋದಿ ಮಾತಿಗೆ ಆರೆಸ್ಸೆಸ್‌ ಮನ್ನಣೆ?: ಸದ್ಯದ ಲೋಕಸಭೆ ಗೆಲುವಿನಿಂದಾಗಿ ಮೋದಿ ಅವರ ಪ್ರಾಬಲ್ಯ ಪಕ್ಷದೊಳಗೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅವರು ಸೂಚಿಸಿದವರನ್ನೇ ಆರೆಸ್ಸೆಸ್‌ ಒಪ್ಪಿಕೊಳ್ಳುವ ಸಾಧ್ಯತೆ ಇದೆ ಎಂದು ಬಿಜೆಪಿ ಉನ್ನತ ಮೂಲಗಳು ತಿಳಿಸಿವೆ.

ಭಾಗವತ್‌ ಮತ್ತು ಸೋನಿ ಅವರ ಜತೆ ಕೆಲ ಸಮಯ ಮಾತುಕತೆ ನಡೆಸಿದ ರಾಜನಾಥ್‌, ಸಂವಿಧಾನದ 370ನೇ ಕಲಂ ಕುರಿತು ಪ್ರಸ್ತಾಪಿಸಿದರು. ಆರೆಸ್ಸೆಸ್‌ ನಾಯಕರ ಜತೆಗಿನ ಮಾತುಕತೆ ಬಳಿಕ ಗೃಹ ಸಚಿವರು ಮೋದಿ ಅವರನ್ನು ಭೇಟಿ ಮಾಡಿ ಚರ್ಚೆ ವಿವರಗಳನ್ನು ನೀಡಿದರು. ಭಾಗವತ್‌ ಕೂಡಾ ಪ್ರಧಾನಿ ಅವರ ಜತೆ ದೂರವಾಣಿಯಲ್ಲಿ ಮಾತನಾಡಿದರು.

ಅಮಿತ್‌ ಷಾ ಹಾಗೂ ಮಾಥೂರ್‌  ಕೂಡ ಆರೆಸ್ಸೆಸ್‌ ನಾಯಕರನ್ನು ಭೇಟಿ ಮಾಡಿದ್ದರು. ಅನೇಕ ಬಿಜೆಪಿ ಮುಖಂಡರು ಮೋದಿ ಮಂತ್ರಿ ಮಂಡಳ ಸೇರಿರುವ ಹಿನ್ನೆಲೆಯಲ್ಲಿ ಪಕ್ಷದೊಳಗೆ ವ್ಯಾಪಕ ಬದಲಾವಣೆ ಆಗಲಿದೆ. ಅನೇಕ ಹೊಸ ಮುಖಗಳು ಪಕ್ಷದ ಪ್ರಮುಖ ಹುದ್ದೆಗಳಿಗೆ ನೇಮಕಗೊಳ್ಳಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT